ಬದಲಾಗುತ್ತಾ ಬೆಳೆದ ಸೇನ್

Update: 2019-01-09 18:30 GMT

ಭಾಗ-1

‘ಕಲ್ಕತ್ತಾ 71’ ಅಷ್ಟು ಯಶಸ್ವಿಯಾಗುವುದಕ್ಕೆ ಸಿನೆಮಾ ಮಾತ್ರ ಕಾರಣವಾಗಿರಲಿಲ್ಲ. ಆ ಸಮಯ ಹಾಗಿತ್ತು. ಅದೊಂದು ರೀತಿ ಜನ ಟಿಕೆಟ್ ಕೊಂಡು ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿದ ಅನುಭವ. ಪೊಲೀಸರು ಎಷ್ಟೋ ವಾಂಟೆಡ್ ಜನರನ್ನು ಸಿನೆಮಾ ಕ್ಯೂನಲ್ಲಿ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದರು.

ಮೃಣಾಲ್ ಸೇನ್ ಹುಟ್ಟಿದ್ದು ಪೂರ್ವ ಬಂಗಾಲದಲ್ಲಿ. ಅಮೇಲೆ ಓದು ಮುಂದುವರಿಸಲು ಪಶ್ಚಿಮ ಬಂಗಾಳಕ್ಕೆ ಬಂದರು. ಬಂಗಾಳದ ವಿಭಜನೆಯ ನೋವು ಅವರನ್ನು ಗೀಳಾಗಿ ಕಾಡಲಿಲ್ಲ. ಕೋಲ್ಕತಾದಲ್ಲಿ ಬೆರೆತು ಕೋಲ್ಕತಾದವರೇ ಆಗಿಬಿಟ್ಟರು. ಜೀವನದುದ್ದಕ್ಕೂ ಅವರ ಕಾಳಜಿಯೆಲ್ಲಾ ಕೋಲ್ಕತಾ ಮತ್ತು ಅಲ್ಲಿಯ ಜನರ ಬಗ್ಗೆಯೇ ಆಗಿತ್ತು. ಕೋಲ್ಕತಾ ಅವರಿಗೆ ಸ್ಫೂರ್ತಿಯ ತಾಣವಾಗಿದ್ದಂತೆಯೇ ಕಿರಿಕಿರಿಯೂ ಜಾಗವೂ ಆಗಿತ್ತು. ತಮ್ಮ ಸುತ್ತಲ ಆಗುಹೋಗುಗಳ ಕುರಿತಂತೆ ಸದಾ ಅವರಿಗೆ ಒಂದು ರೀತಿಯ ಅತೃಪ್ತಿ ಕಾಡುತ್ತಿತ್ತು. ಈ ಅತೃಪ್ತಿಯನ್ನು ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಪಡಿಸುತ್ತಲೇ ಇದ್ದರು.
ಅವರಿಗೆ ಸಿನೆಮಾದಲ್ಲಿ ಅಂತಹ ಆಸಕ್ತಿಯೇನಿರಲಿಲ್ಲ. ಅವರು ಅಷ್ಟಾಗಿ ಸಿನೆಮಾಗಳನ್ನು ನೋಡುತ್ತಲೂ ಇರಲಿಲ್ಲ. ಆಕಸ್ಮಿಕವಾಗಿ ಓದಿದ ರುಡೋಲ್ಫ್ ಅರ್ನ್ ಹೈಮ್ ಅವರ ‘ದಿ ಆರ್ಟ್ ಆಫ್ ಫಿಲ್ಮ್’ ಪುಸ್ತಕ ಅವರ ಒಲವನ್ನೇ ಬದಲಿಸಿಬಿಟ್ಟಿತು. ಅದು ಸಿನೆಮಾದಲ್ಲ್ಲಿ ಇವೆಲ್ಲಾ ಸಾಧ್ಯವಾ? ಎಂಬ ಬೆರಗನ್ನು ಅವರಲ್ಲಿ ಮೂಡಿಸಿತು. ನಂತರ ವ್ಲಾಡಿಮಿರ್ ನಿಲ್ಸನ್ ಅವರ ‘ಸಿನೆಮಾ ಆಸ್ ಗ್ರಾಫಿಕ್ ಆರ್ಟ್’ ಪುಸ್ತಕ ಓದಿದರು. ನಿಲ್ಸನ್ ಖ್ಯಾತ ನಿರ್ದೇಶಕ ಐಸೆನ್‌ಸ್ಟೀನ್ ಅವರ ಶಿಷ್ಯ.
