ಶರಣೆಂಬೆ ನಿಷ್ಠೆಯ ಗೆಳೆತನಕ
ಡಾ. ವರದಾ ಶ್ರೀನಿವಾಸ ಅವರದ್ದು ಕನ್ನಡ ಸಾರಸ್ವತ ಲೋಕದ ಹಿರಿಯ ಲೇಖಕಿಯರ ಮುಂಚೂಣಿ ಯಲ್ಲಿರುವ ಪ್ರಮುಖ ಹೆಸರು. ಕಳೆದ ನಾಲ್ಕು ದಶಕ ಗಳಿಂದಲೂ ಅವಿರತವಾಗಿ ಕನ್ನಡ ಸಾಹಿತ್ಯ ಶ್ರೀಯನ್ನು ಶ್ರೀಮಂತಗೊಳಿಸಿದವರು. ಕಥೆ, ಕವನ, ಸಂಕಲನ, ಕಾದಂಬರಿ, ಮಕ್ಕಳಸಾಹಿತ್ಯ, ವಿಮರ್ಶೆ ಪ್ರಬಂಧ ಮುಂತಾದ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ರಚನೆ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ನಾಟಕ ರಚನೆ ಸಾಹಿತಿಗೆ ಒಂದು ಸವಾಲಿನ ಕೆಲಸ. ಭೂತಕಾಲದ ಆಗು ಹೋಗುಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ವರ್ತಮಾನಕ್ಕೆ ಸಂವೇದಿಯಾಗಿ ರೂಪಿಸುವ ಕಠಿಣ ಜವಾಬ್ದಾರಿ ನಾಟಕಕಾರನ ಮೇಲಿದೆ, ಇದಕ್ಕಾಗಿ ಒಂದು ವಿಶೇಷ ದೃಷ್ಟಿಕೋನ ಅಗತ್ಯವಿದೆ. ಸಮಕಾಲೀನ ಸಮಸ್ಯೆಗಳನ್ನು ಹಿಂದಿನ ಘಟನೆಗಳೊಂದಿಗೆ ಸಮೀಕರಿಸಿ ತುಲನಾತ್ಮಕವಾಗಿ ವಿಶ್ಲೇಷಿಸುವ ಜವಾಬ್ದಾರಿ ಜೊತೆಗೆ ಅಂದಿನ ಪರಿಸರ ಕಾಲಘಟ್ಟ, ಪ್ರದೇಶಗಳ ಅರಿವು ಅತ್ಯಗತ್ಯ. ಹಾಗಿದ್ದಲ್ಲಿ ಮಾತ್ರ ನಾಟಕಕಾರ ಯಶಸ್ವಿಯಾಗಲು ಸಾಧ್ಯ.
ಹೊಸಗನ್ನಡ ಸಾಹಿತ್ಯದಲ್ಲಿ ಬಂದಿರುವ ಹಾಗೂ ಹೆಸರು ಮಾಡಿರುವ ಅನೇಕ ನಾಟಕಗಳು ಬೇರೆ ಬೇರೆ ದೇಶದ, ಪರಿಸರದ, ಸಂಸ್ಕೃತಿಯ ಹಿನ್ನೆಲೆಯಲ್ಲಿ ಬಂದಂತಹವುಗಳಾಗಿವೆ. ವೈದಿಕ, ಪೌರಾಣಿಕ ಕಥಾನಕಗಳನ್ನು ಮರುದೃಷ್ಟಿಕೋನದಿಂದ ವಿಮರ್ಶಿಸಿ ರಚಿಸಿರುವ ಕೃತಿಗಳೂ ಸಹ ಯಶಸ್ಸನ್ನು ಕಂಡಿವೆ. ಅಂತೆಯೇ ಜಾನಪದವು ತನ್ನ ವಿಶಿಷ್ಟ ವಿಷಯ ವಿಶೇಷತೆಯಿಂದ ಪ್ರಮುಖ ಪಾತ್ರವಹಿಸುತ್ತಿದೆ. ಡಾ. ವರದಾ ಶ್ರೀನಿವಾಸರವರ ಈ ಮೂರು ನಾಟಕಗಳನ್ನು ಮೇಲಿನ ಹಿನ್ನೆಲೆಯಲ್ಲಿ ಗಮನಿಸಬೇಕಾಗಿದೆ.
