ವಾದ ಸಂವಾದಗಳ ನಡುವೆ- ಡಾ.ಯು. ಆರ್. ಅನಂತಮೂರ್ತಿ

Update: 2018-12-20 18:30 GMT

ನನ್ನ ಅರಿವಿನ ಮಟ್ಟಿಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಇಷ್ಟರಮಟ್ಟಿಗೆ ನಿಂದನೆಗೆ ಒಳಗಾದ ಮತ್ತೊಬ್ಬ ಸಾಹಿತಿ ಇಲ್ಲ. ಸ್ವಲ್ಪಮಟ್ಟಿಗೆ ಲಂಕೇಶ್ ಇರಬಹುದು. ಆದರೆ ಸಾಮಾಜಿಕ ನಿಂದನೆ ಬೇರೆ, ವೈಯಕ್ತಿಕ ನಿಂದನೆ ಬೇರೆ. ಹಾಗೆ ನೋಡಿದರೆ ದಿನ ನಿತ್ಯದ ಆಗುಹೋಗುಗಳಿಗೆ ಸಂಬಂಧಿಸಿದಂತೆ ಬಹುದೊಡ್ಡ ಪ್ರಮಾಣದಲ್ಲಿಯೇ ಸಂವಾದಕ್ಕೆ ಇಳಿಯುತ್ತಿದ್ದರು. ಹಾಗೆ ಇಳಿಯುವುದರಲ್ಲಿ ಸಮಾಜವಾದಿ ಚಳವಳಿಯ ಸ್ವರೂಪ ಎದ್ದು ಕಾಣುತ್ತಿತ್ತು. ಹೀಗೆ ಮಾಡುವಾಗ ಹುಸಿ ಘೋಷಣೆಗಳ ಮೊರೆ ಹೋದವರಲ್ಲ. ಈ ದೃಷ್ಟಿಯಿಂದ ಅವರ ಬರವಣಿಗೆ ಮತ್ತು ಭಾಷಣಗಳ ಸಂದರ್ಭದಲ್ಲಿ ಪ್ರಗತಿಪರ, ಪ್ರತಿಗಾಮಿ ಮುಂತಾದ ಜಾರ್ಗನ್ಸನ್ನು ಎಂದೂ ಬಳಸಿದವರಲ್ಲ.

‘‘ಒಂದು ಸಂಕೀರ್ಣ ಸನ್ನಿವೇಶವನ್ನು ಬರಹದಲ್ಲಿ ನಿರ್ವಹಿಸುವಾಗ ಏಕಕಾಲದಲ್ಲಿ ಹೊರಗಿನವನು, ಹಾಗೇ ಒಳಗಿನವನೂ ಆದ ನಿರೂಪಕ ಅವಶ್ಯಕ ಎನ್ನಿಸುತ್ತದೆ.’’
-ಈ ಅಪೂರ್ವವಾದ ಅನಂತಮೂರ್ತಿಯವರ ಮಾತು ದಕ್ಷಿಣ ಆಫ್ರಿಕಾದ ಮಹಾನ್ ಲೇಖಕ ಚಿನುವಾ ಅಚಿಬೆ ಅವರೊಂದಿಗೆ ನಡೆಸಿದ ಅತ್ಯಂತ ಮಹತ್ವಪೂರ್ಣ ಸಂವಾದದ ಸಮಯದಲ್ಲಿಯ ನುಡಿ. ಅಚಿಬೆಯವರಂಥ ಸೂಕ್ಷ್ಮ ಸಂವೇದನೆಯ ಲೇಖಕನನ್ನು ತಮ್ಮ ದಟ್ಟವಾದ ಒಳನೋಟಗಳ ಮೂಲಕ ಸಂವಾದಕ್ಕೆ ಸೆಳೆದುಕೊಳ್ಳುತ್ತಾರೆ. ಈ ರೀತಿಯ ಮಾತಿನ ವೈಖರಿ ಯು. ಆರ್. ಅವರ ಸೃಜನಶೀಲ ಬರವಣಿಗೆಯಷ್ಟೇ ಮಾರ್ಮಿಕವಾದದ್ದು.
