ಪ್ರಕಾಶ್ ರೈ ಅವರಿಗೆ...
ಭಾಗ 1
ಈ ಪ್ರಕ್ರಿಯೆಯಲ್ಲಿ ಮರವನ್ನು ನೋಡುತ್ತಾ ಕಾಡನ್ನು ಕಾಣದಂತಾಗಬಾರದು. ಬೆಂಕಿಯಿಂದ ಬಚಾಗುವ ತುರ್ತಿನಲ್ಲಿ ಹಾವನ್ನು ಹಗ್ಗವೆಂದು ಭ್ರಮಿಸಿಬಿಡುವ ಪ್ರಮಾದ ಮಾಡಬಾರದು. ಪರಿಹಾರದೊಳಗಿರುವ ಸಮಸ್ಯೆಗಳನ್ನು ಮರೆಯಬಾರದು. ಹೀಗಾಗಿ ಇಂದಿನ ಸಂದರ್ಭದಲ್ಲೇ ಅಡಕವಾಗಿರುವ ಕೆಲವು ಸಂಕೀರ್ಣ ಸವಾಲುಗಳ ಬಗ್ಗೆ ನಿಮ್ಮೆಡನೆ ಮುಕ್ತವಾಗಿ ಚರ್ಚಿಸಲೆಂದೇ ಈ ಪತ್ರವನ್ನು ಬರೆಯುತ್ತಿದ್ದೇನೆ. ಸಂಸದೀಯ ರಾಜಕಾರಣ ಜನಹೋರಾಟಗಳಿಗೆ ಯಾವತ್ತಿಗೂ ಒಂದು ಅಗ್ನಿ ಪರೀಕ್ಷೆಯೇ. ನೀವು ಅದರಲ್ಲಿ ಗೆಲ್ಲಬೇಕು. ಈ ಸದಾಶಯವೇ ಈ ಪತ್ರಕ್ಕೇ ಪ್ರೇರಣೆ. ನೀವದನ್ನು ಅರ್ಥಮಾಡಿಕೊಳ್ಳಬಲ್ಲಿರೆಂಬ ಭರವಸೆ ನನಗಿದೆ.
ಆತ್ಮೀಯ ಪ್ರಕಾಶ್ ರೈ,
ಮೊದಲಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಬೆಂಗಳೂರು ಕೇಂದ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಶುಭವಾಗಲಿ. ಗೆಲುವು ಜನರನ್ನು ಮರೆಸದಿರಲಿ. ಸೋಲು ಜನರ ಬಗ್ಗೆ ಸಿಟ್ಟು ತರಿಸದಿರಲಿ. ಚುನಾವಣಾ ಅನಿವಾರ್ಯತೆಗಳು ಉದ್ದೇಶಗಳಲ್ಲಿ ರಾಜಿಯನ್ನು ಮಾಡಿಸದಿರಲಿ.
ಗೌರಿಯನ್ನು ಕೊಂದಿದ್ದು ಯಾರು ಎಂಬ ಪ್ರಶ್ನೆಯೊಂದಿಗೆ ನಿಮ್ಮ ಮರುಅನ್ವೇಷಣೆ ಪ್ರಾರಂಭವಾಯಿತು. ಬಹಳ ಬೇಗನೇ ಭಾರತವನ್ನು ಕೊಲ್ಲುತ್ತಿರುವವರೇ ಗೌರಿಯನ್ನು ಕೊಂದಿದ್ದಾರೆ ಎಂಬ ಉತ್ತರವನ್ನು ಕಂಡುಕೊಂಡಿರಿ. ಸರಿಯಾದ ಉತ್ತರವನ್ನು ಪಡೆಯಬೇಕೆಂದರೆ ಸರಿಯಾದ ಪ್ರಶ್ನೆಯನ್ನು ಕೇಳಬೇಕೆನ್ನುವುದನ್ನು ಸಾಬೀತು ಮಾಡಿದಿರಿ.
‘‘ಗೌರಿಯನ್ನು ಹೂತಿಲ್ಲ, ಬಿತ್ತಿದ್ದೇವೆ’’ ನಿಮ್ಮ ಮನದಾಳದ ಮಾತು ನಮ್ಮೆಲ್ಲರ ಭಾವನೆಗಳ ಅಭಿವ್ಯಕ್ತಿಯೇ ಆಗಿತ್ತು. ಅಂತೆಯೇ ಜೀವ ಕಾರುಣ್ಯ ಮತ್ತು ನ್ಯಾಯ ನಿಷ್ಟುರತೆಗಳ ಪ್ರತೀಕವಾದ ಗೌರಿ ಲಂಕೇಶ್ ನಿಮ್ಮಂಥ ಹಲವರಲ್ಲಿ ಮರುಹುಟ್ಟು ಪಡೆದರು. ನೀವಂತೂ ನಿಮ್ಮ ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ಕಂಫರ್ಟ್ ರೆನ್‌ನಿಂದ ಹೊರಬಂದು ಜನಹೋರಾಟದ ಕಾನ್‌ಫ್ಲಿಕ್ಟ್ ರೆನ್‌ಗಿಳಿದಿರಿ. ಗಳಿಸಿದ ಸಂಪತ್ತಿನ ಒಂದು ಭಾಗವನ್ನು ಈ ತುರ್ತಿನಲ್ಲಿ ಸಾಧ್ಯವಿರುವ ಸೀಮಿತ ಸುಧಾರಣೆಗಳಿಗೆ ನೀಡುತ್ತಾ ಗಳಿಸಿದ ಹೆಸರು ಮತ್ತು ನೈತಿಕ ಸ್ಥೈರ್ಯವನ್ನು ಅಧಿಕಾರಸ್ಥರನ್ನು ಪ್ರಶ್ನಿಸಲು ಹೂಡಿದಿರಿ. ಈ ಎಲ್ಲಾ ಕಾರಣಗಳಿಂದ ಜನಹೋರಾಟಗಳ ನೆಲ್ಮೆಯ ಗೆಳೆಯರಾದಿರಿ. ಜನರ ಹೊಸ ಭರವಸೆಯಾದಿರಿ. ಈಗ ನಿಮ್ಮ ಜನಮುಖಿ ಅಭಿಯಾನದ ಮುಂದುವರಿಕೆಯಾಗಿ ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಬಯಸಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೀರಿ. ಶುಭಾಶಯಗಳು ಮತ್ತೊಮ್ಮೆ.
ಆದರೆ ಜನಪರ ಬದಲಾವಣೆಯ ದೃಷ್ಟಿಯಿಂದ ನೋಡಿದರೆ ಚುನಾವಣೆಗಳು ಅಥವಾ ಭಾರತದ ಶಾಸಕಾಂಗಗಳು ಜನರಲ್ಲಿ ಭರವಸೆಗಿಂತ ಜಾಸ್ತಿ ಭ್ರಮನಿರಸನವನ್ನೇ ಉಂಟುಮಾಡಿವೆ. ಕಳೆದ 70 ವರ್ಷಗಳಲ್ಲಿ ಭಾರತದ ಜನತೆ ಅವರಿವರನ್ನು ನೆಚ್ಚಿಕೊಂಡು ಮೋಸಹೋದದ್ದೇ ಹೆಚ್ಚು. ಆಳವಾದ ವರ್ಗ-ಜಾತಿ-ಲಿಂಗ -ಪ್ರಾದೇಶಿಕ-ಧಾರ್ಮಿಕ ತಾರತಮ್ಯಗಳಿರುವ ದೇಶವೊಂದರಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಖಾತರಿ ಮಾಡದ ರಾಜಕೀಯ ಸ್ವಾತಂತ್ರ್ಯ ಹೇಗೆ ಉಳ್ಳವರ ಅಧಿಕಾರವನ್ನು ಸಾಂವಿಧಾನಿಕವಾಗಿ ಸುಭದ್ರಗೊಳಿಸುತ್ತದೆ ಎಂಬುದಕ್ಕೆ ಭಾರತ ಗಣರಾಜ್ಯದ 70 ವರ್ಷಗಳ ಪ್ರತಿದಿನದ ಅನುಭವಗಳೂ ಸಾಕ್ಷಿ ಹೇಳುತ್ತವೆ. ಅಂಬೇಡ್ಕರ್ ಇದನ್ನು ಈ ದೇಶಕ್ಕೆ ಸಂವಿಧಾನ ನೀಡುವಾಗಲೇ ಎಚ್ಚರಿಸಿದ್ದರು. ಅದರಲ್ಲೂ 1991ರ ನಂತರದ ನವ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಜನತೆಯ ಸಾರ್ವಭೌಮತೆ ಶಾಸನಾತ್ಮಕವಾಗಿ ಹರಣವಾಗುತ್ತಿರುವ ಹೊತ್ತಿನಲ್ಲಿ ಸಂಸತ್ತುಗಳು ಯಾರ ಧ್ವನಿಗಳ ವೇದಿಕೆಯೆಂಬ ಪ್ರಶ್ನೆ ಇನ್ನೂ ತೀವ್ರವಾಗಿ ಕಾಡುತ್ತಿದೆ.
