ಭಾರತದೊಳಗೊಂದು ನೀರು ವಂಚಿತ ‘ರಶ್ಯ’

Update: 2018-12-09 18:32 GMT
ಭಾರತದೊಳಗೊಂದು ನೀರು ವಂಚಿತ ‘ರಶ್ಯ’
  • whatsapp icon

ಇಡೀ ಪ್ರಪಂಚದಲ್ಲೇ ಹೆಚ್ಚು ನೀರಿಲ್ಲದ ಜನರು ನಮ್ಮ ದೇಶದಲ್ಲಿದ್ದಾರೆ. ಈ ವಿಷಯದಲ್ಲಿ ಭಾರತವು ಇಥಿಯೋಪಿಯಾದಂತಹ ಹಿಂದುಳಿದ ದೇಶಗಳ ಜೊತೆ ಜೋಡಿಸಲ್ಪಡುತ್ತಿದೆ.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿಯಲ್ಲಿ 2017ರವರೆಗಿನ ಐದು ವರ್ಷಗಳಲ್ಲಿ ಬಜೆಟ್ ನಿಗದಿ ಮೊತ್ತವಾದ -89,956 ಕೋಟಿ ರೂ.ಗಳಲ್ಲಿ 90 ಶೇಕಡಾದಷ್ಟನ್ನು ಮುಗಿಸಿದರೂ 16.3 ಕೋಟಿ ಅಂದರೆ ರಶ್ಯದಂತಹ ಅತಿದೊಡ್ಡ ದೇಶದ ಜನಸಂಖ್ಯೆಗಿಂತಲೂ ಹೆಚ್ಚು ಭಾರತೀಯರು ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ ಎಂದು 2018ರ ಆಗಸ್ಟ್ ತಿಂಗಳ ಸರಕಾರಿ ಲೆಕ್ಕಪರಿಶೋಧಕರ ವರದಿಯೊಂದು ತಿಳಿಸುತ್ತದೆ.

ಕಾರ್ಯಕ್ರಮದ ಗುರಿ ಎಂದರೆ, ಶೇಕಡಾ 35ರಷ್ಡು ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿ, ಪ್ರತಿ ವ್ಯಕ್ತಿಗೆ ದಿನಕ್ಕೆ 40 ಲೀಟರ್, ಅಂದರೆ ಎರಡು ಬಕೆಟ್ ನೀರು ಒದಗಿಸುವುದು.
ಆದರೆ, ‘ಕಳಪೆ ಅನುಷ್ಠಾನ’ ಮತ್ತು ‘ದುರ್ಬಲ ಗುತ್ತಿಗೆ ನಿರ್ವಹಣೆ’ಯ ಕಾರಣದಿಂದ ಅರ್ಧಕ್ಕಿಂತಲೂ ಕಡಿಮೆ ಗುರಿ ಸಾಧಿಸಲಾಗಿದೆ ಎಂದು ಕಂಪ್ಟ್ರೋಲರ್ ಆ್ಯಂಡ್ ಅಡಿಟರ್ ಜನರಲ್ (ಸಿಎಜಿ) ವರದಿ ತಿಳಿಸಿದೆ.
 ಸುಮಾರು ಹದಿನೇಳು ಲಕ್ಷ ಗ್ರಾಮೀಣ ಜನವಸತಿಗಳ ಪೈಕಿ ಶೇ.78 ರಷ್ಟು ಕನಿಷ್ಠ ನಿಗದಿತ ಅಗತ್ಯ ಪ್ರಮಾಣವಾದ-ಪ್ರತಿ ವ್ಯಕ್ತಿಗೆ, ಪ್ರತಿದಿನಕ್ಕೆ 40 ಲೀಟರ್ ನೀರಿನ ಸೌಲಭ್ಯ ಇದೆಯಾದರೂ, ಅವರೆಲ್ಲರೂ ವಾಸ್ತವವಾಗಿ ಇದನ್ನು ಪಡೆಯುತ್ತಿದ್ದಾರೆಂದು ಇದರ ಅರ್ಥವಲ್ಲ ಎಂದು ತಜ್ಞರು ಹೇಳುತ್ತಾರೆ.
ಸರಕಾರವು 2018 ಜುಲೈ ತಿಂಗಳಲ್ಲಿ ಸಂಸತ್ತಿಗೆ ನೀಡಿದ ಪ್ರತಿಕ್ರಿಯೆಯ ಪ್ರಕಾರವೇ ಸುಮಾರು 18 ಶೇಕಡಾ ಗ್ರಾಮೀಣ ಜನವಸತಿಗಳು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದ ಅಡಿಯಲ್ಲಿ ನಿಗದಿತ ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀಟರಿಗಿಂತಲೂ ಕಡಿಮೆ ನೀರನ್ನು ಪಡೆಯುತ್ತಿವೆ.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಕೇಂದ್ರ ಸರಕಾರ ಪ್ರಾಯೋಜಿತ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಪ್ರತಿ ವ್ಯಕ್ತಿಗೂ ಕುಡಿಯಲು, ಅಡುಗೆ ಮಾಡಲು ಮತ್ತಿತರ ಮನೆ ಅಗತ್ಯಗಳಿಗೆ ಸುಸ್ಥಿರ ರೀತಿಯಲ್ಲಿ ‘ಸಾಕಷ್ಟು ಮತ್ತು ಸುರಕ್ಷಿತ’ ನೀರು ಒದಗಿಸುವ ಗುರಿ ಹೊಂದಿದೆ.

