ಅಪರೂಪದ ಸಂಶೋಧಕಿ ಜೇನ್ ಗುಡಾಲ್

Update: 2018-12-16 07:50 GMT

ಚಿಂಪಾಂಜಿಗಳ ಗುಂಪಿನಲ್ಲೇ ಒಂದು ಪ್ರಬಲ ಹೆಣ್ಣು ಚಿಂಪಾಂಜಿ ತಮ್ಮ ಗುಂಪಿನ ಬೇರೆ ಹೆಣ್ಣು ಚಿಂಪಾಂಜಿಗಳ ಮರಿಗಳನ್ನು ಕೊಂದು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವುದನ್ನು ಗುಡಾಲ್ ಗಮನಿಸಿ, ‘‘ನನ್ನ ಸಂಶೋಧನೆಯ ಹತ್ತು ವರ್ಷಗಳ ಅವಧಿಯಲ್ಲಿ ಚಿಂಪಾಂಜಿಗಳು ಒಳ್ಳೆಯ ಸ್ವಭಾವದವೆಂದೂ ಮನುಷ್ಯರಿಗಿಂತ ಒಳ್ಳೆಯ ಪ್ರಾಣಿ ಎಂದು ನಂಬಿದ್ದೆ. ಆದರೆ ಅವು ಸಹ ಪಾಶವೀಕೃತ್ಯ ಎಸಗುತ್ತವೆ, ಅವುಗಳ ಸ್ವಭಾವದಲ್ಲಿ ಸಹ ಮನುಷ್ಯರ ಕ್ರೂರತೆ ಇದೆ’’ ಎಂದು ಹೊರಗೆಡವಿದರು. ಸುದೀರ್ಘ ಕಾಲ ತಾಂಝಾನಿಯದಲ್ಲಿ ಚಿಂಪಾಂಜಿಗಳ ಬಗ್ಗೆ ಸಂಶೋಧನೆ ನಡೆಸಿದ ನಂತರ ಜೇನ್ ಗುಡಾಲ್, ‘ಜೇನ್ ಗುಡಾಲ್ ಇನ್‌ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಂದಿನ ದಿನಗಳಲ್ಲಿ ಗುಡಾಲ್ ಚಿಂಪಾಂಜಿಗಳ ಮತ್ತು ಜಗತ್ತಿನ ಪರಿಸರದ ಬಗೆಗಿನ ಕೆಲಸಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

ಸುಮಾರು ಹನ್ನೊಂದು ವರ್ಷಗಳ ಹಿಂದೆ ನನ್ನ ಸ್ನೇಹಿತೆ ಕಲಾವತಿಯವರನ್ನು ಭೇಟಿಯಾಗಲು ಚೆನ್ನೈಗೆ ಹೋಗಿದ್ದೆ. ಅವರು ‘‘ಒಂದು ಸಂಜೆ ನನಗೆ ಬಾ, ಬ್ರಿಟಿಷ್ ಕೌನ್ಸಿಲ್‌ಗೆ ಹೋಗಿ ಬರೋಣ, ಏಕೆ ಎನ್ನಬೇಡ, ನಿನಗೇ ಗೊತ್ತಾಗುತ್ತದೆ’’ ಎಂದರು. ಸರಿ ಹೊರಟೆವು.

ಅದೊಂದು ಅಪೂರ್ವ ಸಂಜೆಯಾಗಿತ್ತು ನನಗೆ. ಅದು ಜಗತ್ಪ್ರಸಿದ್ಧ ಪ್ರೈಮೆಟಾಲಜಿಸ್ಟ್ ಜೇನ್ ಗುಡಾಲ್‌ರ ಸಂದರ್ಶನ ಹಾಗೂ ಮಾತುಕತೆಯ ಚಹಾಕೂಟವಾಗಿತ್ತು. ಮನಸ್ಸು ಆನಂದ ತುಂದಿಲವಾಯ್ತು.

