ಜನಸಾಮಾನ್ಯರ ಖಾಸಗಿತನದ ಮೇಲೆ ಹೆಚ್ಚುತ್ತಿರುವ ಸರಕಾರಿ ದಾಳಿ

Update: 2018-12-25 18:31 GMT

ಮೋದಿ ಸರಕಾರ ಈಗ ಮಾಡಹೊರಟಿರುವುದು ಅಧಿಕೃತವಾಗಿ ಜನಸಾಮಾನ್ಯರ ಖಾಸಗಿತನದ ಸಂಪೂರ್ಣ ಹರಣ. ಭದ್ರತಾ ಸಂಸ್ಥೆಗಳು ಜನಸಾಮಾನ್ಯರ ಗಣಕಯಂತ್ರಗಳ ಮೇಲೆ ನಿಗಾ ವಹಿಸಿ ಬೇಕಾದ ಹಾಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ನಿಯಮಬದ್ಧಗೊಳಿಸುವ ಮೂಲಕ ದೇಶವನ್ನು ಅಧಿಕೃತವಾಗಿ ಪೊಲೀಸ್ ರಾಜ್‌ಗೆ ಒಳಪಡಿಸಲು ಹೊರಟಿವೆ. ಇಲ್ಲಿ ಜನಸಾಮಾನ್ಯರ ಸಂವಿಧಾನದತ್ತ ಹಕ್ಕುಗಳು, ಖಾಸಗಿತನ, ಮಾಧ್ಯಮ ಸ್ವಾತಂತ್ರ್ಯ ಎಲ್ಲಾ ಸಂಪೂರ್ಣ ಗೌಣವಾಗಿ ಬಿಡುತ್ತವೆ.

ಭಾರತ ಸರಕಾರ ತನ್ನ ಭದ್ರತಾ ಹಾಗೂ ಗೂಢಚಾರ ಸಂಸ್ಥೆಗಳಿಗೆ ದೇಶದ ಜನಸಾಮಾನ್ಯರ ಎಲ್ಲಾ ಗಣಕಯಂತ್ರಗಳ ಮೇಲೆ ನಿಗಾ ಇಟ್ಟು ಪರಿಶೀಲನೆ ನಡೆಸುವ ಅಧಿಕಾರವನ್ನು ಅಧಿಕೃತವಾಗಿ ನೀಡಲು ಹೊರಟಿದೆ. ಈ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ. ಮೊದಲೆಲ್ಲಾ ಅಧಿಕೃತ ಮುದ್ರೆ ಇಲ್ಲದೆ ಈ ಎಲ್ಲಾ ಕೆಲಸಗಳನ್ನು ಈ ಸಂಸ್ಥೆಗಳು ಮಾಡುತ್ತಿದ್ದವು. ದೂರವಾಣಿ ಕದ್ದಾಲಿಸುವುದು, ಅಂಚೆಗಳನ್ನು ಕದ್ದು ಓದಿ ಪ್ರತಿ ಮಾಡಿಡುವ ಕೆಲಸಗಳು ಅಧಿಕೃತ ಮುದ್ರೆ ಇಲ್ಲದೇ ಸಾಕಷ್ಟು ನಡೆಯುತ್ತಿದ್ದವು. ಅಂತಹ ಕದ್ದಾಲಿಕೆಗಳು ಹಿಂದೆ ಬಹಳ ಸದ್ದುಗಳನ್ನು ಮಾಡಿವೆ. ಅದರಲ್ಲೂ ರಾಜಕಾರಣಿಗಳ ದೂರವಾಣಿ ಕದ್ದಾಲಿಕೆಗಳು ಹಗರಣಗಳಾಗಿ ಹೊರಬಂದ ಉದಾಹರಣೆಗಳು ಇವೆ. ಆಯಾ ಸರಕಾರಗಳು ತಮ್ಮ ವಿರೋಧಿಗಳ ಮೇಲೆ ಈ ರೀತಿಯ ಅನಧಿಕೃತ ನಿಗಾ ಇಡುವುದು ಮಾಮೂಲಿ ವಿಚಾರವಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೂಡ ಇವನ್ನು ಗರಿಷ್ಠ ಮಟ್ಟದಲ್ಲಿ ಮಾಡಿರುವ ಆರೋಪಗಳಿವೆ.
