ಶಿವಮೊಗ್ಗದಲ್ಲಿ ಬೇಕಾಬಿಟ್ಟಿಯಾಗಿ ಓಡುತ್ತಿವೆ ಸರ್ಕಾರಿ ಸಿಟಿ ಬಸ್‍ಗಳು: ಗಮನ ಹರಿಸುವರೇ ಸಾರಿಗೆ ಸಚಿವರು ?
ಶಿವಮೊಗ್ಗ, ಡಿ. 21: 'ವೇಳಾಪಟ್ಟಿಯಿಲ್ಲ, ಮಾರ್ಗಸೂಚಿ ಫಲಕಗಳಿಲ್ಲ,ಯಾವ ಬಡಾವಣೆಗೆ, ಎಷ್ಟು ಗಂಟೆಗೆ ಹೋಗುತ್ತವೆ ಎಂಬ ಕನಿಷ್ಠ ಮಾಹಿತಿಯಿಲ್ಲ... ಹಾಳಾಗಿರುವ ಡಿಜಿಟಲ್ ಡಿಸ್‍ಪ್ಲೇ ಬೋರ್ಡ್‍ಗಳ ದುರಸ್ತಿಗೊಳಿಸಿಲ್ಲ, ಪಾಸ್ ಕೊಡುತ್ತಿಲ್ಲ, ಹೇಳೋರಿಲ್ಲ, ಕೇಳೋರಿಲ್ಲ. ಇದು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರವರ ಉಸ್ತುವಾರಿ ಜಿಲ್ಲೆ ಶಿವಮೊಗ್ಗ ನಗರದಲ್ಲಿ 'ಜೆನ್ ನರ್ಮ್' ಯೋಜನೆಯಡಿ ಸಂಚರಿಸುತ್ತಿರುವ ಸರ್ಕಾರಿ ಸಿಟಿ ಬಸ್‍ಗಳ ದುಃಸ್ಥಿತಿಯ ಪ್ರಮುಖ ಹೈಲೈಟ್ಸ್ ಗಳು.
ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ನಿರ್ಲಕ್ಷ್ಯ-ಉದಾಸೀನ ಧೋರಣೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗುವ, ನಗರ ಪ್ರಯಾಣದಲ್ಲಿ ಆಮೂಲಾಗ್ರ ಬದಲಾವಣೆಯ ನಿರೀಕ್ಷೆ ಮೂಡಿಸಿದ್ದ ಸರ್ಕಾರಿ ಸಿಟಿ ಬಸ್‍ಗಳು, ಇದೀಗ ಅಕ್ಷರಶಃ ಯಾರಿಗೂ ಬೇಡವಾದ ಕೂಸಾಗಿ ಪರಿವರ್ತಿತವಾಗಿವೆ. ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿವೆ.
'ಸದ್ಯ ಸರ್ಕಾರಿ ಸಿಟಿ ಬಸ್‍ಗಳ ಸಂಚಾರ ಸ್ಥಿತಿಗತಿ ಗಮನಿಸಿದರೆ ಹಾಗೂ ನಷ್ಟದ ಪ್ರಮಣ ಗಮನಿಸಿದರೆ, ಮುಂದಿನ ದಿನಗಳಲ್ಲಿ ಶಿವಮೊಗ್ಗ ನಗರದ ಈ ಬಸ್‍ಗಳ ಸಂಚಾರ ಸ್ಥಗಿತಗೊಂಡರೂ ಅಚ್ಚರಿಯಿಲ್ಲ. ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿ ಧೋರಣೆಯಿಂದ ಜನೋಪಯೋಗಿ ಯೋಜನೆಯೊಂದು ಮೂಲೆಗುಂಪಾಗುತ್ತಿರುವುದು ನಿಜಕ್ಕೂ ದುರಂತದ ಸಂಗತಿ ಎಂದು ಜನಪರ ಹೋರಾಟಗಾರ ಸಿ.ಜೆ.ಮಧುಸೂದನ್‍ರವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾರೆ.
