ಆತ್ಮಶೋಧನೆಯತ್ತ ಸಾಗಲಿ ವಿಜ್ಞಾನ
ವಿಜ್ಞಾನ ತನ್ನನ್ನು ತಾನು ಕವಿತ್ವ, ತತ್ವಶಾಸ್ತ್ರ, ರಾಜಕೀಯಾತ್ಮಕ ದೃಷ್ಟಿಕೋನಗಳಿಂದ ನೋಡಿಕೊಳ್ಳಬೇಕಾದ ಅಗತ್ಯ ಇದೆ. ಪ್ರಸ್ತುತ ಕಾಲದಲ್ಲಂತೂ ಇದು ತುಂಬಾ ಅಗತ್ಯ. ಮೊದಲು ಪ್ರಕೃತಿಯತ್ತ ನಮ್ಮ ದೃಷ್ಟಿಕೋನ ಕುರಿತು ವಿವೇಚಿಸಿರಿ. ಆಧುನಿಕ ವಿಜ್ಞಾನಶಾಸ್ತ್ರ ಬೆಕೊನಿಯನ್ ಅನುಭವವಾದ, ಕಾರ್ಟಿಸಿಯನ್ ವಿಚಾರವಾದ, ನ್ಯುಟೋನಿಯನ್, ಡಾರ್ವಿನಿಯನ್ ಪರಿವರ್ತನಾವಾದ, ನವ್ಯ ಭೌತಶಾಸ್ತ್ರ ಸಂಶೋಧನೆಗಳ ಮೂಲಕ ಅವಿರ್ಭವಿಸಿ ಅಭಿವೃದ್ಧಿಗೊಳ್ಳುತ್ತದೆ.
ಜಲಂಧರ್ (ಪಂಜಾಬ್) ಇಂಡಿಯನ್ ವಿಜ್ಞಾನ ಕಾಂಗ್ರೆಸ್ 106ನೇ ವಾರ್ಷಿಕ ಸಮಾವೇಶ ಮುಗಿಯಿತು. ಹೊಸ ಆವಿಷ್ಕಾರಗಳು ಹೊಸ ಕಲ್ಪನೆಗಳು, ಅಂಕುರ ಭಾವಗಳ ಕುರಿತು ಸ್ಫೂರ್ತಿದಾಯಕವಾದ ಚರ್ಚೆಗಳು ಜರುಗಿದವು. ಮಾನವ ಸಮಾಜಗಳನ್ನು ಸಂಕೀರ್ಣ ಸಮಸ್ಯೆಗಳಿಂದ ಬಿಡುಗಡೆ ಮಾಡಿ, ನಾಗರಿಕ ಪುರೋಗಮನವನ್ನು ಸಾಧ್ಯವಾಗಿಸಿದ್ದು, ಆಗಿಸುತ್ತಿರುವುದು ಶಾಸ್ತ್ರ ವಿಜ್ಞಾನವೇ (ಸೈನ್ಸ್). ವಿಮರ್ಶಾತ್ಮಕ ಪರಿಶೀಲನೆಗಳು, ಸಸತ ಪ್ರಯೋಗಗಳೊಂದಿಗೆ ಸಂಪೂರ್ಣ ಸ್ವತಂತ್ರ ಸಮಾಜಕ್ಕೆ ಸೈನ್ಸ್ ಬುನಾದಿ ಹಾಕಿತು. ‘ವೈಜ್ಞಾನಿಕ ದೃಷ್ಟಿಕೋನ ಇಲ್ಲವೇ ಸ್ಫೂರ್ತಿ ನಮ್ಮ ಜೀವನ ವಿಧಾನ ಆಗಬೇಕು. ನಮ್ಮ ಆಲೋಚನಾ ಕ್ರಮವಾಗಬೇಕು. ನಮ್ಮ ಕಾರ್ಯಾಚರಣೆ ಆಗಬೇಕು. ನಮ್ಮ ಜೊತೆಯವರೊಂದಿಗಿನ ಸಂಬಂಧಗಳಿಗೆ ಅದು ಪ್ರತಿಪಾದಿತವಾಗಬೇಕು’ ಎಂದು ಜವಾಹರ್‌ಲಾಲ್ ನೆಹರೂ ಅಂದರು.
