ಎಲ್ಲರೆದೆಯಲ್ಲೂ ಕ್ರಿಸ್ತ ಹುಟ್ಟಲಿ!

Update: 2018-12-25 05:49 GMT

ಏಸು ಮೊದಲು ನಮೆಲ್ಲರ ಎದೆಯಲ್ಲಿ ಹುಟ್ಟಬೇಕು. ನಮ್ಮಳಗಿನ ಏಸುವನ್ನು ಮತ್ತೆ ಶಿಲುಬೆಯೆಡೆಗೆ ಹೋಗಲು ಬಿಡಬಾರದು. ಕ್ರಿಸ್‌ಮಸ್ ಹಬ್ಬದ ಈ ಸಂದರ್ಭದಲ್ಲಿ ಎಲ್ಲರ ಎದೆಗಳೂ ಗೋದಲಿಯಾಗಲಿ, ಅಲ್ಲಿ ಕ್ರಿಸ್ತ ಹುಟ್ಟಿ ಬರಲಿ ಹಾಗೂ ಆತನು ಎಂದಿಗೂ ಕೊಲೆಯಾಗದಿರಲಿ ಎಂದು ಆಶಿಸೋಣ.

 ಡಿಸೆಂಬರ್ ತಿಂಗಳು ಕ್ರಿಶ್ಚಿಯನ್ನರಿಗೆ ತುಂಬಾ ಸಂತಸ ಕೊಡುವ ತಿಂಗಳು. ಮಾನೆಮಾಡಿಗೆ ನಕ್ಷತ್ರ ನೇತು ಹಾಕುವುದು, ಅಂಗಳದಲ್ಲಿ ಗೋದಲಿ ರಚಿಸುವುದು, ಕ್ರಿಸ್‌ಮಸ್ ಟ್ರೀ, ಸಾಂತಾ, ರಂಗು ರಂಗಿನ ವಿದ್ಯುದೀಪಗಳು... ಮನೆ, ಚರ್ಚುಗಳ ಶೃಂಗಾರ ಮುಂತಾದವುಗಳಲ್ಲಿ ತಿಂಗಳು ಕಳೆಯುವುದೇ ಗೊತ್ತಾಗುವುದಿಲ್ಲ. ಇರಲಿ, ಏಸು ಕ್ರಿಸ್ತ ಹುಟ್ಟಿದ ಹಬ್ಬವನ್ನು ಸಂಭ್ರಮಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಏಸು ಕ್ರಿಸ್ತ ಬರೀ ಇಂತಹ ಸಂಭ್ರಮದಲ್ಲೇ ಕಳೆದು ಹೋಗುತ್ತಾನೇನೋ ಎಂಬ ಆತಂಕ ಕಾಡುತ್ತಲೇ ಇರುತ್ತದೆ. ಕ್ರಿಸ್‌ಮಸ್‌ನ್ನು ಈ ಮಾಡಿಗೆ ಜೋತು ಬೀಳುವ ಮಿನುಗು ನಕ್ಷತ್ರ, ನೂರಾರು ರೂಪಾಯಿ ಖರ್ಚು ಮಾಡಿ ಅಲಂಕರಿಸಿದ ಗೋದಲಿ, ಭಕ್ತರ ಕತ್ತಲ್ಲಿ ನೇತಾಡುವ ಬಂಗಾರದ ಶಿಲುಬೆಗಳು, ಕೋಟಿ ಬೆಲೆಬಾಳುವ ಚರ್ಚುಗಳು - ಇವುಗಳೆಲ್ಲದರಿಂದ ದೂರಕ್ಕೆ ಒಯ್ದು ನೋಡುವ ಪುಟ್ಟ ಪ್ರಯತ್ನ ಈ ಲೇಖನದ್ದು.

