ನೀಲಗಿರಿಯ ನಿರ್ಮಾತೃ ಜಾನ್ ಸಲ್ಲಿವನ್

Update: 2018-12-15 19:05 GMT

ಜಿಲ್ಲಾ ಮುಖ್ಯ ಕೇಂದ್ರವಾಗಿ ಊಟಿ ನಗರವನ್ನು ಅಭಿವೃದ್ಧಿಪಡಿಸುವ ಮೊದಲು, ಸಲ್ಲಿವನ್ ನೀಲಗಿರಿ ಯಾತ್ರೆ ಕೈಗೊಂಡು ಮೊದಲು ಶಿಬಿರ ಸ್ಥಾಪಿಸಿದ್ದ ಕೋತಗಿರಿಯ ದಿಮ್ಮಿಹಟ್ಟಿಯಲ್ಲಿ ಬಂಗಲೆ ನಿರ್ಮಿಸಿದ್ದನಷ್ಟೆ. ಆಗ ಅಲ್ಲಿಂದಲೇ ಆಡಳಿತ ನಡೆಯುತ್ತಿತ್ತು. ಸಿಬ್ಬಂದಿಗೂ ಅಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಈಗ ಅಲ್ಲಿ ಸಲ್ಲಿವನ್ ಸ್ಮಾರಕ ಸ್ಥಾಪಿಸಲಾಗಿದೆ. ಮುಂದೆ ಭಾರತ ಸ್ವತಂತ್ರವಾಗುವವರೆಗೆ ಅನೇಕ ಬ್ರಿಟಿಷ್ ಕಲೆಕ್ಟರುಗಳು, ಗೌರ್ನರುಗಳು, ಉನ್ನತಾಧಿ ಕಾರಿಗಳು, ನೀಲಗಿರಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ.

ಕೊಯಂಬತ್ತೂರಿನ ಮತ್ತು ಮುಂದೆ ನೀಲಗಿರಿಯ ಕಲೆಕ್ಟರ್‌ನಾಗಿ ಕಾರ್ಯನಿರ್ವಹಿಸಿದ ಜಾನ್ ಸಲ್ಲಿವನ್‌ನನ್ನು ಆಧುನಿಕ ನೀಲಗಿರಿಯ ಸ್ಥಾಪಕ ಎಂದು ಗುರುತಿಸಲಾಗುತ್ತದೆ. ಆಗ ಕಂಪೆನಿ ಸರಕಾರದ ಸೇವೆಯಲ್ಲಿದ್ದ ಬ್ರಿಟಿಷ್ ಅಧಿಕಾರಿಗಳ ಪೈಕಿ ಸಲ್ಲಿವನ್‌ನಂತೆ ತನ್ನ ಹುದ್ದೆ ಯನ್ನು ನಿಷ್ಠೆಯಿಂದ ನಿರ್ವಹಿಸಿದ, ತನ್ನ ಆಡಳಿತದ ವ್ಯಾಪ್ತಿಗೆ ಸೇರಿದ ಪರಿಸರವನ್ನು ಪ್ರೀತಿಸಿದ, ಹಾಗೆಯೇ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ ಮತ್ತೊಬ್ಬ ಅಧಿಕಾರಿ ಇರಲಿಲ್ಲವೆನ್ನಬಹುದು.

ಜಾನ್ ಸಲ್ಲಿವನ್ 1788ರ ಜೂನ್ 15ರಂದು ಲಂಡನ್ನಿನಲ್ಲಿ ಜನಿಸಿದ. ಆತನದು ಬ್ರಿಟನ್ನಿನ ಒಂದು ಪ್ರತಿಷ್ಠಿತ ಕುಟುಂಬ. ಆತನ ತಂದೆ ರೈಟ್ ಆನರಬಲ್ ಜಾನ್ ಸಲ್ಲಿವನ್ ಸಹ ಈಸ್ಟ್ ಇಂಡಿಯಾ ಕಂಪೆನಿ ಸರಕಾರದಲ್ಲಿ ಅಧಿಕಾರಿಯಾಗಿದ್ದವ. 1781ರಲ್ಲಿ ಆತ ತಂಜಾವೂರು ಆಸ್ಥಾನದ ರೆಸಿಡೆಂಟ್ ಅಧಿಕಾರಿಯಾಗಿದ್ದ.

