ಶಾಲೆ ಎಂದರೆ ಹೇಗಿರಬೇಕು?
ಯೋಗೇಶ್ ಮಾಸ್ಟರ್
ಕಲಿಕೆಯೆಂಬ ಪ್ರಕ್ರಿಯೆ
ಭಾಗ-3
ಮಕ್ಕಳ ವಿಷಯದಲ್ಲಂತೂ ಬಹಳಷ್ಟು ಶಾಲೆಗಳು ಮತ್ತು ಶಿಕ್ಷಕರು ಬಹಳ ನಿರ್ದಾಕ್ಷಿಣ್ಯವಾಗಿ ವಿಧೇಯತೆ ಮತ್ತು ಗೌರವದ ಹೆಸರಿನಲ್ಲಿ ಮನೋವಿಕಾಸಕ್ಕೆ ಹಿನ್ನಡೆಯನ್ನು ಉಂಟುಮಾಡುತ್ತಿದ್ದಾರೆ. ಮಕ್ಕಳು ಸದ್ಯಕ್ಕೆ ಇರುವ ಕಾಲಘಟ್ಟದ ವೇಗಕ್ಕೆ ಅವರಿಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗ ಭಯದ ವಾತಾವರಣದಲ್ಲಿ ಕಲಿಸುವ ಪದ್ಧತಿಯನ್ನು ಕೈ ಬಿಟ್ಟಾಗಿದೆ. ಸ್ನೇಹಪೂರ್ವಕವಾದ ವರ್ತನೆಗಳನ್ನು ತೋರಬೇಕಾಗಿದೆ. ಉರುಹೊಡೆಯುವ ಪದ್ಧತಿಯನ್ನು ತಿರಸ್ಕರಿಸಲಾಗಿದೆ.
► ಸೂಕ್ಷ್ಮದೃಷ್ಟಿ ಮತ್ತು ದೂರದೃಷ್ಟಿ
ಸೂಕ್ಷ್ಮದೃಷ್ಟಿ ಮತ್ತು ದೂರದೃಷ್ಟಿಗಳ ಕೊರತೆ ಶಾಲಾ ವ್ಯವಸ್ಥೆಯ ಬಹು ದೊಡ್ಡ ವೈಫಲ್ಯಗಳಿಗೆ ಕಾರಣವಾಗಿದೆ. ಸೂಕ್ಷ್ಮದೃಷ್ಟಿ ಮತ್ತು ದೂರದೃಷ್ಟಿಗಳು ಯಾವುದರಲ್ಲಿ ಇರಬೇಕು ಎನ್ನುವುದೂ ಕೂಡ ತಿಳಿಯದೇ ಇರುವಂತಹ ಪರಿಸ್ಥಿತಿಯಲ್ಲಿ ನಮ್ಮ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ವರ್ಗಗಳಿವೆ. ಒಂದು ಶಾಲೆಯಲ್ಲಿ ಮಗುವು ತನಗೆ ಎದುರು ಮಾತಾಡುತ್ತದೆ ಎಂದೋ, ಸರಿಯಾಗಿ ವಿಧೇಯತೆ ತೋರಲಿಲ್ಲವೆಂದೋ ಶಿಕ್ಷಕರೊಬ್ಬರು ಮಗುವನ್ನು ಶಿಕ್ಷಿಸುತ್ತಿದ್ದರು. ನಾನು ಗಮನಿಸಿದ್ದು ಏನೆಂದರೆ, ಆ ಮಗುವಿಗೆ ತನ್ನ ಆ ವರ್ತನೆ ಅವಿಧೇಯತೆ ತೋರುವುದು ಎಂದು ತಿಳಿದಿರಲೇ ಇಲ್ಲ. ಜೊತೆಗೆ ಆ ಮಗುವಿನ ಸಹಜತೆ ಆ ಶಿಕ್ಷಕರಿಗೆ ಅಸಹಜವೂ ಮತ್ತು ಅವಿಧೇಯತೆಯೂ ಆಗಿ ತೋರಿತ್ತು. ಆಗಿದ್ದು ಇಷ್ಟೇ, ಮಗುವು ತನ್ನ ಶಿಕ್ಷಕಿಗೆ ಗುಡ್ ಮಾರ್ನಿಂಗ್ ಬದಲು ಹಾಯ್ ಹೇಳಿತ್ತು. ಜೊತೆಗೆ ಅವತ್ತೆಂದೋ ಒಂದು ದಿನ ಆ ಮಗುವು ತನ್ನ ಪಕ್ಕದಲ್ಲಿದ್ದ ಅದೇ ಶಿಕ್ಷಕಿಗೆ ಕಬಡ್ಡಿ ಆಟವನ್ನು ಆಡುವುದನ್ನು ನೋಡುವಾಗ ಹೈಫೈ ಕೊಡಲು ಹೋಗಿತ್ತಂತೆ. ಆ ಶಿಕ್ಷಕಿಯ ದೂರೇನೆಂದರೆ, ತಾವು ಗುರುಗಳು ಎಂಬ ಮರ್ಯಾದೆ ಇಲ್ಲ. ತನ್ನ ಓರಗೆಯವರ ಜೊತೆ ವರ್ತಿಸುವಂತೆ ವರ್ತಿಸಲು ಈ ಮಗುವು ಮುಂದಾಗುತ್ತಿದೆ; ಇತ್ಯಾದಿ ಆಕೆಯ ದೂರು. ಮಗುವು ಹಾಯ್ ಹೇಳುತ್ತದೆಯೋ, ಹೈಫೈ ಕೊಡುತ್ತದೋ; ಎಂಥದ್ದೋ, ಆ ಮಗುವಿಗೆ ತಾನು ಹತ್ತಿರವಾಗುತ್ತಿದ್ದೇನೆ, ಇದರಿಂದ ಆ ಮಗುವು ತಾನು ನೀಡುವ ತರಬೇತಿ, ಶಿಕ್ಷಣ ಅಥವಾ ತಿಳುವಳಿಕೆಯನ್ನು ಸ್ವೀಕರಿಸಲು ಸಿದ್ಧವಾಗುತ್ತಿದೆ ಎಂಬ ದೂರದೃಷ್ಟಿ ಆ ಶಿಕ್ಷಕಿಗೆ ಇಲ್ಲದೇ ಹೋಯಿತು. ಪ್ರಸ್ತುತ ವಿಷಯಗಳನ್ನು ಸೂಕ್ಷ್ಮದೃಷ್ಟಿಯಲ್ಲಿ ಗಮನಿಸಲಾಗದವರಿಗೆ ದೂರದೃಷ್ಟಿ ಇರುವುದಿಲ್ಲ. ಏಕೆಂದರೆ ವರ್ತಮಾನದ ವಿದ್ಯಮಾನಗಳನ್ನು ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಲು ಸಾಧ್ಯವಾಗುವವರಿಗೆ ಮಾತ್ರವೇ ಭವಿಷ್ಯತ್ತಿನ ಫಲದಾಯಕ ಯೋಜನೆಗಳನ್ನು ರೂಪಿಸಲು ಸಾಧ್ಯ. ಹಾಗಾಗಿ, ಮಕ್ಕಳಿಗೆ ಶಿಕ್ಷಣವನ್ನು ಕೊಡುವಂತಹ ಸಂಸ್ಥೆಯಾಗಲಿ, ವ್ಯಕ್ತಿಯಾಗಲಿ; ಸೂಕ್ಷ್ಮದೃಷ್ಟಿಯನ್ನು ಹೊಂದಿರಬೇಕು ಮತ್ತು ದೂರದೃಷ್ಟಿಯನ್ನು ಉಳ್ಳವರಾಗಿರಬೇಕು. ದೂರದೃಷ್ಟಿ ಇಲ್ಲದೇ, ಮಕ್ಕಳನ್ನು ಈ ತರಗತಿಯಿಂದ ದಾಟಿಸಿ ಕಳುಹಿಸಿಬಿಡುವುದಷ್ಟೇ ತಮ್ಮ ಜವಾಬ್ದಾರಿಯೆಂದು ತಿಳಿದಿರುವಂತಹ ಶಿಕ್ಷಕರು ನಿಜಕ್ಕೂ ಹೊಣೆಗೇಡಿಗಳು. ಬಹಳಷ್ಟು ಶಿಕ್ಷಕರು ತಮ್ಮ ಬಾಲ್ಯದ ಅಥವಾ ಶಿಕ್ಷಣ ಪಡೆಯುತ್ತಿದ್ದ ಕಾಲಘಟ್ಟದಲ್ಲಿ ಇದ್ದಂತಹ ರೀತಿ ನೀತಿಗಳನ್ನೇ ಇನ್ನೂ ರೂಢಿಸಿಕೊಂಡಿರಲು ಯತ್ನಿಸುತ್ತಿರುತ್ತಾರೆ. ಈಗಲೂ ಬೆಂಗಳೂರು ಮತ್ತು ಇನ್ನೂ ಕೆಲವು ಕಡೆ ಗುರುಪೂರ್ಣಿಮೆ ದಿವಸ ಮತ್ತು ಶಿಕ್ಷಕರ ದಿನಾಚರಣೆಗಳಂತಹ ದಿನಗಳಲ್ಲಿ ವಿದ್ಯಾರ್ಥಿಗಳೆಲ್ಲಾ ಸಾಮೂಹಿಕವಾಗಿ, ಶಿಕ್ಷಕರಿಗೆ ಪಾದಪೂಜೆ ಮಾಡಿದಂತಹ ಘಟನೆಗಳು ನಡೆದಿವೆ. ಇಂತಹ ವಿದ್ಯಮಾನಗಳನ್ನು ಸಂಸ್ಕೃತಿಯನ್ನು ಉಳಿಸಿಕೊಳ್ಳುವ ವಿಷಯಗಳೆಂದು ವೈಭವೀಕರಿಸುವುದುಂಟು. ಯಾವುದೇ ಕಾಲಘಟ್ಟದ ಚೌಕಟ್ಟಿನ ಸಂಸ್ಕೃತಿಯನ್ನು ಇಂದಿಗೂ ಯಥಾವತ್ತಾಗಿ ಮಾಡುವುದೆಂದರೆ, ಅದು ಅವಿಕಸಿತ ಸಂಸ್ಕೃತಿಯೆಂದೂ, ಸತ್ತ ಸಂಸ್ಕೃತಿಯೆಂದೂ ನನ್ನ ಅಭಿಪ್ರಾಯ. ಏಕೆಂದರೆ, ಸಂಸ್ಕೃತಿಯು ಜೀವಂತ ಮನುಷ್ಯನ ವಿಕಾಸ ಪ್ರಕ್ರಿಯೆಯ ಭಾಗವಾಗಿ ಪ್ರಗತಿಯನ್ನು ಹೊಂದುತ್ತಾ ಹೋಗಬೇಕು. ಮಕ್ಕಳ ವಿಷಯದಲ್ಲಂತೂ ಬಹಳಷ್ಟು ಶಾಲೆಗಳು ಮತ್ತು ಶಿಕ್ಷಕರು ಬಹಳ ನಿರ್ದಾಕ್ಷಿಣ್ಯವಾಗಿ ವಿಧೇಯತೆ ಮತ್ತು ಗೌರವದ ಹೆಸರಿನಲ್ಲಿ ಮನೋವಿಕಾಸಕ್ಕೆ ಹಿನ್ನಡೆಯನ್ನು ಉಂಟುಮಾಡುತ್ತಿದ್ದಾರೆ. ಮಕ್ಕಳು ಸದ್ಯಕ್ಕೆ ಇರುವ ಕಾಲಘಟ್ಟದ ವೇಗಕ್ಕೆ ಅವರಿಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತಿಲ್ಲ. ಈಗ ಭಯದ ವಾತಾವರಣದಲ್ಲಿ ಕಲಿಸುವ ಪದ್ಧತಿಯನ್ನು ಕೈ ಬಿಟ್ಟಾಗಿದೆ. ಸ್ನೇಹಪೂರ್ವಕವಾದ ವರ್ತನೆಗಳನ್ನು ತೋರಬೇಕಾಗಿದೆ. ಉರುಹೊಡೆಯುವ ಪದ್ಧತಿಯನ್ನು ತಿರಸ್ಕರಿಸಲಾಗಿದೆ. ಚಟುವಟಿಕೆ ಆಧಾರಿತವಾಗಿರುವಂತಹ ಕಲಿಕಾ ಪದ್ಧತಿಯನ್ನು ರೂಢಿಸಿಕೊಳ್ಳಲಾಗಿದೆ. ತರಗತಿಯೊಳಗೆ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಬಂಧಿಸಿಡುವ ರೂಢಿಯನ್ನು ಖಂಡಿಸಲಾಗಿದೆ. ಗೋಡೆಗಳಿಂದಾಚೆಗೆ ಮಕ್ಕಳನ್ನು ಕರೆದೊಯ್ಯುವ ಹೊಸಹೊಸ ಕಲಿಕಾ ಪದ್ಧತಿಗಳನ್ನು ಅನುಸರಿಸಲಾಗುತ್ತಿದೆ. ಮಗುವಿನ ಮನೋವಿಜ್ಞಾನವನ್ನೂ ಮತ್ತು ನವೀನ ಕಲಿಕಾ ಪದ್ಧತಿಗಳನ್ನು ಅಧ್ಯಯನ ಮಾಡುವ ಮತ್ತು ಅಭ್ಯಸಿಸುವ ಶಿಕ್ಷಕರಿಗೆ ಸೂಕ್ಷ್ಮದೃಷ್ಟಿ ಮತ್ತು ದೂರದೃಷ್ಟಿಗಳನ್ನು ಹೊಂದುವ ಸಾಕಷ್ಟು ಅವಕಾಶಗಳಿರುತ್ತವೆ.
► ಸಿದ್ಧಮಾದರಿಗಳು
ಬಹಳಷ್ಟು ಮಾದರಿಗಳನ್ನು ಶಿಕ್ಷಕರೂ ಮತ್ತು ಶಾಲೆಗಳು ನವೀಕರಿಸಿಕೊಂಡಿರುವುದೇ ಇಲ್ಲ. ಪರೀಕ್ಷಾಕ್ರಮದ ಬಗ್ಗೆಯಾಗಲಿ, ವೌಲ್ಯಮಾಪನ ಮಾಡುವ ರೀತಿಯಲ್ಲಾಗಲಿ, ಅಧ್ಯಯನ ಮಾಡುವ ಕ್ರಮದಲ್ಲಾಗಲಿ, ಪಠ್ಯಕ್ರಮಗಳನ್ನು ಅನುಸರಿಸುವುದಲ್ಲಾಗಲಿ; ಹಲವು ನವೀನ ವಿಧಾನಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಬ್ಬರಿಗೂ ಕೆಲಸಗಳನ್ನು ಸರಳಗೊಳಿಸಿವೆ. ಆದರೆ, ತಮ್ಮ ಹಳೆಯ ಮತ್ತು ಈಗ ಅಪ್ರಸ್ತುತವಾಗಿರುವ, ಎಲ್ಲದಕ್ಕಿಂತ ಮಿಗಿಲಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಒತ್ತಡವನ್ನುಂಟು ಮಾಡುವ ಸಿದ್ಧ ಮಾದರಿಯನ್ನೇ ಬಳಸುತ್ತಿದ್ದಾರೆ. ಇವುಗಳ ಬಗ್ಗೆ ಶಾಲಾ ಆಡಳಿತ ಮಂಡಳಿಗಳು ಎಚ್ಚರಗೊಳ್ಳಬೇಕು.
