ಕೇಂದ್ರ ಸರಕಾರದ ಉದ್ದೇಶಿತ ತಿದ್ದುಪಡಿ ಆರ್‌ಟಿಐ ಕಾಯ್ದೆಗೆ ಮಾರಕ
ಕೇಂದ್ರ ಮಾಹಿತಿ ಆಯುಕ್ತ ಹುದ್ದೆಯಿಂದ ಇತ್ತೀಚೆಗೆ ನಿವೃತ್ತರಾದ ಮದಭೂಶಿ ಶ್ರೀಧರ ಆಚಾರ್ಯುಲು ಪಾರದರ್ಶಕತೆಗಾಗಿ ಮತ್ತು ನಾಗರಿಕರ ಮಾಹಿತಿ ಹಕ್ಕಿಗಾಗಿ ದೃಢ ಹೋರಾಟ ಮಾಡಿದ ಭಾರತದ ಪ್ರಮುಖ ವಕೀಲರಲ್ಲೊಬ್ಬರು. ಕೇಂದ್ರ ಮಾಹಿತಿ ಆಯುಕ್ತರಾಗಿ 2013ರ ನವೆಂಬರ್‌ನಲ್ಲಿ ನೇಮಕಗೊಳ್ಳುವ ಮುನ್ನ ಆಚಾರ್ಯುಲು (65), ಹೈದರಾಬಾದ್‌ನ ನ್ಯಾಷನಲ್ ಅಕಾಡಮಿ ಆಫ್ ಲೀಗಲ್‌ಸ್ಟಡೀಸ್ ಆ್ಯಂಡ್ ರೀಸರ್ಚ್ ಯುನಿವರ್ಸಿಟಿ ಆಫ್ ಲಾ ಸಂಸ್ಥೆಯಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು. ತಮ್ಮ ಐದು ವರ್ಷದ ಅಧಿಕಾರಾವಧಿಯಲ್ಲಿ ಪ್ರಮುಖ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಹತ್ವದ ಆರ್‌ಟಿಐ ಆದೇಶಗಳನ್ನು ಹೊರಡಿಸಿದ್ದರು.
ಪೊಲ್ಲಾವರಂ ಅಣೆಕಟ್ಟಿನ ಸರಕಾರಿ ದಾಖಲೆಗಳನ್ನು ಬಹಿರಂಗಪಡಿಸುವುದು, ಸಂಸದರ ನಿಧಿಯ ವೆಚ್ಚ, ಉದ್ಯೋಗಿ ಭವಿಷ್ಯನಿಧಿ ಸಂಘಟನೆ, ಪ್ರಧಾನಿ ಸೇರಿದಂತೆ ಅತ್ಯುನ್ನತ ಸಾರ್ವಜನಿಕ ಹುದ್ದೆಗಳಲ್ಲಿರುವವರ ಶೈಕ್ಷಣಿಕ ದಾಖಲೆ ಬಹಿರಂಗಪಡಿಸುವುದು, ದೊಡ್ಡ ಮೊತ್ತದ ಸಾಲ ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಆರ್‌ಬಿಐಗೆ ಸೂಚಿಸಿರುವುದು ಇವುಗಳಲ್ಲಿ ಪ್ರಮುಖವಾದವು. ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುವ ಸರಕಾರದ ಪ್ರಯತ್ನಗಳನ್ನು ಬಹಿರಂಗವಾಗಿ ಟೀಕಿಸಿದ್ದ ಆಚಾರ್ಯುಲು, ಇದು ಕಾಯ್ದೆಯ ಮೂಲ ಉದ್ದೇಶವನ್ನೇ ನಾಶಗೊಳಿಸುವ ಹುನ್ನಾರ ಹಾಗೂ ಸಿಐಸಿಯ ಕಾವಲು ಹೊಣೆಗಾರಿಕೆಯನ್ನು ಹೊಸಕಿ ಹಾಕುವ ಯತ್ನ ಎಂದು ಆಪಾದಿಸಿದ್ದರು. ‘ಇಂಡಿಯಾಸ್ಪೆಂಡ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಆಚಾರ್ಯುಲು, ತಮ್ಮ ಅಧಿಕಾರಾವಧಿಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ ಮಾತ್ರವಲ್ಲದೆ ಭಾರತದ ಪಾರದರ್ಶಕತೆ ಹೋರಾಟಕ್ಕೆ ಇರುವ ಸವಾಲುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದರು. ಅವುಗಳ ಸಂಪಾದಿತ ಸಂಕ್ಷಿಪ್ತ ರೂಪ ಇಲ್ಲಿದೆ:
♦ ಆರ್‌ಟಿಐ ಕಾವಲು ಸಂಸ್ಥೆಯಾದ ಕೇಂದ್ರ ಮಾಹಿತಿ ಆಯೋಗದ ಸದಸ್ಯರಾಗಿ ಐದು ವರ್ಷಗಳನ್ನು ಕಳೆದಿದ್ದೀರಿ. ಆರ್‌ಟಿಐನ ಪ್ರಸ್ತುತ ಸ್ಥಿತಿಗೆ ಎಷ್ಟು ಅಂಕ ನೀಡುತ್ತೀರಿ?
