ಬಾಟಲಿ ನೀರು ಮಾರಾಟ ಮಾಡುವುದಿಲ್ಲ ಈ ರೆಸ್ಟೋರೆಂಟ್ ಮಾಲಕ

Update: 2019-01-15 14:52 GMT

"ಇವತ್ತು ನನ್ನ ರೆಸ್ಟೋರೆಂಟ್ ಗೆ ಒಬ್ಬ ಸ್ಮಾರ್ಟ್ ಯುವಕ ಬಂದು ತನ್ನ ಬಾಟಲಿ ನೀರಿನ ಬ್ರಾಂಡ್ ಅನ್ನು ಪರಿಚಯಿಸಿ ಅದನ್ನು ನಿಮ್ಮ ರೆಸ್ಟೋರೆಂಟಲ್ಲಿ ಮಾರಾಟಕ್ಕಿಡಿ ಎಂದು ಹೇಳಿದ. ಅದಕ್ಕೆ ನಾನು ನಮ್ಮ ರೆಸ್ಟೋರೆಂಟ್ ನಲ್ಲಿ ನೀರು ಮಾರಾಟವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದೆ. ಅದಕ್ಕೆ ಆತ ತನ್ನ ಬ್ರಾಂಡ್ ಮಾರಿದರೆ ನಿಮಗೆ ಉಳ್ಳೆಯ ಲಾಭ ಸಿಗುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದ." 

"ಅದಕ್ಕೆ ನಾನು ಹೇಳಿದೆ ನಾನು ನೀರು ಮಾರಾಟ ಮಾಡುವುದನ್ನೇ ನಂಬುವುದಿಲ್ಲ. ನನ್ನ ರೆಸ್ಟೋರೆಂಟ್ ನಲ್ಲಿ  ಆರ್ ಒ ( ನೀರನ್ನು ಶುದ್ಧೀಕರಿಸುವ ಘಟಕ ) ಪ್ಲಾಂಟ್ ಇದೆ. ಮುನಿಸಿಪಾಲಿಟಿಯವರು ಕೊಡುವ ನೀರನ್ನು ಅದರಲ್ಲಿ ಶುದ್ಧೀಕರಿಸಿ ನಮ್ಮ ಗ್ರಾಹಕರಿಗೆ ಉಚಿತವಾಗಿ ಕೊಡುತ್ತೇನೆ. ನಾನು ಪಂಜಾಬಿ. ಬಂದವರಿಗೆ ನೀರು ಕೊಡುವುದು ನಮ್ಮ ಕರ್ತವ್ಯ ಹಾಗು ಪುಣ್ಯ ಕೆಲಸ ಎಂದು ನಮ್ಮ ಸಂಸ್ಕೃತಿ ಕಲಿಸುತ್ತದೆ". ಇಷ್ಟೇ ಅಲ್ಲ, ಇನ್ನು ಈ ಬಾಟಲಿ ನೀರು ಮಾರಾಟ ಜಾಲ ನಮ್ಮ ಸರಕಾರಗಳ ಘೋರ ವೈಫಲ್ಯದ ಫಲಿತಾಂಶ ಎಂಬುದು ಸ್ಪಷ್ಟ. ನನಗೆ 50 ರೂಪಾಯಿಗೆ ಸಾವಿರ ಲೀಟರ್ ನೀರು ಸಿಗುತ್ತದೆ. ಅದೇ ಬಾಟಲಿ ನೀರು ಪ್ರತಿ ಲೀಟರ್ ಗೆ 20 ರೂಪಾಯಿ.  ಆ ಲೆಕ್ಕದಲ್ಲಿ ನಾನು ಪ್ರತಿ 2.5 ಲೀಟರ್ ನೀರು ಮಾರಿದ ಮೇಲೆ ನನ್ನ ಬಳಿ ಉಳಿಯುವ ಉಚಿತ ನೀರು 997.5 ಲೀಟರ್ ಗಳು. ಈ ಉಚಿತ ನೀರನ್ನು ಪ್ಯಾಕ್ ಮಾಡಿ ಸಾಗಾಟ ಮಾಡುವ ಖರ್ಚನ್ನು ಈಗ ಇಡೀ ದೇಶದ ಮೇಲೆ ಹೊರಿಸಲಾಗುತ್ತಿದೆ. 