ಇದಕ್ಕೂ ಮುಂಚೆ ಕೆಲವು ವರ್ಷಗಳ ಹಿಂದೆ ವ್ಯಾಟ್ಸನ್ ಎಂಬ ತಳಿಶಾಸ್ತ್ರಜ್ಞರು ಮೈಸೂರಿಗೆ ಬಂದಿದ್ದಾಗ ‘ಸಿ.ಎಫ್.ಟಿ.ಆರ್.ಐ’ನಲ್ಲಿ ಅವರ ಭಾಷಣ ಏರ್ಪಾಡಾಗಿತ್ತು. ಆ ಮಹಾನ್ ವಿಜ್ಞಾನಿಯ ಮಾತುಗಳನ್ನು ಕೇಳುವ, ಅವರನ್ನು ನೋಡುವ ಅವಕಾಶ ಸಾರ್ವಜನಿಕರಿಗೆ ಸಿಗಲಿಲ್ಲ. ಈ ವಿಷಯವಾಗಿ ನನ್ನ ಸ್ನೇಹಿತರು ಸಮಂಜಸವಾದ ಉತ್ತರ ಕೊಡಲಿಲ್ಲ. ಮನುಷ್ಯರ, ಎಲ್ಲ ಜೀವಗಳ ಜೀವಕೋಶಗಳಲ್ಲಿ ಕ್ರೋಮೊಸೋಮ್‌ಗಳು (ವರ್ಣತಂತು) ಇರುವುದು ಎಲ್ಲರಿಗೂ ಇಂದು ಗೊತ್ತಿರುವ ವಿಷಯ. ಈ ಕ್ರೋಮೊಸೋಮ್‌ಗಳ ರಚನೆಯನ್ನು ಕಂಡು ಹಿಡಿದವರು ವ್ಯಾಟ್ಸನ್ ಮತ್ತು ಕ್ರಿಕ್ ಎಂಬ ತಳಿ ವಿಜ್ಞಾನಿಗಳು. ಇಂತಹ ಅಪೂರ್ವ ಶೋಧವನ್ನು ಮಾಡಿದ ವಿಜ್ಞಾನಿಯನ್ನು ನಮ್ಮ ಊರಿನಲ್ಲೇ ನೋಡುವುದೆಂದರೆ! ಅವಕಾಶ ತಪ್ಪಿಹೋಗಿತ್ತು.

ಆ ಕೊರತೆ ಜೇನ್ ಗುಡಾಲ್‌ರಂತಹ ವಾನರ ತಜ್ಞೆಯನ್ನು ಕಂಡಾಗ ತುಂಬಿ ಬಂದಿತು. ಅಂದು ಗುಡಾಲ್ ಸೇರಿದ್ದ ಜನರ ಅನೇಕ ಪ್ರಶ್ನೆಗಳಿಗೆ ಚಿಂಪಾಂಜಿಗಳ ಒಡನಾಟ, ಪ್ರಾಣಿಗಳ ಬುದ್ಧಿಮತ್ತೆ, ಪರಿಸರ ಸಂರಕ್ಷಣೆ ಬಗ್ಗೆ ಸಾವಧಾನವಾಗಿ ಉತ್ತರ ಕೊಟ್ಟರು. ಅಂತ್ಯದಲ್ಲಿ ಎಲ್ಲರ ನಡುವೆ ಒಬ್ಬರಂತೆ ಓಡಾಡಿಕೊಂಡು ಟೀ ಸೇವಿಸುತ್ತ ನಮಗೆಲ್ಲಾ ಹಸ್ತಾಕ್ಷರ ಹಾಕಿಕೊಟ್ಟರು. ಇಂಥ ಅವಕಾಶ ಒದಗಿಸಿದ ಗೆಳತಿ ಕಲಾರನ್ನು ಮನಸಾರೆ ವಂದಿಸಿದೆ.

ಬ್ರಿಟಿಷ್ ಕೌನಿಲ್ಸ್ ಮತ್ತು ಚೆನ್ನೈನ ಅಲೈವ್ ಫೌಂಡೇಶನ್ ಏರ್ಪಡಿಸಿದ್ದ ವೈಲ್ಡ್ ಸ್ಕ್ರೀನ್ ಫೆಸ್ಟಿವಲ್‌ನ ಅಂಗವಾಗಿ ನಡೆದ ಈ ಸಂತೋಷಕೂಟದಲ್ಲಿ ಜೇನ್ ಗುಡಾಲ್‌ರನ್ನು ನೋಡುವ, ಕೇಳುವ ಸಂದರ್ಭ ನಮಗೆ ಒದಗಿ ಬಂದಿತ್ತು.

