ಪರೀಕ್ಷೆಯನ್ನು ಎದುರಿಸುವುದು ಹೇಗೆ?

Update: 2019-01-13 18:30 GMT

ಪ್ರತಿಯೊಬ್ಬ ಮಗುವು ಹುಟ್ಟುವಾಗಲೇ ಅನನ್ಯವಾದ ಮತ್ತು ಅದ್ವಿತೀಯವಾದ ಸಾಮರ್ಥ್ಯಗಳನ್ನು ಹೊಂದಿರುತ್ತದೆ. ಮಕ್ಕಳು ಸಾಮಾನ್ಯವಾಗಿ ಒಬ್ಬರಿಗಿಂತ ಮತ್ತೊಬ್ಬರು ವಿಭಿನ್ನವಾಗಿದ್ದು ಎಲ್ಲರೂ ಸಹ ಪ್ರತಿಭಾನ್ವಿತರಾಗಿರಲು ಸಾಧ್ಯವಿಲ್ಲ. ಮಕ್ಕಳು ಹೊಂದಿರುವ ಜ್ಞಾನ, ಕೌಶಲ ಮತ್ತು ಪ್ರತಿಭೆಗಳ ಬೆಳವಣಿಗೆಗೆ ಪೋಷಕರ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನ ಅತೀ ಅಗತ್ಯವಾದುದು. ಹಾಗಾದರೆ ವಿದ್ಯಾರ್ಥಿಗಳು ಹೊಂದಿರುವ ಜ್ಞಾನ, ಕೌಶಲ ಮತ್ತು ಪ್ರತಿಭೆಗಳನ್ನು ಕಾಲಕಾಲಕ್ಕೆ ಅನುಗುಣವಾಗಿ ಪರೀಕ್ಷೆ ಮಾಡುವುದು ಪ್ರಮುಖವಾದುದು. ಪರೀಕ್ಷೆಯು ನಾವು ಹೊಂದಿರುವ ನೈಜಜ್ಞಾನ ಮತ್ತು ಕೌಶಲವನ್ನು ಪರೀಕ್ಷಿಸುವ ಮಾರ್ಗವಾಗಿದೆ. ಇದರಿಂದ ನಾವು ಹೊಂದಿರುವ ಜ್ಞಾನ, ಕೌಶಲದ ಮಟ್ಟ ಹಾಗೂ ದೌರ್ಬಲ್ಯಗಳನ್ನು ತಿಳಿದು, ಉತ್ತಮ ಪಡಿಸಿಕೊಳ್ಳಲು ಸಹಾಯಕವಾಗಿದೆ. ಉತ್ತಮ ವ್ಯಕ್ತಿತ್ವದೊಂದಿಗೆ ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಪರೀಕ್ಷೆ ಮಹತ್ವ ಪಡೆದುಕೊಂಡಿದೆ. ಪರೀಕ್ಷೆ ಕೇವಲ ತರಗತಿಯ ವಿಷಯ ಜ್ಞಾನವನ್ನಷ್ಟೇ ಪರೀಕ್ಷಿಸುವುದಿಲ್ಲ, ಅದು ನಮ್ಮ ಭವಿಷ್ಯ ನಿರ್ಧರಿಸುವ ಮಾರ್ಗವೂ ಸಹ ಆಗಿದೆ. ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆಯುವ ಮೂಲಕ ತಮ್ಮ ಜೀವನದ ಬಗ್ಗೆ ಕಂಡ ಕನಸುಗಳ ಗುರಿಯನ್ನು ಮುಟ್ಟಲು ಸಹಾಯಕವಾಗಿವೆ. ಕೆಲವು ವಿದ್ಯಾರ್ಥಿಗಳು ಕಠಿಣ ಅಭ್ಯಾಸದಿಂದ ಹೆಚ್ಚು ಅಂಕಗಳನ್ನು ಪಡೆದರೆ, ಕೆಲವರು ಕಠಿಣ ಶ್ರಮ ಪಟ್ಟರೂ ಉತ್ತಮ ಅಂಕ ಪಡೆಯದೆ ಇರಬಹುದು. ಮತ್ತೆ ಕೆಲವು ವಿದ್ಯಾರ್ಥಿಗಳು ಹೆಚ್ಚು ಶ್ರಮವಿಲ್ಲದೆ ಉತ್ತಮ ಅಂಕ ಪಡೆಯುವುದುಂಟು. ಹಾಗಾದರೆ ಪರೀಕ್ಷೆಗೆ ಸಿದ್ಧರಾಗುವುದು ಹೇಗೆ? ಎಂಬ ದೊಡ್ಡ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಕಾಡತೊಡಗುವುದಂತೂ ಸತ್ಯವಾದುದು. ಹಾಗಾಗಿ ವಿದ್ಯಾರ್ಥಿಗಳು ಹೇಗೆ ಅಭ್ಯಾಸದಲ್ಲಿ ತೊಡಗಿಸಿಕೊಂಡು ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಬೇಕು, ಉತ್ತಮ ಫಲಿತಾಂಶ ಪಡೆಯುವಲ್ಲಿನ ಮಾರ್ಗಸೂಚಿ ಅಂಶಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
 ಉತ್ತಮ ವೇಳಾಪಟ್ಟಿ ರಚನೆ:
ಅಧ್ಯಯನ ಪ್ರಾರಂಭಿಸುವ ಮೊದಲು ವಿದ್ಯಾರ್ಥಿಗಳು ಸ್ವವೇಳಾಪಟ್ಟಿಯನ್ನು ವಿನ್ಯಾಸಗೊಳಿಸಿಕೊಳ್ಳಬೇಕು. ಪ್ರತಿಯೊಂದು ವಿಷಯವನ್ನು ಪ್ರತಿದಿನ ಅಧ್ಯಯನ ಮಾಡಲು ಲಭ್ಯವಿರುವ ಮತ್ತು ಅಗತ್ಯವಿರುವ ಸಮಯವನ್ನು ಪರಿಗಣಿಸಿ ಎಲ್ಲ ವಿಷಯಗಳನ್ನು ಅಧ್ಯಯನ ಮಾಡಲು ಅನುಕೂಲವಾಗುವಂತೆ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು. ಜೊತೆಗೆ ಪ್ರತಿ ವಿಷಯಕ್ಕೂ ಸಹ ಸಮಯದ ಆದ್ಯತೆಯನ್ನು ನೀಡಬೇಕು. ಕಠಿಣವಾದ ವಿಷಯಗಳಿಗೆ ಹೆಚ್ಚು ಅವಧಿಗಳನ್ನು ನೀಡಿ, ಈ ಪಾಠಗಳನ್ನು ಮುಂಜಾನೆ ಓದುವುದು ಸೂಕ್ತವಾದುದು. ಸರಳವಾದ ವಿಷಯಗಳಿಗೆ ಕಡಿಮೆ ಸಮಯ ನೀಡಿ, ವಿಷಯದ ಅಧ್ಯಯನಕ್ಕೆ ಸೂಕ್ತವಾಗಿ ಮುಂಜಾನೆ, ಸಂಜೆ ಮತ್ತು ರಾತ್ರಿ ಸಮಯವನ್ನು ನಿಗದಿಗೊಳಿಸಿಕೊಳ್ಳಬೇಕು. ಮುಂಜಾನೆ 5 ರಿಂದ 8 ಮತ್ತು ಸಂಜೆ 7 ರಿಂದ 10 ಗಂಟೆಯ ಸಮಯದಲ್ಲಿ ಓದುವುದನ್ನು ರೂಢಿಸಿಕೊಂಡರೆ ಉತ್ತಮ.
