ಅಪರೂಪದ ಕನ್ನಡ ಪರಿಚಾರಕರು ಕಿರಂ ಮತ್ತು ರಾಜು ಮೇಸ್ಟ್ರು

Update: 2018-12-25 05:55 GMT
ಪ್ರೊ. ಕಿ. ರಂ. ನಾಗರಾಜ

       ಪ್ರೊ. ಚಿ. ಶ್ರೀನಿವಾಸರಾಜು

ಇಬ್ಬರೂ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಗಳು, ಲಂಕೇಶ್ ಮೇಸ್ಟ್ರ ಶಿಷ್ಯರು. ಒಳ್ಳೆಯ ಗೆಳೆಯರು. ಇಬ್ಬರೂ ಅಕ್ಷರ ಪ್ರೀತಿಯುಳ್ಳವರು. ಕನ್ನಡ ಭಾಷೆಯ ಬಗ್ಗೆ ಬೆರಗಿನಿಂದ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಸಾವಿರಾರು ಜನಕ್ಕೆ ಪ್ರೇರಕಶಕ್ತಿಯಾದವರು. ಆ ಮೂಲಕ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ ನಿಜ ಕನ್ನಡ ಪರಿಚಾರಕರು. ರಾಜು ಮೇಸ್ಟ್ರು ಇಲ್ಲವಾದಾಗ, ಗೆಳೆಯನ ಜೊತೆಗೆ ಕಳೆದ ಘನವಾದ ಗಳಿಗೆಗಳನ್ನು, ಕಿರಂ ಮೇಸ್ಟ್ರು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕೂತು ನೆನಪು ಮಾಡಿಕೊಂಡಿದ್ದರು. ಈಗ ಅವರಿಬ್ಬರೂ ಇಲ್ಲದ ಹೊತ್ತಲ್ಲಿ, ಅವರ ನೆನಪುಗಳಿವೆ.