 (PRIMATES) ಸುಮಾರು 55 ವರ್ಷಗಳ ಕಾಲ ಚಿಂಪಾಂಜಿಗಳ ಜೀವನ ಮತ್ತು ಸಾಮಾಜಿಕ ನಡವಳಿಕೆಗಳನ್ನು ಆಫ್ರಿಕಾದ ಟಾನ್‌ಝಾನಿಯದ ಗೊಂಬೆ ಸ್ಟ್ರೀಮ್ ನ್ಯಾಷನಲ್ ಪಾರ್ಕ್‌ನಲ್ಲಿ ಅಧ್ಯಯನ ಮಾಡಿ ಜೇನ್ ಗುಡಾಲ್ ಇಂದು ಜಗತ್ತಿನ ಅತಿಮುಖ್ಯ ಪ್ರೈಮೆಟಾಲಜಿಸ್ಟ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 1934ರಲ್ಲಿ ಇಂಗ್ಲೆಂಡಿನ ಹ್ಯಾಮ್‌ಸ್ಟೆಡ್‌ನಲ್ಲಿ ಜನಿಸಿದ ಜೇನ್ ಗುಡಾಲ್‌ರಿಗೆ ಚಿಕ್ಕಂದಿನಲ್ಲಿ ಅವರ ತಂದೆ ಇಂಗ್ಲಿಷರ ಪರಿಪಾಠದಂತೆ ಆಡಲು ಟೆಡ್ಡಿಬೇರ್ ಗೊಂಬೆಗೆ ಬದಲಾಗಿ ಒಂದು ಚಿಂಪಾಂಜಿ ಗೊಂಬೆಯನ್ನು ಕೊಟ್ಟರು. ‘ಜ್ಯೂಬಿಲಿ’ ಎಂಬ ಹೆಸರಿನ ಈ ಚಿಂಪಾಂಜಿ ಗೊಂಬೆಯ ಜೇನ್ ಗುಡಾಲ್‌ರ ಎಳೆತನದಲ್ಲಿ ಪ್ರಾಣಿಗಳ ಬಗ್ಗೆ ವಿಶೇಷ ಒಲವನ್ನು ಮೂಡಿಸಿತು. ಪ್ರಾಣಿಗಳ ಬಗ್ಗೆ ಇದ್ದ ಒಲವೇ ಜೇನ್ ಗುಡಾಲ್‌ಳನ್ನು ಆಫ್ರಿಕಾಕ್ಕೆ ಎಳೆತಂದಿತು. ಆಫ್ರಿಕಾದ ಕೆನ್ಯಾದಲ್ಲಿದ್ದ ಪ್ರಸಿದ್ಧ ಮಾನವಶಾಸ್ತ್ರಜ್ಞ ಪ್ರೊ.ಲೀಕಿಯವರನ್ನು ಗುಡಾಲ್ ಸಂಪರ್ಕಿಸಿದಳು. ಪ್ರೊ.ಲೀಕಿಯವರು ಇಂದಿನ ಚಿಂಪಾಂಜಿಗಳ ನಡವಳಿಕೆ ಒಂದಾನೊಂದು ಕಾಲದಲ್ಲಿ ಆಗಿಹೋದ ಪುರಾತನ ಮಾನವನ ನಡವಳಿಕೆಯ ಮೇಲೆ ಏನಾದರೂ ಬೆಳಕು ಚೆಲ್ಲಬಹುದೇ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಗುಡಾಲ್‌ಳನ್ನು ತಮ್ಮ ಸೆಕ್ರೆಟರಿಯಾಗಿ ತೆಗೆದುಕೊಂಡರು. ಆನಂತರ ತಮ್ಮ ಸಂಶೋಧನೆಯ ಜಾಗವಾದ ಓಲ್ಡುವಾಯ್ ಕೊಳ್ಳಕ್ಕೆ ಗುಡಾಲ್‌ಳನ್ನು ಕಳಿಸಿದರು. 1958ರಲ್ಲಿ ಲೀಕಿಯವರು ಗುಡಾಲ್‌ಳನ್ನು ವಾನರಗಳ ಸ್ವಭಾವ, ನಡವಳಿಕೆಗಳನ್ನು ಅಭ್ಯಸಿಸಲು ಆಸ್ಮನ್ ಹಿಲ್ ಮತ್ತು ಜೋನ್ ನೇಪಿಯರ್ ಎಂಬವರಲ್ಲಿಗೆ ಕಳಿಸಿದರು. ನಂತರ ಲೀಕಿಯವರು ಧನ ಸಂಗ್ರಹಣೆ ಮಾಡಿ ಜೇನ್ ಗುಡಾಲ್‌ಳನ್ನು ಟಾನ್‌ಝಾನೀಯದ ಗೊಂಬೆ ಸ್ಟ್ರೀಮ್ ನ್ಯಾಷನಲ್ ಪಾರ್ಕ್‌ಗೆ ಕಳಿಸಿದರು. ವಿಶ್ವವಿದ್ಯಾನಿಲಯದ ಪದವಿಗಳನ್ನು ಪಡೆಯದಿದ್ದ ಗುಡಾಲ್‌ಳನ್ನು ಪುನಃ ಲೀಕಿಯವರು ಧನ ಸಂಗ್ರಹಣೆ ಮಾಡಿ ಕೇಂಬ್ರಿಜ್‌ಗೆ ಕಳಿಸಿದರು. ಗುಡಾಲ್ ಕೇಂಬ್ರಿಜ್‌ನಲ್ಲಿ ಮಾನವಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ‘ಪಿಎಚ್‌ಡಿ’ ಪದವಿಯನ್ನು ಪಡೆದರು. 1965ರಲ್ಲಿ ರಾಬಟ್ ಹಿಂಡೆ ಎಂಬವರ ಮಾರ್ಗದರ್ಶನದಲ್ಲಿ ತಾವು ಐದು ವರ್ಷಗಳ ಕಾಲ ಚಿಂಪಾಂಜಿಗಳ ಬಗ್ಗೆ ಮಾಡಿದ ಅಧ್ಯಯನದ ಬಗ್ಗೆ ಡಾಕ್ಟರೇಟ್ ಪಡೆದರು.

