ಒರಟು ಆಟದ ಸೌಮ್ಯ ಆಟಗಾರ ಅನೂಪ್

Update: 2018-12-20 13:18 GMT

ಕಬಡ್ಡಿ ಎಂದರೆ ಒರಟು ಆಟ. ಜಟ್ಟಿ ಕಾಳಗವೆಂದರೂ ತಪ್ಪಲ್ಲ. ಅಂತಹ ಒರಟು ಆಟದ ಸೌಮ್ಯ ಆಟಗಾರ ಶಾಂತಚಿತ್ತದ ನಾಯಕ ಎಂದೇ ಕಬಡ್ಡಿ ವಲಯದಲ್ಲಿ ಕರೆಸಿಕೊಳ್ಳುವ ಅನೂಪ್ ಕುಮಾರ್ ಬುಧವಾರ ತನ್ನ 15 ವರ್ಷಗಳ ಕಬಡ್ಡಿ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

2014ರ ಏಶ್ಯ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಕಬಡ್ಡಿ ತಂಡದ ಸದಸ್ಯ, 2016ರ ಕಬಡ್ಡಿ  ವಿಶ್ವಕಪ್ ನಲ್ಲಿ ಭಾರತಕ್ಕೆ ವಿಶ್ವ ಚಾಂಪಿಯನ್ ಕಿರೀಟ ತೊಡಿಸಿದ ಅನೂಪ್ ಕಬಡ್ಡಿ ಪ್ರೊ ಲೀಗ್ ಆವೃತ್ತಿಗಳಲ್ಲಿ ಯು- ಮುಂಬಾ  ತಂಡವನ್ನು ಮುನ್ನಡೆಸಿ ಚಾಂಪಿಯನ್ ಕಿರೀಟವನ್ನೂ ತೊಡಿಸಿದ್ದರು. ಪ್ರಸ್ತುತ ಆವೃತ್ತಿಯ  ಕಬಡ್ಡಿ ಲೀಗ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದಲ್ಲಿದ್ದ ಅನೂಪ್ ತನ್ನ ಅತ್ಯಂತ ಸೌಮ್ಯ ಆಟದಿಂದಾಗಿ ಕಬಡ್ಡಿ ಪ್ರೇಮಿಗಳ ಮನ ಗೆದ್ದಿದ್ದರು.
ಪರ್ದೀಪ್ ನರ್ವಾಲ್, ರೋಹಿತ್ ಕುಮಾರ್ ಗೆ ಹೋಲಿಸಿದರೆ ಅನೂಪ್ ಅವರಷ್ಟು ಸರಾಸರಿಯಾಗಲಿ, ಅಂಕಗಳಾಗಲಿ ಹೊಂದಿಲ್ಲ. ಆದರೆ ಪ್ರಸ್ತುತ ಆವೃತ್ತಿಯ ಹೊರತಾಗಿ ಅವರು ಕಬಡ್ಡಿ ಪ್ರೊ್ರ ಲೀಗ್ ನಲ್ಲಿ ಆಡಿದ ಸುಮಾರು ಎಂಬತ್ತರಷ್ಟು ಆಟಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. 

ಪರ್ದೀಪ್ ನರ್ವಾಲ್ ರ ಆಕ್ರಮಣಕಾರಿತ್ವವಿಲ್ಲದಿದ್ದರೂ ಅನೂಪ್ ಮೈದಾನದಲ್ಲಿದ್ದರೆ ಸಹ ಆಟಗಾರರಿಗೆ ಏನೋ ಒಂದು ವಿಶೇಷ ಧೈರ್ಯ. ಸದಾ ತನ್ನ ಸಹ ಆಟಗಾರರಿಗೆ ಸಲಹೆಗಳನ್ನು ನೀಡುತ್ತಾ ಹುರಿದುಂಬಿಸುತ್ತಿದ್ದ ಅನೂಪ್ ಎಂತಹದ್ದೇ ಕಠಿಣ ಸಂದರ್ಭದಲ್ಲೂ ಒತ್ತಡಕ್ಕೊಳಗಾಗದೇ ಆಡುತ್ತಿದ್ದರು. ಯುವ ಆಟಗಾರರಿಗೆ ಸದಾ ಪ್ರೋತ್ಸಾಹ ಕೊಡುವ ಅನೂಪ್ ಅವರು ತಪ್ಪು ಮಾಡಿದರೆ ಅವರಿಗೆ ಬೈಯ್ಯುವ ಅಭ್ಯಾಸವಿಟ್ಟುಕೊಂಡಿರಲಿಲ್ಲ. ಬದಲಾಗಿ ಉಪಯುಕ್ತ ಸಲಹೆಗಳನ್ನು ನೀಡಿ ಅವರ ತಪ್ಪನ್ನು ಸರಿಪಡಿಸಿ ಹುರಿದುಂಬಿಸುತ್ತಿದ್ದರು. ಅನೂಪ್ ಬೋನಸ್ ಅಂಕ ಕಸಿಯುವುದರಲ್ಲಿ ಅದೆಷ್ಟು ನಿಸ್ಸೀಮರೆಂದರೆ ಎದುರಾಳಿ ತಂಡದ ಆಟಗಾರರಿಗೆ ಅನೂಪ್ ಬೋನಸ್ ಕಸಿದುದು ಗೊತ್ತೇ ಆಗುತ್ತಿರಲಿಲ್ಲ. ಕೆಲವೊಮ್ಮೆ ದೂರದ ವರೆಗೆ ದಾಳಿ ಮಾಡುವ ಅನೂಪ್ ಟಚ್ ಪಾಯಿಂಟ್ ಗಾಗಿ ಇಷ್ಟು ಒಳ ಬಂದಿದ್ದಾರೆಂದೇ ಬಗೆಯುವ ಎದುರಾಳಿ ತಂಡ ತಮ್ಮನ್ನು ಅನೂಪ್ ದಾಳಿಯಿಂದ ರಕ್ಷಿಸಿಕೊಳ್ಳಲು ಆಟಗಾರರು ದೂರ ಸರಿದ ಕೂಡಲೇ ಕಪ್ಪುಗೆರೆಗೆ ಕಾಲಿಟ್ಟು ಬೋನಸ್ ಅಂಕ ಕಸಿದು ಬರುತ್ತಿದ್ದರು. ಅನೂಪ್ ಕುಮಾರರನ್ನು ಕಬಡ್ಡಿಯ 'ಬೋನಸ್ ಕಾ ಬಾದ್‌ಶಾ' ಎನ್ನಲಾಗುತ್ತದೆ. ಅದೆಷ್ಟೋ ಬಾರಿ ಅನೂಪ್ ಬೋನಸ್ ಗೆರೆ ಕಾಲಿಟ್ಟದ್ದು ಗೊತ್ತಾಗದೇ ಅಂಪೈರ್ ತೀರ್ಪಿನ ಬಗ್ಗೆ ಸಂಶಯಗೊಂಡು ಎದುರಾಳಿ ತಂಡ ಟಿವಿ ಮರುಪರಿಶೀಲನೆಗೆ ಆಗ್ರಹಿಸುತ್ತಿತ್ತು. ಮರುಪರಿಶೀಲಯಲ್ಲಿ ಅನೂಪ್ ಬೋನಸ್ ಅಂಕ ಕಸಿದದ್ದು ಅರಿವಿಗೆ ಬಂದು ನಿರಾಶರಾದ ಧಾರಾಳ ನಿದರ್ಶನಗಳಿವೆ.
ಅನೂಪ್ ಮೂಲೆಯಲ್ಲಿರುವ ರಕ್ಷಣಾ ಆಟಗಾರರು ಸರಪಳಿ ಮುರಿಯುವಂತೆ ಮಾಡಿ ಸರಪಳಿ ತಪ್ಪಿದ ಕೂಡಲೇ ಎದುರಾಳಿ ತಂಡದ ಆಟಗಾರರನ್ನು ಮುಟ್ಟಿ ಬರುತ್ತಿದ್ದರು.

