ನಂಜನಗೂಡು: ಉದ್ಘಾಟನೆಯಾಗಿ 3 ವರ್ಷ ಕಳೆದರೂ ಉಪಯೋಗಕ್ಕೆ ಬಾರದ ಅಂಬೇಡ್ಕರ್ ಭವನ

Update: 2018-12-12 18:17 GMT

ಮೈಸೂರು, ಡಿ.12: ದಲಿತರು, ಶೋಷಿತರು, ಬಡವರ ಅನುಕೂಲಕ್ಕಾಗಿ ನಂಜನಗೂಡು ನಗರದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿ ತಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಸಾರ್ವಜನಿಕರಿಗೆ ಇನ್ನೂ ಲಭ್ಯವಾಗದೆ ಅನಾಥವಾಗಿ ನಿಂತಿದೆ.

ನಂಜನಗೂಡಿನ ಹೃದಯ ಭಾಗದಲ್ಲಿರುವ ನಂಜನಗೂಡು-ಚಾಮರಾಜನಗರ ಬೈಪಾಸ್ ರಸ್ತೆಯ ಅಂಬೇಡ್ಕರ್ ಸರ್ಕಲ್ ಬಳಿ ನಿರ್ಮಾಣಗೊಂಡಿರುವ ಈ ಭವನ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ ಕನಸಿನ ಕೂಸು. ಅವರ ರಾಜೀನಾಮೆ ಬಳಿಕ ದಿಕ್ಕು ಕಾಣದೆ ಅನಾಥವಾಗಿದೆ. ದಿನನಿತ್ಯ ಭವನದ ಬಳಿಯೇ ತಿರುಗಾಡುವ ದಲಿತ ಮುಖಂಡರು ಮತ್ತು ರಾಜಕಾರಣಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ಹಾದುಹೋಗುತ್ತಿದ್ದಾರೆ.

ಶ್ರೀನಿವಾಸ ಪ್ರಸಾದ್ ಕೇಂದ್ರ ಸಚಿವರಾಗಿದ್ದಾಗ ಈ ಭವನ ಕಟ್ಟಲು ಮುತುವರ್ಜಿ ವಹಿಸಿದ್ದರು. ಒಂದಿಲ್ಲೊಂದು ತೊಂದರೆಗಳಿಂದ ಕಾಮಗಾರಿ ಕುಂಠುತ್ತಾ ಸಾಗಿ ಶ್ರೀನಿವಾಸ ಪ್ರಸಾದ ರಾಜ್ಯದಲ್ಲಿ ಕಂದಾಯ ಸಚಿವರಾದ ಬಳಿಕ ಅಂದರೆ, 15 ವರ್ಷಗಳ ಕಾಲಾವಾಕಾಶ ಪಡೆದು ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಉತ್ತಮ ಸುಸಜ್ಜಿತವಾದ ಭವನದ ನಿರ್ಮಾಣಗೊಂಡಿದೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಪುತ್ಥಳಿ ಮತ್ತು ಭವನನ್ನು ಏಕಕಾಲದಲ್ಲಿ ಉದ್ಘಾಟಿಸಿದ್ದರು.

ಮಾಜಿ ಸ್ಪೀಕರ್ ಕೊಡುಗೆ: ತಾಲೂಕಿನ ಹಿರಿಯ ರಾಜಕಾರಣಿ ಮಾಜಿ ಸ್ಪೀಕರ್ ಹೆಜ್ಜಿಗೆ ಪಿ.ವೆಂಕಟರಮಣ ಅವರು ಈ ಜಾಗವನ್ನು ಕೊಡುಗೆಯಾಗಿ ನೀಡಿದ್ದಾರೆ. ಪೀಪಲ್ಸ್ ಎಜುಕೇಷನ್ ಸೊಸೈಟಿಗೆಂದು ಈ ಜಾಗವನ್ನು ನೀಡಲಾಗಿತ್ತು. ಬಳಿಕ ಹಲವು ಬದಲಾವಣೆಗಳಾದ ಪರಿಣಾಮ ಅಂಬೇಡ್ಕರ್ ಭವನ ಕಟ್ಟಲು ಅನುಮತಿ ನೀಡಿದರು.

