ಮಧ್ಯಪ್ರದೇಶದ ಆರ್ಥಿಕ ಆರೋಗ್ಯ ಸರಿಪಡಿಸಲು ಒತ್ತು: ಕಮಲ್‌ನಾಥ್

Update: 2018-12-13 18:48 GMT

ಮಧ್ಯಪ್ರದೇಶದಲ್ಲಿ 15 ವರ್ಷಗಳ ಬಿಜೆಪಿ ಆಡಳಿತ ಕೊನೆಗಾಣಿಸಿದ ಕಾಂಗ್ರೆಸ್ ಪಕ್ಷ, ನೂತನ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆಯಲ್ಲಿ ಮುಳುಗಿರುವ ನಡುವೆಯೇ ಪಕ್ಷದ ಅಧ್ಯಕ್ಷ ಹಾಗೂ ಸಿಎಂ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕ ಕಮಲ್‌ನಾಥ್ ಅವರು, ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಜಿಎಸ್‌ಟಿ ಜಾರಿಗೆ ತಂದ ವಿಧಾನದ ವಿರುದ್ಧ ಅಭಿಯಾನ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸಂದರ್ಶನದ ಮುಖ್ಯಾಂಶಗಳು ಇಲ್ಲಿವೆ

ಪ್ರ: ಈ ವಿಧಾನಸಭಾ ಚುನಾವಣೆ 2019ರ ಲೋಕಸಭಾ ಚುನಾವಣೆಗೆ ಮುನ್ನ ನಡೆದ ಸೆಮಿಫೈನಲ್ ಎಂದು ನೀವು ಭಾವಿಸುತ್ತೀರಾ?
ಉ: ಇಲ್ಲ. ಇದನ್ನು ಸೆಮಿಫೈನಲ್ ಎಂದು ನಾನು ಭಾವಿಸುವುದಿಲ್ಲ. ಅದು ಅನಿವಾರ್ಯ...ಶಿವರಾಜ್ ಸಿಂಗ್ ಚೌಹಾಣ್ ಸರಕಾರದ 15 ವರ್ಷಗಳ ದುರಾಡಳಿತವನ್ನು ನಾವು ಕೊನೆಗೊಳಿಸಿದ್ದೇವೆ. ಸಮಾಜದ ಪ್ರತಿ ವರ್ಗದಲ್ಲಿ ಕೂಡಾ ಸರಕಾರದ ವಿರುದ್ಧ ಆಕ್ರೋಶ ಇದ್ದುದನ್ನು ನಾವು ಕಂಡಿದ್ದೇವೆ. ಅದು ಸೋಲು ಕಾಣಲೇಬೇಕಿತ್ತು.
ಪ್ರ: ರಾಜ್ಯದಲ್ಲಿ ತೀರಾ ಕಡಿಮೆ ಅಂತರದ ವಿಜಯವನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ? ಮಧ್ಯಪ್ರದೇಶದಲ್ಲಿ ಈ ಹೋರಾಟ ಇಷ್ಟೊಂದು ನಿಕಟವಾಗಿರುತ್ತದೆ ಎಂದು ನೀವು ನಿರೀಕ್ಷಿಸಿದ್ದಿರಾ?
ಉ:
ಅದಕ್ಕೆ ಮುಖ್ಯ ಕಾರಣ ಬಿಜೆಪಿಯ ಸಾಂಸ್ಥಿಕ ಬಲ ಹಾಗೂ ಅವರು ಬಳಸಿದ ಹಣಕಾಸು ಬಲ. ವಿಜಯದ ಅಂತರ ತೀರಾ ಕಡಿಮೆಯಾಗಲು ಮುಖ್ಯ ಕಾರಣವೆಂದರೆ, ವಿಂದ್ಯಾ ಪ್ರದೇಶದಲ್ಲಿ ನಾವು ಹಿಂದೆ ಬಿದ್ದೆವು. ಆ ಭಾಗದಲ್ಲಿ ಬಿಜೆಪಿಯ ಸಾಂಸ್ಥಿಕ ಶಕ್ತಿ ಅತ್ಯುನ್ನತವಾಗಿದೆ ಹಾಗೂ ನಮ್ಮ ಸಿದ್ಧತೆ ಸಾಕಾಗಲಿಲ್ಲ. ಈ ಉಗ್ರ ಹಣಾಹಣಿಯಲ್ಲಿ ಸಾಂಸ್ಥಿಕ ಸಾಮರ್ಥ್ಯ ಅತ್ಯಂತ ಮಹತ್ವದ್ದಾಗುತ್ತದೆ.