ಸಾಮಾನ್ಯವಾಗಿ ಆಕ್ರಮಣಕಾರಿಯಾಗಿ ಆಡಿ ತನ್ನನ್ನು ತಾನು ಅಪಾಯಕ್ಕೊಡ್ಡುವ ಸಾಹಸವನ್ನು ಅನೂಪ್ ಮಾಡುತ್ತಿರಲಿಲ್ಲ. ಅನೂಪ್ ಕಾಲೆಳೆದು ಹಿಡಿಯುವುದು ಸುಲಭವಲ್ಲ ಎನ್ನುವುದು ಎದುರಾಳಿ ಆಟಗಾರರಿಗೆ ಸ್ಪಷ್ಟವಿರುವುದರಿಂದ ಆ ಪ್ರಯತ್ನಕ್ಕೆ ಸಾಮಾನ್ಯವಾಗಿ ಅವರು ಕೈ ಹಾಕುತ್ತಿರಲಿಲ್ಲ. ಮೊಣಕಾಲಿಗೆ ಕೈ ಹಾಕಿದಾಗಲೇ ಅನೂಪ್ ಮಿಂಚಿನ ದಾಳಿಗಾರ ಎನ್ನುವುದು ಡಿಫೆಂಡರ್ ಗಳಿಗೆ ಗೊತ್ತಾಗುತ್ತಿದ್ದುದ್ದು. ಡಿಫೆಂಡರ್ ಕಾಲಿಗೆ ಕೈ ಹಾಕಿದಾಗ ಹೆಚ್ಚಿನ ಕೊಸರಾಟವಿಲ್ಲದೇ ಅನೂಪ್ ತಪ್ಪಿಸಿಕೊಳ್ಳುತ್ತಿದ್ದರು.

ಅನೂಪ್ ಪಾಳಯದ ಆಟಗಾರರು ಔಟಾದರೂ ಅನೂಪ್ ರನ್ನು ಮುಟ್ಟಿ ಔಟಾಗಿಸುವುದು ಎದುರಾಳಿ ದಾಳಿಗಾರರಿಗೆ ಅಷ್ಟು ಸುಲಭವಿರುತ್ತಿರಲಿಲ್ಲ. ಅದೆಷ್ಟೋ ಬಾರಿ ಅನೂಪ್ ಕೊನೆಯ ಆಟಗಾರರಾಗಿ ಉಳಿದ ಬಳಿಕವೇ ಅವರ ತಂಡ ಆಲೌಟ್ ಆಗುತ್ತಿತ್ತು. ಎದುರಾಳಿಗೆ ಸೂಪರ್ ಟ್ಯಾಕಲ್ (ಎದುರಾಳಿ ತಂಡದಲ್ಲಿ ಮೂರು ಅಥವಾ ಕಡಿಮೆ ಆಟಗಾರರಿದ್ದಾಗ ಕ್ಯಾಚ್ ಮಾಡಿದರೆ ಎರಡು ಪಾಯಿಂಟ್) ಅವಕಾಶವಿದ್ದಾಗ ಸಾಮಾನ್ಯವಾಗಿ ಅನೂಪ್ ದಾಳಿಗಿಳಿದರೆ ಸೂಪರ್ ಟ್ಯಾಕಲ್ ಗೆ ಅವಕಾಶ ಸಿಗುತ್ತಿರಲಿಲ್ಲ. ಮಾಡು ಇಲ್ಲವೇ ಮಡಿ ದಾಳಿಯನ್ನು ಸಾಮಾನ್ಯವಾಗಿ ಅನೂಪ್ ಮಾಡುತ್ತಿದ್ದರು. ಯಾಕೆಂದರೆ ಒತ್ತಡದ ಸಂದರ್ಭವನ್ನು ಅನೂಪ್ ಚಾಕಚಕ್ಯತೆಯಿಂದ ನಿಭಾಯಿಸಿ ತಂಡವನ್ನು ಪಾರು ಮಾಡುವುದರಲ್ಲಿ ಪ್ರವೀಣ.