ಕನ್ನಡ ಸಾಹಿತ್ಯಾಸಕ್ತರ ಪಾಲಿಗೆ ನೆಚ್ಚಿನ ಮೇಷ್ಟ್ರಾಗಿದ್ದ, ಹೊಸ ಪೀಳಿಗೆಯ ಬರಹಗಾರರಿಗೆ ಉತ್ಸಾಹದ ಬುಗ್ಗೆಯಂತಿದ್ದ ಪ್ರೊ. ಚಿ. ಶ್ರೀನಿವಾಸರಾಜು ಅವರು ಡಿಸೆಂಬರ್ 28, 2007ರಂದು ಇಹಲೋಕ ತ್ಯಜಿಸಿದರು. ಕವಿ, ನಾಟಕಕಾರ, ಕನ್ನಡ ಪರಿಚಾರಕ-ಎಲ್ಲವೂ ಆಗಿದ್ದ ಶ್ರೀನಿವಾಸರಾಜು ಅವರು ಎಂದೂ ಮಹಾನ್ ಸಾಹಿತಿ ಎಂಬ ಸೋಗು ಹಾಕಿದವರಲ್ಲ. ಪರದೆಯ ಮುಂದೆ ಅಬ್ಬರಿಸಿ ಪರಾಕ್ರಮಿ ಅನ್ನಿಸಿಕೊಂಡವರೂ ಅಲ್ಲ. ತಣ್ಣಗೆ ತೆರೆಮರೆಯಲ್ಲಿದ್ದುಕೊಂಡೇ ಹಲವರನ್ನು ತೆರೆಯ ಮೇಲೆ ತಂದವರು. ಕನ್ನಡ ಸಾಹಿತ್ಯ ಲೋಕದ ವ್ಯಾಪ್ತಿಯನ್ನು ವಿಸ್ತರಿಸಿದವರು. ವಿಜೃಂಭಿಸುವವರನ್ನು ಮುನ್ನೆಲೆಗೆ ಬಿಟ್ಟು ತಾವು ನೇಪಥ್ಯದಲ್ಲೇ ನಿಂತವರು. ಅವರು ಪೋಷಿಸಿದ ಸಾಹಿತ್ಯ, ಸಂಸ್ಕೃತಿ, ಪಾಲಿಸಿಕೊಂಡು ಬಂದ ಶಿಷ್ಯ ಪರಂಪರೆ ಬಹುದೊಡ್ಡದು. ಶ್ರೀನಿವಾಸರಾಜು ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಕಲಿಸುವ ಮೇಸ್ಟ್ರಾಗಿದ್ದರು. ಕ್ರೈಸ್ತ ಮಿಶನರಿಗಳ ಮನವೊಲಿಸಿ, ಕನ್ನಡ ಸಂಘ ಸ್ಥಾಪಿಸಿ, ಕನ್ನಡ ಪುಸ್ತಕಗಳನ್ನು ಪ್ರಕಟಿಸಿ, ಆ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿದರು. ಕನ್ನಡ ಸಾಹಿತ್ಯ ಪ್ರಕಾಶನ ವಲಯದಲ್ಲಿ ಕ್ರೈಸ್ಟ್ ಕಾಲೇಜು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದರು. ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಿ, ಬರೆದದ್ದನ್ನು ತಿದ್ದಿ ತೀಡಿ, ಹಲವರನ್ನು ಸಾಹಿತ್ಯಲೋಕಕ್ಕೆ ಪರಿಚಯಿಸಿದರು. ಕಲಿಕೆಯ ಹಾದಿಯಲ್ಲಿದ್ದ ಕವಿಗಳಿಗೆ ಕಿಂದರಿಜೋಗಿಯಾಗಿದ್ದರು. ಬರಹಗಾರನಿಗೆ ಬರಿ ಬರವಣಿಗೆಯೊಂದಿದ್ದರೆ ಸಾಲದು, ಸರಳ ಸಜ್ಜನಿಕೆಯೂ ಮುಖ್ಯವೆಂದು ತಮ್ಮ ನಡೆ-ನುಡಿಯ ಮೂಲಕವೇ ಮಾದರಿಯಾಗಿದ್ದರು. ಇಂತಹ ಸಾತ್ವಿಕ ಗುಣದ, ತಣ್ಣನೆ ವ್ಯಕ್ತಿತ್ವದ ರಾಜು ಮೇಸ್ಟ್ರು ಜನಿಸಿದ್ದು ಚಿಕ್ಕಬಳ್ಳಾಪುರದಲ್ಲಿ, 1942ರಲ್ಲಿ. ಕನ್ನಡದಲ್ಲಿ ಎಂಎ ಹಾಗೂ ಇಂಡಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದರು. ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಕಲಿಸುವ ಪ್ರವಾಚಕರಾಗಿದ್ದರು. 2007ರ ಡಿಸೆಂಬರಿನ ಇಂಥದೇ ಚಳಿಗಾಲದ ದಿನಗಳಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿ ನೋಡಲು ಹೋದ ರಾಜು ಮೇಸ್ಟ್ರು, ಅಲ್ಲಿಂದ ಅಗಲಿದ ಸುದ್ದಿ ಕೊಟ್ಟು, ಕುವೆಂಪು ಜೊತೆಗೇ ಕಾಲವಾದರು. ಶ್ರೀನಿವಾಸರಾಜು ಅವರ ಜೊತೆ ಒಡನಾಡಿದ, ಜೊತೆ ಜೊತೆಗೆ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ, ನೂರಾರು ಹದಿವಯಸ್ಸಿನ ಹುಡುಗ ಹುಡುಗಿಯರಿಗೆ ಕವಿತೆ ಬರೆಯುವುದನ್ನು ಕಲಿಸಿದ, ಕವಿತೆ ಕೊಡುವ ಪುಳಕವನ್ನು ಕಣ್ಣಮುಂದಿರಿಸಿದ ನಿಜಜಂಗಮ ಪ್ರೊ. ಕಿ. ರಂ. ನಾಗರಾಜ ಜನಿಸಿದ್ದು ಡಿಸೆಂಬರ್ 25, 1943ರಲ್ಲಿ, ಹಾಸನದ ಬಳಿಯ ಕಿತ್ತಾನೆ ಎಂಬ ಪುಟ್ಟ ಊರಿನಲ್ಲಿ. ಇಲ್ಲವಾಗಿದ್ದು 2010ರಲ್ಲಿ. ಇಬ್ಬರೂ ಸೆಂಟ್ರಲ್ ಕಾಲೇಜ್ ವಿದ್ಯಾರ್ಥಿಗಳು, ಲಂಕೇಶ್ ಮೇಸ್ಟ್ರ ಶಿಷ್ಯರು. ಒಳ್ಳೆಯ ಗೆಳೆಯರು. ಇಬ್ಬರೂ ಅಕ್ಷರ ಪ್ರೀತಿಯುಳ್ಳವರು. ಕನ್ನಡ ಭಾಷೆಯ ಬಗ್ಗೆ ಬೆರಗಿನಿಂದ ಮಾತನಾಡುತ್ತಿದ್ದರು. ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಸಾವಿರಾರು ಜನಕ್ಕೆ ಪ್ರೇರಕಶಕ್ತಿಯಾದವರು. ಆ ಮೂಲಕ ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದ ನಿಜ ಕನ್ನಡ ಪರಿಚಾರಕರು. ರಾಜು ಮೇಸ್ಟ್ರು ಇಲ್ಲವಾದಾಗ, ಗೆಳೆಯನ ಜೊತೆಗೆ ಕಳೆದ ಘನವಾದ ಗಳಿಗೆಗಳನ್ನು, ಕಿರಂ ಮೇಸ್ಟ್ರು ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕೂತು ನೆನಪು ಮಾಡಿಕೊಂಡಿದ್ದರು. ಈಗ ಅವರಿಬ್ಬರೂ ಇಲ್ಲದ ಹೊತ್ತಲ್ಲಿ, ಅವರ ನೆನಪುಗಳಿವೆ.

