ಅಂಡಮಾನ್ ಬುಡಕಟ್ಟು ಜನರ ಬದುಕು

Update: 2018-12-22 18:08 GMT

ನೆಹರೂ ಅವರ ಕಾಲದಲ್ಲಿನ ಬುಡಕಟ್ಟು ನೀತಿಯ ಆಧಾರದ ಮೇಲೆ ಈ ಬುಡಕಟ್ಟುಗಳನ್ನು ಸಂರಕ್ಷಿತ ಬುಡಕಟ್ಟುಗಳು ಎಂದು ಘೋಷಿಸಲಾಯಿತು. ಆನಂತರ, ಅವರ ಬಗ್ಗೆ ಬೇಕಾದಷ್ಟು ಗಮನವನ್ನು ಹರಿಸಲಿಲ್ಲ. ಪ್ರವಾಸಿಗರ ದೃಷ್ಟಿಯಿಂದ ಅವರನ್ನು ಮ್ಯೂಸಿಯಂನಲ್ಲಿನ ವಸ್ತುಗಳಂತೆ ಬಳಸಿಕೊಳ್ಳಲಾಯಿತು. ಸರಕಾರವು ಮನಸ್ಸು ಮಾಡಿದ್ದರೆ ಅವರ ಜೀವನದಲ್ಲಿ ಮಧ್ಯ ಪ್ರವೇಶಿಸಿ ಅವರನ್ನು ನಮ್ಮೆಲ್ಲರ ಜೊತೆ ಒಂದುಗೂಡಿಸಬಹುದಾಗಿತ್ತು. ಆದರೂ ಕೂಡ ಅದರ ಬಗೆಗೆ ಯಾರ ಗಮನವೂ ಹರಿಯಲಿಲ್ಲ. ಅಂಡಮಾನ್‌ನಲ್ಲಿ ಹೋಗಿ ನೆಲೆಸಿರುವ ವಲಸಿಗರು ಮತ್ತು ಸೆಲ್ಯುಲಾರ್ ಜೈಲಿನಲ್ಲಿ ಉಳಿದು ಸ್ವತಂತ್ರಗೊಂಡವರ ವಂಶಸ್ಥರಿಗೆ ಭಾರತದ ಸ್ವಾತಂತ್ರ ಮುಖ್ಯವಾಗಿತ್ತೇ ಹೊರತು ಅಂಡಮಾನ್‌ನ ಮೂಲನಿವಾಸಿಗಳ ಸ್ವಾತಂತ್ರ್ಯವಲ್ಲ.

