ಬುದ್ಧಿ ಮಾಂದ್ಯ-ಳು

Update: 2018-12-15 19:20 GMT

ಭೂಮಿಯಲ್ಲಿ ಹುಟ್ಟಿದ ಯಾವ ತಂದೆ - ತಾಯಿಗಳಿಗೂ ಈ ಕಷ್ಟ ಬರಬಾರದು. ಬಂದರೂ ಅದನ್ನು ಎದುರಿಸುವ ಎದೆಗಾರಿಕೆಯು ಅವರಿಗೆ ಆ ದೇವರು ಕರುಣಿಸಬೇಕು. ಈ ಮಾತನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ, ನನ್ನ ಮಗಳು ಹುಟ್ಟುವಾಗಲೇ ಬುದ್ಧಿ ಮಾಂದ್ಯಳಾಗಿ ಹುಟ್ಟಿದಳು. ಮಗ ಹುಟ್ಟಿದ ಎರಡು ವರ್ಷಗಳ ನಂತರ ಹುಟ್ಟಿದ ಈಕೆ ಯಾಕೆ ಬುದ್ಧಿಮಾಂದ್ಯಳಾಗಿ ಹುಟ್ಟಿದಳು ಎಂಬುದೇ ಈಗ ಪ್ರಶ್ನಾರ್ಥಕವಾಗಿ ನನ್ನನ್ನು ಕಾಡುತ್ತಿದೆ. ಸತೀಶನಿಗೆ ಯೋಚಿಸಿದಷ್ಟು ಈ ವಿಷಯ ಇನ್ನೂ ಸಂಕೀರ್ಣವಾಗುತ್ತಲೇ ಹೋಗುತ್ತದೆ. ಒಂದೇ ಕುಟುಂಬದೊಳಗೆ ಅಥವಾ ರಕ್ತಸಂಬಂಧದಲ್ಲಿ ಮದುವೆಯಾದರೆ ದಂಪತಿಗೆ ಹುಟ್ಟಿದ ಮಕ್ಕಳು ಬುದ್ಧಿಮಾಂದ್ಯಳೋ ಅಥವಾ ಇನ್ನಾವುದೋ ರೀತಿಯಲ್ಲಿ ಹುಟ್ಟುತ್ತಾರೆಂದು ಕೇಳಿ ತಿಳಿದಿದ್ದೇನೆ. ಅದೇ ರೀತಿ ಅಂತರ್ಜಾತಿಯ ವಿವಾಹವಾದರೆ, ಅದರಲ್ಲಿಯೂ ಅಂತರ್ ಧರ್ಮೀಯ ವಿವಾಹವಾದರೆ ಆ ಮಕ್ಕಳು ತುಂಬಾ ಬುದ್ಧಿವಂತರಿರುತ್ತಾರೆ. ನಾವೇನು ಆ ರೀತಿ ವಿವಾಹವಾದದ್ದಲ್ಲ. ಬಸ್ಸಿನ ವೇಗದಷ್ಟು ಮನಸ್ಸು ತನ್ನ ಹತೋಟಿ ಮೀರಿ ಚಲಿಸುತ್ತಿದೆ. ಮಗಳು ಅತ್ತ ಇತ್ತ ತನ್ನ ಮುಖವನ್ನು ತಿರುಗಿಸಿ ನೋಡುತ್ತಿದ್ದಾಳೆ. ಕೆಲವೊಮ್ಮೆ ಜೋರು ಕೆಲವೊಮ್ಮೆ ಕಡಿಮೆ ಸ್ಪೀಡಲ್ಲಿ, ಆ ತಿರುವುಗಳಲ್ಲಿ ಬಸ್ಸನ್ನು ಚಲಾಯಿಸುತ್ತಿದ್ದಾನೆ ಡ್ರೈವರ್. ಎಷ್ಟೋ ಕಡೆಗಳಲ್ಲಿ ಕರೆದುಕೊಂಡು ಹೋಗಿದ್ದಾಯ್ತು. ಎಷ್ಟೋ ಖರ್ಚು ಮಾಡಿದ್ದಾಯ್ತು. ಇವಳನ್ನು ಇನ್ನು ಯಾವ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದರೆ ಸರಿಯಾದಾಳು. ನಮ್ಮ ಜವಾಬ್ದಾರಿ ಯಾವಾಗ ಕಮ್ಮಿ ಆದೀತು. ಬಸ್ಸಿನ ಜನರೆಲ್ಲ ನಮ್ಮನ್ನೇ ನೋಡಿದಾಗೆ, ನಮ್ಮನ್ನೇ ನೋಡಿ ನಕ್ಕಾಗೆ ಭಾಸವಾಗುತ್ತಿದೆ. ಯಾವಾಗ ಇದರಿಂದ ಮುಕ್ತಿ? ಸಣ್ಣ ಮಗುವಿದ್ದಾಗ ಇಂತಹ ಕಷ್ಟ ಇರಲಿಲ್ಲ. ಈಗ ಪ್ರಾಯಕ್ಕೆ ಬಂದಿದ್ದಾಳೆ. ಎಲ್ಲವನ್ನು ನಾವೇ ನೋಡಿಕೊಳ್ಳಬೇಕು. ಯಾವುದೂ ಗೊತ್ತಾಗುವುದಿಲ್ಲ. ಬೇರೆ ಯೆಲ್ಲವನ್ನು ತಾಯಿ ನೋಡುತ್ತಾಳೆ. ಅವಳು ಬ್ಯಾಂಕಲ್ಲಿ ಕೆಲಸ ಮಾಡುತ್ತಿರುವುದರಿಂದ ಎಷ್ಟೊಂದು ಗಮನಿಸಲು ಆಗುತ್ತದೆ. ಈ ಜಾಗಕ್ಕೆ ಇದೇ ಮೊದಲಲ್ಲ ಹೋಗುವುದು. ಹಿಂದೊಮ್ಮೆ ಹೋಗಿ ಮದ್ದು ಮಾಡಿ ನೋಡಿಯಾಗಿದೆ. ಆದರೂ ಯಾಕೋ ಒಂದು ಭರವಸೆ, ಕೊಟ್ಟ ಮದ್ದಿನ ಗುಣದಿಂದಲಾದರೂ ಅಥವಾ ಕೊಡುವವನ ಕೈ ಗುಣದಿಂದಲಾದರೂ ಗುಣವಾದೀತು. ನನ್ನ ಮಗಳು ಮನುಷ್ಯರಂತಾದಾಳು ಎಂಬ ಆಶಾ ಭಾವನೆ. ಬಸ್ಸು ಕಾಪುವನ್ನು ದಾಟಿ ಮುಂದೆ ಚಲಿಸುತ್ತಿದೆ. ಹತ್ತಿರದಲ್ಲೇ ಹಾದು ಹೋಗುವ ಕಾಪುವಿನ ದೀಪ ಸ್ತಂಭವನ್ನು ಕಾಣುವಾಗ ಹಿಂದೊಮ್ಮೆ ನಾವೆಲ್ಲರೂ ಕುಟುಂಬ ಸಮೇತ ಈ ಬೀಚಿಗೆ ಬಂದು ಮಕ್ಕಳೊಟ್ಟಿಗೆ ನೀರಾಟವಾಡಿದ್ದ, ಮಗಳು ಯತೇಷ್ಟವಾಗಿ ಇಲ್ಲಿ ವಿಹರಿಸಿದ್ದ, ಎಲ್ಲವೂ ಸೃತಿಪಟಲದಲ್ಲಿ ಹಾದು ಹೋಯಿತು.