ಅಧಿಕೃತ ಕಾಲೇಜು ವಿದ್ಯಾಭ್ಯಾಸವಿಲ್ಲದ ಜೇನ್ ಗುಡಾಲ್ ಆಫ್ರಿಕಾದಲ್ಲಿ ಕಸ್ಕಲಾ ಚಿಂಪಾಂಜಿಗಳ ನಡವಳಿಕೆ, ಜೀವನ ವಿಧಾನಗಳ ಸಂಶೋಧನೆಯಲ್ಲಿ ನಿರತರಾದರು. ಅಂದಿನ ವಿಜ್ಞಾನಿಗಳು ತಮ್ಮ ಅಧ್ಯಯನದ ಪ್ರಾಣಿಗಳನ್ನು ಗುರುತಿಸಲು ಸಂಖ್ಯೆಗಳನ್ನು ಕೊಡುತ್ತಿದ್ದರು. ಆವತ್ತಿನ ಕಠಿಣ ವೈಜ್ಞಾನಿಕ ನಿಲುವಿಗೆ ಹೊರತಾಗಿ ಯೋಚಿಸುತ್ತಿದ್ದ ಜೇನ್ ಗುಡಾಲ್ ಚಿಂಪಾಂಜಿಗಳಿಗೆ ‘ಫಿಫಿ’ ಮತ್ತು ಡೇವಿಡ್ ಗ್ರೇ ಬಿಯರ್ಡ್ ಎಂಬ ಹೆಸರುಗಳನ್ನು ಕೊಟ್ಟರು ಮತ್ತು ಚಿಂಪಾಂಜಿಗಳಿಗೆ ಅವುಗಳದ್ದೇ ಆದ ವ್ಯಕ್ತಿತ್ವವಿದೆ ಎಂದು ಸಾರಿದರು. ಮನುಷ್ಯನಿಗೆ ಮಾತ್ರ ಸ್ವತಂತ್ರ ವ್ಯಕ್ತಿತ್ವ, ಸಂತೋಷ, ದುಃಖಗಳಂತಹ ಭಾವನೆಗಳಿವೆ ಎಂದು ನಂಬಿದ್ದ ಕಾಲದಲ್ಲಿ ಗುಡಾಲ್‌ರ ಈ ಸಂಶೋಧನೆ ಆಘಾತ ಉಂಟುಮಾಡಿತು. ಮನುಷ್ಯರಿಗೆ ಸಹಜವಾದ ತಬ್ಬಿಕೊಳ್ಳುವುದು, ಬೆನ್ನು ತಟ್ಟುವುದು, ಕಚಗುಳಿ ಇಡುವುದು ಇವೆಲ್ಲವನ್ನು ಚಿಂಪಾಂಜಿಗಳೂ ನಡೆಸುತ್ತವೆ. ಚಿಂಪಾಂಜಿಗಳು ಅವುಗಳ ಸಂಸಾರಗಳಲ್ಲಿ ಮತ್ತು ತಮ್ಮ ಗುಂಪಿನ ಇತರ ಸದಸ್ಯರೊಡನೆ ಅವು ಹೊಂದಿರುವ ಮಾನವ ಸದೃಶ ಭಾವನೆಗಳು, ಚಿಂಪಾಂಜಿಗಳಿಗೂ ಮಾನವರಿಗೂ ಇರುವ ಸಾದೃಶ್ಯವನ್ನು ಸಾಬೀತು ಪಡಿಸುತ್ತವೆ ಎಂದು ಜೇನ್ ಗುಡಾಲ್ ತನ್ನ ದೀರ್ಘಕಾಲ ಸಂಶೋಧನೆಯಲ್ಲಿ ಗಮನಿಸಿದರು.

