ದತ್ತಾಂಶಗಳಿಗೆ ರಕ್ಷಣೆ ನೀಡದೆ ಸಂವಹನಗಳ ಮೇಲೆ ಕಣ್ಗಾವಲೇಕೆ?

Update: 2019-01-05 18:29 GMT

ಪ್ರಸ್ತುತ ಯುಗಮಾನದಲ್ಲಿ ಜನರ ಜೀವನವು ಡಿಜಿಟಲೀಕರಣಗೊಂಡಿದ್ದು ಒಬ್ಬ ವ್ಯಕ್ತಿಯ ಫೋನ್ ಆಥವಾ ಕಂಪ್ಯೂಟರ್‌ಗಳು ಆ ವ್ಯಕ್ತಿಯ ವಿಸ್ತರಣೆಯೇ ಆಗಿಬಿಟ್ಟಿದೆ. ಈ ದೇಶವನ್ನು ‘ಡಿಜಿಟಲ್ ಭಾರತ’ವಾಗಿಸುವ ಕಡೆ ಸರಕಾರವೇ ಎಲ್ಲಾ ಬಗೆಯ ಪ್ರೋತ್ಸಾಹಗಳನ್ನು ನೀಡುತ್ತಿದೆ. ಹೀಗಿರುವಾಗ ದೇಶದ ಭದ್ರತೆಯ ಹೆಸರಿನಲ್ಲಿ ಸರಕಾರದ ಕ್ರಮಗಳಿಗೆ ರಕ್ಷಣೆ ನೀಡುವ ಕಾನೂನುಗಳಿಗಿಂತ ಈ ದೇಶದ ನಾಗರಿಕರ ಮತ್ತು ವ್ಯಕ್ತಿಗಳ ಆಸಕ್ತಿಯನ್ನು ರಕ್ಷಿಸುವ ಪ್ರಬಲವಾದ ದತ್ತಾಂಶ ರಕ್ಷಣಾ ಕಾಯ್ದೆಯ ಅಗತ್ಯವಿದೆ.

ಇತ್ತೀಚೆಗೆ ಕೇಂದ್ರ ಗೃಹ ಇಲಾಖೆಯು ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಮತ್ತು ಅದರ 2009ರ ನಿಯಮಾವಳಿಗಳ ಅಡಿಯಲ್ಲಿ ಯಾವುದೇ ಕಂಪ್ಯೂಟರಿನಲ್ಲಿ ಶೇಖರಣೆಗೊಂಡ, ಪಡೆದುಕೊಂಡ ಅಥವಾ ಕಳಿಸಿರುವ ಯಾವುದೇ ಮಾಹಿತಿಗಳನ್ನು ತಡೆದು ನೋಡುವ, ನಿಗಾ ಇಡುವ ಮತ್ತು ರಹಸ್ಯಲಿಪಿಯನ್ನು ಭೇದಿಸಿ ಓದುವ ಅಧಿಕಾರವನ್ನು ಸರಕಾರದ 10 ಏಜೆನ್ಸಿಗಳಿಗೆ ನೀಡುವ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆ ನಂತರದಲ್ಲಿ ಸರಕಾರವು ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಂಗಳಂತಹ ಸೇವೆಗಳನ್ನು ನೀಡುವ ಸಂವಹನ ಮಧ್ಯವರ್ತಿಗಳಿಗೆ ಮಾರ್ಗದರ್ಶಿ ನಿಯಮಗಳನ್ನು ರೂಪಿಸಲಿದೆಯೆಂಬ ಸುದ್ದಿಯೂ ಹೊರಬಿದ್ದಿದೆ. ವ್ಯಕ್ತಿಗಳಿಬ್ಬರ ನಡುವಿನ ಸಂವಹನವನ್ನು ಗೂಢಲಿಪಿಗೊಳಿಸುವ ಮೂಲಕ ಅದು ಅವರಿಬ್ಬರನ್ನು ಹೊರತುಪಡಿಸಿ ಇತರರಿಗೆ ದಕ್ಕದಂತೆ ಮಾಡುವ (ಎಂಡ್ ಟು ಎಂಡ್ ಎನ್ಕ್ರಿಪ್ಷನ್) ಸೌಲಭ್ಯವನ್ನು ಮೊಟಕುಗೊಳಿಸಿ ಆ ಸಂವಹನಗಳ ಸಾರದ ಮೂಲದ ಪತ್ತೆಯನ್ನು