ಆದರೂ ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಸರ್ವಾಧಿಕಾರ ವನ್ನು, ಅದು ಉಂಟುಮಾಡಿರುವ ಸಾಮಾಜಿಕ ಸಂಕ್ಷೋಭೆಯನ್ನು ಅನುಭವಿಸಿದ ನಂತರ ಯಾವಕಾರಣಕ್ಕೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬಾರದೆಂಬ ತುರ್ತಿನಲ್ಲಿ ನಾವೆಲ್ಲರೂ ಇದ್ದೇವೆ. ಹೀಗಾಗಿಯೇ ಅಸಾಧಾರಣ ಸಂದರ್ಭದಲ್ಲಿ ಅಸಾಧಾರಣವಾದ ಮತ್ತೂ ಎಂದೂ ತುಳಿಯದ ಹೆಜ್ಜೆಗಳನ್ನು ಇಡಬೇಕಾಗಿದೆ.
ಆದರೆ ಈ ಪ್ರಕ್ರಿಯೆಯಲ್ಲಿ ಮರವನ್ನು ನೋಡುತ್ತಾ ಕಾಡನ್ನು ಕಾಣದಂತಾಗಬಾರದು. ಬೆಂಕಿಯಿಂದ ಬಚಾಗುವ ತುರ್ತಿನಲ್ಲಿ ಹಾವನ್ನು ಹಗ್ಗವೆಂದು ಭ್ರಮಿಸಿಬಿಡುವ ಪ್ರಮಾದ ಮಾಡಬಾರದು. ಪರಿಹಾರದೊಳಗಿರುವ ಸಮಸ್ಯೆಗಳನ್ನು ಮರೆಯಬಾರದು. ಹೀಗಾಗಿ ಇಂದಿನ ಸಂದರ್ಭದಲ್ಲೇ ಅಡಕವಾಗಿರುವ ಕೆಲವು ಸಂಕೀರ್ಣ ಸವಾಲುಗಳ ಬಗ್ಗೆ ನಿಮ್ಮೆಡನೆ ಮುಕ್ತವಾಗಿ ಚರ್ಚಿಸಲೆಂದೇ ಈ ಪತ್ರವನ್ನು ಬರೆಯುತ್ತಿದ್ದೇನೆ. ಸಂಸದೀಯ ರಾಜಕಾರಣ ಜನಹೋರಾಟಗಳಿಗೆ ಯಾವತ್ತಿಗೂ ಒಂದು ಅಗ್ನಿ ಪರೀಕ್ಷೆಯೇ. ನೀವು ಅದರಲ್ಲಿ ಗೆಲ್ಲಬೇಕು. ಈ ಸದಾಶಯವೇ ಈ ಪತ್ರಕ್ಕೇ ಪ್ರೇರಣೆ. ನೀವದನ್ನು ಅರ್ಥಮಾಡಿಕೊಳ್ಳಬಲ್ಲಿರೆಂಬ ಭರವಸೆ ನನಗಿದೆ.