ಗೆಳೆಯ ರಮೇಶ ಅಂದೇ ಹೇಳಿದ್ದ ಸತೀಶ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ. ಈ ಜೀವನ ನಾವು ಆಶೆ ಪಟ್ಟು ಪಡಕೊಂಡಿದ್ದಲ್ಲ. ದೇವರು ನಡೆಸುವ ಆಟ. ಮಕ್ಕಳು ಕೂಡಾ ದೇವರು ಕೊಟ್ಟದ್ದು. ಕೆಲವರಿಗೆ ಮಕ್ಕಳೇ ಇಲ್ಲ. ಅವರು ಮಕ್ಕಳಾಗಲಿಕ್ಕಾಗಿ ಎಷ್ಟೊಂದು ಖರ್ಚು ಮಾಡುವುದಿಲ್ಲ. ಎಷ್ಟೊಂದು ದೈವ ದೇವರುಗಳಿಗೆ ಹರಕೆ ಸಲ್ಲಿಸುವುದಿಲ್ಲ. ಅವರದೂ ಒಂದು ಬದುಕು, ನಮ್ಮದೂ. ಕೆಲವರನ್ನು ದೇವರು ಆ ರೀತಿ ಸತಾಯಿಸುತ್ತಾನೆ. ನಮ್ಮನ್ನು ಈ ರೀತಿಯಾಗಿ ಪರೀಕ್ಷಿಸುತ್ತಾನೆ. ರಮೇಶನೇ ತೋರಿಸಿದ ದಾರಿ ಈಗ ಹೋಗುತ್ತಿರುವ, ಪರೀಕ್ಷಿಸ ಹೊರಟಿರುವ ಜಾಗ. ನಮ್ಮ ಕಂಪೆನಿಯಲ್ಲಿ ಕಾರಕೂನನಾಗಿ ದುಡಿಯುವ ರಮೇಶ ಸರಳ ಸಜ್ಜನಿಕೆಯ ಮನುಷ್ಯ. ತಾನಾಯಿತು ತನ್ನ ಕೆಲಸವಾಯಿತು ಎಂದು ಬದುಕುವವ. ಹೆಂಡತಿ ತನ್ನ ಇಬ್ಬರು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಾನೆ. ಅವನಿಗೂ ಕೆಲವೊಂದು ಸಮಸ್ಯೆಗಳಿವೆ. ಅವರದು ಅಂತರ್ಜಾತಿಯ ವಿವಾಹ. ಆದ್ದರಿಂದ ಇವನ ಕುಟುಂಬ ಮತ್ತು ಹೆಂಡತಿ ಕುಟುಂಬದವರು ಇವರ ಯಾವ ಕೆಲಸಕಾರ್ಯಗಳಿಗೂ ಬರುವುದಿಲ್ಲ. ಏನೇ ಕಷ್ಟ ಬಂದರೂ ಇವರು ಇವರೇ ಸರಿ ಮಾಡಿಕೊಳ್ಳಬೇಕು. ಮಕ್ಕಳ ವಿದ್ಯಾಭ್ಯಾಸ, ಮನೆ ನಡೆಸುವ ಜವಾಬ್ದಾರಿ ಎಲ್ಲ ಇವನ ಹೆಗಲ ಮೇಲೆ. ಇವನ ಒಬ್ಬನ ದುಡಿಮೆಯಿಂದ ಇವರ ಸಂಸಾರ ರಥ ನಡೆಯಬೇಕು. ಆದರೂ ತನ್ನ ಕಷ್ಟದಲ್ಲಿಯೂ ಇತರರಿಗೆ ಸಹಾಯ ಮಾಡುವ ಒಳ್ಳೆಯ ಗುಣ ರಮೇಶನದ್ದು. ಬಸ್ಸು ಉಡುಪಿಯ ಬಸ್‌ಸ್ಟ್ಯಾಂಡಿನಲ್ಲಿ ಸ್ವಲ್ಪ ಹೊತ್ತು ನಿಂತು, ಈಗ ಮಣಿಪಾಲದತ್ತ ತನ್ನ ಓಟ ಪ್ರಾರಂಭಿಸಿದೆ. ಉಡುಪಿ ಸರ್ಕಲ್‌ನ ಆ ತುದಿಯಿಂದ ಕಂಡಕ್ಟರ್ ಕೊಟ್ಟ ವಿಸಿಲ್ ನಿಂದ ಅವಕ್ಕಾದ ಮಗಳು ಇದು ಯಾವ ಊರಿಗೆ ಬಂದಿದ್ದೇನೋ ಎಂಬಂತೆ ಕಣ್ಣು ಬಾಯಿ ಬಿಟ್ಟು ನೋಡುತ್ತಿದಾಳೆ. ಉಡುಪಿಯ ಜಂಕ್ಷನ್‌ನಲ್ಲಿ ಕಾಣುತ್ತಿದ್ದ ಆ ಜನಸಂಖ್ಯೆ, ಆ ವಿಧದ ವ್ಯಾಪಾರ ವಹಿವಾಟಗಳು, ಅಂಗಡಿ ಮುಂಗಟ್ಟುಗಳನ್ನು ಕಂಡು ಎವೆ ಇಕ್ಕದೆ ನೋಡುತ್ತಿದ್ದಾಳೆ. ಅವಳನ್ನೊಮ್ಮೆ ಮಾತಿಗಿಳಿಸಬೇಕೆಂದು ಆಶೆಯಾಗುತ್ತಿದೆ. ಆದರೆ ಮೂಕವಿಸ್ಮಿತಳಾಗಿ ಕುಳಿತಿರುವ ಅವಳನ್ನು ಯಾಕಾಗಿ ಡಿಸ್ಟರ್ಬ್ ಮಾಡಬೇಕು ಎಂದೆನಿಸಿತು.