 ಜನ ಹೋರಾಟಗಳು ತೀವ್ರವಾಗಿರುವ ಕಡೆಗಳಲ್ಲಿ ಸಾರಾ ಸಗಟಾಗಿ ಮೊಬೈಲ್ ಹಾಗೂ ಸ್ಥಿರ ದೂರವಾಣಿಗಳನ್ನು ಕದ್ದಾಲಿಸುವ, ಅಂತರ್ಜಾಲ ಸಂಪರ್ಕಗಳೊಳಗೆ ತೂರಿ ಮಾಹಿತಿ ಕದಿಯುವ ಕೆಲಸಗಳನ್ನು ಸರಕಾರಗಳು ಮಾಡುತ್ತಿರುವುದು ಗುಟ್ಟೇನೂ ಅಲ್ಲ. ಇದೀಗ ಅಂತಹ ಕಾರ್ಯಗಳಿಗೆ ಅಧಿಕೃತ ಸಾರಾಸಗಟು ಪರವಾನಿಗೆ ನೀಡುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಜನಸಾಮಾನ್ಯರ ಮಾಹಿತಿ ಕದಿಯುವ ಕೆಲಸಗಳನ್ನು ಖಾಸಗಿ ಕಾರ್ಫೊರೇಟ್ ಸಂಸ್ಥೆಗಳು ಕೂಡ ಮಾಡುತ್ತವೆ. ಸಾಮಾಜಿಕ ಜಾಲತಾಣ ಕಂಪೆನಿಗಳು ಸಾರ್ವಜನಿಕರ ಖಾಸಗಿ ಮಾಹಿತಿಗಳನ್ನು ಕಾರ್ಫೊರೇಟ್‌ಗಳಿಗೆ ಕದ್ದು ಮಾರಾಟ ಮಾಡುವ ಕೆಲಸಗಳನ್ನು ಮಾಡುತ್ತಿರುವ ವರದಿಗಳು ಕೂಡ ಬಯಲಿಗೆ ಬಂದಿವೆ. ಅದರಲ್ಲಿ ಫೇಸ್‌ಬುಕ್‌ನಂತಹ ಸಂಸ್ಥೆಗಳ ಮೇಲೆ ಗಂಭೀರ ಆರೋಪಗಳು ಬಂದು ಅದಕ್ಕೆ ದಂಡ ತೆರಬೇಕಾಗಿ ಬಂದಿದೆ. ಮಾಹಿತಿ ಸೋರಿಕೆ ಹೆಸರಿನಲ್ಲೂ ಈ ಕಳ್ಳಾಟ ನಡೆಯುತ್ತವೆ. ಜೊತೆಗೆ ಹ್ಯಾಕರ್‌ಗಳು ಕೂಡ ಈ ರೀತಿ ಮಾಹಿತಿ ಕದಿಯುವ ಕೆಲಸಗಳನ್ನು ಮಾಡುತ್ತಾರೆ. ಮಾಹಿತಿ ಕದಿಯುವ ಈ ಕಾರ್ಯ ಇಂದು ದೊಡ್ಡ ಕಳ್ಳ ದಂಧೆಯಾಗಿ ಸಾವಿರಾರು ಕೋಟಿ ಡಾಲರುಗಳ ಕಳ್ಳ ವ್ಯವಹಾರ ಆಗಿದೆ. ಹ್ಯಾಕಿಂಗ್ ಮಾಡಲಿಕ್ಕಾಗಿಯೇ ಹಲವಾರು ತಂತ್ರಾಂಶಗಳು ಬರುತ್ತಿವೆ. ಆ್ಯಪ್‌ಗಳು ಬರುತ್ತಿವೆ. ಅನಧಿಕೃತ ಸಂಸ್ಥೆಗಳೂ ಇವೆ.