ಪೀಪಿ ಬಳಗ

ಸೆಂಟ್ರಲ್ ಕಾಲೇಜ್ ಕ್ಯಾಂಪಸ್‌ನಲ್ಲೊಂದು ಜಾಗ ಇದೆ. ಈಗ ಲೈಬ್ರರಿ ಇದೆಯಲ್ಲ, ಅದರ ಮುಂಭಾಗಕ್ಕೆ ಒಂದು ಮರ ಇತ್ತು. ಆ ಮರದ ಬುಡದಲ್ಲಿ ನಾವೊಂದಿಷ್ಟು ಜನ ಸೇರತಿದ್ವಿ- ಅದಕ್ಕೆ ‘ಪೀಪಿ ಬಳಗ’ ಅಂತ ಹೆಸರು. ಪಿಪಿ ಅಂದ್ರೆ ಪೋಲಿ ಪಠಾಲಂ ಅಂತಾನೂ ಆಗಬಹುದು, ಪೀಪಿ ಊದೋದು ಅಂತನಾದ್ರೂ ಅನ್ನಿ. ಒಂದ್ ಪತ್ರಿಕೆ, ಅಂಕಣ ಅಂತ ಅದರೆಸರು, ಅದನ್ನು ಹೊರತರುತ್ತಿದ್ದೆವು! ಇಳಾದಲ್ಲಿ ಪ್ರಿಂಟಾಕಿಸೋದು. ಆ ಕಾಲಕ್ಕೆ 900 ರೂಪಾಯಿ ಖರ್ಚಾಗೋದು. ಲೇಖನ ಬರೆದೋರಿಗೆ ರಾಯಲ್ಟಿನೂ ಕೊಡ್ತಿದ್ದೆವು. ನಾವು ಹನ್ನೆರೆಡು ಜನ, ತಿಂಗಳಿಗೆ ನೂರು ರೂಪಾಯಿ ಕೈಯಿಂದ ಹಾಕ್ತಿದ್ದೆವು. ಲಂಕೇಶ್ ಮೇಸ್ಟ್ರು ನಮ್ಮನ್ನೋಡಿ ಬಯ್ಯರು, ತಲೆಗೆ ಎಣ್ಣೆ ಕಾಣದೆ ಇರೋರು, ಕಾಸು ಕಳಕೋತಿರ ಅನ್ನೋರು. ಒಳಗೊಳಗೇ ಏನೋ ಮಾಡ್ತಿದಾರೆ ಅಂತ ಗೌರವಾನೂ ಇತ್ತು. ಈ ಪೀಪಿ ಬಳಗದ ಪೂರ್ತಿ ಉಸ್ತುವಾರಿ ಶ್ರೀನಿವಾಸರಾಜುದೆ. ಲೇಖನ ಬರೆಸೋದು, ಪ್ರೂಫ್ ತಿದ್ದೋದು, ಪ್ರಿಂಟಿಗೆ ತಗಂಡೋಗದು, ಹಂಚೋದು, ಪೋಸ್ಟ್ ಮಾಡೋದು... ಎಲ್ಲ ರಾಜುದೆ. 40 ಜನ ಆಗಲೇ ನಮಗೆ ಚಂದಾದಾರರಿದ್ದರು. ಆ ಪತ್ರಿಕೆಗೆ ಬರೆಯುತ್ತಿದ್ದ, ಆ ಮೂಲಕ ಬೆಳಕಿಗೆ ಬಂದ ಬರಹಗಾರರು ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಏನೇನೋ ಆಗಿಹೋಗಿದ್ದಾರೆ. ಅದಕ್ಕೆ ಕಾರಣ ರಾಜು.