ಪ್ರೊ ಲೀಗ್ ವೃತ್ತಿಜೀವನದಲ್ಲಿ ಒಟ್ಟು 91 ಪಂದ್ಯಗಳನ್ನು ಆಡಿರುವ ಅನೂಪ್ ಪಂದ್ಯವೊಂದಕ್ಕೆ 5.8 ಸರಾಸರಿಯಲ್ಲಿ 527 ಅಂಕಗಳನ್ನು ಗಳಿಸಿದ್ದಾರೆ. ಅದರಲ್ಲಿ ಹದಿಮೂರು ಬಾರಿ ಸೂಪರ್ 10 ( ಪಂದ್ಯವೊಂದರಲ್ಲಿ ಹತ್ತಕ್ಕಿಂತ ಹೆಚ್ಚು ಅಂಕ) ಸಾಧನೆ ಮಾಡಿದ್ದಾರೆ.

ಹರಿಯಾಣ ಮೂಲದ ಅನೂಪ್ ವೃತ್ತಿಯಲ್ಲಿ ಪೊಲೀಸ್ ಅಧಿಕಾರಿ.
ಅನೂಪ್ ತನ್ನ ಇಡೀ  ಪ್ರೊ ಲೀಗ್ ಮತ್ತು ಅಂತಾರಾಷ್ಟ್ರೀಯ ಕಬಡ್ಡಿ  ವೃತ್ತಿಬದುಕಿ ನಲ್ಲಿ  ಯಾವತ್ತೂ ಎದುರಾಳಿಯನ್ನು ಗುರಾಯಿಸಿ ನೋಡಿದ ಅಥವಾ ವಾಗ್ಯುದ್ಧಕ್ಕಿಳಿದ ಒಂದೇ ಒಂದು ನಿದರ್ಶನವಿಲ್ಲ. ತೀರ್ಪುಗಾರರೊಂದಿಗೆ ಅಂಕಗಳಿಗಾಗಿ ಚರ್ಚೆ ಮಾಡಿದ ನಿದರ್ಶನವೂ ಇಲ್ಲ. ಭಾರತದ ಕ್ರೀಡೆ  ಕಬಡ್ಡಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು, ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದ್ದರಲ್ಲಿ ಅನೂಪ್ ಕುಮಾರ್ ಪಾಲು ದೊಡ್ಡದಿದೆ. ಸಭ್ಯ ಆಟಗಾರ, ಶಾಂತಚಿತ್ತದ ನಾಯಕ ಅನೂಪ್ ಕಬಡ್ಡಿ ಪ್ರೇಮಿಗಳ ಮನದಲ್ಲಿ ಸದಾ ಉಳಿಯುತ್ತಾರೆ. ಆಟಗಾರನಾಗಿ ಅನೂಪ್ ನಿವೃತ್ತಿಯಾದರೂ ಅಂಗಣದ ಹೊರಗೆ ಕಬಡ್ಡಿಯಲ್ಲಿ ಮುಂದುವರಿಯುವುದಾಗಿ ಅನೂಪ್ ತನ್ನ ಟ್ವಿಟರ್ ಪುಟದಲ್ಲಿ ಬರೆದಿದ್ದಾರೆ. ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದ ಅನೂಪ್ ಕಬಡ್ಡಿಯ ಬೇರೆ ಹುದ್ದೆಗಳಲ್ಲಿ ಸದಾ ಮಿಂಚುತ್ತಿರಲಿ ಎಂದು ಹಾರೈಸೋಣ..

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News