► ಸ್ಪರ್ಧಾತ್ಮಕ ಧೋರಣೆ
ಪೋಷಕರು ಮತ್ತು ಶಿಕ್ಷಕರಿಬ್ಬರೂ ಮಗುವಿನಲ್ಲಿ ಗೆಲ್ಲುವ ನಲಿವು ಮತ್ತು ಸೋಲುವ ನೋವಿನ ಬಗ್ಗೆ ಬಹಳ ಅವೈಜ್ಞಾನಿಕವಾದಂತಹ ಮನೋಭಾವನೆಯನ್ನು ಬೆಳೆಸಿ ಬಿಡುತ್ತಾರೆ. ಇದರಿಂದ ಮಗುವು ಸ್ವಾರ್ಥಿಯಾಗುವುದರೊಂದಿಗೆ, ಇತರರ ಏಳಿಗೆಯನ್ನು ಸಹಿಸದ ಮತ್ತು ಇತರ ಉನ್ನತಿಗೆ ಸಹಕರಿಸದಂತಹ ಮನೋಸ್ಥಿತಿಯ ವ್ಯಕ್ತಿಯಾಗತೊಡಗುತ್ತದೆ. ಕಲಿಕೆಯ ವಿಷಯದಲ್ಲಾಗಲಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಾಗಲಿ ಇದರ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು. ಗೆಲ್ಲುವವರನ್ನು ಪುರಸ್ಕರಿಸುವುದು, ಸೋತವರನ್ನು ನಿರ್ಲಕ್ಷಿಸುವುದು ಇತ್ಯಾದಿ ಧೋರಣೆಗಳು ಪರಸ್ಪರ ದ್ವೇಷಿಸುವ ಮಟ್ಟಕ್ಕೆ ಒಯ್ಯುತ್ತವೆ. ಕ್ರೀಡಾಮನೋಭಾವ ಬೇರೆ, ಗೆಲ್ಲಲೇಬೇಕೆಂಬ ಮನೋಧೋರಣೆ ಬೇರೆ. ಗೆಲುವು ಸೋಲುಗಳ ಬದಲು ಕ್ರೀಡಾ ಮನೋಭಾವನ್ನು ರೂಢಿಸುವುದರಲ್ಲಿ ಶಾಲೆಗಳು, ಶಿಕ್ಷಕರು ಮತ್ತು ಪೋಷಕರು ಗಮನವಹಿಸಬೇಕು.
ಇತ್ತೀಚೆಗೆ ಶಾಲೆಯೊಂದರಲ್ಲಿ ಶಾಲಾವಾರ್ಷಿಕೋತ್ಸವವು ನಡೆಯಿತು. ಆ ದಿನ ಬರದೇ ಇದ್ದವರನ್ನು ಕಾರಣ ವಿಚಾರಿಸಿದೆ. ಬರದೇ ಇದ್ದ ಮಕ್ಕಳು ಕೊಟ್ಟ ಕಾರಣಗಳನ್ನು ನೋಡಿ.
1.ನನಗೆ ಯಾವುದರಲ್ಲೂ ಬಹುಮಾನ ಬಂದಿರಲಿಲ್ಲ. ಅದಕ್ಕೇ ನೀನು ಹೋಗುವುದು ಬೇಡ ಎಂದರು ನಮ್ಮ ಮನೆಯಲ್ಲಿ.
2.ನಾನು ಯಾವುದೇ ನೃತ್ಯ ಅಥವಾ ಸಂಗೀತದಲ್ಲಿ ಭಾಗವಹಿಸಿರಲಿಲ್ಲ. ಅದಕ್ಕೇ ಬರಲಿಲ್ಲ.
3.ಸ್ಕೂಲ್ ಪ್ರೋಗ್ರಾಮ್ ತಾನೇ, ಹೋಗ್ಲಿಲ್ಲಾಂದ್ರೂ ನಡೆಯತ್ತೆ. ಅಷ್ಟು ಜನ ಮಕ್ಕಳಲ್ಲಿ ನೀನೊಬ್ಬಳು ಹೋಗಲಿಲ್ಲಾಂದ್ರೆ ಏನೂ ಆಗಿಹೋಗಲ್ಲ.
4.ಕಾರ್ಯಕ್ರಮದ ಮಾರನೇ ದಿನ ರಜೆ ಇರುವುದರಿಂದ ಒಟ್ಟು ಎರಡು ದಿನಗಳು ರಜೆ ಇರುತ್ತದೆ. ಆದ್ದರಿಂದ ನನ್ನನ್ನು ನಮ್ಮ ಅಜ್ಜಿಯ ಊರಿಗೆ ಕರೆದುಕೊಂಡು ಹೋಗಿದ್ದರು.
