ಬಸವಳಿದ ಬ್ಯಾಂಕಿಂಗ್ ವ್ಯವಸ್ಥೆಗೆ ಶಕ್ತಿಕಾಂತ್ ಶಕ್ತಿ ತುಂಬುವರೇ?

Update: 2018-12-18 09:10 GMT

  2017ರ ಮೇ ತಿಂಗಳಲ್ಲಿ ಕೇಂದ್ರ ವಿತ್ತ ಸಚಿವಾಲಯವು 1 ರೂ. ಮುಖಬೆಲೆಯ ನೂತನ ನೋಟನ್ನು ಬಿಡುಗಡೆಗೊಳಿಸಿದಾಗ, ಉನ್ನತ ಸರಕಾರಿ ಅಧಿಕಾರಿ ಶಕ್ತಿಕಾಂತ್ ದಾಸ್ ಅವರು ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಂದಿನ ಗವರ್ನರ್ ಆಗಿ ನೇಮಕಗೊಳ್ಳಲಿದ್ದಾರೆಂಬ ಜೋಕ್, ಕೇಂದ್ರ ಸರಕಾರದ ಆಡಳಿತ ಕೇಂದ್ರವಾದ ನಾರ್ತ್ ಬ್ಲಾಕ್‌ನಲ್ಲಿ ಹರಿದಾಡುತ್ತಿತ್ತು.

ಯಾಕೆಂದರೆ ನೂತನ 1 ರೂ. ನೋಟಿನಲ್ಲಿ ಅವರ ಹಸ್ತಾಕ್ಷರವಿತ್ತು. ಸಾಂಪ್ರದಾಯಿಕವಾಗಿ ಆರ್‌ಬಿಐ ಮುಖ್ಯಸ್ಥರು ಈ ನೋಟ್‌ಗೆ ಸಹಿಹಾಕುವವರಾಗಿದ್ದರು.

   ಇಷ್ಟಕ್ಕೂ 1 ರೂ. ಮುಖಬೆಲೆಯ ನೋಟಿನ ವಿಶಿಷ್ಟವಾದ ಇತಿಹಾಸವಿದೆ. ಯಾಕೆಂದರೆ ಈ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಬದಲು ಕೇಂದ್ರ ವಿತ್ತ ಸಚಿವಾಲಯ ಮುದ್ರಿಸಿತ್ತು. ಈ ಎಲ್ಲಾ ನೋಟುಗಳು 2015ರಲ್ಲಿ ವಿತ್ತ ಕಾರ್ಯದರ್ಶಿಯಾಗಿದ್ದ ರಾಜೀವ್ ಮಹರ್ಷಿ ಅಥವಾ 2017ರಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಕಗೊಂಡ ಶಕ್ತಿಕಾಂತ್ ಅವರ ಹಸ್ತಾಕ್ಷರಗಳನ್ನು ಹೊಂದಿತ್ತು.

  2016ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಗದು ಅಮಾನ್ಯತೆಯನ್ನು ಘೋಷಿಸಿದಾಗ ಅದನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮೂಲಕ ಶಕ್ತಿಕಾಂತ್ ದಾಸ್ ಸಾರ್ವಜನಿಕವಾಗಿ ಗಮನಸೆಳೆದಿದ್ದರು. ಇದೀಗ ಅವರಿಗೆ ಅನಿರೀಕ್ಷಿತವಾಗಿ ಆರ್‌ಬಿಐ ವರಿಷ್ಠ ಹುದ್ದೆ ಒಲಿದುಬಂದಿದೆ.

