ಭಾರತಕ್ಕೆ ಬೇಕಿದೆ ಶೂನ್ಯ ಆಯವ್ಯಯ ಚುನಾವಣೆಗಳು

Update: 2018-12-17 10:59 GMT

ವರ್ಷವಿಡಿ ಒಂದಲ್ಲಾ ಒಂದು ಹಂತದ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಚುನಾವಣೆಯ ಖರ್ಚಿಗೆ ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತದೆ ಎನ್ನುವ ಪ್ರಶ್ನೆ ಯಾರಿಗೂ ಕಾಡಲಿಕ್ಕಿಲ್ಲ. ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ಮುಂದಿನ ಐದು ವರ್ಷಗಳಲ್ಲಿ ಜನರಿಂದಲೇ ಲೂಟಿಯಾಗಲಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಪ್ರಸ್ತುತ ಭಾರತದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸಾಧನೆ ಮಾಡಲು ಗುರಿಗಳನ್ನು ಹಾಕಿಕೊಂಡಿರುತ್ತಾರೆ. ಕೆಲವೊಮ್ಮೆ ತಂದೆ ತಾಯಂದಿರು ತಮ್ಮ ಮಕ್ಕಳ ಸಾಧನೆಗೆ ಗುರಿಗಳನ್ನು ರೂಪಿಸುವುದು ಸರ್ವೇ ಸಾಮಾನ್ಯ. ವಿದ್ಯಾರ್ಥಿಗಳಿಗೆ ನಿಮ್ಮ ಜೀವನದ ಗುರಿ ಏನು, ಏನು ಆಗಲು ಇಚ್ಛಿಸುವಿರಿ ಎನ್ನುವ ಪ್ರಶ್ನೆಗಳನ್ನು ಕೇಳಿದರೆ, ಸಾಮಾನ್ಯವಾಗಿ ನಾನು ಡಾಕ್ಟರ್, ಇಂಜಿನಿಯರ್, ಟೀಚರ್, ಲಾಯರ್ ಆಗುವೆನೆಂದು ಹೇಳುವುದೇ ಹೆಚ್ಚು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯಲ್ಲೂ ನಾಯಕತ್ವದ ಗುಣ ಬೆಳೆಸುವ ಅವಕಾಶ ಕಲ್ಪಿಸಿದರೂ ನಾನು ಒಬ್ಬ ನಾಯಕನಾಗುತ್ತೇನೆ ಅದರಲ್ಲೂ ರಾಜಕೀಯ ನಾಯಕನಾಗುತ್ತೇನೆ ಎನ್ನುವ ಇಚ್ಛೆಯನ್ನು ಹಾಗೂ ಅದನ್ನೇ ಜೀವನದ ಗುರಿಯನ್ನಾಗಿಸಿ ಸಾಧನೆ ಮಾಡಲು ಹೊರಟಿರುವ ಯುವಕರು ಸಿಗುವುದು ಬಹಳ ವಿರಳ.
ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಉತ್ತಮ ನಾಯಕತ್ವದ ಕೌಶಲ ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಎಷ್ಟೊ ಯುವಕರು ಕೂಡ ರಾಜಕೀಯ ನಾಯಕತ್ವಕ್ಕೆ ಹಂಬಲಿಸದಿರುವುದು ವಿಷಾದನೀಯವೇ ಸರಿ. ವಿದ್ಯಾವಂತ ಯುವಶಕ್ತಿ ಯಾಕೆ ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಲೋಚಿಸಿದರೆ ಹೊಳೆಯುವ ಒಂದೇ ಉತ್ತರವೆಂದರೆ, ಹಣವಿಲ್ಲ ಎನ್ನುವುದು. ಹಾಗಾದರೇ ಹಣಬಲವಿಲ್ಲದೆ ರಾಜಕೀಯದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲವೇ?.
ಇತ್ತೀಚಿನ ರಾಜಕೀಯದ ವಿದ್ಯಮಾನವನ್ನು ಅವಲೋಕಿಸುವುದಾದರೆ, ಅದು ಸರಿಯೆನಿಸುತ್ತದೆ. ಓಟಿಗೆ ನೋಟು ಎನ್ನುವ ಮಾತುಗಳು ಪ್ರತಿ ಚುನಾವಣೆಯಲ್ಲೂ ಕೇಳಿ ಬರುತ್ತದೆೆ. ಇದಕ್ಕೆ ಪೂರಕವೆಂಬಂತೆ ಚುನಾವಣೆಯ ಸಮಯದಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಚುನಾವಣೆಯಲ್ಲಿ ಗೆದ್ದ ಪ್ರತಿನಿಧಿಗಳೇ ಕೋಟ್ಯಂತರ ರೂಪಾಯಿ ಖರ್ಚಾಗಿರುವ ಹೇಳಿಕೆಯನ್ನೂ ನೀಡಿದ್ದುಂಟು.
  ವರ್ಷವಿಡಿ ಒಂದಲ್ಲಾ ಒಂದು ಹಂತದ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಚುನಾವಣೆಯ ಖರ್ಚಿಗೆ ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತದೆ ಎನ್ನುವ ಪ್ರಶ್ನೆ ಯಾರಿಗೂ ಕಾಡಲಿಕ್ಕಿಲ್ಲ, ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ಮುಂದಿನ ಐದು ವರ್ಷಗಳಲ್ಲಿ ಜನರಿಂದಲೇ ಲೂಟಿಯಾಗಲಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರಕಾರವೇ ಪ್ರಜಾಪ್ರಭುತ್ವ. ಇಂತಹ ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಬಾಳು ಹಾಗೂ ಸರ್ವರಿಗೂ ಸಮಪಾಲು. ಆದರೆ ಸರ್ವರಿಗೂ ಸಮಪಾಲು ಸಾಧ್ಯವಾಗುತ್ತಿರುವುದು ಚುನಾವಣೆಗಳ ಮತದಾನದಲ್ಲಿ ಮಾತ್ರ. ಜನರು ತಮ್ಮ ಮತಗಳನ್ನು ಹೇಗೆ ರಾಜಕೀಯ ಪಕ್ಷ ಮತ್ತು ಮುಖಂಡರಿಗೆ ಮಾರಿಕೊಳ್ಳುತ್ತಿದ್ದಾರೆ ಮತ್ತು ಅದರಿಂದಾಗುವ ಪರಿಣಾಮಗಳನ್ನು ನಾವೀಗಾಗಲೇ ಅನುಭವಿಸುತ್ತಿದ್ದೇವೆ.

