ದಿಲ್ಲಿ ದರ್ಬಾರ್
ಪಟೇಲ್ ಹಾಸ್ಯಪ್ರಜ್ಞೆ
ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಯವರ ಸುದ್ದಿಯನ್ನು ಪ್ರಮುಖವಾಗಿ ಮತ್ತು ಚೆನ್ನಾಗಿ ಸುದ್ದಿವಾಹಿನಿಗಳು ಪ್ರಸಾರ ಮಾಡಬೇಕು ಎಂದು ಕಾತರರಾಗಿದ್ದರು. ಪಟೇಲ್ ಅವರು ಆ ಬಳಿಕ ಸಂಸದರಾದ ರಾಜೀವ್ ಶುಕ್ಲಾ ಅವರತ್ತ ತಿರುಗಿ, ''ನಿಮ್ಮ ಚಾನೆಲ್‌ನಲ್ಲಾದರೂ ಉತ್ತಮವಾಗಿ ಈ ಸುದ್ದಿಯನ್ನು ಪ್ರಸಾರ ಮಾಡಿ'' ಎಂದು ಕೋರಿದರು. ಶುಕ್ಲಾ ಅವರ ಚಾನೆಲ್ ಕೂಡಾ ಇತರ ಬಿಜೆಪಿ ಪರ ಚಾನೆಲ್‌ಗಳಿಗಿಂತ ಭಿನ್ನವಲ್ಲ. ಪಟೇಲ್ ಕೋರಿಕೆಗೆ ಪ್ರತಿಕ್ರಿಯಿಸಿದ ಶುಕ್ಲಾ, ''ನನಗೆ ನೀವು ನೀಡಬೇಕಾದ ಮೊದಲ ಭರವಸೆ ಎಂದರೆ ಕಾನ್ಪುರ ಕ್ಷೇತ್ರದಿಂದ ಲೋಕಸಭಾ ಟಿಕೆಟ್. ಹಾಗಾದರೆ ನಾನು 24 ಗಂಟೆಯೂ ಈ ಸುದ್ದಿಯನ್ನು ನಿರಂತರವಾಗಿ ಪ್ರಸಾರ ಮಾಡುತ್ತೇನೆ'' ಎಂದು ಹೇಳಿದರು. ತಕ್ಷಣ ಪ್ರತಿಕ್ರಿಯಿಸಿದ ಪಟೇಲ್, ''ಕಾನ್ಪುರ ಏಕೆ? ವಾರಣಾಸಿ ಏಕಾಗಬಾರದು?'' ಎಂದು ಪ್ರಶ್ನಿಸಿದರು. ''2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀವು ಸ್ಪರ್ಧಿಸುತ್ತೀರಿ ಎಂದು ತಕ್ಷಣವೇ ಘೋಷಿಸಬಲ್ಲೆ'' ಎಂದರು. ಪಟೇಲ್ ಹಾಸ್ಯಪ್ರಜ್ಞೆಗೆ ಶುಕ್ಲಾ ಸೇರಿದಂತೆ ನೆರೆದಿದ್ದ ಎಲ್ಲರೂ ನಗೆಗಡಲಲ್ಲಿ ತೇಲಿದರು. ತೀರಾ ಗಂಭೀರ ವ್ಯಕ್ತಿ ಎನಿಸಿಕೊಂಡ ಪಟೇಲ್ ಹಾರಿಸಿದ ಹಾಸ್ಯಚಟಾಕಿಗೆ ಪತ್ರಿಕಾಗೋಷ್ಠಿಯಲ್ಲಿದ್ದ ಎಲ್ಲರಿಗೂ ನಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ರಾಹುಲ್ ಫಟಾಫಟ್