ಈ ಯೋಜನೆಯು ಗ್ರಾಮೀಣ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಸಲುವಾಗಿ ರಾಜ್ಯ ಸರಕಾರಗಳಿಗೆ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ‘ಸಂಪೂರ್ಣವಾಗಿ ವ್ಯಾಪ್ತಿಗೊಳಪಟ್ಟ’ ಜನವಸತಿಗಳು ಕನಿಷ್ಠ ಪ್ರತಿ ವ್ಯಕ್ತಿಗೆ ಪ್ರತಿದಿನ 40 ಲೀಟರ್ ಕುಡಿಯುವ ನೀರು ಒದಗಿಸುತ್ತದೆ. ‘ಭಾಗಶಃ ವ್ಯಾಪ್ತಿಗೊಳಪಡುವ’ ಜನವಸತಿಗಳು ಅದಕ್ಕಿಂತಲೂ ಕಡಿಮೆ ನೀರನ್ನು ಪಡೆಯುತ್ತಿವೆ.
ಸಿಎಜಿ ವರದಿ ಉಲ್ಲೇಖಿಸುವಂತೆ ದಿನಕ್ಕೆ ನಲ್ವತ್ತು ಲೀಟರ್ ಮಾನದಂಡದಂತೆ ಕೇವಲ ಎಂಟು ಶೇಕಡಾ ಸಾಧನೆಯಾಗಿದೆ. ಈ ನಲವತ್ತು ಲೀಟರಿಗೆ ಬದಲಾಗಿ ಐವತ್ತೈದು ಲೀಟರ್ ಲೆಕ್ಕ ತಗೊಂಡರೆ ಸಾಧನೆ ದೊಡ್ಡದೆಂದು ಕಾಣುವಷ್ಟು ದೊಡ್ಡದಲ್ಲ!
ಹೌದು; ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಸಾಧನೆ ಉತ್ತಮವಾಗಿದೆ. ಆದರೂ ಇಡೀ ಪ್ರಪಂಚದಲ್ಲೇ ಹೆಚ್ಚು ನೀರಿಲ್ಲದ ಜನರು ನಮ್ಮ ದೇಶದಲ್ಲಿದ್ದಾರೆ. ಈ ವಿಷಯದಲ್ಲಿ ಭಾರತವು ಇಥಿಯೋಪಿಯಾದಂತಹ ಹಿಂದುಳಿದ ದೇಶಗಳ ಜೊತೆ ಜೋಡಿಸಲ್ಪಡುತ್ತಿದೆ.