ವ್ಯವಸ್ಥೆಯೇ ಇಲ್ಲ: ಕೆಎಸ್‍ಆರ್‍ಟಿಸಿ ಮೂಲಗಳು ಹೇಳುವ ಮಾಹಿತಿ ಅನುಸಾರ, ಜೆನ್ ನರ್ಮ್ ಯೋಜನೆಯಡಿ ನಗರಕ್ಕೆ 40 ಬಸ್‍ಗಳು ಆಗಮಿಸಿವೆ. 38 ಬಸ್‍ಗಳನ್ನು ಓಡಿಸಲಾಗುತ್ತಿದೆ. ಇದರಲ್ಲಿ 10 ಬಸ್‍ಗಳನ್ನು ಶಿವಮೊಗ್ಗ-ಭದ್ರಾವತಿ ನಗರಗಳ ಮಧ್ಯೆ ಸಂಚರಿಸುತ್ತಿದ್ದು, ಉಳಿದ 28 ಬಸ್‍ಗಳು ನಗರದಿಂದ ವಿವಿಧ ಬಡಾವಣೆ ಹಾಗೂ 5 ಕಿ.ಮೀ. ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಓಡಿಸಲಾಗುತ್ತಿದೆ ಎಂದು ತಿಳಿಸುತ್ತವೆ.
'ಬಹುತೇಕ ಸರ್ಕಾರಿ ಬಸ್‍ಗಳಲ್ಲಿದ್ದ ಡಿಜಿಟಲ್ ಡಿಸ್‍ಪ್ಲೇ ಬೋರ್ಡ್‍ಗಳು ಹಾಳಾಗಿವೆ. ಬಸ್‍ಗಳಲ್ಲಿ ಸೂಕ್ತ ಮಾರ್ಗಸೂಚಿ, ಹಾದು ಹೋಗುವ ಪ್ರದೇಶಗಳ ವಿವರ ನಮೂದಿಸಿಲ್ಲ. ಹಾಗೆಯೇ ಯಾವ ಪ್ರದೇಶಗಳಿಗೆ ಎಷ್ಟು ಗಂಟೆಗೆ ಬಸ್‍ಗಳು ಹೋಗುತ್ತವೆ-ಹಿಂದಿರುಗುತ್ತವೆ ಎಂಬ ಕನಿಷ್ಠ ಮಾಹಿತಿಯೂ ಇಲ್ಲವಾಗಿದೆ. ಇದರಿಂದ ಸರ್ಕಾರಿ ಸಿಟಿ ಬಸ್‍ಗಳಲ್ಲಿ ಓಡಾಡಲು ಆಸಕ್ತಿಯಿರುವ ನಾಗರಿಕರು, ಅನಿವಾರ್ಯವಾಗಿ ಖಾಸಗಿ ಬಸ್ ಅಥವಾ ಆಟೋಗಳಲ್ಲಿ ಸಂಚರಿಸುವಂತಾಗಿದೆ ಎಂದು ಜನಪರ ಹೋರಾಟಗಾರ ಶ್ರೀಜಿತ್ ಗೌಡರವರು ದೂರುತ್ತಾರೆ.
ಏನಿದು ಯೋಜನೆ: ಈ ಹಿಂದಿನ ಯುಪಿಎ ಸರ್ಕಾರವು ಶಿವಮೊಗ್ಗ ಹಾಗೂ ಭದ್ರಾವತಿ ನಗರಗಳಲ್ಲಿ ಜೆನ್‍ನರ್ಮ್ ಯೋಜನೆಯಡಿ ಸರ್ಕಾರಿ ಸಿಟಿ ಬಸ್ ಓಡಿಸಲು ಅನುಮತಿ ನೀಡಿತ್ತು. ಪ್ರತ್ಯೇಕ ಬಸ್ ಟರ್ಮಿನಲ್, ಡಿಪೋ ಹಾಗೂ ವರ್ಕ್‍ಶಾಪ್ ನಿರ್ಮಾಣಕ್ಕೆ ಅನುದಾನ ಕೂಡ ಬಿಡುಗಡೆ ಮಾಡಿತ್ತು. ಈ ಹಿಂದಿನ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್‍ರವರು ಶಿವಮೊಗ್ಗಕ್ಕೆ ಮಂಜೂರಾಗಿದ್ದ 65 ಸಿಟಿ ಬಸ್‍ಗಳ ಸಂಚಾರಕ್ಕೆ ಪರ್ಮಿಟ್ ನೀಡಿ ಆದೇಶಿಸಿದ್ದರು. ಜೊತೆಗೆ ಸಂತೆಕಡೂರು ಗ್ರಾಮದಲ್ಲಿ ಡಿಪೋ, ಟರ್ಮಿನಲ್, ವರ್ಕ್‍ಶಾಪ್ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಕೂಡ ಕೆಎಸ್‍ಆರ್‍ಟಿಸಿಗೆ ಮಂಜೂರುಗೊಳಿಸಿದ್ದರು.
