ಭಾರತದ ರೈತ ಮಹಿಳೆಯರ ಸಮಸ್ಯೆ ಯಾವುದು?
ಒಂದು ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯು ಮಹಿಳೆಯ ಕೃಷಿ ಶ್ರಮವನ್ನು ದುಡಿಸಿಕೊಳ್ಳುತ್ತದಾದರೂ, ಆಕೆಗೆ ರೈತನ ಸ್ಥಾನಮಾನ ನೀಡುವುದಿಲ್ಲ. ಕೃಷಿ ಯಾವತ್ತೂ ಕೇವಲ ಒಬ್ಬ ಪುರುಷ ಕೆಲಸ, ದುಡಿತವಾಗಿರಲಿಲ್ಲವಾದ್ದರಿಂದ ರೈತ ಮಹಿಳೆಯರ, ಮಹಿಳಾ ಕೃಷಿಕರ ಹಕ್ಕುಗಳಿಗೆ ಸೂಕ್ತ ಮನ್ನಣೆ ದೊರಕಬೇಕಾಗಿದೆ.
ಮಹಿಳೆಯರಿಗೆ ಬೇಸಾಯ, ಕೃಷಿಯ ಕುರಿತು ಏನು ಗೊತ್ತು? ಎಂದು ಕೇಳಿದರೆ ಉತ್ತರ: ಸುಮಾರಾಗಿ ಎಲ್ಲವೂ ಗೊತ್ತಿದೆ. ವಿಶ್ವದಾದ್ಯಂತ ಕೃಷಿಗೆ ಮಹಿಳೆಯರ ಕೊಡುಗೆ ಅನನ್ಯ, ವಿಶೇಷ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ, ಪುರುಷರಿಗೆ ಆಗುವ ಉತ್ಪಾದನಾ ಸಂಪನ್ಮೂಲಗಳು ಮಹಿಳೆಯರಿಗೂ ಅದೇ ಪ್ರಮಾಣದಲ್ಲಿ ಸಿಕ್ಕಿದರೆ ಅವರು ತಮ್ಮ ಹೊಲಗಳಲ್ಲಿ ಶೇ.20-30ರಷ್ಟು ಇಳುವರಿಯನ್ನು ಹೆಚ್ಚಿಸಬಲ್ಲರು.
ಹಲವು ಬೇಡಿಕೆಗಳನ್ನು ಮುಂದು ಮಾಡಿ ಇತ್ತೀಚೆಗೆ ಭಾರತದಲ್ಲಿ ಬೃಹತ್ತಾದ ರೈತರ ರ್ಯಾಲಿಯೊಂದು ನಡೆಯಿತು. ಈ ರ್ಯಾಲಿಯಲ್ಲಿ ಎದ್ದು ಕಂಡ ಒಂದು ಅಂಶವೆಂದರೆ, ಮಹಿಳೆಯರ ಹಾಜರಾತಿ, ಮಹಿಳೆಯರ ಭಾಗವಹಿಸುವಿಕೆ. ಅವರ ಕಠಿಣ ದುಡಿಮೆಯ ರುಜುವಾತಾದ ಅವರ ಒಡೆದ ಚರ್ಮ, ಬಿರುಕು ಬಿಟ್ಟ ಪಾದಗಳು ವಿಶ್ವದ ಹಲವಾರು ಮಂದಿಯನ್ನು ಮೂಕವಿಸ್ಮಿತರನ್ನಾಗಿ ಮಾಡಿದವು. ಹೆಚ್ಚಿನ ಮುಖ್ಯವಾಹಿನಿ ಸುದ್ದಿ ಚಾನೆಲ್‌ಗಳು ಈ ರ್ಯಾಲಿಗಳ ಮಹತ್ವವನ್ನು ಅಮುಖ್ಯಗೊಳಿಸಿ ಇತರ ಕ್ಷುಲಕ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದವು. ಕೆಲವು ಚಾನೆಲ್‌ಗಳು ಮಾತ್ರ ಮಹಿಳೆಯರಿಗೆ ಮಹತ್ವ ನೀಡಿ ಅವರ ಸ್ಥಿತಿಯನ್ನು ವಿಶ್ವಕ್ಕೆ ಪರಿಚಯಿಸಿದವು.
ಭಾರತ ಭಾರೀ ದೊಡ್ಡದಾದ ರೈತರ ಸಂಕಷ್ಟಗಳ ಒಂದು ಕಾಲಘಟ್ಟದಲ್ಲಿದೆ. ಸರಕಾರದ ಯೋಜನೆಗಳು ರೈತರಿಗೆ ನಿರೀಕ್ಷಿತ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಪ್ರಕಾರ ಫಸಲ್ ಬಿಮಾ ಯೋಜನೆ ಒಂದು ದೊಡ್ಡ ಮೋಸ. ಈ ಯೋಜನೆಯಿಂದ ಲಾಭವಾಗುತ್ತಿರುವುದು ಜೀವವಿಮಾ ಕಂಪೆನಿಗಳಿಗೆ ಮತ್ತು ಬ್ಯಾಂಕ್‌ಗಳಿಗೆ ಮಾತ್ರ. ದೇಶದಲ್ಲಿ ಕೃಷಿ ಬಿಕ್ಕಟ್ಟು ಇನ್ನೂ ಗಂಭೀರವಾಗಿಯೇ ಇದೆ.
ಮಹಾರಾಷ್ಟ್ರ (ವಿದರ್ಭ) ರೈತರ ಆತ್ಮಹತ್ಯೆಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವ ರಾಜ್ಯವಾಗಿಯೇ ಮುಂದುವರಿದಿದೆ. ಕಳೆದ ಎರಡು ದಶಕಗಳಲ್ಲಿ ಅಲ್ಲಿ ಎರಡು ಲಕ್ಷಕ್ಕಿಂತಲೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೋಷಪೂರಿತ ಜೀವವಿಮಾ ಯೋಜನೆಗಳು ಮತ್ತು ರೈತರಿಗೆ ಪಾವತಿಯಾಗಬೇಕಾದ ಮೊತ್ತ ಪಾವತಿಸುವಲ್ಲಿ ಆಗುವ ವಿಳಂಬಗಳು ಪರಿಸ್ಥಿತಿಯನ್ನು ಇನ್ನಷ್ಟೂ ಹದಗೆಡಿಸಿದೆ. ಹಾಗಾಗಿ ಮಹಿಳೆಯರೇ ಮನೆಯಲ್ಲಿ ಕುಟುಂಬದ ಜವಾಬ್ದಾರಿ ಹೊರಬೇಕಾದ ಕುಟುಂಬಗಳ ಸಂಖ್ಯೆ ಹೆಚ್ಚಾಗಿದೆ. 1961ರಿಂದ ಮಹಾರಾಷ್ಟ್ರ, ತ್ರಿಪುರಾ ಮತ್ತು ಕೇರಳದಲ್ಲಿ ಮಹಿಳಾ ಕೃಷಿ ಕಾರ್ಮಿಕರ ಸಂಖ್ಯೆಯ ಹೆಚ್ಚಳದೊಂದಿಗೆ ಕೃಷಿಯ ಮಹಿಳೀಕರಣ (ಫೆಮಿನೈಝೇಶನ್) ನಡೆದಿದೆ.
‘‘ಸರ್ವೈವಿಂಗ್ ಸ್ಟಿಗ್ಮ: ಹೌಸಿಂಗ್ ಆ್ಯಂಡ್ ಲ್ಯಾಂಡ್ ರೈಟ್ಸ್ ಆಫ್ ಫಾರ್ಮ್ ವಿಡೋಸ್ ಆಫ್ ವಿದರ್ಭ, ಮಹಾರಾಷ್ಟ್ರ’’ ಎಂಬ ಸಮೀಕ್ಷೆಯೊಂದನ್ನು ದಿ ವೈರ್ ನಡೆಸಿತು. ಆ ವರದಿ ರೈತ ವಿಧವೆಯರ ಚಿಂತಾಜನಕ ಪರಿಸ್ಥಿತಿ ಹಾಗೂ ಅವರಿಗೆ ಸಂಬಂಧಿಸಿ ನಡೆಯುವ ಮಾನವ ಹಕ್ಕು ಉಲ್ಲಂಘನೆ ಮತ್ತು ಅವರನ್ನು ಆರ್ಥಿಕವಾಗಿ ಹೊರಗಿಡುವ ಬಗ್ಗೆ ಬೆಳಕು ಚೆಲ್ಲಿದೆ. ಮಹಿಳಾ ರೈತರಲ್ಲಿ ಸುಮಾರು ಶೇ.90ರಷ್ಟು ಮಂದಿ ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವವರು. ಅಂದರೆ ಆರ್ಥಿಕವಾಗಿ ಅತ್ತೆ ಮಾವಂದಿರ, ಮೈದುನ, ನಾದಿನಿಯರ ಅವಲಂಬನೆಯಲ್ಲಿರುವವರು.