ಆದರೆ ಮೋದಿ ಸರಕಾರ ಈಗ ಮಾಡಹೊರಟಿರುವುದು ಅಧಿಕೃತವಾಗಿ ಜನಸಾಮಾನ್ಯರ ಖಾಸಗಿತನದ ಸಂಪೂರ್ಣ ಹರಣ. ಭದ್ರತಾ ಸಂಸ್ಥೆಗಳು ಜನಸಾಮಾನ್ಯರ ಗಣಕಯಂತ್ರಗಳ ಮೇಲೆ ನಿಗಾ ವಹಿಸಿ ಬೇಕಾದ ಹಾಗೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ನಿಯಮಬದ್ಧಗೊಳಿಸುವ ಮೂಲಕ ದೇಶವನ್ನು ಅಧಿಕೃತವಾಗಿ ಪೊಲೀಸ್ ರಾಜ್ ಗೆಒಳಪಡಿಸಲು ಹೊರಟಿವೆೆ. ಇಲ್ಲಿ ಜನಸಾಮಾನ್ಯರ ಸಂವಿಧಾನದತ್ತ ಹಕ್ಕುಗಳು, ಖಾಸಗಿತನ, ಮಾಧ್ಯಮ ಸ್ವಾತಂತ್ರ್ಯ ಎಲ್ಲಾ ಸಂಪೂರ್ಣ ಗೌಣವಾಗಿ ಬಿಡುತ್ತವೆ.
ಮಾಧ್ಯಮಗಳ ಮೇಲೆಯೂ ಇದರ ಪರಿಣಾಮ ಗಂಭೀರವಾಗಿಬಿಡುತ್ತದೆ. ಮಾಧ್ಯಮ ಸ್ವಾತಂತ್ರ್ಯ ಹೆಸರಿಗೂ ಕೂಡ ಇಲ್ಲದ ಸ್ಥಿತಿ ಬರುತ್ತದೆ. ಭದ್ರತಾ ಸಂಸ್ಥೆಗಳು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಮಾಧ್ಯಮ ಪ್ರತಿನಿಧಿಗಳ ಗಣಕಯಂತ್ರಗಳನ್ನು ಹೊತ್ತೊಯ್ಯಬಹುದು ಇಲ್ಲವೇ ತಂದು ಒಪ್ಪಿಸಲು ಹೇಳಬಹುದು. ಅದರಲ್ಲಿನ ಮಾಹಿತಿಯನ್ನೆಲ್ಲಾ ತೆಗೆದುಕೊಳ್ಳಬಹುದು. ಇಲ್ಲವೇ ಗೊತ್ತಾಗದಂತೆಯೇ ಮಾಧ್ಯಮ ಪ್ರತಿನಿಧಿಗಳು ಮತ್ತು ಸಂಸ್ಥೆಗಳ ಗಣಕಯಂತ್ರ ಹಾಗೂ ಅಂತರ್ಜಾಲ ಸಂಪರ್ಕಗಳ ಮೇಲೆ ನೇರ ನಿಗಾ ಇಟ್ಟು ಕಿರುಕುಳ ನೀಡಲು ಬಳಸಲೂ ಬಹುದು. ಆಯಾ ಸರಕಾರಗಳು ತಮಗಾಗದ ಮಾಧ್ಯಮ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಈ ಕಾನೂನು ಮೂಲಕ ದಾಳಿ ನಡೆಸಬಹುದು. ಈಗಲೇ ಮಾಧ್ಯಮ ಸ್ವಾತಂತ್ರ್ಯವೆನ್ನುವುದು ನಾಮಮಾತ್ರದ್ದಾಗುವ ಸ್ಥಿತಿ ಬಂದೊದಗಿದೆ. ಇನ್ನು ಈ ಕಾನೂನು ಜಾರಿಯಾದರೆ ಅದು ಪೂರ್ಣ ನಾಮಾವಶೇಷವಾದಂತೆಯೇ ಸರಿ.
