ರಂಗದೊಳಗಿಂದ ಮೌನವ್ರತ ಮುರಿದ ಗೌರಿಯರು

Update: 2018-12-25 18:31 GMT

ನಾಟಕ: ನಿನಗೆ ನೀನೇ ಗೆಳತಿ
ರಚನೆ: ಎಚ್ಚೆಸ್ವಿ
ನಿದೇಶರ್ನ: ಡಾ.ಬಿ.ಎಂ.ಶರಭೇಂದ್ರಸ್ವಾಮಿ

ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹಂಬಲಿಸುತ್ತಿರುವ ಮಹಿಳೆ ಇತ್ತೀಚೆಗೆ ಶತಮಾನಗಳ ವೌನ ಮುರಿಯುತ್ತಿರುವಂತೆ ತೋರುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ಅವಳ ಆತ್ಮರಕ್ಷಣೆಗೆ ಅವಳೇ ಸಿದ್ಧಳಾಗುತ್ತಿದ್ದಾಳೆ. ಇದು ಎಲ್ಲ ಕ್ಷೇತ್ರಗಳಲ್ಲೂ ಈಗ ಕಾಣುತ್ತಿದೆ. ‘ಆಕರಂ’ ತಂಡದಿಂದ ಮಂಗಳೂರಿನ ಡಾನ್ ಬಾಸ್ಕೊ ಸಭಾಂಗಣದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡ ‘ನಿನಗೆ ನೀನೇ ಗೆಳತಿ’ ನಾಟಕ ಕೂಡಾ ಇದಕ್ಕೆ ಸಾಕ್ಷಿ ನುಡಿಯುತ್ತಿರುವಂತಿದೆ.
ಸಂತ ಆ್ಯಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ನಟಿಸಿದ ಈ ನಾಟಕ ಮಹಿಳಾ ಪ್ರಧಾನವಾದದ್ದು. ಇದರಲ್ಲಿ ಬರುವ 24 ಪಾತ್ರಗಳಲ್ಲಿ ಎರಡು ಮಾತ್ರ ಪುರುಷ ಪಾತ್ರಗಳು. ನಾಟಕದಲ್ಲಿ ನಟಿಸಿದ ಯಾರೂ ವೃತ್ತಿಪರ ರಂಗಕಲಾವಿದರೇನಲ್ಲ. ಆದರೆ, ಮನೋಜ್ಞ ಅಭಿನಯ ಅವರ ಪ್ರತಿಭೆಗೆ ಸಾಕ್ಷಿ ಹೇಳುವಂತಿತ್ತು.
ಮಹಿಳಾ ನಾಟಕ ತಂಡವೊಂದರ ರಂಗ ತಾಲೀಮಿನ ತಳಹದಿಯ ಮೇಲೆ ಕಥಾವಸ್ತು ರೂಪುಗೊಂಡಿದೆ. ಪುರುಷ ಯಾವತ್ತಿದ್ದರೂ ಸೂತ್ರಧಾರ, ಮಹಿಳೆ ನಟಿ ಎನ್ನುವ ಸಿದ್ಧ ಸಂಪ್ರದಾಯವನ್ನು ನಿರಾಕರಿಸುವ ನಟಿ, ತಾನು ಸೂತ್ರಧಾರಿ ನೀನು ನಟ ಎಂದು ವಾದಕ್ಕಿಳಿಯುತ್ತಾಳೆ. ‘‘ಎಷ್ಟು ವರ್ಷ ಆಯ್ತು ನಿನ್ನ ಜೋಡಿ ಬಾಳುವೆ ಶುರು ಮಾಡಿ? ಮೌನಗೌರಿ ವ್ರತ ಮುಗೀತು ನಂದು. ಇನ್ನು ಮಾತಾಡಲಿಕ್ಕೆ ಬೇಕು ನಾನು. ನದಿಯ ದಿಕ್ಕು ಬದಲಾಗಬೇಕು ಅಂದರೆ ನದಿಯ ಪಾತ್ರ ಬದಲಾಗಬೇಕು. ಈ ತನಕ ನಿನ್ನ ಮಾತು ನಾನು ಕೇಳುತ್ತಾ ಇದ್ದೆ. ಈ ನಾಟಕದಲ್ಲಿ ನೀನು ಕೇಳು. ಇವತ್ತು ನಾನು ಹೇಳಿದ ಹಾಗೆ ನೀನು ಕೇಳಲೇಬೇಕು ಒಪ್ಪದಿದ್ದರೆ ನಾನೇ ನಟಿ, ನಾನೇ ನಟ ಎಡನ್ನೂ ನಿಭಾಯಿಸುತ್ತೇನೆ. ಆಗಿಯೇ ಬಿಡಲಿ ಅದಲಿ ಬದಲಿ ಕಂಚಿ ಕದಲಿ’’ ಇಂತಹ ನೂರು ವಾದ ಹೂಡಿ ನಟಿ ಗೆಲ್ಲುತ್ತಾಳೆ ಕೂಡಾ.


