ರಿಸರ್ವ್ ಬ್ಯಾಂಕ್ ಮತ್ತು ಭಾಜಪ ಸರಕಾರದ ಮಧ್ಯೆ ವಿರಸ!
ಭಾಗ-1
ನಮ್ಮ ದೇಶದ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ತೀವ್ರತರವಾದಂತಹ ಮುಗ್ಗಟ್ಟಿನಲ್ಲಿವೆ. ಕಾರಣ ಬೆಟ್ಟದಂತೆ ಬೆಳೆಯುತ್ತಿರುವ ಮರು ಪಾವತಿಯಾಗದ ಸಾಲಗಳು. ಅವುಗಳನ್ನು ನಾನ್ ಪರ್ಫಾಮಿಂಗ್ ಅಸ್ಸೆಟ್ಸ್ (NPA) ಎಂದು ವೈಭವೀಕರಿಸಲಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಹೆಚ್ಚಾಗಿ ಸುದ್ದಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಹಲವು ಕಾರಣಗಳಿಗಾಗಿ. ರಿಸರ್ವ್ ಬ್ಯಾಂಕ್ ಒಂದು ಸ್ವಾಯತ್ತ ಸಂಸ್ಥೆ. ಪ್ರಪಂಚದ ಅನೇಕ ದೇಶಗಳಲ್ಲಿ ಇಂತಹ ಒಂದು ಪ್ರಮುಖ ವಿತ್ತ ಸಂಸ್ಥೆಯನ್ನು ಸೆಂಟ್ರಲ್ ಬ್ಯಾಂಕ್ ಎಂದು ಕರೆಯುತ್ತಾರೆ. ರಿಸರ್ವ್ ಬ್ಯಾಂಕ್ ಸಂಪೂರ್ಣ ಭಾರತ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟ ಸಂಸ್ಥೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆ್ಯಕ್ಟ್, 1934ರ ಅನುಸಾರ ಒಂದನೇ ಎಪ್ರಿಲ್ 1,935ರಲ್ಲಿ ಸ್ಥಾಪಿತವಾದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜನವರಿ 1.1949ರಲ್ಲಿ ರಾಷ್ಟ್ರೀಕೃತವಾಯಿತು. ಅದರ ಸ್ವಯಮಾಧಿಪತ್ಯದ ಅಥವಾ ಸ್ವಾತಂತ್ರದ ಬಗ್ಗೆ ಎರಡು ಅಭಿಪ್ರಾಯಗಳು ಇರಲು ಸಾಧ್ಯವಿಲ್ಲ. ಅನೇಕ ಗೊಂದಲಗಳ ಮಧ್ಯೆಯೂ ಕಳೆದ 83 ವರ್ಷಗಳಿಂದ ರಿಸರ್ವ್ ಬ್ಯಾಂಕ್ ತನ್ನ ಸ್ವಯಮಾಧಿಪತ್ಯವನ್ನು ಪ್ರತಿಪಾದಿಸಿಕೊಂಡು ಬಂದಿದೆ. ಆದರೆ ಕೇಂದ್ರದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಸರಕಾರ ಮತ್ತು ರಿಸರ್ವ್ ಬ್ಯಾಂಕ್ ಮಧ್ಯೆ ವಿರಸ ಹಾಗೂ ಘರ್ಷಣೆಗಳು ಹೆಚ್ಚುತ್ತಾ ಬಂದಿವೆ. ನೋಟು ರದ್ದತಿ ಅಥವಾ ಅಮಾನ್ಯೀಕರಣವನ್ನು ನವೆಂಬರ್ 8, 2016ರಲ್ಲಿ ಮೋದಿ ನೇತೃತ್ವದ ಸರಕಾರ ಪ್ರಕಟಿಸಿದಾಗ, ರಿಸರ್ವ್ ಬ್ಯಾಂಕ್ ಸಲಹೆಯನ್ನು ಅಥವಾ ಅನುಮೋದನೆಯನ್ನು ಕೇಳಿರಲಿಲ್ಲ. ಕರೆನ್ಸಿ ನೋಟುಗಳನ್ನು ಚಲಾವಣೆಗೆ ಬಿಡುವುದು, ನಿಯಂತ್ರಿಸುವುದು ರಿಸರ್ವ್ ಬ್ಯಾಂಕ್‌ನ ಅತಿ ಮುಖ್ಯವಾದ ಜವಾಬ್ದಾರಿಗಳಲ್ಲಿ ಒಂದು. ದೇಶದ ಒಟ್ಟಾರೆ ಹಣಕಾಸಿನ ನೀತಿಗಳ ವಿಚಾರವೂ ರಿಸರ್ವ್ ಬ್ಯಾಂಕ್‌ನ ಅಧಿಕಾರದ ವ್ಯಾಪ್ತಿಗೆ ಬರುವುದು. ಆದರೆ ಅಮಾನ್ಯೀಕರಣದ ವಿಚಾರದಲ್ಲಿ ಕೇಂದ್ರ ಸರಕಾರ ರಿಸರ್ವ್ ಬ್ಯಾಂಕನ್ನು ಭರವಸೆಗೆ ತಗೆದುಕೊಳ್ಳಲಿಲ್ಲ.
(GDP) ವಾಸ್ತವವಾಗಿ ಹೇಳುವುದಾದರೆ ರಿಸರ್ವ್ ಬ್ಯಾಂಕ್‌ನ್ನು ಉದಾಸೀನ ಮಾಡಿತು. ನೋಟು ರದ್ದತಿಯ ಬಗ್ಗೆ ರಿಸರ್ವ್ ಬ್ಯಾಂಕಿಗೂ ಮುನ್ಸೂಚನೆ ಇರಲಿಲ್ಲ. ಇದರ ಸಾರಾಂಶ, ಕೇಂದ್ರ ಸರಕಾರವೇ ರಿಸರ್ವ್ ಬ್ಯಾಂಕ್‌ನ ಅಧಿಕಾರವನ್ನು ಕುಗ್ಗಿಸಿದಂತಾಯಿತು. ಇದೊಂದು ಕಡೆ ಇರಲಿ. ನೋಟು ರದ್ದತಿಯಿಂದ ದೇಶಕ್ಕೆ, ದೇಶದ ಜನತೆಗೆ ಅಪಾರ ಹಾನಿ ಉಂಟಾಯಿತು. ಸುಮಾರು ಒಂದು ನೂರು ಜನ ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಕಪ್ಪು ಹಣ ಬಿಡಿಕಾಸೂ ಹೊರಬರಲಿಲ್ಲ. ದೇಶದಲ್ಲಿದ್ದ ಎಲ್ಲ ಕಪ್ಪು ಹಣವೂ ಬಿಳಿಯಾಯಿತು. ಭ್ರಷ್ಟಾಚಾರ ಇನ್ನೂ ಹೆಚ್ಚಿತು. ದೇಶದ ಒಟ್ಟು ಆಂತರಿಕ ಉತ್ಪನ್ನದ ಬೆಳವಣಿಗೆ ಸುಮಾರು ಶೇ.2ರಷ್ಟು ಖೋತಾ ಹೊಡೆಯಿತು. ಹೆಚ್ಚೂ ಕಡಿಮೆ ದೇಶದಲ್ಲಿ 90 ಲಕ್ಷ ಉದ್ಯೋಗಗಳು ನಾಶ ಹೊಂದಿದವು. ಪೇಪರ್ ಕರೆನ್ಸಿಯ ಬಳಕೆ ಕಡಿಮೆಯಾಗುವುದರ ಬದಲು ಗಣನೀಯವಾಗಿ ಹೆಚ್ಚಿತು. ಕೆಳಕಂಡ ಮಾಹಿತಿ ಇದನ್ನು ಸಾಬೀತು ಮಾಡುತ್ತದೆ.