ಆಚಾರ್ಯುಲು: ನಾನು 10ರಲ್ಲಿ 9 ಅಂಕ ನೀಡುತ್ತೇನೆ. ನಮ್ಮ ಗಮನ ಸಹಜವಾಗಿಯೇ ಮಾಹಿತಿ ನೀಡದ ಪ್ರಕರಣಗಳ ಬಗ್ಗೆ ಹರಿಯುತ್ತದೆ. ನನ್ನ ಅಧಿಕಾರಾವಧಿಯಲ್ಲಿ ಸುಮಾರು 20 ಸಾವಿರ ಪ್ರಕರಣಗಳ ವಿಚಾರಣೆ ನಡೆಸಿದ್ದೇನೆ. ಬಹುತೇಕ ಪ್ರಕರಣಗಳಲ್ಲಿ ನಾನು ಮಾಹಿತಿ ಬಹಿರಂಗಪಡಿಸುವಂತೆ ಆದೇಶ ನೀಡಿದ್ದೆ ಹಾಗೂ ಅದನ್ನು ಅನುಸರಿಸಲಾಗಿದೆ. ನನ್ನ ಎದುರು ಹಾಜರಾದ ಅಧಿಕಾರಿಗಳಿಗೆ ಮಾಹಿತಿ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಮಾಡಿದ್ದೇನೆ. ನಿಯಂತ್ರಣ ಸಂಸ್ಥೆಗಳಾದ ವಕೀಲರ ಮಂಡಳಿ ಹಾಗೂ ವೈದ್ಯಕೀಯ ಮಂಡಳಿ, ಕಾನೂನು ಸಚಿವಾಲಯ, ಪರಿಸರ ಸಚಿವಾಲಯ, ದಿಲ್ಲಿ ಸರಕಾರ ಮತ್ತಿತರ ಕಡೆ ಬದಲಾವಣೆಗಳನ್ನೂ ಕಂಡಿದ್ದೇನೆ.
ಭಾರತದಲ್ಲಿ ಪ್ರತಿ ವರ್ಷ ಸುಮಾರು 60 ಲಕ್ಷ ಆರ್‌ಟಿಐ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಮಾಹಿತಿ ಹಕ್ಕು ಕಾಯ್ದೆಯನ್ನು ಹೇಗೆ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ. ಆದರೆ ನಾನು ಗಮನ ಸೆಳೆಯಲು ಬಯಸುವ ಅಂಶವೆಂದರೆ ಶೇ. 60ರಿಂದ 70ರಷ್ಟು ಆರ್‌ಟಿಐ ಪ್ರಕರಣಗಳು ಉದ್ಯೋಗಿಗಳ ವ್ಯಾಜ್ಯ ಪರಿಹಾರ ಅಥವಾ ವ್ಯಾಜ್ಯ ಪರಿಹಾರಕ್ಕೆ ಇರುವ ಅರ್ಹತೆಗೆ ಸಂಬಂಧಿಸಿದವು. ಭಡ್ತಿ ಹಾಗೂ ಪಿಂಚಣಿಯ ಬಗ್ಗೆ ಪ್ರಶ್ನಿಸಿ ಕೂಡಾ ಆರ್‌ಟಿಐ ಸಲ್ಲಿಸಲಾಗುತ್ತದೆ. ಕೆಲವೊಮ್ಮೆ ಸಾರ್ವಜನಿಕ ಜಾಲತಾಣಗಳಲ್ಲಿ ಲಭ್ಯವಿರುವ ಸರಕಾರಿ ಆದೇಶದ ಪ್ರತಿಯನ್ನು ಕೋರಲೂ ಅರ್ಜಿ ಸಲ್ಲಿಸಲಾಗುತ್ತದೆ. ಇದು ದುರಾಡಳಿತದ ಮಟ್ಟವನ್ನು ತೋರಿಸುತ್ತದೆ.
♦ ಹಲವು ಮಂದಿ ಆರ್‌ಟಿಐ ಕಾರ್ಯಕರ್ತರು ಮತ್ತು ಪಾರದರ್ಶಕತೆ ಪ್ರತಿಪಾದಕರು ನೀವು ನೀಡಿದ 9 ಅಂಕಗಳನ್ನು ಒಪ್ಪಲಾರರು ಹಾಗೂ ಸರಕಾರ ಮಾಹಿತಿ ಹಕ್ಕನ್ನು ನಿರಾಕರಿಸುವ ಪ್ರಯತ್ನ ಮಾಡುತ್ತಲೇ ಇದೆ ಎಂಬ ವಾದ ಮಂಡಿಸಬಹುದು. ಉದಾಹರಣೆಗೆ ಸಾರ್ವಜನಿಕ ಮಹತ್ವದ, ದೊಡ್ಡ ಸಾಲಗಳ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ನಿರಾಕರಿಸಿದಂತೆ ಅಥವಾ ಸಿಐಸಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಬಗ್ಗೆ ಮಾಹಿತಿ ನಿರಾಕರಿಸುವಂತೆ..