ಅವರ ಎಲ್ಲಾ ಈ ರೀತಿಯ ಸಂವಾದಗಳು ಗುಣಾತ್ಮಕತೆಯಿಂದ ಕೂಡಿರುವಂಥದ್ದು. ಅದು ಕೇವಲ ಸಾಹಿತ್ಯದ ವಿಷಯವೇ ಆಗಬೇಕಾಗಿಲ್ಲ. ರಾಜಕೀಯ, ಪತ್ರಿಕೋದ್ಯಮ, ಕಲೆ, ಸಂಗೀತ, ಚಲನಚಿತ್ರ ಮುಂತಾದ ವಿಷಯಗಳ ಕುರಿತು ಕೂಡ ಅವರು ಲವಲವಿಕೆಯ ಉಮೇದಿನಿಂದ ಮಾತುಕತೆಗೆ ಇಳಿಯಬಲ್ಲರು. ಅದಕ್ಕೆ ಮುಖ್ಯ ಕಾರಣ: ಅವರಿಗೆ ಈ ಸಮಾಜದ ಯಾವುದೇ ಆಗು ಹೋಗುಗಳು ಪರಕೀಯವಲ್ಲ. ಇಂತಹದ್ದು ಚಿಂತನೆಯ ದಟ್ಟತೆಯಿಂದ ವ್ಯಾಪ್ತಗೊಳ್ಳುವಂಥದ್ದು. ಈ ನೆಲೆಯಲ್ಲಿ ಸುಮಾರು ಮೂರುವರೆ ದಶಕಗಳ ಹಿಂದೆ ಪಂಡಿತ್ ರಾಜೀವ್ ತಾರಾನಾಥರೊಡನೆ ನಡೆಸಿದ ದೀರ್ಘ ಸಂವಾದ ಚಾರಿತ್ರಿಕವಾದದ್ದು.
ಯಾಕೆಂದರೆ, ಪಂಡಿತ್ ರಾಜೀವ್ ತಾರಾನಾಥರು ಸಂಗೀತ ಕ್ಷೇತ್ರದಲ್ಲಿ ಎಷ್ಟು ದೊಡ್ಡ ವಿದ್ವಾಂಸರೋ ಅಷ್ಟೇ ಸಾಹಿತ್ಯ, ಸಂಸ್ಕೃತಿ ಕುರಿತು ಗಾಢವಾದ ಒಳನೋಟಗಳನ್ನು ಹೊಂದಿರುವಂಥವರು. ಹಾಗೆ ನೋಡಿದರೆ ಪಂಡಿತ್ ರಾಜೀವ್ ತಾರಾನಾಥರ ತಂದೆ ಪಂಡಿತ್ ತಾರಾನಾಥರು ಎಷ್ಟೊಂದು ವಿಷಯಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು. ‘ಧರ್ಮ ಸಂವಾದ’ ಕೃತಿಯಂತೂ ಎಲ್ಲಾ ಕಾಲಕ್ಕೂ ಓದಬಹುದಾದ ಕೃತಿ. ಬಹುಮುಖಿ ಒಳನೋಟಗಳನ್ನು ವಿಸ್ತರಿಸುವಂಥದ್ದು. ತಂದೆ ಮಗ ಇಬ್ಬರೂ ತಮ್ಮ ಬದುಕಿನ ನಾನಾ ವಿಧವಾದ ಆಗುಹೋಗುಗಳನ್ನು ಕಂಡವರು. ಈ ಎಲ್ಲಾ ಗ್ರಹಿಕೆಗಳ ಮೂಲಕವೇ ಅನಂತಮೂರ್ತಿಯವರ ಸಂವಾದವು ಕಲೆಯ ಧಾತುವನ್ನು ವಿಸ್ತೀರ್ಣಗೊಳಿಸಿದೆ.
ಯು. ಆರ್. ಅವರು ನಮ್ಮ ನಡುವೆ ಇಲ್ಲ ಅನ್ನಿಸುವುದೇ ಇಲ್ಲ; ಬೇರೆಲ್ಲಿಯೋ ಸಂವಾದಕ್ಕೆ ತೊಡಗಿರಬಹುದು ಎಂಬ ಭಾವನೆ ಅವರ ಎಲ್ಲಾ ಆತ್ಮೀಯ ಒಡನಾಡಿಗಳಿಗೆ ಇರಲು ಸಾಧ್ಯ. ಯಾಕೆಂದರೆ, ಯು. ಆರ್. ಎಂಬ ಬಹುದೊಡ್ಡ ಚಿಂತಕ ಆ ರೀತಿಯಲ್ಲಿ ಮೋಡಿ ಮಾಡುವ ವ್ಯಕ್ತಿತ್ವವನ್ನು ಹೊಂದಿದ್ದರು.ಅಷ್ಟರಮಟ್ಟಿಗೆ ಅತ್ಯಂತ ಡೀಪ್ ಆಗಿ ರಿಜಿಸ್ಟರ್ ಆಗಿಬಿಡುತ್ತಿದ್ದರು.