ವೈಜ್ಞಾನಿಕ ವಿವೇಚನೆ, ಶೋಧನೆಗಳು ಕೇವಲ ಭೌತ, ಜೀವ ಶಾಸ್ತ್ರಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳ ವೃತ್ತಿಯಷ್ಷೇ ಅಲ್ಲ. ಸಮಾಜ ವಿಜ್ಞಾನಗಳಲ್ಲಿನ ಸಂಶೋಧನಾ ಪದ್ಧತಿಗಳನ್ನು ಕೂಡಾ ವಿಜ್ಞಾನ ಪ್ರಭಾವಿತಗೊಳಿಸುತ್ತದೆ. ಅವುಗಳ ಮೇಲೆ ಪ್ರಭಾವೀ ಚರ್ಚೆಗಳನ್ನು ಉತ್ತೇಜಿಸುತ್ತಾ ಆ ಶಾಸ್ತ್ರಗಳ ಪರಿಪೂರ್ಣತೆಗೆ ನೆರವಾಗುತ್ತದೆ. ಆದರೆ ವಿಜ್ಞಾನ ಪ್ರಸ್ಥಾನ ಸದಾ ಸುಗಮವಾಗಿ, ಸರಳವಾಗಿ ಸಾಗಲಿಲ್ಲ. ಹಾಗೆ ಆ ಪ್ರಸ್ಥಾನ ಪ್ರಗತಿ ಕುರಿತಾದ ಕಥನಗಳೂ ಸದಾ ವಿಶ್ವಾಸಾರ್ಹವಾಗಿಲ್ಲ. 18ನೇ ಶತಮಾನದ ಯುರೋಪಿಯನ್ ಆಲೋಚನಾಪರರು ವಿವೇಚನೆಯ ಮೇಲೆ ಆಧಾರಗೊಂಡ ಸಮಾಜ ನಿರ್ಮಿಸಲು ಆಶಿಸಿದರು. ವೈಚಾರಿಕ ಆಲೋಚನೆಗಳಿಗೆ ವಿಶೇಷವಾಗಿ ನೆರವಾದ ಶಾಸ್ತ್ರವಿಜ್ಞಾನವನ್ನು ಒಂದು ವೌಲಿಕ ಸತ್ಯ ಎಂದು, ವಿವೇಚನಾಯುತ ಸಮಾಜಕ್ಕೆ ಬುನಾದಿ ಎಂದು ಭಾವಿಸಿದರು. ಮಾನವ ವ್ಯವಹಾರಗಳಲ್ಲಿ ನಿಶ್ಚಿತತ್ವವನ್ನು ಬೆಳೆಸಿಕೊಳ್ಳುವುದಕ್ಕೆ, ಭವಿಷ್ಯದ ಕುರಿತು ವಿಶ್ವಾಸಾರ್ಹ ಆಧಾರಗಳೊಂದಿಗೆ, ಒಂದು ಖಚಿತವಾದ ನಿಲುವಿಗೆ ಬರುವುದಕ್ಕೆ ಶಾಸ್ತ್ರ ವಿಜ್ಞಾನವೇ ಆಧುನಿಕರಿಗೆ ಆಸರೆಯಾಯಿತು. ಆದಾಗ್ಯೂ ಜ್ಞಾನೋತ್ಪತ್ತಿಗೆ ಅನಿವಾರ್ಯವಾಗಿ ಗಂಟು ಬಿದ್ದಿರುವ ರಾಜಕೀಯ, ಆರ್ಥಿಕ ಪರಿಸ್ಥಿತಿಗಳಿಂದ ವಿಜ್ಞಾನ ತನಗೆ ತಾನು ಸ್ವತಂತ್ರವಾಗಿ ವ್ಯವಹರಿಸಲಾರದು. ರಾಜಕೀಯ, ಆರ್ಥಿಕ ಅಂಶಗಳಿಂದ ಅದು ನಿತ್ಯ ಪ್ರಭಾವಿತವಾಗುತ್ತದೆ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ಶಾಸ್ತ್ರ ವಿಜ್ಞಾನವನ್ನು ಅವೆರಡು ಅಂಶಗಳು ನಿತ್ಯ ನಿಯಂತ್ರಿಸುತ್ತಿರುತ್ತವೆ.
ವಿವೇಚನಾ ರಹಿತ ‘ಅಭಿವೃದ್ಧಿ’ ಕಾರ್ಯ ಕಲಾಪಗಳಿಗೆ, ಸೇನಾ ಪಟುತ್ವವನ್ನು ಹೆಚ್ಚಿಸುವ ಪ್ರಯತ್ನಗಳಿಗೆ ನ್ಯಾಯಬದ್ಧತೆ ಉಂಟಾಗಿಸುವುದಕ್ಕೆ, ಆಧುನಿಕ ದೇಶ- ರಾಜ್ಯಗಳು ಶಾಸ್ತ್ರವಿಜ್ಞಾನಕ್ಕೆ ಅಪಾರ ಪ್ರಾಧಾನ್ಯ ನೀಡಿವೆ. ಅಧಿಕ ಉತ್ಪತ್ತಿ ಸಾಧಿಸುವುದಕ್ಕೆ, ಅತ್ಯಾಧುನಿಕ ಬಂಡವಾಳಶಾಹಿ ಸಮಾಜಗಳ ವಸ್ತುದಾಹವನ್ನು ತೀರಿಸುವುದಕ್ಕೆ ಮಾರುಕಟ್ಟೆ, ಶಾಸ್ತ್ರ ವಿಜ್ಞಾನ ಅಗತ್ಯವಾಯಿತು. ಪ್ರಜೆಗಳನ್ನು ಅನೇಕ ರೀತಿಗಳಲ್ಲಿ ನಿಯಂತ್ರಿಸುವುದಕ್ಕೆ ಅಗತ್ಯವಾದ ಸಾಧನಗಳನ್ನು ತಕ್ಷಣವೇ ಪೂರೈಸುವುದಕ್ಕೆ ಸದ್ಯದ ನಿಘಾಯುಗದ ಆಡಳಿತ ವರ್ಗಕ್ಕೂ ಶಾಸ್ತ್ರ ವಿಜ್ಞಾನ ಎಷ್ಟೋ ಅಗತ್ಯವಾಗಿದೆ.