ಅಂಡಮಾನ್ ಬಗೆಗೆ ಕೆಲವರು ಏನೇನೋ ಕಲ್ಪಿಸಿಕೊಂಡಿರುತ್ತಾರೆ. ಅದು ನಮ್ಮ ದೇಶದ ಕೇಂದ್ರಾಡಳಿತದ ಪ್ರದೇಶ. ಹಾಗಿದ್ದರೂ ಅಲ್ಲಿಗೆ ಹೋಗಲು ಪಾಸ್‌ಪೋರ್ಟ್ ಅಗತ್ಯವಿದೆಯೇ ಎಂದು ಕೇಳುತ್ತಾರೆ. ಜೊತೆಗೆ ಅಂಡಮಾನ್‌ನಿಂದ 600 ಕಿ.ಮೀ. ದೂರದಲ್ಲಿರುವ ನಿಕೋಬಾರ್, ಅಂಡಮಾನ್‌ಗೆ ಹೊಂದಿಕೊಂಡ ಪ್ರದೇಶವೆಂದು ಭಾವಿಸುತ್ತಾರೆ. ಅಂಡಮಾನ್ - ನಿಕೋಬಾರ್ ಒಂದೇ ದ್ವೀಪವಲ್ಲ. ಅದು ಅನೇಕ ದ್ವೀಪಗಳ ಸಮುಚ್ಚಯ. ಅಂಡಮಾನ್‌ನ ಮುಖ್ಯ ನಗರ ಪೋರ್ಟ್ ಬ್ಲೇರ್. ಅಲ್ಲಿಗೆ ಹೋಗುವ ಮೊದಲು ಜನರು ಅಲ್ಲೆಲ್ಲಾ ಜಾರವಾ, ನಿಕೋಬಾರಿ, ಸೆಂಟಿನಿಲೀಸ್ ಮೊದಲಾದ ಬುಡಕಟ್ಟುಗಳು ಬಂತ್ತಲೆಯಾಗಿ ಓಡಾಡುತ್ತಿರಬಹುದೆಂದು ಕಲ್ಪಿಸಿಕೊಳ್ಳುತ್ತಾರೆ. ಇವ್ಯಾವ ಕಲ್ಪನೆಗಳಿಗೂ ಅಲ್ಲಿ ಜಾಗವಿಲ್ಲ. ಪೋರ್ಟ್‌ಬ್ಲೇರ್ ನಗರವು ನಮ್ಮ ಮಂಗಳೂರು, ಕೊಚ್ಚಿನ್ ಅಥವಾ ಕಣ್ಣೂರಿನಂತಿದೆ. ಅಲ್ಲಿನ ವೈಶಿಷ್ಟವೇನೆಂದರೆ ಈ ನಗರಗಳಲ್ಲಿರುವಂತೆ ಒಂದೇ ಭಾಷೆಯ ಒಂದೇ ಪ್ರದೇಶದ ಜನ ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಬಂಗಾಲಿಗಳು, ತೆಲುಗಿನವರು, ತಮಿಳರು, ಉತ್ತರ ಭಾರತದಿಂದ ಬಂದ ಬೇರೆ ಬೇರೆ ಜನರು, ಜೊತೆಗೆ 43 ಕನ್ನಡ ಕುಟುಂಬಗಳಿವೆ.

ಮುಸಲ್ಮಾನರು, ಹಿಂದೂಗಳು, ಕ್ರಿಶ್ಚಿಯನ್ನರು ಎಂಬ ಭೇದ ಭಾವವಿಲ್ಲದೇ ಯಾರನ್ನು ಬೇಕಾದರೂ ಮದುವೆಯಾಗುತ್ತಾರೆ. ಒಂದೇ ಮನೆಯಲ್ಲಿ ಅತ್ತೆ ಮುಸ್ಲಿಮ್ ಆಗಿದ್ದು, ಮಾವ ಕ್ರಿಶ್ಚಿಯನ್ ಆಗಿದ್ದು, ಸೊಸೆ ಹಿಂದೂ ಆಗಿರುತ್ತಾಳೆ. ಈ ರೀತಿಯ ಕುಟುಂಬಗಳನ್ನು ವಿವಿಧ ಧರ್ಮಗಳ ಭಾಷೆಗಳ ಸಂಯೋಜನೆಯಲ್ಲಿ ಕಾಣಬಹುದು. ಮತ್ತೊಂದು ಸ್ಪಷ್ಟಪಡಿಸಬೇಕಾಗಿರುವ ಅಂಶವೆಂದರೆ, ಇದು ಭಾರತದ ಭೂಭಾಗವೇ ಆಗಿರುವುದರಿಂದ ಅಂಡಮಾನ್‌ಗೆ ಹೋಗಬೇಕಾದಲ್ಲಿ ರಹದಾರಿ ಅಥವಾ ಅನುಮತಿಯ ಅಗತ್ಯವಿಲ್ಲ. ಅಂಡಮಾನ್ ಸಮಾಜ ಕುರಿತು ಬೇಕಾದಷ್ಟು ಬರೆಯಬಹುದು. ಈಗ ಅದನ್ನು ಬರೆಯಲು ಹೋಗುವುದಿಲ್ಲ.

ಜಾನ್ ಅಲನ್

ಕಳೆದ ಎರಡು ತಿಂಗಳಿನಿಂದ ಅಂಡಮಾನ್ ಬೇರೆಯದೇ ಆದ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅಮೆರಿಕದ ಕ್ರಿಶ್ಚಿಯನ್ ಪಾದ್ರಿ ಜಾನ್ ಅಲನ್ ಛಾವ್ ಎನ್ನುವವನು ಅಂಡಮಾನ್‌ನ ಸೆಂಟಿನಿಲೀಸ್ ಬುಡಕಟ್ಟಿನವರಿಂದ 17 ನವೆಂಬರ್ 2018ರಂದು ಹತ್ಯೆಗೀಡಾದನೆಂದು ಹೇಳಲಾಯಿತು. ಈ ಸುದ್ದಿಯು ಜಗತ್ತಿನೆಲ್ಲೆಡೆ ಹರಡಿ ಅದಕ್ಕೆ ವಿವಿಧ ಬಗೆಯ ಪ್ರತಿಕ್ರಿಯೆಗಳು ಬಂದವು. ಇದನ್ನು ಪರಿಶೀಲಿಸುವ ಮೊದಲು ಅಂಡಮಾನ್‌ನ ಎರಡು ಬುಡಕಟ್ಟಿನ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ. ಅಲ್ಲಿ ಒಟ್ಟು 6 ಬುಡಕಟ್ಟುಗಳಿವೆ. ಜಾರವಾ, ಓಂಗೇ, ಸಿಂಟಿನಿಲೀಸ್, ನಿಕೋಬಾರಿ, ಗ್ರೇಟ್ ಅಂಡಮಾನ್ ಮತ್ತು ಶೊಂಪೇನ್ನರು. ಓಂಗೇ, ಜಾರವಾ ಮತ್ತು ನಿಕೋಬಾರಿಗಳು ಬೇರೆ ಬೇರೆ ಜನರ ಸಂಪರ್ಕಕ್ಕೆ ಬಂದು ತಮ್ಮ ಒಡನಾಟಕ್ಕೆ ಬಂದವರನ್ನು ಸಹಿಸಿಕೊಳ್ಳುತ್ತಾರೆ.

