ಭಾರೀ ಸೋಲಿನಿಂದ ಬಿಜೆಪಿಗೆ ಆರು ಪಾಠಗಳು!-ಯಶವಂತ ಸಿನ್ಹಾ

Update: 2018-12-16 04:37 GMT

ಮೂರು ಹಿಂದಿ ಭಾಷಿಕ ರಾಜ್ಯಗಳ ಒಟ್ಟು 65 ಲೋಕಸಭಾ ಸ್ಥಾನಗಳ ಪೈಕಿ 62ನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಅಜಗಜಾಂತರವಿದೆ ಎಂದು ಬಿಜೆಪಿ ವಕ್ತಾರರೆಲ್ಲಾ ವಾದಿಸಬಹುದು. ಅದರೆ, ಈ ಚುನಾವಣಾ ಫಲಿತಾಂಶ ಬಿಜೆಪಿಗೆ ಹಿತಕರವಲ್ಲ. ಈ ತೀರ್ಪು ರಾಜ್ಯ ಸರಕಾರಗಳ ಸಾಧನೆಗಳಷ್ಟೇ ಕೇಂದ್ರ ಸರಕಾರದ ಕುರಿತ ತೀರ್ಪು ಕೂಡಾ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.

ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ, ಮಿಜೋರಾಂ- ಈ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ನಿಜಕ್ಕೂ ನಿರೀಕ್ಷಿಸಿದಂತೆ ಅಥವಾ ಊಹಿಸಿದಂತೆ ಇವೆಯೇ? ಹೌದು ಮತ್ತು ಇಲ್ಲ.