ಆಚಾರ್ಯುಲು: ಆರ್‌ಟಿಐ ಕಾರ್ಯಕರ್ತರು ಹಲವು ಪ್ರಮುಖ ವಿಷಯಗಳನ್ನು ಎತ್ತುತ್ತಿದ್ದಾರೆ. ಇವುಗಳನ್ನು ನಾನು ದೃಢೀಕರಿಸುತ್ತೇನೆ ಮತ್ತು ನಾನು ಅದರ ಪರವಾಗಿದ್ದೇನೆ. 2018ರ ಡಿಸೆಂಬರ್ 10ರಂದು ನಾನು ದೇಶದ ಅತ್ಯುನ್ನತ ಹುದ್ದೆ ಹೊಂದಿರುವ ರಾಷ್ಟ್ರಪತಿಯವರಿಗೆ ಅಂದರೆ ನನ್ನ ಅತ್ಯುನ್ನತ ಅಧಿಕಾರಿಗೆ ಬಹಿರಂಗ ಪತ್ರ ಬರೆದು, ಮುಖ್ಯ ಮಾಹಿತಿ ಆಯುಕ್ತರೂ ಸೇರಿದಂತೆ ಎಂಟು ಖಾಲಿ ಉದ್ದೆಗಳ ಭರ್ತಿಗೆ ಕೋರಿದ್ದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಐಸಿ ಆದೇಶಗಳ ಗುಣಮಟ್ಟವು ನೇಮಕಾತಿಯ ಗುಣಮಟ್ಟವನ್ನು ಪ್ರತಿಫಲಿಸುತ್ತವೆ. ಇದಕ್ಕಾಗಿ ಸಿಐಸಿ ಹೆಚ್ಚು ಪ್ರಾತಿನಿಧಿಕವಾಗಿರಬೇಕು.
ಮಾಹಿತಿ ಆಯುಕ್ತರ ಹುದ್ದೆಗಳಿಗೆ ಕಾನೂನು, ಮಾಧ್ಯಮ, ವಿಜ್ಞಾನ ಮತ್ತು ತಂತ್ರಜ್ಞಾನ, ಸಮಾಜ ಸೇವೆ, ನಿರ್ವಹಣೆ, ಪತ್ರಿಕೋದ್ಯಮ, ಆಡಳಿತ ಮತ್ತು ವ್ಯವಸ್ಥಾಪನಾ ಕ್ಷೇತ್ರದಿಂದ ನೇಮಕ ಮಾಡುವಂತೆ ಆರ್‌ಟಿಐ ಕಾಯ್ದೆ ನಿರ್ದಿಷ್ಟವಾಗಿ ಹೇಳಿದೆ. ಆದರೆ ಸರಕಾರ ಮಾತ್ರ ಸಿಐಸಿಗೆ ಏಕೆ ನಿವೃತ್ತ ಉನ್ನತ ಅಧಿಕಾರಿಗಳ ನೇಮಕಕ್ಕೇ ಒಲವು ತೋರುತ್ತದೆ? ಮುಖ್ಯ ಮಾಹಿತಿ ಆಯಕ್ತರು ಉನ್ನತಾಧಿಕಾರಿಗಳೇ ಆಗಿರಬೇಕು ಎಂದು ಕಾಯ್ದೆ ಎಲ್ಲೂ ಹೇಳಿಲ್ಲ. ಸರಕಾರ ಮುಂದಿನ ಬಾರಿ ಮುಖ್ಯ ಆಯುಕ್ತರು ಸೇರಿದಂತೆ ಈ ಹುದ್ದೆಗಳಿಗೆ ನೇಮಕ ಮಾಡುವಾಗ ಇತರ ಎಲ್ಲ ಕ್ಷೇತ್ರಗಳನ್ನೂ ಪರಿಗಣಿಸಬೇಕು. ನಿವೃತ್ತ ಅಧಿಕಾರಿಯನ್ನು ನೇಮಕ ಮಾಡುವುದಾದರೆ, ಆ ಅಧಿಕಾರಿ ಅಧಿಕಾರದಲ್ಲಿದ್ದಾಗ ಪಾರದರ್ಶಕತೆಯ ಕಾರಣಕ್ಕೆ ಏನು ಮಾಡಿದ್ದಾರೆ ಮತ್ತು ಪಾರದರ್ಶಕತೆಯ ಬಗ್ಗೆ ಅವರಿಗೆ ಇರುವ ಒಲವು ಏನು ಎನ್ನುವುದನ್ನೇ ಪ್ರಮುಖವಾಗಿ ಪರಿಗಣಿಸಬೇಕು. ಕೇಂದ್ರ ಹಾಗೂ ರಾಜ್ಯ ಮಾಹಿತಿ ಆಯೋಗಗಳು ನಿವೃತ್ತ ಅಧಿಕಾರಿಗಳ ತಾಣ ಎಂಬ ಇಮೇಜ್ ಸೃಷ್ಟಿಯಾಗುತ್ತಿದೆ. ಸರಕಾರ ಈ ಇಮೇಜ್ ಕೊನೆಗೊಳಿಸಬೇಕು.
(ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಅವರು ಸಿಐಸಿ ನೇಮಕಾತಿ ಕುರಿತಂತೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಡಿಸೆಂಬರ್ 13ರಂದು ನೀಡಿದ ಐತಿಹಾಸಿಕ ಸೂಚನೆಯಲ್ಲಿ, ಸಿಐಸಿ ಹುದ್ದೆಗಳನ್ನು ಭರ್ತಿ ಮಾಡಲು ಸ್ವೀಕರಿಸಿದ ಅರ್ಜಿಗಳ ವಿವರಗಳನ್ನು ಬಹಿರಂಗಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸಿದೆ).
♦ ಸಾರ್ವಜನಿಕ ಮಾಹಿತಿ ಅಧಿಕಾರಿ ಹುದ್ದೆಯನ್ನು ನಿಧಾನವಾಗಿ ದುರ್ಬಲಗೊಳಿಸುವ ಮೂಲಕ ಕೂಡಾ ಸರಕಾರ ಆರ್‌ಟಿಐ ಕಾಯ್ದೆಯನ್ನು ಕಡೆಗಣಿಸುತ್ತಿದೆ. ಸೆಕ್ಷನ್ ಅಧಿಕಾರಿಗಳು ಸೇರಿದಂತೆ ಅತ್ಯಂತ ಕಿರಿಯ ಅಧಿಕಾರಿಗಳು ಆರ್‌ಟಿಐ ಕೋರಿಕೆಗಳಿಗೆ ಸೇವೆ ಒದಗಿಸುತ್ತಾರೆ; ಆದರೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಇರುವ ಹಿರಿಯ ಅಧಿಕಾರಿಗಳು, ಆರ್‌ಟಿಐ ಮನವಿಗಳಿಂದ ವಿಮುಖರಾಗುತ್ತಿದ್ದಾರೆ.
ಆಚಾರ್ಯುಲು: ಹೌದು; ಇದು ಖಂಡಿತಾ ನಿಜ. ಮಾಹಿತಿ ನಿರಾಕರಿಸುವ ಕಾರ್ಯ ಸಾಮಾನ್ಯವಾಗಿ ಉನ್ನತ ಮಟ್ಟದಲ್ಲೇ ನಡೆಯುತ್ತದೆ. ಆದರೆ ಸಾರ್ವಜನಿಕ ಮನವಿಗಳಿಗೆ ಉತ್ತರಿಸುವ ಸಾರ್ವಜನಿಕ ಮಾಹಿತಿ ಅಧಿಕಾರಿ ಇಡೀ ವ್ಯವಸ್ಥೆಯಲ್ಲಿ ಕಿರಿಯರಾಗಿರುತ್ತಾರೆ. ನನ್ನ ಎದುರು ಹಾಜರಾದ ಸಾರ್ವಜನಿಕ ಅಧಿಕಾರಿಗಳಿಗೆ ಎಲ್ಲಿ ಮಾಹಿತಿ ತಡೆ ಹಿಡಿಯಲ್ಪಟ್ಟಿದೆ? ಈ ಬಗ್ಗೆ ಮಾಹಿತಿ ನೀಡಿ ಅಥವಾ 25 ಸಾವಿರ ರೂಪಾಯಿ ದಂಡ ಕಟ್ಟಲು ಸಿದ್ಧರಾಗಿ ಎಂದು ಹೇಳುವ ಮೂಲಕ ಈ ಸಮಸ್ಯೆ ನಿಭಾಯಿಸುವ ಪ್ರಯತ್ನ ಮಾಡಿದ್ದೆ. ಆಗ ಅವರು, ‘‘ಸರ್ ಇದು ನನ್ನ ಕೈಯಲ್ಲಿಲ್ಲ’’ ಎಂಬ ಉತ್ತರ ಕೊಡುತ್ತಿದ್ದರು. ‘‘ಮತ್ತೆ ಯಾರ ಕೈಯಲ್ಲಿದೆ?’’ ಎಂದು ನಾನು ಮರು ಪ್ರಶ್ನೆ ಎಸೆಯುತ್ತಿದ್ದೆ. ಸೂಕ್ತವಾದ ಅಧಿಕಾರಿಯನ್ನೇ ಪಿಐಆರ್ ಆಗುವಂತೆ ನಾನು ಸೂಚಿಸುತ್ತಿದ್ದೆ. ಹೀಗೆ ನಾನು ವಿವಿ ಕುಲಪತಿಗಳಿಗೆ ಹಾಗೂ ಕುಲಸಚಿವರಿಗೆ, ಆಯೋಗದ ಅಧ್ಯಕ್ಷರಿಗೆ, ಆರ್‌ಬಿಐ ಗವರ್ನರ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದೆ. ಕೊನೆಯ ಪ್ರಕರಣ ದೊಡ್ಡ ಸುದ್ದಿ ಮಾಡಿತು. ಆದರೆ ನನ್ನ ವೃತ್ತಿಜೀವನದುದ್ದಕ್ಕೂ ಅಗತ್ಯ ಬಿದ್ದಾಗಲೆಲ್ಲ ಹಲವು ಇಲಾಖೆಗಳಿಗೆ ಇಂಥ ನೋಟಿಸ್ ನೀಡಿದ್ದೆ.