ವಾಸ್ತವದಲ್ಲಿ ಪುರುಷನೊಂದಿಗೆ ವಾದ ಮಾಡಿ ಗೆಲ್ಲುವುದು ಮಹಿಳೆಗೆ ಅಷ್ಟೇನೂ ಸುಲಭವಿಲ್ಲ. ಶತಮಾನಗಳಿಂದ ಪುರುಷನಿಗೆ ಅವಳು ತೋರಿದ ನಿಷ್ಠೆಗೆ ಸಿಕ್ಕ ಬಳುವಳಿಯೆಂದರೆ, ಆದರ್ಶ ಸ್ತ್ರೀ ಎಂಬ ಸವಕಲು ಪದ. ಇಂತಹ ವರ್ಚಸ್ಸಿನಿಂದ ಹೊರ ಬರುವುದು ಅವಳಿಗೂ ಇಷ್ಟವಿಲ್ಲ. ಒಂದೇ ಒಂದು ಮಾತಾಡದೆ ಮನಸ್ಸಿನಲ್ಲಿ ಸಹಸ್ರ ಪ್ರಶ್ನೆಗಳನ್ನು ಹಾಕಿಕೊಂಡು ವೌನವಾಗಿರುವುದು ಅವಳಿಗೆ ಅಭ್ಯಾಸವಾಗಿ ಹೋಗಿದೆ. ತನ್ನ ಆಯ್ಕೆ ಏನು ಎಂದು ಹೇಳುವ ಮುನ್ನವೇ ಎಲ್ಲವೂ ಗತಿಸಿರುತ್ತದೆ. ಯಾವ ಕಾಲಘಟ್ಟ ಅಥವಾ ಸಮುದಾಯವೇ ಇರಲಿ ಆಯ್ಕೆ ಎನ್ನುವುದು ಸ್ತ್ರೀಯರ ಪಾಲಿಗೆ ಇವತ್ತಿಗೂ ಅದೊಂದು ದುಃಸ್ವಪ್ನ. ಆಯ್ಕೆಯ ಹಕ್ಕು ಸ್ತ್ರೀಯರಿಗೆ ಇಲ್ಲವೆಂದ ಮೇಲೆ ಪುರುಷರಿಗೂ ಇರಬಾರದು. ಆದರೆ, ಹಾಗಿಲ್ಲವಲ್ಲ?
 ಈ ನಾಟಕದಲ್ಲಿ ವರ್ತಮಾನ ಮತ್ತು ಪುರಾಣ ಎರಡೂ ಕಾಲದ ಕತೆಯನ್ನು ಸಮಾನವಾಗಿ ಕಟ್ಟಿಕೊಡಲಾಗಿದೆ. ಕಾವ್ಯದ ಅತ್ಯಂತ ರಮ್ಯ ರೂಪದಲ್ಲಿರುವ ಎರಡೂ ಕಾಲಘಟ್ಟದ ಪಾತ್ರಗಳ ನಡುವಿನ ಸಂಭಾಷಣೆ ಪ್ರೇಕ್ಷಕನೊಳಗೂ ಪ್ರಶ್ನೆಯ ಅಲೆ ಎಬ್ಬಿಸುತ್ತದೆ. ಇಲ್ಲಿ ತನಕ ಸೀತೆ, ದ್ರೌಪದಿ, ಶಕುಂತಲಾ ಪಾತ್ರ ನಾವು ಮಾಡ್ತಾಯಿದ್ದಿವಿ. ಇಲ್ಲಿ ಅವರೇ ಮನುಷ್ಯರ ಪಾತ್ರ ಮಾಡುತ್ತಾರೆ. ಮೂರು ಹೆಂಡತಿಯರಿದ್ದರೂ ಮತ್ತೋರ್ವಳನ್ನು ಅನುಭವಿಸಲು ಬಯಸುವ ಕೀಚಕ, ಅವನಿಂದ ತಪ್ಪಿಸಿಕೊಂಡು ಏದುಸಿರು ಬಿಡುತ್ತ ಸೈರಂಧ್ರಿಯ ಉಡುಪಿನಲ್ಲಿ ತಾಲೀಮು ಕೋಣೆಗೆ ಧಾವಿಸುವ ಪಾಂಚಾಲಿ ತನ್ನ ಮತ್ತು ನಿರ್ಭಯಾಳ ಕತೆಯನ್ನೂ ಹೇಳುತ್ತಾಳೆ. ಕೀಚಕ ಬರೀ ನಾಟಕದ ಒಂದು ಪಾತ್ರವಲ್ಲ. ನಮ್ಮ ನಡುವೆ ಇದ್ದು, ಹೆಣ್ಣುತನ ಕಸಿಯಲು ಅವಕಾಶಕ್ಕಾಗಿ ಹೊಂಚು ಹಾಕುತ್ತಿರುವ ಯಾರೋ ಒಬ್ಬ. ನಮ್ಮ ನಡುವಿನ ಕೀಚಕನೊಬ್ಬನನ್ನು ರಂಗದ ಮೇಲೆ ನೋಡಿದ ಹಾಗೆ ನನಗಂತೂ ಅನಿಸಿತು. ಯಾಕೆಂದರೆ, ಪ್ರೇಕ್ಷಕ ಭಿನ್ನ ವ್ಯಕ್ತಿತ್ವ ಹಾಗೂ ಏಕ ವ್ಯಕ್ತಿತ್ವ ಉಳ್ಳವನು ಹೌದು.
