ಮಲೆನಾಡಿನಲ್ಲಿ ತಲ್ಲಣ ಸೃಷ್ಟಿಸಿದ ಮಂಗನ ಕಾಯಿಲೆ
ಶಿವಮೊಗ್ಗ, ಜ. 5: ಕಳೆದ ಸರಿಸುಮಾರು ಆರು ದಶಕಗಳಿಂದ ಮಲೆನಾಡಿಗರನ್ನು ಬೆಂಬಿಡದೆ ಕಾಡುತ್ತಿರುವ 'ಕ್ಯಾಸನೂರು ಅರಣ್ಯ ಕಾಯಿಲೆ' (ಕೆ.ಎಫ್.ಡಿ.) ಎಂದೇ ಕರೆಯಲಾಗುವ ಮಂಗನ ಕಾಯಿಲೆಯು, ಪ್ರಸ್ತುತ ಸಾಗರ ತಾಲೂಕಿನ ಅರಳಗೋಡು ಗ್ರಾಮ ಪಂ. ನಲ್ಲಿ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ಗ್ರಾಮಸ್ಥರನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.
ಸರ್ವೇ ಸಾಮಾನ್ಯವಾಗಿ ಬೇಸಿಗೆಯ ಮಾರ್ಚ್, ಮೇ ತಿಂಗಳಲ್ಲಿ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ, ಕಾಯಿಲೆ ಕಣ್ಮರೆಯಾಗುತ್ತದೆ. ಆದರೆ ಪ್ರಸ್ತುತ ಸಾಗರ ತಾಲೂಕಿನ ಅರಳಗೋಡು ಗ್ರಾ.ಪಂ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೇಸಿಗೆಗೂ ಮುನ್ನವೇ ಕೆಎಫ್‍ಡಿ ಕಾಣಿಸಿಕೊಂಡು, ಜನರ ಜೀವ ಹಿಂಡಲಾರಂಭಿಸಿದೆ.
ಈಗಾಗಲೇ ಮಂಗನ ಕಾಯಿಲೆಯಿಂದ ಮೂವರು ಮೃತಪಟ್ಟಿರುವುದು ದೃಢಪಟ್ಟಿದೆ. ಸುಮಾರು 18 ಜನರಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ಇವರಿಗೆ ಸಾಗರ, ಶಿವಮೊಗ್ಗದ ಆಸ್ಪತ್ರೆಗಳಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೂ ದಾಖಲಿಸಲಾಗಿದೆ.
ಇನ್ನೂ ಹಲವು ಜನರು ಶಂಕಿತ ಜ್ವರ ಬಾಧೆಗೆ ತುತ್ತಾಗಿದ್ದಾರೆ. ಇವರ ರಕ್ತದ ಮಾದರಿ ಸಂಗ್ರಹಿಸಿ, ಹೆಚ್ಚಿನ ತಪಾಸಣೆಗಾಗಿ ಪುಣೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
ಈ ನಡುವೆ ರಾಜ್ಯ ಸರ್ಕಾರ ಕೂಡ ಕೆ.ಎಫ್.ಡಿ. ಕುರಿತಂತೆ, ಜಿಲ್ಲಾಡಳಿತದಿಂದ ಸಮಗ್ರ ವರದಿ ತರಿಸಿಕೊಂಡಿದೆ. ರೋಗ ನಿಯಂತ್ರಣ ಹಾಗೂ ಬಾಧಿತರಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಜೊತೆಗೆ ತಜ್ಞ ವೈದ್ಯರ ತಂಡವನ್ನು ಬಾಧಿತ ಗ್ರಾಮಗಳಿಗೆ ಕಳುಹಿಸಿ ಕೊಡುವ ಸಾಧ್ಯತೆಯೂದ ಇದೆ ಎಂದು ಮೂಲಗಳು ತಿಳಿಸಿವೆ.
