ಆನ್‌ಲೈನ್‌ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಂಕುಶ
ಇತ್ತೀಚೆಗೆ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಿಮ್ಮ ಸಾಮಾಜಿಕ ಜಾಲ ತಾಣಗಳನ್ನು ಹೇಗೆ ಸೆನ್ಸಾರ್ ಮಾಡುವುದು ಹಾಗೂ ಅವುಗಳಲ್ಲಿನ ಗೂಢಲಿಪಿಯನ್ನು ಭೇದಿಸುವುದು ಮತ್ತು ನೀವು ಪ್ರಸಾರ ಮಾಡುವ ಸಂದೇಶಗಳನ್ನು ‘‘ಸಕ್ರಿಯವಾಗಿ’’ ತೆಗೆದುಹಾಕುವುದು ಹೇಗೆಂಬ ಬಗ್ಗೆ ಕೇಂದ್ರ ಸರಕಾರ ಹಾಗೂ ಬೃಹತ್ ಆನ್‌ಲೈನ್ ವೇದಿಕೆಗಳು ತೀರಾ ಖಾಸಗಿಯಾಗಿ ಚರ್ಚೆಗಳನ್ನು ನಡೆಸುತ್ತಿವೆ. ಇಷ್ಟಕ್ಕೂ ಅವು ಯಾಕೆ ಈ ಕುರಿತ ಮಾತುಕತೆಯನ್ನು ರಹಸ್ಯವಾಗಿ ನಡೆಸುತ್ತಿವೆ. ಸಾರ್ವಜನಿಕರನ್ನು ಯಾಕೆ ಇದರಲ್ಲಿ ಒಳಪಡಿಸಲಾಗುತ್ತಿಲ್ಲ?.
ಇಲ್ಲಿ ನಾವು ಈ ಕುರಿತ ನಿಯಮಾವಳಿಗಳನ್ನು ಮೊದಲಿಗೆ ವಿವರಿಸೋಣ. ಆನಂತರ ಈ ನಿಯಮಾವಳಿಗಳ ಕುರಿತು ಬಳಕೆದಾರರು ಎದುರಿಸಲಿರುವ ಆತಂಕಕಾರಿ ವಿಷಯಗಳ ಬಗ್ಗೆ ಇಲ್ಲಿ ವಿಶ್ಲೇಷಿಸಲಾಗಿದೆ.
ಮಧ್ಯವರ್ತಿ ನಿಯಮಗಳೇನು?
2011ರ ಮಧ್ಯವರ್ತಿ ನಿಯಮಗಳು ಎಂದು ಕರೆಯಲಾಗುವ ಈ ಕಾನೂನಿನ ಕರಡನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಅಡಿ ರಚಿಸಲಾಗಿದೆ. ಕಾಯ್ದೆಯು ಬಳಕೆದಾರರು ಪ್ರಸಾರ ಮಾಡುವ ಹಾಗೂ ಪ್ರಕಟಿಸುವ ವಿವಾದಾತ್ಮಕ ವಿಷಯಗಳ ಪ್ರಸಾರದಿಂದ ಎದುರಾಗುವ ಕಾನೂನು ತೊಡಕುಗಳಿಂದ ಇಂಟರ್‌ನೆಟ್ ಸೇವಾದಾರರಿಗೆ ಹಾಗೂ ಆನ್‌ಲೈನ್ ವೇದಿಕೆಗಳಿಗೆ ರಕ್ಷಣೆಯನ್ನು ನೀಡುತ್ತದೆ. ಈ ರಕ್ಷಣೆಯಿಂದಾಗಿ, ಮಾಹಿತಿಯ ಪ್ರಸಾರಕರಿಗೆ ಮುಕ್ತ ಅಭಿವ್ಯಕ್ತಿಗೆ ಅವಕಾಶವನ್ನು ನೀಡಲು ಸಾಧ್ಯವಾಗಿಸುತ್ತದೆ ಮತ್ತು ಸೆನ್ಸಾರ್‌ಶಿಪ್ ಭೀತಿಯಿಂದ ಅವುಗಳನ್ನು ದೂರವಿರಿಸುತ್ತದೆ. ಇದಕ್ಕೆ ಪ್ರತಿಯಾಗಿ ಅವರು, ಆ ವಿಷಯಗಳ ಕುರಿತು ಕಾನೂನುಸಂಸ್ಥೆಗಳ ಕೋರಿಕೆಗೆ ಬದ್ಧತೆಯನ್ನು ಹೊಂದಿರಬೇಕಾಗುತ್ತದೆ ಹಾಗೂ ಕಾನೂನಿಗನುಗುಣವಾಗಿ ಬಳಕೆದಾರರಿಗೆ ಆ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರಡಿ ಈ ವಿಚಾರಕ್ಕೆ ಮಾನ್ಯತೆಯನ್ನು ನೀಡಲಾಗಿದೆ.