ಹೇಳಲು ಬಂದಿದ್ದೇನೆಂದರೆ ಶಾಸ್ತ್ರವಿಜ್ಞಾನ ಸಂಶೋಧನೆಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ರಾಜಕೀಯ ಅಗತ್ಯಗಳಿಂದ ಪ್ರಭಾವಿತವಾಗುತ್ತಿರುತ್ತವೆ. ರಾಜಕೀಯ ಆಧಿಪತ್ಯಗಳಿಂದ ನಿಯಂತ್ರಿಸಲ್ಪಡುತ್ತಿರುತ್ತವೆ. ಮತ್ತಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ ‘ವಿಮರ್ಶನಾ ಸಿದ್ಧಾಂತ ಕರ್ತರು’ (ಕ್ರಿಟಿಕಲ್ ಥಿಯರಿಸ್ಟ್) ಹೆಚ್ಚು ಕಡಿಮೆ ಶತಾಬ್ಧದ ಕೆಳಗೆ ಜರ್ಮನಿಯಲ್ಲಿನ ಫ್ರಾಂಕ್‌ಫರ್ಟ್‌ನಲ್ಲಿ ಎಡಪಕ್ಷೀಯ ಮೇಧಾವಿಗಳು ಅಭಿವೃದ್ಧಿಪಡಿಸಿದ ಸಿದ್ಧಾಂತ) ವಾದಿಸಿದಂತೆ ಶಾಸ್ತ್ರವಿಜ್ಞಾನದ ವಿವೇಚನಾ ವಿವೇಕಗಳಿಗಿಂತ ಅದರ ಆಧಾರದಿಂದ ಅವಿರ್ಭವಿಸಿದ ತಾಂತ್ರಿಕತೆಗಳ ಪ್ರಯೋಜನಗಳೇ ಮಾನವ ಸಮಾಜಗಳನ್ನು ಎಲ್ಲೆಡೆಗಳಲ್ಲೂ ಆಕರ್ಷಿಸುತ್ತವೆ. ತತ್ಪರಿಣಾಮವಾಗಿಯೇಆಡಳಿತ ವರ್ಗಗಳಿಗೆ ಶಾಸ್ತ್ರವಿಜ್ಞಾನ ಹತ್ತಿರವಾಗಿದೆ. ಆ ವರ್ಗಗಳ ಆಧಿಪತ್ಯಕ್ಕೆ ಒಳಗಾಗಿರುತ್ತದೆ.
ಆ ಕಾರಣದಿಂದಲೇ ಮಾನವೀಯ, ಸಾಮಾಜಿಕ ಶಾಸ್ತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಸಹ ವಿಜ್ಞಾನ ಆಚರಣೆ ಮೇಲೆ ಬೌದ್ಧಿಕ ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ವೈಜ್ಞಾನಿಕ ಪದ್ಧತಿ ಕುರಿತು ನಿಶಿತವಾಗಿ ಆಲೋಚಿಸುತ್ತಿದ್ದಾರೆ. ಇದು ಎಷ್ಟಾದರೂ ಅಗತ್ಯ- ಮುಖ್ಯವಾಗಿ ನಮ್ಮ ಸಮಾಜದಲ್ಲಿ ವಿಮರ್ಶಾತ್ಮಕ ಆಲೋಚನೆಗಳಿಗಿಂತ ಮತೀಯ ವೌಢ್ಯಗಳಿಗೆ ನಮ್ಮ ಆಡಳಿತಗಾರರು ಪ್ರಾಧಾನ್ಯ ನೀಡುತ್ತಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ವಿಜ್ಞಾನ ಆಚರಣೆಯತ್ತ ನಮ್ಮ ಬದುಕಿನ ಪರಿಸರದಲ್ಲಿ ಜಾಗ ಮಾಡಿಕೊಳ್ಳತ್ತಿರುವವುಗಳತ್ತ ನಿರ್ಲಕ್ಷದಿಂದ ಇರುವುದು ಸಾಧ್ಯವಾ?