ಅವರ ಸಂಯಮಶೀಲತೆ ಎಂಥವರಿಗೂ ಮೆಚ್ಚುಗೆಯಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣ: ಪ್ರತಿಯೊಂದನ್ನೂ ಒಳಗಿನವರಾಗಿ, ಹೊರಗಿನವರಾಗಿಯೂ ನೋಡುವವರಾಗಿದ್ದರು. ಆಲಿಸುವುದಕ್ಕೆ ಕೇಳಿಸಿಕೊಳ್ಳುವುದಕ್ಕೆ ಚಿಕ್ಕವರು, ದೊಡ್ಡವರು ಎಂಬ ಭಾವನೆಯನ್ನು ಎಂದೂ ಒಳಗೆ ಬಿಟ್ಟುಕೊಂಡವರಲ್ಲ. ಅಷ್ಟರಮಟ್ಟಿನ ವಿಷಯ ಕುರಿತ ತಾದಾತ್ಮ್ಯತೆಯನ್ನು ಹೊಂದಿದ್ದರು. ಇದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಗಾಢ ಚಿಂತನೆಯ ವ್ಯಕ್ತಿತ್ವ ಇದ್ದಾಗ ಮಾತ್ರ ಆಗುವಂತಹದ್ದು. ಅವರಿಗೆ ದಟ್ಟವಾದ ಓದು ಇದ್ದುದರಿಂದ; ಅದನ್ನು ತಮ್ಮ ಸಾಮಾಜಿಕ ಸಂದರ್ಭದಲ್ಲಿಟ್ಟು ನೋಡುವ ದೃಷ್ಟಾರತೆಯನ್ನು ತಮ್ಮದಾಗಿಸಿಕೊಂಡಿದ್ದರಿಂದ ಆಲಿಸುವುದನ್ನೂ ಕಲೆಯ ಭಾಗ ಎಂದು ತಿಳಿದಿದ್ದರು. ಈ ದೃಷ್ಟಿಯಿಂದ ಅವರ ರಾಮಕೃಷ್ಣ ಹೆಗಡೆ, ಅಬ್ದುಲ್ ನಝೀರ್ ಸಾಬ್, ಜೆ.ಎಚ್. ಪಟೇಲ್, ಎಂ.ಪಿ. ಪ್ರಕಾಶ್, ಎಸ್. ವೆಂಕಟರಾಮನ್, ಜಾರ್ಜ್ ಫೆರ್ನಾಂಡಿಸ್ ಮುಂತಾದವರೊಡನೆ ನಡೆಸಿದ ಬಹುದೀರ್ಘ ಮಾತುಕತೆಯನ್ನು ನಾನು ಮತ್ತು ಡಿ.ಆರ್.ನಾಗರಾಜ್ ಕೇಳಿಸಿಕೊಳ್ಳುವಂತಹ ಸದವಕಾಶವನ್ನು ಪಡೆದಿದ್ದೆವು.
