ನಮ್ಮ ಕಾಲದ ನಿಜಶರಣ ನೆಟ್ಟಾರು ರಾಮಚಂದ್ರಭಟ್ಟರು

Update: 2019-01-09 18:30 GMT

ಭಾಗ-4

ನಾನು (ತೋಳ್ಪಾಡಿ) ಗುರುಗಳೊಡನೆ ಕೇಳಿದೆ: ‘‘ಕಳ್ಳ ಮಾಡಿದ್ದು ಸರಿಯೆ? ಹಾಗಾದರೆ.’’
‘‘ಸರಿ ಅಂತ ನಾವು ಹೇಳಲಿಲ್ಲವಲ್ಲ. ಅವನಿಗೂ ತಾನು ಮಾಡಿದ್ದು ತಪ್ಪೆಂಬ ಭಾವನೆ ಇದೆ.’’
‘‘ಮತ್ತೆ ಅವನ ತಪ್ಪಿಗೆ ನಿಮ್ಮದೇಕೆ ಪ್ರೋತ್ಸಾಹ?’’
‘‘ಇದು ನಿಮ್ಮ ಪ್ರಶ್ನೆಯಾಗಿರಬಹುದು. ನಮ್ಮ ಸಮಸ್ಯೆ ಅದಲ್ಲ.’’
‘‘ನಿಮ್ಮ ಸಮಸ್ಯೆ ಯಾವುದು ಗುರುಗಳೆ?’’
‘‘ಈ ಅಡಿಕೆ ತೋಟ ತನ್ನದು ಅಂತ ಒಬ್ಬ ಹೇಳ್ತಾನಲ್ಲ. ಅವನು ಇವನಿಗಿಂತ ದೊಡ್ಡ ಕಳ್ಳ. ನೀನು ಬೇಗ ಇಳಿದು ಹೋಗು ಎಂದು ಸಣ್ಣ ಕಳ್ಳನಿಗೆ ನಾವು ಹೇಳಬಹುದು. ಈ ದೊಡ್ಡ ಕಳ್ಳನಿಗೆ ನಾವು ಏನು ಹೇಳೋದು? ಇವನಿಗೆ ತಾನು ಕಳ್ಳ ಅಂತ ಗೊತ್ತಿದೆ. ಆದ್ದರಿಂದ ಇವನಿಗೆ ಆತಂಕ ಇದೆ. ಅವನಿಗೆ ತಾನು ಕಳ್ಳ ಅಂತಲೇ ಗೊತ್ತಿಲ್ಲ. ಹೇಗೆ ಗೊತ್ತು ಮಾಡೋದು ಹೇಳಿ. ಅವನಿಗೆ ಆತಂಕವೂ ಇಲ್ಲ. ಇದ್ದರೆ, ತನ್ನದಾಗಿರೋದು ಇಷ್ಟು ಸಾಲದು ಎಂಬ ಆತಂಕ ಮಾತ್ರ. ಹೇಗೆ ಹೇಳೋದು?’’
‘‘ನಿಮ್ಮ ಮಾತು ಕೇಳಿದರೆ ಅರಾಜಕತೆಯಾಗದೆ ಗುರುಗಳೇ?’’