ಆದರೆ ಸೆಂಟಿನೀಲಿಗಳು ಇವರಿಗಿಂತ ಬೇರೆ. ಇವರ ಸಂಪರ್ಕಕ್ಕೆ ಯಾರಾದರೂ ಪ್ರಯತ್ನಿಸಿದರೆ ತಮ್ಮ ಮೇಲೆ ಅವರು ಹಾನಿ ಮಾಡುಬಹುದೆಂಬ ಭಯದಿಂದ ರಕ್ಷಿಸಿಕೊಳ್ಳಲು ವಿಷದ ಬಾಣ ಹೂಡುತ್ತಾರೆ. ಆ ಬಾಣಕ್ಕೆ ಸಿಕ್ಕಿ ಕೆಲವರು ಸಾವನ್ನಪ್ಪುತ್ತಾರೆ. ಇದನ್ನು ಆಕ್ರಮಣ ಎನ್ನಲಾಗದು. ತಮ್ಮ ರಕ್ಷಣೆಗಾಗಿ ನಡೆದ ಪ್ರಯತ್ನ. ಅಮೆರಿಕದಿಂದ ಬಂದ ಪಾದ್ರಿ ವಿಷಯದಲ್ಲಿಯೂ ಹೀಗೆಯೇ ಆಯಿತು. ಈತನು 27 ವರ್ಷದ ಯುವಕ. ಸಾಹಸ ಮನೋಭಾವ ಹೊಂದಿದವನು. ಅದರ ಜೊತೆಗೆ ಧರ್ಮದ ಅಮಲೂ ಏರಿತ್ತು. ಕ್ರೈಸ್ತ ಧರ್ಮಕ್ಕೆ ಈ ಬುಡಕಟ್ಟಿನವರನ್ನು ಮತಾಂತರ ಮಾಡಬಹುದೆಂಬ ಆಸೆಯನ್ನು ಇಟ್ಟುಕೊಂಡಿದ್ದನು. ಆದುದರಿಂದಲೇ ಅನೇಕ ಬಾರಿ ಪ್ರಯತ್ನಪಟ್ಟಿದ್ದನು. ಅಂಡಮಾನ್‌ನ ಮೀನು ಹಿಡಿಯುವವರು ಈತನನ್ನು ಆ ಬುಡಕಟ್ಟು ವಾಸಿಸುವ ಸ್ಥಳದವರೆಗೂ ಕೊಂಡೊಯ್ದಿದ್ದರು. ಒಂದೆರಡು ಬಾರಿ ಅವರನ್ನು ಸಂಪರ್ಕಿಸಲು ವಿಫಲ ಪ್ರಯತ್ನ ನಡೆಸಿದ್ದರು. ಕೊನೆಗೆ ಹೇಗೋ ಮಾಡಿ ಈ ಪಾದ್ರಿ ಜಾನ್ ಅಲನ್, ಆ ಬುಡಕಟ್ಟಿನವರ ದಡವನ್ನು ತಲುಪಿದನು. ಮುಂದಿನದೆಲ್ಲ ಕಥೆ. ಜಾನ್ ಅಲ್ಲಿಗೆ ಹೋದನೆಂದೂ, ಅವನನ್ನು ಕೊಂದು ಎಳೆದುಕೊಂಡು ಹೋಗಿ ಬುಡಕಟ್ಟಿನ ಜನ ಸಮುದ್ರ ತೀರದ ಮರಳಿನಲ್ಲಿ ಹೂತು ಹಾಕಿದರೆಂದು ಮೀನು ಹಿಡಿಯುವ ಬೆಸ್ತರು ಬಂದು ಸುದ್ದಿ ಕೊಟ್ಟರು. ಅದರ ಆಧಾರದ ಮೇಲೆ ಪೋರ್ಟ್‌ಬ್ಲೇರ್‌ನ ಪೊಲೀಸರು ದೂರನ್ನು ದಾಖಲಿಸಿದರು. ಎರಡು ದಿನಗಳ ನಂತರ ಜಾನ್ ಅಮೆರಿಕನ್ ಪ್ರಜೆಯಾದುದರಿಂದ ಜಗತ್ತಿನೆಲ್ಲೆಡೆ ಸುದ್ದಿ ಪ್ರಸಾರವಾಯಿತು. ಅಲ್ಲಿಗೆ ಹೋಗಲು ಭಾರತ ಸರಕಾರದಿಂದ ಒಂದು ಆಂತರಿಕ ಅನುಮತಿಯನ್ನು ಪಡೆಯಬೇಕು. ಅದನ್ನು ಆರ್.ಎ.ಪಿ ಎಂದು ಕರೆಯುತ್ತಾರೆ. ಎಂದರೆ, ರಿಸ್ಟ್ರಿಕ್ಟೆಡ್ ಏರಿಯಾ ಪರ್ಮಿಟ್ ಎಂದರ್ಥ. ಹೀಗೆಂದರೆ, ನಿರ್ಬಂಧಿತ ಪ್ರದೇಶಕ್ಕೆ ಅನುಮತಿ ಪತ್ರವನ್ನು ಪಡೆಯುವುದು. ಆದರೆ ಈ ಪದ್ಧತಿಯನ್ನು ಇತ್ತೀಚೆಗೆ ತೆಗೆದುಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ. ಅದೇನೇ ಇರಲಿ, ಜಾನ್ ಸಾವಿನ ಕುರಿತು ಇದ್ದುದಕ್ಕಿಂತ ಹೆಚ್ಚು ಕಾಳಜಿ ಸೆಂಟಿನಿಲೀಸ್‌ನರ ಬುಡಕಟ್ಟಿನ ಬಗ್ಗೆ ಇತ್ತು.