ವಿಜ್ಞಾನದೊಂದಿಗೆ ಯುವ ಭಾರತೀಯರ ರೀತಿ ನೀತಿಗಳು ಪ್ರಾಥಮಿಕವಾಗಿಯೇ ಲೋಪಭೂಯಿಷ್ಟವಾದವು. ಜ್ಞಾನ ಸಂಪ್ರದಾಯಗಳಲ್ಲಿನ ‘ಸೈನ್ಸ್ - ಹ್ಯುಮಾನಿಟೀಸ್’ ಎಂಬ ಒಂದು ವಿಚಿತ್ರ ಹೈರಾರ್ಕಿಯ ಕಾರಣದಿಂದ ಪಿಸಿಎಂ-( ಫಿಸಿಕ್ಸ್, ಕೆಮೆಸ್ಟ್ರಿ, ಮೆಥಮ್ಯಾಟಿಕ್ಸ್‌ಗಳು) ವಿಶಿಷ್ಟವೂ, ಅತ್ಯುನ್ನತವಾದವೂ ಎಂದು ನಮ್ಮ ಯುವಜನರು ನಂಬುತ್ತಾರೆ. ಆ ಸಜ್ಜೆಕ್ಟ್‌ಗಳೇ ತಮ್ಮ ಭಾವೀ ಪ್ರಗತಿಗೆ ಬೌದ್ಧಿಕ ಬಂಡವಾಳ ಎಂದು ಭಾವಿಸುತ್ತಿದ್ದಾರೆ. ಇಂತಹ ಭಾವಗಳಿಂದ ಆ ಯುವ ಮನಸ್ಸುಗಳು ಮುಚ್ಚಿಕೊಂಡು ಹೋಗುತ್ತಿವೆ. ಯುವ ಭಾರತೀಯ ಬೌದ್ಧಿಕತೆ ಯಾಂತ್ರಿಕವಾಗುತ್ತಿದೆ. ದೇಶದ ರಾಜಕೀಯಗಳು, ಸಂಸ್ಕೃತಿ, ನೈತಿಕ ಸಂದಿಗ್ಧಗಳಿಂದ ಸೆನ್ಸನ್ನು ಬೇರ್ಪಡಿಸುತ್ತಿದ್ದಾರೆ. ಜೀವನೋಪಾಯಕ್ಕೆ ಯಾವ ವೃತ್ತಿಯನ್ನು ಇಲ್ಲವೇ ವ್ಯಾಪಾರವನ್ನು ಆರಿಸಿಕೊಳ್ಳಬೇಕೆಂಬ ಸತತ ಚಿಂತೆಯಿದ ವಿಜ್ಞಾನವನ್ನು ಒಂದು ಏಕೀಕೃತ. ‘ಎಫ್‌ಐಐಟಿಜೆಇಇ/ ಆಕಾಶ್’ ಬ್ರಿಲಿಯಂಟ್ ಮಂತ್ರವಾಗಿ ಕುಗ್ಗಿಸುತ್ತಿದ್ದಾರೆ. ವಿಜ್ಞಾನ ಎನ್ನುವುದು ಒಂದು ಸಾಮಾನ್ಯ ಸಮಸ್ಯೆಗಳ ಸಮೂಹ ಎಂದು, ಗೈಡ್ ಪುಸ್ತಕಗಳು, ಮಾಕ್‌ಟೆಸ್ಟ್ ಮೂಲಕ ಅವನ್ನು ಪರಿಹರಿಸಬಹುದು ಎಂದು ಭಾವಿಸುತ್ತಿದಾರೆ.
ಈ ಕ್ರಮದಲ್ಲಿ ವಿಜ್ಞಾನ ತನ್ನ ಸ್ವಯಂಸಿದ್ಧ ಸ್ಫೂರ್ತಿಯನ್ನು ಕಳೆದುಕೊಳ್ಳ್ಳುತ್ತಿದೆ. ಕೇವಲ ಒಂದು ಕೌಶಲವಾಗಿ ಕುಗ್ಗಿಸಲ್ಪಟ್ಟಿದ್ದರಿಂದ ಯುವ ಮನಸ್ಸುಗಳಲ್ಲಿ ಸೃಜನಶೀಲತೆ, ಆಲೋಚನಾಶಕ್ತಿಗಳು ಕಾಣೆಯಾಗುತ್ತಿವೆೆ.