ಹೋಲಿಕೆಯಲ್ಲಿ ಸಣ್ಣ ರಾಜ್ಯಗಳಾದ ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂನಲ್ಲಿ ಜನರು ನಿರ್ಣಾಯಕ ತೀರ್ಪು ನೀಡಿದ್ದು, ಮೂರೂ ಫಲಿತಾಂಶಗಳು ಅಚ್ಚರಿಯವು.
ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ನಡೆಯುತ್ತದೆ ಎಂದು ಎಲ್ಲರೂ ಭವಿಷ್ಯ ಹೇಳಿದ್ದರು. ಕೆಲವರು ಅಲ್ಲಿ ತಿಶಂಕು ಸ್ಥಿತಿ ಉಂಟಾಗುತ್ತದೆ; ಅಜಿತ್ ಜೋಗಿ ‘ಕಿಂಗ್ ಮೇಕರ್’ ಏಕೆ, ‘ಕಿಂಗ್’ ಕೂಡಾ ಆಗಬಹುದು ಎಂದೂ ಭಾವಿಸಿದ್ದರು. ಇಂದು ಅವರು ಮತ್ತು ಅವರ ಸಹವರ್ತಿ ಮಾಯಾವತಿ ಕೂಡಾ ಫಲಿತಾಂಶದಿಂದ ನಿರಾಸೆಗೊಂಡಿರ ಬಹುದು. ಅಲ್ಲಿ ಕಾಂಗ್ರೆಸ್ ಗುಡಿಸಿಹಾಕಿದೆ. ವಿಶ್ಲೇಷಕರು ಈಗ ಅಲ್ಲಿ ಬಿಜೆಪಿಯ ಭಾರೀ ಸೋಲಿನ ಕುರಿತು ಚಿಂತಿಸುತ್ತಿರಬೇಕು.
ನಾನು ವೈಯಕ್ತಿಕವಾಗಿ ರಾಜ್ಯದಲ್ಲಿ ಬಿಜೆಪಿಯ ಸಂಘಟನಾತ್ಮಕ ಬಲವನ್ನು ಅರಿತಿದ್ದೆ. ಅದರೆ, ಹಿಂದೆ ಚುನಾವಣೆಯ ನಂತರ ಚುನಾವಣೆಗಳು ಮತ್ತೆಮತ್ತೆ ತೋರಿಸಿಕೊಟ್ಟಂತೆ, ಮತದಾರರು ಮನಸ್ಸು ಬದಲಿಸಿದರೆ, ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸದಂತೆ ಯಾರಿಂದಲೂ, ಯಾವುದರಿಂದಲೂ ಸಾಧ್ಯವಿಲ್ಲ ಎಂಬುದು ಸ್ಪಷ್ಟ.
ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಸಾಮಾನ್ಯವಾಗಿ ವಿವಾದರ ಹಿತ ಮತ್ತು ಹಳೆಯ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಎಂದು ಹೇಳಲಾಗುತ್ತಿತ್ತು. ಅವರು ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿತ್ತು. ಅದರೆ, 15 ವರ್ಷಗಳ ನಂತರ ಅವರ ಅದೃಷ್ಟ ಕೈಕೊಟ್ಟಿದೆ.
ತೆಲಂಗಾಣದ ಫಲಿತಾಂಶ ಕೂಡಾ ಆಶ್ಚರ್ಯಕರ. ಎಲ್ಲರೂ ಈಗ ಭಾರೀ ಜಯಗಳಿಸಿರುವ ಟಿಆರ್‌ಎಸ್‌ನ ಬಲವನ್ನು ಕೀಳಂದಾಜು ಮಾಡಿದ್ದರು. ಕಾಂಗ್ರೆಸ್ ಮತ್ತು ತೆಲುಗುದೇಶಂ ಮೈತ್ರಿ ಮತದಾರರ ಮೇಲೆ ಏನೇನೂ ಪರಿಣಾಮ ಬೀರಲಿಲ್ಲ. ಅದು ಬಹಳ ಅಂತರದಲ್ಲಿ ಎರಡನೇ ಸ್ಥಾನ ಪಡೆಯಿತು.