ಕ್ರಿಸ್ತನ ಹೆಸರನ್ನು ಕೇಳದವರು ಬಹುಷಃ ಯಾರೂ ಇರಲಿಕ್ಕಿಲ್ಲ ಎಂಬುದು ನನ್ನ ಅನಿಸಿಕೆ. ಆದರೆ ಈ ಹೆಸರು ಒಂದು ಧರ್ಮದ ಚೌಕಟ್ಟಿನೊಳಗೆ, ಒಂದು ಧರ್ಮದ ಮೂಲ ಪುರುಷ ಎಂಬುದಕ್ಕೆ ಮಾತ್ರ ಸೀಮಿತವಾಗಿರುವುದೇ ದುರಂತ. ಈ ದುರಂತ ಕ್ರಿಸ್ತ ಮಾತ್ರವಲ್ಲ ವಿವೇಕಾನಂದರನ್ನೂ ಬಿಟ್ಟಿಲ್ಲ. ಆದರೆ ಒಂದರ್ಥದಲ್ಲಿ ಇಂಥವರ ಧರ್ಮ ಒಂದೇ- ಅದು ಮಾನವೀಯತೆ ಹಾಗೂ ಶೋಷಿತರ ಪರ ನಿಲ್ಲುವ ಧರ್ಮ. ಏಕೆಂದರೆ ಕ್ರಿಸ್ತನ ಹಾಗೂ ಸ್ವಾಮಿ ವಿವೇಕಾನಂದರ ಬದುಕಿನಲ್ಲಿ ಬರುವ ಒಂದು ಘಟನೆ ಇಬ್ಬರ ಧರ್ಮ ಯಾವುದು ಎಂದು ತಿಳಿಯಲು ಸಹಕಾರಿಯಾಗುತ್ತದೆ. ಒಂದು ದಿನ ಊರಿನ ಕೆಲವರು ಕ್ರಿಸ್ತನ ಪಕ್ಕ ಒಬ್ಬಳು ಹೆಂಗಸನ್ನು ತಂದು ನಿಲ್ಲಿಸಿ, ‘‘ಇವಳು ನಡತೆಗೆಟ್ಟವಳು. ಇವಳನ್ನು ಕಲ್ಲು ಹೊಡೆದು ಸಾಯಿಸಬೇಕು’’ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಾರೆ. ಅದಕ್ಕೆ ಕ್ರಿಸ್ತ ಹೇಳುತ್ತಾನೆ- ‘‘ನಿಮ್ಮ ಪೈಕಿ ಅಂತಹ ತಪ್ಪನ್ನು ಯಾರು ಮಾಡಿಲ್ಲವೋ ಅಂತವನು ಮೊದಲು ಕಲ್ಲು ಹೊಡೆಯಲಿ.’’ ಒಬ್ಬೊಬ್ಬರೇ ಅಲ್ಲಿಂದ ನುಣುಚಿಕೊಂಡು ಕೊನೆಗೆ ಉಳಿಯುವುದು ಆ ಹೆಂಗಸು ಮತ್ತು ಕ್ರಿಸ್ತ ಇಬ್ಬರೆ. ಕ್ರಿಸ್ತ ಆ ಹೆಂಗಸನ್ನು ಸಂತೈಸಿ ಕಳುಹಿಸುತ್ತಾನೆ. ಅದೇ ರೀತಿ ಒಮ್ಮೆ ವಿವೇಕಾನಂದರು ನೈನಿತಾಲ್‌ನಲ್ಲಿ ದರ್ಶನಕ್ಕಾಗಿ ಹೋಗುತ್ತಿರುವಾಗ ಇಬ್ಬರು ವೇಶ್ಯೆಯರು ಸ್ವಾಮಿಯ ದರ್ಶನಕ್ಕಾಗಿ ದುಂಬಾಲು ಬೀಳುತ್ತಾರೆ. ಊರ ಮಡಿವಂತರೆಲ್ಲಾ ಆ ಹೆಂಗಸರನ್ನು ಕೆಟ್ಟ ಪದಗಳಿಂದ ನಿಂದಿಸಿ ಅವಮಾನಿಸಿ ದೂರ ನೂಕುತ್ತಾರೆ. ವಿಷಯ ತಿಳಿದ ವಿವೇಕಾನಂದರು ಈ ಮಡಿವಂತರ ಮಾತುಗಳನ್ನು ಧಿಕ್ಕರಿಸಿ ವೇಶ್ಯೆಯರನ್ನು ಸಂತೈಸುತ್ತಾರೆ ಹಾಗೂ ಅವರಲ್ಲಿ ನವ ಚೈತನ್ಯ ತುಂಬಿ ಕಳುಹಿಸುತ್ತಾರೆ. ಈ ಎರಡು ಘಟನೆಗಳಿಂದ ತಿಳಿಯುವುದೇನೆಂದರೆ ಕ್ರಿಸ್ತ ಮತ್ತು ವಿವೇಕಾನಂದ ಇಬ್ಬರ ಧರ್ಮ ಒಂದೇ! ಅದು ಮಾನವೀಯತೆಯ ಧರ್ಮ, ಶೋಷಿತರ ಪರವಾಗಿ, ಅವಮಾನಿತರ ಪರವಾಗಿ ನಿಲ್ಲುವ ಧರ್ಮ. ಏಸುವಿನ ಪವಾಡಗಳನ್ನು ವೈಭವೀಕರಿಸುತ್ತಾ ಆತನನ್ನು ನೆನೆಯುವವರೇ ಹೆಚ್ಚು. ಆದರೆ ಅದರ ಜೊತೆಗೆ ತಳಕು ಹಾಕಿಕೊಂಡಿರುವ ಮಾನವೀಯ ವೌಲ್ಯಗಳನ್ನು ನಾವು ಮರೆಯುತ್ತಿದ್ದೇವೆ. ಕ್ರಿಸ್ತ ನೀರನ್ನು ವೈನನ್ನಾಗಿ ರೂಪಾಂತರಿಸಿದ. ಒಂದೆರಡು ಮೀನು ಹಾಗೂ ಬ್ರೆಡ್ಡುಗಳಿಂದ ಸಾವಿರಾರು ಜನರಿಗೆ ಉಣಬಡಿಸಿದ, ಕಣ್ಣಿಲ್ಲದವರಿಗೆ ದೃಷ್ಟಿಯನ್ನು ನೀಡಿದ, ಸತ್ತವನನ್ನು ಬದುಕಿಸಿದ ಇತ್ಯಾದಿ ಪವಾಡಗಳನ್ನು ನಾವು ನಂಬುವ ಜೊತೆಗೆ, ಕ್ರಿಸ್ತನ ಉದ್ದೇಶಗಳನ್ನು ಕೂಡ ನಾವು ನೆನಪಿಸಿಕೊಳ್ಳಬೇಕಾಗಿದೆ. ಜನ ಸಾಮಾನ್ಯರಿಗೆ ಈ ಮೂಲಕ ಹಂಚಿ ತಿನ್ನುವುದನ್ನು ಕಲಿಸಿದ. ಎರಡು ಮೀನುಗಳನ್ನು ಸಾವಿರಾರು ಜನರಿಗೆ ಹಂಚಿಕೊಂಡು ತಿಂದ. -ಈ ರೂಪಕಗಳನ್ನು ಈ ರೀತಿಯಲ್ಲೂ ನಾವು ವಾಸ್ತವ ಮಾಡಿಕೊಳ್ಳಬಹುದು. ಕಣ್ಣಿಲ್ಲದವರಿಗೆ ಕಣ್ಣು ಕೊಟ್ಟ. ಇದು ಬರೇ ಪವಾಡವೇ ಆಗಬೇಕಾಗಿಲ್ಲ. ಹೊಸದಾದುದನ್ನು ನೋಡಲು ಕಲಿಸಿ. ಅಜ್ಞಾನವೆಂಬ ಕುರುಡುತನದಿಂದ ಜನರನ್ನು ಹೊರಗೆ ತಂದ. ಎಲ್ಲ ಪವಾಡಗಳ ಹೊರತಾಗಿ ಒಬ್ಬ ಮನುಷ್ಯನಾಗಿ ಆತ ಮನುಷ್ಯರ ಜೊತೆಗೆ ಬೆರೆತ ರೀತಿ, ಅನುಭವಿಸಿದ ನೋವು ಇವೆಲ್ಲವನ್ನು ನಮ್ಮದಾಗಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಪ್ರಭುತ್ವವನ್ನು ಎದುರಿಸಿ ಆತ ಅನುಭವಿಸಿದ ಹಿಂಸೆ, ಅನ್ಯಾಯಕ್ಕೆ ತಲೆಬಾಗದೆ ನಡೆಸಿದ ಬದುಕಿನ ಸಂಘರ್ಷ ಹಾಗೂ ಆತನ ಪ್ರಾಣತ್ಯಾಗ -ಇವೆಲ್ಲವೂ ಮಹತ್ವವನ್ನು ಪಡೆದುಕೊಳ್ಳಬೇಕು. ಇಷ್ಟಕ್ಕೂ ಆತನನ್ನು ಪ್ರಭುತ್ವ ಕೊಂದದ್ದು ಯಾತಕ್ಕೆ? ಒಂದರ್ಥದಲ್ಲಿ ಆತ ವ್ಯಕ್ತಿಸ್ವಾತಂತ್ರ್ಯವನ್ನು ಎತ್ತಿ ಹಿಡಿದ. ಎಲ್ಲರಂತೆ ತಾನೂ ರಾಜನ ಅಡಿಯಾಳಾದ ಮಂದೆಯಲ್ಲ. ವಿಚಾರಣೆಯ ವೇಳೆ ನಾನೂ ರಾಜ, ಆದರೆ ನನ್ನ ಸಾಮ್ರಾಜ್ಯ ಬೇರೆ ಸ್ವರೂಪದ್ದು ಎಂಬ ಆತನ ಮಾತು ಎಲ್ಲರೂ ಒಂದೊಂದು ವಿಧದಲ್ಲಿ ರಾಜರೇ ಎಂದು ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿ ಹಿಡಿಯುವಂತಿದೆ. ಒಂದು ಕೆನ್ನೆಗೆ ಏಟು ಕೊಟ್ಟರೆ ಇನ್ನೊಂದು ಕೆನ್ನೆಯನ್ನೂ ತೋರಿಸು ಎಂದ ಅದೇ ಏಸು ಧರ್ಮದ ಹೆಸರಲ್ಲಿ ದೇವಳದಲ್ಲಿ ವ್ಯಾಪಾರ ಮಾಡುವವರನ್ನು ಚಾಟಿಯೇಟಿನಿಂದ ಓಡಿಸಿದ್ದ. ದೇವರ ಹೆಸರನ್ನು ಹೇಳಿಕೊಂಡೇ ಹಲವಾರು ಮೂಢನಂಬಿಕೆಗಳನ್ನು, ತಪ್ಪು ತಿಳುವಳಿಕೆಗಳನ್ನು ತಿದ್ದಿದ. ಹೆಚ್ಚಾಗಿ ಜನರಲ್ಲಿ ಜೀವನದ ಅರಿವು ಮೂಡಿಸುತ್ತಿದ್ದ. ಜನರಲ್ಲಿ ಅರಿವು ಮೂಡಿಸುವ ಯಾರನ್ನು ಈ ಪ್ರಭುತ್ವ ಸಹಿಸಿದೆ ಹೇಳಿ? ಪ್ರಭುತ್ವ ಎಂದರೆ ಧಾರ್ಮಿಕ ಪ್ರಭುತ್ವವೂ ಇದರಲ್ಲಿ ಸೇರಿಕೊಂಡಿದೆ. ಕಾಲಕ್ಕೆ ತಕ್ಕಂತೆ ಅಯುಧಗಳು ಬದಲಾಗಿವೆ, ಆದರೆ ಪ್ರಭುತ್ವ ಕೊಟ್ಟ ಹಿಂಸೆಯ ಮೂಲ ಸ್ವರೂಪ ಒಂದೇ. ಸಾಕ್ರಟೀಸನ ಕಾಲದಲ್ಲಿ ವಿಷ, ಏಸುವಿಗೆ ಶಿಲುಬೆ, ಭಗತ್ ಸಿಂಗ್‌ರಿಗೆ ಗಲ್ಲು, ಇತ್ತೀಚೆಗೆ ಗನ್ನು ಬುಲೆಟ್ಟು ಇತ್ಯಾದಿ. ಈಗೀಗಂತೂ ಈ ಪ್ರಜಾಪ್ರಭುತ್ವದ ಸೋಗಿನಲ್ಲಿ ಪ್ರಶ್ನೆ ಕೇಳುವವರ ದನಿ ಅಡಗಿಸಲು ಕಾನೂನನ್ನೂ ಉಪಯೋಗಿಸಲಾಗುತ್ತದೆ ಎಂದರೆ ಪ್ರಜಾಪ್ರಭುತ್ವದ ಗಂಧಗಾಳಿ ಗೊತ್ತಿಲ್ಲದ ಆ ಕಾಲದಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡು ತನ್ನ ಚಿಂತನೆಗಳನ್ನು ಹರಡಿದ್ದು ನಿಜವಾಗಿಯೂ ಏಸು ಕ್ರಿಸ್ತ ಒಬ್ಬ ಕ್ರಾಂತಿಕಾರಿ ಎಂದು ಸಾರಿ ಹೇಳುತ್ತದೆ. ಆತ ಸಮಾಜದಲ್ಲಿ ಸುಧಾರಣೆ ಬಯಸಿದ, ಹಲವಾರು ಪ್ರಸಂಗಗಳ ಮೂಲಕ, ಸಾಮತಿಗಳ ಮೂಲಕ ಜನರನ್ನು ತಿದ್ದಲು ಶ್ರಮಿಸಿದ, ಸಾಂಪ್ರದಾಯಿಕ ಮೂಢನಂಬಿಕೆಗಳ ಸಂಕಲೆಗಳಿಂದ ಮನಸ್ಸು ಮುಕ್ತವಾಗಲು ದುಡಿದ ಒಬ್ಬ ಸಮಾಜಮುಖಿ ಮನುಷ್ಯ. ಈ ಮೂಲಕ ಧಾರ್ಮಿಕ ಚೌಕಟ್ಟಿನಾಚೆಗೆ ಆತ ವಿಸ್ತಾರವಾಗಬೇಕು. ನಮ್ಮನ್ನು ಒಳಗೊಳ್ಳಬೇಕು. ಒಂದು ತುಂಡು ಬ್ರೆಡ್ಡನ್ನು ‘‘ಇದು ನನ್ನ ಮಾಂಸ’’ ಎಂದ ಏಸು, ಆ ಬ್ರೆಡ್ಡಿನ ತುಂಡಿಗಿರುವ, ಒಟ್ಟಾಗಿ ಆಹಾರಕ್ಕಿರುವ ಮಹತ್ವವನ್ನು ಸಾರಿ ಹೇಳಿದ್ದಾನೆ. ಈ ಮಾತನ್ನು ಬದುಕಿನಲ್ಲಿ ಪಾಲಿಸುವುದೆಂದರೆ ಅಸಂಖ್ಯಾತ ಮಂದಿ ಹಸಿದಿರುವಾಗ ಆಹಾರವನ್ನು ಪೋಲು ಮಾಡದೇ ಇರುವುದು. ಅದನ್ನು ಹಸಿದವರಿಗೆ ತಲುಪಿಸುವುದು. ಈ ಅರ್ಥದಲ್ಲಿ ಹಸಿದವನಿಗೆ ನೀಡುವ ಒಂದು ತುತ್ತು ಅನ್ನವೂ, ಬಾಯಾರಿದ ಹಕ್ಕಿಗೆ ನೀಡುವ ಒಂದು ಹನಿ ನೀರು ಕೂಡ ಚರ್ಚಿನ ಬಲಿಪೀಠದಲ್ಲಿ ಪೂಜಿಸಲ್ಪಡುವ ತುಂಡು ಬ್ರೆಡ್ಡು ಹಾಗೂ ದ್ರಾಕ್ಷಾರಸದಷ್ಟೇ ಪವಿತ್ರ. ಈ ವಿಚಾರ ಜೀವಂತವಿದ್ದವನಲ್ಲಿ ಮಾತ್ರ ಏಸು ಕ್ರಿಸ್ತ ಸಾವನ್ನು ಜಯಿಸಿದ್ದಾನೆ ಎಂದು ಅರ್ಥೈಸಬಹುದು. ಏಸು ಕ್ರಿಸ್ತ ಎಲ್ಲರ ಎದೆಯೊಳಗೆ ಹುಟ್ಟಬೇಕು. ಆತನನ್ನು ಜೀವಂತವಾಗಿ ಇಡುವಂತಹ ಅಥವಾ ಮತ್ತೆ ಸಮಾಧಿ ಸ್ಥಿತಿಯಿಂದ ಎಬ್ಬಿಸುವಂತಹ ಸಂದರ್ಭಗಳು ದಿನನಿತ್ಯ ನಮ್ಮ ಬದುಕಿನಲ್ಲಿ ಎದುರಾಗುತ್ತವೆ. ದಾರಿಪಕ್ಕ ಗಾಯಗೊಂಡವ ನರಳುತ್ತಿದ್ದರೆ ಆತನನ್ನು ಆಸ್ಪತ್ರೆಗೆ ಸಾಗಿಸುವ ಆತನ ಜೀವ ಉಳಿಸುವ ಸಂದರ್ಭವೊಂದು ಎದುರಾದರೆ ನಾವು ಕ್ರಿಸ್ತನನ್ನು ನಮ್ಮಿಳಗೆ ಜೀವಂತವಾಗಿಸುವ ಸನ್ನಿವೇಶ ಎದುರಾಗಿದೆ ಎಂದು ಅರ್ಥ. ಇಂತಹ ಸಂದರ್ಭಗಳಲ್ಲಿ ನಾವು ನೆರವಿಗೆ ಧಾವಿಸಿಲ್ಲವೆಂದರೆ ನಮ್ಮಿಳಗೆ ಕ್ರಿಸ್ತ ಹುಟ್ಟಲಿಲ್ಲ ಎಂದರ್ಥ. ಅನ್ಯಾಯವನ್ನು ಪ್ರಶ್ನಿಸುವ ಸಂದರ್ಭ ಎದುರಾದಾಗ ತಾವು ಸುಮ್ಮನಿದ್ದು ಪಲಾಯನವಾದಿಗಳಾದೆವೆಂದರೆ ನಮ್ಮಿಳಗಿನ ಕ್ರಿಸ್ತನನ್ನು ನಾವು ಶಿಲುಬೆಗೇರಿಸಿದೆವೆಂದೇ ಅರ್ಥ. ಏಸು ಮೊದಲು ನಮೆಲ್ಲರ ಎದೆಯಲ್ಲಿ ಹುಟ್ಟಬೇಕು. ನಮ್ಮಿಳಗಿನ ಏಸುವನ್ನು ಮತ್ತೆ ಶಿಲುಬೆಯೆಡೆಗೆ ಹೋಗಲು ಬಿಡಬಾರದು. ಕ್ರಿಸ್‌ಮಸ್ ಹಬ್ಬದ ಈ ಸಂದರ್ಭದಲ್ಲಿ ಎಲ್ಲರ ಎದೆಗಳೂ ಗೋದಲಿಯಾಗಲಿ, ಅಲ್ಲಿ ಕ್ರಿಸ್ತ ಹುಟ್ಟಿ ಬರಲಿ ಹಾಗೂ ಆತನು ಎಂದಿಗೂ ಕೊಲೆಯಾಗದಿರಲಿ ಎಂದು ಆಶಿಸೋಣ.

Writer - ವಿಲ್ಸನ್ ಕಟೀಲ್

contributor

Editor - ವಿಲ್ಸನ್ ಕಟೀಲ್

contributor

Similar News

ಜಗದಗಲ
ಜಗ ದಗಲ