♦ ಜನಗಳ ಮಧ್ಯೆ ಚಲಾವಣೆಯಲ್ಲಿದ್ದ ನಗದು ಹಣ
(ರೂ.ಲಕ್ಷ ಕೋಟಿಗಳಲ್ಲಿ)
♦ ಅಮಾನ್ಯೀಕರಣದ ಮುಂಚೆ= 17.0
♦ ಅಮಾನ್ಯೀಕರಣದ ನಂತರ= 18.8
ಅಂದರೆ ಅಮಾನ್ಯೀಕರಣದ ನಂತರ ಚಲಾವಣೆಗೆ ಬಂದ ನಗದು ಹಣ ಶೇ.10.2ರಷ್ಟು ಹೆಚ್ಚು.
2018ರಲ್ಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಗದು ಹಣ ರೂಪಾಯಿ 20 ಲಕ್ಷ ಕೋಟಿಗಿಂತಲೂ ಹೆಚ್ಚು. (ಆಧಾರ: ರಿಸರ್ವ್ ಬ್ಯಾಂಕ್ ಸ್ಟೇಟಿಸ್ಟಿಕಲ್ ಸಪ್ಲಿಮೆಂಟ್)
ಇತ್ತೀಚಿನ ಒಂದು ಅಧ್ಯಯನದ ಅನುಸಾರ ದೇಶದಲ್ಲಿ ಮೊಬೈಲ್ ಹಣಕಾಸು ವಹಿವಾಟು ಕೇವಲ ಶೇ.1ರಷ್ಟು ಮಾತ್ರ. ನೋಟು ರದ್ದತಿಗೆ ಕೇಂದ್ರ ಸರಕಾರ ಏನೇನು ಕಾರಣಗಳನ್ನು ಪ್ರಕಟಿಸಿತೋ ಅವೆಲ್ಲವೂ ಹುಸಿಯಾದವು. ರದ್ದು ಮಾಡಿದ ಬ್ಯಾಂಕ್ ನೋಟುಗಳ ಬದಲಿಗೆ ಹೊಸದಾಗಿ ಪ್ರಿಂಟ್ ಮಾಡಬೇಕಿದ್ದ ನೋಟುಗಳಿಂದಾಗಿ ರಿಸರ್ವ್ ಬ್ಯಾಂಕ್‌ಗೆ ಹೆಚ್ಚುವರಿ ಖರ್ಚು ಉಂಟಾಯಿತು. ಈ ಎಲ್ಲ ವಿಚಾರಗಳನ್ನು ರಿಸರ್ವ್ ಬ್ಯಾಂಕ್ ಆಧಾರಪೂರಕವಾಗಿ ಅಂಕಿ ಅಂಶಗಳ ಸಮೇತ ತನ್ನ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದೆ. ಮುಖಕ್ಕೆ ಮಸಿಯಾದರೂ ನರೇಂದ್ರ ಮೋದಿ ಸರಕಾರಕ್ಕೆ ಪಶ್ಚಾತ್ತಾಪವಿಲ್ಲ! ಬದಲಾಗಿ, ಕೇಂದ್ರ ಸರಕಾರ ರಿಸರ್ವ್‌ಬ್ಯಾಂಕ್‌ನ ಸ್ವತಂತ್ರ ಕಾರ್ಯಾಚರಣೆಗಳಲ್ಲಿ ಮೂಗು ತೂರಿಸಲು ಪ್ರಾರಂಭಿಸಿತು.
ರಿಸರ್ವ್ ಬ್ಯಾಂಕ್ ಕೇಂದ್ರ ಸರಕಾರದ ಬ್ಯಾಂಕ್; ಕೇಂದ್ರ ಸರಕಾರವೇ ಅದರ ಮಾಲಕ, ಆದ್ದರಿಂದ ರಿಸರ್ವ್ ಬ್ಯಾಂಕ್ ಕೇಂದ್ರ ಸರಕಾರದ ಆದೇಶಗಳನ್ನು ಪರಿಪಾಲಿಸಬೇಕೆಂದು ಸರಕಾರ ಆಗ್ರಹಪಡಿಸಲು ಶುರು ಮಾಡಿತು. ರಿಸರ್ವ್ ಬ್ಯಾಂಕ್‌ನ ಮೇಲೆ ಒತ್ತಡವನ್ನು ಹೇರಲು ಹಿಂಜರಿಯಲಿಲ್ಲ. ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ ಮಧ್ಯೆ ಘರ್ಷಣೆ ಆರಂಭವಾಯಿತು. ಈ ಹಿಂದೆ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದ ರಘುರಾಮ್ ರಾಜನ್‌ರವರು ತಮ್ಮ ಸೇವಾವಧಿಯಲ್ಲಿ ಸರಕಾರದ ಇಂತಹ ಆದೇಶಗಳಿಗೆ ಬಗ್ಗಲಿಲ್ಲ. ಆದ ಕಾರಣ ಅವರಿಗೆ ಇನ್ನೊಂದು ಅವಧಿಯನ್ನು ನೀಡಲಿಲ್ಲ. ಅವರ ಸ್ಥಾನಕ್ಕೆ ಊರ್ಜಿತ್ ಪಟೇಲ್ ಗವರ್ನರ್ ಆಗಿ ನೇಮಕವಾಗಿದ್ದರು. ಅದರ ಜೊತೆ ನಾಲ್ಕು ಜನ ಡೆಪ್ಯುಟಿ ಗವರ್ನರ್‌ಗಳು; ಅವರುಗಳು ಎನ್.ಎಸ್. ವಿಶ್ವನಾಥನ್, ವಿರಲ್ ಆಚಾರ್ಯ, ಬಿ.ಪಿ. ಕನುಂಗೋ ಮತ್ತು ಎಂ.ಕೆ. ಜೈನ್
♦ ರಿಸರ್ವ್ ಬ್ಯಾಂಕ್ ಮತ್ತು ಸರಕಾರದ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಲು ಇತರ ಕಾರಣಗಳು:
♦ ಮರುಪಾವತಿಯಾಗದ ಸಾಲ(NPA)ಗಳಿಂದ ತೀರಾ ಸಂಕಷ್ಟದಲ್ಲಿರುವ ಕೆಲವು ಬ್ಯಾಂಕ್‌ಗಳಿಗೆ ರಿಸರ್ವ್ ಬ್ಯಾಂಕ್ ಇನ್ನೂ ಹೆಚ್ಚು ಸಾಲಗಳನ್ನು ನೀಡುವುದಕ್ಕೆ ಹಾಕಿದ ಕಡಿವಾಣ.
♦ ಬ್ಯಾಂಕೇತರ ಹಣಕಾಸಿನ ಸಂಸ್ಥೆ (NBFC)ಗಳಲ್ಲಿ ಲಿಕ್ವಿಡಿಟಿ (Liquidity ) ಅಂದರೆ ಸುಲಭವಾಗಿ ಹಣ ಬಳಸಿಕೊಳ್ಳುವ ಅನುಕೂಲತೆ, ಅವುಗಳಿಗೆ ರಿಸರ್ವ್ ಬ್ಯಾಂಕ್ ಹೇರಿದ ನಿರ್ಬಂಧಗಳು.
♦ ರಿಸರ್ವ್ ಬ್ಯಾಂಕ್‌ನಲ್ಲಿರುವ ರಿಸರ್ವ್ (Reserve) ಹಣ, ಅಂದರೆ ಕಾಯ್ದಿರಿಸಿರುವ ಹಣವನ್ನು ಸರಕಾರದೊಂದಿಗೆ ಹಂಚಿಕೊಳ್ಳುವುದು.