ಇಂದು ಆದರ್ಶ ಶಿಕ್ಷಣಸಂಸ್ಥೆ ಎಂದು ಹೆಸರಾದ ಯಾವ ವಿಜ್ಞಾನ, ಟೆಕ್ನಾಲಜಿ, ಇಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್ ಆದರೂ ಸತ್ಯೇಂದ್ರನಾಥ ಬೋಸ್‌ರನ್ನು, ಸಿ.ವಿ. ರಾಮನ್‌ರನ್ನು ಸೃಷ್ಟಿಸಿಲ್ಲ. ಸರಕಾರ ಅತಿ ಪ್ರಾಧಾನ್ಯ ನೀಡುತ್ತಿರುವ ಐಐಟಿಗಳು ಸಹ ಕಾರ್ಪೊರೇಟ್ ಕಂಪೆನಿಗಳಿಗೆ ಅಗತ್ಯವಾದ ಟೆಕ್ನಾಲಜಿಸ್ಟ್‌ಗಳನ್ನು ಮಾತ್ರ ಒದಗಿಸುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ಸಹ ಕೆಲವು ಮಂದಿ ಅಸಾಮಾನ್ಯ ಪ್ರತಿಭಾವಂತರ ಹೊರತು, ವಿಜ್ಞಾನಿಗಳು ತಮಗೆ ತಾವು ಪ್ರಯೋಗ ಶಾಲೆಗಳಿಗೆ ಸೀಮಿತಗೊಳ್ಳುತ್ತಿದ್ದಾರೆ. ವಿಜ್ಞಾನ- ಸಮಾಜಗಳ ಮಧ್ಯೆ ಸಂಬಂಧ ಕುರಿತು ಅಪರೂಪಕ್ಕೆ ಮಾತನಾಡುತ್ತಿದ್ದಾರೆ. ವಿಶೇಷ ಅಧ್ಯಯನಗಳು, ವೃತ್ತಿ ರೀತ್ಯಾ ‘ನಿಷ್ಪಕ್ಷಪಾತ’ ಹೆಸರಿನ ಸಮಾಜದಿಂದ ಸ್ವತಃ ಬೇರ್ಪಡೆಯಾಗುತ್ತಿದ್ದಾರೆ. ಈ ಬೇರ್ಪಡೆ ಒಂದು ವೌನ ಸಂಸ್ಕೃತಿಯನ್ನು ಸೃಷ್ಟಿಸುತ್ತದೆ. ಸಮಾಜದ ಅಗತ್ಯಗಳನ್ನು ಅಲಕ್ಷ ಮಾಡುವುದಕ್ಕೆ ಕಾರಣವಾಗುತ್ತದೆ. ಇವೆಲ್ಲಾ ರಾಜಕೀಯ ಆಧಿಪತ್ಯಗಳಿಂದ ಸ್ವತಂತ್ರಗೊಂಡು ವ್ಯವಹರಿಸುವುದಲ್ಲ. ಖಚಿತ ವಾಗಿ ಹೇಳಬೇಕೆಂದರೆ ಯಥಾಸ್ಥಿತಿಯನ್ನು ಮುಂದುವರಿಸುವ, ಸಮರ್ಥಿಸುವ ಮತ್ತೊಂದು ರೀತಿಯ ರಾಜಕೀಯವನ್ನು ಅನುಸರಿಸುವುದೇ ಆಗುತ್ತದೆ. ಹಾಗಾಗಿಯೇ ಉತ್ತಮ ವಿಜ್ಞಾನಿಗಳು, ತಂತ್ರಜ್ಞರು ಸಹ ಹೊಲೊಕಾಸ್ಟ್ (ನರಮೇಧ)ಗಳನ್ನು ಯಶಸ್ವಿಗೊಳಿಸುವುದಕ್ಕೆ ಹಿಂಜರಿಯರು ಎಂದು ಜಿಗ್ಮೆಂಟ್ ಬೌಮನ್ ವ್ಯಾಖ್ಯಾನಿಸುತ್ತಾರೆ.
ವಿಜ್ಞಾನ ತನ್ನನ್ನು ತಾನು ಕವಿತ್ವ, ತತ್ವಶಾಸ್ತ್ರ, ರಾಜಕೀಯಾತ್ಮಕ ದೃಷ್ಟಿಕೋನಗಳಿಂದ ನೋಡಿಕೊಳ್ಳಬೇಕಾದ ಅಗತ್ಯ ಇದೆ. ಪ್ರಸ್ತುತ ಕಾಲದಲ್ಲಂತೂ ಇದು ತುಂಬಾ ಅಗತ್ಯ. ಮೊದಲು ಪ್ರಕೃತಿಯತ್ತ ನಮ್ಮ ದೃಷ್ಟಿಕೋನ ಕುರಿತು ವಿವೇಚಿಸಿರಿ. ಆಧುನಿಕ ವಿಜ್ಞಾನಶಾಸ್ತ್ರ, ಬೆಕೊನಿಯನ್ ಅನುಭವವಾದ, ಕಾರ್ಟಿಸಿಯನ್ ವಿಚಾರವಾದ, ನ್ಯುಟೋನಿಯನ್ ಸಂಕೋಚನವಾದ, ಡಾರ್ವಿನಿಯನ್ ಪರಿವರ್ತನಾವಾದ, ನವ್ಯ ಭೌತಶಾಸ್ತ್ರ ಸಂಶೋಧನೆಗಳ ಮೂಲಕ ಅವಿರ್ಭವಿಸಿ ಅಭಿವೃದ್ಧಿಗೊಳ್ಳುತ್ತದೆ.
