ಕೆಟೊವಿಸ್ ಹವಾಮಾನ ಸಮಾವೇಶ ಮತ್ತು ಕೈಬಿಟ್ಟುಹೋದ ಅವಕಾಶ
ಹೆಚ್ಚೂ ಕಡಿಮೆ ಎರಡು ವಾರಗಳ ಕಾಲ ನಡೆದ ಹಗ್ಗಜಗ್ಗಾಟದ ನಂತರ ಇಂಗಾಲ ಹೊರಸೂಸುವಿಕೆಯನ್ನು ತಡೆಗಟ್ಟುವುದಕ್ಕೆ (ಕಾರ್ಬನ್ ಎಮಿಷನ್)ಸಂಬಂಧಪಟ್ಟ 133 ಪುಟಗಳ ನೀತಿ ನಿಯಮಗಳ ಪುಸ್ತಿಕೆಗೆ ಸುಮಾರು 200 ದೇಶಗಳು ಸಹಿ ಹಾಕಿ ಸಮ್ಮತಿ ಸೂಚಿಸಿದವು. ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಂಟಿಗ್ರೇಡಿಗಿಂತ ಹೆಚ್ಚಾಗದಂತೆ ತಡೆಗಟ್ಟುವ ಬಗ್ಗೆ 2015ರಲ್ಲಿ ಪ್ಯಾರಿಸ್‌ನಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಜಾರಿಗೊಳಿಸಲು ಈ ನಿಯಮ ಪುಸ್ತಿಕೆಯನ್ನು ರೂಪಿಸಲಾಗಿದೆ.
ಒಂದೆಡೆ ಮಾನವ ನಿರ್ಮಿತ ಹವಾಮಾನ ಬದಲಾವಣೆಯೆಂಬ ವಿದ್ಯಮಾನವನ್ನೇ ಸುಳ್ಳೆನ್ನುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೊಂದೆಡೆ ಹವಾಮಾನ ವಿದ್ಯಮಾನದ ಬಗ್ಗೆ ಅಷ್ಟೇನೂ ಉತ್ಸಾಹ ತೋರದ ಭಾರತ ಮತ್ತು ಬ್ರೆಝಿಲ್‌ಗಳ ಉಪಸ್ಥಿತಿಯ ನಡುವೆ ಪೋಲೆಂಡಿನ ಕೊಟೊವಿಸ್‌ನಲ್ಲಿ ನಡೆದ ಹವಾಮಾನ ಬದಲಾವಣೆ ಕುರಿತಾದ ಶೃಂಗಸಭೆಯಲ್ಲಿ ಯಾವುದೇ ಅರ್ಥಪೂರ್ಣ ಒಪ್ಪಂದಗಳು ಅಗುವ ಸಾಧ್ಯತೆಯೇನಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ವಿಫಲವಾಗುತ್ತಲೇ ಸಾಗಿರುವ ಬಹುಪಕ್ಷೀಯ ಒಪ್ಪಂದದ ಮಾತುಕತೆಗಳ ಸಾಲಿನಲ್ಲಿ ಇದೂ ಒಂದಾಗಿತ್ತು. ಆದರೂ, ಹೆಚ್ಚೂ ಕಡಿಮೆ ಎರಡು ವಾರಗಳ ಕಾಲ ನಡೆದ ಹಗ್ಗಜಗ್ಗಾಟದ ನಂತರ ಇಂಗಾಲ ಹೊರಸೂಸುವಿಕೆಯನ್ನು ತಡೆಗಟ್ಟುವುದಕ್ಕೆ (ಕಾರ್ಬನ್ ಎಮಿಷನ್)ಸಂಬಂಧಪಟ್ಟ 133 ಪುಟಗಳ ನೀತಿ ನಿಯಮಗಳ ಪುಸ್ತಿಕೆಗೆ ಸುಮಾರು 200 ದೇಶಗಳು ಸಹಿ ಹಾಕಿ ಸಮ್ಮತಿ ಸೂಚಿಸಿದವು. ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಂಟಿಗ್ರೇಡಿಗಿಂತ ಹೆಚ್ಚಾಗದಂತೆ ತಡೆಗಟ್ಟುವ ಬಗ್ಗೆ 2015ರಲ್ಲಿ ಪ್ಯಾರಿಸ್‌ನಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ಜಾರಿಗೊಳಿಸಲು ಈ ನಿಯಮ ಪುಸ್ತಿಕೆಯನ್ನು ರೂಪಿಸಲಾಗಿದೆ.