ನನ್ನ ಅರಿವಿನ ಮಟ್ಟಿಗೆ ಈ ಪ್ರಮಾಣದಲ್ಲಿ ಯಾವ ಸಾಹಿತಿಯೂ ರಾಜಕಾರಣಿಗಳ ಜೊತೆ ಸಂಭಾಷಣೆಯಲ್ಲಿ ತೊಡಗಿದವರಿಲ್ಲ. ಅದನ್ನೆಲ್ಲ ಒಂದು ಸಾಮಾಜಿಕ ಜವಾಬ್ದಾರಿಯೆಂದೇ ತಿಳಿದಿದ್ದರು.ರಾಜಕೀಯವನ್ನು ಕೂಡ ಬದುಕಿನ ಅವಿನಾಭಾವ ಸಂಬಂಧದ ಚೌಕಟ್ಟಿನಲ್ಲಿ ನೋಡುತ್ತಿದ್ದರು. ಹಾಗೆಯೇ ತಮ್ಮ ಅರಿವಿನ ನೆಲೆಯಲ್ಲಿ ನಿರ್ದಾಕ್ಷಿಣ್ಯವಾಗಿ ಅಭಿಪ್ರಾಯವನ್ನು ಮಂಡಿಸುವಾಗ ಭಟ್ಟಂಗಿಗಳಾಗುತ್ತಿರಲಿಲ್ಲ. ಕೆಲವರು ಇದನ್ನು ವಕ್ರವಾಗಿ ನೋಡುತ್ತಿದ್ದರೂ ಅದನ್ನು ನಿರ್ಲಕ್ಷಿಸಿ ಹೆಚ್ಚು ಹೆಚ್ಚು ಸಾರ್ವಜನಿಕಗೊಳ್ಳುತ್ತಿದ್ದರು. ಇಂತಹ ಸಮಯದಲ್ಲೆಲ್ಲ ಯು.ಆರ್. ಅವರು ಎಷ್ಟು ತೀವ್ರವಾಗಿ ಬದುಕಿದರು ಅನ್ನಿಸುತ್ತದೆ. ನಿಜವಾಗಿಯೂ ಅವರು ಬದುಕಿನ ಎಲ್ಲಾ ಆಗುಹೋಗುಗಳನ್ನು ಸಂಭ್ರಮದಿಂದಲೇ ಅನುಭವಿಸುತ್ತಿದ್ದರು. ಅವರ ಅತ್ಯಂತ ದೊಡ್ಡ ಗುಣವೆಂದರೆ; ಯಾವುದರ ಬಗ್ಗೆ ಕೂಡ ಸಿನಿಕರಾಗುತ್ತಿರಲಿಲ್ಲ. ಜೊತೆಗೆ ಈ ನೆಲೆಯಲ್ಲಿ ವೈಯಕ್ತಿಕ ಆಕ್ಷೇಪಣೆಗೆ ತೊಡಗುತ್ತಿರಲಿಲ್ಲ. ಹಾಗೆ ಮಾತಾಡುವಂಥವರನ್ನು ಇಷ್ಟಪಡುತ್ತಿರಲಿಲ್ಲ. ಆದರೆ ನೇರವಾಗಿ ‘‘ಸರ್ ನೀವು ಹೀಗೆ’’ ಎಂದು ಹೇಳಿದರೆ ಅದನ್ನು ನಮ್ರತೆಯಿಂದ ಆಲಿಸುತ್ತಿದ್ದರು.
ನನ್ನ ಅರಿವಿನ ಮಟ್ಟಿಗೆ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಇಷ್ಟರಮಟ್ಟಿಗೆ ನಿಂದನೆಗೆ ಒಳಗಾದ ಮತ್ತೊಬ್ಬ ಸಾಹಿತಿ ಇಲ್ಲ. ಸ್ವಲ್ಪಮಟ್ಟಿಗೆ ಲಂಕೇಶ್ ಇರಬಹುದು. ಆದರೆ ಸಾಮಾಜಿಕ ನಿಂದನೆ ಬೇರೆ, ವೈಯಕ್ತಿಕ ನಿಂದನೆ ಬೇರೆ. ಹಾಗೆ ನೋಡಿದರೆ ದಿನ ನಿತ್ಯದ ಆಗುಹೋಗುಗಳಿಗೆ ಸಂಬಂಧಿಸಿದಂತೆ ಬಹುದೊಡ್ಡ ಪ್ರಮಾಣದಲ್ಲಿಯೇ ಸಂವಾದಕ್ಕೆ ಇಳಿಯುತ್ತಿದ್ದರು. ಹಾಗೆ ಇಳಿಯುವುದರಲ್ಲಿ ಸಮಾಜವಾದಿ ಚಳವಳಿಯ ಸ್ವರೂಪ ಎದ್ದು ಕಾಣುತ್ತಿತ್ತು. ಹೀಗೆ ಮಾಡುವಾಗ ಹುಸಿ ಘೋಷಣೆಗಳ ಮೊರೆ ಹೋದವರಲ್ಲ. ಈ ದೃಷ್ಟಿಯಿಂದ ಅವರ ಬರವಣಿಗೆ ಮತ್ತು ಭಾಷಣಗಳ ಸಂದರ್ಭದಲ್ಲಿ ಪ್ರಗತಿಪರ, ಪ್ರತಿಗಾಮಿ ಮುಂತಾದ ಜಾರ್ಗನ್ಸನ್ನು ಎಂದೂ ಬಳಸಿದವರಲ್ಲ. ಇದೇ ಚೌಕಟ್ಟಿನಲ್ಲಿ ನನಗೆ ಲಂಕೇಶ್ ಅವರು ಒಮ್ಮೆ ‘‘ಶೂದ್ರ, ಪ್ರತಿಗಾಮಿ ಪ್ರಗತಿಪರ ಎಂದರೆ ಏನು?’’ ಎಂದು ಕೇಳಿದ್ದರು.
