ಶೇ.50 ಮಿತಿಯನ್ನು ಕೈಬಿಡುವುದರಿಂದ ಹಿಂದುಳಿದ ಜಾತಿಗಳಿಗೆ ಲಾಭವಾಗಬಹುದೇ?

Update: 2019-01-14 06:07 GMT

ಅಂತಿಮವಾಗಿ ಶೇ.10 ಮೀಸಲಾತಿಯು ಜಾತಿ ಆಧಾರಿತ ಮೀಸಲಾತಿ ವಿರೋಧಿಗಳ ಪಾಲಿಗೆ ಮುಖ್ಯವಾದ ಒಂದು ಬೌದ್ಧಿಕ ಗೆಲುವು ಆಗಿದೆ. ಇಷ್ಟರವರೆಗೆ ಮೇಲ್ಜಾತಿಗಳು ಉದ್ಯೋಗ ಹಾಗೂ ಶಿಕ್ಷಣ ಪ್ರತಿಭೆ ಆಧಾರಿತವಾಗಿರಬೇಕು ಎಂದು ವಾದಿಸುತ್ತಾ ಮೀಸಲಾತಿಯನ್ನು ವಿರೋಧಿಸುತ್ತ ಬಂದಿದ್ದವು. ಈ ವಾದವು ಮೀಸಲಾತಿಯ ಸುತ್ತ ಒಂದು ರೀತಿಯ ಕಳಂಕ ಇರುವ ಭಾವನೆಯನ್ನುಂಟು ಮಾಡಿ, ಮೀಸಲಾತಿ ಎಂಬುದು ಹಿಂದುಳಿದ ಜಾತಿಗಳ ಒಂದು ಹಕ್ಕು ಎಂಬುದನ್ನು ಮರೆಮಾಚುವ ಪ್ರಯತ್ನವಾಗಿತ್ತು. ಈಗ ಸ್ವತಃ ಮೇಲ್ಜಾತಿಗಳಿಗೆ ಮೀಸಲಾತಿ ದೊರಕಿರುವುದರಿಂದ ‘ಪ್ರತಿಭೆ ಆಧಾರಿತ’ ಎಂಬ ಯಾವುದೇ ವಾದ ಬಿದ್ದು ಹೋದಂತಾಗಿದೆ ಮತ್ತು ಮೀಸಲಾತಿಯ ಸುತ್ತ ಇದ್ದ ಕಳಂಕ ನಿವಾರಣೆಯಾಗಿದೆ.

ನರೇಂದ್ರ ಮೋದಿಯವರನ್ನು ಹಲವು ವಿಷಯಗಳಿಗಾಗಿ ದೂಷಿಸಬಹುದು ಆದರೆ ಸೋಮಾರಿತನಕ್ಕಾಗಿ, ಆಲಸ್ಯ ಕ್ಕಾಗಿ ಅಲ್ಲ. ಕಳೆದ ಸೋಮವಾರ ಕೇಂದ್ರ ಸರಕಾರ ಮೇಲ್ಜಾತಿಗಳಿಗೆ ಸರಕಾರಿ ಶಿಕ್ಷಣ ಹಾಗೂ ನೌಕರಿಗಳಲ್ಲಿ ಆರ್ಥಿಕ ಮಾನದಂಡದ ನೆಲೆಯಲ್ಲಿ ಶೇ. 10 ಮೀಸಲಾತಿ ನೀಡುವುದಾಗಿ ಘೋಷಿಸಿ ಎಲ್ಲರನ್ನು ಚಕಿತಗೊಳಿಸಿತು. ಮಂಗಳವಾರ ಇದಕ್ಕೆ ಬೇಕಾಗಿದ್ದ ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕೃತವಾಯಿತು. ಮರುದಿನ ಅದಕ್ಕೆ ರಾಜ್ಯಸಭೆಯ ಅನುಮೋದನೆ ದೊರಕಿತು.
ಮೇಲ್ಜಾತಿ ಮೀಸಲಾತಿಗೆ ಆಳುವ ಪಕ್ಷ ಮತ್ತು ವಿರೋಧ ಪಕ್ಷದ ಸಂಸದರು ಬೆಂಬಲ ವ್ಯಕ್ತಪಡಿಸುತ್ತಿದ್ದಂತೆಯೇ ಸರಕಾರದ ಈ ಹೆಜ್ಜೆ ಪುರೋಗಾಮಿ ನಿಲುವಿಗೆ ಹಾನಿಯುಂಟು ಮಾಡುತ್ತದೆ ಎಂಬ ಅಭಿಪ್ರಾಯಗಳೂ ಕೇಳಿಬಂದವು. ‘‘ರಾಜಕೀಯ ಹಾಗೂ ಅಧಿಕಾರದ ಒತ್ತಡಗಳು ನೈತಿಕ ಪರಿಗಣನೆಗಳಿಗಿಂತ ಹೇಗೆ ಹೆಚ್ಚು ಮುಖ್ಯವಾಗುತ್ತವೆ ಎಂಬುದಕ್ಕೆ ಸರಕಾರ ತಂದಿರುವ ಮಸೂದೆ ಒಂದು ಉದಾಹರಣೆ’’ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಪ್ರತಾಪ್ ಭಾನು ಮೆಹ್ತಾ ವಾದಿಸಿದರು. ಸ್ಕ್ರಾಲ್.ಇನ್‌ನಲ್ಲಿ ಅಲೋಕ್ ಪ್ರಸನ್ನ ಕುಮಾರ್ ಆರ್ಥಿಕ ಮಾನದಂಡವನ್ನು ಪ್ರಶ್ನಿಸಿದರು: ‘‘ಮೀಸಲಾತಿ ಮತ್ತು ಜಾತಿಯಂತಹ ಸಾಮಾಜಿಕ ಮಾನದಂಡದ ನಡುವಿನ ಕೊಂಡಿಯನ್ನು ಮುರಿಯುವ ಮೂಲಕ ನರೇಂದ್ರ ಮೋದಿ ಸರಕಾರವು, ಸರಕಾರದ ಪಾಲಿಗೆ, ಮೀಸಲಾತಿಯೆಂದರೆ ಒಂದು ದಾನ ನೀಡಿಕೆ ಕ್ರಮವೇ ಹೊರತು ಸಮಾನತೆಯನ್ನು ಸಾಧಿಸುವ ಒಂದು ಸಾಂವಿಧಾನಿಕ ಕ್ರಮವಲ್ಲವೆಂದು ಬಿಂಬಿಸಲು ಪ್ರಯತ್ನಿಸುತ್ತಿದೆ.’’