ಆದರೆ ಪ್ರಕೃತಿ ಕೇವಲ ‘ಸಂಪನ್ಮೂಲ’ ಮಾತ್ರವೇ ಎಂಬ ಪ್ರಶ್ನೆ ಉಳಿದು ಹೋಗಿದೆ. ನಮ್ಮ ಹೊರಗಡೆ ಇರುವ ಪ್ರಕೃತಿಯನ್ನು ಪರಿಶೀಲಿಸಿ, ವಿವರಿಸಿ, ಅಣುಗಳು ಇಲ್ಲವೇ ವಂಶವಾಹಿ ಮೊದಲಾದ ಪ್ರಾಥಮಿಕ ಅಂಶಗಳಾಗಿ ಕುಗ್ಗಿಸಿ ಗುರಿಗಳನ್ನು ನಿರ್ದೇಶಿಸಿಕೊಂಡು ಕಾರ್ಯಸಾಧನೆಗೆ ಬಳಸಿಕೊಳ್ಳುವುದಕ್ಕಷ್ಟೇನಾ ಪ್ರಕೃತಿ ಇರುವುದು? ಇಲ್ಲವೇ ಅದು ತನ್ನ ಸ್ವಯಂ ಸ್ಫೂರ್ತಿ, ಚೈತನ್ಯಗಳಿಂದ ರಾರಾಜಿಸುತ್ತಿದೆಯಾ? ಮಾನವನ ಬೌದ್ಧಿಕ ನಿಶಿತ ದೃಷ್ಟಿಯಾಚೆಗಿರುವ ಪ್ರಕೃತಿ ಸೌಂದರ್ಯವನ್ನು ಆಂಗ್ಲ ಮಹಾಕವಿ ವಿಲಿಯಂ ವರ್ಡ್ಸ್‌ವರ್ತ್ ದರ್ಶಿಸಿದ ರೀತಿಯಲ್ಲಿ ನಾವು ಸಹ ಅದನ್ನು ಆತ್ಮೀಯತೆಯಿಂದ ವೀಕ್ಷಿಸಬಲ್ಲವರಾಗ್ತೇವಾ?
ಶಾಸ್ತ್ರ ವಿಜ್ಞಾನ-ಕವಿತ್ವಗಳ ಮಧ್ಯೆ ಸಂವಾದ ಪ್ರಕೃತಿಯತ್ತ ಮತ್ತಷ್ಟು ಅರ್ಥಪೂರ್ಣವಾದ ಪರಿಸರವಾದ ದೃಷ್ಟಿಕೋನವನ್ನು ಅನುಸರಿಸುವುದಕ್ಕೆ ನಮಗೆ ವಿಶೇಷವಾಗಿ ನೆರವಾಗಬಲ್ಲದು. ಬಯೋ-ಮೆಡಿಸಿನ್(ಆಧುನಿಕ ಜೀವವೈದ್ಯಶಾಸ್ತ್ರ) ಮೃತ್ಯು ಅನುಭವವನ್ನು ಹೇಗೆ ಬದಲಾಯಿಸಿತೋ ಆಲೋಚಿಸಿರಿ. ಮನುಷ್ಯನ ಸಾವು ಇಂದು ವೈದ್ಯ ವಿಜ್ಞಾನ ಪರವಾಗಿ ಒಂದು ಪರ್ಯವೇಕ್ಷಣಾ ಪ್ರಕ್ರಿಯೆಯಾಗಿ ಬದಲಾಗಿ ಹೋಗಲಿಲ್ಲವೇ? ಐಸಿಯುನಲ್ಲಿ ನವೀನ ವೈದ್ಯಯಂತ್ರಗಳ ಮಧ್ಯೆ ನೀವು ನಿಮ್ಮ ಅಂತಿಮ ಕ್ಷಣಗಳನ್ನು ಕಳೆಯುವಿರಿ. ಹಾಗಾದರೆ ಮತ್ತೊಂದು ರೀತಿಯಲ್ಲಿ ಸತ್ತುಹೋಗುವುದಕ್ಕೆ ಸಾಧ್ಯವಿಲ್ವಾ? ಹಣ್ಣೆಲೆ ಹೇಗೆ ಉದುರಿ ಹೋಗುತ್ತೋ ಗಮನಿಸಿರಿ. ವಿವಿಧ ವರ್ಣ ಸಂಯೋಜನೆಗಳೊಂದಿಗೆ ಅಸ್ತಮಿಸುತ್ತಿರುವ ಸೂರ್ಯನ ನೋಡಿರಿ. ಮತ್ತೆ ಬದುಕುವುದು, ಸಾಯುವುದು ಕುರಿತಾದ ಆಧ್ಯಾತ್ಮಿಕ ಚರ್ಚೆಗಳಲ್ಲಿ ಬಯೋಮೆಡಿಸಿನ್ ಭಾಗಿಯಾಗುವುದಾದರೆ!? ಇಂಥ ಪ್ರಶ್ನೆ ಕೇಳುವುದು ಎಂದರೆ ಮತ್ತೊಂದು ರೀತಿ ವಿಜ್ಞಾನ ಆಚರಣೆಯನ್ನು ಸಾಧ್ಯವಾಗಿಸುವುದೇ ಎನ್ನಬಹುದು.