ಮೂರು ಕ್ಷೇತ್ರಗಳನ್ನೊಳಗೊಂಡಿದ್ದ ತಾಲೂಕು: ಈ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣ ಹಂತದಲ್ಲಿ ನಂಜನಗೂಡು ತಾಲೂಕಿಗೆ ಮೂರು ಕ್ಷೇತ್ರಗಳು ಸೇರಿದ್ದವು. ನಂಜನಗೂಡು ಸಾಮಾನ್ಯ ಕ್ಷೇತ್ರವಾದರೆ, ಸಂತೇಮರಹಳ್ಳಿ ಮತ್ತು ಟಿ.ನರಸೀಪುರ ಮೀಸಲು ಕ್ಷೇತ್ರಗಳಾಗಿದ್ದವು. ಆ ಸಂದರ್ಭದಲ್ಲಿ ಮೂರು ಕ್ಷೇತ್ರಗಳ ಶಾಸಕರು ಅನುದಾನ ನೀಡಿದ್ದರು. ಪ್ರಸ್ತುತ ನಂಜನಗೂಡು ಮತ್ತು ವರುಣ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ನಿರ್ವಹಣೆ ಕೊರತೆಯಿಂದ ವಿಳಂಬ: ಅಂಬೇಡ್ಕರ್ ಭವನವೇನೋ ನಿರ್ಮಾಣವಾಯಿತು. ಆದರೆ, ನಿರ್ವಹಣೆ ಹೇಗೆ ಎಂಬ ಪ್ರಶ್ನೆ ರಾಜಕಾರಣಿಗಳಿಗೆ ಎದುರಾಯಿತು. ಸರಕಾರದ ಅನುದಾನದೊಂದಿಗೆ ನಿರ್ಮಾಣವಾದರೂ ಒಂದು ಸಮುದಾಯಕ್ಕೆ ಸೇರಿದ್ದರಿಂದ ಸರಕಾರ ನೇರವಾಗಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲ. ಆ ಸಮುದಾಯಗಳ ನಿರ್ಧಾರಕ್ಕೆ ಬಿಟ್ಟುಬಿಟ್ಟಿತ್ತು.

ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಮಿಟಿ: ಯಾವುದೇ ಒಂದು ಸಮುದಾಯದ ಭವನ ನಿರ್ಮಾಣವಾದರೂ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಾರ್ಯರೂಪ ಪಡೆಯುತ್ತದೆ. ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕ ಸದಸ್ಯ ಕಾರ್ಯದರ್ಶಿ, ನಗರಸಭಾ ಆಯುಕ್ತ, ಜಿಪಂ ಎಇಇ, ಪಿಡಬ್ಲ್ಯುಡಿ ಎಇಇ ಶಾಶ್ವತ ಸದಸ್ಯರು. ಇನ್ನು ಶಾಸಕರು ಮತ್ತು ಅವರು ಸೂಚಿಸಿದ ಮೂವರು ಸದಸ್ಯರಿರುತ್ತಾರೆ.

ಅಡುಗೆ ಕೋಣೆ ನಿರ್ಮಾಣವಾಗಿಲ್ಲ: ಸುಮಾರು 2.50 ಕೋಟಿ ರೂ .ವಚ್ಚದಲ್ಲಿ ಈ ಭವನ ನಿರ್ಮಾಣ ಮಾಡಲಾಗಿದೆ. ಅಂತಹದರಲ್ಲಿ ಅಡುಗೆ ಕೋಣೆ, ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಲು ಸಾಧ್ಯವಾಗಲಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ದಲಿತ ಮುಖಂಡರಿಗೆ ಕಾಳಜಿ ಇಲ್ಲ: ಹಲವಾರು ಹೋರಾಟಗಳನ್ನು ನಿತ್ಯ ಮಾಡಿಕೊಂಡು ಅನ್ಯಾಯದ ವಿರುದ್ಧ ಸದಾ ಪ್ರತಿಭಟಿಸುತ್ತಿರುವ ದಲಿತ ಮುಖಂಡರು ಇದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ವಿಪರ್ಯಾಸ. ಕಣ್ಣು ಮುಂದೆ ಇಂತಹ ಸುಸಜ್ಜಿತ ಭವನ ಇದ್ದರೂ ಇದರ ಉಪಯೋಗ ಪಡೆದುಕೊಳ್ಳಬೇಕು ಎಂಬ ಕಾಳಜಿ ಇಲ್ಲವಾಗಿದೆ.                      

ಮಾಡಬೇಕೆಂಬ ಕಾಳಜಿ ಅಧಿಕಾರಿಗಳಿಗೂ ಇಲ್ಲ. ರಾಜಕಾರಣಿಗಳಿಗೂ ಇಲ್ಲ. ಸಾಮಾನ್ಯ ಜನ ಮಾತ್ರ ಅಭಿವೃದ್ಧಿ ಬಗ್ಗೆ ದಿನ ನಿತ್ಯ ಮಾತನಾಡುತ್ತಲೇ ಇರುತ್ತಾರೆ. ನಿತ್ಯ ಗುಂಪು ಸೇರಿ ಅನಗತ್ಯ ವಿಚಾರಗಳಲ್ಲೇ ಕಾಲ ಕಳೆಯುತ್ತಿರುವ ಜನಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಬೇಸರ ತರಿಸಿದೆ. ಒಟ್ಟಾರೆ ರಾಜಕಾರಾಣಿಗಳು ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಅಂಬೇಡ್ಕರ್ ಸಮುದಾಯ ಭವನ ಹಿಡಿದ ಕನ್ನಡಿಯಾಗಿದೆ. ಅಧಿಕಾರಿಗಳು ಮತ್ತು ಶಾಸಕರ ಸಮನ್ವಯದ ಕೊರತೆಯಿಂದ ಅಂಬೇಡ್ಕರ್ ಸಮುದಾಯ ಭವನ ನನೆಗುದಿಗೆ ಬಿದ್ದಿದೆ. ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ದಲಿತ ವರ್ಗದ ಅನುಕೂಲಕ್ಕೆ ಬಾರದಿರುವುದು ಬೇಸರ ತಂದಿದೆ. ನಿರ್ಲಕ್ಷವಹಿಸಿದ ಸಂಬಂಧಪಟ್ಟವರ ವಿರುದ್ಧ ಹೋರಾಟ ಮಾಡುತ್ತೇವೆ.
-ವಿಜಯಕುಮಾರ್, ಸಾಮಾಜಿಕ ಹೋರಾಟಗಾರ