‘‘ಹೌದೆ? ತನ್ನದು ಅಂತ ನೀವು ಮಾಡಿಕೊಳ್ಳದೆ ಇದ್ದರೆ ಲೋಕ ಅರಾಜಕತೆಯಾಗಿ ಬಿಡುತ್ತೆ ಅಲ್ವ? ಹಾಗೆ ಅರಾಜಕವಾಗಬಾರದು, ಲೋಕ ಹಿತಚಿಂತನೆಯಿಂದಲೇ ತನ್ನದು ಅಂತ ನೀವು ಮಾಡಿಕೊಂಡಿರೋದು ಅಲ್ವ? ಚೆನ್ನಾಗಿದೆಯಪ್ಪ. ಸ್ವಾರ್ಥಕ್ಕೆ ತರ್ಕದ ಬಲ. ಸತ್ಯಕ್ಕೆ ತರ್ಕದ ಬಲವಿಲ್ಲಪ್ಪ.ಸತ್ಯಕ್ಕೆ ಯಾರ, ಯಾವುದರ ಬೆಂಬಲವೂ ಇಲ್ಲ. ನಮಗೆ ಒಮ್ಮೆಮ್ಮೆ ಆಶ್ಚರ್ಯವಾಗುತ್ತೆ. ಸತ್ಯದ ವಿರುದ್ಧ ಲೋಕವೇ ಸಡ್ಡು ಹೊಡೆಯುತ್ತಿದೆಯಲ್ಲ. ಸತ್ಯಕ್ಕೆ ಬೆಂಬಲವೇ ಇಲ್ಲವಲ್ಲ. ಆದರೂ ಸತ್ಯ ಕಳವಳಗೊಳ್ಳದೆ ತನಗೆ ಕಂಡದ್ದನ್ನು ಹೇಳುತ್ತಲೇ ಇದೆ.’’
‘‘ಅದು, ಕಳವಳಗೊಳ್ಳದೆ ಇರೋದು ಹೇಗೆ ಗುರುಗಳೆ?’’
‘‘ನಿನಗೆ ಕಳವಳವಾಗುತ್ತಿದೆಯಲ್ಲ. ನಿನ್ನಲ್ಲಿ ಕಳವಳಗೊಳ್ಳುವುದು ಯಾವುದು?’’
‘‘ನನ್ನ ಸ್ವಪ್ರಜ್ಞೆ. ಅನುಮಾನವೇ ಇಲ್ಲ. ಇದನ್ನೇ ಸೆಲ್ಫ್ ಕಾನ್ಶಿಯಸ್ ಎನ್ನುತ್ತೇವೆ.’’
‘‘ಹ್ಹ. ಸತ್ಯಕ್ಕೆ ಅದು ಇಲ್ಲ ನೋಡು. ಅದು ಕಾನ್ಶಿಯಸ್ ಮಾತ್ರ. ಸೆಲ್ಫ್ ಕಾನ್ಶಿಯಸ್ ಅಲ್ಲ.’’
‘‘ಈಗ ಗೊತ್ತಾಯಿತೆ? ಲೋಕ ಸತ್ಯವನ್ನು ಯಾಕೆ ಬೆಂಬಲಿಸುವುದಿಲ್ಲ ಅಂತ? ಸತ್ಯಕ್ಕೆ ಬೆಂಬಲ ಕೊಟ್ಟರೆ ‘ಸ್ವ-ಪ್ರಜ್ಞೆ’ ತನ್ನ ‘ಸ್ವ’ವನ್ನು ಕಳೆದುಕೊಳ್ಳಬೇಕಾಗುತ್ತೆ. ‘ಸ್ವ’ ಎಂದಾದರೂ ತನ್ನನ್ನು ತಾನು ಕಳೆದುಕೊಳ್ಳುವುದು ಸಾಧ್ಯವೆ? ಕಳಕೊಳ್ಳುವ ಅಂಜಿಕೆಯಲ್ಲೇ ಬದುಕೋದು; ಬದುಕಿಡೀ.’’
‘‘ಇದು ಏನು ವಿಪರ್ಯಾಸ ಗುರುಗಳೇ?’’
‘‘ವಿಪರ್ಯಾಸದ ಮಾತಿರಲಿ. ಕಳವಳದಿಂದ ಪಾರಾಗುವ ದಾರಿಯನ್ನೂ ಹುಡುಕಿಕೊಂಡಿದ್ದೀರಲ್ಲ.’’
‘‘ಏನು ಗುರುಗಳೆ?’’
‘‘ಗೆದ್ದಲು ಹಿಡಿಯುವ ಫೋಟೊಗಳನ್ನು ಪೂಜೆ ಮಾಡೋದು, ಹರಕೆ ಹೇಳೋದು ಇತ್ಯಾದಿ, ಇತ್ಯಾದಿ. ತಪ್ಪು-ಸರಿಗಳ ಮಾತೇ ಬೇಡ. ಜೀವಂತವಾದದ್ದಕ್ಕೆ ಇದು ಏನು ಪಾಡು ಅಂತ ನಮಗೆ ಕಳವಳವೇ ಆಗುತ್ತದಪ್ಪ!’’
