ರಫೇಲ್ ತೀರ್ಪು: ಮುಂದೇನು?

Update: 2018-12-19 06:26 GMT

ಮುದ್ರಿತ ಲಕೋಟೆಯಲ್ಲೇ ಸಲ್ಲಿಸತಕ್ಕದ್ದೆಂದು ನ್ಯಾಯಾಲಯ ಷರತ್ತು ವಿಧಿಸದೆ ಇರುತ್ತಿದ್ದಲ್ಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆಯುವಾಗಲೇ ಸಿಎಜಿ ವರದಿಯ ಪ್ರಶ್ನೆ ಸ್ಪಷ್ಟವಾಗುತ್ತಿತ್ತು. ಆಗ ಕೇಂದ್ರ ಸರಕಾರಕ್ಕೂ, ಅರ್ಜಿದಾರರಿಗೂ ಸ್ಪಷ್ಟೀಕರಣ ನೀಡಲು ಅವಕಾಶ ಸಿಗುತ್ತಿತ್ತು. ಇದು ಈಗ ನ್ಯಾಯಾಲಯವನ್ನು ಒಂದು ರಾಜಕೀಯ ಕದನಕ್ಕೆ ಎಳೆದು ತಂದಿರುವ, ಮುಜುಗರ ಉಂಟು ಮಾಡುವ ಈ ವಿವಾದಕ್ಕೆ ಆಸ್ಪದವೇ ಸಿಗದಂತೆ ಮಾಡುತ್ತಿತ್ತು. 

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾದ ಮನವಿಯಲ್ಲಿರುವ ಒಂದು ವಾಕ್ಯದ ಸಂಭಾವ್ಯ ತಪ್ಪು ಅರ್ಥವಿವರಣೆಯು ರಫೇಲ್ ಯುದ್ಧವಿಮಾನ ಖರೀದಿಪ್ರಕರಣದಲ್ಲಿ ಭಾರೀ ದೊಡ್ಡ ಒಂದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ರಫೇಲ್ ಪ್ರಕರಣದ ವಿಚಾರಣೆ ನಡೆಸುವಂತೆ ಆದೇಶಿಸಲು ನಿರಾಕರಿಸಿತು.