ಪ್ರಪಂಚಾದ್ಯಂತ ಇರುವ ಮಾನವಶಾಸ್ತ್ರಜ್ಞರು ಮತ್ತು ಸಮಾಜಶಾಸ್ತ್ರಜ್ಞರಿಗೆ ಅಂಡಮಾನ್‌ನ ಬುಡಕಟ್ಟುಗಳ ಬಗ್ಗೆ ಯಾವಾಗಲೂ ಒಂದು ಕಣ್ಣಿರುತ್ತದೆ. ಏಕೆಂದರೆ, 3 ಸಾವಿರ ವರ್ಷಗಳ ಹಿಂದೆಯೇ ಮಾನವನ ಜೀವನ ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಬುಡಕಟ್ಟಿನ ಜೀವನವನ್ನು ಅಧ್ಯಯನ ಮಾಡಿದರೆ ಸಾಕು ಎಂಬ ಭಾವನೆ ಇದೆ. ಇವರು ಎಂದೂ ಹೊರಜಗತ್ತಿನ ಸಂಪರ್ಕಕ್ಕೆ ಬಂದವರೇ ಅಲ್ಲ. ದಟ್ಟವಾದ ಅರಣ್ಯಗಳಲ್ಲಿ ಪ್ರಾಚೀನ ಮಾನವನಂತೆಯೇ ವಿಕಾಸದ ಪ್ರಾಥಮಿಕ ಹಂತದಲ್ಲಿಯೇ ಇದ್ದಾರೆ. ಬೇಟೆಯಾಡುವುದರ ಮೂಲಕ ಆಹಾರವನ್ನು ಸಂಗ್ರಹಿಸುತ್ತಾರೆ. ಯಾವ ಬಗೆಯ ಬಟ್ಟೆಬರೆಗಳನ್ನೂ ಧರಿಸುವುದಿಲ್ಲ.