ಇದು ರಾಷ್ಟ್ರಮಟ್ಟದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂದು ಕಾದುನೋಡಬೇಕು. ಏಕೆಂದರೆ, ಕೆ. ಚಂದ್ರಶೇಖರ ರಾವ್ ಅವರು ಬಿಜೆಪಿ ಮತ್ತು ಕಾಂಗ್ರೆಸೇತರ ಮೈತ್ರಿಕೂಟವು 2019ರ ಚುನಾವಣೆಯಲ್ಲಿ ಎರಡೂ ಪಕ್ಷಗಳನ್ನು ಏಕಕಾಲದಲ್ಲಿ ಎದುರಿಸುವುದರ ಪರವಾಗಿ ಬಲವಾಗಿ ವಾದಿಸಬಹುದು.
40 ಸದಸ್ಯ ಬಲ ಹೊಂದಿರುವ ಮಿಜೋರಾಂ ವಿಧಾನಸಭೆಯಲ್ಲಿ ಜನರು ಝೊರಾಂತಂಗ ನೇತೃತ್ವದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಪರವಾಗಿ ನಿರ್ಣಾಯಕ ತೀರ್ಪು ನೀಡಿದ್ದಾರೆ. ಇಲ್ಲಿ ಕೂಡಾ ಕಾಂಗ್ರೆಸ್ ತನ್ನ ಮಿತ್ರಪಕ್ಷಗಳ ಜೊತೆಗೆ ಬಲವಾದ ಪ್ರತಿಸ್ಪರ್ಧೆ ಒಡ್ಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಬಹಳ ಹಿಂದೆ ಬಿತ್ತು. ಎಂಎನ್‌ಎಫ್ ಬಿಜೆಪಿಯು ಸ್ಥಾಪಿಸಿದ ನಾರ್ತ್ ಈಸ್ಟ್ ಡೆಮೋಕ್ರಟಿಕ್ ಅಲಯನ್ಸ್‌ನ ಅಂಗಪಕ್ಷ. ಅದರ ನಾಯಕನಿಗೆ ಬಿಜೆಪಿ ಜೊತೆಗೆ ಭಿನ್ನಮತವಿದೆ. ಆದರೆ, ಅವರು ಕಾಂಗ್ರೆಸ್ ಜೊತೆಗೂ ಇಲ್ಲ.
ಏನಿದ್ದರೂ ಈಶಾನ್ಯದ ಚಿಕ್ಕ ರಾಜ್ಯಗಳು ದಿಲ್ಲಿಯಲ್ಲಿ ಯಾರು ಅಧಿಕಾರದಲ್ಲಿರುತ್ತಾರೋ ಅವರ ಜೊತೆ ಸೇರುವುದು ಸಂಪ್ರದಾಯ ಹಾಗಾಗಿ ಬಿಜೆಪಿ ಇಲ್ಲಿ ಪರೋಕ್ಷ ವಿಜಯ ತನ್ನದೆಂದು ಹೇಳಿಕೊಂಡರೆ ಆಶ್ಚರ್ಯವಿಲ್ಲ.
ಎರಡು ದೊಡ್ಡ ರಾಜ್ಯಗಳಾದ ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ಪೈಕಿ ಎರಡನೆಯದರಲ್ಲಿ ಊಹಿಸಿದಂತೆಯೇ ನಡೆದಿದೆ. ಅದರೆ, ರಾಜಸ್ಥಾನದಲ್ಲಿ ಲೆಕ್ಕಾಚಾರ ತಪ್ಪಿದೆ. ಅಲ್ಲಿ ಕಾಂಗ್ರೆಸ್ ಭಾರೀ ಜಯ ಸಾಧಿಸುತ್ತದೆಂದು ಎಲ್ಲರೂ ಊಹಿಸಿದ್ದರು. ಅದರೆ, ಕಾಂಗ್ರೆಸ್ 199 ಸ್ಥಾನಗಳ ಪೈಕಿ 99ರಲ್ಲಿ ಮಾತ್ರ ಜಯಗಳಿಸಿದೆ. ಪ್ರಧಾನಿಯ ವ್ಯಕ್ತಿತ್ವ ಮತ್ತು ಕೊನೆಯ ಹಂತದಲ್ಲಿ ಅವರು ನಡೆಸಿದ ಪ್ರಚಾರದಿಂದ ಬಿಜೆಪಿಯ ಸಾಧನೆ ಸುಧಾರಿಸಿತೆಂದು ಪಕ್ಷವು ಹೇಳಿಕೊಳ್ಳಬಹುದು. ಕಳೆದ ಬಾರಿ ಗಳಿಸಿದ್ದ ಭಾರೀ ಸಂಖ್ಯೆಯ ಸ್ಥಾನಗಳನ್ನು ಕಳೆದುಕೊಂಡಿದ್ದರೂ, ಇದೊಂದು ರೀತಿಯ ಜಯ ಎಂದು ಬಿಜೆಪಿ ಹೇಳಿಕೊಂಡರೆ ನನಗೆ ಅಚ್ಚರಿಯಾಗದು.


ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಬಹುಮತಕ್ಕಿಂತ ಎರಡು ಸ್ಥಾನ ಕಡಿಮೆ ಬಂದಿದೆ. ಎರಡು ಸ್ಥಾನಗಳನ್ನು ಹೊಂದಿರುವ ಬಿಎಸ್ಪಿ ಮತ್ತು ಒಂದು ಸ್ಥಾನ ಗಳಿಸಿರುವ ಎಸ್ಪಿ ಈಗಾಗಲೇ ಬೆಂಬಲ ಘೋಷಿಸಿರುವುದರಿಂದ ಅಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪನೆಯಾಗುವ ಕುರಿತು ಯಾವುದೇ ಸಂಶಯ ಉಳಿದಿಲ್ಲ. ಒಂದೇ ಒಂದು ವಿಷಯ ಎಂದರೆ, ಕರ್ನಾಟಕದ ರಾಜ್ಯಪಾಲರಂತೆ, ಇಲ್ಲಿನ ರಾಜ್ಯಪಾಲರು ಯಾವುದೇ ದುಸ್ಸಾಹಸಕ್ಕೆ ಇಳಿಯಬಾರದು ಅಷ್ಟೇ.
ಮೊದಲಿಗೆ ಎಲ್ಲಾ ಐದು ರಾಜ್ಯಗಳ, ಮುಖ್ಯವಾಗಿ ಮೂರು ಹಿಂದಿ ಭಾಷಿಕ ರಾಜ್ಯಗಳ ಫಲಿತಾಂಶ ಬಿಜೆಪಿಗೆ ವಿರುದ್ಧವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ರಾಜಸ್ಥಾನಕ್ಕಿಂತಲೂ ಹೆಚ್ಚಾಗಿ ಕುಶಭಾವು ಠಾಕ್ರೆಯವ ರಂತಹವರು ವರ್ಷಗಳಿಂದ ಕಟ್ಟಿದಂತಹ ದಕ್ಷ ಪಕ್ಷ ಸಂಘಟನೆ ಇರುವ ಉಳಿದೆರಡು ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡವನ್ನು ಬಿಜೆಪಿಯ ಭದ್ರಕೋಟೆ ಎಂದೇ ಯಾವತ್ತೂ ಪರಿಗಣಿಸಲಾಗಿತ್ತು. ಅದರೂ 2013ರಲ್ಲಿ ಗೆದ್ದಿದ್ದ ಸ್ಥಾನಗಳಿಗೆ ಹೋಲಿಸಿದಾಗ ಬಿಜೆಪಿ ಭಾರೀ ಸೋಲನ್ನು ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ಈ ಸೋಲು ಆಘಾತಕಾರಿ.
ಎರಡನೆಯದಾಗಿ, ಚುನಾವಣೋತ್ತರ ಸಮೀಕ್ಷೆಗಳು ಎಂದಿನಂತೆ ಗುರಿತಪ್ಪಿವೆ. ವಿದೇಶಗಳಲ್ಲಿ ಇರುವಂತೆ ಅವು ವೈಜ್ಞಾನಿಕವಾಗಿ ಇಲ್ಲದೇ ಇರುವುದು ಮಾತ್ರವಲ್ಲ, ಆಳುವ ಪಕ್ಷದ ಪ್ರಭಾವದಿಂದಾಗಿ ಕಪೋಲಕಲ್ಪಿತ ಅಂಕಿಅಂಶಗಳನ್ನು ನೀಡುತ್ತವೆ. ಇದೊಂದು ಅಪಾಯಕಾರಿ ಪ್ರವೃತ್ತಿ ಮತ್ತು ಇದನ್ನು ಚಿಗುರಿನಲ್ಲೇ ಚಿವುಟಬೇಕಾದ ಅಗತ್ಯವಿದೆ.