ತೀರ್ಪು ಪ್ರಕಟವಾಗಿ ಗಂಟೆಗಳು ಕಳೆಯುವುದರೊಳಗಾಗಿ, ಕೆಲವು ವಿಷಯಗಳಲ್ಲಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸರಕಾರವನ್ನು ಟೀಕಿಸಿದರು. ಭಾರತದ ಮಹಾ ಲೆಕ್ಕ ಪರಿಶೋಧಕರು (ಸಿಎಜಿ) ರಫೇಲ್ ಕುರಿತು ನೀಡಿರುವ ವರದಿಯೊಂದನ್ನು ನ್ಯಾಯಾಲಯ ನೀಡಿರುವ ತೀರ್ಪು ಉಲ್ಲೇಖಿಸಿತ್ತು ಮತ್ತು ಅದನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪರಿಶೋಧಕ ಸಮಿತಿ(ಪಿಎಸಿ) ಪರಿಶೀಲಿಸುತ್ತಿದೆ ಎಂದು ಹೇಳಿತು. ಇದು ಈಗ ಎದ್ದಿರುವ ವಿವಾದಕ್ಕೆ ಕಾರಣವಾಗಿದೆ. ಯಾಕೆಂದರೆ ಅಂತಹ ಒಂದು ವರದಿ ಅಸ್ತಿತ್ವದಲ್ಲೇ ಇಲ್ಲ್ಲ ಎಂದು ಪಿಎಸಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳೀದ್ದಾರೆ.
ನಂತರ, ಸಿಎಜಿ ವರದಿ ಬಗ್ಗೆ ನ್ಯಾಯಾಲಯ ನೀಡಿರುವ ಹೇಳಿಕೆಯನ್ನು ಸರಿಪಡಿಸಬೇಕೆಂದು ವಿನಂತಿಸಿ ಕೇಂದ್ರ ಸರಕಾರವು ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿತು.
ತಾನು ನೀಡಿದ ಆಜ್ಞೆಗಳನ್ನು ಸರಿಪಡಿಸುವುದು ಅಥವಾ ಹಿಂದಕ್ಕೆ ತಗೆದುಕೊಳ್ಳುವುದು ನ್ಯಾಯಾಂಗಕ್ಕೆ ಹೊಸತೇನೂ ಅಲ್ಲ. ನ್ಯಾಯದಾನಕ್ಕಾಗಿ ಹೀಗೆ ಮಾಡಲು ಕಾನೂನಿನಲ್ಲೇ ಅವಕಾಶಗಳಿವೆ. ಆದರೆ, ಹೀಗೆ ಮಾಡಿದಾಗ ನ್ಯಾಯಾಲಯ ಸರಿಪಡಿಸಿದ ತಪ್ಪು, ತೀರ್ಪಿನ ಮೂಲಕ್ಕೇ ಹೊಡೆತ ನೀಡಿದರೆ ಮತ್ತು ಅದಕ್ಕೆ ಆಜ್ಞೆಯ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯವಿದ್ದಾಗ ಏನಾಗುತ್ತದೆ?
ಮದ್ರಾಸ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಕೆ. ಚಂದ್ರುರವರ ಪ್ರಕಾರ, ಕೇಂದ್ರ ಸರಕಾರವು ಬೆಟ್ಟುಮಾಡಿರುವ ತಪ್ಪು ‘ಮೈನರ್’ ತಪ್ಪೋ, ಅಥವಾ ಅದು ತೀರ್ಪಿನ ಸ್ವರೂಪವನ್ನು ಬದಲಿಸಬಲ್ಲಂತಹ ತಪ್ಪೋ ಎಂದು ಸುಪ್ರೀಂ ಕೋರ್ಟ್ ತೀರ್ಮಾನಿಸಬೇಕಾಗುತ್ತದೆ. ಅದು ಮೈನರ್ ತಪ್ಪು ಆಗಿದ್ದಲ್ಲಿ ನ್ಯಾಯಾಲಯವು ಒಂದು ಸರಿಪಡಿಸುವಿಕೆಯ (ಕರೆಕ್ಷನ್) ಅದೇಶ ನೀಡಿ ಅಲ್ಲಿಗೆ ವಿಷಯವನ್ನು ಮುಕ್ತಾಯಗೊಳಿಸಬಹುದು. ಆದರೆ ಅದು ತೀರ್ಪಿನ ಮೇಲೆಯೇ ಪರಿಣಾಮ ಬೀರುವ ದೊಡ್ಡ (ಮೇಜರ್) ತಪ್ಪಾಗಿದ್ದರೆ, ಆಗ ನ್ಯಾಯಾಲಯವು ಆ ಆಜ್ಞೆಯನ್ನು ಹಿಂದಕ್ಕೆ ಪಡೆದು ತನ್ನ ತೀರ್ಪನ್ನು ಮರು ಪರಿಶೀಲಿಸಿ, ಬಳಿಕ ಹೊಸ ತೀರ್ಪು ನೀಡಬೇಕಾಗುತ್ತದೆ.
ಆದ್ದರಿಂದ, ಅರ್ಜಿದಾರರು ‘‘ನಿಜ ವಿಷಯಗಳ ಕುರಿತು ಸರಕಾರವು ನ್ಯಾಯಾಲಯದ ಹಾದಿತಪ್ಪಿಸಿದೆ’’ ಎಂದು ಸಾಬೀತುಪಡಿಸದ ಹೊರತು, ನ್ಯಾಯಪೀಠವು ಒಂದು ಮೈನರ್ ತಪ್ಪಿಗಾಗಿ, ತಾನು ಈಗಾಗಲೇ ನೀಡಿರುವ ತೀರ್ಪನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ತೀರ ಕಡಿಮೆ ಇದೆ.