1803ರಲ್ಲಿ, ಜಾನ್ ಸಲ್ಲಿವನ್ ಇನ್ನೂ 15 ವರ್ಷದವನಾ ಗಿದ್ದಾಗ, ಕಂಪೆನಿ ಸರಕಾರದ ಮದರಾಸು ಶಾಖೆಯಲ್ಲಿ ಅವನನ್ನು ಹುದ್ದೆಯೊಂದಕ್ಕೆ ಶಿಫಾರಸು ಮಾಡಲಾಯಿತು. ತರುವಾಯ ಆತ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಆಡಳಿತದ ಅನುಭವ ಗಳಿಸಿದ. ಸ್ವಲ್ಪ ಕಾಲ ಮೈಸೂರಿನಲ್ಲಿ ಬ್ರಿಟಿಷ್ ರೆಸಿಡೆಂಟಿನ ಹಂಗಾಮಿ ಸಹಾಯಕನಾಗಿದ್ದ. ಮುಂದೆ, 1815ರಿಂದ 30 ರವರೆಗೆ ನೀಲಗಿರಿ ಸೇರಿದಂತೆ ಕೊಯಂಬತ್ತೂರಿನ ಖಾಯಂ ಕಲೆಕ್ಟರನಾದ.

ತನ್ನ ಆಡಳಿತದ ವ್ಯಾಪ್ತಿಗೊಳಪಟ್ಟಿದ್ದ ನೀಲಗಿರಿ ಬೆಟ್ಟಗಳ ಬಗ್ಗೆ, ಅಲ್ಲಿನ ಮೂಲವಾಸಿಗಳ ಬಗ್ಗೆ ಕೇಳಿ ತಿಳಿದಿದ್ದ ಸಲ್ಲಿವನ್, ಮೊದಲಿಗೆ 1819ರಲ್ಲಿ, ತರುವಾಯ ಆತನ ಮದುವೆಯ ನಂತರ, 1821ರಲ್ಲಿ - ಹೀಗೆ ಎರಡು ಬಾರಿ ನೀಲಗಿರಿಗೆ ಸಾಹಸಯಾತ್ರೆ ಕೈಗೊಂಡ. ಮೊದಲ ಸಲ ತನ್ನ ಸಿಬ್ಬಂದಿ ಸಹಿತ ಬೆಟ್ಟ ಹತ್ತಿ ಈಗಿನ ಕೋತಗಿರಿಯ ದಿಮ್ಮಹಟ್ಟಿ (ಈಗ ಕಣ್ಣೇರಿಮುಕ್ಕು) ಎಂಬಲ್ಲಿ ಶಿಬಿರ ಹೂಡಿದ. ಅಲ್ಲಿಂದಲೇ ಆಡಳಿತ ನಡೆಸಿದ್ದೂ ಉಂಟು. ಎರಡನೇ ಬಾರಿ ಊಟಿಯ ಚಾರಣದ ಸಂದರ್ಭದಲ್ಲಿ ಫ್ರೆಂಚ್ ನಿಸರ್ಗತಜ್ಞ ಎಂ. ಮೊಶ್ಚಾನಲ್ಟ್ ದಿ ಲಾ ಟೂರ್ ಆತನ ಜೊತೆಗಿದ್ದ. ಬಯಲು ನಾಡಿನಲ್ಲಿದ್ದಾಗ ಆ ನಿಸರ್ಗ ತಜ್ಞನ ಆರೋಗ್ಯ ಆಗಾಗ ಕೆಡುತ್ತಿತ್ತು. ಊಟಿಯಲ್ಲಿ ತಂಗಿದ್ದ ಕೆಲವೇ ದಿನಗಳಲ್ಲಿ ಆತನ ಆರೋಗ್ಯ ಸುಧಾರಿಸಿತು. ಲಂಡನ್ನಿನ ಹವಾಮಾನವನ್ನು ಹೋಲುತ್ತಿದ್ದ ಊಟಿಯ ಪರಿಸರಕ್ಕೆ ಸಲ್ಲಿವನ್ ಮರುಳಾಗಿದ್ದ. ಊಟಿಯ ಹವೆಯಲ್ಲಿ ಜೀವ ಚೈತನ್ಯ ಶಕ್ತಿ ಇರುವುದನ್ನು ಗ್ರಹಿಸಿದ, ಊಟಿಯನ್ನು ನೀಲಗಿರಿಯ ಜಿಲ್ಲಾಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಂಡ.