ಒಟ್ಟಿನಲ್ಲಿ ಒಂದು ಪೂರ್ಣ ಫ್ಯಾಶಿಸ್ಟ್ ವ್ಯವಸ್ಥೆಯನ್ನು ಹೇರಲು ಅಧಿಕೃತವಾಗಿಯೇ ತಯಾರಿಗಳು ನಡೆಯುತ್ತಿವೆ ಎನ್ನಬಹುದು. ಹಿಂದಿನ ಸರಕಾರ ರೂಪುಗೊಳಿಸಿ ಇಟ್ಟಿರುವ ಈ ಕಾನೂನನ್ನು ಮೋದಿ ಸರಕಾರ ಜಾರಿಮಾಡಲು ಹೊರಟಿರುವುದಷ್ಟೇ ಈಗಿನ ವಿಶೇಷ.
ಈ ಕಾನೂನನ್ನು ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಪ್ರಶ್ನಿಸಿ ವಿರೋಧಿಸುತ್ತಿವೆ. ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ‘‘ಈ ಕಾನೂನಿನ ರೂಪುರೇಷೆಯನ್ನು ತಯಾರು ಮಾಡಿದ್ದು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ’’ ಎಂದು ಹೇಳಿರುವುದು ವರದಿಯಾಗಿದೆ. ಅದು ನಿಜವೂ ಕೂಡ. ಮೋದಿ ಸರಕಾರ ಜಾರಿಗೆ ತಂದಿರುವ ಬಹುತೇಕ ಪ್ರಮುಖ ನೀತಿಗಳು ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ತಯಾರು ಮಾಡಿ ಇಟ್ಟಂತಹುವುಗಳೇ ಆಗಿವೆ. ಅವುಗಳನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಮೋದಿ ಸರಕಾರ ಜಾರಿಗೆ ತರುತ್ತಿದೆ ಅಷ್ಟೆ.


 ಇತ್ತೀಚೆಗೆ ಭಾರತೀಯ ಕಂಪೆನಿಯೆಂದು ಬಿಂಬಿಸಿಕೊಳ್ಳುವ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖೇಶ್ ಅಂಬಾನಿ ಕೂಡ ಭಾರತೀಯರ ಮಾಹಿತಿಗಳು ಮತ್ತದರ ಒಡೆತನ ಭಾರತೀಯರ ಕೈಯಲ್ಲೇ ಇರಬೇಕು. ಅದು ವಿದೇಶಿ ಕಾರ್ಪೊರೇಟ್ ಕಂಪೆನಿಗಳ ಪಾಲಾಗಬಾರದು ಎಂಬ ಮಾತುಗಳನ್ನು ಆಡಿರುವ ಸುದ್ದಿಯಿದೆ. ಹಾಗಾಗಿ ಈಗಾಗಲೇ ವಿದೇಶಿ ಕಂಪೆನಿಗಳ ಕೈ ಸೇರಿರುವ ಮಾಹಿತಿಗಳನ್ನು ವಾಪಾಸು ಪಡೆಯುವಂತಾಗಬೇಕು ಎಂದೂ ಹೇಳಿದರೆಂದು ವರದಿ ಹೇಳಿದೆ. ‘‘ಮಾಹಿತಿಗಳನ್ನು ಹಾಗೂ ಮಾಹಿತಿ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದುದು ನಾವು 1947ರಲ್ಲಿ ಗಳಿಸಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಾದಷ್ಟೇ ಪ್ರಾಮುಖ್ಯತೆಯುಳ್ಳದ್ದು, ಮಾಹಿತಿ ವಸಾಹತುಶಾಹಿ ನಮ್ಮ ದೇಶದ ಹಿಡಿತ ಸಾಧಿಸಲು ಬಿಡಬಾರದು’’ ಎಂದೂ ಸೇರಿಸಿ ಮಾತಾಡಿದ್ದಾರೆ. ಇದನ್ನು ಆತ ಆರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ಪ್ರಾಯೋಜಿಸಿದ್ದ ‘ರಿಪಬ್ಲಿಕ್ ಮೀಟ್’ನ ವೇದಿಕೆಯಿಂದ ಹೇಳಿದ್ದೆಂದು ವರದಿ ಹೇಳಿದೆ. ಆದರೆ ಸ್ವತಃ ಮುಖೇಶ್ ಅಂಬಾನಿ ಬಹುರಾಷ್ಟ್ರೀಯ ಕಂಪೆನಿಯ ಮಾಲಕನೆಂಬ ಮಾಹಿತಿಯನ್ನು ಜಾಣತನದಿಂದ ಮರೆಮಾಚಿ ಭಾರತೀಯರ ಮಾಹಿತಿಗಳು ಭಾರತೀಯರ ಕೈಯಲ್ಲಿ ಇರಬೇಕು ಎಂದು ಹೇಳಿರುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಅಲ್ಲವೆಂಬುದನ್ನು ಗ್ರಹಿಸಬೇಕು. ಆತನ ದೃಷ್ಟಿಯಲ್ಲಿ ಆತ ಭಾರತೀಯ. ಇಲ್ಲಿನ ಬೃಹತ್ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಆತನ ಕೈಯಲ್ಲಿ ಭಾರತೀಯರ ಮಾಹಿತಿ ಇರಬೇಕು. ಬೇರೆಯವರಿಗಲ್ಲ ಎಂದು ಅರ್ಥ. ಮಾಹಿತಿ ಸಂಗ್ರಹ ಸರಕಾರಗಳ ಮೂಲಕವಾದರೆ ಖರ್ಚೇ ಇಲ್ಲದೆ ಆತನಿಗೆ ಅದರ ಬಹುಪಾಲು ಲಾಭ ಸಿಗುತ್ತದೆ. ಸರಕಾರ ಏನಾಗಿರಬೇಕು, ಪ್ರಧಾನಿಯಾರಾಗಿರಬೇಕು ಎನ್ನುವುದನ್ನೇ ನಿರ್ಧರಿಸುವ ಹಂತದಲ್ಲಿರುವ ಆತನಿಗೆ ಇಂತಹ ಮಾಹಿತಿ ಸಂಗ್ರಹದ ಕೆಲಸವನ್ನು ಸರಕಾರಗಳು ಮಾಡಿ ಕೊಡದೇ ಇರಲು ಸಾಧ್ಯವೇ. ಹಾಗಾಗಿ ಅಂಬಾನಿಯಂತಹ ಕಾರ್ಪೊರೇಟ್‌ಗಳಿಗೆ ಸುಲಭದಲ್ಲಿ ವ್ಯಾಪಾರಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸುವುದಕ್ಕೆ ಅನುಕೂಲವಾಗಲೆಂದು ಮೋದಿ ಸರಕಾರ ಇಂತಹ ಕಾನೂನನ್ನು ಜಾರಿ ಮಾಡಲು ಹೊರಟಿದೆ. ನೋಟು ಅಮಾನ್ಯದ ಹಂತದಲ್ಲಿ ಜಿಯೋ ಹೆಸರಿನ ಮೊಬೈಲ್ ಜಾಲ, ಜಿಯೋ ವ್ಯಾಲೆಟ್ ಎಂದೆಲ್ಲಾ ಸ್ಥಾಪಿಸಿ ಸರಕಾರವನ್ನು ತನ್ನ ನೇರ ಅನುಕೂಲಕ್ಕೆ ಬಳಸುತ್ತಾ ಬಂದ ಕಾರ್ಯವಿಧಾನ ಮುಖೇಶ್ ಅಂಬಾನಿ ಕಂಪೆನಿಗಿದೆ. ಅವನ್ನೆಲ್ಲಾ ಡಿಜಿಟಲ್ ಹಣ ಹಾಗೂ ಡಿಜಿಟಲ್ ವ್ಯವಹಾರವನ್ನು