ಕಾಂಗ್ರೆಸ್ ಮುಖವಾಡದ ಹಿಂದೆ ಮೋದಿ ನೀತಿ

Update: 2018-12-17 06:36 GMT

ಪಂಚ ರಾಜ್ಯಗಳಲ್ಲಿ ನಡೆದ ಈ ಚುನಾವಣೆಯನ್ನು ಮೋದಿ ದುರಾಡಳಿತವನ್ನು ಕೊನೆಗಾಣಿಸುವ ದಿಕ್ಸೂಚಿಯೆಂದು ಮೋದಿ ಆಡಳಿತದಿಂದ ರೋಸಿ ಹೋಗಿದ್ದ ಜನರು ಪರಿಗಣಿಸಿದ್ದರು. ಪ್ರಗತಿಪರ ಶಕ್ತಿಗಳು ಕೂಡ ಮೋದಿಗೆ ಸೋಲಾಗಬೇಕೆಂದು ಬಯಸಿದ್ದರು. ಆದರೆ ಬಹುತೇಕವಾಗಿ ಪರ್ಯಾಯವಾಗಿ ಇವರೆಲ್ಲರೂ ಬಯಸಿದ್ದು ಕಾಂಗ್ರೆಸ್ ಪಕ್ಷವನ್ನು ಇಲ್ಲವೇ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರವನ್ನು.

ಭಾರೀ ಪ್ರಚಾರಿತ ಹಿಂದಿ ಹೃದಯಭಾಗದ ಪಂಚರಾಜ್ಯಗಳ ಚುನಾವಣೆಗಳು ಮುಗಿದು ಫಲಿತಾಂಶಗಳೂ ಬಂದಾಯಿತು. ಈಗ ಮುಖ್ಯ ಮಂತ್ರಿ, ಮಂತ್ರಿ ಪದವಿಗಳಿಗಾಗಿ ವಶೀಲಿಬಾಜಿ, ಹಕ್ಕೊತ್ತಾಯ, ಪ್ರತಿಭಟನೆಗಳು ನಡೆದು ಮುಖ್ಯಮಂತ್ರಿ ಸ್ಥಾನಗಳು ಭರ್ತಿಯಾಗಿವೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ವಲ್ಪಚೇತರಿಸಿಕೊಂಡಂತಾದ ಮೇಲೆ ರಾಹುಲ್ ಗಾಂಧಿಯನ್ನು ಮೋದಿಗೆ ಪರ್ಯಾಯವಾಗಿ ಬಿಂಬಿಸುವ ಕಾರ್ಯ ಶುರುವಾಗಿದೆ. ಮೋದಿ ಅಮಿತ್ ಶಾ ಕೂಟಕ್ಕೆ ಸದ್ಯಕ್ಕೆ ಒಂದು ಮಟ್ಟದ ಹಿನ್ನಡೆಯಾಗಿದೆ. ಅವರುಗಳು ಇದುವರೆಗೂ ಪ್ರತಿಪಾದಿಸುತ್ತಾ ಬಂದ ‘ಅಚ್ಛೇ ದಿನ್’ ಎಂಬ ಬುರುಗು ಗುಳ್ಳೆ ಒಡೆದು ಹೋಗಿದೆ. ಜನರು ಆ ಬುರುಗು ಗುಳ್ಳೆಯನ್ನು ನೋಡಿಕೊಂಡು ಭ್ರಮೆಗಳಲ್ಲಿ ಮುಳುಗಿರಲು ಇನ್ನು ತಯಾರಿಲ್ಲ ಎನ್ನುವುದನ್ನು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೇಳಿದೆ. ಅಲ್ಲದೇ ಹುಸಿ ಅಚ್ಛೇ ದಿನ್ ಆಗಲಿ, ರಾಮನಾಗಲಿ, ಗೋಮಾತೆಯಾಗಲಿ, ಪಾಕಿಸ್ತಾನಿ ಬೆದರಿಕೆಯಾಗಲಿ ಜನರನ್ನು ತಮ್ಮತ್ತ ಹಿಡಿದಿಡಲು ಸಹಕಾರಿಯಾಗದು ಎನ್ನುವ ಸಂದೇಶವನ್ನೂ ಬ್ರಾಹ್ಮಣ ಶಾಹಿ ಹಿಂದೂ ಕೋಮುವಾದಿ ಸಂಘಪರಿವಾರಕ್ಕೆ ರವಾನಿಸಿದೆ.