ಸೆಕ್ಷನ್ 79ರ ಪ್ರಧಾನ ಮಸೂದೆಯು, ಇತರ ಅಧೀನ ನಿಯಮಗಳ ಬಗ್ಗೆ ವಿವರಣೆಯನ್ನು ನೀಡಿದೆ. 2011ರ ಮಧ್ಯವರ್ತಿ ನಿಯಮಗಳನ್ನು 2011ರಲ್ಲಿ ಸಾರ್ವಜನಿಕ ಸಮಾಲೋಚನೆಯ ಬಳಿಕ ಈ ಕರಡು ಕಾಯ್ದೆಯ ಪ್ರತಿಯನ್ನು ರೂಪಿಸಲಾಗಿತ್ತು. ಈ ಸಮಾಲೋಚನೆಯನ್ನು ಹೇಗೆ ನಡೆಸಲಾಯಿತೆಂಬ ಬಗ್ಗೆ ವಿವಾದವೂ ಉಂಟಾಗಿತ್ತು. ಆದರೆ, ಈಗಲೂ ಈ ನಿಯಮಗಳ ಕರಡನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಗಿತ್ತು ಹಾಗೂ ಆ ಕುರಿತ ಪ್ರತಿಕ್ರಿಯೆಗಳನ್ನು ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಆಹ್ವಾನಿಸಿದೆ. ಆದಾಗ್ಯೂ ಈ ನಿಯಮಗಳು ಅಸ್ಪಷ್ಟ ಹಾಗೂ ಸಂದಿಗ್ಧವಾದುದಾಗಿದೆ. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಷಯಗಳ ಪ್ರಸಾರವು ಕಾನೂನುಬಾಹಿರವಾದವು ಎಂಬುದನ್ನು ಅದು ಸ್ಪಷ್ಟವಾಗಿ ವಿವರಿಸಿಲ್ಲ. ಪೊಲೀಸ್ ಅಥವಾ ಕೋರ್ಟ್‌ನಿಂದ ಕಾನೂನು ನೋಟಿಸ್‌ನ್ನು ಸಾಮಾಜಿಕ ಜಾಲತಾಣ ವೇದಿಕೆಯು ಸ್ವೀಕರಿಸಿದಾಗ ಮಾತ್ರವೇ ಅದು ಪ್ರಕರಣವು ತನಿಖೆಗೆ ಯೋಗ್ಯವೆನಿಸುತ್ತದೆಯೇ ಹೊರತು ಖಾಸಗಿಯವರು ಸಲ್ಲಿಸಿದ ದೂರುಗಳಿಂದಲ್ಲ ಎಂದು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ.
ಐದು ಆತಂಕಕಾರಿ ಅಂಶಗಳು
ಪ್ರಕ್ರಿಯೆ: ಮೊದಲಿಗೆ, ಈ ಕರಡು ಕಾನೂನುಗಳನ್ನು ಯಾವ ರೀತಿ ರಚಿಸ ಲಾಗಿದೆಯೆಂಬ ಬಗ್ಗೆ ಚರ್ಚಿಸೋಣ. ಇದೊಂದು ಅತ್ಯಂತ ಗಂಭೀರವಾದ ಬೆಳವಣಿಗೆಯಾಗಿದೆ. ಆಂಗ್ಲ ದಿನಪತ್ರಿಕೆಯು ಪ್ರಕಟಿಸಿರುವ ವರದಿಯ ಪ್ರಕಾರ ಕೇಂದ್ರ ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಹಲವಾರು ಬೃಹತ್ ಸಾಮಾಜಿಕ ಜಾಲತಾಣ ಹಾಗೂ ಮೆಸೇಜಿಂಗ್ ಕಂಪೆನಿಗಳ ಅಧಿಕಾರಿಗಳ ನಡುವೆ ಸಭೆ ನಡೆದಿದೆ ಹಾಗೂ ಜನವರಿ 7ರೊಳಗೆ ಅಭಿಪ್ರಾಯಗಳನ್ನು ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ.