  ಕೊನೆಗೂ ಸಮಾಜದಲ್ಲಿ ಚಾರಿತ್ರಿಕವಾಗಿ ಉಳಿಯುವುದೇನು ಎಂಬ ಚಿಂತನೆಯು ಅವರ ಸೃಜನಶೀಲ ಕೃತಿಗಳಷ್ಟೇ ಚಿಂತನಾಪರ ಕೃತಿಗಳಲ್ಲಿಯೂ ದಟ್ಟವಾಗಿ ನೋಡಬಹುದು. ಈ ನೆಲೆಯಲ್ಲಿ ‘ಸೂರ್ಯನ ಕುದುರೆ’ ಎಂಬ ನೀಳ್ಗತೆ ಬದುಕಿನ ಎಷ್ಟೊಂದು ಸಂಗತಿಗಳಿಗೆ ಮುಖಾಮುಖಿಯಾಗುತ್ತದೆ. ನಿಜವಾಗಿಯೂ ಅದು ‘ಗ್ರೇಟೆಸ್ಟ್ ಸ್ಟೋರಿ’. ಆದ್ದರಿಂದಲೇ ಲಂಕೇಶ್ ಅವರು ಆ ಕಥೆ ಬಂದ ಸಂದರ್ಭದಲ್ಲಿ ನಾನು ತಕ್ಷಣ ಓದಿಲ್ಲ ಎಂಬ ಕಾರಣಕ್ಕೆ ನನಗೆ ಛೀಮಾರಿ ಹಾಕಿದ್ದರು. ಅವರಂತೂ ‘‘ಒಬ್ಬ ಲೇಖಕ ಅಂಥ ಒಂದು ಕಥೆ ಬರೆದರೆ ಸಾಕು’’ ಎಂದು ಅನಂತಮೂರ್ತಿಯವರ ಮುಂದೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಎಷ್ಟೋ ಬಾರಿ ಯೋಚಿಸಿರುವೆ. ಅವರ ಓದು, ಬರವಣಿಗೆ ಮತ್ತು ಸಾರ್ವಜನಿಕ ಬದುಕು ಏಕಕಾಲದಲ್ಲಿ ಇಷ್ಟೊಂದು ಶ್ರೀಮಂತವಾಗಿರಲು ಹೇಗೆ ಸಾಧ್ಯ? ಎಂದು.