ಒಂದು ಕಾಲದಲ್ಲಿ ‘ಶ್ವೇತ ಚಿನ್ನ’ ಅಥವಾ ಹತ್ತಿಗೆ ಪ್ರಸಿದ್ಧವಾಗಿದ್ದ ವಿದರ್ಭ ಈಗ ಮುಖ್ಯವಾಗಿ ರೈತರ ಆತ್ಮಹತ್ಯೆಗಳಿಗೆ ಪ್ರಸಿದ್ಧವಾಗಿದೆ. ಸಮೀಪದ ಮರಾಠಾವಾಡದಲ್ಲಿ, ಕೇವಲ ಹತ್ತು ಸಾವಿರ ರೂ.ಯಷ್ಟು ಸಾಲ ಕೂಡ ರೈತನನ್ನು ಆತ್ಮಹತ್ಯೆಗೆ ತಳ್ಳಬಲ್ಲದು. ವಿಧವೆಯರು ಇನ್ನಷ್ಟು ಸಾಲದ ಬೋನಿಗೆ ಬೀಳುತ್ತಾರೆ, ಹೊಟ್ಟೆಪಾಡಿಗಾಗಿ ಅನಿವಾರ್ಯವಾಗಿ ಇತರರ ಗದ್ದೆಗಳಲ್ಲಿ ರೈತ ಕಾರ್ಮಿಕರಾಗಿ ದುಡಿಯುತ್ತಾರೆ. ಅವರ ಮಕ್ಕಳ ಶಿಕ್ಷಣ ಅರ್ಧಕ್ಕೇ ಕೊನೆಗೊಳ್ಳುತ್ತದೆ.
ಕೋಟಾ ನಿಲೀಮಾರವರ ‘‘ವಿಡೋಸ್ ಆಫ್ ವಿದರ್ಭ’’ ಅಂತಹ ಮಹಿಳೆಯರ ದಾರುಣ ಚಿತ್ರ ನೀಡುತ್ತದೆ. ಗಂಡ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆ ವಿಧವೆಯರಿಗೆ, ಸಾಯುವುದು ಬದುಕುವುದಕ್ಕಿಂತ ಸುಲಭ ಅನ್ನಿಸಿತು. ನೀತಿ ನಿರೂಪಣೆಯ ಆಯಕಟ್ಟಿನ ಜಾಗಗಳಲ್ಲಿ ರೈತ ಮಹಿಳೆಯರಿಗೆ ಯಾವ ಸ್ಥಾನವೂ ಇಲ್ಲ. ರೈತರ ಆತ್ಮಹತ್ಯೆಗಳು ಕೇವಲ ಅಂಕಿ ಸಂಖ್ಯೆಗಳಾಗಿ, ಪ್ರಚಾರ ಸಾಮಗ್ರಿಯಾಗಿ, ರ್ಯಾಲಿಗಳ ಅಭಿಯಾನಗಳ ಭಾಷಣಗಳಿಗೆ ವಸ್ತುವಾಗಿ, ಅಂತಿಮವಾಗಿ ವಿಪಕ್ಷಗಳ ರಾಜಕೀಯ ದಾಳವೆಂಬ ಹೇಳಿಕೆಯಲ್ಲಿ ಪರ್ಯಾವ್ಯಸಾನಗೊಳ್ಳುತ್ತದೆ.
2015ರ ದತ್ತಾಂಶಗಳ ಪ್ರಕಾರ ಭಾರತದಲ್ಲಿ 98 ಮಿಲಿಯ ಮಹಿಳೆಯರು ಕೃಷಿರಂಗದಲ್ಲಿ ದುಡಿಯುತ್ತಿದ್ದಾರೆ. ಆದರೆ ರೈತರ ಆತ್ಮಹತ್ಯೆಗಳ ಕುರಿತಾದ ಚರ್ಚೆಗಳು ಸಾಮಾನ್ಯವಾಗಿ ಪುರುಷರ ಸುತ್ತವೇ ಗಿರಕಿ ಹೊಡೆಯುತ್ತಿರುತ್ತದೆ. ಯಾಕೆಂದರೆ ರೈತ ಮಹಿಳೆಯರ ಹೆಸರಿನಲ್ಲಿ ಸ್ವಂತ ಆಸ್ತಿ ಇರುವುದಿಲ್ಲ. ಆದ್ದರಿಂದ ಅವರು ರೈತರೆಂದು ಕರೆಸಿಕೊಳ್ಳುವ ಅರ್ಹತೆ ಪಡೆಯುವುದಿಲ್ಲ. ತಾವು ದುಡಿಯುವ ಭೂಮಿಯ ಮಾಲಕತ್ವ ಹೊಂದಿರುವವರ ಒಟ್ಟು ರೈತ ಮಹಿಳೆಯರು ಶೇ.13ರಷ್ಟು ಮಾತ್ರ. ಅವರ ಸ್ಥಾನಮಾನ ಕೂಲಿ ಕಾರ್ಮಿಕರಿಗಿಂತಲೂ ಕೀಳಾಗಿದೆ. ಒಟ್ಟು ಕೃಷಿ ಕೆಲಸದ ಶೇ.60-80ರಷ್ಟು ಕೆಲಸ ಮಾಡುವವರು ಮಹಿಳೆಯರೇ. ಆದರೂ ಅವರಿಗೆ ಕೇವಲ ಜಮೀನು ಕೂಲಿಗಳ ಸ್ಥಾನ ನೀಡಲಾಗುತ್ತದೆ.