ಭಾರತದಲ್ಲಿ ರಾಜಕಾರಣಿಗಳು ಶ್ರೀಮಂತರು, ಆದರೆ ಅವರನ್ನು ಆಯ್ಕೆ ಮಾಡಿ ಕಳುಹಿಸುವ ಜನ ಬಡವರು. ಭಾರತದಲ್ಲಿ ಇಂದಿಗೂ ಬಡತನ ರೇಖೆಗಿಂತ ಕೆಳಗೆ ಕೋಟ್ಯಂತರ ಜನ ಬದುಕುತ್ತಿದ್ದಾರೆ, ಗ್ರಾಮೀಣ ಭಾಗದ ಕನಿಷ್ಠ ಐದು ಜನರಿರುವ ದಲಿತ ಕುಟುಂಬಗಳು ದಿನ ಒಂದಕ್ಕೆ 69ರೂಪಾಯಿಗಳಲ್ಲಿ ಜೀವನ ನಡೆಸುತ್ತಿರುವುದು ಅಂಕಿಅಂಶಗಳಿಂದ ತಿಳಿಯುತ್ತದೆ. ಆದರೆ ಅದಕ್ಕೆ ತದ್ವಿರುದ್ಧವಾಗಿ ರಾಜಕಾರಣಿಗಳು ತಮ್ಮ ಆದಾಯದಲ್ಲಿ ಗಣನೀಯ ಬೆಳವಣಿಗೆ ಾಣುತ್ತಿರುವುದು ಆಶ್ಚರ್ಯವೇ ಸರಿ.
ಚುನಾವಣಾ ಆಯೋಗದ ವರದಿ ಪ್ರಕಾರ, 1971 ರಲ್ಲಿ ರಾಜಕಾರಣಿಗಳ ಆರ್ಥಿಕ ಅಭಿವೃದ್ಧಿಯು ಶೇ.17-19ರಷ್ಟಿದ್ದರೆ 1991ರಲ್ಲಿ ಶೇ.50-75ರಷ್ಟಾಯಿತು, 2001ರಲ್ಲಿ ಶೇ.100-200ರಷ್ಟಾಗಿ ಇತ್ತೀಚಿನ ವರದಿ ಪ್ರಕಾರ ಅದು ಶೇ.500ರಷ್ಟು ಹೆಚ್ಚಾಗಿರುವುದು ಕಂಡು ಬಂದಿದೆ. ಅಂದರೆ, ಹಿಂದಿನ 50 ವರ್ಷಗಳಲ್ಲಿ ರಾಜಕಾರಣಿಗಳ ಆಸ್ತಿಯು ಸುಮಾರು ಶೇ.500ರಷ್ಟು ಹೆಚ್ಚಾಗಿದೆ. ಬೇರೆ ಇನ್ಯಾವುದೇ ಉದ್ಯೋಗಗಳಲ್ಲಿ ಇಷ್ಟೊಂದು ಪ್ರಮಾಣದ ಬೆಳವಣಿಗೆ ಕಂಡು ಬಂದಿಲ್ಲ. ಹಾಗಾಗಿ ರಾಜಕೀಯವನ್ನು ಒಂದು ಉದ್ಯೋಗವಾಗಿ ಪರಿಗಣಿಸಲಾಗುತ್ತಿದೆ. ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು 1952ರಲ್ಲಿಯೇ ಜವಾಹರಲಾಲ್ ನೆಹರೂ ಅವರು ಭಾರತದಲ್ಲಿ ಯಾಕೆ ಶೂನ್ಯ ಆಯವ್ಯಯ ಚುನಾವಣೆಗಳು ನಡೆಯಬಾರದು ಎಂದು ಪ್ರಶ್ನಿಸಿರುವುದು ಇಂದಿಗೂ ಸೂಕ್ತ ಎನಿಸುತ್ತದೆ ಮತ್ತು ಈಗ ಅದರ ಆವಶ್ಯಕತೆ ಮತ್ತಷ್ಟು ಪ್ರಖರವಾಗಿ ಕಾಣಿಸುತ್ತಿದೆ.