ಅವರು ಸಂವಾದ ಪ್ರಿಯರು. ಅದರಲ್ಲೂ ಒಂದು ಸಾಹಿತ್ಯ ಕೃತಿಯೋ ಅಥವಾ ರಾಜಕೀಯ ವಿಷಯ ಸಿಕ್ಕಿದರೆ ಗಂಭೀರ ಗೆಳೆಯರು ಕೂಡಿಕೊಂಡರೆ ಸಮಯದ ಅರಿವನ್ನು ಮರೆತು ಮಾತಿಗೆ ತೊಡಗುತ್ತಿದ್ದರು. ಯಾವುದೂ ಉಡಾಫೆ ಅಲ್ಲ. ಚಿಂತನೆಯ ಸಮೃದ್ಧತೆಯನ್ನು ವಿಸ್ತರಿಸುವಂಥದ್ದು. ಈ ವಿಧದ ಚಿಂತನಾ ಗೋಷ್ಠಿಗಳು ಬೆಂಗಳೂರಿನ ಸ್ನೇಹಲತಾರೆಡ್ಡಿ ಪಟ್ಟಾಭಿರಾಮ ರೆಡ್ಡಿಯವರ ಮನೆಯಲ್ಲಿ ಎಂತೆಂಥ ಸಂವಾದಗಳು ನಡೆದು ಹೋಗಿವೆ. ಹಾಗೆಯೇ ಕಿ.ರಂ.ನಾಗರಾಜ್ ಅವರ ಮನೆಯಲ್ಲಿ, ಕವಿ ಬಿ.ಸಿ.ರಾಮಚಂದ್ರ ಶರ್ಮ ಅವರ ಮನೆಯಲ್ಲಿ ಹಾಗೂ ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ಮತ್ತು ಅವರ ತೋಟದ ಮನೆಯಲ್ಲಿ ಸ್ಮರಣೀಯ ಸಂವಾದಗಳು ನಡೆದು ಹೋಗಿವೆ. ಅದರಲ್ಲೂ ‘ಜಾಗೃತ ಸಾಹಿತ್ಯ ಸಮಾವೇಶ’ದ ಬಹುದೊಡ್ಡ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಚರ್ಚೆ ನಿಜವಾಗಿಯೂ ಚಾರಿತ್ರಿಕವಾದದ್ದು. ಲಂಕೇಶ್ ಅವರ ಸಮ್ಮುಖದಲ್ಲಿ ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ರಾಮಚಂದ್ರಶರ್ಮ, ಡಿ. ಆರ್, ಕಿ.ರಂ. ನಾಗರಾಜ್ ಮುಂತಾದವರೆಲ್ಲ ಸೇರಿ ನಡೆಸಿದ ಸಂವಾದವನ್ನು ಹೇಗೆ ವ್ಯಾಖ್ಯಾನ ಮಾಡಲು; ಈ ಕಾಲ ಘಟ್ಟದಲ್ಲಿ ಸಾಧ್ಯ ಅನ್ನಿಸುತ್ತದೆ. ಇಂತಹದ್ದೇ ಅನುಭವ ಹೆಗ್ಗೋಡಿನ ನೀನಾಸಂ, ಉಡುಪಿಯ ರಥಬೀದಿ ಗೆಳೆಯರು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಗಳಲ್ಲಿ ಅನಂತಮೂರ್ತಿಯವರು ಮೂಡಿಸಿದ ಸಾಂಸ್ಕೃತಿಕ ಸಂಚಲನವನ್ನು ಹೇಗೆ ಮರೆಯಲು ಆಗುತ್ತದೆ. ಆ ಸಂಚಲನವು ರಾಜಕೀಯವಾಗಿಯೂ ಪ್ರಣೀತಗೊಂಡಿರುತ್ತಿತ್ತು.
ಹಾಗೆ ನೋಡಿದರೆ ಒಬ್ಬ ಗಂಭೀರ ಪ್ರಜಾಪ್ರಭುತ್ವವಾದಿ ಲೇಖಕರಾಗಿ ಮೋದಿಯವರ ಧೋರಣೆಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರಂತೆ ಕ್ರಿಯಾಶೀಲರಾಗಿದ್ದರು. ಈ ಸಂದರ್ಭದಲ್ಲಿ ಅವರು ಮೂಡಿಸಿದ ಸಂಚ ಲನವನ್ನು ಹೇಗೆ ಮರೆಯಲು ಸಾಧ್ಯ.