ಏನಿದು ಕೆಎಫ್‍ಡಿ?: ಈ ಕಾಯಿಲೆಯು ಸತ್ತ ಮಂಗಗಳಿಂದ ಹರಡುತ್ತದೆ. ಸತ್ತ ಮಂಗಗಳಲ್ಲಿನ ವೈರಸ್ ಹೊತ್ತ ಉಣ್ಣೆಗಳು, ಮನುಷ್ಯರಿಗೆ ಕಚ್ಚಿದರೆ ಕಾಯಿಲೆ ಬರುತ್ತದೆ. ಮೊಟ್ಟ ಮೊದಲ ಬಾರಿಗೆ ಈ ಕಾಯಿಲೆಯು ಸಾಗರ, ಸೊರಬ ತಾಲೂಕುಗಳ ಗಡಿ ಗ್ರಾಮವಾದ ಕ್ಯಾಸನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ 1956 ರಲ್ಲಿ ಕಾಣಿಸಿಕೊಂಡಿತ್ತು. ಜನರು ವಿಷಮಶೀತ ಜ್ವರದ ಬಾಧೆಯಿಂದ ಬಳಲುತ್ತಿದ್ದರು. ಇದೇ ವೇಳೆ ಆ ಪ್ರದೇಶದಲ್ಲಿ ಸರಣಿಯಾಗಿ ಮಂಗಗಳು ಸಾವನ್ನಪ್ಪಿದ್ದು ಕಂಡುಬಂದಿತ್ತು. ರಾಜ್ಯ ಆರೋಗ್ಯ ಇಲಾಖೆಯು ಮಹಾರಾಷ್ಟ್ರದ ಪುಣೆಯ ನ್ಯಾಷನಲ್ ಇನ್ಸ್‍ಟ್ಯೂಟ್ ಆಫ್ ವೈರಾಲಜಿ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ವೈರಸ್‍ನಿಂದ ಈ ಕಾಯಿಲೆ ಹರಡುವುದು ಕಂಡುಬಂದಿತ್ತು. ಒಂದು ವರ್ಷದ ನಂತರ ಮಂಗನ ಕಾಯಿಲೆ ಎಂಬುವುದನ್ನು ಪತ್ತೆ ಹಚ್ಚಲಾಗಿತ್ತು.
ಕ್ಯಾಸನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಮೊದಲು ಈ ಕಾಯಿಲೆ ಕಾಣಿಸಿಕೊಂಡಿದ್ದರಿಂದ, ಇದಕ್ಕೆ ಕ್ಯಾಸನೂರು ಅರಣ್ಯ ಕಾಯಿಲೆ ಎಂದೇ ಕರೆಯಲಾಗುತ್ತದೆ. ಕಾಲಕ್ರಮೇಣ ಈ ಕಾಯಿಲೆಯು ಪಶ್ಚಿಮಘಟ್ಟ ಅರಣ್ಯದಂಚಿನ ಪ್ರದೇಶಗಳಲ್ಲಿ ಹರಡಲಾರಂಭಿಸಿತು. ಆದರೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಅತೀ ಹೆಚ್ಚು ಬಾಧಿತ ಪ್ರದೇಶವಾಗಿದೆ. ಕಳೆದ 20 ವರ್ಷಗಳಿಂದ ತಾಲೂಕಿನ ಹಲವೆಡೆ ಕೆಎಫ್‍ಡಿ ಕಾಣಿಸಿಕೊಳ್ಳುತ್ತಿದೆ. ಪ್ರಸ್ತುತ ಸಾಗರ ತಾಲೂಕಿನ ಅರಳಗೋಡು ಸುತ್ತಮುತ್ತ ಕಂಡುಬಂದಿದೆ.