ಸರಕಾರಕ್ಕೆ ನೀಡುವ ಮತ್ತು ಹೆಚ್ಚುಕಾಲ ದತ್ತಾಂಶಗಳನ್ನು ಸಂಗ್ರಹಿಸಿಡುವಂತೆ ನಿರ್ದೇಶಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ಸಾರವುಳ್ಳ ಮಾಹಿತಿಗಳನ್ನು ನಿಯಂತ್ರಿಸುವ ಪ್ರಸ್ತಾಪಗಳನ್ನು ಸರಕಾರ ಮುಂದಿರಿಸಿದೆ. ಸರಕಾರದ ಈ ಅಧಿಸೂಚನೆಯಿಂದ ದೇಶದಲ್ಲಿ ಆತಂಕ ಮತ್ತು ಕೋಲಾಹಲಗಳೇ ಉಂಟಾಗಿದೆ. ಅದರ ಬಗ್ಗೆ ಸರಕಾರವು ಯುಪಿಎ ಸರಕಾರದ ಕಾಲದಲ್ಲಿ ಜಾರಿಯಾದ ಕಾನೂನನ್ನು ಜಾರಿಗೆ ತರುತ್ತಿದ್ದೇವೆಯಷ್ಟೆ ಎಂದು ತಣ್ಣಗೆ ಪ್ರತಿಕ್ರಿಯಿಸಿದೆ.
ಆದರೆ 2017ರ ಕೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ನೀಡಿರುವ ಮಹತ್ವದ ಮಾರ್ಗದರ್ಶಿ ಆದೇಶದ ಹಿನ್ನೆಲೆಯಲ್ಲಿ ಕೇವಲ ಈ ಅಧಿಸೂಚನೆಯನ್ನು ಮಾತ್ರವಲ್ಲದೆ ಅದಕ್ಕೆ ಕಾರಣವಾದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಮತ್ತು ಭಾರತದ ಕಣ್ಗಾವಲು ಪ್ರಕ್ರಿಯೆಯ ಚೌಕಟ್ಟನ್ನೇ ಪುನರ್‌ವಿಮರ್ಶೆಗೊಳಪಡಿಸುವ ಅಗತ್ಯವಿದೆ. ಇದರರ್ಥ ಸರಕಾರವು ಈ ಹಿಂದೆ ನಾಗರಿಕರ ದತ್ತಾಂಶಗಳನ್ನು ತಡೆದು ಓದುತ್ತಿರಲಿಲ್ಲವೆಂದಾಗಲೀ ಅಥವಾ ಕಣ್ಗಾವಲು ನಡೆಸುತ್ತಿರಲಿಲ್ಲವೆಂದಾಗಲೀ ಅಲ್ಲ; 2014ರ ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ತಿಂಗಳು 9,000 ಫೋನುಗಳನ್ನು ಸರಕಾರವು ಕದ್ದಾಲಿಸುತ್ತಿತ್ತು. ಸರಕಾರದ ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಟೆಲಿಮಾಟಿಕ್ಸ್ (ಸಿ-ಡಾಟ್) ಕೇಂದ್ರವು 2013ರಲ್ಲೇ ಒಂದು ಸ್ವಯಂಚಾಲಿತ ಸಾಮೂಹಿಕ ಕಣ್ಗಾವಲು ಯೋಜನೆಯನ್ನು ಜಾರಿಗೊಳಿಸಲು ಪ್ರಾರಂಭಿಸಿತ್ತು. ಮತ್ತು ಈ ವರ್ಷದ ಮೊದಲಲ್ಲಿ ಬಿಡುಗಡೆಯಾದ ಅದರ ವಾರ್ಷಿಕ ವರದಿಯ ಪ್ರಕಾರ ಈ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೊಳಿಸಲಾಗಿದೆ.
ಪ್ರಸ್ತುತ ಯುಗಮಾನದಲ್ಲಿ ಜನರ ಜೀವನವು ಡಿಜಿಟಲೀಕರಣಗೊಂಡಿದ್ದು ಒಬ್ಬ ವ್ಯಕ್ತಿಯ ಫೋನ್ ಅಥವಾ ಕಂಪ್ಯೂಟರ್‌ಗಳು ಆ ವ್ಯಕ್ತಿಯ ವಿಸ್ತರಣೆಯೇ ಆಗಿಬಿಟ್ಟಿದೆ. ಈ ದೇಶವನ್ನು ‘ಡಿಜಿಟಲ್ ಭಾರತ’ವಾಗಿಸುವ ಕಡೆ ಸರಕಾರವೇ ಎಲ್ಲಾ ಬಗೆಯ ಪ್ರೋತ್ಸಾಹಗಳನ್ನು ನೀಡುತ್ತಿದೆ. ಹೀಗಿರುವಾಗ ದೇಶದ ಭದ್ರತೆಯ ಹೆಸರಿನಲ್ಲಿ ಸರಕಾರದ ಕ್ರಮಗಳಿಗೆ ರಕ್ಷಣೆ ನೀಡುವ ಕಾನೂನುಗಳಿಗಿಂತ ಈ ದೇಶದ ನಾಗರಿಕರ ಮತ್ತು ವ್ಯಕ್ತಿಗಳ ಆಸಕ್ತಿಯನ್ನು ರಕ್ಷಿಸುವ ಪ್ರಬಲವಾದ ದತ್ತಾಂಶ ರಕ್ಷಣಾ ಕಾಯ್ದೆಯ ಅಗತ್ಯವಿದೆ. ವಾಸ್ತವವಾಗಿ ಭಾರತದ ಕಣ್ಗಾವಲು ಕಾಯ್ದೆಯ ಚೌಕಟ್ಟಿನ ಮೂಲಗಳನ್ನು 1885ರ ಇಂಡಿಯಾ ಟೆಲಿಗ್ರಾಫ್ ಆಕ್ಟ್ ಮತ್ತು 1898ರ ಇಂಡಿಯನ್ ಪೋಸ್ಟ್ ಆಫೀಸ್ ಆ್ಯಕ್ಟ್ ನಲ್ಲೂ ಕಾಣಬಹುದು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ರ ಪ್ರಕಾರ ಸರಕಾರವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಪ್ರಭುತ್ವದ ಭದ್ರತೆ, ವಿದೇಶಿ ಪ್ರಭುತ್ವಗಳೊಡನೆ ಸ್ನೇಹ ಸಂಬಂಧಗಳನ್ನು ರಕ್ಷಿಸಿಕೊಳ್ಳಲು ಅಥವಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಥವಾ ಯಾವುದೇ ಸಂಜ್ಞೇಯ ಅಪರಾಧಗಳು ಘಟಿಸದಂತೆ ತಡೆಯಲು ಮಾಹಿತಿ ಸಂವಹನವನ್ನು ಪ್ರತಿಬಂಧಿಸುವ, ನಿಗಾ ಇಡುವ ಮತ್ತು ರಹಸ್ಯ ಲಿಪಿಯನ್ನು ಭೇದಿಸುವ ಅಧಿಕಾರವನ್ನು ಪಡೆದುಕೊಂಡಿದ್ದು ಇದು ವಸಾಹತುಶಾಹಿ ಕಾಲಘಟ್ಟದ ಕಾನೂನುಗಳ ಪಡಿಯಚ್ಚಿನಂತೆಯೇ ಇವೆ.
 ದತ್ತಾಂಶ ರಕ್ಷಣೆಯ ಬಗ್ಗೆ ಬಿ.ಎನ್. ಶ್ರೀ ಕೃಷ್ಣ ಸಮಿತಿಯು ಸೂಚಿಸಿರುವಂತೆ ಪುಟ್ಟಸ್ವಾಮಿ ಪ್ರಕರಣದಲ್ಲಿ ನಿರ್ದೇಶಿತವಾಗಿರುವ ಅಗತ್ಯತೆ, ಪ್ರಮಾಣ ಬದ್ಧತೆ ಮತ್ತು ಸೂಕ್ತ ಕಾನೂನು ಪ್ರಕ್ರಿಯೆಗಳ ಪರೀಕ್ಷೆಯಲ್ಲಿ ಉತ್ತೀರ್ಣವಾಗುವಷ್ಟು ಪಾರದರ್ಶಕತೆಯನ್ನು ಪ್ರದರ್ಶಿಸದೆ ಯಾವುದೇ ಕಣ್ಗಾವಲನ್ನು ಪ್ರಭುತ್ವವು ಇರಿಸುವಂತಿಲ್ಲ. ಅಗತ್ಯತೆ ಮತ್ತು ಬೇಹುಗಾರಿಕೆಯ ಪ್ರಮಾಣಗಳಿಗೆ ಸಂಬಂಧಪಟ್ಟಂತೆ ಖಾಸಗಿತನ ಮತ್ತು ಭದ್ರತೆಗಳ ನಡುವೆ ಯಾವುದು? ಎಷ್ಟು? ಎಂಬ ವಿವಾದ ತುಂಬಾ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಚರ್ಚೆ ಏಕಪಕ್ಷೀಯವಾಗಿಯೇ ಇದ್ದಿದೆ. ಏಕೆಂದರೆ ಒಂದು ದತ್ತಾಂಶ ರಕ್ಷಣೆ ಕಾಯ್ದೆಯೇ ಇಲ್ಲದಿರುವ ಸಂದರ್ಭದಲ್ಲಿ ವ್ಯಕ್ತಿಗಳ ದತ್ತಾಂಶಗಳ ಮತ್ತಿತರ ಖಾಸಗಿತನದ ಹಕ್ಕನ್ನು ರಕ್ಷಿಸುವ ಯಾವುದೇ ಮಾರ್ಗದರ್ಶಿ ಸೂತ್ರಗಳ ಜಾರಿಯೂ ಹಿನ್ನೆಲೆಗೆ ಸರಿದುಬಿಟ್ಟಿದೆ. ಇನ್ನು ಕಾನೂನು ಪ್ರಕ್ರಿಯೆಗಳನ್ನು ಪಾಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಶ್ರೀ ಕೃಷ್ಣ ಸಮಿತಿಯು ನೀಡಿರುವ ಕರಡು ಕಾಯ್ದೆಯಂಥ ಒಂದು ಕಾಯ್ದೆಯು ಜಾರಿಗೆ ಬರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಆದರೆ ಹಾಲಿ ಇಂತಹ ಕಣ್ಗಾವಲನ್ನು ನಡೆಸುವಾಗ ಎಂಥಾ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆಯೆಂಬ ಮಾಹಿತಿಯನ್ನು ಮಾತ್ರ ಸರಕಾರ ಬಿಟ್ಟುಕೊಡಲು ತಯಾರಿಲ್ಲ. ಮೇಲಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಹಲವಾರು ಅಂಶಗಳು ಅಮೂರ್ತ ಸ್ವರೂಪದಲ್ಲಿರುವುದರಿಂದ ಮತ್ತು ಅವುಗಳಿನ್ನೂ ನ್ಯಾಯಾಂಗ ಮೂಲಕವೂ ಖಚಿತ ಅರ್ಥ ಪಡೆದುಕೊಳ್ಳದಿರುವುದರಿಂದ ಒಟ್ಟಾರೆ ಪ್ರಕ್ರಿಯೆಗಳು ಇನ್ನಷ್ಟು ಅಪಾರದರ್ಶಕವಾಗಿಯೇ ಉಳಿದಿದೆ. ಹಾಲಿ ಸರಕಾರವಂತೂ ತನ್ನೆಲ್ಲಾ ಕ್ರಮಗಳನ್ನು ಯಾವುದೇ ಶಾಸನಾತ್ಮಕ ಅಥವಾ ನ್ಯಾಯಾಂಗ ಪರಿಶೀಲನೆಗೆ ಒಳಪಡದಂತೆ ಆಡಳಿತಾತ್ಮಕ ಆದೇಶಗಳ ಮೂಲಕವೇ ಜಾರಿಗೊಳಿಸುತ್ತಿದೆ.