 ಸಿವಿಲ್ ಪ್ರೊಸೀಜರ್ ಕೋಡ್‌ನ 151 ಮತ್ತು 152ನೇ ಸೆಕ್ಷನ್‌ಗಳು ಸಿವಿಲ್ ನ್ಯಾಯಾಲಯಗಳಿಗೆ ತಮ್ಮ ತಪ್ಪನ್ನು ಸರಿಪಡಿಸುವ ಅಧಿಕಾರ ನೀಡಿವೆ. ಹಾಗೆಯೇ, ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ತನ್ನ ಆಜ್ಞೆಗಳನ್ನು ಹಿಂದಕ್ಕೆ ಪಡೆದು ತಪ್ಪನ್ನು ಸರಿಪಡಿಸುವ ಅಧಿಕಾರವನ್ನು ನೀಡುತ್ತದೆ.
 ಈ ಪ್ರಕ್ರಿಯೆಯಲ್ಲಿ ಎರಡು ರೀತಿಗಳಿವೆ; ತಾನು ನೀಡಿದ ತೀರ್ಪಿನಲ್ಲಿ ತಪ್ಪು ಇದೆ ಎಂದು ಅನ್ನಿಸಿದಲ್ಲಿ ನ್ಯಾಯಾಲಯವು ತಾನಾಗಿಯೇ ಆಜ್ಞೆಯನ್ನು ಹಿಂದಕ್ಕೆ ಪಡೆದು, ಬಳಿಕ ತಪ್ಪನ್ನು ಸರಿಪಡಿಸಿ ಹೊಸ ತೀರ್ಪು ನೀಡಬಹುದು. ಎರಡನೆಯ ವಿಧಾನದಲ್ಲಿ, ಸಂಬಂಧಿಸಿದ ಕಕ್ಷಿದಾರರು ತೀರ್ಪಿನಲ್ಲಿ ಒಂದು ಕರೆಕ್ಷನ್ ಆಗಬೇಕೆಂದು ವಿನಂತಿಸಿ ನ್ಯಾಯಾಲಯಕ್ಕೆ ಒಂದು ಅರ್ಜಿಸಲ್ಲಿಸಬಹುದಾಗಿದೆ.
2016ರಲ್ಲಿ ಸುಪ್ರಿಂ ಕೋರ್ಟ್, ಪರಿಶಿಷ್ಟ ಜಾತಿ ಮತ್ತು ಪ.ವರ್ಗದ ಸರಕಾರಿ ನೌಕರರಿಗೆ ಮೇಲು ದರ್ಜೆಯ ಹುದ್ದೆಗಳಲ್ಲಿ ಭಡ್ತಿ ನೀಡುವ ಒಂದು ಆದೇಶವನ್ನು ಹಿಂದಕ್ಕೆ ಪಡೆಯಿತು.
 ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಆದೇಶವೊಂದನ್ನು ಹಿಂದಕ್ಕೆ ಪಡೆದದ್ದು ಇತ್ತೀಚಿನ ಪ್ರಕರಣಗಳಲ್ಲಿ ಅತ್ಯಂತ ಮಹತ್ವ ಪೂರ್ಣವಾದ ಪ್ರಕರಣ. 2013ರಲ್ಲಿ ನ್ಯಾಯಾಲಯವು ಕಾನೂನಿನ ಒಂದು ಗಂಭೀರ ತಪ್ಪನ್ನು ಗುರುತಿಸಿದ ಬಳಿಕ, ತಾನು ಮೊದಲು ನೀಡಿದ ಆದೇಶವನ್ನು ಹಿಂದೆಗೆದುಕೊಂಡಿತು. ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು ಮಾತ್ರ ರಾಜ್ಯದ ಮಾಹಿತಿ ಆಯುಕ್ತರಾಗಬಹುದು ಎಂದು ಅದು ಆದೇಶ ಮಾಡಿತ್ತು. ಈ ಆದೇಶದಲ್ಲಿ ತಪ್ಪಾಗಿದೆ ಎಂದು ಮನವರಿಕೆಯಾದಾಗ ಅದು ಆದೇಶವನ್ನು ಹಿಂದಕ್ಕೆ ಪಡೆದಿತ್ತು.
ದೊಡ್ಡ ತಪ್ಪುಗಳಿದ್ದಾಗ್ಯೂ ನ್ಯಾಯಾಲಯಗಳು ಆದೇಶಗಳನ್ನು ಹಿಂದಕ್ಕೆ ಪಡೆಯದ ಉದಾಹರಣೆಗಳೂ ಇವೆ. 2015ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್ ಲೆಕ್ಕಾಚಾರಗಳಲ್ಲಿ ಮಾಡಿದ ಮಹತ್ವಪೂರ್ಣ ತಪ್ಪುಗಳಿಂದಾಗಿ, ಆದಾಯ ಮೀರಿದ ಆಸ್ತಿಗಳಿಕೆಯ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬಿಡುಗಡೆಗೊಳ್ಳುವಂತಾಯಿತು. ಬಳಿಕ 2017ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದುಪಡಿಸಿ ಆಪಾದಿತರಿಗೆ ಶಿಕ್ಷೆ ವಿಧಿಸಿತು. ಆದರೆ ಆ ವೇಳೆಗೆ ಜಯಲಲಿತಾ ಮೃತಪಟ್ಟಿದ್ದರು. ಅದೇನಿದ್ದರೂ, ಇದು ಆದೇಶವನ್ನು