ಗೂಢಲಿಪೀಕರಣ ಭೇದಿಸುವಿಕೆ:
ಕರಡು ಕಾನೂನು, 3(5) ಗೂಢಲಿಪೀಕರಣವನ್ನು ಭೇದಿಸುವ ಆವಶ್ಯಕತೆ ಯನ್ನು ಪರಿಚಯಿಸುತ್ತದೆ. ಹಲವಾರು ಸಾಮಾಜಿಕ ಜಾಲತಾಣ ವೇದಿಕೆಗಳು (ವಾಟ್ಸ್‌ಆ್ಯಪ್, ಸಿಗ್ನಲ್, ಟೆಲಿಗ್ರಾಂ ಇತ್ಯಾದಿ) ಇಲೆಕ್ಟ್ರಾನಿಕ್ ಮಾಹಿತಿಯ ವಿನಿಮಯಕ್ಕಾಗಿ ಕನಿಷ್ಠ ಯೂಸರ್ ದತ್ತಾಂಶಗಳನ್ನು ಉಳಿಸಿಕೊಳ್ಳುತ್ತದೆ ಹಾಗೂ ವಿಶ್ವಸನೀಯತೆ, ಖಾಸಗಿತನ ಹಾಗೂ ಸುಭದ್ರತೆಯನ್ನು ಒದಗಿಸಲು ಉತ್ಕೃಷ್ಟವಾದ ಗೂಢಲಿಪೀಕರಣ ವ್ಯವಸ್ಥೆಯನ್ನು ಒದಗಿಸುತ್ತದೆ. ಗುರುತಿನ ಕಳವು ಹಾಗೂ ಕೋಡ್ ಇಂಜೆಕ್ಷನ್ (ಕಂಪ್ಯೂಟರ್ ಬಗ್‌ಗಳ ಆಕ್ರಮಣ ಇತ್ಯಾದಿ) ದಾಳಿಗಳನ್ನು ತಡೆಯುವುದಕ್ಕಾಗಿ ಕೋಟ್ಯಂತರ ಭಾರತೀಯರು ಅದನ್ನು ಬಳಸಿಕೊಳ್ಳುತ್ತಿದ್ದಾರೆ ನಮ್ಮ ವೈಯಕ್ತಿಕ ದತ್ತಾಂಶಗಳನ್ನು ರಕ್ಷಿಸುವ ಅಗತ್ಯ ಈಗ ಅತ್ಯಂತ ಹೆಚ್ಚಿರುವುದರಿಂದ ಗೂಢಲಿಪೀಕರಣವು ಅತ್ಯಂತ ಮಹತ್ವದ್ದಾಗಿದೆ. ಗೂಢಲಿಪೀಕರಣ ಭೇದಿಸುವಿಕೆಯು, ಆನ್‌ಲೈನ್ ಸೇವೆಗಳ ಬಳಕೆದಾರರ ಮೇಲೆ ಅತ್ಯಂತ ಮಹತ್ವದ ಪರಿಣಾಮಗಳನ್ನು ಬೀರುತ್ತದೆ. ಆನ್‌ಲೈನ್ ವಿಷಯವನ್ನು ಅಸಂಕೇತೀಕರಣ(ಡಿಕ್ರಿಪ್ಶನ್)ಗೊಳಿಸುವ ಅಧಿಕಾರವನ್ನು ಹೊಂದುವುದಕ್ಕೆ ಅವಕಾಶ ನೀಡುವ 2008ರ ಕಾನೂನನ್ನು ಸಕ್ರಿಯಗೊಳಿಸುವ ಅಧಿಸೂಚನೆಗೆ ಕೇಂದ್ರ ಗೃಹ ಸಚಿವಾಲಯವು ಗುರುವಾರ ತನ್ನ ಅನುಮೋದನೆ ನೀಡಿತ್ತು.