ಸೂಚನೆ: ಕಾಯಿಲೆಗೆ ನಿರ್ದಿಷ್ಟ ಔಷಧ ಕಂಡು ಹಿಡಿದಿಲ್ಲ. ಕಾಯಿಲೆಗೆ ಕಾರಣವಾಗುವ ವೈರಸ್ ಝೈಕಾ ಮತ್ತು ಡೆಂಗ್ ಪ್ರಭೇದಕ್ಕೆ ಸೇರಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಯೋಗಾಲಯದಲ್ಲಿ ಕೆಎಫ್‍ಡಿ ನಿರೋಧಕ ಲಸಿಕೆ ಅಭಿವೃದ್ದಿಪಡಿಸಲಾಗಿದೆ. ರೋಗ ನಿಯಂತ್ರಣಕ್ಕೆ ನಾಲ್ಕು ವಾರಗಳ ಅಂತರದಲ್ಲಿ ಎರಡು ರೋಗ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಿಕೊಳ್ಳಬೇಕು. ನಂತರ 6 ರಿಂದ 9 ತಿಂಗಳ ಅಂತರದಲ್ಲಿ ಮತ್ತೊಂದು ಚುಚ್ಚುಮದ್ದು ಹಾಕಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಮೂಲಗಳು ಮಾಹಿತಿ ನೀಡುತ್ತವೆ.
'ರೋಗಿಗಳ ರಕ್ತದ ಮಾದರಿ ತಪಾಸಣೆ ನಡೆಸಲಾಗುತ್ತದೆ. ಕಾಡಿಗೆ ನಿತ್ಯ ಹೋಗುವ ಗ್ರಾಮಸ್ಥರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗುತ್ತದೆ. ಎಲ್ಲಾದರೂ ಸತ್ತ ಮಂಗಗಳು ಕಂಡುಬಂದರೆ ತಕ್ಷಣವೇ ಮಾಹಿತಿ ನೀಡುವಂತೆಯೂ ಗ್ರಾಮಸ್ಥರಿಗೆ ಮನವಿ ಮಾಡಲಾಗಿದೆ. ವ್ಯಾಕ್ಸಿನೇಷನ್ ಹಾಗೂ ಡಿಎಂಪಿ ತೈಲ ವಿತರಣೆ ಮಾಡಲಾಗುತ್ತಿದೆ' ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸುತ್ತವೆ.
ಸತ್ತ ಮಂಗಗಳ ಮಾಹಿತಿ ನೀಡಿದವರಿಗೆ 300 ರೂ. ಬಹುಮಾನ
ಸತ್ತು ಬಿದ್ದ ಮಂಗಗಳ ಮೇಲಿನ ಉಣ್ಣೆಗಳು ಕಾಯಿಲೆಗೆ ಕಾರಣವಾಗುವ ವೈರಸ್ ಹೊಂದಿರುತ್ತವೆ. ಈ ಉಣ್ಣೆಗಳು ಕಚ್ಚಿದರೆ ಮನುಷ್ಯರಿಗೂ ರೋಗ ಬರುತ್ತದೆ. ರೋಗ ಲಕ್ಷಣ ಕಾಣಿಸಿಕೊಂಡವರು ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕ ಪರಿಣಾಮ ಉಂಟು ಮಾಡುತ್ತದೆ. ಎರಡನೇ ಹಂತದಲ್ಲಿ ಮೆದುಳು ಜ್ವರ ಹಾಗೂ ರಕ್ತಸ್ರಾವ ಸಂಭವಿಸಿ, ಸಾವು ಸಂಭವಿಸುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳುತ್ತವೆ.
ಮಂಗನ ಕಾಯಿಲೆ ಬಾಧಿತ ಸಾಗರ ತಾಲೂಕಿನ ಅರಳಗೋಡು ಗ್ರಾ.ಪಂ. ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಗಳು ಸತ್ತು ಬಿದ್ದಿರುವ ಕುರಿತಂತೆ ಮಾಹಿತಿ ನೀಡುವಂತೆ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆ ಹಾಗೂ ಸ್ಥಳೀಯಾಡಳಿತ ಮನವಿ ಮಾಡಿಕೊಂಡಿದೆ. ಈ ನಡುವೆ ಸತ್ತ ಮಂಗಗಳ ಬಗ್ಗೆ ಸ್ಥಳೀಯ ವೈದ್ಯರಿಗೆ ಮಾಹಿತಿ ನೀಡುವ ಗ್ರಾಮಸ್ಥರಿಗೆ 300 ರೂ.ಗಳನ್ನು ಬಹುಮಾನವಾಗಿ ನೀಡಲು ಜಿಲ್ಲಾ ಪಂ. ಆಡಳಿತ ನಿರ್ಧರಿಸಿದೆ.