ಮತ್ತೊಂದೆಡೆ ಶಿವಮೊಗ್ಗ ನಗರದಲ್ಲಿ ಸರ್ಕಾರಿ ನಗರ ಸಾರಿಗೆ ಬಸ್‍ಗಳ ಸಂಚಾರಕ್ಕೆ ಆಸ್ಪದವಾಗದಂತೆ ಕಾಣದ ಕೈಗಳು ಸರ್ಕಾರದ ಹಂತದಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದವು. ಈ ಕಾರಣದಿಂದ ಕೆಎಸ್‍ಆರ್‍ಟಿಸಿ ಸಂಸ್ಥೆ ಕೂಡ ಬಸ್ ಓಡಿಸಲು ನಿರಾಸಕ್ತಿ ವಹಿಸಿತ್ತು. ಇನ್ನೊಂದೆಡೆ ವಿವಿಧ ಸಂಘಸಂಸ್ಥೆಗಳು, ನಾಗರಿಕರು ಸರ್ಕಾರಿ ಸಿಟಿ ಬಸ್‍ಗಳ ಸಂಚಾರಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು. ನಾಗರಿಕರ ಒತ್ತಡಕ್ಕೆ ಮಣಿದ ಈ ಹಿಂದಿನ ರಾಜ್ಯ ಸರ್ಕಾರವು ಸಿಟಿ ಬಸ್‍ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿತ್ತು. ಸ್ವತಃ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರೇ ಬಸ್‍ಗಳ ಸಂಚಾರಕ್ಕೆ ಚಾಲನೆ ನೀಡಿದ್ದರು. ಕಾಲಮಿತಿಯಲ್ಲಿ ಪೂರ್ಣಪ್ರಮಾಣದಲ್ಲಿ ಬಸ್‍ಗಳನ್ನು ಓಡಿಸಲಾಗುವುದು. ನಾಗರಿಕರು-ವಿದ್ಯಾರ್ಥಿಗಳಿಗೆ ಪಾಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಚಿವರು ತಿಳಿಸಿದ್ದರು.
ಅವ್ಯವಸ್ಥೆ: ಇಲ್ಲಿಯವರೆಗೂ ನಾಗರಿಕರಿಗೆ ಪ್ರತ್ಯೇಕ ಪಾಸ್ ವಿತರಿಸುವ ವ್ಯವಸ್ಥೆ ಆರಂಭಿಸುವುದಿರಲಿ, ಸದ್ಯ ಓಡುತ್ತಿರುವ ಸರ್ಕಾರಿ ಸಿಟಿ ಬಸ್‍ಗಳನ್ನೂ ಸರಿಯಾಗಿ ಓಡಿಸುತ್ತಿಲ್ಲ. ಇನ್ನಾದರೂ ಸಾರಿಗೆ ಸಚಿವರು ಸರ್ಕಾರಿ ಸಿಟಿ ಬಸ್‍ಗಳ ಪೂರ್ಣ ಪ್ರಮಾಣದ ಓಡಾಟಕ್ಕೆ ಕ್ರಮಕೈಗೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಾಗರಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.