♦ ನೀವು ವಿಚಾರಣೆ ನಡೆಸಿದ ಕೊನೆಯ ಹಾಗೂ ಅತ್ಯಂತ ಮಹತ್ವದ ಆರ್‌ಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ನವೆಂಬರ್‌ನಲ್ಲಿ ನೀವು ಆರ್‌ಟಿಐ ಕಾಯ್ದೆಗೆ ಬದ್ಧರಾಗದೇ ಇರುವ ಬಗ್ಗೆ ಆರ್‌ಬಿಐ ಗವರ್ನರ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದೀರಿ ಹಾಗೂ 50 ಕೋಟಿ ರೂಪಾಯಿಗಿಂತ ಅಧಿಕ ಸಾಲಮೊತ್ತದ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಕೇಳಿದ್ದ ಮಾಹಿತಿ ನೀಡುವಂತೆ ಆದೇಶ ನೀಡಿದ್ದೀರಿ. ಆದರೆ ಹೀಗೆ ಬಹಿರಂಗಪಡಿಸುವುದು ರಾಷ್ಟ್ರೀಯ ಆರ್ಥಿಕತೆಗೆ ಹಾನಿ ಉಂಟುಮಾಡುತ್ತದೆ ಎಂಬ ವಾದ ಮಂಡಿಸಿ ಆರ್‌ಬಿಐ ನಿಮ್ಮ ಆದೇಶವನ್ನು ಮುಂಬೈ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ಮಧ್ಯಂತರ ತಡೆಯಾಜ್ಞೆ ಪಡೆದಿದೆ.
ಆಚಾರ್ಯುಲು: ಆರ್‌ಬಿಐ ನಿಲುವು ತೀರಾ ದುರದೃಷ್ಟಕರ. ದೊಡ್ಡ ಮೊತ್ತದ ಸುಸ್ತಿದಾರರ ಬಗೆಗಿನ ಮಾಹಿತಿ ಖಾಸಗಿ ಮತ್ತು ಅದನ್ನು ಬಹಿರಂಗಪಡಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಹಾಗೂ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎನ್ನುವ ಅದರ ವಾದ ಅಸಂಬದ್ಧ. ಇದು ಅಸಾಂವಿಧಾನಿಕ ಮತ್ತು ಬೇಜವಾಬ್ದಾರಿಯುತ ವಾದ. ಇದು ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ಮುಚ್ಚಿಹಾಕುವ ಯತ್ನ. ಉದ್ದೇಶಪೂರ್ವಕ ಸುಸ್ತಿದಾರರು ಯಾರು ಎನ್ನುವುದನ್ನು ಬಹಿರಂಗಪಡಿಸದಿರುವ ಮೂಲಕ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುವುದನ್ನು ಮುಚ್ಚಿಹಾಕುವ ಪ್ರಯತ್ನ ಮತ್ತು ಉದ್ದೇಶಪೂರ್ವಕವಾಗಿ ಈ ಸುಸ್ತಿ ಪ್ರಕ್ರಿಯೆಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಅನುಮಾನ ನನ್ನದು. ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣವನ್ನು ಅವರಿಗೆ ಸಾಲವಾಗಿ ನೀಡಲಾಗಿದೆ. ಹಲವು ಮಂದಿ ಪ್ರಭಾವಿಗಳು ಬಳಿಕ ಸುಸ್ತಿದಾರರಾಗಿದ್ದಾರೆ. ಈ ಮಾಹಿತಿಯನ್ನು ಜನರಿಂದ ಏಕೆ ರಹಸ್ಯವಾಗಿಡಬೇಕು? ಇದು ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಹಾಗೂ ಕಾನೂನುಬಾಹಿರ.
ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಪಾರದರ್ಶಕತೆ ಅತ್ಯಗತ್ಯ ಎನ್ನುವುದಕ್ಕೆ ಸಾಲ ಸುಸ್ತಿದಾರರ ಪ್ರಕರಣ ಒಳ್ಳೆಯ ನಿದರ್ಶನ. ಅಪಾರದರ್ಶಕತೆಯ ಮೂಲಕ ನೀವು ಭ್ರಷ್ಟಾಚಾರ, ವಂಚನೆ, ಅಪರಾಧ ನಿರ್ಲಕ್ಷ್ಯ, ನಿಯಂತ್ರಣ ವ್ಯವಸ್ಥೆಯ ದೋಷ ಮತ್ತು ಸಾಲ ಸದಾ ಹಾಗೆಯೇ ಉಳಿಯುವಂತೆ ಮಾಡಲು ನೀವು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಂತಿಮವಾಗಿ ಸಾಲದ ಹೊರೆ, ಭರಿಸುವುದು ಸಾಧ್ಯವೇ ಇಲ್ಲ ಎನ್ನುವ ಹಂತಕ್ಕೆ ಬರುತ್ತದೆ. ಕೊನೆಗೆ ನೀವು ಅದನ್ನು ಅನುತ್ಪಾದಕ ಆಸ್ತಿ ಎಂದು ಘೋಷಿಸುತ್ತೀರಿ. ಇದು ಬ್ಯಾಂಕ್‌ಗಳ ವ್ಯವಹಾರ ಗೌಪ್ಯತೆಯಲ್ಲ; ಬದಲಾಗಿ ವ್ಯವಹಾರ ದೋಷ.