ಮೇಲ್ಕಂಡ ಮೂರು ವಿಚಾರಗಳ ಬಗ್ಗೆ ಸ್ವಲ್ಪ ಮಟ್ಟಿನ ವಿವರಣೆ ಅಗತ್ಯವಿದೆ.
ನಮ್ಮ ದೇಶದ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ತೀವ್ರತರವಾದಂತಹ ಮುಗ್ಗಟ್ಟಿನಲ್ಲಿವೆ. ಕಾರಣ ಬೆಟ್ಟದಂತೆ ಬೆಳೆಯುತ್ತಿರುವ ಮರು ಪಾವತಿಯಾಗದ ಸಾಲಗಳು. ಅವುಗಳನ್ನು ನಾನ್ ಪರ್ಫಾಮಿಂಗ್ ಅಸ್ಸೆಟ್ಸ್ (NPAwrite off) ಎಂದು ವೈಭವೀಕರಿಸಲಾಗಿದೆ. ಇಂದಿಗೆ ಅದು ಹತ್ತು ಲಕ್ಷ ಕೋಟಿ ರೂ.ಯನ್ನು ದಾಟಿ, ವಾರ್ಷಿಕ ಶೇ.12ರಿಂದ 13ರ ವೇಗದಲ್ಲಿ ಬೆಳೆಯುತ್ತಿದೆ. ಸಾಲಗಳನ್ನು ಮರುಪಾವತಿ ಮಾಡದ ಕಾರ್ಪೊರೇಟ್ ಕ್ರಿಮಿನಲ್‌ಗಳ ಮೇಲೆ ಕೇಂದ್ರ ಸರಕಾರ ಯಾವುದೇ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. 2016-17ರಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 81,863 ಕೋಟಿ ರೂ. ಯಷ್ಟು ಮರುಪಾವತಿಯಾಗದ ಸಾಲಗಳನ್ನು ಮನ್ನಾ (ಅಂದರೆ )ಮಾಡಿವೆ.
ಬ್ಯಾಂಕ್‌ಯೇತರ ಹಣಕಾಸಿನ ಸಂಸ್ಥೆಗಳು ಶೆಲ್ ಕಂಪೆನಿಗಳೆಂದೇ ಕುಪ್ರಸಿದ್ಧವಾಗಿವೆ. ಮನಿ ಲಾಂಡರಿಂಗ್ ಅಂದರೆ ಕಪ್ಪುಹಣವನ್ನು ಬಿಳಿ ಮಾಡುವುದೇ ಅವುಗಳ ಪ್ರಧಾನ ಕೆಲಸ. ದೇಶದಲ್ಲಿ ಇಂದು ಸರಿಸುಮಾರು 11,575 ಬ್ಯಾಂಕ್‌ಯೇತರ ಹಣಕಾಸಿನ ಸಂಸ್ಥೆ (NBFC)ಗಳಿವೆ. ಅವುಗಳ ಪೈಕಿ ಶೇ.82ರಷ್ಟು ಹೈರಿಸ್ಕ್ (High Risk) ಕಂಪೆನಿಗಳೆಂದು ವರ್ಗೀಕೃತವಾಗಿವೆ. ಅಂದರೆ ಅವೆಲ್ಲವೂ ಮನಿ ಲಾಂಡರ್‌ಗಳೇ!