5.ಸದ್ಯ, ಓದೋದು ಬರೆಯೋದು ಸರಿಯಾಗಿ ಮಾಡು. ನೀನು ಪ್ರೋಗ್ರಾಮ್‌ಗೆ ಹೋಗಿ ಉದ್ಧಾರ ಏನೂ ಆಗಲ್ಲ. ಶಾಲೆಯ ವಾರ್ಷಿಕೋತ್ಸವವೆಂದರೆ, ತನ್ನ ಶಾಲೆಯ ಹಬ್ಬ. ಆ ಸಂಭ್ರಮದ ವಾತಾವರಣದಲ್ಲಿ ತಾನಿರಬೇಕು. ಇದು ನನಗೆ ಖುಷಿ ತರುವ ಸಂದರ್ಭ ಎಂದು ಮಗುವಿಗೆ ಅನ್ನಿಸಲು ಪೋಷಕರು ಮತ್ತು ಶಿಕ್ಷಕರೂ ಪ್ರೇರಣೆಗಳನ್ನು ನೀಡಿಲ್ಲವೆಂದೇ ನನ್ನ ಆಕ್ಷೇಪ. ಮಗುವು ಹೋಗುವ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಪೋಷಕರು ಆಸಕ್ತಿಯಿಂದ ಕೇಳುವುದು, ಭಾಗವಹಿಸುವುದು ಇತ್ಯಾದಿಗಳನ್ನು ಮಾಡಿದರೆ, ಮಗುವಿಗೂ ಶಾಲೆಯ ಬಗ್ಗೆ ಆಪ್ತಭಾವ ಉಂಟಾಗುತ್ತದೆ. ಮೊದಲೇ ಆ ಮಗುವಿಗೆ ಬೇಡದ್ದು ಮತ್ತು ಒತ್ತಡದ್ದು ಹಲವು ಸಂಗತಿಗಳು ಆ ಶಾಲೆಯಲ್ಲಿ ಇರಬಹುದು. ಅಂತಹುದರಲ್ಲಿ ಅದಕ್ಕೆ ದೊರಕಬಹುದಾದ ಖುಷಿಯ ಸಂಗತಿಗಳಿಂದಲೂ ವಂಚಿಸಿದರೆ, ಆ ಮಗುವಿಗೆ ಶಾಲೆಗೆ ಏನೂ ಕೊಡಲೂ ಬರುವುದಿಲ್ಲ, ಏನನ್ನೂ ಪಡೆದುಕೊಳ್ಳಲೂ ಬರುವುದಿಲ್ಲ. ಕೊಡುಕೊಳ್ಳುವಿಕೆ ಬಹಳ ಸಹಜವಾಗಿ ಮಗುವಿಗೆ ರೂಢಿಯಾಗಬೇಕೆಂದರೆ, ಪೋಷಕರು, ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯು ಒತ್ತಡದಿಂದ ಸ್ಪರ್ಧೆಗೆ ದೂಡುವುದರ ಬದಲು ನಿತ್ಯವೂ ಸಂಭ್ರಮ ಮತ್ತು ಸಂತೋಷದ ವಾತಾವರಣವನ್ನು ಕಟ್ಟಿಕೊಡುವುದರಲ್ಲಿ ಸಫಲರಾದರೆ, ಕಲಿಕೆಯೆಂಬುದು ಸರಸವಾಗಿಯೇ ಮಗುವಿಗೆ ಒಲಿಯುತ್ತದೆ ಅಥವಾ ಮಗುವು ಕಲಿಕೆಗೆ ಒಲಿಯುತ್ತದೆ.