ದುರಾಡಳಿತವನ್ನು ಪ್ರಶ್ನಿಸುವುದು ಕೂಡಾ ಆರ್‌ಟಿಐನ ಒಂದು ಉದ್ದೇಶ. ಹಿಂದಿನ ಆಯುಕ್ತ ಶೈಲೇಶ್ ಗಾಂಧಿಯವರು ಆರ್‌ಬಿಐಗೆ ನೀಡಿದ್ದ ಈ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ತೀರ್ಪನ್ನು ಕೂಡಾ ಆರ್‌ಬಿಐ ಇದೀಗ ಉಲ್ಲಂಘಿಸಿದಂತಾಗಿದೆ. ಆರ್‌ಬಿಐ ಮುಖ್ಯಸ್ಥರನ್ನು ನ್ಯಾಯಾಲಯ ನಿಂದನೆಗಾಗಿ ಕಟಕಟೆಗೆ ಎಳೆಯಬೇಕು. ಆದರೆ ಅವರು ಈ ಮಾಹಿತಿ ಬಹಿರಂಗಪಡಿಸದಿರಲು ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ವೆಬ್‌ಸೈಟ್‌ನಲ್ಲಿ ಈ ಮಾಹಿತಿ ಬಹಿರಂಗಪಡಿಸುವಂಥದ್ದಲ್ಲ ಎಂದು ಘೋಷಿಸಿದ್ದಾರೆ. ಆರ್‌ಟಿಐನಲ್ಲಿ ಇರುವ ವಿವಿಧ ವಿಧಿಗಳನ್ನು ಇದಕ್ಕೆ ಉದಾಹರಿಸಿದ್ದಾರೆ. ಇದು ಸಂಪೂರ್ಣ ತಪ್ಪು. ಇದೀಗ ಅವರು ಸಿಐಸಿ ಆದೇಶದ ವಿರುದ್ಧ ನ್ಯಾಯಾಲಯದ ಕಟ್ಟೆ ಏರಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯ 10 ರೂಪಾಯಿಯ ಆರ್‌ಟಿಐ ಅರ್ಜಿ ಸಲ್ಲಿಸಲು ಸಾಧ್ಯವಾಗಬಹುದು. ಆದರೆ ಆರ್‌ಬಿಐನಂಥ ಪ್ರಬಲ ಸಂಸ್ಥೆಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಎದುರಿಸಲು ಹೇಗೆ ಸಾಧ್ಯ? ಇದು ಬೆದರಿಕೆಯಲ್ಲವೇ? ಇಂಥ ಪ್ರಕರಣಗಳಲ್ಲಿ ಸಿಐಸಿ ನಾಗರಿಕರ ನೆರವಿಗೆ ಬರಬೇಕು.
♦ ಮುಂಬೈ ಹೈಕೋರ್ಟ್‌ನಲ್ಲಿ ನಿಮ್ಮ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಆರ್‌ಬಿಐ ಕ್ರಮವು, ಹೀಗೆ ಬಹಿರಂಗಗೊಳಿಸುವುದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಸಿಐಸಿ ಕ್ರಮವನ್ನು ಪ್ರಶ್ನಿಸುವ ದೊಡ್ಡ ಪಿತೂರಿಯ ಅಂಗವೇ?
ಆಚಾರ್ಯುಲು: ಮಾಹಿತಿ ಆಯೋಗವು ಮೇಲ್ಮನವಿಯ ಅಂತಿಮ ತಾಣವಾಗ ಬೇಕು. ಆದರೆ ಇಂತ ಮಾಹಿತಿ ನೀಡುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸರಕಾರಗಳು ನ್ಯಾಯಾಲಯವನ್ನು ಮೂರನೇ ಮೇಲ್ಮನವಿ ತಾಣವನ್ನಾಗಿ ಬಳಸಿಕೊಳ್ಳುತ್ತಿವೆ. ರಿಟ್ ಅರ್ಜಿ ಎಂದರೆ, ನಾಗರಿಕರು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಸಲ್ಲಿಸುವ ಅರ್ಜಿ. ಆದರೆ ಇದರ ಬದಲಾಗಿ, ಸರಕಾರಗಳು ರಿಟ್ ಅರ್ಜಿಯನ್ನು ಮಾಹಿತಿ ಆಯೋಗ ಮತ್ತು ನಾಗರಿಕರ ವಿರುದ್ಧ ಸಲ್ಲಿಸುತ್ತಿದೆ ಹಾಗೂ ಮಾಹಿತಿ ಬಹಿರಂಗಪಡಿಸದಿರಲು ವಾದ ಮಂಡಿಸುತ್ತದೆ. ಈ ಪ್ರಹಸನವನ್ನು ನೋಡಿ! ಕೆಲ ಮಾಧ್ಯಮ ವರದಿಗಳ ಪ್ರಕಾರ, ಸರಕಾರ ಸಿಐಸಿ ವಿರುದ್ಧ 1,700 ರಿಟ್ ಅರ್ಜಿಗಳನ್ನು ಸಲ್ಲಿಸಿದೆ.