ಹೊಸ ವರ್ಷಾಚರಣೆ

ನೈಂಟೀನ್ ಸೆವೆಂಟಿ ಅಂತ ಕಾಣುತ್ತೆ, ಒಂದು ಹದಿನೈದಿಪ್ಪತ್ತು ಜನ, ಯಾರ್ಯಾರು... ದೊಡ್ಡರಂಗೇಗೌಡ, ಡಿ.ವಿ. ರಾಜಶೇಖರ, ಎಚ್.ಎಸ್.ರಾಘವೇಂದ್ರರಾವ್, ಕೆ.ವಿ.ನಾರಾಯಣ, ಸತ್ಯೇಂದ್ರ, ಶ್ರೀನಿವಾಸರಾಜು, ನಾನು... ಎಲ್ರೂ ಕಲಾಕ್ಷೇತ್ರ ಅಥ್ವಾ ಹಡ್ಸನ್ ಸರ್ಕಲ್ನಿಂದ ಹೊರಟು ಶಿವಾಜಿನಗರದ ಚರ್ಚು, ಎಂಜಿ ರೋಡು, ಬ್ರಿಗೇಡ್ ರೋಡು, ರೆಸಿಡೆನ್ಸಿ ರೋಡು, ಡಬಲ್ ರೋಡು, ಲಾಲ್ ಬಾಗು... ಈ ಹಾದೀಲಿ ಸಿಗೋರ ಮನೆಗೆ ಹೋಗೋದು, ಮಲಗಿದ್ದರೆ ಏಳಿಸೋದು, ಬಂದ್ರೆ ಅವರನ್ನು ಜೊತೆಗೆ ಕರಕಳೋದು, ಬರದಿದ್ರೆ ಬಿಡೋದು. ಹೀಗೆ ಜೊತೆಯಾದವರೆಲ್ಲ ನಡೆದುಕೊಂಡು ಗಾಂಧಿಬಜಾರ್‌ನ ದೊಡ್ಡರಂಗೇಗೌಡರ ಮನೆಗೆ ಬರೋವಷ್ಟರಲ್ಲಿ ಬೆಳಗಾಗಿರೋದು, ಬಂದು ಒಂದ್ ಕಾಫಿ ಕುಡಿಯೋದು... ಅಲ್ಲಿಗೆ ಹೊಸ ವರ್ಷ ಶುರುವಾಗಿರೋದು. ಹಿಂಗೆ ನಮ್ಮ ನ್ಯೂ ಇಯರ್ ಸೆಲಬ್ರೇಷನ್... ಈ ನ್ಯೂ ಇಯರ್‌ನಲ್ಲಿ ಇದೆಲ್ಲ ನೆನಪು ಮಾಡಿಕೊಳ್ಳಬೇಕಾಗಿದೆ ನೋಡಿ.