ಇಲ್ಲಿ ನಿಮ್ಮ ಗಮನಕ್ಕೆ ಮತ್ತೊಂದು ವಿಚಾರವನ್ನು ತರಬೇಕು. ಅಂಡಮಾನ್ ದ್ವೀಪ ಸಮೂಹವು ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಕೇವಲ ಪ್ರಕೃತಿಯ ಸೌಂದರ್ಯದ ಕಾರಣಕ್ಕಲ್ಲ. ಪ್ರಾಚೀನ ಬುಡಕಟ್ಟುಗಳಿವೆ ಎಂಬ ಕಾರಣಕ್ಕೆ ಸಾವಿರಾರು ವಿದೇಶೀಯರು ಅಂಡಮಾನ್‌ಗೆ ಪ್ರತಿವರ್ಷವೂ ಭೇಟಿ ನೀಡುತ್ತಾರೆ. ಇದರಿಂದ ಅಂಡಮಾನ್‌ನ ಆರ್ಥಿಕ ಬದುಕು ಸಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಸರಕಾರಕ್ಕೆ ಹಣ ವಿನಿಮಯದ ಗಳಿಕೆಯೂ ಆಗುತ್ತದೆ. ಆದುದರಿಂದ ಭಾರತ ಸರಕಾರವು ಪ್ರತ್ಯೇಕ ಬುಡಕಟ್ಟುಗಳಿರುವ ಅರಣ್ಯಗಳನ್ನು ಸಂರಕ್ಷಿತ ಪ್ರದೇಶಗಳೆಂದು ಘೋಷಿಸಿದೆ. ಇಲ್ಲಿಗೆ ಹೋಗಲು ಪೊಲೀಸ್ ಕಾವಲಿನಲ್ಲಿಯೇ ಹೋಗಬೇಕು. ನಿಗದಿತ ಸಮಯದಲ್ಲಿ ಜಾರವಾ ಬುಡಕಟ್ಟು ವಾಸಿಸುವ ಅರಣ್ಯ ಪ್ರದೇಶದಲ್ಲಿ ಜನರನ್ನು ಬಸ್‌ನಲ್ಲಿ ಕೊಂಡೊಯ್ಯಲಾಗುತ್ತದೆ. ಕಿಟಕಿಯಲ್ಲಿ ಈ ಜನರನ್ನು ಪ್ರಾಣಿಗಳಂತೆ ಪ್ರವಾಸಿಗರು ನೋಡಿ ಆನಂದಿಸುತ್ತಾರೆ. ಆದರೆ ಸೆಂಟಿನಿಲಿ ಬುಡಕಟ್ಟು ಮಾತ್ರ ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ದುರ್ಗಮವಾದ ಕಾಡುಗಳಲ್ಲಿ ವಾಸಿಸುತ್ತಾರೆ. ಈಗಾಗಲೇ ಮೇಲೆ ತಿಳಿಸಿದಂತೆ, ಅವರನ್ನು ಭೇಟಿಯಾಗುವುದು ಅಧ್ಯಯನ ಮಾಡುವುದು ಕಷ್ಟಕರ. ಮತ್ತೊಂದು ವಿಷಯವನ್ನು ಹೇಳಲು ಮರೆತೆ.. ಭಾರತದಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿದಾಗ ಪೋರ್ಟ್‌ಬ್ಲೇರ್‌ನ ಅನೇಕ ಕಾಲೇಜುಗಳು, ಕಟ್ಟಡಗಳು ನಾಶವಾದವು. ವಾರ ಕಳೆದರೂ ಈ ಬುಡಕಟ್ಟುಗಳ ಸ್ಥಿತಿ ಏನಾಗಿದೆ ಎಂದು ಯಾರಿಗೂ ತಿಳಿಯಲಿಲ್ಲ. ಅವರ ಬಗ್ಗೆ ಕಾಳಜಿಯುಳ್ಳ ಮಾನವ ಹಕ್ಕು ಹೋರಾಟಗಾರರು, ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಪರಿಸರ ಪ್ರೇಮಿಗಳು ಕಂಗಾಲಾಗಿ ಹೋಗಿದ್ದರು. ನನಗಂತೂ ಭಾರೀ ದುಃಖವಾಗಿತ್ತು. ಅವರ ಬಗ್ಗೆ ಯಾವಾಗಲಾದರೂ ಏನಾದರೂ ಸುಳಿವು ಸಿಗಬಹುದೆಂದು ಕಾಯತ್ತಿದ್ದೆ. ಕೊನೆಗೊಂದು ಸಂತೋಷದ ಸುದ್ದಿ ಬಂದಿತು. ಅವರನ್ನು ಹುಡುಕಿ ಕೊಂಡು ಸೇನಾಪಡೆಗಳು ಅರಣ್ಯದೊಳಗೆ ಹುಡುಕಾಡತೊಡಗಿದರು. ಕೂಡಲೇ ಸೆಂಟಿನೀಲಿಗಳು ಜಾರವಾಗಳು ಕುಣಿದುಕುಪ್ಪಳಿಸುತ್ತಾ ಹೆಲಿಕಾಪ್ಟರಿನ ಕಡೆಗೆ ಬಾಣಗಳನ್ನು ಬಿಡತೊಡಗಿದರು. ಇದರಿಂದ ಸಂತೋಷದ ಹೊನಲು ಹರಡಿತು.