ಚರಿತ್ರೆ ಕಾಂಗ್ರೆಸ್‌ನಂತೆ ಅಲ್ಲದೇ ವಿಜ್ಞಾನ ಕಾಂಗ್ರೆಸ್ ದೇಶ ಗಮನದಲ್ಲಿ ಒಂದು ಪ್ರಮುಖ ಘಟನೆ. ಇದು ವಿಸ್ಮಯಕರ ವಿಷಯವೇನಲ್ಲ. ಏಕೆ? ಆಧುನಿಕತೆಯಲ್ಲಿ ಶಾಸ್ತ್ರವಿಜ್ಞಾನಕ್ಕೆ ಒಂದು ಉನ್ನತ ಸ್ಥಾನವಿದೆ ಎಂದು ಜಗತ್ತು ನಂಬಿದೆ. ಮಾನವ ಸಮಾಜಗಳು ವಿಜ್ಞಾನವನ್ನು ಹಾಗೆ ಅವಗತ ಮಾಡಿಕೊಂಡಿದ್ದಾಗ್ಯೂ ಸಾಮಾಜಿಕ ತತ್ವವೇತ್ತರು ಆ ಆಧಿಪತ್ಯ ಭಾವನೆಯನ್ನು ಸದಾ ಅಂಗೀಕರಿಸಿದರು. ಪಾಲ್ ಫೆಯಿರಾಬೆನ್ಡ್ ಇದಕ್ಕೊಂದು ಉದಾಹರಣೆ. ವಿಜ್ಞಾನ ವೈಚಾರಿಕತೆಯನ್ನು ನಿರಾಕರಿಸಿ ಅರಾಜಕ ಜ್ಞಾನ ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕೂಂತ ಆತ ವಾದಿಸಿದ. ಆಧುನಿಕಾಂತರವಾದಿಗಳು ಪುರಾಣಕಥನಗಳ ಪುನರ್ ನಿರ್ಮಾಣದೊಂದಿಗೆ ವಿಜ್ಞಾನ ಆಧಿಪತ್ಯವನ್ನು ತಳ್ಳಿ ಹಾಕುವುದಕ್ಕೆ ನೋಡಿದರು. ಆಶಿಷ್‌ನಂದಿ ಮತ್ತಿತರರು ನಯಾ ಗಾಂಧೀಯವಾದ ಆದರ್ಶಗಳ ಸ್ಫೂರ್ತಿಯೊಂದಿಗೆ ವಿಜ್ಞಾನ, ಆಧಿಪತ್ಯ, ಹಿಂಸೆಗಳ ಕುರಿತು ಮಾತನಾಡಿದರು.
ವಿಜ್ಞಾನ ತನ್ನ ಸ್ವಂತ ಆಲೋಚನೆಗಳನ್ನೂ, ಕಾರ್ಯ ಕಲಾಪಗಳನ್ನು ಅಂತರ್‌ದೃಷ್ಟಿಯಿಂದ ವಿಮರ್ಶಿಸಿಕೊಳ್ಳುವುದು ಪ್ರಸ್ತುತ ಕಾಲದ ಅಗತ್ಯ ಎಂದು ಸಾಮಾಜಿಕ ಆಚರಣ ವಿದ್ಯಾರ್ಥಿಯಾಗಿ ನಾನು ನಂಬುತ್ತಿರುವೆ. ವಿಜ್ಞಾನ ತನ್ನನ್ನು ತಾನು ಆಳವಾಗಿ ಪರಿಶೀಲಿಸಿಕೊಳ್ಳಬೇಕು. ‘ಸುವ್ಯವಸ್ಥಿತ ಸಂಶಯವಾದ’ ವಿಜ್ಞಾನ ಗುಣ ಎಂದು ಅಮೆರಿಕನ್ ಸಮಾಜ ವಿಜ್ಞಾನಿ ರಾಬರ್ಟ್ ಮೆರ್ಟನ್ ಅಂದಿದ್ದಾರೆ. ಏಕೆಂದರೆ ವಿಜ್ಞಾನ ಯಾವುದನ್ನು ಯಥಾರೀತ್ಯಾ ಒಪ್ಪದು. ಅನುಭವ ಪೂರ್ವಕ ಜ್ಞಾನದೊಂದಿಗಷ್ಟೆ ಯಾವುದನ್ನಾದರೂ ಒಪ್ಪುತ್ತದೆ. ಈ ಕಾರಣದಿಂದಲೇ ಕಾಲ್ಪನಿಕ ಕತೆಗಳು, ಮೂಢನಂಬಿಕೆಗಳಿಂದ ವಿಜ್ಞಾನ ತನ್ನನ್ನು ತಾನು ಬೇರ್ಪಡಿಸಿಕೊಳ್ಳುತ್ತದೆ.