‘‘ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ ಕೂಡಲಸಂಗಮ ದೇವನಲ್ಲದೆ ಆರೂ ಇಲ್ಲ’’ ಎಂಬುದು ಬಸವಣ್ಣನವರ ದೃಢವಾಕ್ಯವಾಗಿದೆ. ‘‘ಆಕಳ ಕಳ್ಳರು ಕೊಂಡೊಯ್ದರೆನ್ನದಿರಿಂ ಭೋ, ನಿಮ್ಮ ಧರ್ಮ! .. .. .. ಅಲ್ಲಿ ಉಂಬಡೆ ಸಂಗ, ಇಲ್ಲಿ ಉಂಬಡೆ ಸಂಗ, ಕೂಡಲಸಂಗಮದೇವ ಏಕೋಭಾವ.’’ಎಂದು ಬಸವಣ್ಣನವರು ಹೇಳಿದ್ದು ಅರಾಜಕತೆಯೆ? ಎಂದು ಪ್ರಶ್ನಿಸುವ ಶಕ್ತಿ ನೆಟ್ಟಾರು ರಾಮಚಂದ್ರಭಟ್ಟರ ದಿವ್ಯಜ್ಞಾನದಿಂದ ಪ್ರಾಪ್ತವಾಗುತ್ತದೆ.
ಅತಿಕಾಯ ಕಾಳಗ:
ಗುರುಗಳಿಗೆ ಯಕ್ಷಗಾನ ಎಂದರೆ ಇಷ್ಟ. ಅದು ಅವರ ಪರಿಸರದ ಕಲೆಯಾಗಿತ್ತು. ಅವರ ನಾಲಗೆಯಲ್ಲಿ ಸದಾ ನುಡಿಯುತ್ತಿದ್ದ ಯಕ್ಷಗಾನ ಪ್ರಸಂಗವೊಂದರ ಪದ್ಯ. ಅದು ‘ಅತಿಕಾಯ ಕಾಳಗ’ದ ಪದ್ಯ:
‘‘ನೀವು ಜಗದ ದೈವವೆಂಬುದ
ನಾವು ಬಲ್ಲೆವು. ಆದರೇನದರಿಂದ
.. .. ಬಿಡಲಹುದೆ ಕುಲಕ್ರಮಾಗತ ವಂಶಪದ್ಧತಿಯ.’’
ಈ ಪದ್ಯವನ್ನು ಬಾಯ್ತುಂಬ ಹೊಗಳುತ್ತಿದ್ದರು.
‘‘ಅದೇನು ಆ ಹಾಡಿನ ಮೇಲೆ ನಿಮಗೆ ಅಷ್ಟು ಮೋಹ?’’
‘‘ಹ್ಹ. ಅತಿಕಾಯ ಹೇಳೋದಲ್ವ ಅದು. ರಾಮ ದೇವರು ಅಂತ ಅತಿಕಾಯನಿಗೆ ಗೊತ್ತಿದೆ. ‘ನಾವು ಬಲ್ಲೆವು’ ಎನ್ನುತ್ತಾನೆ. ಭಕ್ತನೂ ಹೌದು.ಆದರೆ ದೇವರ ವಿರುದ್ಧವೇ ದೊಡ್ಡ ಯುದ್ಧವೊಂದು ಏರ್ಪಟ್ಟಿದೆಯಲ್ಲ! ಇಂಥ ಸಂದರ್ಭದಲ್ಲಿ ಎದುರಿಗೆ ನಿಂತವನು ದೇವರೇ ಆದರೂ ಅವನ ವಿರುದ್ಧ ಹೋರಾಡದೆ ಬಿಟ್ಟುಕೊಡುವಂತಿಲ್ಲ. ಹೋರಾಡುವುದೇ ‘ಕುಲಕ್ರಮಾಗತ ವಂಶಪದ್ಧತಿ’. ಈ ಪದ್ಧತಿಯನ್ನು ಬಿಟ್ಟುಕೊಟ್ಟರೆ ದೇವರಾದರೂ ಏನು ಹೇಳಿಯಾನು? ಆದುದರಿಂದ ಅತಿಕಾಯನದು ಹೋರಾಟ. ಇದು ವೀರರಸ. ನಮಗೆ ಅತಿಕಾಯನ ಮಾತು ಕೇಳುವಾಗ ಮೈ ಮರೆಯುತ್ತದೆ!’’