ಸರಕಾರವು 2017ರ ಆಗಸ್ಟ್‌ನಲ್ಲಿ ಸಂಸತ್ತಿಗೆ ತಿಳಿಸಿದಂತೆ 2022ರ ಒಳಗೆ ಶೇ.90ರಷ್ಟು ಗ್ರಾಮೀಣ ಮನೆಗಳಿಗೆ ನಳ್ಳಿನೀರು ಒದಗಿಸುವ ಗುರಿ ಹೊಂದಲಾಗಿದೆ. ಆದರೆ, ಮೂಲ ಗುರಿಯು ಇದಕ್ಕಿಂತ ಬೇರೆಯೇ ಆಗಿತ್ತು. ಅದು ಹೀಗಿದೆ: ಎಲ್ಲಾ ಗ್ರಾಮೀಣ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಸುರಕ್ಷಿತ ಕುಡಿಯುವ ನೀರು ಒದಗಿಸುವುದು; ಶೇ.50ರಷ್ಟು ನಳ್ಳಿಯ ಮೂಲಕ ದಿನಕ್ಕೆ ಪ್ರತಿ ವ್ಯಕ್ತಿಗೆ 55 ಲೀಟರ್‌ನಂತೆ ಕುಡಿಯುವ ನೀರು ಒದಗಿಸುವುದು; ಶೇ.35 ರಷ್ಟು ಗ್ರಾಮೀಣ ಮನೆಗಳಿಗೆ ಯಾವುದೇ ರೀತಿಯಲ್ಲಿ ನೂರು ಮೀಟರ್ ಮೀರದಷ್ಟು ಹತ್ತಿರದಲ್ಲಿ ಯಾವುದೇ ಸಾಮಾಜಿಕ ಅಥವಾ ಆರ್ಥಿಕ ತಾರತಮ್ಯ ಇಲ್ಲದೆ ನಳ್ಳಿ ಸಂಪರ್ಕ ಕಲ್ಪಿಸುವುದು. ಇದು 2013ರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದಲ್ಲಿ ನೀಡಲಾದ ಮಾರ್ಗದರ್ಶಿ ಸೂತ್ರ.