 ಮೆಹ್ತಾ ಮತ್ತು ಕುಮಾರ್ ಇಬ್ಬರ ವಾದಗಳಲ್ಲಿ ತಿರುಳು ಇದೆ. ಆದರೆ ಮೀಸಲಾತಿಯನ್ನು ವಿನ್ಯಾಸಗೊಳಿಸಿರುವ ರೀತಿಯನ್ನು ಗಮನಿಸಿದರೆ ಅದು ಸಾಮಾಜಿಕವಾಗಿ ಪುರೋಗಾಮಿ ಆದ ಗುರಿಗಳನ್ನು ಸಾಧಿಸುವಲ್ಲಿ ಸಫಲವಾಗುತ್ತದೆ ಎಂದು ಹೇಳಬಹುದಾಗಿದೆ.
ಗಮನಿಸಬೇಕಾದ ಮೊದಲ ಅಂಶವೆಂದರೆ ಶೇ. 10 ಮೇಲ್ಜಾತಿ ಮೀಸಲಾತಿ ಕೋಟಾ ಈಗ ಇರುವ ದಲಿತ, ಆದಿವಾಸಿ ಮತ್ತು ಇತರ ಹಿಂದುಳಿದ ಜಾತಿ ಮೀಸಲಾತಿಗಳನ್ನು ಕಸಿದುಕೊಳ್ಳುವುದಿಲ್ಲ. ಇದು ಎರಡೂ ಕಡೆಗಳ, ಎರಡು ಪಕ್ಷಗಳ ಬೆಂಬಲಕ್ಕೆ ಮುಖ್ಯ ಕಾರಣವಾಗಿದೆ. ದೇಶದ ಏಕೈಕ ಅತಿದೊಡ್ಡ ದಲಿತ ಪಕ್ಷವಾಗಿರುವ ಬಹುಜನ ಸಮಾಜವಾದಿ ಪಕ್ಷ ಕೂಡ ಮೇಲ್ಜಾತಿ ಮೀಸಲಾತಿಯನ್ನು ಬೆಂಬಲಿಸಿದೆ.
ನಾವು ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಮೇಲ್ಜಾತಿಗಳ ಎಲ್ಲರಿಗೂ ಈ ಮೀಸಲಾತಿಯಿಂದ ಲಾಭವಾಗುತ್ತದೆಯೇ? ಇಲ್ಲಿ ಎರಡು ವಿಷಯಗಳಿವೆ.
1. ತಾಂತ್ರಿಕವಾಗಿ ಜಾತಿಯನ್ನು ಅನುಮಾನದಿಂದ ಕಾಣುವ ಸಾಮಾನ್ಯ ವರ್ಗದ ಕೋಟಾ ಮೇಲ್ಜಾತಿಗೆ ಒಂದು ತಡೆಯಾಗಿದೆ. ಜಾತಿ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಸವರ್ಣೀಯರೊಂದಿಗೆ ನೇರವಾಗಿ ಸ್ಪರ್ಧಿಸಲು ಇತರ ಜಾತಿಗಳು ಅಸಮರ್ಥವಾಗಿವೆ.
2. ಶೇ. 10 ಮೀಸಲಾತಿಗೆ ನಿಗದಿಪಡಿಸಲಾಗಿರುವ ಮಾನದಂಡ (ಐದು ಎಕರೆ ಜಮೀನು ಮತ್ತು ವಾರ್ಷಿಕ ಎಂಟು ಲಕ್ಷ ರೂಪಾಯಿ ಆದಾಯ) ಎಷ್ಟೊಂದು ಮೇಲು ಮಟ್ಟದ ಮಿತಿಯೆಂದರೆ ಮೇಲ್ಜಾತಿಯ ಬಹುಪಾಲು ಎಲ್ಲರೂ ಈ ಮೀಸಲಾತಿಗೆ ಅರ್ಹರಾಗುತ್ತಾರೆ.