  ಕಣ್ಗಾವಲನ್ನು ಜಾರಿಮಾಡುವಾಗ ಅಗತ್ಯತೆ, ಸರಿಪ್ರಮಾಣತೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಬೇಕೆಂಬ ಯಾವುದೇ ಶರತ್ತುಗಳನ್ನೂ ಪಾಲಿಸದ ಸರಕಾರವೊಂದು ಏಕಾಏಕಿ ಸರ್ವವ್ಯಾಪಿ ಕಣ್ಗಾವಲು ಕ್ರಮಗಳಿಗೆ ಮುಂದಾದಾಗ ಸಹಜವಾಗಿಯೇ ಜನರ ಅವಿಶ್ವಾಸವನ್ನು ಎದುರಿಸಬೇಕಾಗುತ್ತದೆ. ಗೃಹ ಇಲಾಖೆಯ ಅಧಿಸೂಚನೆಯ ವಿರುದ್ಧ ಹುಟ್ಟಿಕೊಂಡಿರುವ ಆಕ್ರೋಶವು ಇದನ್ನೇ ಸೂಚಿಸುತ್ತದೆ. ಈ ಹಿಂದೆಯೂ ಸರಕಾರವು ಆಧಾರ್ ಯೋಜನೆ ಮತ್ತು ನೋಟು ನಿಷೇಧದಂಥ ಹಲವಾರು ಪ್ರಶ್ನಾರ್ಹ ಕಾನೂನುಗಳನ್ನು ಮತ್ತು ಕ್ರಮಗಳನ್ನು ಅತ್ಯಂತ ಅಪಾರದರ್ಶಕವಾಗಿ ಮತ್ತು ರಾಷ್ಟ್ರದ ಭದ್ರತೆಯ ಹೆಸರಿನಲ್ಲೇ ಜಾರಿಗೆ ತಂದಿತ್ತು. ಅಂತಹ ಕ್ರಮಗಳು ಪಾರದರ್ಶಕವಾಗಿರಬೇಕೆಂದು ಜನರು ಎಷ್ಟೇ ಒತ್ತಾಯಿಸಿದರೂ ಹಾಲಿ ಸರಕಾರವು ಆಗಲೂ ಮತ್ತು ಈಗಲೂ ಸಹ ತನ್ನ ಜನರೊಡನೆ ಪಾರದರ್ಶಕವಾಗಿರಲು ಸಿದ್ಧವಿಲ್ಲ. ದೇಶದಲ್ಲಿ ಇಂಡಿಯನ್ ಟೆಲಿಗ್ರಾಫ್ ಆ್ಯಕ್ಟ್ ಜಾರಿಯಾದ ಕಾಲಕ್ಕೆ ಹೋಲಿಸಿದರೆ ಸಂವಹನ ಸಂಪರ್ಕ ತಂತ್ರಜ್ಞಾನದ ಸ್ವರೂಪಗಳು ಆಮೂಲಾಗ್ರವಾಗಿ ಬದಲಾಗಿವೆ. ಈ ಹಿಂದೆ ಎಷ್ಟು ಜನರೊಂದಿಗೆ ಎಷ್ಟು ಪ್ರಮಾಣದಲ್ಲಿ ಸಂವಹನ ಮಾಡುತ್ತಿದ್ದೆವೋ ಅದರ ಹಲವು ಪಟ್ಟು ಹೆಚ್ಚಿನ ಸಂವಹನವನ್ನು ಈಗ ಮಾಡುತ್ತಿದ್ದೇವೆ. ಅಂತರ್ಜಾಲದ ಅನ್ವೇಷಣೆಯಾದ ನಂತರದಲ್ಲಿ ಫೋನುಗಳು ಮತ್ತು ಕಂಪ್ಯೂಟರ್‌ಗಳು ಅತ್ಯಗತ್ಯ ಸಂದೇಶಗಳನ್ನು ರವಾನಿಸುವ ಅಥವಾ ಕೆಲಸವನ್ನು ಮಾಡುವ ಸಾಧನವಾಗಿ ಮಾತ್ರ ಉಳಿದಿಲ್ಲ. ಬದಲಿಗೆ ಅವು ನಮ್ಮ ಅಭಿವ್ಯಕ್ತಿಯ ಮತ್ತು ನಿತ್ಯಜೀವನದ ಅಂತರ್ಗತ ಭಾಗವಾಗಿಬಿಟ್ಟಿವೆ. ಹೀಗಾಗಿ ಯಾವುದೇ ವ್ಯಕ್ತಿಯ ಫೋನ್ ಅಥವಾ ಕಂಪ್ಯೂಟರ್‌ಗಳನ್ನು ಪ್ರತಿಬಂಧಿಸುವುದೆಂದರೆ ಅಥವಾ ಅದರ ಮೇಲೆ ನಿಗಾ ಇಡುವುದೆಂದರೆ ಆ ವ್ಯಕ್ತಿಗಳ ಜೀವನದಲ್ಲಿ ಸರಕಾರವು ಬಲಪ್ರಯೋಗದ ಮೂಲಕ ಮಧ್ಯಪ್ರವೇಶ ಮಾಡಿದಂತೆಯೇ ಆಗುತ್ತದೆ. ನಾವು ಈ ಸಾಧನಗಳ ಮೂಲಕವೇ ಮಾತಾಡುತ್ತೇವೆ, ಓದುತ್ತೇವೆ, ಕಾರ್ಯ ನಿರ್ವಹಿಸುತ್ತೇವೆ, ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತೇವೆ, ಪ್ರತಿರೋಧ ಮತ್ತು ಭಿನ್ನಮತಗಳನ್ನು ಸಹ ವ್ಯಕ್ತಪಡಿಸುತ್ತೇವೆ. ಅದರ ಜೊತೆಜೊತೆಗೆ ಕಾನೂನುಬಾಹಿರ ಚಟುವಟಿಕೆಗಳು ಮತ್ತು ದೇಶದ ಭದ್ರತೆಗೆ ಅಪಾಯ ಒಡ್ಡುವ ಚಟುವಟಿಕೆಗಳೂ ಸಹ ಡಿಜಿಟಲ್ ಆಗಿಬಿಟ್ಟಿವೆ. ಅದೇನೇ ಇದ್ದರೂ, ಈ ಸಾಧನಗಳ ಮೇಲೆ ಸರ್ವವ್ಯಾಪಿ ಮತ್ತು ಅನಿರ್ಬಂಧಿತ ಪ್ರತಿಬಂಧಗಳನ್ನು ಹೇರುವುದರಿಂದ ಅಥವಾ ಅವುಗಳ ಮೇಲೆ ಕಣ್ಗಾವಲಿಡುವುದರಿಂದ ಸರಕಾರವು ಎಲ್ಲೆಡೆ ಕಣ್ಣಿಡುವ ದೊಡ್ಡಣ್ಣನಂತೆ ವರ್ತಿಸುವಂತಾಗುತ್ತದೆ. ಹೀಗಾಗಿ ಭಾರತದ ಒಟ್ಟಾರೆ ಕಣ್ಗಾವಲು ಪ್ರಕ್ರಿಯೆಗಳ ಚೌಕಟ್ಟನ್ನೇ ಪುನರ್‌ವಿಮರ್ಶೆಗೊಳಪಡಿಸಬೇಕಿದೆ. ಪುಟ್ಟಸ್ವಾಮಿ ಪ್ರಕರಣದ ನ್ಯಾಯಾದೇಶದಲ್ಲಿ ನಿರ್ದೇಶಿತವಾಗಿರುವ ಖಾಸಗಿತನದ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಮತ್ತು ಪಾಲಿಸಬೇಕಿದೆ. ಹಾಗೂ ಅತ್ಯಂತ ತುರ್ತಾಗಿ ಒಂದು ದತ್ತಾಂಶ ರಕ್ಷಣಾ ಕಾಯ್ದೆಯನ್ನು ಜಾರಿ ಮಾಡುವುದು ಅತ್ಯಗತ್ಯವಾಗಿದೆ.
 ಕೃಪೆ: Economic and Political Weekly

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