ಅಲ್ಲಿಂದ ಮುಂದೆ ಮೃಣಾಲ್ ಹೆಚ್ಚೆಚ್ಚು ಸಿನೆಮಾಗಳನ್ನು ನೋಡಲು ಪ್ರಾರಂಭಿಸಿದರು. ಹೆಚ್ಚಾಗಿ ಭಾರತೀಯ ಸಿನೆಮಾಗಳನ್ನು ನೋಡುತ್ತಿದ್ದರು. ಅವರಿಗೆ ಅವು ಇಷ್ಟವಾಗುತ್ತಿರಲಿಲ್ಲ. ಅವುಗಳನ್ನು ತುಂಬಾ ದ್ವೇಷಿಸುತ್ತಿದ್ದರು. ಸಿನೆಮಾ, ಅದರ ಕಲಾತ್ಮಕತೆ, ಇತ್ಯಾದಿ ವಿಷಯಗಳ ಬಗ್ಗೆ ಬರೆಯಲು ಪ್ರಾರಂಭಿಸಿದರು. ಕೋಲ್ಕತಾದ ಕಾಲೇಜುಗಳಲ್ಲಿ ರ್ಯಾಡಿಕಲ್ ಚಳವಳಿ ವ್ಯಾಪಕವಾಗಿದ್ದ ಕಾಲ ಅದು. ಯಾವುದೇ ಸೂಕ್ಷ್ಮ ಮನಸ್ಸಿನ ವಿದ್ಯಾರ್ಥಿಯೂ ಅದರಿಂದ ಪ್ರಭಾವಿತವಾಗದೇ ಇರುವುದಕ್ಕೆ ಸಾಧ್ಯವಿರಲಿಲ್ಲ. ಕೋಲ್ಕತಾದಲ್ಲಂತೂ ಅದು ಸಾಧ್ಯವೇ ಇರಲಿಲ್ಲ. ಮೃಣಾಲ್ ಸೇನ್ ಅದರ ಸಮ್ಮೋಹಿನಿಗೆ ಒಳಗಾದರು. ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಪ್ರದರ್ಶಿಸುತ್ತಿದ್ದ ನಾಟಕಗಳನ್ನು ನೋಡಿದರು. ಅವುಗಳು ಅವರ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಅವರು ನೇರವಾಗಿ ಇಪ್ಟಾದಲ್ಲಿ ಪಾಲ್ಗೊಳ್ಳದಿದ್ದರೂ ಅದರಿಂದ ರಂಗಭೂಮಿಯ ಚಟುವಟಿಕೆಗಳಲ್ಲಿ ಅವರಿಗೆ ಆಸಕ್ತಿ ಕೆರಳಿತು. ಅವರ ಸಾಮಾಜಿಕ ಪ್ರಜ್ಞೆ ತೀವ್ರಗೊಂಡಿತು.
ಇಂಪೀರಿಯಲ್ ಲೈಬ್ರರಿಯಲ್ಲಿ ಕುಳಿತು ಸಿಕ್ಕ ಪುಸ್ತಕಗಳನ್ನೆಲ್ಲಾ ಓದಲು ಪ್ರಾರಂಭಿಸಿದರು. ಆ ಸಮಯದಲ್ಲಿ ಅವರಿಗೆ ಋತ್ವಿಕ್ ಘಟಕ್, ಸಲೀಲ್ ಚೌಧುರಿ ಮುಂತಾದವರ ಪರಿಚಯವಾಯಿತು.
ಇವಿಷ್ಟೇ ಅವರಿಗೆ ಸಿನೆಮಾ ರಂಗಕ್ಕೆ ಕಾಲಿಡುವುದಕ್ಕೆ ಇದ್ದ ತಯಾರಿ. ಒಂದು ಕಡೆ ಐಸೆನ್‌ಸ್ಟೀನ್ ಮತ್ತು ಅವರ ಗೆಳೆಯರ ಮಾದರಿಯ ರಶ್ಯನ್ ಸಿನೆಮಾ ಕುರಿತ ಓದು. ಇನ್ನೊಂದು ಕಡೆ ಭಾರತೀಯ ಮುಖ್ಯವಾಹಿನಿಯ ಅವರು ಇಷ್ಟಪಡದ ಸಿನೆಮಾಗಳನ್ನು ನೋಡಿದ ಅನುಭವ. 1956ರಲ್ಲಿ ಯಾರೋ ಒಂದು ಕಥೆ ತಂದರು. ಸೇನ್ ಚಿತ್ರಕಥೆ ಬರೆದರು. ‘ರಾತ್ಬೋರ್’ ಸಿನೆಮಾ ಮಾಡಿಯೇ ಬಿಟ್ಟರು. ಅದೊಂದು ಕೆಟ್ಟ ಸಿನೆಮಾ. ತೆಗೆದವರಿಗೇ ನೋಡುವುದಕ್ಕೆ ನಾಚಿಕೆಯಾಗುವಂತಹ ಸಿನೆಮಾ. ‘‘ಅದೊಂದು ಘೋರ ದುರಂತ. ಅದು ಇಡೀ ಜಗತ್ತಿನಲ್ಲಿ ತಯಾರಾದ ಅತ್ಯಂತ ಕೆಟ್ಟ ಸಿನೆಮಾಗಳಲ್ಲಿ ಕೆಟ್ಟ ಸಿನೆಮಾ’’ ಅಂತ ಅವರೇ ಹೇಳಿಕೊಂಡಿದ್ದಾರೆ. ಅದನ್ನು ನೋಡಿ ಅವರಿಗೇ ಎಷ್ಟು ಕಸಿವಿಸಿಯಾಯಿತೆಂದರೆ, ಕೆಲವು ದಿನ ಮನೆಬಿಟ್ಟು ಹೊರಗೆ ಬರಲೇ ಇಲ್ಲ. ಯಾರೊಂದಿಗೂ ಮಾತೂ ಆಡುತ್ತಿರಲಿಲ್ಲ. ಎರಡು ವರ್ಷ ಏನೂ ಮಾಡಲಿಲ್ಲ. ಪಾಪ ಔಷಧಿ ಮಾರುವ ಕೆಲಸ ಬಿಟ್ಟು ಆ ಸಿನೆಮಾ ತೆಗೆದಿದ್ದರು.