ಪ್ರತಿ ವಿಷಯದ ಅಧ್ಯಯನದ ಮಧ್ಯೆ ಸಾಕಷ್ಟು ವಿರಾಮವನ್ನು ನೀಡಬೇಕು. ಓದಿದ ಪಾಠಗಳನ್ನು ರಾತ್ರಿ ಮನನ ಮಾಡಿಕೊಳ್ಳುವುದು, ಬರೆಯುವುದು ಅಥವಾ ಲೆಕ್ಕ ಬಿಡಿಸುವುದಕ್ಕೆ ಸಂಜೆಯ ಸಮಯ ಸೂಕ್ತವಾದುದು. ವೇಳಾಪಟ್ಟಿಯಂತೆ ಅಧ್ಯಯನಕ್ಕೆ ಶಿಕ್ಷಕರ ಮತ್ತು ಹಿರಿಯ ವಿದ್ಯಾರ್ಥಿಗಳ ಸಲಹೆಯನ್ನು ಪಡೆದುಕೊಳ್ಳುವುದು ಉತ್ತಮವಾದುದು. ‘‘ಮುತ್ತು ಕಳೆದರೆ ಸಿಕ್ಕೀತು ಹೊತ್ತು ಕಳೆದರೆ ಸಿಕ್ಕೀತೆ?’’ ಎಂಬ ಗಾದೆ ವಿದ್ಯಾರ್ಥಿ ಜೀವನದಲ್ಲಿ ತುಂಬಾ ಅರ್ಥಪೂರ್ಣವಾಗಿ ಅನ್ವಯವಾಗುವ ಮಾತಾಗಿದ್ದು, ಸಮಯವನ್ನು ವ್ಯರ್ಥವಾಗಿ ಕಳೆಯದೆ ಅಧ್ಯಯನದಲ್ಲಿ ತೊಡಗಬೇಕು.
 ದೃಢವಾದ ನಿರ್ಧಾರ:
ಒತ್ತಡ ಮತ್ತು ಭಯ ಹೊಂದಿದರೆ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗದು. ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿರುವ ಎಲ್ಲ ಭಯವನ್ನು ಮುಕ್ತಗೊಳಿಸಿ, ತಾನು ನಿರ್ಧರಿಸಿದಷ್ಟು ಅಂಕ ಪಡೆಯಲು ಮನಸ್ಸಿನ ಕೇಂದ್ರೀಕರಣ ಮತ್ತು ನಿಯಂತ್ರಣ ಅಗತ್ಯವಾದುದು. ಪೋಷಕರು ಸಹ ಸ್ಥಿತಿಯನ್ನು ಅರ್ಥಮಾಡಿಕೊಂಡು ಹೆಚ್ಚು ಒತ್ತಡ ಹಾಕದೆ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಪ್ರಮುಖವಾಗಿದೆ. ಯಾವ ಅಡೆತಡೆಗಳು ಬಂದರೂ ತಮ್ಮ ಗುರಿ ಉದ್ದೇಶಗಳನ್ನು ತಲುಪಲು ದೃಢವಾದ ನಿರ್ಧಾರ ಕೈಗೊಂಡು ಕಠಿಣ ಅಭ್ಯಾಸದ ಯೋಜ
ನೆ ರೂಪಿಸಿಕೊಳ್ಳುವುದು ಮಹತ್ವದ್ದಾಗಿದೆ.


 ಸೃಜನಾತ್ಮಕ ಮತ್ತು ನಿರಂತರ ಅಭ್ಯಾಸ:
ವಿದ್ಯಾರ್ಥಿಗಳು ತಮಗೆ ನೀರಸವಾಗುವ ವಿಷಯಗಳ ಅಧ್ಯಾಯಗಳನ್ನು ಆಟಗಳ ರೂಪಕ್ಕೆ ಪರಿವರ್ತಿಸಿಕೊಂಡು, ಪ್ರಮುಖ ಅಂಶಗಳಿಗೆ ಫ್ಲಾಶ್‌ಕಾರ್ಡ್, ಪ್ರಶ್ನೋತ್ತರಗಳ ಕಾರ್ಡ್‌ಗಳನ್ನು ತಯಾರಿಸಿ ಪ್ರಶ್ನೋತ್ತರ ಚಟುವಟಿಕೆಯಿಂದ ಓದಿದರೆ ನೆನಪಿನಲ್ಲಿಡುವುದು ಸುಲಭವಾಗುವುದು. ಓದುವಾಗ ಅಂಡರ್ಲೈನ್ ಹಾಕುವುದು, ಮುಖ್ಯಾಂಶಗಳನ್ನು ಬರೆದಿಟ್ಟುಕೊಳ್ಳುವುದು, ರೇಖಾ ಚಿತ್ರಗಳು, ಚಿತ್ರಪಟಗಳನ್ನು ಬಳಸಿ ಓದುವುದು, ಪ್ರಮುಖ ಫಾರ್ಮುಲಾ ಮತ್ತು ಸಂಕೇತಗಳ ಚಾರ್ಟ್ ತಯಾರಿಸಿಕೊಂಡು ಓದುವ ಕೋಣೆಯಲ್ಲಿ ಕಾಣುವಂತೆ ಹಾಕಿಕೊಳ್ಳುವುದು. ಓದಿದ್ದನ್ನು ಬರೆಯುವುದು ತುಂಬಾ ಉತ್ತಮವಾದ ವಿಧಾನ. ಸಣ್ಣಡೈರಿ ಅಥವಾ ಟಿಪ್ಪಣಿ ಪುಸ್ತಕದಲ್ಲಿ ಮುಖ್ಯಾಂಶಗಳನ್ನು ಬರೆದಿಟ್ಟುಕೊಂಡು ಬಿಡುವಿನ ವೇಳೆ ಅಥವಾ ಪ್ರಯಾಣ ಸಮಯದಲ್ಲಿ ಅವುಗಳ ಕಡೆಕಣ್ಣು ಹಾಯಿಸುವುದರಿಂದ ಹೆಚ್ಚು ನೆನಪಿನಲ್ಲಿ ಉಳಿಯುವಂತಾಗುತ್ತದೆ. ವಿನಾಕಾರಣವಾಗಿ ಓದುವುದನ್ನು ಮುಂದೆ ಹಾಕುವುದನ್ನು ಸಾಧ್ಯವಾದಷ್ಟು ನಿಯಂತ್ರಿಸುವುದು ಒಳ್ಳೆಯದು.
 ಉತ್ತಮ ಆಹಾರ ಮತ್ತು ನಿದ್ರೆ
ಓದುವ ಒತ್ತಡದಿಂದ ಅದರಲ್ಲಿಯೂ ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಮಾಡುವ ದೊಡ್ಡತಪ್ಪೆಂದರೆ ಸರಿಯಾಗಿ ಆಹಾರ ಸೇವಿಸದಿರುವುದು ಮತ್ತು ಸರಿಯಾಗಿ ನಿದ್ರೆ ಮಾಡದಿರುವುದು. ಪ್ರತಿದಿನ ಕನಿಷ್ಠ 6 ಗಂಟೆಗಳ ಕಾಲವಾದರು ನಿದ್ರೆ ಮಾಡುವುದು ಒಳ್ಳೆಯದು. ಅದೇರೀತಿಯಾಗಿ ಸಮಯಕ್ಕೆ ಸರಿಯಾಗಿ ಋತುಮಾನಕ್ಕೆ ಹೊಂದಿಕೊಳ್ಳುವ ಸ್ವಚ್ಛ, ಹಿತಮಿತವಾದ, ಪ್ರೊಟೀನ್ ಮತ್ತು ವಿಟಮಿನ್‌ಗಳನ್ನು ಒಳಗೊಂಡ ಆಹಾರ ಸೇವನೆ ಮಾಡುವುದು ರೂಢಿಸಿಕೊಳ್ಳಬೇಕು. ಆದಷ್ಟು ಜಂಕ್ ಫುಡ್ ಸೇವಿಸುವುದು ಕಡಿಮೆ ಮಾಡುವುದು ಅಷ್ಟೇ ಮುಖ್ಯವಾಗಿದೆ.

 ಓದುವ ಸ್ಥಳದ ಆಯ್ಕೆ
ತನಗೆಯಾವ ಸ್ಥಳದಲ್ಲಿ ಏಕಾಗ್ರತೆಯಿಂದ ಆರಾಮದಾಯಕವಾಗಿ, ಪ್ರಶಾಂತವೆನಿಸುವುದೋ ಅಲ್ಲಿ ಓದುವುದು ಒಳಿತು. ಉತ್ತಮವಾದ ಗಾಳಿ, ಬೆಳಕಿರುವಂತಹ ಸ್ಥಳ ಆಯ್ಕೆ ಮಾಡುವುದು ಸೂಕ್ತವಾದುದು.
 ಉಡುಪು:
ಋತುಮಾನಕ್ಕೆ ತಕ್ಕಂತೆ ಸರಳವಾದ, ದೇಹಕ್ಕೆ ಬಿಗುವಾಗಿರದೇ ರಕ್ತಪರಿಚಲನೆಗೆ ಅನುಕೂಲವಾಗುವಂತಹ ಉಡುಪು ಧರಿಸುವುದು ಒಳ್ಳೆಯದು.
ನಿಯಮಿತ ವ್ಯಾಯಾಮ: ಮನಸ್ಸಿನ ಒತ್ತಡ ನಿವಾರಣೆ, ಏಕಾಗ್ರತೆ ಸದಾ ಕ್ರಿಯಾಶೀಲತೆಗೆ ಪೂರಕವಾಗಿ ಯೋಗ, ಧ್ಯಾನ, ವಾಯುವಿಹಾರದಂತಹ ಚಟುವಟಿಕೆಯ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ದೇಹದ ಆಯಾಸ ಕಡಿಮೆಯಾಗಿ, ಮನಸ್ಸಿಗೆ ಪ್ರಶಾಂತತೆ ದೊರೆತು, ಉತ್ತಮ ಆರೋಗ್ಯದಿಂದ ಹೆಚ್ಚು ಸಮಯ ಓದಲು ಅನುಕೂಲವಾಗುವುದು.
 ತಜ್ಞರ ಸಲಹೆ
ತಮಗೆ ಅಗತ್ಯವಾದ ವಿಷಯಗಳಿಗೆ ಅಥವಾ ಸಮಸ್ಯೆಗಳಿಗೆ ಶಿಕ್ಷಕರಿಂದ, ಪೋಷಕರಿಂದ ಮತ್ತು ವಿಷಯ ಪರಿಣಿತರಿಂದ ಸಲಹೆ ಪಡೆದುಕೊಳ್ಳುವುದು ಸಹ ಹೆಚ್ಚಿನ ಜ್ಞಾನಾರ್ಜನೆಗೆ ಸಹಾಯಕವಾಗಲಿದೆ.
 ಪ್ರಶ್ನೆಪತ್ರಿಕೆ ಬಿಡಿಸುವುದು
ಹಿಂದಿನ ಮೂರಾಲ್ಕು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು, ಉತ್ತರಗಳನ್ನು ನೋಡದೆ ಬರೆದು ಸ್ನೇಹಿತರು ಅಥವಾ ಶಿಕ್ಷಕರಿಂದ ಮೌಲ್ಯಮಾಪನ ಮಾಡಿಸಿಕೊಂಡು ಲೋಪದೋಷಗಳನ್ನು ತಿದ್ದಿಕೊಳ್ಳಲು ಸಹಾಯವಾಗುವುದು. ಹೀಗೆ ಮಾಡುವುದರಿಂದ ಮೌಲ್ಯಮಾಪನ ಹೇಗೆ ನಡೆಯುತ್ತದೆ ಎಂಬುದು ಸಹ ತಿಳಿದು ಹೇಗೆ ಬರೆಯಬೇಕು ಎಂಬುದನ್ನು ಅಭ್ಯಾಸ ಮಾಡಲು ಸಹಾಯವಾಗುವುದು. ಪ್ರಶ್ನೆಪತ್ರಿಕೆ ಬಿಡಿಸುವುದರಿಂದ ಪರೀಕ್ಷೆಯ ಆತಂಕ, ಭಯದೂರಾಗಿ ಹೆಚ್ಚು ಆತ್ಮ ವಿಶ್ವಾಸ ಬೆಳೆಯುತ್ತದೆ.


 ಉತ್ತಮ ಸಹಪಾಠಿಗಳ ಆಯ್ಕೆ  ಮತ್ತು ಸಹಾಯ
ಸಮಾನ ಮನಸ್ಕ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ಪರಸ್ಪರ ಓದುವ ಪುಸ್ತಕ, ನೋಟ್ಸ್ ವಿನಿಮಯ, ಅಧ್ಯಾಯಗಳನ್ನು ಹಂಚಿಕೊಂಡು ಓದಿ, ಚರ್ಚೆ ಮತ್ತು ಪ್ರಶ್ನೋತ್ತರ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಇಂತಹ ಚಟುವಟಿಕೆಯಿಂದ ವಿಷಯ ಹೆಚ್ಚು ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾಗುವುದು, ಅಲ್ಲದೆ ಪರಸ್ಪರ ಸ್ಪರ್ಧಾಮನೋಭಾವ ಬೆಳೆದು ಓದುವ ಛಲ ಬೆಳೆಯುವುದು.