► ಸಮಗ್ರ ಶಿಕ್ಷಣದ ದೃಷ್ಟಿ
ಶಾಲೆಯ ಆಡಳಿತ ಮಂಡಳಿಯು ಮಗುವಿನ ಸಮಗ್ರ ಶಿಕ್ಷಣದ ದೃಷ್ಟಿಯನ್ನು ಹೊಂದಿಲ್ಲದೇ ಹೋದಲ್ಲಿ ಅದು ಸಾಂಸ್ಕೃತಿಕವಾಗಿಯೂ, ಸಾಮಾಜಿಕವಾಗಿಯೂ ಶಿಕ್ಷಣವನ್ನು ನೀಡುವುದರಲ್ಲಿ ವಿಫಲವಾಗುತ್ತದೆ. ಮಗುವು ಶಾಲೆಗೆ ಬಂದ ಮೇಲೆ ಅದು ಗಣಿತವನ್ನು ಕಲಿಯಲು ಸಾಧ್ಯವಾಗುತ್ತದೋ ಇಲ್ಲವೋ, ವಿಜ್ಞಾನವನ್ನು ಅಭ್ಯಸಿಸಲು ಆಗುತ್ತದೋ ಇಲ್ಲವೋ, ಭಾಷೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತದೋ ಇಲ್ಲವೋ, ಆದರೆ, ಶಾಲೆಯಿಂದ ಅದಕ್ಕೆ ಸಮಾಜದಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವಂತಹ ಶಿಕ್ಷಣ ದೊರಕಿರಬೇಕು. ಶಾಲೆಯ ಪಠ್ಯ ವಿಷಯಗಳ ಜೊತೆಜೊತೆಯಲ್ಲಿ ವೃತ್ತಿಪರ ತರಬೇತಿಗಳನ್ನು ಮಗುವು ಪಡೆದಿರಲು ಶಕ್ಯವಾಗಿರಬೇಕು. ಅದರ ಪ್ರತಿಭೆೆಯನ್ನು ಅನಾವರಣಗೊಳಿಸಬೇಕು. ಇಂತಹ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅಕಾಡಮಿಕ್ ಎಕ್ಸೆಲೆನ್ಸಿ ಎಂಬುದರ ಹೊರತಾಗಿ ಯೋಜನೆಗಳನ್ನು ರೂಪಿಸಿಕೊಂಡಿರಬೇಕು. ಒಟ್ಟಾರೆ ವ್ಯಕ್ತಿಗತ ಶಿಕ್ಷಣವನ್ನು ಮತ್ತು ಸಾಮೂಹಿಕ ಶಿಕ್ಷಣವನ್ನು ಸಮನ್ವಯಗೊಳಿಸಲು ಬಾರದೇ ಇದ್ದರೆ ಶಾಲೆಯ ಮೂಲ ಆಶಯಗಳು ಮತ್ತು ಶಿಕ್ಷಣ ವ್ಯವಸ್ಥೆಯ ಉದ್ದೇಶಗಳು ವಿಫಲಗೊಳ್ಳುತ್ತವೆ. ಬಹಳಷ್ಟು ಶಾಲೆಗಳಿಗೆ ಓದುವುದು, ಬರೆಯುವುದು, ವರ್ಷಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ದೂರಿಯಿಂದ ಮಾಡಿಬಿಡುವುದು, ಬೇರೆ ಶಾಲೆಗಳ ಮೇಲೆ ಕ್ರೀಡಾ ಸ್ಪರ್ಧೆಗಳಿಗೆಂದು ಹೋಗಿ ಗೆದ್ದು ಟ್ರೋಫಿಗಳಿಂದ ಆಫೀಸುರೂಮನ್ನು ತುಂಬಿಸಿಕೊಳ್ಳುವುದು, ಒಳ್ಳೆಯ ರಿಸಲ್ಟ್, ಸೆಂಟ್ ಪರ್ಸೆಂಟ್ ರಿಸಲ್ಟ್ ಬರುವುದು; ಇವಿಷ್ಟನ್ನು ಬಿಟ್ಟರೆ ಬೇರೆ ಏನೂ ತಿಳಿದಿರುವುದೇ ಇಲ್ಲದಿರುವುದು ವಿಪರ್ಯಾಸ. ಕನಿಷ್ಠ ಪಕ್ಷ ಇಂತಹ ವಿಷಯಗಳಿವೆ ಎಂಬ ಪರಿಚಯ ಮತ್ತು ಅರಿವು ಉಂಟಾದರೆ, ಕನಿಷ್ಠ ಪಕ್ಷ ಅವುಗಳನ್ನು ಈಡೇರಿಸುವ ಸಾಧ್ಯತೆಗಳನ್ನು ಕಂಡುಕೊಳ್ಳುವ ಪ್ರಾರಂಭಿಕ ಪ್ರಯತ್ನಗಳಾದರೂ ಆಗಬಹುದು.