ಅಂದರೆ, ಈ ಶೇ. 10 ಕೋಟಾ ಪ್ರಧಾನಿ ಮೋದಿಯವರಿಗೆ ರಾಜಕೀಯವಾಗಿ ನೆರವಾಗಬಹುದಾದರೂ, ಅದು ವಾಸ್ತವಿಕವಾಗಿ ಮೇಲ್ಜಾತಿಗಳ ತಥಾಕಥಿತ ಬಡವರ ಸ್ಥಿತಿಯನ್ನು ಸುಧಾರಿಸಲು ಬಹಳಷ್ಟು ಏನೂ ನೆರವಾಗುವುದಿಲ್ಲ.
 ವಿವಾದಾಸ್ಪದ ಶೇ. 50 ಮಿತಿಗೆ ಅಂತ್ಯ
 ಅದೇನಿದ್ದರೂ ಶೇ. 10 ಮೀಸಲಾತಿಯು ಹಿಂದುಳಿದ ಜಾತಿಗಳನ್ನು ಮುಂದೆ ತರುವುದರಲ್ಲಿ ಹೊಸ ಸಾಧ್ಯತೆಗಳನ್ನು ತೆರೆಯುತ್ತದೆ. ಮುಖ್ಯವಾಗಿ ಅದು ಮೀಸಲಾತಿಯ ಮೇಲೆ ಈಗ ಇರುವ ಶೇ. 50 ಮಿತಿಗೆ ಅಂತ್ಯ ಹಾಡುತ್ತದೆ. 1992ರಲ್ಲಿ ಸುಪ್ರೀಂ ಕೋರ್ಟ್, ‘‘ಶೇ. 50 ಮಿತಿಯನ್ನು ಮೀರುವ ಯಾವುದೇ ಮೀಸಲಾತಿಯನ್ನು ಅಸಿಂಧುಗೊಳಿಸಲಾಗುವುದು.’’ ಎಂದು ಹೇಳಿತ್ತು. ಆದರೆ ಈ ‘ಶೇ. 50’ ಎಂಬ ಸಂಖ್ಯೆ ಅದಕ್ಕೆ ಎಲ್ಲಿಂದ ಬಂತು ಎಂಬುದು ತಿಳಿದಿಲ್ಲ. ಯಾಕೆಂದರೆ ಇದನ್ನು ಬೆಂಬಲಿಸಿದ ಯಾವುದೇ ಕಾನೂನು ಇಲ್ಲ; ಭಾರತದ ಸಂವಿಧಾನದಲ್ಲಿ ಈ ಮಿತಿಯನ್ನು ಉಲ್ಲೇಖಿಸಲಾಗಿಲ್ಲ ಅಥವಾ ಇದನ್ನು ಬೆಂಬಲಿಸುವಂತಹ ಯಾವುದೂ ಭಾರತದ ಜನಸಂಖ್ಯಾ ದತ್ತಾಂಶಗಳಿಲ್ಲ. ಸುಪ್ರೀಂ ಕೋರ್ಟ್ ಈ ಶೇ. 50ರ ಮಿತಿ (ಶೇ.70 ಅಥವಾ 43 ಅಲ್ಲ) ‘ತಾರ್ಕಿಕ’, ನ್ಯಾಯಬದ್ಧ ಎಂದಷ್ಟೇ ಹೇಳಿ ಅದನ್ನು ಅಲ್ಲಿಗೇ ಬಿಟ್ಟು ಬಿಡುತ್ತದೆ. ಆದರೆ ಈ ಸಂಖ್ಯೆ (ಶೇ.50) ನ್ಯಾಯ ಬದ್ಧವಲ್ಲ, ಅತಾರ್ಕಿಕ ಎಂದು ವಾದಿಸಲು ಬೇಕಾಗುವಷ್ಟು ದತ್ತಾಂಶ ಲಭ್ಯವಿದೆ. 1980ರಲ್ಲಿ ಮಂಡಲ ಆಯೋಗವು ಈಗ ಇತರ ಹಿಂದುಳಿದ ಜಾತಿಗಳು ಎಂದು ಕರೆಯಲಾಗುವವರು ದೇಶದ ಜನಸಂಖ್ಯೆಯ ಶೇ.52ರಷ್ಟು ಇದ್ದಾರೆ ಎಂಬುದನ್ನು ಗಮನಿಸಿತು. ಇದು ದಲಿತರನ್ನು (ಶೇ. 17) ಮತ್ತು ಆದಿವಾಸಿಗಳನ್ನು (ಶೇ. 8) ಹೊರತುಪಡಿಸಿ ಇರುವ ಒಬಿಸಿಗಳ ಸಂಖ್ಯೆ ಇವುಗಳನ್ನೆಲ್ಲ ಕೂಡಿಸಿದರೆ ಶೇ. 77ರಷ್ಟು ಆಗುತ್ತದೆ.