ಸಲ್ಲಿವನ್ ಜಿಲ್ಲಾ ಕೇಂದ್ರವಾಗಿ ಮಾಡಲು ಹೊರಟ ಊಟಿಯನ್ನು, ಇಡೀ ನೀಲಗಿರಿಯನ್ನು ಅಲ್ಲಿನ ಹವೆಯನ್ನು ಮೆಚ್ಚಿದಂತೆಯೇ ಸ್ಥಳೀಯರ ಸ್ನೇಹಿತನೂ ಆಗಿದ್ದ. ಆಡಳಿತದ ದೃಷ್ಟಿಯಿಂದ ಸ್ಥಳೀಯರಿಗೆ ಸಹಾಯಕವಾಗಬಹುದಾದ ಹಲವು ಕ್ರಮಗಳನ್ನು ಕೈಗೊಂಡ. 1823ರಲ್ಲಿ ತೊದವರ ಸ್ಮಶಾನದ ಒಂದು ಭಾಗವನ್ನು ಖರೀದಿಸಿ ತನ್ನ ವಾಸಕ್ಕೆಂದು ಸ್ಟೋನ್ ಹೌಸ್ ಬಂಗಲೆ ನಿರ್ಮಿಸಿದ. ನೀಲಗಿರಿಯ ಬೇರೆ ಬೇರೆ ಭಾಗಗಳಲ್ಲಿ ಹಂಚಿ ಹೋಗಿದ್ದ ತೊದವರ ಬೇಸಿಗೆ ಮಂದೆಗಳಿಗೂ ಮಾನ್ಯತೆ ನೀಡಿ ಅವನ್ನು ಇತರರು ಅತಿಕ್ರಮಿಸದಂತೆ ಮಾಡಿದ.

ಸರಕಾರ ತಮ್ಮಿಂದ ಮಾನಸೋಇಚ್ಛೆ ಕಂದಾಯ ವಸೂಲಿ ಮಾಡುತ್ತಿದೆ ಎಂದು ಬಡಗರು ದೂರು ಸಲ್ಲಿಸಿದಾಗ ಸಲ್ಲಿವನ್ ಬಡಗರ ಜಮೀನನ್ನು ಅಳತೆ ಮಾಡಿಸಿ, ಎಕರೆಗೆ ಇಂತಿಷ್ಟು ಕಂದಾಯ ನೀಡತಕ್ಕದ್ದೆಂದು ನಿಗದಿಪಡಿಸಿ, ಅವರ ಮೆಚ್ಚುಗೆ ಗಳಿಸಿದ. ಅಲ್ಲದೆ, ನೀಲಗಿರಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಧಾನ್ಯ, ತರಕಾರಿ, ಹಣ್ಣುಗಳ ಗಿಡಗಳನ್ನು ಬೆಳೆಸುವ ಪ್ರಯೋಗದಲ್ಲಿ ಕೃಷಿಕರಾದ ಬಡಗರು ಸಹಾಯಕರಾದರು. ಮುಂದೆ, ನೀಲಗಿರಿಯ ಆರ್ಥಿಕತೆಗೆ ಬೆನ್ನುಲುಬಾದ ಟೀ, ಆಲೂಗೆಡ್ಡೆ ಮತ್ತು ಕೋಸುಗೆಡ್ಡೆ ಬೆಳೆಗಳು ಸಲ್ಲಿವನ್ನನ ಪ್ರಯೋಗದ ಕೊಡುಗೆಗಳಾದವು.