ಹಾಗಂದಾಗ ಮಧ್ಯಪ್ರದೇಶದಲ್ಲಿ ಬಿಜೆಪಿಯ ಹಿಡಿತ ಬಹಳ ಕಡಿಮೆಯೇನೂ ಆಗಲಿಲ್ಲ. ಅಲ್ಪಅಂತರದಿಂದ ಮಾತ್ರ ಅದು ಚುನಾವಣಾ ಗೆಲುವಿನಿಂದ ಹಿಂದೆ ಸರಿದಿದೆ ಅಷ್ಟೆ. 114 ಸ್ಥಾನಗಳನ್ನು ಕಾಂಗ್ರೆಸ್ ಪಡೆದಿದ್ದರೆ 109 ಸ್ಥಾನಗಳನ್ನು ಬಿಜೆಪಿ ಪಡೆದಿದೆ. ಕಾಂಗ್ರೆಸ್‌ಗೆ ಬಿಎಸ್ಪಿ ಹಾಗೂ ಇತರ ಶಾಸಕರು ಬೆಂಬಲ ನೀಡಿದ್ದರಿಂದ ಸರಕಾರ ರಚಿಸಲು ಸಾಧ್ಯವಾಗಿದೆ. ಇನ್ನು ಛತ್ತೀಸ್‌ಗಡ ಹಾಗೂ ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಿದೆ. ಇಲ್ಲಿ ಎಲ್ಲಾ ಕಡೆಯೂ ಚುನಾವಣಾ ಪೂರ್ವ ಖಾಸಗಿ ಸಮೀಕ್ಷೆಗಳೆಲ್ಲಾ ತಲೆಕೆಳಗಾದವು. ಸಮೀಕ್ಷೆಯ ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಹೆಚ್ಚಾಗಿತ್ತಾದರೂ ಸ್ಥಾನಗಳ ಲೆಕ್ಕಾಚಾರಗಳು ಯಾವುವೂ ಹೋಲಿಕೆಯಾಗಲಿಲ್ಲ. ಬಹುತೇಕ ಸಮೀಕ್ಷೆಗಳನ್ನು ರೋಚಕತೆ ಸುಳ್ಳುಗಳೊಂದಿಗೆ ಸ್ಟುಡಿಯೊದಲ್ಲಿಯೇ ಕುಳಿತು ಮಾಡಿ ನಂತರ ಚರ್ಚೆಗಳ ಹೆಸರಿನ ಪ್ರಹಸನ ನಡೆಸುವುದನ್ನೇ ಭಾರೀ ಪ್ರಚಾರ ಕೊಡಲಾಗುತ್ತಿದೆ. ಕೇವಲ ಟಿಆರ್‌ಪಿ ಹಾಗೂ ಅಕ್ರಮ ಹಣ ಗಳಿಕೆಯ ದಂಧೆಯಾಗಿರುವ ಇಂತಹ ಹೆಚ್ಚಿನ ಸಮೀಕ್ಷೆಗಳು ವೈಜ್ಞಾನಿಕವಾಗದೇ ಹೋಗಿರುವ ಕಾರಣ ಇಂತಹ ಸಮೀಕ್ಷೆಗಳ ಮೇಲೆ ವಿಶ್ವಾಸವಿಡಲು ಇನ್ನೂ ಸಾಧ್ಯವಾಗುತ್ತಿಲ್ಲ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ.41 ಗಳಿಸಿದ್ದರೆ ಬಿಜೆಪಿ ಶೇ.40 ಗಳಿಸಿದೆ. ನೋಟಾ ಮತಗಳು ಶೇ.1.4 