ಮುಂದೆ ತಲುಪಬೇಕಾದ ಊರು ಇನ್ನೇನು ಅರ್ಧ ಗಂಟೆಯಲ್ಲಿ ತಲುಪುತ್ತದೆ. ಸತೀಶನಿಗೆ ಗತ ಕಾಲದ ನೆನಪುಗಳು ಒಂದೊಂದೇ ಕಣ್ಣಿಗೆ ಕಟ್ಟಿದಂತೆ ಗೋಚರಿಸುತ್ತದೆ. ನಾನೇನು ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಿದವನಲ್ಲ. ತಂದೆ - ತಾಯಿಗೆ ಒಬ್ಬನೇ ಮಗ. ಕಷ್ಟ ಪಟ್ಟು ಓದಿ ಈಗ ಈ ಕಂಪೆನಿಯಲ್ಲಿ ಉನ್ನತವಾದ ಹುದ್ದೆಯಲ್ಲಿ ಇದ್ದೇನೆ. ಒಬ್ಬನೇ ಮಗನಾದ್ದರಿಂದ ತಂದೆ - ತಾಯಿಯ ಆಸ್ತಿಗೆ ನಾನೇ ಪಾಲುದಾರ. ಅವರಿಗೂ ಅಷ್ಟೊಂದು ಆಸ್ತಿಗಳಿಲ್ಲ. ಒಂದು 5-6 ಎಕರೆ ಜಾಗ. ಅದರಲ್ಲಿ ವ್ಯವಸಾಯ, ಅಡಿಕೆ ತೋಟ. ಒಳ್ಳೆಯ ನೀರಿನ ಒರತೆಯ ಜಾಗವಾದ್ದರಿಂದ ವ್ಯವಸಾಯ, ಅಡಿಕೆ ತೋಟಗಳು ಉತ್ತಮ ಫಲಗಳನ್ನು ನೀಡುತ್ತಿದೆ . ನಾನು ಮತ್ತು ರೀತ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಅವಳಿಗೆ ಕಾಲೇಜಿನ ಓದು ಮುಗಿದ ನಂತರ co op ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು. ನಾವಿಬ್ಬರು ಪರಸ್ಪರ ಮೊದಲೇ ನೋಡಿಯಾಡಿದ್ದರಿಂದ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಒಳಗಾಗಿ ಇಬ್ಬರು ಮಕ್ಕಳ ತಂದೆ ತಾಯಿಗಳಾಗಿ ಇದ್ದೇವೆ . ಇನ್ನೇನು ಕೆಲವೇ ನಿಮಿಷಗಳಲ್ಲಿ ಪರ್ಕಳ ತಲುಪಿ, ಅಲ್ಲಿಂದ ರಿಕ್ಷಾದಲ್ಲಿ ಹೋದರೆ 15 ನಿಮಿಷದ ದಾರಿ. ಕಾಲು ದಾರಿಯಾಗಿ ಅರ್ಧ ಗಂಟೆ ಯಾಕೋ ದೇಹ ಬಾಧೆಯನ್ನು ತೀರಿಸುವ ತವಕ. ಮಗಳಿಗೂ ಇರಬಹುದು ಹೇಳಿಕೊಳ್ಳುವುದಕ್ಕೆ ಆಗುವುದಿಲ್ಲ . ಎಲ್ಲವನ್ನೂ ನಾವೇ ಕೇಳಿ ತಿಳಿದುಕೊಳ್ಳಬೇಕು . ರಿಕ್ಷಾದಲ್ಲಿ ಕುಳಿತು, ಆ ಕಲ್ಲು ಕೋರೆಯನ್ನು ದಾಟಿ , ಮುಂದೆ ಸಾಗಿ ಕಾಣುವ ಆ ವಿಶಾಲವಾದ ಜಾಗದಲ್ಲಿ ಕಾಣ ಸಿಗುವ ಆ ಆಸ್ಪತ್ರೆಯೇ ಡಾ. ವೇದವ್ಯಾಸ ಜೋಯಿಸರ ಮಾನಸಿಕ ಆಸ್ಪತ್ರೆ. ಆಸ್ಪತ್ರೆ ಎನ್ನುವುದಕ್ಕಿಂತ ಒಂದು ಸುಂದರ ಜಗತ್ತನ್ನೇ ನಿರ್ಮಿಸಿದ, ಎಷ್ಟೋ ಮಾನಸಿಕ ರೋಗಿಗಳನ್ನು, ಬುದ್ಧಿಮಾಂದ್ಯರನ್ನು ತನ್ನ ಕಕ್ಷೆಯೊಳಗಿಟ್ಟು ಗುಣಪಡಿಸಿ ಅವರಿಗೆ ಮಾನಸಿಕ ಸ್ಥೈರ್ಯವನ್ನು ಕರುಣಿಸಿದ ಒಬ್ಬ ಉದಾತ್ತ ವೈದ್ಯಾಧಿಕಾರಿ.