ಅವರು ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದಾಗ ಕೇರಳದ ಆಳ್ವೆಯಲ್ಲಿ ಒಂದು ವಾರ ನಡೆಸಿದ ಸಾಹಿತ್ಯ ಸಮಾವೇಶ ನನ್ನ ಬದುಕಿನ ಅತ್ಯಂತ ಸ್ಮರಣೀಯವಾದದ್ದು. ಅದನ್ನು ಎಷ್ಟು ವಿಧ ದಲ್ಲಿ ಅರ್ಥೈಸಿಕೊಂಡರೂ ಅಪೂರ್ಣವಾಗಿಯೇ ಉಳಿದು ಬಿಡುತ್ತದೆ. ಆ ಕಾಲಘಟ್ಟದ ಭಾರತದ ಉದ್ದಗಲದ ಬಹುಮುಖ್ಯ ಲೇಖಕರೆಲ್ಲಾ ಭಾಗವಹಿಸಿದ್ದ ರೆಂಬುದೇ ಮಹತ್ವಪೂರ್ಣವಾದದ್ದು.ಅದರ ಸ್ವಾರಸ್ಯಗಳನ್ನೆಲ್ಲಾ ಹಿಂದೆ ವಾರ್ತಾಭಾರತಿಯಲ್ಲಿ ಬರೆದಿದ್ದೆ.ಅದನ್ನು ತಕಳಿ ಶಿವಶಂಕರ ಪಿಳ್ಳೈ ಅಂಥವರು ಉದ್ಘಾಟನೆ ಮಾಡಿದ್ದರೆ, ನಮ್ಮ ಶಿವರಾಮ ಕಾರಂತರ ಸಮಾರೋಪ ಭಾಷಣವಿತ್ತು. ಮತ್ತೊಂದು ವಿಶೇಷವೆಂದರೆ: ಆ ಸಂದರ್ಭದ ಎಲ್ಲಾ ಜೀವಂತ ಜ್ಞಾನ ಪೀಠ ಪ್ರಶಸ್ತಿ ವಿಜೇತರೆಲ್ಲ ಭಾಗಿಯಾಗಿ ಸಂವಾದದಲ್ಲಿ ತೊಡಗುವಂತೆ ವ್ಯವಸ್ಥೆ ಮಾಡಿದ್ದರು. ಇಂಥದ್ದನ್ನು ಯು.ಆರ್. ಅನಂತಮೂರ್ತಿಯವರಂಥ ಸಂವಾದ ಪ್ರಿಯರು ಮಾತ್ರ ರೂಪಿಸಲು ಸಾಧ್ಯ ಎಂದು ಎಲ್ಲರೂ ಮುಕ್ತಕಂಠದಿಂದ ಮೆಚ್ಚುಗೆ ಸೂಚಿಸಲು ಮುಂದಾದರು. ಆಗ ಅನಂತಮೂರ್ತಿಯವರು ಅತ್ಯಂತ ನಾಚಿಕೆಯಿಂದ ಅವರೆಲ್ಲರ ಮುಂದೆ ಕೈ ಮುಗಿದು ನಿಂತಿದ್ದರು. 1994ರಲ್ಲಿ ನಡೆದ ಈ ದೃಶ್ಯ ಈಗಲೂ ನನ್ನ ಮನಸ್ಸಿನಲ್ಲಿ ಭಾವನಾತ್ಮಕವಾಗಿಯೇ ಉಳಿದಿದೆ.ಅವರ ಸಾಹಿತ್ಯ, ಸಂಸ್ಕೃತಿ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯ ರೀತಿಯಲ್ಲಿ.
ಎಂಥ ಸಮೃದ್ಧವಾದ ಕಾಲಘಟ್ಟವದು. ನನ್ನಂಥವನಿಗೆ ಕರ್ನಾಟಕದಲ್ಲಿ ಎಲ್ಲಿಯೇ ಮಾತಾಡಲು ಹೋದರೆ; ಅನಂತಮೂರ್ತಿ, ಲಂಕೇಶ್ ಅವರನ್ನು ಪಕ್ಕಕ್ಕೆ ಸರಿಸಿ ಮಾತಾಡಲು ಆಗುವುದಿಲ್ಲ ಎಂಬುದೇ ನನ್ನ ಮಾನಸಿಕ ಸಂತೋಷದ ವಿಷಯ.ಅನಂತಮೂರ್ತಿಯವರ ಎರಡು ಸ್ಮರಣೀಯ ವಾರ್ಷಿಕ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಿತ್ತು. ಅದರಲ್ಲಿ ನಮ್ಮ ಕಾಲದ ಬಹುದೊಡ್ಡ ಚಿಂತಕರಾದ ಗೋಪಾಲಕೃಷ್ಣ ಗಾಂಧಿಯವರು ಮತ್ತು ಪ್ರೊ. ಅಶೀಷ್ ನಂದಿಯವರು ಅನಂತಮೂರ್ತಿಯವರ ಚಿಂತನೆಗಳನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿಸ್ತರಿಸಿದ್ದರು.

Writer - ಶೂದ್ರ ಶ್ರೀನಿವಾಸ್

contributor

Editor - ಶೂದ್ರ ಶ್ರೀನಿವಾಸ್

contributor

Similar News

ಜಗದಗಲ
ಜಗ ದಗಲ