‘‘ಅದನ್ನು ‘ವಿರೋಧ ಭಕ್ತಿ’ ಅಂತಲೂ ಹೇಳುತ್ತಾರೆ ಗುರುಗಳೇ’’
‘‘ಅದೆಲ್ಲ ಮಾತು ಬೇಡ. ಅದೆಲ್ಲ ಪಾಂಡಿತ್ಯ. ನೋಡು, ದೇವರೆಂದು ತಿಳಿದಿದ್ದೂ ದೇವರನ್ನೇ ಎದುರಿಸಬೇಕಾದರೆ, ಎದುರಿಸಬೇಕಾದ ವೀರನಲ್ಲಿ ಎಂಥ ಆವೇಶ; ಎಂಥ ಏಕಾಗ್ರತೆ, ಆಂತರಿಕ ಶಕ್ತಿಸರ್ವಸ್ವವನ್ನೂ ಸುರಿದು ಸಜ್ಜುಗೊಂಡ ಎಂಥ ಬಗೆ, ಎಂಥ ನಿಷ್ಕಳಂಕ ಮುಗ್ಧತೆ ಬೇಕು ಗೊತ್ತೇನು? ಆ ವೀರನಲ್ಲಿ ಎಂಥ ಧಾರಣ ಸಾಮರ್ಥ್ಯ, ರಸಾನುಭವ ಶಕ್ತಿ ಇರಬಲ್ಲುದು ಎಂದು ಬಲ್ಲವರೇ ಬಲ್ಲರು. ದೇವರಿಗೆ ಮಾತ್ರ ಒಪ್ಪಿಸುವುದಕ್ಕೆಯೋಗ್ಯವಾದ ರಸಾನುಭವವದು.’’
‘‘ಅಂದರೆ ದೇವರು ಈ ವಿರೋಧವನ್ನು ಹೇಗೆ ಸ್ವೀಕರಿಸುತ್ತಾನೆ ಗುರುಗಳೆ’’ ಓ ಅದನ್ನೇನು ಕೇಳ್ತಿ. ಒಂದು ಮಾತು ಹೇಳಿದರೆ ತಪ್ಪು ತಿಳ್ಕೊಬೇಡ. ಆ ಮಾತೇನೆಂದರೆ ಇಂಥದೊಂದು ವಿರೋಧ ರಸಾನುಭವವನ್ನು ಸ್ವೀಕರಿಸುವಾಗ ಎಂಥ ‘ಅಮಲು’ ಗೊತ್ತ! ಅದಿರಲಿ ಇನ್ನೊಂದು ಮಾತು.’’
‘‘ಏನು ಮಾತು ಗುರುಗಳೆ?’’
‘‘ಓ ಅದಾ. ತಮ್ಮ ಜೀವನಾನುಭವದ ಮೇಲಿನಿಂದ ದೇವರನ್ನು ಎದುರಿಸಲು ಮನುಷ್ಯರಿಗೇಕೆ ಧೈರ್ಯವೇ ಇಲ್ಲ ಹೇಳು?’’
