ಭ್ರಷ್ಟಾಚಾರದ ಕೂಪವಾದ ನರೇಗಾ
ಇತ್ತೀಚೆಗೆ ರಾಜ್ಯದ ಗ್ರಾಮ ಪಂಚಾಯತ್ ಅಧಿಕಾರಿಯೊಬ್ಬರಿಗೆ ಗ್ರಾಮಸ್ಥರು ಥಳಿಸಿದ್ದರು. ಇದಕ್ಕೆ ಕಾರಣ ನರೇಗಾ ಯೋಜನೆಯ ಹಣ ಬಿಡುಗಡೆಗೆ ಸಹಿ ಹಾಕದೆ ಅಲೆದಾಡಿಸುತ್ತಿರುವುದಾಗಿತ್ತು. ಸಹಿ ಹಾಕುವ ಮುನ್ನ ಇಂತಿಷ್ಟು ಪ್ರಮಾಣದ ಹಣ ನೀಡಬೇಕೆಂಬುದೇ ಅದರ ಒಳಮರ್ಮ. ಇದು ಕೇವಲ ಉದಾಹರಣೆಯಷ್ಟೆ. ಇಂತಹ ಅದೆಷ್ಟೋ ಪ್ರಕರಣಗಳು ದಿನನಿತ್ಯ ನಡೆಯತ್ತಲೇ ಇರುತ್ತವೆ, ಆದರೆ ಅವೆಲ್ಲವೂ ಸುದ್ದಿಯಾಗುತ್ತಿಲ್ಲವಷ್ಟೇ.
ಗ್ರಾಮೀಣ ಅಭಿವೃದ್ಧಿ ಹಾಗೂ ಹಳ್ಳಿಗಳ ಜನರ ಜೀವನ ಮಟ್ಟ ಸುಧಾರಣೆಗಾಗಿ ಭಾರತ ಸರಕಾರ 2005ರಲ್ಲಿ ನರೇಗಾ ಯೋಜನೆಯನ್ನು ಪರಿಚಯಿಸಿತು. ಭಾರತೀಯ ಕಾರ್ಮಿಕ ಕಾನೂನು ಮತ್ತು ಸಾಮಾಜಿಕ ಭದ್ರತೆ ನಿಯಮದ ಮೂಲಕ ಉದ್ಯೋಗ ಹಕ್ಕು ಕಾಯ್ದೆಯಡಿ ಜಾರಿಗೆ ತಂದಿರುವ ಈ ಯೋಜನೆಯ ಪ್ರಮುಖ ಉದ್ದೇಶಗಳು ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳಾ ಸಬಲೀಕರಣ, ಗ್ರಾಮಗಳ ಅಭಿವೃದ್ಧಿ, ಸುಸ್ಥಿರ ಕೃಷಿ, ಸಮಾನ ಸಾಮಾಜಿಕ ಜೀವನ ಮುಂತಾದವೇ ಆಗಿವೆ. ಈ ಯೋಜನೆ ಜಾರಿಯಾಗಿ ಬರೋಬ್ಬರಿ 13 ವರ್ಷಗಳೇ ಕಳೆದಿವೆ. ಆದರೆ ಈ 13 ವರ್ಷಗಳಲ್ಲಿ ಯೋಜನೆಯ ಸಾಧನೆಗಳು ಮಾತ್ರ ಎಳ್ಳಷ್ಟೆ. ಸರಕಾರ, ಅಧಿಕಾರಿಗಳು, ಶಾಸಕರು, ನೀಡುವ ಹೇಳಿಕೆಯ ಅಂಕಿಅಂಶಗಳನ್ನು ನಿಕಷಕ್ಕೆ ಒಡ್ಡಿ ನೋಡಿದರೆ ಗೋಚರವಾಗುವುದು ಗುರಿ ತಲುಪುವಲ್ಲಿನ ಭಾಗಶಃ ಪ್ರಯತ್ನವಷ್ಟೆ.
ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಹೋಗಲಾಡಿಸುವ ಸಲುವಾಗಿ ನೂರು ದಿನಗಳ ಉದ್ಯೋಗ ಖಾತ್ರಿಯ ಭರವಸೆ ಈ ಯೋಜನೆಯದು. ಅದರಲ್ಲೂ ಸ್ತ್ರೀ ಪುರುಷ ಕಾರ್ಮಿಕರಿಬ್ಬರಿಗೂ ಸಮಾನ ವೇತನ. ಇಲ್ಲಿ ಯಂತ್ರಗಳಿಗೆ, ಕಂಟ್ರ್ಯಾಕ್ಟರ್‌ಗಳಿಗೆ ಅವಕಾಶವಿಲ್ಲ. ಕೆಲಸದ ಸಮಯದಲ್ಲಾಗುವ ಅವಘಡಗಳಿಗೆ ಉಚಿತ ಚಿಕಿತ್ಸೆ. ಕೂಲಿಯ ಹಣ ನೇರ ಬ್ಯಾಂಕ್ ಖಾತೆಗೆ. ಇವಿಷ್ಟು ಯೋಜನೆಯ ಮುಖ್ಯಾಂಶಗಳು. ಆದರೆ ಪ್ರಶ್ನೆ ಇರುವುದು ಇವುಗಳಲ್ಲಿ ಎಷ್ಟು ನಿರೀಕ್ಷಿತ ಗುರಿ ತಲುಪಿವೆ ಎಂದು. ಒರೆಗೆ ಹಚ್ಚಿ ನೋಡಿದರೆ ಒಂದೂ ಇಲ್ಲ. ನೂರು ದಿನಗಳ ಉದ್ಯೋಗ ಎಂಬುದು ಬರೀ ಪುಸ್ತಕದ ದಾಖಲೆಯಾಗಿದೆಯಷ್ಟೇ. ಇಲ್ಲಿ ಸ್ಥಳೀಯರ ಒಳಗೊಳ್ಳುವಿಕೆ ಶೂನ್ಯ. ಎಲ್ಲವೂ ಯಂತ್ರಮಯ. ಹ್ಞಾಂ... ಈ ಯೋಜನೆಯು ಮಧ್ಯವರ್ತಿ ರಹಿತವಾಗಿರಬೇಕಿತ್ತಲ್ಲವೇ; ಇಲ್ಲಿ ಹಾಗಾಗಿಲ್ಲ. ಮಧ್ಯ ವರ್ತಿಗಳಿರದಿದ್ದರೆ ಕೆಲಸವೇ ನಡೆಯುವುದಿಲ್ಲ. ಬಿಡುಗಡೆಯ ಹಣಕ್ಕೂ, ಮಾಡುವ ಕೆಲಸಕ್ಕೂ ತಾಳೆಯೇ ಇರುವುದಿಲ್ಲ. ಲೆಕ್ಕ ಮಾತ್ರ ಬಿಡುಗಡೆಯಾಗುವ ಹಣಕ್ಕಿಂತಲೂ ಹೆಚ್ಚಿನದ್ದಾಗಿರುತ್ತದೆ. ಮತ್ತೊಂದು ಮುಖ್ಯ ವಿಚಾರವೆಂದರೆ ಸ್ತ್ರೀ ಸಬಲೀಕರಣ ಎಂಬುದು ಈ ಯೋಜನೆಯ ಮಟ್ಟಿಗೆ ಇನ್ನೂ ಮರೀಚಿಕೆಯೇ ಆಗಿದೆ. ನರೇಗಾ ಯೋಜನೆಯಡಿ ಕೆಲಸದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಬೆರಳೆಣಿಕೆಯಷ್ಟು.್ಟ ಇನ್ನು ಸಮಾನ ವೇತನ, ಸಾಮಾಜಿಕ ಸಮಾನತೆ ಸಾಧ್ಯವಾಗುವುದಾದರು ಹೇಗೆ. ಎಲ್ಲವೂ ಮೇಲ್ವರ್ಗದ ಪಾಲಾಗುತ್ತಿವೆಯಷ್ಟೇ.