ಹೆಚ್ಚಿಸುವ ನೆಪ ಹೇಳಿ ಮಾಡಲಾಗಿದ್ದನ್ನು ನಾವು ಗಮನಿಸಬಹುದು. ಮೋದಿ ‘ಡಿಜಿಟಲ್ ಇಂಡಿಯಾ’ ಎಂಬ ಯುವಜನರಿಗೆ ಸಮ್ಮೋಹಕವಾದ ಯೋಜನೆಯನ್ನು ಆ ಸಮಯದಲ್ಲಿ ಪ್ರಕಟಿಸಿಯಾಗಿತ್ತು. ಹಾಗೇನೇ ರೈತರಿಗೆ ಅನುಕೂಲ ಮಾಡಿಕೊಡುವ ಹೆಸರಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ’ ಅಂತ ಬೆಳೆವಿಮೆಯ ನೆಪದಲ್ಲಿ ಅನಿಲ್ ಅಂಬಾನಿಯ ವಿಮಾ ಕಂಪೆನಿಗೆ ಹಲವಾರು ಸಾವಿರ ಕೋಟಿ ರೂಪಾಯಿಗಳ ಸಾರ್ವಜನಿಕ ಹಣ ಸೋರಿಹೋಗಲು ನೇರವಾಗಿ ದಾರಿ ಮಾಡಿಕೊಟ್ಟ ಉದಾಹರಣೆ ಕೂಡ ನಮ್ಮ ಮುಂದಿದೆ. ಇದನ್ನು ರಫೇಲ್ ಹಗರಣಕ್ಕಿಂತಲೂ ದೊಡ್ಡದಾದ ಹಗರಣವೆಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್, ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್‌ರಂತಹವರೇ ಹೇಳಿದ್ದಾರೆ.
 ಮಾಹಿತಿಗಳು ಇಂದು ಬೃಹತ್ ಮೊತ್ತದ ಬಂಡವಾಳವನ್ನು ಕ್ರೋಡೀಕರಿಸಲು ಬೇಕಾದ ಅಗತ್ಯ ಸರಕಾಗಿದೆ. ಹಾಗಾಗಿ ಮಾಹಿತಿ ಎಂದರೆ ಹಣವಾಗಿದೆ. ಮಾಹಿತಿ ಎಂದಾಗ ಕೇವಲ ಹೆಸರು ವಿಳಾಸವಲ್ಲ. ಅದು ವೃತ್ತಿ, ಆದಾಯ, ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆಗಳು, ವಿಮಾ ಖಾತೆಗಳು, ಶೇರು ಬಾಂಡುಗಳ ಮಾಹಿತಿಗಳು, ಆಸ್ತಿ ಪಾಸ್ತಿ ಮಾಹಿತಿಗಳು, ಸಾಮಾಜಿಕ ಪ್ರಭಾವ, ಹವ್ಯಾಸಗಳು, ಕಾಯಿಲೆ ಹಾಗೂ ಔಷಧಿಗಳ ಸೇವನೆ ಇತ್ಯಾದಿ ಎಲ್ಲಾ ರೀತಿಯ ಮಾಹಿತಿಗಳು ಎಂದು ಗ್ರಹಿಸಬೇಕು. ಉದಾಹರಣೆಗೆ ವಿಮಾ ಕಂಪೆನಿಯೊಂದು ಹೊಸದಾಗಿ ವಿಮಾಖಾತೆ ತೆರೆಯುವ ಸಂದರ್ಭದಲ್ಲಿ ಸಂಬಂಧಿತ ವ್ಯಕ್ತಿಯ ಎಲ್ಲಾ ಖಾಸಗಿ ಮಾಹಿತಿಯನ್ನು ಮೊದಲೇ ಇಟ್ಟುಕೊಂಡಿದ್ದರೆ ಆಗಬಹುದಾದ ಲಾಭ ಏನಾಗಿರಬಹುದು ಎಂದು ನಾವು ಕಲ್ಪಿಸಿಕೊಂಡರೆ ಈ ಮಾಹಿತಿಗಳನ್ನು ಇಂತಹ ಕಂಪೆನಿಗಳು ಹೇಗೆಲ್ಲಾ ಬಳಸಿ ಹಣ ಕೊಳ್ಳೆಹೊಡೆಯಲು ಸಾಧ್ಯ ಎನ್ನುವುದು ನಮ್ಮ ಗ್ರಹಿಕೆಗೆ ಬರುತ್ತದೆ.