ಇಂತಹ ಅರ್ಜಿಗಳನ್ನು ಸಲ್ಲಿಸುವ ಮೂಲಕ ಸರಕಾರ ಜನರಿಗೆ ಯಾವ ಸಂದೇಶ ರವಾನಿಸುತ್ತಿದೆ ಎನ್ನುವ ಬಗ್ಗೆ ಸರಕಾರ ತನ್ನನ್ನೇ ಪ್ರಶ್ನಿಸಿ ಕೊಳ್ಳಬೇಕು. ಇದರ ಉದ್ದೇಶ ಸಿಐಸಿಗೆ ಬೆದರಿಕೆ ಹಾಕುವುದು ಮತ್ತು ಪಳಗಿಸುವುದು. ಕೆಲ ಪ್ರಕರಣಗಳಲ್ಲಿ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಗುಜರಾತ್ ವಿವಿ ಸಲ್ಲಿಸಿದ ಒಂದು ಅರ್ಜಿಯಲ್ಲಿ ನನ್ನನ್ನು ಪ್ರತಿವಾದಿ ಸಂಖ್ಯೆ 1, 2 ಹಾಗೂ 3 ಎಂದು ಹೆಸರಿಸಲಾಗಿದೆ. (ಪ್ರಧಾನಿ ನರೇಂದ್ರ ಮೋದಿಯವರ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸಲು ಆಚಾರ್ಯುಲು ನೀಡಿದ ಆದೇಶವನ್ನು ಅನುಷ್ಠಾನಗೊಳಿಸಿರುವ ಗುಜರಾತ್ ವಿವಿ, ಇದಕ್ಕೆ ತಡೆಯಾಜ್ಞೆ ಕೋರಿ ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ). ಇದರಲ್ಲಿ ಪ್ರತಿವಾದಿ 1. ಎಂ.ಶ್ರೀಧರ ಆಚಾರ್ಯುಲು, ಪ್ರತಿವಾದಿ 2, ಎಂ.ಶ್ರೀಧರ ಆಚಾರ್ಯುಲು, ಮಾಹಿತಿ ಆಯುಕ್ತರು, ಹಾಗೂ ಪ್ರತಿವಾದಿ 3, ಮಾಹಿತಿ ಆಯುಕ್ತರು ಎಂದು ಹೆಸರಿಸಲಾಗಿದೆ).
♦ ಆರ್‌ಟಿಐ ತಿದ್ದುಪಡಿ ಮಸೂದೆಯ ಉದ್ದೇಶ ಕೂಡಾ ಸಿಐಸಿಯನ್ನು ಪಳಗಿಸುವ ಪ್ರಯತ್ನ ಎನ್ನಲಾಗುತ್ತಿದೆ.
ಆಚಾರ್ಯುಲು: ತಿದ್ದುಪಡಿ ಆಂಗೀಕಾರವಾದರೆ, ಸಿಐಸಿ ಹಾಗೂ ಆರ್‌ಟಿಐ ಕಾಯ್ದೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಮಾತ್ರವಲ್ಲದೆ, ಅದನ್ನು ಸಂಪೂರ್ಣ ಮುಗಿಸುವ ಪ್ರಯತ್ನವಾಗುತ್ತದೆ. ಪ್ರಸ್ತುತ ಕಾಯ್ದೆಯಡಿ ಆಯುಕ್ತರ ಅಧಿಕಾರಾವಧಿ ನಿಗದಿಯಾಗಿರುತ್ತದೆ. ಸಿಐಸಿಯ ಸ್ವಾಯತ್ತತೆಯ ಕರಣದಿಂದ ಆಯುಕ್ತರನ್ನು ಕಿತ್ತುಹಾಕುವುದು ಕಷ್ಟಸಾಧ್ಯ. ಆದರೆ ಇದಕ್ಕೆ ತಿದ್ದುಪಡಿ ತರುವ ಮೂಲಕ ಆಯುಕ್ತರ ಸ್ವಾತಂತ್ರ್ಯವನ್ನು ಕೊನೆಗೊಳಿಸಿ, ಅವರನ್ನು ವೈಭವೀಕೃತ ಗುಮಾಸ್ತರನ್ನಾಗಿ ಮಾಡಲಾಗುತ್ತದೆ. ಅವರ ಅಧಿಕಾರಾವಧಿ ಸರಕಾರದ ಮರ್ಜಿಗೆ ಅನುಗುಣವಾಗುತ್ತದೆ.