‘‘ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ ಕೇಳಿರಯ್ಯಿ ಎರಡಾಳಿನ ಭಾಷೆಯ. ಕೊಲುವೆನೆಂಬ ಭಾಷೆ ದೇವನದು, ಗೆಲುವೆನೆಂಬ ಭಾಷೆ ಭಕ್ತನದು. ಸತ್ಯವೆಂಬ ಕೂರಲಗನೆ ಕಳೆದುಕೊಂಡು ಸದ್ಭಕ್ತರು ಗೆದ್ದರು ಕಾಣಾ, ಕೂಡಲಸಂಗಮದೇವಾ.’’ ಎಂದು ಬಸವಣ್ಣನವರು ಭಕ್ತರನ್ನು ಗೆಲ್ಲಿಸುವುದು ಗೊತ್ತಿದ್ದಿದ್ದರೆ ರಾಮಚಂದ್ರಭಟ್ಟರು ಬಹಳ ಸಂತಸ ಪಡುತ್ತಿದ್ದರು!
ಬಂದವರು:
ಒಮ್ಮೆ ಡಾ.ಯು.ಆರ್. ಅನಂತಮೂರ್ತಿ ಅವರು ಸುಬ್ರಹ್ಮಣ್ಯಕ್ಕೆ ಬಂದಾಗ ತೋಳ್ಪಾಡಿ ಅವರು ರಾಮಚಂದ್ರ ಭಟ್ಟರನ್ನು ಕರೆದುಕೊಂಡು ಅವರ ಭೇಟಿಗೆ ಹೋದರು. ಮಾತುಕತೆ ಮುಗಿದ ಮೇಲೆ ತಡರಾತ್ರಿ ಭಟ್ಟರು ತೋಳ್ಪಾಡಿ ಅವರಿಗೆ ತಮ್ಮ ಮಾತುಕತೆಯ ಬಗ್ಗೆ ಅನಂತಮೂರ್ತಿ ಏನೆಂದರು ಎಂದು ಕೇಳಿದರು. ‘‘ನಾವು ಬಂದವರು’’ ಅಂತಾರೆ ಅದೇನೋ ತಿಳಿತಾ ಇಲ್ಲ. ‘‘ಇರುವವರು’’ ಎಂದರೆ ಹೆಚ್ಚು ಸಮರ್ಪಕ ಅನ್ನಿಸುತ್ತೆ ಎಂದು ಅನಂತಮೂರ್ತಿ ಹೇಳಿದ್ದನ್ನು ತೋಳ್ಪಾಡಿ ತಿಳಿಸಿದರು. ಆಗ ಭಟ್ಟರು ಹೇಳಿದರು: ‘‘ಹ್ಹ. ಇರುವವರು ಎಂದರೆ ಏನರ್ಥವಾಗುತ್ತೆ? ನಾವಿಲ್ಲಿ ಇರುವವರು, ಅಂದರೆ ಇದು ಈ ಸಂಸಾರ, ಈ ಸಮಾಜ, ಈ ಲೋಕ, ಇದು ನಮ್ಮದು ಅಂತ ತಾನೆ ಧ್ವನಿ. ಇದು ನಮ್ಮದಾದ್ದರಿಂದ ನಾವು ಇಲ್ಲಿ ಇರಬೇಕಾದವರು ಅಂತ, ನಾವು ಇಲ್ಲಿ ಇರೋದೇ ಅಧಿಕೃತವಾದ ನಡವಳಿಕೆ ಅಂತ, ಇದನ್ನು ಬಿಟ್ಟು ಹೋಗೋದೆಲ್ಲಿಗೆ ಅಂತ, ನಮ್ಮ ನಾಕ ನರಕ ಎಲ್ಲ ಇಲ್ಲೇ ಅಂತ. ಹೀಗಲ್ಲವೆ?’’
‘‘ಹೌದು, ಗುರುಗಳೇ ಇದು ಸರಿಯಾಗಿಯೆ ಇದೆ ಅನಿಸುತ್ತೆ.’’
‘‘ಅದಿರಲಿ. ನೋಡಯ್ಯ, ಇವೆಲ್ಲ ದೊಡ್ಡ ಮಾತುಗಳಂತೆ ಕೇಳ್ತಾ ಇವೆ. ಇರಲೂ ಬಹುದು. ನಾವು ಹೇಳೋದು ಇಷ್ಟೆ. ನಾವು ಬಂದವರು. ಈ ಲೋಕ; ಇಲ್ಲಿನದು ಯಾವುದೂ ನಮ್ಮದಲ್ಲ. ಆದರೆ ನಿಮ್ಮಲ್ಲಿ ಒಂದು ಪ್ರಶ್ನೆ ಇದೆ. ಅದೆಂದರೆ, ಇದು ನಿಮ್ಮದಲ್ಲ ಅಂತ ಇದ್ದಾಗ ನೀವು ಇದರ ಜವಾಬ್ದಾರಿ ಹೊರಲು ಸಿದ್ಧರಿಲ್ಲವೆ?’’