 ಭದ್ರತೆ ಹಾಗೂ ಕಾಳಸಂತೆಕೋರರ ವಿಚಾರ ಮುಂದಿಟ್ಟು ಜನಸಾಮಾನ್ಯರ ಖಾಸಗಿ ಹಾಗೂ ವ್ಯವಹಾರದ ಮಾಹಿತಿಗಳನ್ನು ಅಧಿಕೃತವಾಗಿ ಶೇಖರಿಸುವ ಮೂಲಕ ಭದ್ರತೆಯ ಹಾಗೂ ಕಳ್ಳ ಆರ್ಥಿಕ ವ್ಯವಹಾರಗಳನ್ನು ಮಟ್ಟ ಹಾಕುತ್ತೇವೆಂಬ ನೆಪ ಹೇಳಿ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಲು ನೋಡುತ್ತಿದೆ ಸರಕಾರ.
ಅಮೆರಿಕ ಜಗತ್ತಿನ ಜನರ ಅಂತರ್ಜಾಲ, ಮೊಬೈಲ್ ಮಾತುಕತೆ, ವಿದ್ಯುನ್ಮಾನ ಅಂಚೆಗಳ ಎಲ್ಲಾ ಮಾಹಿತಿಗಳನ್ನು ಅದಕ್ಕಾಗಿಯೇ ರೂಪುಗೊಳಿಸಲಾದ ಸೂಪರ್ ಗಣಕಯಂತ್ರಗಳ ಮೂಲಕ ಸಂಗ್ರಹಿಸಿ ಇಟ್ಟುಕೊಂಡಿದ್ದು ಬಹಿರಂಗವಾಗಿತ್ತು. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಕೋಲಾಹಲವನ್ನು ಸೃಷ್ಟಿಸಿದ ಘಟನೆ ಮಾಯುವ ಮುನ್ನವೇ ಭಾರತ ಸರಕಾರ ಜನಸಾಮಾನ್ಯರ ಖಾಸಗಿತನದ ಮೇಲೆ ಪೂರ್ಣ ಹಿಡಿತ ಸಾಧಿಸಹೊರಟಿರುವುದು ಪರಿಸ್ಥಿತಿಯ ತೀವ್ರತೆಯನ್ನು ಸೂಚಿಸುತ್ತದೆ.
ಜನಸಾಮಾನ್ಯರ ಖಾಸಗಿತನವನ್ನು ಮಾಧ್ಯಮ ಸ್ವಾತಂತ್ರ್ಯವನ್ನು ಪೂರ್ಣವಾಗಿ ಕಸಿಯುವ, ಸಂವಿಧಾನದತ್ತ ಹಕ್ಕುಗಳನ್ನು ನಿರಾಕರಿಸುವ ಅದೇ ವೇಳೆಯಲ್ಲಿ ಕಾರ್ಪೊರೇಟ್‌ಗಳಿಗೆ ಅಗಾಧ ಲಾಭಗಳನ್ನು ಮಾಡಿಕೊಡುವ ಇಂತಹ ಕಾನೂನುಗಳು ಜಾರಿಯಾಗದಂತೆ ತಡೆಯದಿದ್ದರೆ ಹಗ್ಗ ಹಾಗೂ ಗಮ್ ಟೇಪ್ ಸ್ವತಃ ಕೊಟ್ಟು ಬಾಯಿ ಮುಚ್ಚಿಸಿ ಕೈಕಾಲು ಕಟ್ಟಿಸಿಕೊಂಡ ಸ್ಥಿತಿ ದೇಶದ ಜನಸಾಮಾನ್ಯರದ್ದಾಗುತ್ತದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News

ಜಗದಗಲ
ಜಗ ದಗಲ