ಸಾಗಾಟಕ್ಕೆ ಖರ್ಚಾಗುವುದು ನಾವು ಆಮದು ಮಾಡಿಕೊಳ್ಳುವ ಪೆಟ್ರೋಲ್ ಹಾಗು ಡೀಸೆಲ್. ಇನ್ನು ಈ ಬಾಟಲಿ ನೀರನ್ನು ವಿತರಿಸಲು ದೊಡ್ಡ ಖರ್ಚು ತಗಲುತ್ತದೆ. ಅಂದರೆ ಪ್ರತಿ ಒಂದು ಬಾಟಲಿ ನೀರು ಸಾಗಾಟ ಆಗುವಾಗ ನಮ್ಮ ದೇಶದ ಬೊಕ್ಕಸ ಅಷ್ಟೇ ಪ್ರಮಾಣದಲ್ಲಿ ಬರಿದಾಗುತ್ತಿದೆ. ಅದಕ್ಕಿಂತ ಅಪಾಯವೆಂದರೆ, ಈ ಪ್ಲಾಸ್ಟಿಕ್ ಬಾಟಲಿಗಳಿಂದ ನಮ್ಮ ಪರಿಸರಕ್ಕೆ ಗಂಭೀರ ಹಾನಿಯಾಗುತ್ತಿದೆ.

ನಮ್ಮ ದೇಶದ ಜನರ ಜೇಬು ಖಾಲಿಯಾಗದಿರಲು ಹಾಗು ನಮ್ಮ ಪರಿಸರ ನಾಶ ಆಗದಿರಲು ಈ ಬಾಟಲಿ ನೀರಿನ ಉದ್ಯಮ ಸಾಯಬೇಕು. ಅದಕ್ಕಿರುವುದು ಒಂದೇ ದಾರಿ, ಎಲ್ಲರೂ ಉಚಿತವಾಗಿ ನೀರು ನೀಡಲು ಮುಂದೆ ಬರಬೇಕು. ಇದನ್ನೆಲ್ಲಾ ಕೇಳಿದ ಮೇಲೆ, ಆ ಯುವಕ ನನಗೆ ಆತ್ಮೀಯವಾಗಿ ಹಸ್ತ ಲಾಘವ ನೀಡಿ ಹೊರಟು ಹೋದ.

ನಮ್ಮಲ್ಲಿ ಕೆಲವು ನಡೆಯಲೇ ಬಾರದ ಉದ್ಯಮಗಳಿವೆ. ಅವುಗಳಲ್ಲಿ ಈ ಬಾಟಲಿ ನೀರಿನ ಉದ್ಯಮವೂ ಒಂದು. ಇದು ನಮ್ಮ ಸರಕಾರಗಳ ವೈಫಲ್ಯ ಹಾಗು ಕಲುಷಿತ ನೀರಿನ ಭಯ ಈ ಉದ್ಯಮ ಬೆಳೆಯಲು ಕಾರಣ.

ಈ ಬಾಟಲಿ ಉದ್ಯಮದಿಂದ ಆಗುತ್ತಿರುವ ಅನಾಹುತವನ್ನು ನಾವಿನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಈಗಲಾದರೂ ಇದನ್ನು ಅರ್ಥಮಾಡಿಕೊಳ್ಳಿ. ನಿಮಗೆ ಸಾಧ್ಯವಿರುವ ಎಲ್ಲೆಡೆ ಜನರಿಗೆ ನೀರು ಕೊಡಿ. ಅದು ಒಳ್ಳೆಯ ಕೆಲಸ. ಪುಣ್ಯದ ಕೆಲಸ. ನಮ್ಮ ರೆಸ್ಟೋರೆಂಟ್ ನಲ್ಲಿ ನಾವದನ್ನು ಪ್ರತಿದಿನ ಮಾಡುತ್ತಿದ್ದೇವೆ.

ವಿನೋದ್ ಚಂದ್, actualdemocracy.in ಸ್ಥಾಪಕ ಹಾಗು ಮುಂಬೈಯ ಮೀರಾ ರೋಡ್ ನಲ್ಲಿ ಪ್ರೀತಮ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಅವರ ಫೇಸ್ ಬುಕ್ ಪೇಜ್ ಲಿಂಕ್ ಇಲ್ಲಿದೆ https://www.facebook.com/vinod.k.chand

ಇದು ಅವರ ಫೇಸ್ ಬುಕ್ ಪೋಸ್ಟ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News