ಪ್ರ: ಹಿನ್ನಡೆಗೆ ಇತರ ಕಾರಣಗಳಿವೆಯೇ?
ಉ: ಬಿಜೆಪಿ ಮತ್ತು ರಾಜ್ಯ ಸರಕಾರ ಆಯೋಜಿಸಿದ್ದ ದೈತ್ಯ ಪ್ರಮಾಣದ ಪ್ರಚಾರ ಅಭಿಯಾನ ನಮ್ಮ ಹಿನ್ನಡೆಗೆ ಕಾರಣವಾಯಿತು. ದೊಡ್ಡ ಮೊತ್ತವನ್ನು ಇದಕ್ಕಾಗಿ ಬಳಸಲಾಯಿತು ಹಾಗೂ ಮಾಧ್ಯಮವೂ ಬೇಕಾಬಿಟ್ಟಿ ವೆಚ್ಚದ ಭಾಗವಾಯಿತು.
ಪ್ರ: ಸುದೀರ್ಘ ಮತ ಎಣಿಕೆಯ ದಿನ ನಿಮಗೆ ಆತಂಕದ ಕ್ಷಣಗಳನ್ನು ತಂದೊಡ್ಡಿತ್ತೇ?
ಉ: ಹೌದು. ಕೆಲ ಆತಂಕದ ಕ್ಷಣಗಳು ಎದುರಾದವು. ಹೊಸ ನಿಯಮಾವಳಿ ಜಾರಿಗೆ ಬಂದ ಕಾರಣದಿಂದ ಎಣಿಕೆ ಕಾರ್ಯಕ್ಕೆ ಸುದೀರ್ಘ ಅವಧಿ ತಗಲಿತು. ಮತ್ತೆ ಕೆಲ ವಿವಾದಾತ್ಮಕ ಎಣಿಕೆ ಸುತ್ತುಗಳು ಮುಗಿದು ಅಂತಿಮವಾಗಿ ಮುಂಜಾನೆ 3 ಗಂಟೆಗೆ ಅದು ಮುಕ್ತಾಯವಾಯಿತು.
ಪ್ರ: ಯಾವುದೇ ಮೋಸದಾಟದ ಪ್ರಯತ್ನ ನಡೆದಿತ್ತೇ?
ಉ:
ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದರು ಎಂದಷ್ಟೇ ಹೇಳಬಹುದಾಗಿದೆ.
ಪ್ರ: ಈಗ ನಿಮ್ಮ ಆದ್ಯತೆಗಳೇನು? ಉದಾಹರಣೆಗೆ, ಮಧ್ಯಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ನೀವು ಟ್ವೀಟ್ ಮಾಡಿದ್ದೀರಿ. ಆದ್ದರಿಂದ ರಾಜ್ಯದ ಹಣಕಾಸು ಸ್ಥಿತಿಗತಿ ನಿಮ್ಮ ಮೊದಲ ಆದ್ಯತೆಯಾಗುತ್ತದೆಯೇ?
ಉ: ಮಧ್ಯಪ್ರದೇಶದ ಹಣಕಾಸು ಆರೋಗ್ಯದ ಬಗ್ಗೆ ನನಗೆ ನಿಜಕ್ಕೂ ಆತಂಕ ಇದೆ. ರಾಜ್ಯದಲ್ಲಿ ಸಂಪನ್ಮೂಲಗಳನ್ನು ಹೇಗೆ ಕ್ರೋಡೀಕರಿಸಬಹುದಾಗಿದೆ ಎಂಬ ಬಗ್ಗೆ ನಾವು ವಿನೂತನ ಚಿಂತನೆ ನಡೆಸಬೇಕಾಗಿದೆ. ಸಂಪನ್ಮೂಲಗಳ ಕೊರತೆ ಹಿನ್ನೆಲೆಯಲ್ಲಿ ನಾವು ಹೊಸ ಹಾಗೂ ವಿನೂತನ ಚಿಂತನೆ ಮಾಡಬೇಕಾಗಿದೆ.
ಪ್ರ: ನೀವು ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಕೂಡಾ ವಾಣಿಜ್ಯ ಸಚಿವರಾಗಿದ್ದವರು. 2019ರ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಮೋದಿ ಸರಕಾರದ ಯಾವ ಆರ್ಥಿಕ ನೀತಿಗಳು ಪ್ರಮುಖ ಎಂದು ನೀವು ಭಾವಿಸುತ್ತೀರಿ?
ಉ:
ರಾಜ್ಯ ಹಾಗೂ ರಾಷ್ಟ್ರಮಟ್ಟಗಳೆರಡರಲ್ಲೂ ನಾವು ಪ್ರಧಾನಿಯವರ ನಿಜ ಬಣ್ಣ ಬಯಲು ಮಾಡುತ್ತೇವೆ. ಉದಾಹರಣೆಗೆ ಕೇಂದ್ರ ಸರಕಾರ ಜಿಎಸ್‌ಟಿ ಜಾರಿಗೊಳಿಸಿದ ವಿಧಾನದ ವಿರುದ್ಧ ನಾವು ಪ್ರಚಾರ ಮಾಡುತ್ತೇವೆ. ಅಂತೆಯೇ ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳ ಮೇಲೆ ತೀರಾ ದುಷ್ಪರಿಣಾಮ ಬೀರಿದ ನೋಟು ರದ್ದತಿ ವಿಚಾರವನ್ನು ಸಮರ್ಪಕವಾಗಿ ನಿರ್ವಹಿಸದ ಬಗ್ಗೆಯೂ ಪ್ರಚಾರ ಮಾಡುತ್ತೇವೆ. ಅವರಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದು ಮೇಲ್ನೋಟಕ್ಕೇ ಕಾಣುತ್ತದೆ. ಜತೆಗೆ ಜನರು ಈಗ ಸಿಬಿಐಯನ್ನು ಒಡೆದ ಮನೆ ಎಂದು ನೋಡುತ್ತಿದ್ದಾರೆ. ಆರ್‌ಬಿಐ ಕೂಡಾ ವಿಭಜನೆಯಾಗಿದೆ. ಇಡೀ ಸಮಾಜವನ್ನೇ ಮೋದಿ ಸರಕಾರ ವಿಭಜಿಸಿದೆ.
ಪ್ರ: ಬಿಎಸ್ಪಿ ಜತೆ ಚುನಾವಣಾ ಪೂರ್ವ ಮೈತ್ರಿ ಸಾಧ್ಯವಾಗಲಿಲ್ಲ. ಆದರೆ ಇಂದು ಉಭಯ ಪಕ್ಷಗಳು ಭೋಪಾಲ್‌ನಲ್ಲಿ ಸರಕಾರ ರಚನೆಗೆ ಒಂದಾಗಿವೆ. ಇದು 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಕಾಂಗ್ರೆಸ್-ಬಿಸ್ಪಿ ಮೈತ್ರಿಕೂಟಕ್ಕೆ ನಾಂದಿಯಾಗುತ್ತದೆಯೇ?
ಉ: ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಬಯಸುವ ಇತರ ಪಕ್ಷಗಳ ಜತೆ ಸೇರಿ ನಾವು ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟ ರಚಿಸಲು ಬಯಸಿದ್ದೇವೆ. ನಾವು ನೆನಪಿನಲ್ಲಿಡಬೇಕಾದ ವಿಚಾರವೆಂದರೆ, 2014ರ ಚುನಾವಣೆಯಲ್ಲಿ, ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೂ, ಅದರ ಮತಗಳಿಕೆ ಪ್ರಮಾಣ ಕೇವಲ ಶೇ.31. ಬಹುಶಃ ವಿಶ್ವದಲ್ಲೇ ಇಂಥ ಸ್ಥಿತಿ ಎದುರಿಸುತ್ತಿರುವ ಏಕೈಕ ಪಕ್ಷ ಅದು. ಹಾಗಾದರೆ ಅವರು ಯಾವ ಜನಮತದ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ?
 ಕೃಪೆ: indianexpress

Writer - ರಿತು ಸರಿನ್

contributor

Editor - ರಿತು ಸರಿನ್

contributor

Similar News

ಜಗದಗಲ
ಜಗ ದಗಲ