ಶರಣೆಂಬೆ ನಿಷ್ಠೆಯ ಗೆಳೆತನಕ-ಜಾನಪದ ಕಥನಗೀತೆಯ ಆಧಾರದ ಮೇಲೆ ರಚಿಸಲಾಗಿರುವ ರೂಪಕ. ಸ್ನೇಹತ್ವ ತನ್ನ ಪರಾಕಾಷ್ಠೆಯನ್ನು ತಲುಪುವ ಒಂದು ಹೃದಯಂಗಮ ಸನ್ನಿವೇಶವನ್ನು ಲೇಖಕಿ ಕಟ್ಟಿಕೊಡುತ್ತಾರೆ. ಅದಕ್ಕಾಗಿ ಅವರು ಬಳಸಿರುವ ಉತ್ತರಕರ್ನಾಟಕದ ಭಾಷೆ ರಚನೆಗೆ ಮೆರುಗು ನೀಡುತ್ತದೆ. ಸ್ನೇಹಿತನ ಮನದಾಸೆಯನ್ನು ತೀರಿಸುವ ಸಲುವಾಗಿ ತನ್ನ ಹೆಂಡತಿಯನ್ನೇ ವೇಶ್ಯೆಯೆಂದು ಹೇಳಿ ಅದಕ್ಕಾಗಿ ಹೆಂಡತಿಯನ್ನು ಒಪ್ಪಿಸುವ ಸನ್ನಿವೇಶದಲ್ಲಿ ‘‘ಅಚ್ಚಡದ ಪದರಾಗ ಅಚ್ಚ ಮಲ್ಲಿಗೆ ಹೂವ ಮುಚ್ಚಿ ನನಮ್ಯಾಲೆ ಒಗೆವಂತ ನಿನ್ನಂಥ ಪುರುಷನ ಬಿಟ್ಟು ಅನ್ಯ ಪುರುಷಗ ನಾ ಭೋಗ ಹ್ಯಾಂಗ ಕೊಡಲಿ’’ ಎಂದು ಪ್ರಶ್ನಿಸಿದರೂ ಕಡೆಗೆ ಪತಿಯೇ ಪರದೈವವೆಂಬ ಸಂಸ್ಕೃತಿಯ ಕಟ್ಟುಪಾಡಿನಲ್ಲಿ ಬಂದ ಹೆಣ್ಣು ಗಂಡನಾದೇಶದಂತೆ ತನ್ನನ್ನು ಪರಪುರುಷನಿಗೆ ಅರ್ಪಿಸಿಕೊಳ್ಳಲು ಸಿದ್ಧವಾದಾಗ, ಕ್ಷಣಿಕ ಮನದಾಸೆಗೆ ಬಂದವನು ಎದುರಿಗಿರುವವಳು ತನ್ನ ಪ್ರಾಣಸ್ನೇಹಿತನ ಹೆಂಡತಿಯೆಂದು ತಿಳಿದು ಪಡುವ ವೇದನೆ ಅವರ್ಣನೀಯ. ಕಥೆ ಮೂರು ಜನರ ಆತ್ಮಾರ್ಪಣೆಯೊಂದಿಗೆ ಮುಕ್ತಾಯವಾಗುತ್ತದೆ. ಇರುವ ಮೂರೇ ಪಾತ್ರಗಳು ಹಾಗೂ ಭಾಷೆಯನ್ನು ದುಡಿಸಿಕೊಂಡಿರುವುದು ಲೇಖಕಿಯ ಸೃಜನಶೀಲತೆಯನ್ನು ಎತ್ತಿ ತೋರಿಸುತ್ತದೆ.