(tools) ಒಮ್ಮೆ ಒಂದು ಚಿಂಪಾಂಜಿ ಗೆದ್ದಲು ಹುಳಗಳ ಗೂಡಿಗೆ ಆಗಾಗ್ಗೆ ಒಂದು ಹುಲ್ಲಿನ ಕಡ್ಡಿಯನ್ನು ತುರುಕಿ ಈಚೆಗೆ ತೆಗೆದು ಆ ಕಡ್ಡಿಗೆ ಅಂಟಿಕೊಂಡಿದ್ದ ಗೆದ್ದಲು ಹುಳಗಳನ್ನು ತಿನ್ನುವುದನ್ನು ಗುಡಾಲ್ ಗಮನಿಸಿದರು ಮತ್ತು ಆಗಾಗ ಚಿಂಪಾಂಜಿಗಳು ಮರಗಳ ಸಣ್ಣ ಕೊಂಬೆಗಳನ್ನು ಮುರಿದು, ಅವುಗಳ ಎಲೆಗಳನ್ನು ಕಿತ್ತುಹಾಕಿ, ಅದನ್ನು ಗೆದ್ದಲು ಗೂಡಿನೊಳಕ್ಕೆ ತುರುಕಿ ಗೆದ್ದಲು ಹುಳುಗಳ ಬೇಟೆಯಾಡುವುದನ್ನು ನೋಡಿದರು. ಇದೊಂದು ರೀತಿಯಲ್ಲಿ ಮನುಷ್ಯರು ಉಪಕರಣಗಳನ್ನು ತಯಾರಿಸುವ ಮೊದಲ ಹಂತ ಎಂದು ಜಗತ್ತಿಗೆ ಗುಡಾಲ್ ಸಾರಿದರು. ಅದುವರೆಗೆ ಮನುಷ್ಯ ಮಾತ್ರ ಉಪಕರಣಗಳನ್ನು ಮಾಡಬಲ್ಲ, ಉಪಯೋಗಿಸಬಲ್ಲ ಮತ್ತು ಚಿಂಪಾಂಜಿಗಳು ಸಸ್ಯಾಹಾರಿಗಳು ಎಂದಿದ್ದ ನಂಬುಗೆಗೆ ಬಲವಾದ ಹೊಡೆತವನ್ನುಂಟು ಮಾಡಿತು.