ಇದೆ. ಛತ್ತೀಸ್‌ಗಡದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್ ಶೇ.43 ಮತಗಳನ್ನು ಗಳಿಸಿದ್ದರೆ, ಬಿಜೆಪಿ ಶೇ.33 ಮತಗಳನ್ನು ಗಳಿಸಿದೆ. ನೋಟಾ ಮತಗಳು ಶೇ.2.0 ಇದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಪಡೆದಿದ್ದರೆ ಬಿಜೆಪಿ 73 ಸ್ಥಾನಗಳನ್ನು ಪಡೆದಿದೆ ಆದರೆ ಅಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್ ಶೇ.39.3 ಬಿಜೆಪಿ ಶೇ.38.8 ಮತಗಳನ್ನು ಗಳಿಸಿದೆ. ಕೇವಲ ಶೇ.1.5 ರಷ್ಟು ಮತಗಳನ್ನು ಕಾಂಗ್ರೆಸ್ ಹೆಚ್ಚು ಪಡೆದಿದೆ. ಅಂದರೆ ಬಿಜೆಪಿಯ ಮತಗಳಿಕೆಯಲ್ಲಿ ಭಾರೀ ಇಳಿಕೆಯೇನೂ ಸಂಭವಿಸಿಲ್ಲ. ಇಲ್ಲಿ ನೋಟಾ ಮತಗಳು ಶೇ.1.3 ಆಗಿದೆ. ಮಿಜೋರಾಂ ನಲ್ಲಿ ಕಾಂಗ್ರೆಸ್ ಶೇ.30.2 ಮತಗಳನ್ನು ಪಡೆದಿದ್ದರೆ ಮಿಜೋ ನ್ಯಾಷನಲ್ ಫ್ರಂಟ್ ಶೇ.37.6 ಮತಗಳನ್ನು ಪಡೆದು ಜಯಗಳಿಸಿದೆ. ಬಿಜೆಪಿ ಇಲ್ಲಿ ಕೇವಲ ಶೇ.8 ಮತಗಳನ್ನು ಮಾತ್ರ ಪಡೆದಿದೆ. ತೆಲಂಗಾಣದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್ ಶೇ.28.4 ಮತಗಳನ್ನು ಪಡೆದಿದ್ದರೆ ಬಿಜೆಪಿ ಶೇ.7 ರಷ್ಟು ಮತಗಳನ್ನು ಪಡೆದಿದೆ. ಇಲ್ಲಿ ಚಂದ್ರಬಾಬು ನಾಯ್ಡುವಿನ ತೆಲುಗುದೇಶಂ ಪಕ್ಷ ಕೇವಲ ಶೇ.3 ಮತಗಳನ್ನು ಮಾತ್ರ ಪಡೆದಿದೆ. ತೆಲಂಗಾಣ ರಾಷ್ಟ್ರ ಸಮಿತಿ ಶೇ.46.9 ಮತಗಳನ್ನು ಪಡೆದು ಜಯಗಳಿಸಿದೆ. ಆದರೆ ಕೇವಲ ಚುನಾವಣಾ ಫಲಿತಾಂಶಗಳಿಂದಲೇ ದೇಶದ ಜನಸಾಮಾನ್ಯರ ರಕ್ಷಣೆ ಹಾಗೂ ಭವಿಷ್ಯ ನಿರ್ಮಾಣವಾಗುತ್ತದೆಂದು ನಂಬಿದರೆ ಅದು ತಪ್ಪಾಗುತ್ತದೆ.