ಮೂರನೆಯದಾಗಿ, ಚುನಾವಣೆಯಿಂದ ಚುನಾವಣೆಗೆ ಸಾರ್ವಜನಿಕ ಭಾಷಣಗಳ ಗುಣಮಟ್ಟ ತಳಮುಟ್ಟುತ್ತಿದೆ. ಪ್ರಧಾನಿಯವರು ವೈಯಕ್ತಿಕವಾಗಿ ಇದಕ್ಕೆ ಹೊಣೆಗಾರರಾಗಿದ್ದಾರೆ.
ಈ ಮತ್ತು ಹಿಂದಿನ ಚುನಾವಣೆಗಳಲ್ಲಿ ಅವರು ಎತ್ತಿದ ವಿಷಯಗಳು ಮತ್ತು ಅವರು ಬಳಸಿದ ಭಾಷೆ ಭಾರತದಂತಹ ಒಂದು ದೇಶದ ಪ್ರಧಾನಿಗೆ ಶೋಭೆ ತರುವಂತಹದ್ದಲ್ಲ. ಎಂತಹ ಪ್ರಚೋದನೆ ಇದ್ದರೂ ವಾಜಪೇಯಿಯವರು ಅದನ್ನು ಮಾಡುತ್ತಿರಲಿಲ್ಲ. ಬೇರೆ ಪಕ್ಷಗಳ ಕೆಲವು ನಾಯಕರು ಹಾಗೆ ಮಾಡಿದ್ದಾರೆ; ಆದುದರಿಂದ ಪ್ರಧಾನಿಗೆ ಹಾಗೆ ಮಾಡದೇ ದಾರಿ ಇರಲಿಲ್ಲ ಎಂದು ಬಿಜೆಪಿ ಹೇಳುವಂತಿಲ್ಲ. ದೇಶದ ಪ್ರಧಾನಿಯನ್ನು ಅಂತಹವರಿಗೆ ಹೋಲಿಸಲಾಗದು.
ನಾಲ್ಕನೆಯದಾಗಿ ಯೋಗಿ ಮತ್ತು ಹಿಂದೂ ಕಾರ್ಡ್ ಮತದಾರರ ಮೇಲೆ ಪ್ರಭಾವಬೀರಲು ದಯನೀಯವಾಗಿ ಸೋತಿರುವುದು. ಇದೀಗ ಯೋಗಿ ಆದಿತ್ಯನಾಥ ಅವರು ತನ್ನದೇ ರಾಜ್ಯವಾದ ಉತ್ತರಪ್ರದೇಶದಲ್ಲಿ ತನ್ನ ನೆಲೆಯನ್ನು ಉಳಿಸಿಕೊಳ್ಳಲು ಹೆಣಗಬೇಕಾದೀತು.
ಐದನೆಯದಾಗಿ, ತಾನು ‘ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಿಸಬಲ್ಲೆ ಎಂಬ ಪ್ರಧಾನಿಯವರ ಕನಸು ಮಣ್ಣುಪಾಲಾಗಿದೆ. ಹೀಗೆ ಹೇಳುವುದೇ ಮೊತ್ತಮೊದಲನೆಯದಾಗಿ ಕ್ಷುಲ್ಲಕತನ. ಹಿಂದಿನಿಂದಲೂ ನಾನು ಕಾಂಗ್ರೆಸ್ ಪಕ್ಷದ ಕಟು ಟೀಕಾಕಾರನಾಗಿದ್ದೆ. ಮೋದಿ ಗುಜರಾತಿನಲ್ಲಿ ಅಧಿಕಾರದ ಫಲ ಉಣ್ಣುತ್ತಿದ್ದಾಗ, ನಾನು ಮತ್ತು ನನ್ನ ಸಹೋದ್ಯೋಗಿಗಳು ನೆಲಕಚ್ಚಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದ್ದೆವು. ಆದರೆ, ಒಂದು ಪ್ರಜಾಪ್ರಭುತ್ವದಲ್ಲಿ, ಅದರಲ್ಲೂ ಒಂದು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಒಂದು ಪ್ರಮುಖ ಪ್ರತಿಪಕ್ಷ ಇಲ್ಲದಾಗ ಬೇಕು ಎಂದು ಬಯಸಲು ಹೇಗೆ ಸಾಧ್ಯ?! ಮೋದಿ ಮತ್ತು ಶಾ ತಪ್ಪುಮಾಡಿರುವುದು ಇಲ್ಲಿಯೇ. ಈ ಚುನಾವಣೆಯಲ್ಲಿ ಜನರು ಅವರಿಬ್ಬರಿಗೂ ಪಾಠ ಕಲಿಸಿದ್ದಾರೆ.