ಅಲ್ಲದೆ ‘ಹಿಂದುಳಿದ’ ಎಂದು ವರ್ಗೀಕರಿಸಲಾಗಿರುವ ಜಾತಿಗಳ ಸಂಖ್ಯೆಯಲ್ಲೇ ಹೆಚ್ಚಳವಾಗಿದೆೆ. 1980ರಲ್ಲಿ ಮಂಡಳ ಆಯೋಗವು ಹಿಂದುಳಿದ ಜಾತಿಗಳನ್ನು ಗುರುತಿಸಿದಾಗ ಅದು 3,763 ಜಾತಿಗಳನ್ನು ಪಟ್ಟಿ ಮಾಡಿತ್ತು. ಆದರೆ 2006ರ ವೇಳೆಗೆ ಇದು 5,013ಕ್ಕೆ ಏರಿತು. ಆದ್ದರಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ನೋಡಿದಾಗ ಮೇಲ್ಜಾತಿಗಳು ತಮ್ಮ ಸಂಖ್ಯೆಗಿಂತ ತುಂಬಾ ಹೆಚ್ಚಿನ ಸವಲತ್ತುಗಳನ್ನು ಕಬಳಿಸಿಕೊಳ್ಳುವುದು ತಾರ್ಕಿಕವಲ್ಲ; ನ್ಯಾಯ ಬದ್ಧವಲ್ಲ.
 ಬೌದ್ಧಿಕ ಗೆಲುವು
ಅಂತಿಮವಾಗಿ ಹತ್ತು ಶೇ.10 ಮೀಸಲಾತಿಯು ಜಾತಿ ಆಧಾರಿತ ಮೀಸಲಾತಿ ವಿರೋಧಿಗಳ ಪಾಲಿಗೆ ಮುಖ್ಯವಾದ ಒಂದು ಬೌದ್ಧಿಕ ಗೆಲುವು ಆಗಿದೆ. ಇಷ್ಟರವರೆಗೆ ಮೇಲ್ಜಾತಿಗಳು ಉದ್ಯೋಗ ಹಾಗೂ ಶಿಕ್ಷಣ ಪ್ರತಿಭೆ ಆಧಾರಿತವಾಗಿರಬೇಕು ಎಂದು ವಾದಿಸುತ್ತಾ ಮೀಸಲಾತಿಯನ್ನು ವಿರೋಧಿಸುತ್ತ ಬಂದಿದ್ದವು. ಈ ವಾದವು ಮೀಸಲಾತಿಯ ಸುತ್ತ ಒಂದು ರೀತಿಯ ಕಳಂಕ ಇರುವ ಭಾವನೆಯನ್ನುಂಟು ಮಾಡಿ, ಮೀಸಲಾತಿ ಎಂಬುದು ಹಿಂದುಳಿದ ಜಾತಿಗಳ ಒಂದು ಹಕ್ಕು ಎಂಬುದನ್ನು ಮರೆಮಾಚುವ ಪ್ರಯತ್ನವಾಗಿತ್ತು. ಈಗ ಸ್ವತಃ ಮೇಲ್ಜಾತಿಗಳಿಗೆ ಮೀಸಲಾತಿ ದೊರಕಿರುವುದರಿಂದ ‘ಪ್ರತಿಭೆ ಆಧಾರಿತ’ ಎಂಬ ಯಾವುದೇ ವಾದ ಬಿದ್ದು ಹೋದಂತಾಗಿದೆ ಮತ್ತು ಮೀಸಲಾತಿಯ ಸುತ್ತ ಇದ್ದ ಕಳಂಕ ನಿವಾರಣೆಯಾಗಿದೆ.
ಕೃಪೆ: scroll.in

Writer - ಶುಐಬ್ ದಾನಿಯಾಲ್

contributor

Editor - ಶುಐಬ್ ದಾನಿಯಾಲ್

contributor

Similar News

ಜಗದಗಲ
ಜಗ ದಗಲ