ಮೋದಿಯನ್ನು ಮೊದಲಿನಿಂದಲೂ ಭಾರೀ ಭರವಸೆಯೊಂದಿಗೆ ಕುರುಡಾಗಿ ಬೆಂಬಲಿಸುತ್ತಾ ಬಂದಿದ್ದ ಮಧ್ಯಮ ವರ್ಗಕ್ಕೆ ಮೋದಿ ಬಗ್ಗೆ ಭಾರೀ ಭ್ರಮನಿರಸನವಾಗಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತಿದೆ. ಅದರಲ್ಲೂ ನಗರ ಮಧ್ಯಮ ವರ್ಗ ಮೋದಿಯನ್ನು ಭವಿಷ್ಯದ ಆಪತ್ಬಾಂಧವ ಎನ್ನುವಂತೆ ನಂಬುತ್ತಾ ಬಂದಿದ್ದಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿಯ ಮುಖ್ಯ ಪ್ರಚಾರಕರಾಗಿದ್ದರು. ಇವರಲ್ಲಿ ಹಿಂದಿನ ಸರಕಾರಗಳು ಮಾಡಿಟ್ಟಿರುವ ದೇಶದ ಅಧ್ವಾನ ಸ್ಥಿತಿಗಳಿಂದ ರೋಸಿಹೋಗಿದ್ದವರೇ ಹೆಚ್ಚಿನವರು. ಕಾಂಗ್ರೆಸ್ ಪಕ್ಷ ದೇಶವನ್ನು ಅತೀ ಹೆಚ್ಚು ಕಾಲ ಆಳುತ್ತಾ ಬಂದಿದ್ದರಿಂದ ಸಹಜವಾಗಿ ಕಾಂಗ್ರೆಸ್ ಆಡಳಿತವನ್ನು ಈ ಮಧ್ಯಮ ವರ್ಗ ವಿರೋಧಿಸಲು ತೊಡಗಿತ್ತು. ಆದರೆ ಈ ವರ್ಗ ರಾಜಕೀಯ ಸಕ್ರಿಯತೆಯನ್ನು ತೋರಿಸದೇ ತಟಸ್ಥವಾಗಿದ್ದುದೇ ಹೆಚ್ಚು. ತಮ್ಮ ಭವಿಷ್ಯ ಉಜ್ವಲವಾಗಬೇಕಾದರೆ ತಮ್ಮ ತಮ್ಮ ರಾಜಕೀಯ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂಬ ಗ್ರಹಿಕೆಯಿಂದ ಈ ವರ್ಗ ಕಾರ್ಯನಿರ್ವಹಿಸಲು ತೊಡಗದೇ ಇರುವುದರಿಂದ ಮೋದಿಯಂತಹ ಕೆಲವು ವ್ಯಕ್ತಿಗಳು ಇಲ್ಲವೇ ಬ್ರಾಹ್ಮಣಶಾಹಿ ಶಕ್ತಿಗಳು ಅವರನ್ನು ದುರುಪಯೋಗ ಪಡಿಸಲು ಸಾಧ್ಯವಾಗಿದೆ.ಯಾರಾದರೂ ವ್ಯಕ್ತಿ ಬಂದು ಪವಾಡ ಮಾಡಿ ತಮ್ಮ ಬದುಕುಗಳನ್ನು ರಕ್ಷಿಸಬೇಕೆಂದು ಈ ವರ್ಗದ ಸಾಮಾನ್ಯವಾದ ಬಯಕೆಯಾಗಿದೆ.