ಭಾರತದಲ್ಲಿ ಹೆಚ್ಚಿನ ಉದ್ಯೋಗಗಳು ಚುನಾವಣೆ ಆಧಾರಿತವಾಗಿವೆ. ಚುನಾವಣೆ ಸಮಯದಲ್ಲಿ ಸಾಕಷ್ಟು ಜನರಿಗೆ ತಾತ್ಕಾಲಿಕ ಉದ್ಯೋಗಗಳು ದೊರೆಯುತ್ತವೆ. ಆ ಸಮಯದಲ್ಲಿ ರಾಜಕಾರಣಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತದೆ ಮತ್ತು ಖರ್ಚು ಮಾಡಿದ ಆ ಹಣ ಮತ್ತೆ ಹೇಗೆ ಯಾವ ಮೂಲಗಳಿಂದ ಪಡೆದುಕೊಳ್ಳುತ್ತಾರೆ. ಎನ್ನುವುದು ಎಲ್ಲರೂ ಯೋಚಿಸಬೇಕಾದ ವಿಷಯ. ಬಂಡವಾಳಶಾಹಿಗಳು, ದಾನಿಗಳು ರಾಜಕೀಯ ಪಕ್ಷಗಳಿಗೆ ಏಕೆ ಹಣ ನೀಡುತ್ತಾರೆ, ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ಯಾವ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ಎನ್ನುವುದನ್ನು ಸದ್ಯದ ಪರಿಸ್ಥಿತಿಯಲ್ಲಿ ನಾವು ಮನಗಾಣಬಹುದು.
ರಾಜಕೀಯ ಮತ್ತು ಹಣ ಒಂದನ್ನು ಬಿಟ್ಟು ಇನ್ನೊಂದಿಲ್ಲ. ಹಾಗಾಗಿ ಹಣ ರಾಜಕೀಯದಲ್ಲಿ ಭ್ರಷ್ಟತೆಯನ್ನು ಹುಟ್ಟು ಹಾಕಿದೆ. ಅದು ಈಗ ಎಲ್ಲಾ ಸಂಸ್ಥೆಗಳಿಗೂ ಹಬ್ಬಿಕೊಂಡಿದೆ. ಇದನ್ನು ಬದಲಾಯಿಸದೇ ಭಾರತಕ್ಕೆ ಭವಿಷ್ಯವಿಲ್ಲ, ಜನರು ಬದಲಾದಾಗ ಮಾತ್ರ ನಾಯಕರೂ ಬದಲಾಗುತ್ತಾರೆ, ಜನರು ಉತ್ತಮರಿದ್ದಾಗ ನಾಯಕರೂ ಉತ್ತಮರಾಗಿರಲು ಸಾಧ್ಯ. ಪ್ರಜಾಪ್ರಭುತ್ವವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ದೊಂಬರಾಟ ನಡೆಸುತ್ತಿರುವ ಎಲ್ಲರಿಗೂ ಹಣ ರಹಿತ ಚುನಾವಣೆ ಸರಿಯಾದ ಮಾರ್ಗ ತೋರಬಲ್ಲದು. ಇದು ರಾಜಕೀಯ ವ್ಯವಸ್ಥೆಯನ್ನು ತಿದ್ದಿ ಪ್ರಜಾಪ್ರಭುತ್ವವನ್ನು ಮರುಸೃಷ್ಟಿಗೊಳಿಸುವ ಪ್ರಯತ್ನವಾಗಿದೆ.
ಪ್ಲೆಟೋ ಹೇಳುವ ಹಾಗೆ ರಾಜಕೀಯದಲ್ಲಿ ಭಾಗವಹಿಸಲು ನಿರಾಕರಿಸುವ ದಂಡವೆಂದರೆ. ನಿನಗಿಂತ ಕೆಳದರ್ಜೆಯ ವ್ಯಕ್ತಿಗಳಿಂದ ನೀನು ಆಳಲ್ಪಡುವುದು. ರಶ್ಯನ್ ನಾಟಕಕಾರ ಬರ್ಟಾಲ್ಟ ಬ್ರೆಟ್ಚನ ಪ್ರಕಾರ ರಾಜಕೀಯವು ಮನಕುಲದ ನಿರ್ವಹಣೆಯಾಗಿದೆ. ಹಾಗಾಗಿ ರಾಜಕೀಯ ಅನಕ್ಷರಸ್ಥನೇ ನಿಜವಾದ ಅತೀ ಕೆಳಮಟ್ಟದ ಅನಕ್ಷರಸ್ಥ ಎಂದು ಹೇಳಿದ್ದಾನೆ. ಆದ್ದರಿಂದ ಎಲ್ಲಾ ವಿದ್ಯಾವಂತರು ರಾಜಕೀಯ ಆಸಕ್ತಿಯನ್ನು ಹೊಂದುವುದು ಮತ್ತು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸುವುದು ಅನಿವಾರ್ಯವಾಗಿದೆ.