ನೀಲಗಿರಿಗೆ ಬೇರೆಬೇರೆ ಕಡೆಯಿಂದ ರಸ್ತೆಗಳ ಅಗತ್ಯವಿರುವುದನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟ ಕಾರಣ, 1819ರಲ್ಲಿ ಕೋತಗಿರಿ ಘಾಟ್ ರಸ್ತೆ ನಿರ್ಮಾಣವಾಯಿತು. ಇದು ಮೇಟುಪಾಳ್ಯದಿಂದ ಕೋತಗಿರಿಗೆ ಹೋಗಿ ಬರಲು ಮಾಡಲಾದ ಮೊತ್ತ ಮೊದಲ ಸುಧಾರಿತ ರಸ್ತೆ. ಮುಂದೆ ವೈನಾಡಿನಿಂದ ಮಲಬಾರ್ ಕಡೆಗೆ, ಹಾಗೆಯೇ ಮೈಸೂರಿಗೆ ರಸ್ತೆ ನಿರ್ಮಿಸುವ ಬಗ್ಗೆ ಸರಕಾರದ ಅನುಮತಿ ಪಡೆದ.

ನೀಲಗಿರಿಯಲ್ಲಿ ಕಾಫಿ ಟೀ ತೋಟಗಳನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡುವಂತೆ ಸಲ್ಲಿವನ್ ಹಲವುಬಾರಿ ಸರಕಾರಕ್ಕೆ ಶಿಫಾರಸು ಮಾಡಿದ್ದ. ಆದರೆ, 1860ರ ನಂತರವಷ್ಟೆ, ಎಂದರೆ ಆತ ನಿಧನನಾದ ಒಂದು ದಶಕದ ನಂತರವಷ್ಟೆ ಅದು ಸಾಧ್ಯವಾಯಿತು.

ನೀಲಗಿರಿಯ ತಂಪು ಹವೆ ಆರೋಗ್ಯಕಾರಕ ಎಂಬುದನ್ನು ಅರಿತ ಸಲ್ಲಿವನ್, ಇದರ ಪ್ರಯೋಜನ ಪಡೆಯಲು, ಸರಕಾರವನ್ನು ಒಪ್ಪಿಸಿ ಗಾಯಾಳು ಬ್ರಿಟಿಷ್ ಸೈನಿಕರಿಗಾಗಿ ಒಂದೆರಡು ಕಡೆ ವಿಶ್ರಾಂತಿಧಾಮಗಳನ್ನು ನಿರ್ಮಿಸಲು ಕ್ರಮ ಕೈಗೊಂಡ. ಅಲ್ಲದೆ ಬ್ರಿಟಿಷರು ಹೆಚ್ಚು ಸಂಖ್ಯೆಯಲ್ಲಿ ನೀಲಗಿರಿಯಲ್ಲಿ ನೆಲಸಬೇಕೆಂದು, ಆ ದಿಸೆಯಲ್ಲಿ ಸಹ ಕ್ರಮ ಕೈಗೊಂಡ, ಊಟಿ ಬೇಸಿಗೆ ರಾಜಧಾನಿಯಾಗಬೇಕು, ಪ್ರವಾಸಿ ತಾಣವಾಗಬೇಕು ಎಂಬುದು ಸಹ ಆತನ ಆಶಯವಾಗಿತ್ತು.

1821ರಲ್ಲಿ ಸಲ್ಲಿವನ್ನನ ಮದುವೆ ಮದರಾಸಿನಲ್ಲಿ ನಡೆಯಿತು. ಆತನ ಮೊದಲ ಪತ್ನಿ ಹೆನ್ರಿಟಾ ಸೆಸಿಲಿಯಾ ಮತ್ತು ಎರಡನೇ ಮಗಳು ಹ್ಯಾರಿಯೆಟ್ 1838ರಲ್ಲಿ ನಿಧನರಾದಾಗ ಅವರನ್ನು ಊಟಿಯ ಸೇಂಟ್ ಸ್ಟೀಫನ್ ಚರ್ಚ್‌ನ ಆವರಣದಲ್ಲಿ ಸಮಾಧಿ ಮಾಡಲಾಯಿತು. ಇಂಗ್ಲೆಂಡಿನಲ್ಲಿ ಸಲ್ಲಿವನ್ ಎರಡನೇ ಮದುವೆ ಮಾಡಿಕೊಂಡ. ಜಾನ್ ಸಲ್ಲಿವನ್ ಫ್ರಾನ್ಸಿಸ್ ಲೋಸ್ ದಂಪತಿಗೆ ಏಳು ಮಂದಿ ಮಕ್ಕಳು.