ಕೆಟೊವಿಸ್ ಕ್ಲೈಮೇಟ್ ಚೇಂಜ್ ಪ್ಯಾಕೇಜ್ (ಕೆಟೊವಿಸ್ ಹವಾಮಾನ ಬದಲಾವಣೆ ಸಮಗ್ರ ಕರಾರು) ಎಂಬುದು ಆ ನಿಯಮ ಪುಸ್ತಿಕೆಯ ಅಧಿಕೃತ ಶೀರ್ಷಿಕೆ. ಈ ಪುಸ್ತಿಕೆಯು ಹಸಿರುಮನೆ ಅನಿಲಗಳ ಹೊರಸೂಸುವಿಕೆಯ ಮೇಲೆ ನಿಗಾ ಇರಿಸಿರುವ ಬಗ್ಗೆ ಮತ್ತು ಅದನ್ನು ಕಡಿಮೆ ಮಾಡಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಯಾ ದೇಶಗಳು ಕಾಲಕಾಲಕ್ಕೆ ಹೇಗೆ ವರದಿ ಮಾಡಬೇಕೆಂಬ ವಿವರಗಳನ್ನು ಹೊಂದಿದೆ. ಆದರೆ ಇವುಗಳನ್ನು ಕಡ್ಡಾಯವಾಗಿ ಅನುಷ್ಠಾನಕ್ಕೆ ತರಲು ಬೇಕಾದ ಜಾರಿ ಪ್ರಕ್ರಿಯೆ/ಯಂತ್ರಾಂಗವೇ ಇದರಲ್ಲಿಲ್ಲವೆಂದು ಸಿನಿಕರು ಆಕ್ಷೇಪವೆತ್ತಬಹುದು. ಯಾವುದಾದರೂ ದೇಶವು ತನಗೆ ವಿಧಿಸಿಕೊಂಡ ಇಂಗಾಲ ಹೊರಸೂಸುವಿಕೆಯ ಮಿತಿಯನ್ನು ಮೀರಿದರೆ ಏನಾಗಬಹುದು? ಇದರ ಜೊತೆಗೆ ಗಮನಿಸಬೇಕಿರುವ ಮತ್ತೊಂದು ವಿದ್ಯಮಾನವೆಂದರೆ ಇತ್ತೀಚಿನ ವರ್ಷಗಳಲ್ಲಿ ಜಗತ್ತು ಶಕ್ತಿಮೂಲದ ಬಳಕೆಯಲ್ಲಿ ಕ್ಷಮತೆ ಸಾಧಿಸುತ್ತಿರುವುದು ಮತ್ತು ಪಳೆಯುಳಿಕೆ ಇಂಧನ (ಪೆಟ್ರೋಲ್-ಡಿಸೆಲ್‌ನಂಥ ಭೂಗರ್ಭದಿಂದ ಪಡೆಯುವ ಇಂಧನಗಳು) ಮೂಲಗಳನ್ನು ಬಿಟ್ಟು ಇತರ ಪರ್ಯಾಯ ಇಂಧನ ಮೂಲಗಳ ಬಳಕೆಯತ್ತ ಜಗತ್ತು ಸಾಗಿರುವುದು. ಇಂದು ಜಾಗತಿಕ ಅಂತರಿಕ ಉತ್ಪನ್ನವು ಶೇ.1ರಷ್ಟು ಏರಿಕೆಯಾಗಲು 1990ರಲ್ಲಿ ಬೇಕಾಗುತ್ತಿದ್ದ ಶಕ್ತಿ ಇಂಧನಗಳಿಗಿಂತ ಶೇ.32ರಷ್ಟು ಕಡಿಮೆ ಇಂಧನವೇ ಸಾಕು. ಈ ಕ್ಷಮತೆಯನ್ನು ಜಾಗತಿಕವಾದ ಯಾವುದೇ ಕರಾರುಗಳಿಲ್ಲದೆಯೇ ಸಾಧಿಸಲಾಗಿದೆ. ಈ ಇಂಧನ ಕ್ಷಮತೆ ಮುಂದುವರಿದ (ಅಡ್ವಾನ್ಸೆಡ್)ಆರ್ಥಿಕತೆಗಳಿಗಿಂತ ಮುನ್ನುಗ್ಗುತ್ತಿರುವ (ಎಮರ್ಜಿಂಗ್) ಆರ್ಥಿಕತೆಗಳಲ್ಲಿ ಇನ್ನಷ್ಟು