ಹಿಂದಿ ರಾಜ್ಯಗಳಲ್ಲಿ ಮರಳಿ ಅಧಿಕಾರದ ಗದ್ದುಗೆ ಹಿಡಿದ ಬಳಿಕ ಕಾಂಗ್ರೆಸ್ ಪಕ್ಷ ನಾಲ್ಕು ದಿನಗಳ ಕಾಲ ಸುದ್ದಿವಾಹಿನಿಗಳಲ್ಲಿ ಪ್ರಮುಖ ಸ್ಥಾನ ಪಡೆಯಿತು. ಈ ರಾಜ್ಯಗಳ ಕಾಂಗ್ರೆಸ್ ವೀಕ್ಷಕರನ್ನು ನೇಮಕ ಮಾಡುವಲ್ಲಿ ಕೂಡಾ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ಫಟಾಫಟ್ ನಿರ್ಧಾರ ಕೈಗೊಂಡರು. ಇವರಲ್ಲಿ ಇಬ್ಬರು ಮಲೆಯಾಳಿ ಕಾಂಗ್ರೆಸಿಗರಾದ ಎ. ಕೆ. ಆ್ಯಂಟನಿ ಮತ್ತು ಕೆ.ಸಿ.ವೇಣುಗೋಪಾಲ್ ಹಾಗೂ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಸೇರಿದ್ದರು. ಮೊದಲ ಇಬ್ಬರಿಗೆ ಹಿಂದಿ ಜ್ಞಾನದ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಹೇಗೆ ನೇಮಕ ಮಾಡಲಾಯಿತು ಎಂಬ ಅಚ್ಚರಿಯನ್ನು ಹಲವರು ವ್ಯಕ್ತಪಡಿಸಿದರು. ಆದರೆ ಅದು ಸಣ್ಣ ವಿಷಯ. ಕಾಂಗ್ರೆಸ್‌ನ ಮಾನದಂಡಕ್ಕಿಂತ ಕ್ಷಿಪ್ರವಾಗಿ ಅವರು ತಮ್ಮ ಕಾರ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಿದರು. ಈ ಮೊದಲು ಕಾಂಗ್ರೆಸ್ ಪಕ್ಷ ಸಿಎಲ್‌ಪಿ ಸಭೆ ಕರೆಯಲು ತನ್ನದೇ ಆದ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಗೋವಾ ಪ್ರಹಸನದ ಬಳಿಕ ಅಂದರೆ, ಪಕ್ಷದ ಅವಕಾಶವನ್ನು ಬಿಜೆಪಿ ದೋಚಿಕೊಂಡ ಬಳಿಕ, ರಾಹುಲ್‌ಗಾಂಧಿ ನೇತೃತ್ವದ ಕಾಂಗ್ರೆಸ್ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ ಹಾಗೂ ವೇಗವಾಗಿ ಹೆಜ್ಜೆ ಇಡುತ್ತಿದೆ. ಉದಾಹರಣೆಗೆ ಕರ್ನಾಟಕವನ್ನು ನೆನೆಸಿಕೊಳ್ಳಿ. ಕಾಂಗ್ರೆಸ್‌ನಲ್ಲಿ ಕೆಲ ಬದಲಾವಣೆಗಳಾಗಿವೆ. ರಾಹುಲ್‌ಗೆ ಧನ್ಯವಾದಗಳು. ಇದರ ಕೀರ್ತಿ ಸದ್ಯಕ್ಕೆ ಅವರಿಗೇ ಸಲ್ಲಬೇಕು.
ಉತ್ತರ ಪ್ರದೇಶದ ಮುಖಂಡರು
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಡದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗುವ ಮೂಲಕ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಕಾಂಗ್ರೆಸ್ ಕಾಲೆಳೆಯುವ ಸೂಚನೆಗಳು ಸ್ಪಷ್ಟವಾಗಿ ಕಂಡುಬರುತ್ತಿವೆ. ಕೂದಲೆಳೆ ಅಂತರದ ಮುನ್ನಡೆ ಸಾಧಿಸಿರುವ ಮಧ್ಯಪ್ರದೇಶದಲ್ಲಿ ಈ ಎರಡೂ ಪಕ್ಷಗಳು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿರುವ ಹೊರತಾಗಿಯೂ ಪಕ್ಷಗಳ ಮುಖಂಡರು ಗೈರುಹಾಜರಾಗಿದ್ದರು. ಉತ್ತರ ಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆರಕ್ಕಿಂತ ಅಧಿಕ ಸೀಟುಗಳನ್ನು ನೀಡಲಾಗದು ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಇದು ಕಾಂಗ್ರೆಸ್‌ಗೆ ಒಪ್ಪಿಗೆಯಾಗುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ರಾಜ್ಯದ ಕನಿಷ್ಠ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈತ್ರಿ ಮಾಡಿಕೊಂಡರೂ, ಮೈತ್ರಿ ಮಾಡಿಕೊಳ್ಳದಿದ್ದರೂ, ರಾಜ್ಯದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷವಿದೆ. ಮೈತ್ರಿ ಮಾಡಿಕೊಂಡಲ್ಲಿ ಕನಿಷ್ಠ 20 ಸ್ಥಾನಗಳಿಗೆ ಕಾಂಗ್ರೆಸ್ ಹಕ್ಕು ಮಂಡಿಸಲಿದ್ದು, ಸಮಾಜವಾದಿ ಪಕ್ಷ ಅಥವಾ ಬಹುಜನ ಸಮಾಜ ಪಕ್ಷ ಇಷ್ಟು ಸ್ಥಾನಗಳನ್ನು ಬಿಟ್ಟುಕೊಡುವುದು ಅಸಂಭವ. ಆದ್ದರಿಂದ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುವಂಥ ವಾತಾವರಣ ನಿರ್ಮಾಣವಾಗತ್ತದೆ ಎಂಬ ನಿರೀಕ್ಷೆ ಬಿಜೆಪಿ ವಲಯದಲ್ಲಿದ್ದು, ಉತ್ತರ ಪ್ರದೇಶದ ಹೋರಾಟ ನಿಜಕ್ಕೂ ಕುತೂಹಲಕಾರಿ ಘಟ್ಟ ತಲುಪಿದೆ. ರಾಹುಲ್‌ಗಾಂಧಿ ಅಖಿಲೇಶ್ ಜತೆ ಹಾಗೂ ಸೋನಿಯಾಗಾಂಧಿ ಮಾಯಾವತಿ ಜತೆ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ. ಆದರೆ ಇದು ಎಷ್ಟು ಫಲ ನೀಡುತ್ತದೆ ಎನ್ನುವುದು ಜನವರಿ ಬಳಿಕವಷ್ಟೇ ಗೊತ್ತಾಗಲಿದೆ.
ಚೌಹಾಣ್‌ದೇ ಭಿನ್ನ ಹಾದಿ...