ಸಲ್ಲಿವನ್‌ನ ಮೂರನೇ ಮಗ ಹೆನ್ರಿ ಎಡ್ವರ್ಡ್ ಸಲ್ಲಿವನ್ ಬ್ರಿಟಿಷ್ ಸರಕಾರದ ಸೇವೆಗೆ ಸೇರಿದ. ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಆತ 1869ರಲ್ಲಿ ಕೊಯಂಬತ್ತೂರಿನ ಕಲೆಕ್ಟರ್ ಹುದ್ದೆಯನ್ನು ವಹಿಸಿ ಕೊಂಡಿದ್ದ. 1841ರಲ್ಲಿ ಸಲ್ಲಿವನ್ ನಿವೃತ್ತನಾಗಿ ಇಂಗ್ಲೆಂಡಿಗೆ ತೆರಳಿದ. ಸ್ಥಳೀಯ ರಾಜರನ್ನು, ಪ್ರಜೆಗಳನ್ನು ಕಂಪೆನಿ ಅಧಿಕಾರಿಗಳಿಗೆ ಅಡಿಯಾಳುಗಳಾಗಿ ಮಾಡಲು ಸರ್ ಥಾಮಸ್ ಮನ್ರೋ ಅನುಸರಿಸಿದ ಕ್ರಮಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸದೆ ಇದ್ದ ಪಕ್ಷದಲ್ಲಿ ಸಲ್ಲಿವನ್ ಸರಕಾರಿ ಸೇವೆಯಲ್ಲಿ ಮುಂದುವರಿಯಲು ಸಾಧ್ಯವಿತ್ತು ಎಂದು ಆತನ ಮೃತ್ಯು ಪತ್ರಿಕೆಯಲ್ಲಿ ದಾಖಲಾಗಿದೆ. ತನ್ನ ಕೊನೆಯ ದಿನಗಳನ್ನು ನೀಲಗಿರಿಯ ಮೇಲೂರಿನಲ್ಲಿ ಕಳೆಯಬೇಕೆಂದು ಬಯಸಿದ್ದ. ಅದು ಸಾಧ್ಯವಾಗಲಿಲ್ಲ. 1855ರಲ್ಲಿ ಜಾನ್ ಸಲ್ಲಿವನ್ ನಿಧನನಾದ.

ಜಿಲ್ಲಾ ಮುಖ್ಯ ಕೇಂದ್ರವಾಗಿ ಊಟಿ ನಗರವನ್ನು ಅಭಿವೃದ್ಧಿಪಡಿಸುವ ಮೊದಲು, ಸಲ್ಲಿವನ್ ನೀಲಗಿರಿ ಯಾತ್ರೆ ಕೈಗೊಂಡು ಮೊದಲು ಶಿಬಿರ ಸ್ಥಾಪಿಸಿದ್ದ ಕೋತಗಿರಿಯ ದಿಮ್ಮಿಹಟ್ಟಿಯಲ್ಲಿ ಬಂಗಲೆ ನಿರ್ಮಿಸಿದ್ದನಷ್ಟೆ. ಆಗ ಅಲ್ಲಿಂದಲೇ ಆಡಳಿತ ನಡೆಯುತ್ತಿತ್ತು. ಸಿಬ್ಬಂದಿಗೂ ಅಲ್ಲಿ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಈಗ ಅಲ್ಲಿ ಸಲ್ಲಿವನ್ ಸ್ಮಾರಕ ಸ್ಥಾಪಿಸಲಾಗಿದೆ. ಮುಂದೆ ಭಾರತ ಸ್ವತಂತ್ರವಾಗುವವರೆಗೆ ಅನೇಕ ಬ್ರಿಟಿಷ್ ಕಲೆಕ್ಟರುಗಳು, ಗೌರ್ನರುಗಳು, ಉನ್ನತಾಧಿ ಕಾರಿಗಳು, ನೀಲಗಿರಿಯಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆದರೆ ನೀಲಗಿರಿಯ ಜನರು ಜಾನ್ ಸಲ್ಲಿವನ್‌ನನ್ನು ಮಾತ್ರ ಕೃತಜ್ಞತೆಯಿಂದ ನೆನೆಯುತ್ತಾರೆ.

Writer - ಪರಂಜ್ಯೋತಿ

contributor

Editor - ಪರಂಜ್ಯೋತಿ

contributor

Similar News