‘‘ಅಂದರೆ?’’
‘‘ಇದರ ಹೊಣೆ ಹೊರಲು ಇದು ನಿಮ್ಮದೇ ಆಗಿರಬೇಕೆ? ನಿಮ್ಮದಲ್ಲ ಎಂದಾಗಿ ಬಿಟ್ಟರೆ ನೀವು ಹೊಣೆಗೇಡಿಗಳಾಗುತ್ತೀರ? ಹಾಗಾದೇವು ಅಂತ ಭಯ ಇದೆಯಾ? ಹೊಣೆ ಹೊತ್ತಿದ್ದೇವೆ ಅಂತ ಗೊತ್ತಿದ್ದೂ ಹೊಣೆ ಹೊತ್ತವರದು ಒಂದು ಜಾತಿ. ನಾವು ಆ ಜಾತಿ ಅಲ್ಲ. ಹಾಗೆ ಗೊತ್ತಿಲ್ಲದೆ ಬದುಕಿನಲ್ಲಿ (ಹೊಣೆಹೊತ್ತು) ನಡೆದುಕೊಳ್ಳೋದು ಉಂಟಲ್ಲ, ಅದು ಏನು? ನಮ್ಮದಲ್ಲದ್ದರ ಜವಾಬ್ದಾರಿ ಹೊತ್ತು, ಅದು ಜವಾಬ್ದಾರಿ ಅಂತ ಕೂಡ ಗೊತ್ತಿಲ್ಲದೆ, ಅದನ್ನು ನಡೆಸೋದು ಉಂಟಲ್ಲ - ಇದು ಸರಿಯಾದದ್ದು ಎನಿಸುತ್ತದೆ ನಮಗೆ.’’
‘‘ಬಂದ ಯೋನಿಯನರಿದು ಸಲಹೆನ್ನ ತಂದೆ’’ ಎಂದು ಬಸವಣ್ಣನವರು ಕೂಡಲಸಂಗಮದೇವರಲ್ಲಿ ಬೇಡಿಕೊಳ್ಳುತ್ತಾರೆ. ನಾವೆಲ್ಲ ಬಂದವರೇ ಆಗಿದ್ದೇವೆ. ಈ ಪೃಥ್ವಿಯಲ್ಲಿ ಅತಿಥಿಯಾಗಿ ಇದ್ದೇವೆ. ಬಂದವರು ಹೋಗಲೇ ಬೇಕು. ‘ನಾವು ಬಂದವರು’ ಎಂದು ಹೇಳಿದ ನೆಟ್ಟಾರು ರಾಮಚಂದ್ರಭಟ್ಟರು ಮತ್ತು ಅವರ ಆಪ್ತ ಇಸ್ಮಾಯೀಲ್ ಕುಂಞಪ್ಪನಮ್ಮ ಜೊತೆ ಇಲ್ಲ. ‘ಇರುವವರು’ ಎಂದು ೇಳಿದ್ದ ಅನಂತಮೂರ್ತಿ ಅವರೂ ಇಲ್ಲ!
‘‘ಮಾಡುವಂತಿರಬೇಕು, ಮಾಡದಂತಿರಬೇಕು, ಮಾಡುವ ಮಾಡದೊಳಗೆ ತಾನಿಲ್ಲದಂತಿರಬೇಕು’’ ಎಂದು ಬಸವಣ್ಣನವರು ಹೇಳಿದ್ದನ್ನು ಭಟ್ಟರ ‘‘ಹಾಗೆ ಗೊತ್ತಿಲ್ಲದೆ ಬದುಕಿನಲ್ಲಿ ಹೊಣೆಹೊತ್ತು ನಡೆದುಕೊಳ್ಳೋದು ಉಂಟಲ್ಲ’’ ಎಂದು ಹೇಳಿದ್ದು ಸಮವಾಗಿದೆ.