ಮನೆಯಲ್ಲಿ ಮಾಡುವ ಸಾಂಸಾರಿಕ ದುಡಿಮೆಯಲ್ಲದೆ ಮಹಿಳೆಯರು ಗದ್ದೆ ಉಳುಮೆ ಮಾಡುವ, ಬಿತ್ತನೆ ಮಾಡುವ, ಕೊಯಿಲು ಬಡಿಯುವಂತಹ ಕಠಿಣ ಕೆಲಸಗಳನ್ನೂ ಮಾಡಬೇಕಾಗುತ್ತದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಅವರಿಗೆ ತಾರತಮ್ಯ ಮಾಡಲಾಗುತ್ತದೆ. ಪುರುಷರು ದವಸ ಧಾನ್ಯಗಳನ್ನು ಮಾರುವಾಗ ಅವರಿಗೆ ನೀಡಲಾಗುವ ದರವನ್ನು ಮಹಿಳೆಯರಿಗೆ ನೀಡುವುದಿಲ್ಲ. ಅಲ್ಲದೆ ಹಲವು ವೇಳೆ ಅವರು ಲೈಂಗಿಕ ಕಿರುಕುಳವನ್ನೂ ಅನುಭವಿಸಬೇಕಾಗುತ್ತದೆ.
ರೈತರ ಆತ್ಮಹತ್ಯೆಗಳಲ್ಲಿ ಈಗಾಗಲೇ ಹೆಚ್ಚಳವಾಗಿದೆ. 2014 ಮತ್ತು 2015ರ ನಡುವೆ ರೈತರ ಆತ್ಮಹತ್ಯೆಗಳಲ್ಲಿ ಶೇ.42ರಷ್ಟು ಏರಿಕೆಯಾಗಿದೆ. 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡ 8,017 ಮಂದಿ ರೈತರಲ್ಲಿ 441 ಮಂದಿ ರೈತ ಮಹಿಳೆಯರು ಮತ್ತು ಮಹಿಳಾ ಬೇಸಾಯಗಾರರು.
ಸಮಾಜದ ಅಂಚಿನಲ್ಲಿರುವ ಮಹಿಳೆಯರ ಸಬಲೀಕರಣವಾಗದೆ ಭಾರತದಲ್ಲಿ ಮಹಿಳಾ ಸಬಲೀಕರಣ ಪೂರ್ಣಗೊಳ್ಳುವುದಿಲ್ಲ. ಹಳ್ಳಿಗಳಿಂದ ಪುರುಷರು, ರೈತರು ನಗರಗಳಿಗೆ ವಲಸೆ ಹೋಗುತ್ತಿರುವುದು ಹಳ್ಳಿಯ ಮಹಿಳೆಯರ ಶ್ರಮ ಸಂಸ್ಕೃತಿಯಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ತಂದಿದೆ. ಪುರುಷರ ನಗರ ವಲಸೆಯು ಕೃಷಿಯಲ್ಲಿ ಮಹಿಳೆಯರ ಪಾತ್ರವನ್ನು ಪುನರ್‌ವ್ಯಾಖ್ಯಾನಿಸಿದೆ.
ಸುಧಾರಿತ ಕೃಷಿ ಪದ್ಧತಿಗಳು ಹಾಗೂ ಮಾರುಕಟ್ಟೆಯ ಹೊಸ ಸಂಪರ್ಕ ದಾರಿಗಳ ಕುರಿತು ರೈತ ಮಹಿಳೆಯರಿಗೆ ನೇರ ದಾರಿ ಲಭ್ಯವಾಗಬೇಕು. ದಲ್ಲಾಳಿಗಳ ಕಾಟ ಕೊನೆಗೊಳ್ಳಬೇಕು.
ಒಂದು ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯು ಮಹಿಳೆಯ ಕೃಷಿ ಶ್ರಮವನ್ನು ದುಡಿಸಿಕೊಳ್ಳುತ್ತದಾದರೂ, ಆಕೆಗೆ ರೈತನ ಸ್ಥಾನಮಾನ ನೀಡುವುದಿಲ್ಲ. ಕೃಷಿ ಯಾವತ್ತೂ ಕೇವಲ ಒಬ್ಬ ಪುರುಷ ಕೆಲಸ, ದುಡಿತವಾಗಿರಲಿಲ್ಲವಾದ್ದರಿಂದ ರೈತ ಮಹಿಳೆಯರ, ಮಹಿಳಾ ಕೃಷಿಕರ ಹಕ್ಕುಗಳಿಗೆ ಸೂಕ್ತ ಮನ್ನಣೆ ದೊರಕಬೇಕಾಗಿದೆ.
ಕೃಪೆ: countercurrents.org