  61 ವರ್ಷ ವಯಸ್ಸಿನ ಶಕ್ತಿಕಾಂತ ದೇಸಾಯಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿಯವರ ನಿಕಟವರ್ತಿಯೆಂದು ಪರಿಗಣಿಸಲ್ಪಟ್ಟಿದ್ದಾರೆ. ವಿಶೇಷ ಮೀಸಲು ನಿಧಿಯನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಲು ಅವಕಾಶ ನೀಡಲು ಮೋದಿ ಸರಕಾರ ಹಾಗೂ ಆರ್‌ಬಿಐ ನಡುವೆ ಕಳೆದ ಮೂರು ತಿಂಗಳುಗಳಿಂದ ಮುಸುಕಿನ ಗುದ್ದಾಟವು ಕಳೆದ ವಾರ ತೀವ್ರಗೊಂಡು, ಆರ್‌ಬಿಐ ಅಧ್ಯಕ್ಷ ಊರ್ಜಿತ್ ಪಟೇಲ್ ಅವರ ನಿರ್ಗಮನಕ್ಕೆ ಕಾರಣವಾಗಿತ್ತು.

ಇದೀಗ ಆರ್‌ಬಿಐನ ಚುಕ್ಕಾಣಿ ಹಿಡಿಯುವ ಮೂಲಕ ಶಕ್ತಿಕಾಂತ್ ದಾಸ್ ಅವರು ಬರೋಬ್ಬರಿ 40 ರ್ಷಗಳ ಸುದೀರ್ಘ ಅವಧಿಯ ಆನಂತರ ಐಎಎಸ್ ಅಧಿಕಾರಿಗಳು ಕೇಂದ್ರೀಯ ಬ್ಯಾಂಕ್‌ನ ಗವರ್ನರ್ ಆಗಿ ನೇಮಕಗೊಳ್ಳುವ ಪರಂಪರೆ ಮತ್ತೆ ಮುಂದುವರಿದಂತಾಗಿದೆ.

ಶಕ್ತಿಕಾಂತ್ ವಿತ್ತ ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದಾಗ ಅತ್ಯಂತ ಸಂದಿಗ್ಧ ಪರಿಸ್ಥಿತಿಯನ್ನು ಚಾಕಚಕ್ಯತೆಯಿಂದ ನಿಭಾಯಿಸುವ ಸಾಮರ್ಥ್ಯ ಅವರಿಗೆ ಒಲಿದುಬಂದಿತ್ತು.

ನೋಟು ನಿಷೇಧದ ದಿನಗಳಲ್ಲಿಯೂ ಶಕ್ತಿಕಾಂತ್ ದಾಸ್ ಹಲವಾರು ಪತ್ರಿಕಾ ಗೋಷ್ಠಿಗಳಲ್ಲಿ ಪಾಲ್ಗೊಂಡು ಮೋದಿ ಸರಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿದ್ದರು. ನೋಟುನಿಷೇಧದ ಬಗ್ಗೆ ಆಗಿನ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ವೌನವಹಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಥಟ್ಟೆಂದು ಉತ್ತರಿಸಿದ್ದ ಅವರು, ಇಲ್ಲಿ ಯಾರು ಮಾತನಾಡುತ್ತಾರೆಂಬುದು ಪ್ರಸಕ್ತವಲ್ಲ. ನಾನು ಕೇಂದ್ರ ಸರಕಾರದ ಪರವಾಗಿ ಮಾತನಾಡುತ್ತಿದ್ದೇನೆಯೇ ಹೊರತು ನಾನು ಯಾವುದೇ ವೈಯಕ್ತಿಕ ನೆಲೆಯಲ್ಲಿ ಮಾತನಾಡುತ್ತಿಲ್ಲ. ಹೀಗಾಗಿ ಇಲ್ಲಿ ನಾನು ಮಾತನಾಡಿದ್ದೇನೆ ಅಥವಾ ಬೇರ್ಯಾರೂ ಮಾತನಾಡಿದ್ದಾರೆಯೇ ಎಂಬುದು ಅಪ್ರಸಕ್ತವಾಗಿದೆಯೆಂದು ಹೇಳಿದ್ದರು.

ಮೂಲತಃ ಒಡಿಶಾದವರಾದ ಶಕ್ತಿಕಾಂತ್ ದೇಸಾಯಿ ಸೈಂಟ್ ಸ್ಟೀಫನ್ಸ್ ಕಾಲೇಜ್‌ನಲ್ಲಿ ಇತಿಹಾಸ ಅಧ್ಯಯನ ಮಾಡಿದ್ದರು. ಆನಂತರ 1960ರಲ್ಲಿ ಐಎಎಸ್ ಅಧಿಕಾರಿಯಾಗಿ ತಮಿಳುನಾಡು ಕೇಡರ್‌ಗೆ ಸೇರ್ಪಡೆಯಾಗಿದ್ದರು.

ತಮಿಳುನಾಡಿನ ದಿಂಡಿಗಲ್ ಹಾಗೂ ಕಾಂಚಿಪುರಂಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅವರು ಸೇವೆ ಸಲ್ಲಿಸಿದ್ದರು. ಆನಂತರ ತಮಿಳುನಾಡು ಸರಕಾರದ ಮಹತ್ವದ ಪ್ರಧಾನ ಕಾರ್ಯದರ್ಶಿ (ಕೈಗಾರಿಕೆ), ವಿಶೇಷ ಆಯುಕ್ತ (ಕಂದಾಯ), ಕಾರ್ಯದರ್ಶಿ (ಕಂದಾಯ) ಹಾಗೂ ಕಾರ್ಯದರ್ಶಿ (ವಾಣಿಜ್ಯ ತೆರಿಗೆ) ಹುದ್ದೆಗಳನ್ನು ನಿಭಾಯಿಸಿದ್ದರು. ಆದಾಗ್ಯೂ, 2016ರ ಜುಲೈನಲ್ಲಿ ಪಿಗುರುಸ್ ಎಂಬ ಹೆಸರಿನ ವೆಬ್‌ಸೈಟ್, ದಾಸ್ ತಮಿಳುನಾಡಿನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಅವಧಿಯಲ್ಲಿ 100 ಎಕರೆಗಳಷ್ಟು ಸರಕಾರಿ ಜಮೀನನ್ನು ಸನ್ಮಿನಾ ಎಸ್‌ಸಿಐ ಕಾರ್ಪೊರೇಶನ್ ಎಂಬ ಅಮೆರಿಕನ್ ಕಂಪೆನಿಗೆ ಅಗ್ಗದ ಬೆಲೆಗೆ ನೀಡಲಾಗಿತ್ತೆಂದು ಆರೋಪಿಸಿತ್ತು. 2008ರಲ್ಲಿ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿದ್ದ ವೇಳೆೆ, ಅವರನ್ನು ವೆಚ್ಚ ವಿಭಾಗದ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಆನಂತರ ಅವರನ್ನು ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಗೆ ವರ್ಗಾ ಯಿಸಲಾಗಿತ್ತು. 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ಶಕ್ತಿಕಾಂತ್ ದಾಸ್, ಸರಕಾರದ ಅಧಿಕಾರ ಕೇಂದ್ರವಾದ ನಾರ್ತ್‌ಬ್ಲಾಕ್‌ಗೆ ಅವರನ್ನು ಕರೆಸಿಕೊಳ್ಳಲಾಗಿತ್ತು ಹಾಗೂ ಅವರನ್ನು ಕಂದಾಯ ಕಾರ್ಯದರ್ಶಿಯಾಗಿ ನೇಮಿಸಲಾಯಿತು.

ಮೋದಿ ಸರಕಾರ ನೋಟು ಅಮಾನ್ಯೀಕರಣವನ್ನು ಘೋಷಿಸಿದ ಬಳಿಕ ಆ ಪ್ರಕ್ರಿಯೆಯನ್ನು ಜಾರಿಗೊಳಿಸುವಲ್ಲಿ ಅವರು ಹಲವು ವಾರಗಳು ಹಾಗೂ ತಿಂಗಳುಗಳ ಕಾಲ ಶ್ರಮಿಸಿದ್ದರು.