ಭಾರತಕ್ಕೆ ಅನ್ವಯಿಸುವಂತೆ ನರೇಗಾ ಯೋಜನೆಯಲ್ಲಿ ಹಿಂದುಳಿದ ಸಮುದಾಯಗಳ ಒಳಗೊಳ್ಳುವಿಕೆ ತೀರ ಕಡಿಮೆ. ಪರಿಶಿಷ್ಟ ಜಾತಿ ಶೇ. 20.83ರಷ್ಟು ಹಾಗೂ ಪರಿಶಿಷ್ಟ ಪಂಗಡದ ಪಾಲು ಕೇವಲ ಶೇ. 17.78ರಷ್ಟು ಮಾತ್ರ. ಉಳಿದಂತೆ ಬಹುಪಾಲು ಮೇಲ್ವರ್ಗದವರ ಕೈವಶ. ಕರ್ನಾಟಕದ ಮಟ್ಟಿಗಂತೂ ಇದು ಇನ್ನೂ ಅಧ್ವಾನ. ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ. 17.1 ಪಾಲು ದೊರೆತರೆ ಪರಿಶಿಷ್ಟ ಪಂಗಡದವರಿಗೆ ಶೇ. 9.13 ರಷ್ಟು ಮಾತ್ರ. ಅಂದರೆ ಈ ಯೋಜನೆಯ ಕಾಲು ಭಾಗದಷ್ಟು ಕೂಡಾ ಹಿಂದುಳಿದ ಸಮುದಾಯಗಳಿಗೆ ದೊರೆತಿಲ್ಲವಾಗಿ ಸಮಾನತೆಯೆಂಬುದು ಸಾಧ್ಯವಾಗುವುದಾದರೂ ಹೇಗೆ? ನರೇಗಾ ಯೋಜನೆಯಡಿ ಕೃಷಿ ಹೊಂಡ, ದನದ ಕೊಟ್ಟಿಗೆ, ಕೋಳಿ ಮನೆ ಮುಂತಾದವುಗಳ ನಿರ್ಮಾಣಕ್ಕೆ ಸಹಾಯ ಧನ ದೊರೆಯುತ್ತದೆ ಎಂಬುದು ಸರಿಯಷ್ಟೆ. ಆದರೆ ಬಿಡುಗಡೆಯಾಗುವ ಒಂದು ರೂಪಾಯಿಯಲ್ಲಿ ಫಲಾನುಭಾವಿಗಳಿಗೆ ದೊರೆಯುತ್ತಿರುವುದು ಕೇವಲ 60 ಪೈಸೆ ಅಷ್ಟೇ. ಕಾರಣ ಪಂಚಾಯತ್ ಅಧಿಕಾರಿಯಿಂದ ಹಿಡಿದು ಇಂಜಿನಿಯರ್, ಅಧ್ಯಕ್ಷ, ಸದಸ್ಯರಾದಿಯಾಗಿ ಎಲ್ಲರಿಗೂ ಲಂಚ ನೀಡಲೇಬೇಕು. ಇಂದಿಗೂ ಅದೆಷ್ಟೋ ರೈತ ಫಲಾನುಭಾವಿಗಳು ಸಾಲ ಮಾಡಿ ನಿರ್ಮಿಸಿದ ಕೊಟ್ಟಿಗೆ, ಕೃಷಿ ಹೊಂಡ, ಇಂಗು ಗುಂಡಿಗಳ ಸಹಾಯ ಧನಕ್ಕಾಗಿ ದಿನನಿತ್ಯ ಪಂಚಾಯತ್‌ಗಳಿಗೆ ಅಲೆಯುತ್ತಲೇ ಇದ್ದಾರೆ. ಆದರೆ ಅಧಿಕಾರಿಗಳು ಮತ್ತು ಸದಸ್ಯರ ಒಳ ಜಗಳ, ಕಮಿಷನ್ ವಿಚಾರವಾಗಿ ವಿಲೇವಾರಿಯಾಗದ ಅದೆಷ್ಟೋ ಕಡತಗಳು ಸಿಗಬಹುದಾದ ಲಂಚಕ್ಕೆ ಎದುರು ನೋಡುತ್ತಿವೆ.
ರಸ್ತೆ, ಒಳಚರಂಡಿ, ಚೆಕ್ ಡ್ಯಾಂ, ಸೇತುವೆ ಮುಂತಾದ ಕೆಸಗಳನ್ನು ಆಯಾ ಗ್ರಾಮದ ಜಾಬ್ ಕಾರ್ಡ್ ಹೊಂದಿರುವ ಜನರಿಗೆ ನೀಡಬೇಕೆಂಬುದು ಯೋಜನೆಯ ಬಹುಮುಖ್ಯ ಉದ್ದೇಶ ಮತ್ತು ನಿಯಮ. ಆದರೆ ಇಲ್ಲಿ ಕೆಲಸ ಮಾಡುವವರೆಲ್ಲ ದೂರದ ಚಾಮರಾಜನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶದವರೇ ಆಗಿದ್ದಾರೆ. ಇನ್ನೆಲ್ಲಿ ಗ್ರಾಮೋದ್ಯೋಗದ ಸಾಕಾರ.?