ಪಂಚ ರಾಜ್ಯಗಳಲ್ಲಿ ನಡೆದ ಈ ಚುನಾವಣೆಯನ್ನು ಮೋದಿ ದುರಾಡಳಿತವನ್ನು ಕೊನೆಗಾಣಿಸುವ ದಿಕ್ಸೂಚಿಯೆಂದು ಮೋದಿ ಆಡಳಿತದಿಂದ ರೋಸಿ ಹೋಗಿದ್ದ ಜನರು ಪರಿಗಣಿಸಿದ್ದರು. ಪ್ರಗತಿಪರ ಶಕ್ತಿಗಳು ಕೂಡ ಮೋದಿಗೆ ಸೋಲಾಗಬೇಕೆಂದು ಬಯಸಿದ್ದರು. ಆದರೆ ಬಹುತೇಕವಾಗಿ ಪರ್ಯಾಯವಾಗಿ ಇವರೆಲ್ಲರೂ ಬಯಸಿದ್ದು ಕಾಂಗ್ರೆಸ್ ಪಕ್ಷವನ್ನು ಇಲ್ಲವೇ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರವನ್ನು.

 ಆದರೆ ಕಾಂಗ್ರೆಸ್ ತಾನು ಬಿಜೆಪಿಗಿಂತಲೂಅಪ್ಪಟ ಹಿಂದೂವಾದಿಯೆಂದೂ, ರಾಹುಲ್ ಗಾಂಧಿ ಬ್ರಾಹ್ಮಣನೆಂದೂ, ಜನಿವಾರಧಾರಿಯೆಂದೂ, ರಾಮನು ನಡೆದಾಡಿದ ಸ್ಥಳಗಳನ್ನು ಪೂಜನೀಯ ಹಾಗೂ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುತ್ತೇವೆ, ದನ ಹಾಗೂ ದನದ ಮೂತ್ರವನ್ನು ಶ್ರೇಷ್ಠವೆಂದು ಪರಿಗಣಿಸುತ್ತೇವೆ ಎಂಬಿತ್ಯಾದಿ ಬಹಿರಂಗವಾಗಿ ಬಿಂಬಿಸಿಕೊಂಡು ಚುನಾವಣಾ ಪ್ರಚಾರ ಮಾಡಿತ್ತು. ಇದು ನಾವು ಗಂಭೀರವಾಗಿ ಯೋಚಿಸಬೇಕಾದ ವಿಚಾರ. ಅಲ್ಲದೇ ಈ ದೇಶದ ಶೋಷಿತರ ಬಗ್ಗೆಯಾಗಲಿ, ಅಲ್ಪಸಂಖ್ಯಾತರ ಬಗ್ಗೆಯಾಗಲೀ, ಕೋಮುವಾದಿ ದಾಳಿಗಳ ಬಗ್ಗೆಯಾಗಲಿ ಒಂದು ಶಬ್ದವನ್ನೂ ಆಡದೇ ಚುನಾವಣಾ ಪ್ರಚಾರ ನಡೆಸಿತ್ತು. ಅಲ್ಪಸಂಖ್ಯಾತರ ಓಟುಗಳನ್ನು ಪಡೆಯಲು ಹಿಂಬಾಗಿಲ ಪ್ರಚಾರ ನಡೆಸಿತ್ತು. ರಫೇಲ್ ಹಗರಣವನ್ನು ನಾಮಮಾತ್ರಕ್ಕೆ ಪ್ರಸ್ತಾಪ ಮಾಡುತ್ತಾ ಬಂದಿತ್ತು. ಕುಸಿಯುತ್ತಿರುವ ದೇಶದ ಆರ್ಥಿಕತೆಯನ್ನು ಸರಿಯಾಗಿಸುವುದರ ಬಗ್ಗೆಯಾಗಲಿ, ರೈತಾಪಿಗಳು ಎದುರಿಸುತ್ತಿರುವ ಬಿಕ್ಕಟ್ಟುಗಳ ಪರಿಹಾರಕ್ಕೆ ಸಾಲಮನ್ನ್ನಾ ಹೊರತುಪಡಿಸಿದಂತೆ ಬೇರೇನನ್ನೂ ಮುಂದಿಡಲಿಲ್ಲ. ಕೈಗಾರಿಕೆಗಳ ಕುಸಿತಗಳನ್ನು ತಡೆಯುವ ಬಗ್ಗೆಯಾಗಲಿ ಕಾಂಗ್ರೆಸ್ ನಿರ್ದಿಷ್ಟವಾಗಿ ಏನನ್ನೂ ಹೇಳಿರಲಿಲ್ಲ. ಅಂದರೆ ಮೋದಿಯ ನೀತಿಗಳನ್ನೇ ಕಾಂಗ್ರೆಸ್ ಕೂಡ ಮುಂದುವರಿಸಲಿದೆ ಎಂದೇ ಇದರ ಅರ್ಥವಲ್ಲವೇ?
 

ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ, ರಫೇಲ್ ಹಗರಣಗಳ ಪ್ರಥಮ ರೂವಾರಿಗಳು ತಮ್ಮ ನೇತೃತ್ವದ ಹಿಂದಿನ ಯುಪಿಎ ಸರಕಾರ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಚೆನ್ನಾಗಿ ಗೊತ್ತಿರುವ ವಿಚಾರವೇ ತಾನೆ. ಯಾಕೆಂದರೆ 2012ರಲ್ಲಿ ಮೊದಲಿಗೆ ಫ್ರಾನ್ಸ್‌ನ ಡಸ್ಸಾಲ್ಟ್ ರಫೇಲ್ ಕಂಪೆನಿಯೊಂದಿಗೆ ಒಪ್ಪಂದ ಮಾಡಿದ್ದು ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರಕಾರ. ಮೋದಿ ಬಂದ ನಂತರ ಹಳೇ ಒಪ್ಪಂದದ ಬದಲಿಗೆ ಅದರ ಬೆಲೆಯನ್ನು ನೂರಾರು ಪಟ್ಟು ಹೆಚ್ಚಿಸಿಕೊಂಡು ಹೊಸ ಒಪ್ಪಂದವನ್ನು ಮಾಡಿ ಮೊದಲಿನ ಭಾರತದ ಎಚ್‌ಎಎಲ್‌ಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಕುರಿತಾದ ವಿಚಾರವನ್ನು ಕೈಬಿಡಲಾಯಿತು. ಇದು ಹೊಸ ವಿವಾದವನ್ನು ಹುಟ್ಟುಹಾಕಿತು. ಅಲ್ಲದೇ ಕಲ್ಲಿದ್ದಲು ಹಗರಣದ ತನಿಖೆ ಹಳ್ಳಹಿಡಿಸಿ ಅದಕ್ಕೆ ಕಾರಣರಾದವರನ್ನು ಇದೇ ಮೋದಿ ಸರಕಾರ ಬಚಾವು ಮಾಡಿದ್ದನ್ನು ನಾವು ಗಮನಿಸಬೇಕು. ಮೋದಿ ಮೊದಲಿನಿಂದಲೂ ಹಿಂದಿನ ಮನಮೋಹನ್ ಸಿಂಗ್ ಸರಕಾರದ ಮೇಲೆ ಆರೋಪಿಸುತ್ತಾ ಬಂದಿದ್ದ ಯಾವುದೇ ಹಗರಣಗಳ ಬಗ್ಗೆಯೂ ಗಂಭೀರವಾದ ತನಿಖೆ ನಡೆಸಿ ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳದೇ ಹೋಗಿದ್ದು ಏನೋ ಕಾಕತಾಳೀಯವಾಗಿ ನಡೆಯಿತು ಎಂದುಕೊಳ್ಳಲು ಸಾಧ್ಯವೇ? ಮೋದಿ ನೋಟು ಅಮಾನ್ಯೀಕರಣ ಮಾಡಿದಾಗಲೂ ‘ನೋಟು ಅಮಾನ್ಯೀಕರಣ ಮಾಡಿದ್ದು ಒಳ್ಳೆಯದೇ; ಆದರೆ ಒಂದಷ್ಟು ಕಾಲಾವಕಾಶ ನೀಡಬೇಕಿತ್ತು’ ಎಂದೆಲ್ಲಾ ರಾಗ ಎಳೆಯುತ್ತಾ ಕಾಂಗ್ರೆಸ್ ಪಕ್ಷ ಆರಂಭದಲ್ಲಿ ಒಂದು ರೀತಿಯಲ್ಲಿ ಅದನ್ನು ಸಮರ್ಥಿಸಿತ್ತು. ಇದು ಬಹುತೇಕ ರಾಜಕೀಯ ಪಕ್ಷಗಳ ಕತೆಯಾಗಿತ್ತು. ಅದರ ಗಂಭೀರ ಪರಿಣಾಮಗಳು ಬಯಲಾದ ನಂತರವೂ ಕೂಡ ಬಲವಾದ ಧ್ವನಿಯೆತ್ತಿ ಪ್ರತಿಭಟನೆಗಳನ್ನು ಸಂಘಟಿಸಿರಲಿಲ್ಲವೆನ್ನುವುದನ್ನೂ ಇಲ್ಲಿ ಗಮನಿಸಬೇಕು. ಸಂಸತ್ತಿನಲ್ಲಿ ಮಾತ್ರ ಒಂದಷ್ಟು ಗದ್ದಲ ಎಬ್ಬಿಸಿತ್ತು ಅಷ್ಟೇ. ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮೊದಲಾದವರು ಲಕ್ಷಾಂತರ ಕೋಟಿ ರೂಪಾಯಿಗಳ ಸಾಲಗಳನ್ನು ಮರುಪಾವತಿಸದೆ ಬ್ಯಾಂಕುಗಳು ಎನ್‌ಪಿಎ ಸುಳಿಯಲ್ಲಿ ಸಿಲುಕುವಂತಾಗಿದ್ದುಕಾಂಗ್ರೆಸ್ ಆಡಳಿತದ ಅವಧಿಯಲ್ಲೇ. ಅದು ಮೋದಿ ಬಂದ ನಂತರವೂ ಮತ್ತಷ್ಟು ಮುಂದುವರಿದಿತ್ತು. ಅದೆಲ್ಲದರ ಪರಿಣಾಮವೇ ನೋಟು ರದ್ದತಿ ಘೋಷಿಸಿದ್ದು. ನೋಟು ರದ್ದತಿಯ ಉದ್ದೇಶ ಕಾರ್ಪೊರೇಟುಗಳಿಗೆ ಬಂಡವಾಳ ಪೂರೈಕೆಯನ್ನು ನಿರಾತಂಕಗೊಳಿಸಿ ಬಡವರ ಮಧ್ಯಮವರ್ಗದವರ ಜೇಬುಗಳನ್ನು ಖಾಲಿಗೊಳಿಸುವು ದಾಗಿತ್ತು. ಅದನ್ನು ಜನಸಾಮಾನ್ಯರನ್ನು ನಂಬಿಸಿಯೇ ಅವರು ಯಶಸ್ವಿಯಾಗಿ ಮಾಡಿ ಕಣ್ಣಿಗೆ ಮಂಕುಬೂದಿ ಎರಚಿಬಿಟ್ಟರು. ಅದರ ಒಳಮರ್ಮವನ್ನು ಜನಸಾಮಾನ್ಯರು ಅರಿಯಲು ಸ್ವಲ್ಪಸಮಯ ತೆಗೆದುಕೊಂಡಿತ್ತು.
ಈ ಎಲ್ಲಾ ಅಂಶಗಳನ್ನು ಮರೆಮಾಚಿ ಕುರುಡಾಗಿ ಬಿಜೆಪಿ ಇಲ್ಲವೇ ಮೋದಿ ಬದಲಿಗೆ ಕಾಂಗ್ರೆಸ್ ಇಲ್ಲವೇ ರಾಹುಲ್ ಗಾಂಧಿ ಅಧಿಕಾರಕ್ಕೇರಿದರೆ ಕೋಮುವಾದಿ ಮತ್ತು ಜಾತೀವಾದಿ ದಾಳಿಗಳು ನಿಲ್ಲಬಹುದು, ಪ್ರಜಾತಾಂತ್ರಿಕತೆ ಉಳಿಯತ್ತದೆ, ಸಂವಿಧಾನದ ರಕ್ಷಣೆಯಾಗುತ್ತದೆ ಎಂಬ ಭ್ರಮೆಯನ್ನು ಬೆಳೆಸಿಕೊಳ್ಳುವುದು ಸರಿಯಾದ ರಾಜಕೀಯ ನಿಲುವಾಗಲು ಹೇಗೆ ಸಾಧ್ಯ. ಸಿಖ್ ನರಮೇಧ ಸಂಘಟಿಸಿದ ಪಾಲುದಾರನೆಂಬ ಹೆಸರು ಗಳಿಸಿರುವ ಕಮಲ್ ನಾಥ್ ರನ್ನು ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕಾಂಗ್ರೆಸ್ ಕೂರಿಸಿದೆ. ಈ ನಡೆಯನ್ನು ಬಿಜೆಪಿ ಮಾಡಿದರೆ ಮಾತ್ರ ತಪ್ಪು; ಕಾಂಗ್ರೆಸ್ ಮಾಡಿದರೆ ಅದು ಸರಿ ಅನ್ನುವ ರೀತಿಯಲ್ಲಿ ನೋಡಿದರೆ ಅದು ‘ಅಳಿಯ ಅಲ್ಲ ಮಗಳ ಗಂಡ’ ಎಂದು ಹೇಳಿದಂತೆ ಅಲ್ಲವೇ? ಮೋದಿ ವಿಚಾರದಲ್ಲಿ ಹೇಗೆಲ್ಲಾ ಕುರುಡಾಗಿ ಸಮರ್ಥನೆಗಳನ್ನು ಮಾಡಲಾಗುತ್ತಿತ್ತೋ ಈಗ ರಾಹುಲ್ ಗಾಂಧಿ ವಿಚಾರದಲ್ಲಿ ಆ ಮಟ್ಟದಲ್ಲಿ ಅಲ್ಲದಿದ್ದರೂ ಅದೇ ರೀತಿಯ ಸಮರ್ಥನೆಗಳು ಹೊರಬೀಳಲಾರಂಭಿಸಿವೆ. ‘ಅಜ್ಜಿಯನ್ನೂ, ತಂದೆಯನ್ನೂ ದೇಶಕ್ಕಾಗಿ ಕಳೆದುಕೊಂಡ ಅನಾಥ, ಪಾಪ ರಾಹುಲ್ ಹೀಗೆಲ್ಲಾ ಹೇಳುತ್ತಾ ಭಾವನಾತ್ಮಕ ಜಾಲದಲ್ಲಿ ಜನಸಾಮಾನ್ಯರನ್ನು ಸಿಲುಕಿಸುವ ಯತ್ನಗಳು ಶುರುವಾಗಿವೆ. ಕೆಲವು ಪ್ರಗತಿಪರರೆಂದು ಗುರ್ತಿಸಿಕೊಂಡಿರುವ ವಲಯಗಳಿಂದಲೂ ಇದು ಬರಲಾರಂಭಿಸಿದೆ. ಇದು ಸರಿಯಾದ ರಾಜಕೀಯ ಸಕ್ರಿಯತೆಯಾಗದು. ಜನಸಾಮಾನ್ಯರನ್ನು ಕುರುಡು ಸಮರ್ಥನೆಯೆಡೆಗೆ ತಳ್ಳುವ ಅಪಾಯಕಾರಿ ಕಾರ್ಯವಾಗುತ್ತದೆ.

Writer - ನಂದಕುಮಾರ್ ಕೆ.ಎನ್

contributor

Editor - ನಂದಕುಮಾರ್ ಕೆ.ಎನ್

contributor

Similar News

ಜಗದಗಲ
ಜಗ ದಗಲ