ಆಡಳಿತದ ಜೊತೆ ದಾಸ್ ಅವರ ನಿಕಟತ್ವ, ಸರಕಾರದ ಅತ್ಯಂತ ಸಮರ್ಥ ಟ್ರಬಲ್‌ಶೂಟರ್ ಎಂದೇ ಜನಪ್ರಿಯರಾಗಿದ್ದರು. ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರ ಅಧಿಕಾರಾವಧಿ 2016ರಲ್ಲಿ ಕೊನೆ ಗೊಂಡಾಗ, ಅವರ ಉತ್ತರಾಧಿಕಾರಿಯಾಗಿ ಶಕ್ತಿಕಾಂತ್ ದಾಸ್‌ರನ್ನು ನೇಮಿಸುವ ಬಗ್ಗೆ ಕೇಂದ್ರ ಸರಕಾರ ಪರಿಶೀಲಿಸಿತ್ತು. ಆದಾಗ್ಯೂ ಕೆಲವೊಂದು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಉರ್ಜಿತ್ ಪಟೇಲ್ ಆರ್‌ಬಿಐ ಗವರ್ನರ್ ಆಗಿ ನೇಮಕ ಗೊಂಡರು.

 ಇದಾದ ಒಂದು ವರ್ಷದ ಬಳಿಕ ಶೇರು ಮಾರುಕಟ್ಟೆಯ ನಿಯಂತ್ರಣ ಸಂಸ್ಥೆಯಾದ ಸೆಬಿ ವರಿಷ್ಠ ಹುದ್ದೆ ಖಾಲಿ ಬಿದ್ದಾಗಲೂ ದಾಸ್ ಅವರ ಹೆಸರು ಕೇಳಿಬಂದಿತ್ತ್ತು. ಕೊನೆಗೂ ಕೇಂದ್ರ ಸರಕಾರ ಆ ಸ್ಥಾನವನ್ನು ಅಜಯ್ ತ್ಯಾಗಿಗೆ ನೀಡಲು ನಿರ್ಧರಿಸಿತ್ತು.

ಮೋದಿ ಸರಕಾರವು ತರಲುಯತ್ನಿಸಿರುವ ಸುಧಾರಣಾ ಕ್ರಮಗಳ ಬಗ್ಗೆ ಶಕ್ತಿಕಾಂತ್ ದಾಸ್ ಯಾವುದೇ ಹಿಂಜರಿಕೆಯಿಲ್ಲದೆ ಪ್ರಶಂಸಿದ್ದರು.

‘‘ನೋಟುನಿಷೇಧ, ಜಿಎಸ್‌ಟಿ ಮತ್ತಿತರ ಸುಧಾರಣಾ ಕ್ರಮಗಳಿಂದಾಗಿ ದೇಶದ ಆರ್ಥಿಕತೆಯಲ್ಲಿ ತರಲಾದ ಸಂರಚನಾತ್ಮಕ ಬದಲಾವಣೆಗಳಿಂದಾಗಿ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಆದರೆ ಇದು ಅಲ್ಪಾವಧಿಯದ್ದಾಗಿದೆ’’ ಎಂದವರು ಹೇಳಿಕೊಂಡಿದ್ದರು.

ಪ್ರಸಿದ್ಧ ಬಹುರಾಷ್ಟ್ರೀಯ ಆನ್‌ಲೈನ್ ಮಾರಾಟ ಸಂಸ್ಥೆ ಅಮೆಝಾನ್, ಭಾರತದ ಧ್ವಜದ ಚಿತ್ರದೊಂದಿಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಿ ವಿವಾದಕ್ಕೀಡಾದಾಗ, ಶಕ್ತಿಕಾಂತ್ ದಾಸ್ ಸರಣಿ ಟ್ವೀಟ್‌ಗಳನ್ನು ಮಾಡಿ, ಇ-ಕಾಮರ್ಸ್ ದಿಗ್ಗಜನಿಗೆ ಎಚ್ಚರಿಕೆಯನ್ನು ರವಾನಿಸಿದ್ದರು. ಇದೀಗ ಆರ್‌ಬಿಐ ಗವರ್ನರ್ ಆಗಿ ದೇಶದ ಆರ್ಥಿಕತೆಯಲ್ಲಿ ಅದರಲ್ಲೂ ವಿಶೇಷವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಾವ ಧೋರಣೆಗಳನ್ನು ಅನುಸರಿಸಲಿದ್ದಾ ರೆಂಬ ಬಗ್ಗೆ ಈವರೆಗೆ ಅವರು ಬಹಿರಂಗವಾಗಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