 ಪ್ರೋತ್ಸಾಹ
 ಕುಟುಂಬದಲ್ಲಿ ತಂದೆ, ತಾಯಿ, ಹಿರಿಯರು ಮಕ್ಕಳ ಶಾಲೆಯ ಎಲ್ಲ ಚಟುವಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಿಗೆ ಓದಿನ ಕಡೆ ಹೆಚ್ಚು ಪ್ರೇರಣೆ ನೀಡಬೇಕು. ಮಕ್ಕಳಿಗೆ ಬೇಗ ಪ್ರಭಾವ ಬೀರುವುದು ಶಿಕ್ಷಕರ ಮಾರ್ಗದರ್ಶನ. ಆದುದರಿಂದ ಶಿಕ್ಷಕರು ಯಾವ ಮಗುವನ್ನೂ ಕಡೆಗಣಿಸದೆ ಸಮಸ್ಯೆಗಳನ್ನು ಪರಿಹರಿಸಿ ಸಮಾನತೆಯಿಂದ, ಪ್ರೀತಿ ವಾತ್ಸಲ್ಯದಿಂದ ಕಂಡು ಅಭ್ಯಾಸಕ್ಕೆ ಪ್ರೇರಣೆ ನೀಡಬೇಕು.
 ಅಂತರ್ಜಾಲ ಮತ್ತು ಮಾಧ್ಯಮದ ಬಳಕೆ
ತಮ್ಮ ವಿದ್ಯಾಭ್ಯಾಸಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಉತ್ತಮ. ಅಂತರ್ಜಾಲದಲ್ಲಿ ಲಭ್ಯವಾಗುವ ಪಠ್ಯದ ಹೆಚ್ಚಿನ ಮಾಹಿತಿ, ವೀಡಿಯೊ ಪಾಠಗಳ ವೀಕ್ಷಣೆ ಓದಿಗೆ ಸಹಾಯವಾಗಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಚಾಲ್ತಿಯಲ್ಲಿರುವ ವಿಷಯವಾರು ಚರ್ಚಾ ಗುಂಪುಗಳಲ್ಲಿ ಪರಸ್ಪರ ವಿಷಯ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಆದರೆ ಅನಗತ್ಯ ಅಂತರ್ಜಾಲ ಬಳಕೆ ತಮ್ಮ ಓದಿಗೆ ಮಾರಕವಾಗುವುದು ಎನ್ನುವುದನ್ನು ಮರೆಯಬಾರದು.
ಪರೀಕ್ಷೆಗಳಲ್ಲಿ ನಕಲು ಮಾಡುವುದನ್ನು ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸಿನಿಂದ ದೂರಮಾಡಿ, ಪ್ರಾಮಾಣಿಕ ಪ್ರಯತ್ನದಿಂದ ಹಾಗೂ ಕಠಿಣ ಪರಿಶ್ರಮದಿಂದ ಓದುವುದನ್ನು ರೂಢಿಸಬೇಕು. ವಿದ್ಯಾರ್ಥಿಗಳ ಬರವಣಿಗೆಯ ಶೈಲಿಯೂ ಸಹ ಮೌಲ್ಯಮಾಪನದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಉತ್ತಮ ಬರವಣಿಗೆಯನ್ನು ರೂಢಿಸಿಕೊಳ್ಳುವುದು ಹೆಚ್ಚು ಅಂಕ ಪಡೆಯಲು ಸಹಾಯಕವಾಗಲಿದೆ. ಫಲಿತಾಂಶದ ಬಗ್ಗೆ ಯೋಚನೆ ಮಾಡದೆ ತಮ್ಮನ್ನು ತಾವು ಸಂಪೂರ್ಣ ನೂರಕ್ಕೆ ನೂರರಷ್ಟು ತೊಡಗಿಸಿಕೊಂಡು, ಸತತ ಓದು, ಬರವಣಿಗೆ, ಚರ್ಚೆ, ಮನನಕ್ಕೆ ಹೆಚ್ಚು ಗಮನ ಕೇಂದ್ರೀಕರಿಸಿಕೊಂಡರೆ ತಮ್ಮ ಗುರಿ ಸಾಧನೆಯ ಯಶಸ್ಸು ಲಭಿಸುವುದು. ಇಂತಹ ಪ್ರಯತ್ನದಿಂದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News

ಜಗದಗಲ
ಜಗ ದಗಲ