ರಫೇಲ್ ಒಪ್ಪಂದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಲು ಪ್ರತಿ ನಗರಗಳಲ್ಲಿ ಪತ್ರಿಕಾಗೋಷ್ಠಿ ಆಯೋಜಿಸುವ ಹೊಣೆಯನ್ನು ಬಿಜೆಪಿ ಕೇಂದ್ರ ನಾಯಕರು ಒಬ್ಬೊಬ್ಬರಿಗೆ ವಹಿಸುವ ವೇಳೆ ಲಕ್ನೋದಲ್ಲಿ ಪತ್ರಿಕಾಗೋಷ್ಠಿ ನಡೆಸುವ ಜವಾಬ್ದಾರಿಯನ್ನು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಹಿಸಿದರು. ಆದರೆ ಅಚ್ಚರಿ ಎಂಬಂತೆ ಅವರ ಬದಲಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಯಾರಾದರೂ ನೀವೆಲ್ಲಿದ್ದಿರಿ ಎಂದು ಚೌಹಾಣ್‌ರನ್ನು ಪ್ರಶ್ನಿಸಿದರೆ, ಅವರ ಉತ್ತರ ಸಿದ್ಧವಾಗಿತ್ತು. ಅವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಇತರ ಪಕ್ಷಗಳ ಮುಖಂಡರ ಜತೆ ಭಾಗವಹಿಸಿದ್ದರು. ಚೌಹಾಣ್ ಅವರು ಪಕ್ಷದ ನಾಯಕತ್ವದ ಆದೇಶವನ್ನು ಧಿಕ್ಕರಿಸಿದರೇ ಎನ್ನುವುದು ಪ್ರಶ್ನೆ. ಅಮಿತ್ ಶಾ ಹಾಗೂ ನರೇಂದ್ರ ಮೋದಿಯವರ ಗಡಸು ರಾಜಕೀಯಕ್ಕೆ ವಿರುದ್ಧವಾಗಿ ಸಂಭಾವಿತ ಎನಿಸಿಕೊಳ್ಳಲು ಚೌಹಾಣ್ ಪ್ರಯತ್ನಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. 2019ರ ಚುನಾವಣೆಗೆ ಚೌಹಾಣ್ ತಮ್ಮನ್ನು ಈ ರೀತಿ ಬಿಂಬಿಸಿಕೊಳ್ಳಲು ಮುಂದಾದ ಬಳಿಕ ಜನ ಮತ್ತೊಂದು ಪ್ರಶ್ನೆ ಕೇಳುತ್ತಿದ್ದಾರೆ. ಆದರೆ ಜನರಿಂದ 'ಮಾಮಾ' ಎಂದು ಕರೆಸಿಕೊಳ್ಳುವ ಚೌಹಾಣ್ ನಡೆ ಮಾತ್ರ ನಿಗೂಢವಾಗಿದೆ.
ನಾಯ್ಡು- ಕಾಂಗ್ರೆಸ್ ಮೈತ್ರಿ ಅಬಾಧಿತ
ತೆಲಂಗಾಣದಲ್ಲಿ ಕಾಂಗ್ರೆಸ್- ತೆಲುಗುದೇಶಂ ಮೈತ್ರಿಕೂಟ ಹೀನಾಯ ಸೋಲು ಕಂಡಿರಬಹುದು; ಆದರೆ ಇದು ಉಭಯ ಪಕ್ಷಗಳ ನಡುವಿನ ಸ್ನೇಹಸಂಬಂಧಕ್ಕೆ ಯಾವುದೇ ಧಕ್ಕೆ ತಂದಿಲ್ಲ. ಅಶೋಕ್ ಗೆಹ್ಲೋಟ್ ಹಾಗೂ ಕಮಲ್‌ನಾಥ್ ಅವರು ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ವೈಯಕ್ತಿಕವಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದರು. ನಾಯ್ಡು ಈ ಆಮಂತ್ರಣವನ್ನು ಹೃತ್ಪೂರ್ವಕವಾಗಿ ಸ್ವೀಕರಿಸಿದ್ದರು. ಮಾಯಾವತಿ ಮತ್ತು ಅಖಿಲೇಶ್ ಅವರನ್ನು ಹೊರತುಪಡಿಸಿದಂತೆ ವಿರೋಧ ಪಕ್ಷಗಳು ಒಗ್ಗಟ್ಟಾಗಿವೆ ಎಂಬ ವಾದಕ್ಕೆ ಇದು ಪುಷ್ಟಿ ನೀಡಿದೆ. ಬೆಂಗಳೂರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹಾಜರಾಗಿದ್ದವು. ಕಾಂಗ್ರೆಸ್ ಪಕ್ಷ ಭೋಪಾಲ್ ಮತ್ತು ಜೈಪುರದಲ್ಲೂ ಇಂಥದ್ದೇ ಸ್ಪಂದನೆಯನ್ನು ವಿರೋಧ ಪಕ್ಷಗಳಿಂದ ಬಯಸಿತ್ತು.