 ಕೀಚಕನಿಂದ ಕಾಪಾಡಲು ಕೃಷ್ಣನನ್ನು ಕರೆಯುವಂತೆ ನಟ ಹೇಳಿದಾಗ ‘‘ಎಷ್ಟು ಸಾರಿ ನಮ್ಮ ಅಣ್ಣನನ್ನು ಕೂಗಲಿ? ಅವತ್ತು ಆ ಊರಲ್ಲಿ...ಇವತ್ತು ಈ ಊರಲ್ಲಿ.. ದಿಲ್ಲಿ ಆಯ್ತು, ಕೋಲ್ಕತ ಆಯ್ತು. ಬೆಂಗಳೂರು ಆಯ್ತು. ಸ್ಕೂಲಲ್ಲಿ..ಕಚೇರಿಯಲ್ಲಿ, ಬಸ್ಸಲ್ಲಿ, ಮೊನ್ನೆ ಮೊನ್ನೆ ತಣ್ಣೀರು ಬಾವಿ ಬೀಚಲ್ಲಿ ಎಲ್ಲೆಲ್ಲಿಗೆ ಅಂತ ಹೋಗಬೇಕು ಅವನು? ಇನ್ನಾದರೂ ದೇವರನ್ನು ದೇವರ ಪಾಡಿಗೆ ಬಿಡೋದು ಒಳ್ಳೆದು ಅನಿಸುತ್ತದೆ ನನಗೆ’’ ಎನ್ನುವ ಪಾಂಚಾಲಿಯ ಮಾತು ಎಷ್ಟೊಂದು ನಿಜವೆನಿಸುತ್ತದೆ. ದೇವಸ್ಥಾನಗಳಲ್ಲೇ ಅತ್ಯಾಚಾರ ನಡೆದಿವೆ. ದೇವರ ಪ್ರಸಾದ ವಿಷವಾದ ಮೇಲೂ ದೇವರು ಕಾಪಾಡುತ್ತಾನೆ ಎನ್ನುವ ಮುಗ್ಧತೆ ಇನ್ನು ಸಾಕೆನಿಸುತ್ತಿದೆ.
‘‘ಯಾಕೆ ನನಗೆ ನಾನೇ ಗೆಳತಿಯಾಗಬೇಕು? ನಮ್ಮನ್ನು ರಕ್ಷಿಸುವ ಹೊಣೆ ಗಂಡಿಸಿನದಲ್ಲವೇ?’’ ಎನ್ನುವಂತಹ ಸಹಸ್ರ ಪ್ರಶ್ನೆಗೆ ದ್ರೌಪದಿಯ ವಸ್ತ್ರಾಭರಣ ಉತ್ತರದಾಯಿತ್ವವಾಗಿದೆ. ‘‘ದ್ರೌಪದಿಯ ಸೀರೆಗೆ ಕೈ ಹಚ್ಚಿ ಉಟ್ಟ ಬಟ್ಟೆ ಸುಲಿಯ ತೊಡಗಿದಾಗ ಯಾವೊಬ್ಬ ಗಂಡಸು ಕೂಡಾ ತಡೆಯಲು ಬರುವುದಿಲ್ಲ. ಸುಮ್ಮಗೆ ನಿಂತು ನೋಡುತ್ತಿರೋ ಈ ಮಂದಿ ಯಾರೂ ಹೆಂಡತಿಯ ಗಂಡಂದಿರಲ್ಲವಾ? ಯಾವಳೋ ಮಗಳ ಅಪ್ಪಂದಿರಲ್ಲವಾ? ಯಾರೋ ಸೊಸೆಯ ಮಾವಂದಿರಲ್ಲವಾ? ಯಾವ ಗರಬಡಿದಿತ್ತು ಅವರಿಗೆ? ಥೂ.. ಥೂ..! ಈ ಪುರುಷಾಕಾರಗಳ ಮುಸುಡಿಗೆ ಬೆಂಕಿ ಇಕ್ಕ..!’’ ಎಂದು ಸೂತ್ರಧಾರಿಣಿ ಸಾಪಳಿಸುವಾಗ ನೂರು ಪ್ರಶ್ನೆಗಳನ್ನು ಎಸೆಯುತ್ತ, ನಮ್ಮ ಆತ್ಮ ಸಾಕ್ಷಿಯನ್ನು ಕೆದಕುತ್ತಾಳೆ.
