ನೀವು ಫೋನ್ ಮರೆತರೆ ನೆನಪಿಸುತ್ತೆ ಈ ಜಾಕೆಟ್ !
ಕೆಲವೊಮ್ಮೆ ನಾವು ನಮ್ಮ ಸ್ಮಾರ್ಟ್‌ಫೋನ್‌ನ್ನು ಮನೆಯಲ್ಲಿಯೇ ಮರೆತು ಹೊರಗೆ ಹೋಗುತ್ತೇವೆ ಅಥವಾ ಜೊತೆಯಲ್ಲಿದ್ದರೂ ಬೇರೆ ಕಡೆ ಹೋಗಿದ್ದಾಗ ಅಲ್ಲಿಯೇ ಮರೆತುಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಸ್ಮಾರ್ಟ್‌ಫೋನ್ ಬಳಸಬೇಕಾದ ತುರ್ತು ಅಗತ್ಯ ಬಿದ್ದರೆ ಒದ್ದಾಡುವಂತಾಗುತ್ತದೆ. ಇಂತಹವರಿಗಾಗಿಯೇ ಈಗ ಹೊಸ ಜಾಕೆಟ್ ಸೃಷ್ಟಿಯಾಗಿದ್ದು, ಅದು ಫೋನ್‌ನ್ನು ಮರೆತಿದ್ದರೆ ಆ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತದೆ.
ಗೂಗಲ್ ಮತ್ತು ಲೆವಿಸ್‌ನ ಕಮ್ಯುಟರ್ ಎಕ್ಸ್ ಜಾಕಾರ್ಡ್ ಜಾಕೆಟ್ ಈಗ ಇನ್ನಷ್ಟು ಸ್ಮಾರ್ಟ್ ಆಗಿದೆ. ಗೂಗಲ್ ಈ ಜಾಕೆಟ್‌ನಲ್ಲಿ ‘ಆಲ್ವೇಸ್ ಟುಗೆದರ್(ಸದಾ ಜೊತೆಯಲ್ಲಿ)’ ಎಂಬ ಹೊಸ ವೈಶಿಷ್ಟವನ್ನು ಪರಿಚಯಿಸಿದ್ದು,ಇದು ಬಳಕೆದಾರರು ತಮ್ಮ ಸ್ಮಾರ್ಟ್‌ಪೋನ್ ಅಥವಾ ಜಾಕೆಟ್‌ನ್ನು ಎಲ್ಲೆಂದರಲ್ಲಿ ಮರೆಯುವುದನ್ನು ತಪ್ಪಿಸುತ್ತದೆ.
‘ಆಲ್ವೇಸ್ ಟುಗೆದರ್’ ಒಂದು ಸ್ವಯಂಚಾಲಿತ ಎಚ್ಚರಿಕೆಯ ವ್ಯವಸ್ಥೆಯಾಗಿದ್ದು ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಜಾಕೆಟ್ ನಡುವಿನ ಅಂತರವನ್ನು ನೀವು ಸೆಟ್ ಮಾಡಿಟ್ಟರೆ,ಈ ಅಂತರ ಇದಕ್ಕಿಂತ ಹೆಚ್ಚಾದಾಗ ಅದು ನಿಮಗೆ ಈ ಬಗ್ಗೆ ನೆನಪಿಸುತ್ತದೆ.
ಈ ವ್ಯವಸ್ಥೆ ಎರಡೂ ವಿಧಗಳಲ್ಲಿ ಕೆಲಸ ಮಾಡುತ್ತದೆ. ನಿಮ್ಮ ಜಾಕೆಟ್ ಮತ್ತು ಸ್ಮಾರ್ಟ್‌ಫೋನ್ ನಡುವಿನ ಅಂತರ ನಿಗದಿತ ಮಿತಿಗಿಂತ ಹೆಚ್ಚಾದಾಗ ನಿಮ್ಮ ಫೋನ್‌ಗೆ ನೋಟಿಫಿಕೇಷನ್ ಬರುತ್ತದೆ ಹಾಗೂ ಜಾಕೆಟ್‌ನ ಟ್ಯಾಗ್ ಮಿನುಗತೊಡಗುತ್ತದೆ ಮತ್ತು ಕಂಪಿಸತೊಡಗುತ್ತದೆ. ಹೀಗೆ ನೀವು ಜಾಕೆಟ್ ಅಥವಾ ಸ್ಮಾರ್ಟ್‌ಫೋನ್ ಪೈಕಿ ಯಾವುದನ್ನೂ ಮರೆತರೂ ನಿಮಗೆ ನೆನಪಿಸುತ್ತದೆ. ಆದರೆ ಈ ಎಲ್ಲ ವೈಶಿಷ್ಟಗಳ ಲಾಭವನ್ನು ಪಡೆಯಲು ನೀವು ಜಾಕಾರ್ಡ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಅದನ್ನು ನಿಮ್ಮ ಸ್ಮಾರ್ಟ್‌ಫೋನ್ ಜೊತೆಗೆ ಸಿಂಕ್ ಮಾಡಬೇಕಾಗುತ್ತದೆ.
ಈ ಜಾಕೆಟ್ ನಿಮಗಾಗಿ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತದೆ. ಅದು ನೀವು ಸಂಗೀತವನ್ನು ಕೇಳಲು ನೆರವಾಗುತ್ತದೆ,ಒಳಬರುವ ಕರೆಗಳು ಮತ್ತು ಮೆಸೇಜ್ ಬಗ್ಗೆ ನಿಮಗೆ ಸೂಚನೆ ನೀಡುತ್ತದೆ. ಇಂತಹ ಹಲವು ಕೆಲಸಗಳನ್ನು ಅದು ನಿರ್ವಹಿಸುತ್ತದೆ. ಎಲ್ಲವೂ ಸ್ಮಾರ್ಟ್ ಆಗಿಯೇ ಇರಬೇಕು ಎನ್ನುವವರಿಗೆ ಈ ಸ್ಮಾರ್ಟ್ ಜಾಕೆಟ್ ಹೇಳಿ ಮಾಡಿಸಿದ್ದಾಗಿದೆ. ಈ ಜಬರ್ದಸ್ತ್ ಜಾಕೆಟ್‌ನ ಬೆಲೆ ಏನಿರಬಹುದು ಎಂಬ ಕುತೂಹಲವೇ? ಹೆಚ್ಚೇನಿಲ್ಲ,ಕೇವಲ 350 ಡಾಲರ್‌ಗಳು ಅಥವಾ ಸುಮಾರು 25,000 ರೂ.ಗಳು! ಆದರೆ ಐವತ್ತರವತ್ತು ಸಾವಿರ ರೂಪಾಯಿಗಳ ಮೊಬೈಲ್ ಬೆಲೆಗಳಿಗೆ ಹೋಲಿಸಿದರೆ ಇದು ಕಡಿಮೆಯೇ ಸೈ.