ಸಿವಿಲ್ ಮೊಕದ್ದಮೆಯೊಂದರಲ್ಲಿ ಬದಲಿಸಬಹುದಾದಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲದ ಒಂದು ಕ್ರಿಮಿನಲ್ ಮೊಕದ್ದಮೆಯಾಗಿತ್ತು. ತೀರ್ಪಿನ ಪರಿಣಾಮವಾಗಿ ಆಪಾದಿತರ ಸ್ವಾತಂತ್ರದ ಮೇಲೆ ಪರಿಣಾಮ ಬೀರಬಹುದಾದ ಪ್ರಕರಣ ಇದಾಗಿತ್ತು. ರಫೇಲ್ ತೀರ್ಪಿನಲ್ಲಿ ಕೇಂದ್ರ ಸರಕಾರವು ತಪ್ಪಿನ ಸರಿಪಡಿಸುವಿಕೆಗಾಗಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದೆ. ಮೂಲ ತೀರ್ಪಿನಲ್ಲಿ ಸಿಎಜಿ ವರದಿಯನ್ನು ಪ್ರಸ್ತಾಪಿಸಿ ನ್ಯಾಯಾಲಯವು ಹೀಗೆ ಹೇಳಿದೆ. ‘‘ಬೆಲೆಯ ವಿವರಗಳನ್ನು ಸಿಎಜಿಗೆ ತಿಳಿಸಲಾಗಿದೆ ಮತ್ತು ಸಿಎಜಿಯ ವರದಿಯನ್ನು ಪಿಎಸಿ ಪರಿಶೀಲಿಸಿದೆ. ವರದಿಯ ಸಂಪಾದಿತ ಭಾಗವನ್ನು ಮಾತ್ರ ಸಂಸತ್ತಿನ ಮುಂದೆ ಇಡಲಾಯಿತು ಮತ್ತು ಅದು ಈಗ ಸಾರ್ವಜನಿಕರ ಮುಂದಿದೆ.
ಮುದ್ರಿತ ಲಕೋಟೆಯೊಂದರಲ್ಲಿ ಕೇಂದ್ರ ಸರಕಾರವು ಸಲ್ಲಿಸಿದ್ದ ಹೇಳಿಕೆಯನ್ನಾಧರಿಸಿ ನ್ಯಾಯಾಲಯ ಮೇಲಿನಂತೆ ಹೇಳಿದೆ. ವಿಪಕ್ಷವು ನ್ಯಾಯಾಲಯದ ಈ ಮಾತನ್ನು ಎತ್ತಿ ತೆಗೆದು ಕೇಂದ್ರ ಸರಕಾರವು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ, ಯಾಕೆಂದರೆ ಅದು ಹೇಳುವಂತಹ ಸಿಎಜಿ ವರದಿ ಅಸ್ತಿತ್ವದಲ್ಲೇ ಇಲ್ಲ ಎಂದು ಆಪಾದಿಸಿದೆ. ಶನಿವಾರದಂದು ಸರಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಸರಕಾರದ ಹೇಳಿಕೆಯಲ್ಲಿ ಇಂಗ್ಲಿಷ್ ವ್ಯಾಕರಣ ದೋಷದಿಂದಾಗಿರುವ ತಪ್ಪಿನ ಮತ್ತು ತಪ್ಪು ಅರ್ಥೈಸುವಿಕೆಯ ಕಡೆಗೆ ನ್ಯಾಯಾಲಯದ ಗಮನ ಸೆಳೆದಿದೆ.
ಅಂದರೆ, ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಹೇಗೆ ಪ್ರಸ್ತುತ ಪಡಿಸಲಾಗುತ್ತದೆ ಎಂಬುದನ್ನಷ್ಟೇ ತಾನು ವಿವರಿಸುತ್ತಿದ್ದೆ, ಇದನ್ನು ನ್ಯಾಯಾಲಯವು ಈಗಾಗಲೇ ಚರ್ಚಿಸಿಯಾಗಿದೆ ಎಂದು ತಪ್ಪಾಗಿ ಅರ್ಥಮಾಡಿಕೊಂಡಿತು ಎಂದು ಸರಕಾರ ಹೇಳಿದೆ.
ಅದೇನಿದ್ದರೂ, ಮೂವರು ನ್ಯಾಯಮೂರ್ತಿಗಳು ಈ ತಪ್ಪು ಅರ್ಥೈಸುವಿಕೆಯನ್ನು ಅದು ಹೇಗೆ ಗಮನಿಸಲು ವಿಫಲರಾದರು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ರಫೇಲ್ ವ್ಯವಹಾರದ ಪ್ರಕರಣ ಒಂದು ದೊಡ್ಡ ಸಮಸ್ಯೆ ಎಂದರೆ ತೀರ್ಪಿನಲ್ಲಿ ಉಲ್ಲೇಖಿಸಲ್ಪಟ್ಟಿರುವ ಹೆಚ್ಚಿನ, ಬಹುಪಾಲು ಮಾಹಿತಿಯನ್ನು ನ್ಯಾಯಾಲಯಕ್ಕೆ ಒಂದು ಮುದ್ರಿತ ಲಕೋಟೆಯಲ್ಲಿ ಸಲ್ಲಿಸಿರುವುದು.

ಕೃಪೆ: scroll.in

Writer - ಶ್ರುತಿಸಾಗರ್ ಯಮುನನ್

contributor

Editor - ಶ್ರುತಿಸಾಗರ್ ಯಮುನನ್

contributor

Similar News

ಜಗದಗಲ
ಜಗ ದಗಲ