ದೇವರು ದಾಸರ ದಾಸ:
ನನ್ನ ತಂದೆ ‘ವಿಠ್ಠಲ’ ನನಗೆ ಮಾತು ಕಲಿಸಿ, ಅವನು ಕಲಿಸಿದ ಮಾತುಗಳನ್ನು ನಾನು ಆಡಿದರೆ ಅದನ್ನು ಮೊದಲ ಬಾರಿಗೆ ಕೇಳುತ್ತಿದ್ದೇನೆ ಎಂಬಂತೆ ಕಣ್ಣರಳಿಸಿ ಕೇಳಿ ಸಂತೋಷ ಪಡುತ್ತಾನಲ್ಲ -ಈ ವಿಠ್ಠಲನನ್ನು ಏನೆಂದು ಕರೆಯಬೇಕು! ಎಂದು ಅಭಂಗವೊಂದರಲ್ಲಿ ತುಕಾರಾಮ ಹಾಡುತ್ತಾನೆ. ಈ ಮಾತುಗಳನ್ನು ಗುರುಗಳಲ್ಲಿ ಹೇಳಿದೆ. ಅವರ ಕಣ್ಣು ಹನಿಗೂಡಿತು. ‘‘ವಿಠ್ಠಲನನ್ನು ಏನೆಂದು ಕರೆಯಬೇಕೆಂದು ನಾವು ಹೇಳುತ್ತೇವೆ.’’ಎಂದರು.
‘‘ಏನೆಂದು?’’
‘‘ದಾಸರ ದಾಸನೆಂದು. ಅದೇ ವಿಠ್ಠಲನ ಅವಸ್ಥೆ! ಅದೇ ಅವನ ಸರಿಯಾದ ವರ್ಣನೆ.’’
‘‘ಹಾಗೆಂದರೆ?’’
‘‘ಹಾಗೆಂದರೆ ಅವನಿಗಿಂತ ಕೆಳಗಿನವರಿಲ್ಲವಯ್ಯ. ನೀವೇನೋ ಅವನನ್ನು ಮೇಲಿಟ್ಟಿರಬಹುದು. ನೀವು ಮೇಲೆ ಇಟ್ಟರೆ ಅವನನ್ನು ದೂರ ಇಟ್ಟ ಹಾಗೆ.
ನೀವು ದಾಸರಾದರೆ ಅವನ ಗುಟ್ಟು ಗೊತ್ತಾಗುತ್ತದೆ. ಇಲ್ಲದಿದ್ದರೆ ಇಲ್ಲ. ದಾಸನಿಗೆ ಮಾತ್ರ ಇನ್ನೊಬ್ಬ ದಾಸನ ಮನಸ್ಸು ಗೊತ್ತಾಗೋದು.. .. ’’ಎಂದರು.
‘‘ಬಾಣನ ಬಾಗಿಲ ಕಾಯ್ದವನ!ನಂಬಿಗೆ ಕುಂಟಣಿಯಾದವನ!’’ಎಂದು ಕೂಡಲಸಂಗಮದೇವನ ಕುರಿತು ಬಸವಣ್ಣನವರು ತಿಳಿಸುತ್ತಾರೆ. ದೇವರು ದಾಸನ ದಾಸ ಎಂದು ಸೂಚಿಸುತ್ತಾರೆ. ತಾವು ದಾಸ ದಾಸಿಯ ಮಕ್ಕಳ ಅನೈತಿಕ ಸಂಬಂಧದಿಂದ ಹುಟ್ಟಿದವರು ಎಂದು ಅತ್ಯಂತ ಹೀನ ಸ್ಥಿತಿಯವರ ಜೊತೆಯಲ್ಲಿ ನಿಲ್ಲುತ್ತಾರೆ.