ಪ್ರೊ.ಲೀಕಿಯವರು ಈ ಸಂಶೋಧನೆ ಬಗ್ಗೆ ಬರೆಯುತ್ತ, ಈಗ ನಾವು ಮನುಷ್ಯ ಎಂದರೆ ಯಾರು ಎಂಬುದನ್ನು ಮರು ವ್ಯಾಖ್ಯಾನ ಮಾಡಬೇಕು ಅಥವಾ ಚಿಂಪಾಂಜಿಯನ್ನು ಮನುಷ್ಯ ಜಾತಿಗೆ ಸೇರಿದ್ದು ಎಂದು ತೀರ್ಮಾನಿಸಬೇಕಾಗಿದೆ ಎಂದು ಉದ್ಗರಿಸಿದರು.

ಗೊಂಬೆ ಸ್ಟೀಮ್ ನ್ಯಾಷನಲ್ ಪಾರ್ಕ್‌ನಲ್ಲಿ ಜೇನ್ ಗುಡಾಲ್‌ರು ಚಿಂಪಾಂಜಿಗಳು ಶಾಂತಿ, ಪ್ರೀತಿಯಿಂದ ವರ್ತಿಸುವುದನ್ನು ಗಮನಿಸಿದಷ್ಟೇ ಅಲ್ಲದೆ, ಅವುಗಳ ಆಕ್ರಮಣಕಾರಿ ಪ್ರವೃತ್ತಿಯನ್ನು ಕಂಡು ಹಿಡಿದರು. ಚಿಂಪಾಂಜಿಗಳು ಕೊಲಬಸ್ ಎಂಬ ಚಿಕ್ಕಗಾತ್ರದ ಮಂಗಗಳನ್ನು ಬೇಟೆಯಾಡಿ ತಿನ್ನುತ್ತವೆ ಎಂಬುದನ್ನು ಗಮನಿಸಿದರು. ಚಿಂಪಾಂಜಿಗಳು ಬೇಟೆಯಾಡುವ ಕ್ರಮ ಹೀಗಿದೆ. ಒಂದು ಮರದ ಮೇಲ್ಗಡೆ ಒಂದು ಕೊಲಬಸ್ ಮಂಗವನ್ನು ಅದರ ಗುಂಪಿನಿಂದ ಬೇರ್ಪಡಿಸಿ, ಅದು ತಪ್ಪಿಸಿಕೊಳ್ಳಬಹುದಾದ ಹಾದಿಗಳನ್ನು ಮುಚ್ಚಿ, ಚಿಂಪಾಂಜಿ ಆನಂತರ ಆ ಕೊಲಬಸ್ ಮಂಗವನ್ನು ಹಿಡಿದು ಸಾಯಿಸುತ್ತದೆ. ಅನಂತರ ಚಿಂಪಾಂಜಿಗಳೆಲ್ಲಾ ಸೇರಿ ಮಂಗದ ಮಾಂಸವನ್ನು ಹಂಚಿಕೊಂಡು ತಿನ್ನುವುದನ್ನೂ, ಮಾಂಸಕ್ಕಾಗಿ ಬೇಡುವುದನ್ನೂ ಗುಡಾಲ್ ಗಮನಿಸಿದರು. ಚಿಂಪಾಂಜಿಗಳು ಸಾಧುಪ್ರಾಣಿಗಳು ಹಾಗೂ ಸಸ್ಯಾಹಾರಿಗಳು ಎಂಬ ನಂಬುಗೆಯನ್ನು ಜೇನ್ ಗುಡಾಲ್‌ರ ಈ ಸಂಶೋಧನೆ ತೊಡೆದುಹಾಕಿತು.

ಇದಲ್ಲದೆ ಚಿಂಪಾಂಜಿಗಳ ಗುಂಪಿನಲ್ಲೇ ಒಂದು ಪ್ರಬಲ ಹೆಣ್ಣು ಚಿಂಪಾಂಜಿ ತಮ್ಮ ಗುಂಪಿನ ಬೇರೆ ಹೆಣ್ಣು ಚಿಂಪಾಂಜಿಗಳ ಮರಿಗಳನ್ನು ಕೊಂದು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸುವುದನ್ನು ಗುಡಾಲ್ ಗಮನಿಸಿ, ‘‘ನನ್ನ ಸಂಶೋಧನೆಯ ಹತ್ತು ವರ್ಷಗಳ ಅವಧಿಯಲ್ಲಿ ಚಿಂಪಾಂಜಿಗಳು ಒಳ್ಳೆಯ ಸ್ವಭಾವದವೆಂದೂ ಮನುಷ್ಯರಿಗಿಂತ ಒಳ್ಳೆಯ ಪ್ರಾಣಿ ಎಂದು ನಂಬಿದ್ದೆ. ಆದರೆ ಅವು ಸಹ ಪಾಶವೀಕೃತ್ಯ ಎಸಗುತ್ತವೆ, ಅವುಗಳ ಸ್ವಭಾವದಲ್ಲಿ ಸಹ ಮನುಷ್ಯರ ಕ್ರೂರತೆ ಇದೆ’’ ಎಂದು ಹೊರಗೆಡವಿದರು.