ಸಮುದಾಯ ಭವನ ಉದ್ಘಾಟನೆಗೊಂಡು ಇಷ್ಟೊಂದು ದೀರ್ಘಕಾಲ ಕಳೆದರೂ ಸಾರ್ವಜನಿಕರಿಗೆ ದೊರೆಯದೇ ಇರುವುದು ಅವಮಾನಕರ ಸಂಗತಿ. ಆದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
-ಮಹದೇವಪ್ರಸಾದ್, ಪತ್ರಕರ್ತ

ಅಂಬೇಡ್ಕರ್ ಭವನ ಸಾರ್ವಜನಿಕರಿಗೆ ಲಭ್ಯವಿದೆ. ಆದರೆ, ಅಡುಗೆ ಕೋಣೆಗೆ ಸಂಬಂಧಿಸಿದಂತೆ ಕೆಲವು ಸಾಮಗ್ರಿಗಳನ್ನು ಸಿದ್ಧಪಡಿಸಬೇಕಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲೇ ಜಿಲ್ಲಾಧಿಕಾರಿ ಟೆಂಡರ್ ಕರೆದಿದ್ದರು. ನಿಗದಿತ ಮೊತ್ತದ ಟೆಂಡರ್‌ಗೆ ಯಾರೂ ಮುಂದೆ ಬಾರದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಈಗ ಮತ್ತೆ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕಿದೆ.
                              
-ಕಳಲೆ ಕೇಶವಮೂರ್ತಿ, ಮಾಜಿ ಶಾಸಕ                                                     

ಈ ಸಮುದಾಯ ನಿರ್ಮಾಣಕ್ಕೆ ದಲಿತರ ಶೇ.18 ಹಣವನ್ನು ನೀಡಲಾಗಿದೆ. ಬಡ ದಲಿತರಿಗೆ ಅನುಕೂಲವಾಗಬೇಕಿದ್ದ ಭವನದಲ್ಲಿ ಬರೀ ಸರಕಾರಿ ಕಾರ್ಯಕ್ರಮಗಳನ್ನಷ್ಟೇ ಹಮ್ಮಿಕೊಳ್ಳಲಾಗುತ್ತಿದೆ. ಸಂಸದರು ಮತ್ತು ಶಾಸಕರ ಹೊಂದಾಣಿಕೆ ಕೊರತೆಯಿಂದ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿವೆ. ಅಡುಗೆ ಕೋಣೆ ನೆಪ ಹೇಳಿ ಇಷ್ಟೊಂದು ದಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡದಿರುವುದು ನಾಚಿಕೆಗೇಡು. 

-ರಾಜಶೇಖರ್, ದಸಂಸ ಸಂಚಾಲಕ

ಅಂಬೇಡ್ಕರ್ ಸಮುದಾಯ ಭವನಕ್ಕೆ ಸಂಬಂಧಿಸಿದಂತೆ ಹೊಸ ಕಮಿಟಿ ರಚಿಸಲು ಸೂಚಿಸಿದ್ದೇನೆ. ವರುಣಾ ವಿಧಾನಸಭಾ ಕ್ಷೇತ್ರ ನಂಜನಗೂಡು ತಾಲೂಕಿಗೆ ಒಳಪಡುವುದರಿಂದ ಅಲ್ಲಿಯ ಒಬ್ಬರನ್ನು ಸದಸ್ಯರನ್ನಾಗಿ ನೇಮಿಸಲು ಆ ಕ್ಷೇತ್ರದ ಶಾಸಕರಿಗೆ ಮನವಿ ಮಾಡಲಾಗಿದೆ. ಕೂಡಲೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು.
-ಹರ್ಷವರ್ಧನ್, ಹಾಲಿ ಶಾಸಕ

Writer - ನೇರಳೆ ಸತೀಶ್‍ ಕುಮಾರ್

contributor

Editor - ನೇರಳೆ ಸತೀಶ್‍ ಕುಮಾರ್

contributor

Similar News