20ನೇ ಶತಮಾನದಲ್ಲಿ ದುಸ್ಸಾಹಸಗಳಿಗೆ ಮುಂದಾದ ಸಮಾಜಗಳು ಎಂತೆಂಥ ಬೀಭತ್ಸಗಳನ್ನು ಸೃಷ್ಟಿಸಿದವೋ ನಾವು ಬಲ್ಲೆವು. ಅತಿ ವಾಸ್ತವಿಕ ಜಗತ್ತಿಗೆ ಸಂಬಂಧಿಸಿದ ಎಲ್ಲಾ ವಿಧಗಳ ಮೀಡಿಯಾ ಸಿಮ್ಯುಲೇಶನ್ಸ್ (ಅಸಲು ಇಲ್ಲದ ನಕಲಿ)ನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಸರ್ಜಿಕಲ್ ದಾಳಿಗಳು, ರಾಕೆಟ್ ಉಡಾವಣೆಗಳು, ಕ್ರಿಕೆಟ್ ಸೆಂಚುರಿ ಇತ್ಯಾದಿಗಳು ಟಿವಿಯಲ್ಲಿ ಒಂದೇ ಮಟ್ಟದಲ್ಲಿ ದೊಡ್ಡದಾಗಿ ಕಾಣಿಸುತ್ತವೆ. ನಿತ್ಯ ಅನೂಹ್ಯ ತಾಂತ್ರಿಕತೆಗಳು ಆವಿಷ್ಕೃತಗೊಳ್ಳುತ್ತಿರುವ ಈ ಕಾಲದಲ್ಲಿ ವಿಜ್ಞಾನ ಕಡ್ಡಾಯವಾಗಿ ಅಂತರ್ಮುಖತ್ವ ಬೆಳೆಸಿಕೊಳ್ಳಬೇಕು. ತನ್ನ ನಿಶಿತ ದೃಷ್ಟಿಗಳನ್ನು ತನ್ನ ಮೇಲೇ ಹರಿಸಿಕೊಳ್ಳಬೇಕು. ತನ್ನನ್ನು ತಾನು ಪುನರ್ ವ್ಯಾಖಾನಿಸಿಕೊಳ್ಳಬೇಕು.
ವಿಜ್ಞಾನ ಯಾರಿಗಾಗಿ? ಯಾವ ಹಿತಾಸಕ್ತಿಗಾಗಿ? ಇವು ಕೇವಲ ಸಂಶಯಗಳಲ್ಲ. ಆತ್ಮಶೋಧನಾತ್ಮಕ ವಿಜ್ಞಾನ ವಿನಯಶೀಲವಾಗಿ ವಿಲಿಯಂ ಬ್ಲೇಕ್, ಐಸಾಕ್ ನ್ಯೂಟನ್ ನಡುವೆ ಸಂವಹನವನ್ನು ಊಹಿಸಿಕೊಳ್ಳಬಲ್ಲದು. ಜಲಂಧರ್ ಸಮಾವೇಶ ದಿಂದ ಸಂಶೋಧನೆಗಳಿಗೆ, ಸಾಮಾಜಿಕ ಜೀವನವಾಹಿನಿಗೆ ಹಿಂದಿರುಗುತ್ತಿ ರುವ ವಿಜ್ಞಾನಿಗಳು ಈ ಆವಶ್ಯಕ ಬೌದ್ಧಿಕ ಸತ್ಯವನ್ನು ಅರ್ಥೈಸಿಕೊಂಡು ತಮ್ಮಲ್ಲಿ ತುಂಬಿಕೊಳ್ಳುತ್ತಾರೆಯೇ?
ಕನ್ನಡಕ್ಕೆ: ಕಸ್ತೂರಿ
ಕೃಪೆ: ದಿ ವೈರ್