ಇವತ್ತಿಗೆ ರಿಸರ್ವ್ ಬ್ಯಾಂಕ್‌ನಲ್ಲಿರುವ ಒಟ್ಟು ಕ್ಯಾಪಿಟಲ್ ರಿಸರ್ವ್ 9.6 ಲಕ್ಷ ಕೋಟಿ ರೂ. ಕೇಂದ್ರ ಸರಕಾರದ ಬೊಕ್ಕಸ ಇಂದು ಬರಿದಾಗಿದೆ. ಅಮಾನ್ಯೀಕರಣ ಮತ್ತು ಜಿಎಸ್‌ಟಿ ಮೆಗಾ ಫ್ಲಾಪ್ ಶೋ ಆಯಿತು. ಸರದಾರ್ ವಲ್ಲಭಭಾಯ್ ಪಟೇಲ್ ಶಿಲೆಯ ನಿರ್ಮಾಣಕ್ಕೆ ಆದ ಖರ್ಚು 3,000 ಕೋಟಿ ರೂ. ನರೇಂದ್ರ ಮೋದಿಯ ವಿದೇಶಿ ಪ್ರವಾಸಗಳಿಗೆ ಮತ್ತು ಪ್ರವಾಸದ ಸಮಯದಲ್ಲಿ ನಡೆದ ಪ್ರಚಾರಗಳಿಗೆ6,500 ಕೋಟಿ ರೂ. ವೆಚ್ಚ, ಮನ್ ಕಿ ಬಾತ್‌ನ ಪ್ರತಿಯೊಂದು ಎಪಿಸೋಡ್‌ಗೆ ಆದ ವೆಚ್ಚ ರೂ.8.5 ಕೋಟಿ, ಹೀಗೆ ವಿಪರೀತ ದುಂದು ವೆಚ್ಚ. ವಿದೇಶಿ ಬಂಡವಾಳಗಾರರು ಶೀಘ್ರಗತಿಯಲ್ಲಿ ತಮ್ಮ ಬಂಡವಾಳವನ್ನು ವಾಪಸ್ ಪಡೆಯುತ್ತಿದ್ದಾರೆ. ಇವೆಲ್ಲವುಗಳ ಪರಿಣಾಮ ಬೊಕ್ಕಸ ದಿವಾಳಿ. ಇನ್ನು 2019ರ ಪಾರ್ಲಿಮೆಂಟ್ ಚುನಾವಣೆಗಳು ಸಮೀಪಿಸುತ್ತಿವೆ. ಚುನಾವಣಾ ಸೀಸನ್‌ನಲ್ಲಿ ಅನೇಕ ಸ್ಕೀಮ್‌ಗಳನ್ನು ವೋಟು ಪಡೆಯುವುದಕ್ಕೋಸ್ಕರ ಪ್ರಕಟಿಸಬೇಕು. ಆದರೆ ಎಲ್ಲದೆ ಹಣ? 2018-19ರ ಕೇಂದ್ರ ಬಜೆಟ್‌ನಲ್ಲಿ ನಿಗದಿ ಮಾಡಿದ ಖೋತಾ ಹಣದ ಮಿತಿ (Fiscal Defecit Target) ರೂ.6.24 ಲಕ್ಷ ಕೋಟಿ. ಖೋತಾ ಅಂದರೆ ಆದಾಯಕ್ಕಿಂತ ಸರಕಾರದ ಖರ್ಚು6.24 ಲಕ್ಷ ಕೋಟಿ ರೂ. ಹೆಚ್ಚು ಎಂದರ್ಥ. ಈಗ ಖೋತಾ 6.48 ಲಕ್ಷ ಕೋಟಿ ರೂ. ಯನ್ನು ಮೀರಿದೆ. ಈ ಮಾಹಿತಿಯನ್ನು ಕಂಪ್ಟ್ರೋಲರ್ ಜನರಲ್ ಆಫ್ ಅಕೌಂಟ್ಸ್(CAG) ಒದಗಿಸಿದ್ದಾರೆ. ಆದ್ದರಿಂದ ಪಾಪರ್ ಕೇಂದ್ರ ಸರಕಾರದ ವಕ್ರದೃಷ್ಟಿ ರಿಸರ್ವ್ ಬ್ಯಾಂಕ್‌ನ ರಿಸರ್ವ್ ಫಂಡ್ ಮೇಲೆ ಬಿದ್ದಿದೆ.
(ಮುಂದುವರಿಯುವುದು)