ವಾಸ್ತವವಾಗಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯದ 2011-2022ರ ಕಾರ್ಯತಂತ್ರದ ಗುರಿಗಳಲ್ಲಿ ಒಂದೆಂದರೆ ಪ್ರತಿಯೊಬ್ಬ ಗ್ರಾಮೀಣ ಭಾರತೀಯನಿಗೆ ಅವರ ಮನೆಯ ಹಿತ್ತಲಲ್ಲೇ ಅಥವಾ ಯಾವುದೇ ರೀತಿಯಲ್ಲಿ 50 ಮೀಟರ್ ಮೀರದಂತೆ ದಿನಕ್ಕೆ 70 ಲೀಟರ್ ಕುಡಿಯುವ ನೀರು ಒದಗಿಸುವುದಾಗಿತ್ತು.
ಆದರೆ, 2017ರ ಡಿಸೆಂಬರ್ ತನಕ ಕೇವಲ ಶೇ.44 ರಷ್ಟು ಗ್ರಾಮೀಣ ಜನವಸತಿಗಳಿಗೆ ಮತ್ತು ಶೇ.85ರಷ್ಟು ಗ್ರಾಮೀಣ ಶಾಲೆ ಮತ್ತು ಅಂಗನವಾಡಿಗಳಿಗೆ ಮಾತ್ರ ಸುರಕ್ಷಿತ ಕುಡಿಯುವ ನೀರು ಒದಗಿಸಲಾಗಿದೆ. ಅಷ್ಟು ಮಾತ್ರವಲ್ಲದೆ, ಕೇವಲ ಶೇ.18ರಷ್ಟು ಗ್ರಾಮೀಣ ಜನಸಂಖ್ಯೆಗೆ ಮಾತ್ರ ನಳ್ಳಿ ಮೂಲಕ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಮತ್ತು ಕೇವಲ ಶೇ.17ರಷ್ಟು ಗ್ರಾಮೀಣ ಮನೆಗಳಿಗೆ ಮಾತ್ರವೇ ನಳ್ಳಿ ಸಂಪರ್ಕ ಒದಗಿಸಲಾಗಿದೆ. ಇದು ಸಿಎಜಿ ವರದಿಯಲ್ಲಿ ಹೇಳಿರುವ ವಿಷಯ.
2012-17ರ ಅವಧಿಯಲ್ಲಿ ನಿಗದಿಯಾದ 89,956 ಕೋಟಿ ರೂ.ಗಳಲ್ಲಿ 81,168 ಕೋಟಿ ರೂ.ಗಳನ್ನು, ಅಂದರೆ ಶೇ.90 ಖರ್ಚು ಮಾಡಿಯೂ ದಿನಕ್ಕೆ 40 ಲೀಟರ್ ಲೆಕ್ಕಾಚಾರದಲ್ಲಿ ಸುರಕ್ಷಿತ ಕುಡಿಯುವ ನೀರು ಪಡೆಯುತ್ತಿರುವ ಗ್ರಾಮೀಣ ಜನವಸತಿಗಳ ಪ್ರಮಾಣದಲ್ಲಿ ಹೆಚ್ಚಾಗಿರುವುದು ಕೇವಲ ಎಂಟು ಶೇಕಡಾ ಮಾತ್ರ ಮತ್ತು 55 ಲೀಟರ್ ಲೆಕ್ಕಾಚಾರದಲ್ಲಿ ಶೇ.5.5 ಮಾತ್ರ. (ಈ ಹಣದಲ್ಲಿ ಕೇಂದ್ರದ ಪಾಲು 43,691 ಕೋಟಿ ಮತ್ತು ರಾಜ್ಯಗಳ ಪಾಲು 46,265 ಕೋಟಿ). ಇದರಲ್ಲಿ ಅತೀ ಹೆಚ್ಚು ಅಂದರೆ 84 ಶೇಕಡಾದಷ್ಟು ಖರ್ಚು ಮಾಡಿರುವುದು 2014-15ರ ಸಾಲಿನಲ್ಲಿ ಎಂದೂ ಸಿಎಜಿ ವರದಿ ಹೇಳುತ್ತದೆ.
ವರದಿಯು ಕಾಮಗಾರಿಗಳ ಕಳಪೆ ಅನುಷ್ಠಾನ, ದುರ್ಬಲ ಗುತ್ತಿಗೆ ನಿರ್ವಹಣೆ, ಪೂರ್ತಿಗೊಳ್ಳದ ನಡುವಲ್ಲೇ ಕೈಬಿಟ್ಟ ಕಾರ್ಯರೂಪಕ್ಕೆ ಬರದ ಕಾಮಗಾರಿಗಳು, ಸಾಮಗ್ರಿಗಳ ಮೇಲಿನ ಅನುತ್ಪಾದಕ ವೆಚ್ಚ, ಉಪಯೋಗಕ್ಕೇ ಬರದ ಸ್ಥಾಪನೆಗಳು, ಗುತ್ತಿಗೆಯಲ್ಲಿನ ವ್ಯತ್ಯಾಸಗಳು ಇತ್ಯಾದಿ ಕಾರಣಗಳನ್ನು ಗುರುತಿಸಿದೆ. ಇವೆಲ್ಲವುಗಳ ಮೌಲ್ಯ 2,212.44 ಕೋಟಿ ರೂ.ಗಳಾಗಬಹುದೆಂದು ವರದಿ ಲೆಕ್ಕಹಾಕಿದೆ.