 ಕೀಚಕನ ವಧೆಯೊಂದಿಗೆ ನಾಟಕ ಕೊನೆಗೊಳ್ಳುತ್ತದೆ. ಆದರೆ,ಆ ಕೀಚಕ ಮಾತ್ರ ಮನಸ್ಸಿನಿಂದ ಕದಲುವುದೇ ಇಲ್ಲ. ರಕ್ಷಾ ಜೆ.ವಿ. ಕೀಚಕನೊಳಗೆ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸಿದ್ದಾರೆ. ಪಿನಾಕಿನಿ ಪಿ.ಶೆಟ್ಟಿ (ಸೂತ್ರಧಾರಿಣಿ) ಗಟ್ಟಿಗಿತ್ತಿಯಾಗಿ, ಯಶಸ್ವಿನಿ ಎಂ. (ಪಾಂಚಾಲಿ) ನೋವೆಲ್ಲ ತನ್ನದಾಗಿಸಿಕೊಂಡು ಪಾತ್ರಕ್ಕೆ ತಕ್ಕುದಾದ ನ್ಯಾಯ ಒದಗಿಸಿದ್ದಾರೆ. ಒಂದಿಷ್ಟು ಸ್ವಪ್ರಯತ್ನ, ತಯಾರಿ ಹಾಗೂ ಅವಕಾಶಗಳನ್ನು ನೀಡಿದರೆ ಈ ಕಲಾವಿದರು ರಂಗಭೂಮಿಯಲ್ಲಿ ಗಟ್ಟಿಯಾಗಿ ನೆಲೆಯೂರಬಹುದು.
ಸಂತ ಆ್ಯಗ್ನೆಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಪೂರ್ಣಾನಂದ ಬಳ್ಕೂರು ಅವರು ನಾಟಕ ಸಂಘ ಸಂಘಟಿಸಿದ್ದು, ಮಂಗಳೂರು ಆಕಾಶವಾಣಿ ನಾಟಕ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ. ಶರಭೇಂದ್ರಸ್ವಾಮಿ ನಿರ್ದೇಶಿಸಿದ್ದಾರೆ. ಅಭಿನೇತ್ರಿ ಮಂಜುಳಾ ಸುಬ್ರಹ್ಮಣ್ಯ ಗೀತೆಗಳಿಗೆ ಸಂಗೀತ ಅಳವಡಿಸಿ, ನೃತ್ಯ ಸಂಯೋಜಿಸಿದ್ದಾರೆ. ಅನನ್ಯಾ ಬಲಂತಿಮಗರು ಅವರ ಹಿನ್ನೆಲೆ ಹಾಡುಗಾರಿಕೆ ಇದೆ. ಮಂಗಳೂರು ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡ ಈ ನಾಟಕ, ಮೈಸೂರು ರಂಗಾಯಣ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಜರುಗಿದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಪ್ರದರ್ಶನ ಸೇರಿ ರಾಜ್ಯಾದ್ಯಂತ ಇದುವರೆಗೂ ಹದಿನಾರು ಪ್ರದರ್ಶನ ಕಂಡಿದೆ.

Writer - ಕಳಕೇಶ್ ಗೊರವರ, ರಾಜೂರ

contributor

Editor - ಕಳಕೇಶ್ ಗೊರವರ, ರಾಜೂರ

contributor

Similar News

ಜಗದಗಲ
ಜಗ ದಗಲ