ನಮ್ಮ ಹೊಸ ವರ್ಷಾಚರಣೆ ಹೆಂಗೆ, ಅಂತ್ಯಾಕ್ಷರಿ ಮೂಲಕ ಪದ್ಯಗಳನ್ನು ಹೇಳೋದು. ನಾನೊಂದು ಪದ್ಯ ಹೇಳಿದ್ರೆ ಇನ್ನೊಬ್ಬರು ಆ ಪದ್ಯದ ಕೊನೆ ಪದದಿಂದ ಶುರು ಮಾಡಬೇಕು. ಪ್ರಾಚೀನ, ಮಧ್ಯಕಾಲೀನ, ಹೊಸಗನ್ನಡದ ಕವಿಗಳ ಪದ್ಯಗಳೆಲ್ಲ ಬಂದುಹೋಗುತ್ತಿದ್ದವು. ಯಾರಾದ್ರು ಒಂದು ಹೊಸದು, ಒಳ್ಳೇದು, ಚೆನ್ನಾಗಿರದು ಹೇಳಿದ್ರೆ- ಅಲ್ಲೆ ಅವರಿಗೆ ಶಹಬ್ಬಾಷ್‌ಗಿರಿ. ಕಂಟಿನುಯೆಸ್ಸಾಗಿ ಮೂರು ಸಲ ಹೇಳದೇ ಇದ್ರೆ ಔಟು. ಜೊತೆ ಜೊತೆಗೆ ದೊಡ್ಡರಂಗೇಗೌಡರ ಆಶುಕವಿತೆಗಳು ಬೇರೆ. ಬೇಂದ್ರೆಯಿಂದ ಹಿಡಿದು ಎಲ್ಲ ಕವಿಗಳು ನಮ್ಮ ನಾಲಗೆಯ ಮೇಲೆ ಬಂದು ಹೋಗೋರು. ಎಲ್ಲಾ ಆದಮೇಲೆ, ಸೂರ್ಯ ಉದಯಿಸುತ್ತಿದ್ದಂತೆ, ಅಂತ್ಯಾಕ್ಷರಿಯಲ್ಲಿ ಗೆದ್ದೋರ್ಯಾರು ಅಂತ ಡಿಸೈಡ್ ಮಾಡೋರು- ಶ್ರೀನಿವಾಸರಾಜು. ಇದು ಸುಮಾರು ವರ್ಷ ನಡೀತು. ಕಾವ್ಯಲೋಕದಲ್ಲಿ ಕೈ ಹಿಡಿದು ನಮ್ಮನ್ನೂ ನಡೆಸಿತು.

ನಮ್ ರ್ಯಾಲಿ

ಗಾಂಧಿಬಜಾರಿನಲ್ಲಿ ನನ್ನ ರೂಮಿತ್ತು. ಅದು ಮಹಡಿ ಮೇಲಿತ್ತು. ರೂಂ ಮುಂದೆ ಟೆರೇಸ್‌ನ ಜಾಗ ದೊಡ್ಡದಿತ್ತು. ಅದು ನಮ್ಮಗಳ ಪಾಲಿಗೆ ಅನುಭವ ಮಂಟಪ. ಅಲ್ಲಿಗೆ ಬರದೆ ಇರೋರೆ ಇಲ್ಲ. ಲಂಕೇಶ್ ನಮಗೆ ಮೇಸ್ಟ್ರು, ವಿದ್ಯಾರ್ಥಿಗಳೊಂದಿಗೆ ಸೇರಲು ಅವರೂ ಬರೋರು. ಈ ಶ್ರೀನಿವಾಸರಾಜು ಇದ್ರಲ್ಲ, ಇವರದೇನಪ್ಪಕೆಲ್ಸ ಅಂದ್ರೆ, ‘ಸಾರ್, ನಾಳೆ ರ್ಯಾಲಿ ಮಾಡೋಣ’ ಅನ್ನೋರು. ನಾನು ‘ಹೂಂ’ ಅಂದ್ರೆ ಆಯ್ತು. ಬೆಳಗ್ಗೆ ನನ್ನ ರೂಮಿಗೆ ಹಾಜರಾದಾಗ ಕೈಯಲ್ಲಿ ಬಸವನಗುಡಿಯ ಸುತ್ತಮುತ್ತಲಿನ ಅಷ್ಟೂ ಹೊಟೇಲ್ಗಳಿಂದ ಒಂದ್ ಮೂವತ್ತು ಇಡ್ಲಿ, ಒಂದಷ್ಟು ಕೇಸರಿಬಾತು, ಉಪ್ಪಿಟ್ಟು, ಒಂದ್ ಚೆಂಬಲ್ಲಿ ಕಾಫಿ ಹಿಡ್ಕೊಂಡು ಬಂದ್ ಬಿಡೋರು. ನಾವೆಲ್ಲ ಒಟ್ಟಿಗೆ ಕೂತು, ಹರಟೆ ಹೊಡ್ಕೊಂಡು ತಿನ್ನದು. ಇದು ನಮ್ಮ ರ್ಯಾಲಿ. ನಮಗೆ ಗೊತ್ತಿರೊ ರ್ಯಾಲಿ ಅಂದ್ರೆ ಇದು!

ಊಟ ಹಾಕೋದು ಅಂದ್ರೆ...