 ಆದರೆ ಕೇಂದ್ರ ಹಾಗೂ ಆರ್‌ಬಿಐ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಶಕ್ತಿಕಾಂತ ದಾಸ್ ಅಂತಿಮ ತೆರೆ ಎಳೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ರಿಸರ್ವ್ ಬ್ಯಾಂಕ್‌ನಿಂದ ಅಧಿಕ ಪ್ರಮಾಣದ ಪ್ರಯೋಜನಗಳನ್ನು ಕೇಂದ್ರ ಸರಕಾರವು ಪಡೆದುಕೊಳ್ಳಬೇಕೆಂದು ಶಕ್ತಿಕಾಂತ್ ಹಿಂದಿನಿಂದ ಪ್ರತಿಪಾದಿಸುತ್ತಲೇ ಬಂದಿದ್ದರು. ಅಂದರೆ, ಆರ್‌ಬಿಐನ ತುರ್ತು ಮೀಸಲು ನಿಧಿಯ ಮೇಲೆ ಸರಕಾರದ ನಿಯಂತ್ರಣ ಸಾಧಿಸುವುದನ್ನು ಅವರು ಬೆಂಬಲಿಸುವರೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.

ಅಷ್ಟೇ ಅಲ್ಲದೆ ಮರುಪಾವತಿಯಾಗದ ಸಾಲಗಳ ಹೊರೆಯಿಂದಾಗಿ, ಸಾಲ ನೀಡಿಕೆಯನ್ನು ಸ್ಥಗಿತಗೊಳಿಸಕೂಡದೆಂದು ಶಕ್ತಿಕಾಂತ್ ಈ ಹಿಂದೆ ಅಭಿಪ್ರಾಯಿಸಿದ್ದರು. ಹಾಗಾದರೆ ದುರ್ಬಲ ಸಾಲಗಾರರ ಮೇಲಿನ ಸಾಲ ನೀಡಿಕೆಯ ನಿರ್ಬಂಧಗಳನ್ನು ಅವರು ಸಡಿಲಿಸಲಿದ್ದಾರೆಯೇ ಎಂಬ ಕುತೂಹಲವೂ ವ್ಯಕ್ತವಾಗಿದೆ.

  ಕೇಂದ್ರ ಸರಕಾರಕ್ಕೆ ನಿಕಟವಾಗಿದ್ದ್ದರೆನ್ನಲಾದ ಐಎಎಸ್ ಅಧಿಕಾರಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಆರ್ಥಿಕ ಕ್ಷೇತ್ರಕ್ಕೆ ವರ್ಗಾಯಿಸುವುದನ್ನು ಈ ಹಿಂದೆಯೂ ಕಾಣುತ್ತಾ ಬಂದಿದ್ದೇವೆ. ಆದಾಗ್ಯೂ ಅವರಲ್ಲಿ ಅನೇಕರು ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆ ಬಂದಾಗ ಸ್ವತಂತ್ರವಾಗಿ ಧ್ವನಿಯೆತ್ತಿದ್ದರು. ಶಕ್ತಿಕಾಂತ್ ಕೂಡಾ ಹಾಗೆಯೇ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Writer - ಆರ್. ಎನ್.

contributor

Editor - ಆರ್. ಎನ್.

contributor

Similar News

ಜಗದಗಲ
ಜಗ ದಗಲ