ಮಹಾ ಭಾರತದಲ್ಲಿ ಬರುವ ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಅಂಬೆಯು ಒಬ್ಬಳು. ಭುಜಬಲ ಪರಾಕ್ರಮದಿಂದ ಭೀಷ್ಮರಿಗೆ ವೀರಶುಲ್ಕವಾಗಿ ಬಂದರೂ ಒಡಲಾಳದ ಇನಿಯನ ಬಿಟ್ಟುಕೊಡದ ಅಪರೂಪದ ಪ್ರೇಮವಾಹಿನಿ ಅಂಬೆ. ದುರಂತವೆಂದರೆ ಗೆದ್ದವನಿಂದ, ಪ್ರೇಮಿಸಿದವನಿಂದ ತಿರಸ್ಕೃತಳಾಗಿ, ಅಪಮಾನಿತಳಾಗಿ, ಪ್ರೇಮ ದ್ವೇಷವಾಗಿ ಕ್ರೋಧಾಗ್ನಿ ಜ್ವಾಲೆಯಲ್ಲಿ ಉರಿದು ಹೋಗುವ ದುರಂತ ಪಾತ್ರ ಅಂಬೆಯದು. ಶತ-ಶತಮಾನಗಳಿಂದಲೂ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅನುಭವಿಸಿದ ನೋವು, ನಿರಾಸೆ-ಶೋಷಣೆಗಳನ್ನು ಪ್ರತಿಬಿಂಬಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಯಾರನ್ನೂ ಯಾವುದನ್ನೂ ದ್ವೇಷಿಸದ ಪಾತ್ರಗಳು ಸಮಚಿತ್ತ ಕಾಪಾಡಿಕೊಂಡಿರುವುದು ಇಲ್ಲಿಯ ವಿಶೇಷ. ಈ ಪರಿವರ್ತನೆ ಅಂಬೆಯ ಬಗ್ಗೆ ಹೊಸ ಸುಳುಹು ಒಂದನ್ನು ನೀಡುತ್ತದೆ.
ಕವಿ ಚಕ್ರವರ್ತಿ ಜನ್ನನ ಯಶೋಧರ ಚರಿತೆ ಕನ್ನಡದ ಶ್ರೇಷ್ಠ ಕಾವ್ಯಗಳಲ್ಲೊಂದು. ಅದರಲ್ಲಿ ಬರುವ ಅಭಯರುಚಿ ಮತ್ತು ಅಭಯಮತಿಯರ ಪ್ರಸಂಗವನ್ನಾಧರಿಸಿ ರಚಿಸಿದ ರೂಪಕ ಅಹಿಂಸಾ ಪರಮೋಧರ್ಮ ಪಂಚವೃತಗಳ ಅನುಸರಣೆಯಿಂದ ಬದುಕನ್ನುದ್ಧರಿಸಿಕೊಳ್ಳುವ ನೀತಿಯನ್ನು ಕಥೆ ಬಿಂಬಿಸುತ್ತದೆ. ಭವಾವಳಿಗಳನ್ನು ದಾಟಿ ಬಂದ ಅಭಯರುಚಿ ಮತ್ತು ಅಭಯಮತಿಯರ ಬೋಧನೆ ಮಾರಿದತ್ತನ ಕಣ್ಣು ತೆರೆಸುತ್ತದೆ. ಮಾನವ ಸಹಜ ದೌರ್ಬಲ್ಯ, ಅದರಿಂದುಂಟಾಗುವ ಪರಿಣಾಮಗಳನ್ನು ಡಾ. ವರದಾ ಶ್ರೀನಿವಾಸ ಅವರು ನವಿರಾಗಿ ಚಿತ್ರಿಸಿದ್ದಾರೆ. ಈ ಮೂರು ನಾಟಕಗಳನ್ನು ಪರಿಶೀಲಿಸಿದಾಗ ಮೊದಲ ನಾಟಕಕ್ಕೆ ಅಗತ್ಯವಾದ ಜಾನಪದ ಸೊಗಡು, ಪೌರಾಣಿಕಕ್ಕೆ ಬೇಕಾದ ಗಾಂಭೀರ್ಯ ಹಾಗೂ ಧರ್ಮದ ತಿರುಳಿಗೆ ಬೇಕಾದ ಸರಳ-ಸಹಜ ಬರವಣಿಗೆಯಿಂದ ಡಾ. ವರದಾ ಶ್ರೀನಿವಾಸ ರವರು ಭಾಷೆಯನ್ನು ದುಡಿಸಿಕೊಳ್ಳುವಲ್ಲಿ ಸವ್ಯಸಾಚಿಯಾಗಿದ್ದಾರೆ. ಸಾಹಿತ್ಯ ಅವರಿಗೆ ಕರತಲಾಮಲಕವಾಗಿದೆ. ಇವರಿಂದ ಕನ್ನಡಶ್ರೀ ಇನ್ನಷ್ಟು ಶ್ರೀಮಂತಗೊಳ್ಳಲಿ.