ನನ್ನ ಹೆಂಡತಿ ಚೊಚ್ಚಲ ಬಸುರಿ. ಶ್ರೀನಿವಾಸರಾಜು ಒಂದಿನ ಬಂದು, ‘‘ಸಾರ್, ನಾಳೆ ನಮ್ಮನೆಗೆ ನೀವು ದಂಪತಿ ಊಟಕ್ಕೆ ಬರಬೇಕು’’ ಅಂದರು. ಹೀಗೆ ಗೆಳೆಯರನ್ನು ಮನೆಗೆ ಕರೆದು ಊಟ ಹಾಕೋದು ಅಂದ್ರೆ ರಾಜುಗೆ ಬಾಳ ಖುಷಿಯ ಕೆಲಸ. ಸುಮ್ಮಸುಮ್ಮನೆ ಕರೆಯೋದು, ಕಾರಣವೇ ಇಲ್ಲದೆ ಕರೆಯೋದು, ಒಳ್ಳೆ ಅಡುಗೆ ಮಾಡಿಸೋದು, ಊಟ ಹಾಕಿಸೋದು... ಅದೇನ್ ಖುಷಿನೋ? ಪ್ಯೂರ್ ವೆಜಿಟೇರಿಯನ್ನು. ಊಟಕ್ಕೆ ಬನ್ನಿ ಎಂದು ಕರೆದಿದ್ರಲ್ಲ, ನಾನು ಇನ್ನೊಂದಿಷ್ಟು ಜನಕ್ಕೆ ಹೇಳಿದೆ, ಅವರನ್ನೂ ಜೊತೆಗೆ ಸೇರಿಸಿಕೊಂಡು ಊಟಕ್ಕೆ ಹೋದೆ. ಮನೆಗೆ ಹೋಗ್ತಿದ್ದಹಾಗೆ ಅವರ ಹೆಂಡತಿ ಇದ್ದೋರು, ‘ಇದೇನು ಒಬ್ಬರೇ ಬಂದಿದ್ದೀರಲ್ಲ, ಅವರೆಲ್ಲಿ’ ಅಂದ್ರು. ನನಗೆ ನಮ್ಮಿಬ್ಬರನ್ನು- ದಂಪತಿಯನ್ನು- ಊಟಕ್ಕೆ ಕರೆದಿದ್ದು ಮರತೇ ಹೋಗಿತ್ತು. ಹೋಳಿಗೆನೆಲ್ಲ ಮಾಡಿಕೊಂಡು ಕಾಯ್ತಿದಾರೆ ಕಣ್ರಿ. ನಾನೋ ಪುಸ ಪುಸ ಅಂತ ಸಿಗರೇಟ್ ಸೇದ್ತಾ ಒಬ್ಬನೇ, ಸಾಲದು ಎಂದು ಜೊತೆಗೊಂದಷ್ಟು ಜನರನ್ನೂ ಕರೆದುಕೊಂಡು ಹೋಗಿದ್ದೇನೆ. ಆದರೂ ಬೇಸರಿಸಿಕೊಳ್ಳದೆ ನಮಗೆಲ್ಲ ನಗುನಗುತ್ತಲೇ ಊಟ ಹಾಕಿದರು. ಊಟ ಆದಮೇಲೆ ದೊಡ್ಡ ದೊಡ್ಡ ಟಿಫನ್ ಬಾಕ್ಸ್‌ನಲ್ಲಿ ಮನೆಗೆ ಪಾರ್ಸೆಲ್ ಕಟ್ಟಿಕೊಟ್ಟು- ಮೇಡಂಗೆ ಎಂದರು. ಹೀಗಂದ ಕಿರಂ, ಕಣ್ಣಂಚಿನಲ್ಲಿ ಜಿನುಗುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು, ‘‘ಭಾರೀ ಸ್ಮೂತು, ಸ್ವಲ್ಪಜೋರಾಗಿ, ದನಿ ಎತ್ತರಿಸಿ ಮಾತಾಡಿಬಿಟ್ಟರೆ ಸಾಕು, ಸಾರ್, ನಾನು ನಾಳೆ ಬರ್ತೀನಿ ಎಂದು ಎದ್ದುಹೋಗಿಬಿಡೋರು’ ಎಂದ ಕಿರಂ ಮನದೊಳಗಿನ ಮೊರೆತವನ್ನು ಮಣಿಸಿ ಮೌನವಾಗಿದ್ದರು.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