ನಂತರ ‘ನೀಲ್ ಆಕಾಶೇರ್ ನೀಚೆ’ ಸಿನೆಮಾ ತೆಗೆದರು. ಅದು ಅಷ್ಟು ಕಳಪೆಯಾಗಿರಲಿಲ್ಲ. ಆದರೆ ಅಂತಹ ಒಳ್ಳೆಯ ಸಿನೆಮಾವೂ ಅಲ್ಲ. ಅವರಿಗೆ ಅದು ಅಷ್ಟೇನೂ ಇಷ್ಟವಾಗಿರಲಿಲ್ಲ. ಆದರೂ ಕೆಲವರು ಮೆಚ್ಚಿಕೊಂಡಿದ್ದರು. ಅದನ್ನು ನೋಡಿದ ನೆಹರೂ ಮೆಚ್ಚಿಕೊಂಡಿದ್ದಷ್ಟೇ ಅಲ್ಲ ಗೆಳೆಯರಿಗೆ ನೋಡಲು ಶಿಫಾರಸು ಬೇರೆ ಮಾಡುತ್ತಿದ್ದರು.
ಅವರ ಮೂರನೇ ಸಿನೆಮಾ ‘ಭೈಷೆ ಶ್ರಾವಣ್’. ಅದು ಸಿನೆಮಾ ಕ್ಷೇತ್ರದಲ್ಲಿ ಮೃಣಾಲ್ ಅವರಿಗೆ ಒಂದು ಸ್ಥಾನವನ್ನು ತಂದುಕೊಟ್ಟಿತು. ವೆನಿಸ್ ಫಿಲ್ಮೋತ್ಸವದಲ್ಲ್ಲಿ ಪ್ರದರ್ಶನಗೊಂಡಿತು. ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿತು. ಅದರಲ್ಲಿ ಸಾಮಾಜಿಕ ಅಸಮಾನತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಬಂಗಾಲದ ಬರಗಾಲದ ಚಿತ್ರಣ ಅದರಲ್ಲಿದೆ, ಆದರೆ ಅದು ಬರಗಾಲವನ್ನು ಕುರಿತ ಸಿನೆಮಾ ಅಲ್ಲ. ಒಂದು ಮಿಲಿಯನ್ ಜನ ಸತ್ತರು ಅನ್ನುವ ವರದಿ ನಿಮಗಲ್ಲಿ ಸಿಗುವುದಿಲ್ಲ. ಅಂತಹ ದೊಡ್ಡ ದುರಂತದಲ್ಲಿ ಮನುಷ್ಯ ತನ್ನಲ್ಲಿ ಉಳಿದಿರಬಹುದಾದ ಅಲ್ಪ ಸ್ವಲ್ಪಮಾನವೀಯ ಸಜ್ಚನಿಕೆಯನ್ನೂ ಹೇಗೆ ಕಳೆದುಕೊಳ್ಳುತ್ತಾನೆ ಎಂಬುದನ್ನದು ತೋರಿಸುತ್ತದೆ. ಅಲ್ಲಿ ಮುಖ್ಯವಾಗುವುದು ಮಾನವ ಸಂಬಂಧಗಳು. ಅದರ ಮೂಲಕ ನಾನು ನಡೆಯುವುದನ್ನು ಕಲಿತೆ ಎಂದು ಸೇನ್ ಹೇಳಿಕೊಂಡಿದ್ದಾರೆ.