ದೀರ್ಘ ಅವಧಿಯವರೆಗೆ ಅಥವಾ ಅನಿರ್ದಿಷ್ಟ ಸಮಯದವರೆಗೆ ದತ್ತಾಂಶವನ್ನು ಉಳಿಸಿಕೊಳ್ಳುವುದು:
ಗೂಢಲಿಪಿ ಕಾಯ್ದೆಯ ಕರಡು ನಿಯಮ(3)ರ ಪ್ರಕಾರ ಜನಸಾಮಾನ್ಯರು, ವಾಟ್ಸ್‌ಆ್ಯಪ್, ವೈಬರ್ ಮುಂತಾದ ಜಾಲತಾಣಗಳಲ್ಲಿ ಬಂದಿರುವ ಸಂದೇಶ ಗಳನ್ನು ಅಥವಾ ಕಳುಹಿಸಿರುವ ಸಂದೇಶಗಳನ್ನು 90ರಿಂದ 180 ದಿನಗಳ ಕಾಲ ಉಳಿಸಿಕೊಳ್ಳಬೇಕಾಗುತ್ತದೆ ಹಾಗೂ ಅವುಗಳನ್ನು ಯಾವುದೇ ಸಮಯದಲ್ಲಿಬೇಕಾದರೂ ಪಡೆದುಕೊಳ್ಳುವುದು ‘ಸರಕಾರಿ ಏಜೆನ್ಸಿಗಳ’ ವಿಶೇಷಾಧಿಕಾರವಾಗಿದೆ. ಹೀಗಾಗಿ ಒಂದು ಸರಕಾರಿ ಇಲಾಖೆಯು, ಖಾಸಗಿ ಜಾಲತಾಣವೇದಿಕೆಗೆ ಕೇವಲ ಒಂದು ಪತ್ರವನ್ನು ಬರೆದು, ಓರ್ವ ನಿರ್ದಿಷ್ಟ ಬಳಕೆದಾರನ ಮಾಹಿತಿಯನ್ನು ಅನಿರ್ದಿಷ್ಟ ಅವಧಿಯವರೆಗೆ, ಅದೂ ಕೂಡಾ ಆತನ ಗಮನಕ್ಕೆ ತಾರದೆ ಉಳಿಸಿಕೊಳ್ಳಬೇಕೆಂದು ಯಾವುದೇ ಸಾಮಾಜಿಕ ಜಾಲತಾಣ ವೇದಿಕೆಗೆ ಆದೇಶ ನೀಡಬಹುದಾಗಿದೆ.
ಪೂರ್ವಭಾವಿ ಸೆನ್ಸಾರ್‌ಶಿಪ್:
ಗೂಢಲಿಪಿ ಕರಡು ಕಾಯ್ದೆಯ 3(9) ನಿಯಮವು ಆನ್‌ಲೈನ್‌ನಲ್ಲಿ ಮುಕ್ತ ವಾಕ್‌ಸ್ವಾತಂತ್ರದ ಮೇಲಿನ ಕೊಡಲಿಯೇಟಾಗಿದೆ. ಈ ಕಾನೂನು ಕೇವಲ ಆನ್‌ಲೈನ್‌ನಲ್ಲಿ ನಿಂದನೆ, ಕಿರುಕುಳ ಅಥವಾ ಬೆದರಿಕೆಗೆ ಮಾತ್ರ ಸೀಮಿತವಾಗಿರದೆ, ಕಾನೂನು ಸಮ್ಮತ ವಾದ ಭಾಷಣವನ್ನು ಕೂಡಾ ಹತ್ತಿಕ್ಕುವ ಅಪಾಯವಿದೆ. ಜನಸಾಮಾನ್ಯರು ಆನ್‌ಲೈನ್ ಮೂಲಕ ವ್ಯಕ್ತಪಡಿಸುವ ಅಭಿಪ್ರಾಯಗಳಿಗೆ ಪೂರ್ವಭಾವಿ ನ್ಯಾಯಾಧೀಶರಾಗಿ ಸಾಮಾಜಿಕ ಜಾಲತಾಣ ವೇದಿಕೆಗಳು ಕಾರ್ಯ ನಿರ್ವಹಿಸುವಂತೆ ಮಾಡಲು ಈ ಕಾನೂನು ಆಸ್ಪದ ನೀಡುತ್ತದೆ.