ಆದ್ದರಿಂದ ಚುನಾವಣಾ ಆಯೋಗ ಚುನಾವಣೆಗಳನ್ನು ನಡೆಸುವುದರ ಜೊತೆಗೆ ಪ್ರತೀ ಅಭ್ಯರ್ಥಿಯ ಪ್ರಚಾರ ಕೂಡ ಸರಕಾರದಿಂದಲೇ ನಿಗದಿ ಪಡಿಸಿ ಖರ್ಚು ಮಾಡುವುದು ಸೂಕ್ತವೆನಿಸುತ್ತದೆ. ಇದರಲ್ಲಿ ಯಾವುದೇ ಪಕ್ಷದ ಯಾವುದೇ ಅಭ್ಯರ್ಥಿಯ ಹಸ್ತಕ್ಷೇಪವಿರಬಾರದು. ಆಗ ಖರ್ಚು ಮಾಡುವ ಪ್ರಮೆಯವೇ ಅಭ್ಯರ್ಥಿಗಳಿಗೆ ಬರದೆ ಹಣ ರಹಿತ ಚುನಾವಣೆಗಳನ್ನು ಮಾಡಲು ಸಾಧ್ಯವಾಗುವುದು ಹಾಗೂ ಜನಪ್ರತಿನಿಧಿಗಳು ಹಣ ಮಾಡುವ ದಂಧೆಗೆ ಇಂತಿಷ್ಟಾದರೂ ಕಡಿವಾಣ ಹಾಕಬಹುದು.
ಓಟು ಹಾಕಿದ ಜನರು ಧೈರ್ಯದಿಂದ ಜನಪ್ರತಿನಿಧಿಗಳಿಗೆ ಕೆಲಸ ಮಾಡಿಕೊಡಲು ಒತ್ತಾಯಿಸಬಹುದು ಹಾಗೂ ನಿಜವಾದ ಸಮಾಜಸೇವೆಗೈಯುವ ಜನರೂ ರಾಜಕೀಯಕ್ಕೆ ಧುಮುಕಲು ದಾರಿಯಾಗಬಹುದು. ಹಣ ರಹಿತ ರಾಜಕೀಯವು ಎಲ್ಲಾ ಜನರ ನಾಡಿಯಾಗಬಲ್ಲದು ಮತ್ತು ನಿಜವಾದ ಪ್ರಜಾಪ್ರಭುತ್ವದ ಸಾಧನೆಗೆ ನಾಂದಿಹಾಡಬಲ್ಲದು. ಶೂನ್ಯ ಆಯವ್ಯಯ ಚುನಾವಣೆಗಳು ನಡೆದರೆ, ಎಲ್ಲರೂ ರಾಜಕೀಯಕ್ಕೆ ಬರಲು ಆಶಿಸುವರು ಮತ್ತು ಎಲ್ಲಾ ವರ್ಗದವರ ಪ್ರಾತಿನಿಧ್ಯವನ್ನೂ ಸಾಧಿಸಲು ಸಹಕಾರಿಯಾಗುವುದು-ಇದೇ ನಿಜವಾದ ಪ್ರಜಾಪ್ರಭುತ್ವವಲ್ಲವೇ?.
 ಇದರ ಕುರಿತು ಜನರಲ್ಲಿ ಅರಿವು ಮೂಡಿಸುವ ಚರ್ಚೆಗಳು ಏರ್ಪಟ್ಟು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ, ಸಂವಿಧಾನದಲ್ಲಿ ಸೂಕ್ತ ಮಾರ್ಪಾಡುಗಳನ್ನು ತರುವುದರೊಂದಿಗೆ ಇದನ್ನು ಅನುಷ್ಠಾನಗೊಸಿ ಸಾಕಾರಗೊಳಿಸಬಹುದು ಎನ್ನುವುದು ನನ್ನ ಆಶಯ

Writer - ಡಾ.ಜಗನ್ನಾಥ.ಕೆ. ಡಾಂಗೆ

contributor

Editor - ಡಾ.ಜಗನ್ನಾಥ.ಕೆ. ಡಾಂಗೆ

contributor

Similar News

ಜಗದಗಲ
ಜಗ ದಗಲ