‘ಭೈಷೆ ಶ್ರಾವಣ್’ ನಂತರ ಅವರ ಸಿನೆಮಾ ಶೈಲಿಯಲ್ಲಿ ಒಂದಿಷ್ಟು ಬದಲಾವಣೆ ಕಾಣಿಸಿಕೊಂಡಿತು. ಬಹುಶಃ ಅವರು ಅಂತರ್‌ರಾಷ್ಟ್ರೀಯ ಸಿನೆಮಾಗಳಿಗೆ ತೆರೆದುಕೊಂಡಿದ್ದು ಕಾರಣವಿರಬಹುದು. ಆ ಸಮಯದಲ್ಲಿ ಅವರು ತೆಗೆದ ‘ಭುವನ್ ಶೋಮ್’ ಭಾರತದ ಹೊಸ ಅಲೆಯ ಸಿನೆಮಾದ ಒಂದು ಪ್ರಮುಖ ಮೈಲುಗಲ್ಲು ಎನ್ನುತ್ತಾರೆ. ಅದರಲ್ಲಿ ಬಹುಪಾಲು ಜನರಿಗೆ ಅದು ಸಿನೆಮಾದ ಮೊದಲ ಅನುಭವ, ಮೊದಲ ಪ್ರಯತ್ನ. ಅದರ ಛಾಯಾಗ್ರಾಹಕ ಕೆ. ಕೆ. ಮಹಾಜನ್ ಆಗಷ್ಟೇ ಡಿಪ್ಲೊಮಾ ಮುಗಿಸಿ ಬಂದಿದ್ದರು. ನಾಯಕಿಯಾಗಿ ನಟಿಸಿರುವ ಸುಹಾಸಿನಿ ಕ್ಯಾಮರಾಕ್ಕೆ ಮುಖ ತೋರಿಸಿದ್ದು ಅದೇ ಮೊದಲ ಬಾರಿ. ಅಷ್ಟೇ ಅಲ್ಲ ಅದರಲ್ಲಿ ಕಂಠದಾನ ಮಾಡಿರುವ ಅಮಿತಾಭ್ ಬಚ್ಚನ್ ಅವರದ್ದೂ ಕೂಡ ಮೊದಲ ಚಿತ್ರ ಅದು. ಅದಕ್ಕಾಗಿ ಅವರು ಪಡೆದ 300 ರೂಪಾಯಿ ಅವರ ಚಿತ್ರ ಬದುಕಿನ ಮೊದಲ ಸಂಭಾವನೆ! ಅದರಲ್ಲಿ ಸೊಗಸಾಗಿ ನಟಿಸಿರುವ ಉತ್ಪಲ್‌ದತ್ ಅವರ ಮೊದಲ ಹಿಂದಿ ಚಿತ್ರ ಅದು. ‘ಭುವನ್ ಶೋಮ್’ ಚಿತ್ರದ ರಚನೆಯಲ್ಲೂ ಒಂದು ಹೊಸ ಪ್ರಯತ್ನವಿದೆ. ಆ್ಯನಿಮೇಷನ್ ಬಳಸಿದ್ದಾರೆ. ತಮಾಷೆಯ ಅಂಶ ಇದೆ. ಆ ಮೂಲಕ ಚಾಪ್ಲಿನ್ ಅಂಶ ಕಾಣುತ್ತದೆ. ಹಲವು ರೀತಿಯ ಪಾತ್ರಗಳು ಬರುತ್ತವೆ. ಹೀಗೆ ಹಲವು ಕಾರಣಕ್ಕೆ ಅದು ಆಸಕ್ತಿ ಕೆರಳಿಸಿತ್ತು.