‘‘ಲಕ್ಷಾಂತರ ಸಂದೇಶಗಳು ಹರಿದುಬರುತ್ತಿರುವಾಗ ಅವುಗಳ ಪರಾಮರ್ಶೆಗೆ ಫೇಸ್‌ಬುಕ್, ಗೂಗಲ್‌ನಂತಹ ಜಾಲತಾಣ ವೇದಿಕೆಗಳು, ನ್ಯಾಯಾಧೀಶರಾಗಿ ವರ್ತಿಸುವುದು ಅತ್ಯಂತ ಅಪಾಯಕಾರಿಯಾಗಿದೆ.ಇದರಿಂದ ಸರಕಾರದ ಹೊಣೆಗಾರಿಕೆಯನ್ನ್ನು ಖಾಸಗಿ ಸಂಸ್ಥೆಗೆ ಒಪ್ಪಿಸಿದಂತಾಗುತ್ತದೆ.ಅದರಲ್ಲೂ ತಂತ್ರಜ್ಞಾನ ಅಧಾರಿತ ಉಪಕರಣಗಳಿಂದಾಗಲಿ ಅಥವಾ ಸೂಕ್ತವಾದ ಕಾರ್ಯತಂತ್ರಗಳ ಮೂಲಕವಾಗಲಿ ಈ ಸಂದೇಶಗಳ ಪರಿಶೀಲನೆ ನಡೆಸುವುದು ಸರಿಯಲ್ಲವೆಂದು’’ಎಂದು ಶ್ರೇಯಾಸಿಂಘಾಲ್ ಪ್ರಕರಣದ ತೀರ್ಪಿನಲ್ಲಿ ನ್ಯಾಯಾಲಯ ಅಭಿಪ್ರಾಯಿಸಿತ್ತು.
ಇನ್ನೂ ಕೂಡಾ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರದ ತಂತ್ರಜ್ಞಾನಕ್ಕೆ ನಮ್ಮ ಮುಕ್ತ ಸ್ವಾತಂತ್ರದ ಹಕ್ಕನ್ನು ಒತ್ತೆಯಿಡುವುದು ಅತ್ಯಂತ ಅಸಂಬದ್ಧವಾದುದಾಗಿದೆ. ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಸೆನ್ಸಾರ್‌ಶಿಪ್ ಎಂಬುದು ಚೀನಿ ಮಾದರಿಯ ಸೆನ್ಸಾರ್‌ಶಿಪ್ ಆಗಿದೆ.