ರಾಹುಲ್ ಗಾಂಧಿಯವರು ಧಿಗ್ಗನೇ ರಾಷ್ಟ್ರ ರಾಜಕಾರಣದಲ್ಲಿ ಮೂಡಿಬಂದಿದ್ದಾರೆ. ಭವಿಷ್ಯದಲ್ಲಿ ಅವರನ್ನು ‘ಪಪ್ಪು’ ಎಂದು ಕರೆಯುವವರು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳಬೇಕಾದೀತು.
ಬಿಜೆಪಿಯ ವಕ್ತಾರರೆಲ್ಲಾ ಏನೇ ಹೇಳಲಿ ಮೋದಿ ಮ್ಯಾಜಿಕ್‌ಕೊನೆಗೊಂಡಿದೆ. 2017ರ ಸೆಪ್ಟಂಬರ್‌ನಲ್ಲಿ ನಾನು ಅವರ ಸರಕಾರದ ಸಾಧನೆಗಳ ವಿಷಯದಲ್ಲಿ ಸವಾಲೊಡ್ಡಿದಾಗ ಇದ್ದಂತೆ ಅತ ಇನ್ನು ಮುಂದೆ ಪ್ರಶ್ನಾತೀತರಲ್ಲ.
ಮೂರು ಹಿಂದಿ ಭಾಷಿಕ ರಾಜ್ಯಗಳ ಒಟ್ಟು 65 ಲೋಕಸಭಾ ಸ್ಥಾನಗಳ ಪೈಕಿ 62ನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಿಗೆ ಅಜಗಜಾಂತರವಿದೆ ಎಂದು ಬಿಜೆಪಿ ವಕ್ತಾರರೆಲ್ಲಾ ವಾದಿಸಬಹುದು. ಅದರೆ, ಈ ಚುನಾವಣಾ ಫಲಿತಾಂಶ ಬಿಜೆಪಿಗೆ ಹಿತಕರವಲ್ಲ. ಈ ತೀರ್ಪು ರಾಜ್ಯ ಸರಕಾರಗಳ ಸಾಧನೆಗಳಷ್ಟೇ ಕೇಂದ್ರ ಸರಕಾರದ ಕುರಿತ ತೀರ್ಪು ಕೂಡಾ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ.
ಭಾರತದಲ್ಲಿ ಅಹಂಕಾರ ಎಂದಿಗೂ ಫಲ ನೀಡದು. ನೀವು ಅವರಲ್ಲಿ ವಿನಯಪೂರ್ವಕವಾಗಿ ಮತಕೇಳಬೇಕು ಮತ್ತು ವೈಫಲ್ಯಗಳಿಗಾಗಿ ಕ್ಷಮೆ ಕೇಳಬೇಕು ಎಂದು ಭಾರತೀಯ ಮತದಾರರು ಬಯಸುತ್ತಾರೆ. ಅವರಿಗೆ ಅಹಂಕಾರ ಕಂಡರಾಗದು. ಬಿಜೆಪಿ ಬಹಳ ಬೇಗನೇ ಈ ಅಹಂಕಾರವನ್ನು ಮೈಗೂಡಿಸಿಕೊಂಡಿದೆ. ಅದು ಈ ಚುನಾವಣಾ ಫಲಿತಾಂಶದಿಂದ ಪಾಠ ಕಲಿಯುತ್ತದೆ ಎಂದು ಆಶಿಸುತ್ತೇನೆ. ಏಕೆಂದರೆ ನಮ್ಮ ರಾಜಕೀಯ ವ್ಯವಸ್ಥೆಯನ್ನು ಬಲಗೊಳಿಸಲು ಅದು ಕೂಡಾ ಬದುಕಿ ಉಳಿಯಬೇಕು.

Writer - ಕೃಪೆ: ಎನ್‌ಡಿಟಿವಿ

contributor

Editor - ಕೃಪೆ: ಎನ್‌ಡಿಟಿವಿ

contributor

Similar News

ಜಗದಗಲ
ಜಗ ದಗಲ