ಹೀಗೆ ಎಲ್ಲ ಕಾಲಕ್ಕೂ ನಾಗರಿಕ ಎಂದು ಕರೆದುಕೊಳ್ಳುತ್ತಿರುವ ಸಮಾಜದ ಕುತೂಹಲ, ಆಶಯ ಮತ್ತು ಕನಸಿನಂತಿರುವ ಸೆಂಟಿನೀಲರಿಗೆ ಈ ಜಾನ್‌ನ ಸಾವಿನಿಂದ ಏನಾಗುತ್ತದೆಯೋ ಎಂಬ ಆತಂಕವಿದೆ. ಏಕೆಂದರೆ, ಅವನು ಅಂತರ್‌ರಾಷ್ಟ್ರೀಯ ಅಮೆರಿಕನ್ ಪ್ರಜೆ. ಭಾರತದ ಭೂಪ್ರದೇಶದೊಳಗೆ ತೀರಿಕೊಂಡಿದ್ದಾನೆ. ಆತನ ಶವವನ್ನಾದರೂ ಅವರಿಗೆ ಮರಳಿಸುವುದು ಯಾವುದೇ ನಾಗರಿಕ ದೇಶದ ಕರ್ತವ್ಯ. ಈಡೇರಿಸಲು ಹೋದರೆ ಆ ಬುಡಕಟ್ಟು ಇರುವ ಪ್ರದೇಶದಿಂದ ಆತನ ಶವವನ್ನು ಹೊರತರಬೇಕು. ಹಾಗೆ ತರಲು ಹೋದರೆ ಸೆಂಟಿನೀಲರಿಗೆ ಸಾಂಕ್ರಾಮಿಕ ರೋಗಗಳು ತಗಲಬಹುದು. ಅಥವಾ ಮೃತದೇಹ ತರಲು ಹೋದವರು ಸಾಯಬಹುದು ಎಂಬ ಭಯವಿದೆ.

ಇವೆಲ್ಲ ಒಂದು ಕಡೆ ಇರಲಿ.. ನಾವೀಗ ಭಾರತ ಸರಕಾರಕ್ಕೆ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗಿದೆ.

ನೆಹರೂ ಅವರ ಕಾಲದಲ್ಲಿನ ಬುಡಕಟ್ಟು ನೀತಿಯ ಆಧಾರದ ಮೇಲೆ ಈ ಬುಡಕಟ್ಟುಗಳನ್ನು ಸಂರಕ್ಷಿತ ಬುಡಕಟ್ಟುಗಳು ಎಂದು ಘೋಷಿಸಲಾಯಿತು. ಆನಂತರ, ಅವರ ಬಗ್ಗೆ ಬೇಕಾದಷ್ಟು ಗಮನವನ್ನು ಹರಿಸಲಿಲ್ಲ. ಪ್ರವಾಸಿಗರ ದೃಷ್ಟಿಯಿಂದ ಅವರನ್ನು ಮ್ಯೂಸಿಯಂನಲ್ಲಿನ ವಸ್ತುಗಳಂತೆ ಬಳಸಿಕೊಳ್ಳಲಾಯಿತು. ಸರಕಾರವು ಮನಸ್ಸು ಮಾಡಿದ್ದರೆ ಅವರ ಜೀವನದಲ್ಲಿ ಮಧ್ಯ ಪ್ರವೇಶಿಸಿ ಅವರನ್ನು ನಮ್ಮೆಲ್ಲರ ಜೊತೆ ಒಂದುಗೂಡಿಸಬಹುದಾಗಿತ್ತು. ಏಕೆಂದರೆ 1960ನೇ ಇಸವಿಯಲ್ಲಿ ಡಾ. ಮಧುಮಾಲ ಚಟ್ಟೋಪಾಧ್ಯಾಯ ಎಂಬ ಮಾನವಶಾಸ್ತ್ರಜ್ಞೆಯು 6 ವರ್ಷಗಳ ಕಾಲ ಅವರ ಜೊತೆ ಕಾಲ ಕಳೆದು ಸಕಾರಾತ್ಮಕ ಸಂಪರ್ಕ ಸಾಧಿಸಿದ್ದರು. ಆದರೂ ಕೂಡ ಅದರ ಬಗೆಗೆ ಯಾರ ಗಮನವೂ ಹರಿಯಲಿಲ್ಲ. ಅಂಡಮಾನ್‌ನಲ್ಲಿ ಹೋಗಿ ನೆಲೆಸಿರುವ ವಲಸಿಗರು ಮತ್ತು ಸೆಲ್ಯುಲಾರ್ ಜೈಲಿನಲ್ಲಿ ಉಳಿದು ಸ್ವತಂತ್ರಗೊಂಡವರ ವಂಶಸ್ಥರಿಗೆ ಭಾರತದ ಸ್ವಾತಂತ್ರ ಮುಖ್ಯವಾಗಿತ್ತೇ ಹೊರತು ಅಂಡಮಾನ್‌ನ ಮೂಲನಿವಾಸಿಗಳ ಸ್ವಾತಂತ್ರವಲ್ಲ.