ಆಸ್ಪತ್ರೆಯ ಹೊರಾಂಗಣವನ್ನು ದಾಟಿ, ಮುಂದೆ ಕಾಣುವ ಅವರ ಕೊಠಡಿಗೆ ಪ್ರವೇಶಿಸಿದಾಗ, ನಮ್ಮನ್ನೇ ಕಾಯುವಂತೆ ಇದ್ದ ಅವರು ಕುಶಲೋಪರಿ ಮಾತನ್ನಾಡಿ, ಮಗಳನ್ನು ಸಂತೈಸಿ, ತನ್ನ ಪರೀಕ್ಷಾ ಕೊಠಡಿಗೆ ಕರೆದೊಯ್ದು, ಪರೀಕ್ಷಿಸಿ ಒಂದು ಮೂರು ದಿನ ಇಲ್ಲಿಯೇ ಇರುವ ವ್ಯವಸ್ಥೆ ಮಾಡಿ ನನ್ನಲ್ಲಿಯೂ ಧೈರ್ಯ ತುಂಬಿದರು. ಬುದ್ಧಿಮಾಂದ್ಯಳೆಂದರೆ ಯಾರೂ ನಂಬಲಾರರು. ಅಷ್ಟು ಚೆಲುವು, ಸುಂದರ ಹುಡುಗಿ ನನ್ನ ಮಗಳು ವೈದೇಹಿ. ಅವಳ ಹಾವಭಾವಗಳಿಂದಲೆ ಅವಳು ಬುದ್ಧಿಮಾಂದ್ಯಳೆಂದು ಗೋಚರಿಸಬಹುದು. ಅಷ್ಟು ಜತನದಿಂದ ಕಾಪಾಡಿಕೊಂಡು ಬಂದಿದ್ದೇವೆ ನಾವು ಅವಳನ್ನು. ಈ ಜಗತ್ತಿನಲ್ಲಿ ಎಲ್ಲ ಕಡೆ ಇರುವ ಕೆಟ್ಟ ಜನರ ದೃಷ್ಟಿ ಅವಳ ಮೇಲೆ ಬೀಳಬಾರದೆಂದು ನಾವೆಲ್ಲ ಕೇಳಿ ತಿಳಿದಿದ್ದೇವೆ. ಟಿವಿ, ಪೇಪರ್‌ಗಳಲ್ಲಿ ದಿನನಿತ್ಯ ಬುದ್ಧಿಮಾಂದ್ಯಳ ಅತ್ಯಾಚಾರ. ಇದನ್ನು ಕೇಳುವಾಗಲೇ ಭಯವಾಗುತ್ತದೆ. ಆದರೂ, ಒಮ್ಮೆ ಕಣ್ಣು ತಪ್ಪಿಸಿ ಮೂರು ದಿನ ಕಾಣೆಯಾಗಿದ್ದಳು ವೈದೇಹಿ. ದೇವರ ದಯೆಯಿಂದ ಸಿಕ್ಕಿ, ನಮ್ಮ ಆತಂಕಕ್ಕೆ ತೆರೆ ಎಳೆದಿದ್ದಳು. ಎಷ್ಟೋ ಸಲ ನಮಗೆ ತಂದೆ - ತಾಯಿಗಳಿಗೆ ಆದದ್ದುಂಟು ಯಾಕಾಗಿ ನಮಗೆ ಈ ತರಹದ ಮಗಳನ್ನು ದಯಪಾಲಿಸಿದ್ದಿ, ಹುಟ್ಟುವಾಗಲೇ ಸಾಯಬಾರದಿತ್ತೇ. ನಮ್ಮೆಲ್ಲ ಕಷ್ಟಗಳು ನಿವಾರಣೆಯಾಗಬಾರದಿತ್ತೇ. ನಾವು ಇರುವ ತನಕ ಇವಳನ್ನು ನೋಡಿಕೊಳ್ಳಬಹುದು ನಂತರ?