ಸುದೀರ್ಘ ಕಾಲ ತಾಂಝಾನಿಯದಲ್ಲಿ ಚಿಂಪಾಂಜಿಗಳ ಬಗ್ಗೆ ಸಂಶೋಧನೆ ನಡೆಸಿದ ನಂತರ ಜೇನ್ ಗುಡಾಲ್, ‘ಜೇನ್ ಗುಡಾಲ್ ಇನ್‌ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇಂದಿನ ದಿನಗಳಲ್ಲಿ ಗುಡಾಲ್ ಚಿಂಪಾಂಜಿಗಳ ಮತ್ತು ಜಗತ್ತಿನ ಪರಿಸರದ ಬಗೆಗಿನ ಕೆಲಸಗಳಿಗೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ.

    

2001ರಲ್ಲಿ ಜೇನ್ ಗುಡಾಲ್‌ರ ಬಗೆಗಿನ ಕಾರ್ಯಕ್ರಮವೊಂದನ್ನು ವೀಕ್ಷಿಸಿದ ಡಾ. ಸುಪ್ರಜ ಧರಣಿ ಎಂಬವರು ಗುಡಾಲ್‌ರಿಂದ ಪ್ರಭಾವಿತರಾಗಿ ಗುಡಾಲರ ಇನ್‌ಸ್ಟಿಟ್ಯೂಟ್‌ನ ರೂಟ್ಸ್ ಆ್ಯಂಡ್ ಶೂಟ್ಸ್ ಕಾರ್ಯಕ್ರಮದ ಕಾರ್ಯಕರ್ತರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದರು. ಇವರು ಒಂದು ದಿನ ಚೆನ್ನೈನ ನೀಲನ್ ಕರೈ ಎಂಬಲ್ಲಿ ಸಮುದ್ರ ತೀರದಲ್ಲಿ ಸತ್ತು ಬಿದ್ದಿದ್ದ ‘ಆಲಿವರ್ ರಿಡ್ಲೆ’ ಆಮೆಗಳ ಶವಗಳನ್ನು ನೋಡಿ, ಸಂತಾಪಪಟ್ಟು ಸುತ್ತಮುತ್ತಲಿನ ಹಳ್ಳಿಗಳ ಯುವಕರು, ಮಕ್ಕಳನ್ನು ಸೇರಿಸಿ, ಅವರು ಚೆನ್ನೈನ ಕ್ರೊಕಡೈಲ್ ಬ್ಯಾಂಕ್ ಟ್ರಸ್ಟ್ ಏರ್ಪಡಿಸಿದ್ದ ಪರಿಸರ ಸಂರಕ್ಷಣೆಯ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಮಾಡಿದರು. ಅಂದಿನಿಂದ ಸುಪ್ರಜ ಆಮೆಗಳ ಸಂರಕ್ಷಣೆ ಮಾಡುತ್ತಿದ್ದಾರೆ. ಹೀಗೆ ಜೇನ್ ಗುಡಾಲ್‌ರ ಅವಿರತ ಶ್ರಮದ ಫಲವಾಗಿ ಪ್ರಪಂಚದಾದ್ಯಂತ ಅಸಂಖ್ಯಾತ ಜನ ಸ್ಫೂರ್ತಿ ಪಡೆಯುತ್ತಿದ್ದಾರೆ.

Writer - ಪದ್ಮಾ ಶ್ರೀರಾಮ

contributor

Editor - ಪದ್ಮಾ ಶ್ರೀರಾಮ

contributor

Similar News