ಜನರು ಈ ತಿದ್ದುಪಡಿಗಳನ್ನು ಪ್ರಬಲವಾಗಿ ವಿರೋಧಿಸಬೇಕು. ಉದ್ದೇಶಿತ ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ- 2018ಕ್ಕೆ ಸಂಬಂಧಿಸಿದಂತೆ ಶ್ರೀಕೃಷ್ಣ ಆಯೋಗದ ವರದಿ, ಆರ್‌ಟಿಐ ಕಾಯ್ದೆಗೆ ತಿದ್ದುಪಡಿಯನ್ನೂ ಪ್ರಸ್ತಾವಿಸಿದ್ದು, ಇದು ಇನ್ನೊಂದು ದೊಡ್ಡ ಅಪಾಯ. ನಾನು ಆಯುಕ್ತನಾಗಿದ್ದ ಅವಧಿಯಲ್ಲಿ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8.1ನ್ನು ಗಮನಿಸಿದ್ದೆ. (ಇದು ವೈಯಕ್ತಿಕ ಮಾಹಿತಿ ಎಂಬ ಆಧಾರದಲ್ಲಿ ಮಾಹಿತಿಯನ್ನು ನಿರಾಕರಿಸುವುದಕ್ಕೆ ಸಂಬಂಧಿಸಿದ್ದು). ಇದನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಖಾಸಗಿತನದ ನೆಪದಲ್ಲಿ, ಶ್ರೀಕೃಷ್ಣ ಆಯೋಗದ ಪ್ರಸ್ತಾವಿತ ತಿದ್ದುಪಡಿಯು, ಸಾರ್ವಜನಿಕ ಪ್ರಾಧಿಕಾರದ ಸುತ್ತ ಗೋಡೆ ನಿರ್ಮಿಸಿ, ಒಂದು ತುಣುಕು ಮಾಹಿತಿ ಕೂಡಾ ಒದಗಿಸದಂತೆ ಸುರಕ್ಷೆ ಒದಗಿಸುತ್ತದೆ. ಇದು ದೊಡ್ಡ ಅಪಾಯ.
♦ ಈ ಸವಾಲುಗಳ ನಡುವೆಯೂ ನಾವು ಹೇಗೆ ಆರ್‌ಟಿಐ ಬಲಗೊಳಿಸಬಹುದು?
ಆಚಾರ್ಯುಲು: ಸಾರ್ವತ್ರಿಕ ಚುನಾವಣೆ ಮುಂದಿನ ಕೆಲ ತಿಂಗಳುಗಳಲ್ಲಿ ನಡೆಯುತ್ತದೆ ಹಾಗೂ ಆರ್‌ಟಿಐಗೆ ಸಂಬಂಧಿಸಿದಂತೆ ನಾಗರಿಕರು ರಾಜಕೀಯ ಪಕ್ಷಗಳ ನಿಲುವನ್ನು ಪ್ರಶ್ನಿಸಬೇಕು ಮತ್ತು ಪಾರದರ್ಶಕತೆಗೆ ಅವರು ಎಷ್ಟು ಬದ್ಧತೆ ಹೊಂದಿದ್ದಾರೆ ಎಂದು ಕೇಳಬೇಕು. ಎಲ್ಲ ರಾಜಕೀಯ ಪಕ್ಷಗಳು ಈ ಕೆಳಗಿನ ಅಂಶಗಳ ಬಗ್ಗೆ ತಮ್ಮ ಪ್ರಣಾಳಿಕೆಗಳಲ್ಲಿ ಬದ್ಧತೆ ಪ್ರದರ್ಶಿಸಬೇಕು: ನಾವು ಆರ್‌ಟಿಐ ಕಾಯ್ದೆಗೆ ತಿದ್ದುಪಡಿ ತರುವುದಿಲ್ಲ ಅಥವಾ ದುರ್ಬಲಗೊಳಿಸುವುದಿಲ್ಲ; ಸೆಕ್ಷನ್ 4ರ ಅನ್ವಯ ಸ್ವಯಂಪ್ರೇರಿತವಾಗಿ ಮಾಹಿತಿಯನ್ನು ಕಾನೂನಾತ್ಮಕವಾಗಿ ಬಹಿರಂಗಗೊಳಿಸುತ್ತೇವೆ, ಪ್ರಾಮಾಣಿಕವಾಗಿ ಮಾಹಿತಿ ಆಯುಕ್ತರನ್ನು ನೇಮಕ ಮಾಡುತ್ತೇವೆ; ಈ ಪೈಕಿ ಶೇ.90ರಷ್ಟು ಮಂದಿಯನ್ನು ನಿವೃತ್ತ ಅಧಿಕಾರಿಗಳಲ್ಲದಂತೆ ನೋಡಿ ಕೊಳ್ಳುತ್ತೇವೆ ಹಾಗೂ ಸ್ವತಃ ತಮ್ಮನ್ನು ಆರ್‌ಟಿಐ ಅಡಿಯಲ್ಲಿ ತರುತ್ತೇವೆ ಎಂಬ ಭರವಸೆ ಪಡೆಯಬೇಕು. ಈ ಎಲ್ಲ ಆಯಾಮಗಳಲ್ಲಿ ಪಕ್ಷಗಳನ್ನು ಮೌಲ್ಯಮಾಪನ ಮಾಡಿ ಬಳಿಕ ಮತದಾರರು ಮತ ಹಾಕುವಂತಾಗಬೇಕು. ಆರ್‌ಟಿಐ ದುರ್ಬಲಗೊಳಿಸುವ ಯಾವುದೇ ಪ್ರಯತ್ನಗಳಿಗೆ ತೀವ್ರ ಪ್ರತಿರೋಧ ಒಡ್ಡಬೇಕು ಹಾಗೂ ಆರ್‌ಟಿಐ ಪ್ರಶ್ನೆಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸಲ್ಲಿಸಬೇಕು.
ಕೃಪೆ: indiaspend.com