ಭಾರತ ಸರಕಾರವು ಅವರ ಪಾಲಿಗೆ ಒಂದು ವಸಾಹತುಶಾಹಿ ಶಕ್ತಿ. ಅವರಾರೂ ನಮ್ಮ ಪೌರತ್ವವನ್ನು ಬೇಡಿ ಬಂದವರಲ್ಲ. ಅವರ ರಾಜ್ಯದೊಳಗೆ ಅವರ ದೇಶದೊಳಗೆ ಸ್ವತಂತ್ರರಾಗಿದ್ದಾರೆ. ಅದನ್ನು ನಮ್ಮ ದೇಶವೆಂದು ಘೋಷಿಸಿಕೊಂಡು ಹೇಳುವುದಕ್ಕಿಂತ ಹುಂಬತನ ಮತ್ತು ಆಕ್ರಮಣ ಬೇರೊಂದಿಲ್ಲ.

ಜಾನ್‌ನಂತಹ ಧರ್ಮಾಂಧರು ಸಾಹಸದ ಹೆಸರಿನಲ್ಲಿ ಅತಿಕ್ರಮಣ ಮಾಡುವುದು ತಪ್ಪು. ಇಡೀ ಪ್ರಪಂಚಕ್ಕೆ ತಾವು ಮಾಡಿದ ಪಾಪದ ಕ್ರೌರ್ಯದ ಅರಿವಿದ್ದರೆ ಅದರಲ್ಲೂ ಮುಖ್ಯವಾಗಿ ಭಾರತ ಸರಕಾರವು ಅದನ್ನೊಂದು ಸಾಯತ್ತ ಪ್ರದೇಶವೆಂದು ಘೋಷಿಸಿ ಅವರನ್ನು ಅವರ ಪಾಡಿಗೆ ಬಿಟ್ಟು ಎಲ್ಲರನ್ನೂ ಕಾಯುವ ಕೆಲಸವನ್ನು ಮಾಡಲಿ. ಇಲ್ಲವಾದರೆ ಸ್ನೇಹಪರವಾಗಿ ಮಧ್ಯಪ್ರವೇಶಿಸಿ ಹಾನಿಯಾಗದಂತೆ ಜಗತ್ತಿನಲ್ಲಿ ನಮ್ಮ ಜೊತೆ ಒಗ್ಗೂಡಿಸುವ ಕೆಲಸ ಮಾಡಲಿ. ನಾಗರಿಕ ಜಗತ್ತು ಎನಿಸಿಕೊಳ್ಳುವವರ ಆತ್ಮವಂಚನೆ ಮತ್ತು ಅನಾಗರಿಕತೆಗೆ ಮುಕ್ತಾಯ ಹಾಡಲಿ.

Writer - ಡಾ. ಸಿ.ಜಿ. ಲಕ್ಷ್ಮೀಪತಿ

contributor

Editor - ಡಾ. ಸಿ.ಜಿ. ಲಕ್ಷ್ಮೀಪತಿ

contributor

Similar News