60ರ ಕೊನೆಯ ಭಾಗದಲ್ಲಿ ಕೋಲ್ಕತಾದ ರಾಜಕೀಯ ವಾತಾವರಣ ಪ್ರಕ್ಷುಬ್ಧವಾಗಿತ್ತು. ಅದು ಸೇನ್ ಅವರ ರಾಜಕೀಯ ನಿಲುವು ತೀವ್ರವಾಗಿದ್ದ ಸಮಯ. ಸಿನೆಮಾ ಅವರಿಗೆ ಒಂದು ಸಾಮಾಜಿಕ ಬದಲಾವಣೆಯ ಮಾಧ್ಯಮವಾಗಿತ್ತು. ಸಿನೆಮಾವನ್ನು ಒಂದು ರಾಜಕೀಯ ಪ್ರಚಾರದ ವೇದಿಕೆಯಾಗಿ ಬಳಸಿಕೊಳ್ಳುವುದಕ್ಕೆ ಅವರಿಗೆ ಯಾವುದೇ ಹಿಂಜರಿಕೆಯೂ ಇರಲಿಲ್ಲ. ಆದರೆ ಅದಕ್ಕೊಂದು ಭಾವನಾತ್ಮಕ ಸಮರ್ಥನೆ ಇರಬೇಕೆಂದು ಭಾವಿಸಿದ್ದರು. ಸಿನೆಮಾ ಅಂದರೆ ಹೀಗೇ ಇರಬೇಕು, ಆದರ ಸ್ವರೂಪ ಹೀಗೆ ಇರಬೇಕು. ಇಂತಹ ಥಿಯರಿಗಳು ಅವರಿಗೆ ಸರಿ ಅಂತ ತೋರಲಿಲ್ಲ. ತಮ್ಮದೇ ಆದ ಕ್ರಮವನ್ನು ಕಂಡುಕೊಂಡರು. ಕೆಲವೊಮ್ಮೆ ಅದು ರಿಯಲಿಸ್ಟಿಕ್ ಮಾದರಿಯಲ್ಲಿದ್ದರೆ, ಕೆಲವೊಮ್ಮೆ ಅದು ಸರ್ರಿಯಲಿಸ್ಟ್ ಹಾದಿಯನ್ನು ಹಿಡಿಯುತ್ತಿತ್ತು. ಕಚ್ಚಾ ಡಾಕ್ಯುಮಂಟರಿಯ ದೃಶ್ಯಗಳನ್ನು ಕಥೆಯೊಳಗೆ ಹೆಣೆಯುತ್ತಿದ್ದರು. ಪ್ರಜ್ಞಾಪೂರ್ವಕವಾಗಿಯೇ ಈ ಶೈಲಿಯನ್ನು ಆರಿಸಿಕೊಂಡಿದ್ದರು.
ಈ ಅವಧಿಯಲ್ಲಿ ರ್ಯಾಡಿಕಲ್ ಚಳವಳಿಗಳನ್ನು ಪ್ರಬಲವಾಗಿ ಹತ್ತಿಕ್ಕಲಾಗುತ್ತಿತ್ತು. ಎಡಪಂಥೀಯ ಚಳವಳಿಗಾರರು ತಮ್ಮ ಮನೆಮಠಗಳನ್ನು ಬಿಟ್ಟು ತಲೆಮರೆಸಿಕೊಂಡು ಹೋಗುತ್ತಿದ್ದ ಕಾಲ ಅದು. ಯಾವುದೇ ಚಳವಳಿಗಳು, ಮೆರವಣಿಗೆಗಳು ನಡೆಯುವುದಕ್ಕೆ ಸಾಧ್ಯವೇ ಇರಲಿಲ್ಲ. ಆ ಸಮಯದಲ್ಲಿ ‘ಕಲ್ಕತ್ತಾ 71’ ಬಿಡುಗಡೆಯಾಯಿತು. ಅದು