ನೇರ ಮತ್ತು ಸರಳವಾಗಿ ಹೇಳುವುದಾದಲ್ಲಿ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮವನ್ನು ಪುನರ್ರಚನೆ ಮಾಡಲಾಗಿದೆಎಂದು ಸಂಬಂಧಿಸಿದ ಸಚಿವಾಲಯದ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ‘ಇಂಡಿಯಾ ಸ್ಪೆಂಡ್’ಗೆ ಅಕ್ಟೋಬರ್ 5ರಂದು ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ದಕ್ಷತೆ ಹೆಚ್ಚಿ ಸುವುದು, ಪರಿಣಾಮಕಾರಿ ಅನುಷ್ಠಾನ, ಸುಧಾರಿತ ಕಣ್ಗಾವಲು ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಅವರು ಮಾತಾಡಿದ್ದಾರೆ. ಇಲ್ಲಿರುವ ವಿಶೇಷ ಆತಂಕ ಎಂದರೆ ಸಾಮಾಜಿಕ ಗುರಿ ಸಾಧನೆಗಾಗಿ ಖಾಸಗೀಕರಣಕ್ಕೆ ಒತ್ತು ನೀಡಿರುವುದು! ಈ ನೀತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬಳಿಕ 2020ರ ತನಕದ ನೀರು ಪೂರೈಕೆ ಯೋಜನೆಗಳಿಗೆ ಎರಡು ವರ್ಷಗಳಲ್ಲೇ 23,050 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಇದನ್ನು ಕೇಂದ್ರ ಸರಕಾರಿ ಇಲಾಖೆಯ 2017ರ ಪತ್ರಿಕಾ ಪ್ರಕಟನೆಯಲ್ಲಿಯೇ ಘೋಷಿಸಲಾಗಿದೆ!
ಖಾಸಗೀಕರಣದ ಆತಂಕದ ಜೊತೆಯೂ, ಇನ್ನಷ್ಟು ಹಣ ವೆಚ್ಚ ಮಾಡಿದರೂ ಗ್ರಾಮೀಣ ಭಾರತಕ್ಕೆ ಸುರಕ್ಷಿತ ನೀರು ಪೂರೈಕೆಯ ಗುರಿ ತಲುಪುವುದು ಕಷ್ಟ ಸಾಧ್ಯ ಎಂದು ತಜ್ಞರು ಹೇಳುತ್ತಾರೆ.
ಭ್ರಷ್ಟಾಚಾರ ಒತ್ತಟ್ಟಿಗಿರಲಿ, ಉಪಯೋಗಿಸಬಹುದಾದ ನೀರಿನ ಲಭ್ಯತೆ, ಅಂತರ್ಜಲ ಕುಸಿತ ಇತ್ಯಾದಿಗಳೂ ಗುರಿ ಸಾಧನೆಗೆ ತೊಡಕಾಗಬಹುದೆಂಬುದು ಅವರ ಒಟ್ಟಾಭಿಪ್ರಾಯ. ಉದಾಹರಣೆಗೆ ದೇಶದಲ್ಲಿ ನಾಲ್ಕೂವರೆ ಕೋಟಿ ಜನರನ್ನು ಬಾಧಿಸುವ 68,529 ವಿಷಕಾರಿ ನೀರಿರುವ ಜನ ವಸತಿಗಳನ್ನು ಗುರುತಿಸಲಾಗಿದೆ. ಇವೆಲ್ಲವನ್ನೂ ಪರಿಗಣಿಸದೆ ಕೋಟಿಗಟ್ಟಲೆ ಹಣ, ಅಂಕಿ ಅಂಶಗಳ ಜಾಲದಲ್ಲಿ ಗ್ರಾಮೀಣ ಜನರಿಗೆ ನೀರು ಸಿಗಲಾರದು; ನೀರಿಗಾಗಿ ಕಾದಿರಿಸಿದ ಹಣ ಚರಂಡಿಯಲ್ಲಿ ಸೋರಿಹೋಗಬಹುದೆಂಬುದೇ ತಜ್ಞರ ಅಭಿಪ್ರಾಯ.
ಕೃಪೆ: scroll.in

Writer - ಶ್ರೀಹರಿ ಪಲಿಯತ್

contributor

Editor - ಶ್ರೀಹರಿ ಪಲಿಯತ್

contributor

Similar News

ಜಗದಗಲ
ಜಗ ದಗಲ