‘‘ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸಿಯ ಮಗಳು,
ಅವರಿಬ್ಬರು ಹೊಲದಲು ಬೆರಣಿಗೆ ಹೋಗಿ ಸಂಗವ ಮಾಡಿದರು
ಅವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ.’’
ಹೀಗೆ ಸಕಲಜೀವರನ್ನು ಅಭೇದ್ಯವಾಗಿ ಪ್ರೀತಿಸಿದಾಗ ಮಾತ್ರ ಜಗತ್ತು ಎಲ್ಲ ಅಸಮಾನತೆ ಮತ್ತು ಹಿಂಸೆಯಿಂದ ಮುಕ್ತವಾಗಲು ಸಾಧ್ಯ. ‘ದೇವರರಾಜ್ಯ’ ಎಂದರೆ ಯಾರಿಗೂ ಖಾಸಗಿ ಆಸ್ತಿ ಇರಬಾರದು ಎಂದು ಭಟ್ಟರ ಹಾಗೆ ಹೇಳುವ ಸಮಾನಮನಸ್ಕರ ರಾಜ್ಯ. ಎಲ್ಲವೂ ದೇವರಿಗೆ ಸೇರಿದಾಗ ಕೆಲವರೇ ಭೂಮಿ ಮತ್ತು ಸಂಪತ್ತಿನ ಮಾಲಕರಾಗುವುದು ಹೇಗೆ ಸಾಧ್ಯ? ಎಂಬುದು ಭಟ್ಟರ ಪ್ರಶ್ನೆ. ಎಲ್ಲರೂ ದಾಸರು, ದೇವರು ಮಾತ್ರ ಒಡೆಯ. ಆತ ನಮ್ಮೂರಿನ ಒಡೆಯರ ಹಾಗೆ ಅಲ್ಲ. ದಾಸರ ದಾಸನಾಗುವವನು!
‘‘ದೇವರೊಳ್ಳಿದನೆಂದು ಮುಯ್ಯಿನಲು ಬೇಡ.
ತರಕಟಗಾಡಿದನೊಳ್ಳಿದನೆ?
ಅಳಿಸುವ ನಗಿಸುವನೊಳ್ಳಿದನೆ?
ಬೆಚ್ಚದೆ ಬೆದರದೆ ತೊತ್ತುತನವ ಮಾಡಲು,
ತನ್ನನೀವ ಕೂಡಲಸಂಗಮದೇವ.’’
 ದೇವರು ಒಳ್ಳೆಯವನೆಂದು ಸಲುಗೆಯಿಂದ ಇರಬೇಡ ಎಂದು ಬಸವಣ್ಣನವರು ಈ ವಚನದಲ್ಲಿ ಎಚ್ಚರಿಸುತ್ತಾರೆ. ಅಸಾಧ್ಯವಾದ ಹಿಂಸೆಯನ್ನು ಕೊಡುವಾತ ಒಳ್ಳೆಯವನೇ ಎಂದು ಕೇಳುತ್ತಾರೆ. ಅಳಿಸುವಾತ ಮತ್ತು ನಗಿಸುವಾತ ಅದು ಹೇಗೆ ಒಳ್ಳೆಯವನು ಎಂದು ಮುಂತಾಗಿ ಹೇಳುತ್ತಾರೆ. ಆದರೆ ಕೊನೆಯಲ್ಲಿ ಈ ವಚನ ಆಶ್ಚರ್ಯಕರವಾದ ತಿರುವು ಪಡೆಯುತ್ತದೆ. ಎಲ್ಲವನ್ನು ಸಹಿಸಿಕೊಳ್ಳುತ್ತ ಅಚಲವಾದ ನಂಬಿಕೆ ಇಡುವ ಭಕ್ತನ ದಾಸನಾಗುವುದಕ್ಕಾಗಿ ದೇವರು ತನ್ನನ್ನೇ ಅವನಿಗೆ ಅರ್ಪಿಸಿಕೊಳ್ಳುವನು!
(ಮುಂದುವರಿಯುವುದು)

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News

ಜಗದಗಲ
ಜಗ ದಗಲ