ಮಾನವನ ಶೋಷಣೆಯ ಕರಾಳ ಮುಖವನ್ನು ಚಿತ್ರಿಸುತ್ತಿತ್ತು. ಕೋಲ್ಕತಾದ ಮೂರು ಪ್ರಮುಖ ಥಿಯೇಟರುಗಳಲ್ಲಿ ಅದರ ಮೂರೂ ಶೋಗಳು, ಮೂರು ವಾರಗಳ ಕಾಲ ನಿರಂತರವಾಗಿ ಹೌಸ್ ಫುಲ್ ಆದವು.
ಅದು ಅಷ್ಟು ಯಶಸ್ವಿಯಾಗುವುದಕ್ಕೆ ಸಿನೆಮಾ ಮಾತ್ರ ಕಾರಣವಾಗಿರಲಿಲ್ಲ. ಆ ಸಮಯ ಹಾಗಿತ್ತು. ಅದೊಂದು ರೀತಿ ಜನ ಟಿಕೆಟ್ ಕೊಂಡು ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಿದ ಅನುಭವ. ಪೊಲಿೀಸರು ಎಷ್ಟೋ ವಾಂಟೆಡ್ ಜನರನ್ನು ಸಿನೆಮಾ ಕ್ಯೂನಲ್ಲಿ ಅರೆಸ್ಟ್ ಮಾಡಿಕೊಂಡು ಹೋಗುತ್ತಿದ್ದರು. ಸೇನ್ ಎರಡು ಮೂರು ವರ್ಷಗಳ ಹಿಂದಿನಿಂದಲೇ ಕೋಲ್ಕತಾದಲ್ಲಿ ನಡೆಯುತ್ತಿದ್ದ ಹಲವಾರು ಮೆರವಣಿಗೆಗಳನ್ನು ಚಿತ್ರಿಸಿಕೊಂಡಿದ್ದರು. ಅವೆಲ್ಲವನ್ನೂ ಆ ಚಿತ್ರದಲ್ಲಿ ಬಳಸಿಕೊಂಡಿದ್ದರು. ಅದರಲ್ಲಿ ಚಿತ್ರಿತರಾಗಿದ್ದ ಎಷ್ಟೋ ಹುಡುಗರು ಪೊಲಿೀಸರಿಂದ ಕೊಲೆಗೀಡಾಗಿದ್ದರು. ಅವರನ್ನು ನೋಡಲು ಅವರ ಮನೆಯವರು, ಸ್ನೇಹಿತರು ಸಿನೆಮಾಕ್ಕೆ ಬರುತ್ತಿದ್ದರು. ಮತ್ತೆ ಮತ್ತೆ ನೋಡುತ್ತಿದ್ದರು. ಎದೆಬಿರಿಯುವಂತೆ ಅಳುತ್ತಿದ್ದರು. ಅವರನ್ನು ಸಮಾಧಾನ ಪಡಿಸುವುೇ ಒಂದು ಸಾಹಸದ ಕೆಲಸವಾಗಿತ್ತು.

Writer - ಟಿ. ಎಸ್. ವೇಣುಗೋಪಾಲ್

contributor

Editor - ಟಿ. ಎಸ್. ವೇಣುಗೋಪಾಲ್

contributor

Similar News

ಜಗದಗಲ
ಜಗ ದಗಲ