ಮೂರು ದಿನದ ಚಿಕಿತ್ಸೆಯಿಂದ, ಆ ಪ್ರಕೃತಿಯ ಸೊಬಗನ್ನು ಆಸ್ವಾದಿಸಿ, ನನ್ನ ಮಗಳು ಎಷ್ಟೋ ಮಾನಸಿಕವಾಗಿ ವಾಸಿಯಾದಂತೆ ಕಂಡು ಬರುತ್ತದೆ. ನನಗೂ ಸಮಾಧಾನ. ಬರಬರುತ್ತಾ ನಮ್ಮೆಲ್ಲರ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ, ನನ್ನ ಮಗಳು ಎಲ್ಲರಂಥವಳು ಎಂಬ ಹುಚ್ಚು ಮನಸ್ಸಿನ ಆಲೋಚನೆಗಳು ಮನಸ್ಸು ತುಂಬಾ. ರಿಕ್ಷಾದಿಂದ ಇಳಿದು, ಪರ್ಕಳದ ಸಂತೆಯೊಳಗೊಂದು ಸುತ್ತು ಬಂದು, ಹಳ್ಳಿಯಲ್ಲಿ ಬೆಳೆದ, ಸಾವಯವ ಕೃಷಿಯ ತರಕಾರಿ, ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕೆಂದು ಮನಸ್ಸು ಮಾಡಿದ್ದಾಗಿದೆ. ಮಗಳೊಂದಿಗೆ ಜನ ಜಂಗುಳಿಯ ಸಂತೆಯ ಒಳ ಹೊಕ್ಕು, ತರಕಾರಿ, ವಸ್ತುಗಳ ಚೌಕಾಸಿಯಲ್ಲಿ ತೊಡಗಿಸಿಕೊಂಡು, ಇನ್ನೇನು ಅವುಗಳನ್ನೆಲ್ಲ ತೆಗೆದುಕೊಂಡು ಬಳಿಯಲ್ಲಿ ನೋಡುತ್ತೇನೆ ಮಗಳಿಲ್ಲ. ಏನಾಯಿತು, ಎಲ್ಲಿ ಹೋದಳು ಮಗಳು, ಈಗಷ್ಟೆ ತನ್ನೆಲ್ಲ ವ್ಯಾಕುಲಗಳನ್ನು ಮರೆತು, ನೆಮ್ಮದಿಯಿಂದಿರಲು ಹೀಗಾಯಿತಲ್ಲ? ಎಲ್ಲಿ ಎಲ್ಲಿ ಹುಡುಕಿದರೂ ಕಾಣ ಸಿಗುತ್ತಿಲ್ಲ. ಇಡೀ ಸಂತೆಯನ್ನೊಮ್ಮೆ ಸುತ್ತಿ ಹಾಕಿದರೂ ಇಲ್ಲ. ಯಾಕೆ ಎಲ್ಲಿ ಹೋದಳು ಏನಾದಳು? ಇವಳ ತಾಯಿಗೆ ಏನೆಂದು ಉತ್ತರ ಕೊಡುವುದು? ತಲೆ ಮೇಲೆ ಕೈ ಹೊತ್ತು ಸ್ವಲ್ಪ ಹೊತ್ತು ಅಲ್ಲೇ ಇರುವ ಬಸ್ ಸ್ಟಾಂಡಿನ ಕಲ್ಲಿನ ಮೇಲೆ ಕುಳಿತನು ಸತೀಶ.

Writer - ಯೋಗೀಶ್ ಕಾಂಚನ್, ಬೈಕಂಪಾಡಿ

contributor

Editor - ಯೋಗೀಶ್ ಕಾಂಚನ್, ಬೈಕಂಪಾಡಿ

contributor

Similar News