ಹೆಚ್ಚಾಗಿದೆ. ಅಂದರೆ ಬದಲಾವಣೆ ಖಂಡಿತಾ ಸಾಧ್ಯವಿದೆ. ಸವಾಲಿರುವುದು ತಂತ್ರಜ್ಞಾನದ್ದೂ ಅಲ್ಲ ಅಥವಾ ಅದನ್ನು ಜಾರಿಗೊಳಿಸಲು ಬೇಕಿರುವ ಸೂಕ್ತ ಪ್ರಕ್ರಿಯೆಗಳ ಸ್ವರೂಪದ್ದೂ ಅಲ್ಲ. ಬದಲಿಗೆ ರಾಷ್ಟ್ರಗಳ ನಡುವೆ ಈ ಹೊಣೆಗಾರಿಕೆಯನ್ನು ಹಂಚಿಕೊಳ್ಳುವಲ್ಲಿ ಇರಬೇಕಾದ ಸರಿಸಮತೆಯದ್ದೇ ಅಸಲಿ ಸಮಸ್ಯೆಯಾಗಿದೆ. ಅಂದರೆ ಇದೊಂದು ಶುದ್ಧ ರಾಜಕೀಯದ ಪ್ರಶ್ನೆಯೇ ಆಗಿದೆ.
ಸರಿಸಮತೆಯ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಗಮನಿಸೋಣ. ಜಾಗತಿಕ ತಾಪಮಾನವು ಎರಡು ಡಿಗ್ರಿ ಸೆಂಟಿಗ್ರೇಡಿಗಿಂತ ಹೆಚ್ಚಾಗದಿರಲು ವಾತಾವರಣದಲ್ಲಿ ಕಡಿತಗೊಳಿಸಬೇಕಿರುವ ಹಸಿರುಮನೆ ಅನಿಲದ ಪ್ರಮಾಣವನ್ನು ಜಗತ್ತಿನ ಎಲ್ಲಾ ಜನರ ಮಧ್ಯೆ ಹಂಚಲಾಯಿತೆಂದು ಇಟ್ಟುಕೊಳ್ಳೋಣ. ಈ ಪ್ರಮಾಣವನ್ನೇ ಗಮನದಲ್ಲಿಟ್ಟುಕೊಂಡು ಪ್ರತಿದೇಶವು ಒಟ್ಟಾರೆ ಜಾಗತಿಕ ಹಸಿರುಮನೆ ಅನಿಲದ ಸಂಗ್ರಹಕ್ಕೆ ಎಷ್ಟು ಪ್ರಮಾಣ ಸೇರಿಸಬಹುದೆಂಬ ಮಿತಿಯನ್ನು ವಿಧಿಸಿದೆವೆಂದೂ ಭಾವಿಸಿಕೊಳ್ಳೋಣ. ನೂರಾರು ವರ್ಷಗಳ ಕೈಗಾರೀಕರಣದ ಹಿನ್ನೆಲೆಯ ಕಾರಣದಿಂದಾಗಿ ಹಲವಾರು ಮುಂದುವರಿದ ದೇಶಗಳು ಈ ನಿಗದಿತ ಪ್ರಮಾಣಕ್ಕಿಂತ ಹೆಚ್ಚೇ ಹಸಿರುಮನೆ ಅನಿಲವನ್ನು ಉತ್ಪಾದಿಸುತ್ತಿರುತ್ತಾರೆ. ಹೀಗಾಗಿ ಅವರು ತಮಗೆ ವಿಧಿಸಲಾದ ಮಿತಿಯನ್ನು ಮುಟ್ಟಬೇಕೆಂದರೆ ತಮ್ಮ ಉತ್ಪಾದನೆಯಲ್ಲಿ ಅತ್ಯಂತ ತೀವ್ರವಾದ ಬದಲಾವಣೆಯನ್ನೇ ತಂದುಕೊಳ್ಳಬೇಕಾಗುತ್ತದೆ. ಅದು ಅವರ ಒಟ್ಟಾರೆ ದೇಶೀಯ ಆಂತರಿಕ ಉತ್ಪಾದನೆಯನ್ನು ಅರ್ಥಾತ್ ದೇಶೀಯ ಅಭಿವೃದ್ಧಿಯನ್ನೂ ಪ್ರಭಾವಿಸುತ್ತದೆ. ಆದರೆ ಮುನ್ನುಗ್ಗುತ್ತಿರುವ ಆರ್ಥಿಕತೆಗಳಿಗೆ ಇನ್ನೂ ತಮ್ಮ ಅಭಿವೃದ್ಧಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿರುತ್ತದೆ. ಹೀಗಾಗಿ ಒಂದು ವೇಳೆ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ತಮ್ಮ ನಡುವೆ ಈ ಹಸಿರುಮನೆ ಅನಿಲದ ಮಿತಿಯನ್ನು ವಾಣಿಜ್ಯ ರೀತಿಯಲ್ಲಿ ವಿನಿಮಯ ಮಾಡಿಕೊಂಡರೆ ಶ್ರೀಮಂತ ದೇಶಗಳಿಂದ ಬಡದೇಶಗಳ ಕಡೆಗೆ ಸಂಪತ್ತು ಹರಿಯುವಂತಾಗುತ್ತದೆ. ಆ ಮೂಲಕ ಒಂದು ಸಮಸ್ಯೆಯನ್ನು ಬಗೆಹರಿಸುತ್ತಲೇ ಮತ್ತೊಂದು ಸಮಸ್ಯೆಯನ್ನೂ ಬಗೆಹರಿಸಿದಂತಾಗುತ್ತದೆ.
ಇದರ ಬದಲಿಗೆ ಜಾಗತಿಕ ತಾಪಮಾನವನ್ನು ಎರಡು ಡಿಗ್ರಿ ಸೆಂಟಿಗ್ರೇಡಿಗಿಂತ ಕಡಿಮೆ ಪ್ರಮಾಣದಲ್ಲಿ ಇಟ್ಟುಕೊಳ್ಳಲು ಬೇಕಾದ ಹಸಿರುಮನೆ ಪ್ರಮಾಣವನ್ನು ಜನಸಂಖ್ಯೆ ಆಧಾರದಲ್ಲಿ ನಿಗದಿಗೊಳಿಸಿ ಆಯಾ ದೇಶಗಳ ಪ್ರಮಾಣವನ್ನು ನಿಗದಿಗೊಳಿಸಲಾಯಿತೆಂದು ಇಟ್ಟುಕೊಳ್ಳೋಣ. ಈ ಲೆಕ್ಕಾಚಾರವು ಜನಸಂಖ್ಯೆಯು ಹೆಚ್ಚಾಗುತ್ತಿರುವ ಬಡದೇಶಗಳ ಶಕ್ತಿಇಂಧನಗಳ ಬಳಕೆಯ ಹೆಚ್ಚಳದ ಮೇಲೆ ತೀವ್ರ ನಿರ್ಬಂಧವನ್ನು ಹೇರುತ್ತದಲ್ಲದೆ, ಜನಸಂಖ್ಯೆ ಕಡಿಮೆಯಾಗುತ್ತಿರುವ ಶ್ರೀಮಂತ ದೇಶಗಳಿಗೆ ಇನ್ನೂ ಹೆಚ್ಚಿನ ಅವಕಾಶವನ್ನೂ ಕೊಡುತ್ತದೆ ಮತ್ತು ಇಂಧನ ದಕ್ಷ ತಂತ್ರಜ್ಞಾನದಲ್ಲಿ ಹೂಡಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಇಂಥಾ ಸನ್ನಿವೇಶದಲ್ಲಿ ನಾವು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಬಗೆಹರಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕಿದರೂ ಮತ್ತೊಂದು ಕಡೆ ಅದಕ್ಕಾಗಿ ಆಳದಲ್ಲಿ ಬೇರುಬಿಟ್ಟಿರುವ ದೇಶಗಳ ನಡುವಿನ ಅಸಮಾನತೆಗಳು ಇನ್ನೂ ಹೆಚ್ಚಾಗುವ ಬೆಲೆಯನ್ನು ತೆರುತ್ತಿರುತ್ತೇವೆ. ಕೆಟೊವಿಸ್‌ನಲ್ಲಿ ಆಗಿರುವ ಒಪ್ಪಂದ ಈ ಸ್ವರೂಪದ್ದು. ಅದು ಹಸಿರುಮನೆ ಅನಿಲಗಳ ಉತ್ಪಾದನೆಗೆ ಹೊಸ ಮಿತಿಯನ್ನು ವಿಧಿಸಿದೆ. ಹೀಗಾಗಿ ರಾಷ್ಟ್ರಗಳ ನಡುವಿನ ಅಸಮಾನತೆಗಳು ಪ್ರದರ್ಶನಗೊಂಡು ತಮ್ಮ ಪ್ರಭಾವ ಬೀರಲು ಇಂಥಾ ಹವಾಮಾನ ಬದಲಾವಣೆ ಒಪ್ಪಂದಗಳು ಮತ್ತೊಂದು ಹೊಸ ವೇದಿಕೆಯನ್ನು ಒದಗಿಸಿದೆ.
ಕೆಟೊವಿಸ್ ಒಪ್ಪಂದವು ಈ ಸರಿಸಮತೆಯ ಸಮಸ್ಯೆಯನ್ನು ಮೂರು ರೀತಿಯಲ್ಲಿ ನಿಭಾಯಿಸುತ್ತದೆ. ಮೊದಲನೆಯದಾಗಿ ಅದು ಹಸಿರುಮನೆ ಅನಿಲದ ಮಿತಿಯ ಪ್ರಮಾಣವನ್ನು ಜಾರಿಗೆ ತರಲು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಸುದೀರ್ಘ ಕಾಲಾವಧಿಯನ್ನು ಒದಗಿಸುತ್ತದೆ. ಎಷ್ಟು ಕಾಲಾವಧಿಯೆಂದರೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವಿನ ವ್ಯತ್ಯಾಸವನ್ನು ಸೂಚಿಸುವ ಗೆರೆ ಯಾವುದೆಂಬುದರ ಬಗ್ಗೆಯೇ ಘರ್ಷಣೆಯೂ ನಡೆದಿದೆ. ಕೆಟೊವಿಸ್ ಸಮ್ಮೇಳನದಲ್ಲಿ ಟರ್ಕಿಯು ತನ್ನನ್ನೂ ಸಹ ಅಭಿವೃದ್ಧಿ ಹೊಂದುತ್ತಿರುವ ದೇಶವೆಂದೇ ಪರಿಗಣಿಸಬೇಕೆಂದು ಆಗ್ರಹಿಸಿದೆ. ಎರಡನೆಯದಾಗಿ ಅದು ಹಸಿರುಮನೆ ಅನಿಲದ ಮಿತಿಯ ವ್ಯಾಪಾರ ವಿನಿಮಯಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹಸಿರುಮನೆ ಅನಿಲದ ವ್ಯಾಪಾರಕ್ಕೆ ಅವಕಾಶವನ್ನು ಒದಗಿಸಿಕೊಟ್ಟಿದೆ. ಮೂರನೆಯದಾಗಿ, ಅದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಹವಾಮಾನ ಹಣಕಾಸು ಸಹಕಾರವನ್ನು ಒದಗಿಸಲು ಕೆಟೊವಿಸ್ ಸಮ್ಮೇಳನ 100 ಬಿಲಿಯನ್ ಡಾಲರ್ (ಸುಮಾರು 6 ಲಕ್ಷ ಕೋಟಿ ರೂ.) ಎತ್ತಿಡಬೇಕೆಂದು ಕರಾರು ಮಾಡಿದೆ.