ಪಾಸ್ ಸೌಲಭ್ಯ ಕಲ್ಪಿಸಿ: ಪ್ರವೀಣ್ ಕುಮಾರ್
ಬೆಂಗಳೂರಿನ ಬಿಎಂಟಿಸಿ ಬಸ್‍ಗಳ ರೀತಿಯಲ್ಲಿ ನಗರದಲ್ಲಿ ಸಂಚರಿಸುತ್ತಿರುವ ಸರ್ಕಾರಿ ಸಿಟಿ ಬಸ್‍ಗಳಲ್ಲಿಯೂ ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ರಿಯಾಯಿತಿ ದರದಲ್ಲಿ ಡೈಲಿ, ವ್ಹೀಕ್ಲಿ, ಮಾಸಿಕ, ವಾರ್ಷಿಕ ಪಾಸ್ ಸೌಲಭ್ಯ ಕಲ್ಪಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಹಾಗೆಯೇ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಹಾಗೂ ಶಾಲೆ ಬಿಡುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ಸಿಟಿ ಬಸ್‍ಗಳನ್ನು ಓಡಿಸಬೇಕು ಎಂದು ಯುವ ಮುಖಂಡ ಎಂ. ಪ್ರವೀಣ್ ಕುಮಾರ್ ರವರು ಒತ್ತಾಯಿಸಿದ್ದಾರೆ.
ಹೋರಾಟ ಅನಿವಾರ್ಯ: ಹೋರಾಟಗಾರ ಸಿ.ಜೆ.ಮಧುಸೂದನ್
ನಗರಕ್ಕೆ ಮಂಜೂರಾಗಿರುವ 65 ಸಿಟಿ ಬಸ್‍ಗಳ ಸಂಚಾರಕ್ಕೆ ಕೆಎಸ್‍ಆರ್‍ಟಿಸಿ ಗಮನಹರಿಸಬೇಕು. ಹಾಗೆಯೇ ಪ್ರತ್ಯೇಕ ಬಸ್ ಟರ್ಮಿನಲ್, ಡಿಪೋ ಹಾಗೂ ವರ್ಕ್‍ಶಾಪ್ ನಿರ್ಮಾಣ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಸದ್ಯ ಓಡಿಸುತ್ತಿರುವ ಬಸ್‍ಗಳ ವೇಳಾಪಟ್ಟಿ, ಸಂಚರಿಸುವ ಪ್ರದೇಶಗಳ ವಿವರ ಪ್ರಕಟಿಸಬೇಕು. ಪಾಸ್ ವಿತರಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಯುವ ಮುಖಂಡ ಸಿ.ಜೆ.ಮಧುಸೂದನ್‍ರವರು ಎಚ್ಚರಿಕೆ ನೀಡುತ್ತಾರೆ.
ಭದ್ರಾವತಿಗೆ ಓಡಿಸುತ್ತಿರುವುದೇಕೆ?: ಮಾಜಿ ಅಧ್ಯಕ್ಷ ಶ್ರೀಜಿತ್‍ಗೌಡ
ಇಲ್ಲಿಯವರೆಗೂ ನಗರದ ಹಲವು ಬಡಾವಣೆಗಳಿಗೆ ಸಿಟಿ ಬಸ್‍ಗಳ ಸಂಚಾರವೇ ಇಲ್ಲವಾಗಿದೆ. ಮತ್ತೊಂದೆಡೆ ನಗರದ ಹೊರವಲಯ, ಗ್ರಾಮೀಣ ಭಾಗದ ನಿವಾಸಿಗಳು ಸರ್ಕಾರಿ ಸಿಟಿ ಬಸ್ ಓಡಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಶಿವಮೊಗ್ಗ - ಭದ್ರಾವತಿ ನಡುವೆ 10 ನಗರ ಸಾರಿಗೆ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಈ ಬಸ್‍ಗಳನ್ನು ನಗರ ಸಂಚಾರಕ್ಕೆ ಮಾತ್ರ ಬಳಕೆ ಮಾಡಬೇಕು. ಹಾಗೆಯೇ ರಾತ್ರಿ 10 ಗಂಟೆಯವರೆಗೂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ಸರ್ಕಾರಿ ಸಿಟಿ ಬಸ್‍ಗಳನ್ನು ಓಡಿಸಬೇಕು' ಎಂದು ಎನ್‍ಎಸ್‍ಯುಐ ಸಂಘಟನೆಯ ಮಾಜಿ ಅಧ್ಯಕ್ಷ ಶ್ರೀಜಿತ್‍ಗೌಡ ಆಗ್ರಹಿಸಿದ್ದಾರೆ.