ಗೂಢಲಿಪಿ ಕರಡು ಕಾಯ್ದೆಯ 3(4) ನಿಯಮವು, ನಿಬಂಧನೆಗಳು ಹಾಗೂ ಶರತ್ತುಗಳು ಹಾಗೂ ಖಾಸಗಿ ನೀತಿಯಂತಹ ಕಾನೂನು ಅಗತ್ಯಗಳ ಬಗ್ಗೆ ಬಳಕೆದಾರರಿಗೆ ಮಾಹಿತಿಯನ್ನು ಪ್ರತಿ ತಿಂಗಳು ನೀಡುವುದನ್ನು ಕಡ್ಡಾಯಗೊಳಸುತ್ತದೆ. ಆನ್‌ಲೈನ್‌ಗಳಲ್ಲಿ ಹರಿಯುತ್ತಿರುವ ಟ್ರೋಲಿಂಗ್ ಹಾಗೂ ನಿಂದನೆಗಳ ಮಹಾಪೂರ ವನ್ನು ಗಮನಿಸಿದಾಗ, ಮೊದಲ ನೋಟಕ್ಕೆ ಇದೊಂದು ಅಗತ್ಯವಾದ ಕ್ರಮವೆಂದು ಭಾಸವಾಗುತ್ತದೆ. ಆದರೆ ಸಾರ್ವಜನಿಕ ಉದ್ಯಾನದಲ್ಲಿ, ನಿರಂತರ ಕಣ್ಗಾವಲಿರುವ ಶಾಲಾ ಆವರಣದ ವಾತಾವರಣ ಸೃಷ್ಟಿಯಾದರೆ ಹೇಗಾದೀತು ಎಂಬುದನ್ನು ಯೋಚಿಸಿ ನೋಡಿ. ನೀವು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ವರ್ತಿಸಬೇಕೆಂದು ನಿಮಗೆ ನಿರಂತರವಾಗಿ ಮುನ್ನೆಚ್ಚರಿಕೆಯನ್ನು ನೀಡಲಾಗುತ್ತದೆ. ಈ ಕ್ರಮವು ಭಾರತದಲ್ಲಿ ಅಂತರ್ಜಾಲವನ್ನು ದಂಡನೀಯ ಪರಿಸರವಾಗಿ ಬದಲಿಸಲಿದ್ದು, ಇದು ಬಳಕೆದಾರರಿಗೆ ತೀರಾ ಪ್ರತಿಕೂಲಕರವಾದುದಾಗಿದೆ.
ತಪ್ಪು ಮಾಹಿತಿ ಹಾಗೂ ಭಾರತೀಯ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬೆದರಿಕೆಯನ್ನು ತಡೆಗಟ್ಟಲು ಹಲವಾರು ಉತ್ತಮ ಮಾರ್ಗಗಳಿವೆಯೆಂದು ನಾವು ನಂಬುತ್ತೇವೆ. 2009ರ ಪ್ರತಿಬಂಧಕ ಕಾನೂನುಗಳು, ಭಾರತವನ್ನು ಚೀನಿ ಮಾದರಿಯ ಸೆನ್ಸಾರ್‌ಶಿಪ್‌ನ ಸನಿಹಕ್ಕೆ ಕೊಂಡೊಯ್ಯುತ್ತಿದೆ. ಆನ್‌ಲೈನ್ ವೇದಿಕೆಗಳು ಸಮಸ್ಯಾತ್ಮಕವೇನೋ ಹೌದು. ಆದರೆ ಅವುಗಳನ್ನು ಸರಿಪಡಿಸಲು ಇತರ ಹಲವಾರು ಮಾರ್ಗಗಳಿವೆ. ಆದರೆ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಡೆಗಣಿಸಿ, ಗೌಪ್ಯವಾದ ಪ್ರಕ್ರಿಯೆಯ ಮೂಲಕ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಬದಲಾವಣೆಯನ್ನು ತರಲು ಹೊರಟಿರುವುದು ನಮಗೆಲ್ಲರಿಗೂ ಅಪಾಯಕಾರಿಯಾದ ನಡೆಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದ ವಿರುದ್ಧ ಸಮರ ಸಾರಲು ನಮ್ಮ ಮುಂದೆ ರಾಜಮಾರ್ಗವೊಂದಿದೆ. ಇದಕ್ಕಾಗಿ ಸಮಗ್ರವಾದ ಖಾಸಗಿ ಕಾನೂನೊಂದನ್ನು ಜಾರಿಗೊಳಿಸಬೇಕಾಗಿದೆ. ರಾಜಕೀಯ ಪಕ್ಷಳಿಂದ ಹಿಡಿದು ಜಾಹೀರಾತುಗಳೊಂದಿಗೆ ನಮಗೆ ಗುರಿಯಿಡುತ್ತಿರುವ ಆನ್‌ಲೈನ್ ಕಂಪೆನಿಗಳವರೆಗೆ ಬೃಹತ್ ದತ್ತಾಂಶ ನಿಯಂತ್ರಣಕಾರರ ಮೇಲೆ ಹೊಣೆಗಾರಿಕೆಯನ್ನು ಹೊರಿಸಲು ಇದು ನೆರವಾಗಲಿದೆಯೆಂದು ಅವರು ಹೇಳಿದ್ದಾರೆ.
ಕೃಪೆ: scroll.in