ದುರದೃಷ್ಟವಶಾತ್, ಇವೆಲ್ಲವೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕಣ್ಣೊರೆಸುವ ತಂತ್ರವಷ್ಟೇ ಆಗಿದೆ. ಕಳೆದ ವರ್ಷದ ಅಟ್ಲಾಂಟಿಕ್ ಚಂಡಮಾರುತದ ಅವಧಿಯಲ್ಲೇ 100 ಬಿಲಿಯನ್ ಡಾಲರುಗಳಿಗಿಂತ ಹೆಚ್ಚಿನ ಹಾನಿ ಮತ್ತು ನಷ್ಟವು ಸಂಭವಿಸಿತು. ಕಾರ್ಬನ್ ವ್ಯಾಪಾರದ ವ್ಯವಸ್ಥೆಯೇ ಇನ್ನೂ ರೂಪುಗೊಳ್ಳದಿರುವುದರಿಂದ ಹಣಕಾಸು ಸಹಕಾರವು ಶ್ರೀಮಂತ ದೇಶಗಳಿಗೆ ಹರಿದಿದೆಯೇ ವಿನಃ ಬಡದೇಶಗಳಿಗಲ್ಲ. ಶ್ರೀಮಂತ ದೇಶಗಳು ಮಿತಿಯಲ್ಲದಷ್ಟು ಹಸಿರುಮನೆ ಅನಿಲವನ್ನು ವಾತಾವರಣದಲ್ಲಿ ತುಂಬಿದ್ದರಿಂದಲೇ ಶ್ರೀಮಂತವಾದವು. ಆದರೆ ಅದೇ ಅವಕಾಶವನ್ನು ಅವು ಈಗ ಅಭಿವೃದ್ಧಿ ಹೊಂದದ ದೇಶಗಳಿಗೆ ನಿರಾಕರಿಸುತ್ತಿವೆ. ಆದ್ದರಿಂದ ಐತಿಹಾಸಿಕವಾಗಿ ಏರ್ಪಟ್ಟಿರುವ ಅಸಮಾನತೆಗಳು ಮುಂದುವರಿಯುವಂತಾಗಿದೆ. ಜಾಗತಿಕವಾಗಿ ಇಂಧನ ಸಾಮರ್ಥ್ಯ ಮತ್ತು ದಕ್ಷತೆಗಳು ಹೆಚ್ಚಾಗಿರುವುದು ಮತ್ತೊಂದು ಕತೆಯನ್ನೇ ಬಿಚ್ಚಿಡುತ್ತವೆ. ಮಾಲಿನ್ಯ ಉಂಟುಮಾಡುವವರೇ ಅದರ ಬೆಲೆಯನ್ನೂ ತೆರಬೇಕು ಎಂಬ ತತ್ವವನ್ನೂ ಮತ್ತು ಹಲವು ಬಗೆಯ ಕಾರ್ಬನ್ ತೆರಿಗೆಯನ್ನು ಬಳಸುವ ಮೂಲಕ ಹಲವಾರು ರಾಷ್ಟ್ರಗಳು ತಮ್ಮ ಹಸಿರುಮನೆ ಅನಿಲ ಹೊರಸೂಸುವಿಕೆಯ ಪ್ರಮಾಣದ ಮೇಲೆ ಮಿತಿಯನ್ನು ಹೇರುವ ಇಚ್ಛೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿವೆ. ಆದರೆ ಸಮಸ್ಯೆ ಇರುವುದು ಹಸಿರುಮನೆ ಅನಿಲದ ಪರಿಣಾಮಗಳು ಅಂತರ್‌ರಾಷ್ಟ್ರೀಯ ಗಡಿಗಳನ್ನು ದಾಟಿ ಹರಡಿಕೊಳ್ಳುವ ವಿದ್ಯಮಾನದಲ್ಲಿ. ರಾಷ್ಟ್ರೀಯ ತೆರಿಗೆಯ ಮೂಲಕ ಬರುವ ಆದಾಯಗಳನ್ನು ಆಯಾ ರಾಷ್ಟ್ರಗಳ ಗಡಿಗಳೊಳಗೇ ಕ್ರೋಡೀಕರಿಸಬಹುದೇ ವಿನಃ ಅದು ಗಡಿಯಾಚೆಗೆ ವಿಸ್ತರಿಸುವುದಿಲ್ಲ. ಈ ಬಗೆಯ ಹವಾಮಾನ ಬದಲಾವಣೆಯು ಗಡಿಗಳನ್ನು ದಾಟಿಯೂ ತನ್ನ ಪರಿಣಾಮಗಳನ್ನು ಬೀರುವುದರಿಂದ ಸಮುದ್ರದ ತಾಪಮಾನ ಏರಿಕೆ, ಇನ್ನೂ ಉಗ್ರವಾದ ಚಂಡಮಾರುತಗಳ ಸೃಷ್ಟಿ ಮತ್ತು ಸಮುದ್ರದ ಮಟ್ಟದಲ್ಲಿ ಹೆಚ್ಚಳಗಳು ಸಂಭವಿಸುವ ಮೂಲಕ ಸಮುದ್ರಮಟ್ಟದಲ್ಲಿ ಅಥವಾ ಅದಕ್ಕಿಂತ ಕೆಳಗಿನ ಮಟ್ಟದ ಪ್ರದೇಶಗಳಲ್ಲಿ ಮತ್ತು ದ್ವೀಪಗಳಲ್ಲಿ ವಾಸಿಸುವವರು ತೀವ್ರವಾದ ಅನಾಹುತಗಳಿಗೆ ಬಲಿಯಾಗುತ್ತಾರೆ. ಈ ಜನರು ಈಗಾಗಲೇ ಹವಾಮಾನ ಬದಲಾವಣೆಯ ಪ್ರಭಾವವನ್ನು ಅನುಭವಿಸುತ್ತಿದ್ದು ಕೆಟೊವಿಸ್ ಒಪ್ಪಂದ ಅದರ ಬಗ್ಗೆ ನಿರ್ದಿಷ್ಟವಾದ ಗಮನವನ್ನೇ ನೀಡಿಲ್ಲ.
ಸಮುದ್ರದಂಡೆಯಲ್ಲಿ ವಾಸಿಸುವ ಜನತೆ ತಮ್ಮ ಗಡಿಯಾಚೆಗೆ ಸಂಭವಿಸುವ ಹವಾಮಾನ ಸಂಬಂಧೀ ವಿದ್ಯಮಾನಗಳಿಗೆ ಬಲಿಯಾಗುವುದಕ್ಕೆ ಪರಿಹಾರವನ್ನು ಒದಗಿಸಲು ಎಲ್ಲಾ ರಾಷ್ಟ್ರೀಯ ಹಸಿರುಮನೆ ಅನಿಲ ತೆರಿಗೆಯ ಮೇಲೆ ಶೇ.20ರಷ್ಟು ಹೆಚ್ಚುವರಿ ಅಂತರ್‌ರಾಷ್ಟ್ರೀಯ ತೆರಿಗೆಯನ್ನು ವಿಧಿಸುವುದು ಪ್ರಾಯಶಃ ಒಂದು ಸೂಕ್ತ ಕ್ರಮವಾಗಬಹುದು.
ಅರವಿಂದ ಪ್ರಸಾದ್ ಅವರು ಡೊಮೊನಿಕ್ ದೇಶದ ಪ್ರಧಾನಿಯ ಸಲಹೆಗಾರರಾಗಿದ್ದು ಮುಂಬೈ ಮತ್ತು ಲಂಡನ್ ಮೂಲದ ಎರಾ ಕ್ಯಾಪಿಟಲ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.
ಕೃಪೆ: Economic and Political Weekly