ಸಮಸ್ಯೆ: ಭಾರತದ ಸಾಂವಿಧಾನಿಕ ಪ್ರಜಾತಂತ್ರಕ್ಕೆ ವಿರುದ್ಧವಾಗಿ ಈ ದೇಶದ ಉಳ್ಳವರ್ಗ ನಡೆಸಿಕೊಂಡು ಬಂದ ಪ್ರತಿಕ್ರಾಂತಿಯ ಗತಿ, ವಿಸ್ತಾರ ಮತ್ತು ತೀವ್ರತೆಗಳೆಲ್ಲಾ ಆರೆಸ್ಸೆಸ್ ಮಾರ್ಗದರ್ಶನದ ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಹೆಚ್ಚಾಗಿದೆ. ದೇಶವು ಅತಿ ವೇಗವಾಗಿ ಫ್ಯಾಶಿಸಂ ಕಡೆ ದಾಪುಗಾಲಿಡುತ್ತಾ ಸಾಗಿದೆ. ಸೈನ್ಯದ ಜನರಲ್ ಬಿಜೆಪಿ ಪಕ್ಷದ ಕಾರ್ಯಕರ್ತನಂತೆ ಮಾತನಾಡುತ್ತಾರೆ. ದೇಶದ ಪ್ರಜಾತಂತ್ರವನ್ನು ಕಾಯಬೇಕಾದ ಸ್ವಾಯತ್ತ ಸಂಸ್ಥೆಗಳಾದ ಆರ್‌ಬಿಐ, ಸಿಬಿಐ, ಸಿವಿಸಿ, ಸಿಐಸಿ ಎಲ್ಲವನ್ನೂ ಪ್ರಧಾನ ಮಂತ್ರಿ ಕಾರ್ಯಾಲಯದ ಶಾಖಾ ಕಚೇರಿಗಳನ್ನಾಗಿಸಲಾಗಿದೆ. ಪ್ರಧಾನಿಗಳು ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಕಚೇರಿಯನ್ನೇ ಹೊಕ್ಕು ಬಂದಿದ್ದಾರೆ. ಸುಪ್ರೀಂ ಕೋರ್ಟಿನ ಸ್ವಾಯತ್ತತೆಯನ್ನು ಕಾಪಾಡುತ್ತಾರೆಂಬ ಭರವಸೆಯನ್ನು ನೀಡಿದ್ದ ಹಾಲಿ ಮುಖ್ಯನ್ಯಾಯಮೂರ್ತಿಗಳು ಆ ನಂತರ ನೀಡುತ್ತಿರುವ ತೀರ್ಪುಗಳು ನ್ಯಾಯಾಲಯದೊಳಗೆ ಪ್ರಧಾನಿಯ ಹೆಜ್ಜೆಗುರುತಿನ ಛಾಪನ್ನು ತೋರುತ್ತಿವೆ. ಸ್ವತಂತ್ರವಾಗಿರಬೇಕಿದ್ದ ಬಹುಪಾಲು ಮಾಧ್ಯಮಗಳು ಮೋದಿಯ ಮಡಿಲಲ್ಲಿ ಲಲ್ಲೆ ಹೊಡೆಯುತ್ತಿವೆ. ದಿನನಿತ್ಯ ಅವರು ಬಿತ್ತರಿಸುವ ಸುಳ್ಳಿಗೆ ಮತ್ತು ‘ವಾಟ್ಸ್‌ಆ್ಯಪ್ ಯೂನಿವರ್ಸಿಟಿ’ಯ ಅನುದಿನದ ನಂಜುಪೂರಿತ ಟೆಕ್ಸ್ಟುಗಳಿಗೆ ಬಲಿಯಾಗಿರುವ ಯುವಭಾರತ ಅಂತಃಕರಣವನ್ನೂ, ಆಲೋಚನೆಯನ್ನೂ ಕಳೆದುಕೊಂಡಿದೆ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಒಳಗಿಂದಲೇ ಕರಸೇವೆ ಮಾಡುತ್ತಾ ಮನುವಾದಿ ಮತ್ತು ಕಾರ್ಪೊರೇಟ್ ಶಕ್ತಿಗಳ ಸಾಧನ ವನ್ನಾಗಿಸಿಕೊಂಡಿವೆ. ದೇಶ ಇಂತಹ ಅಧಃಪತನವನ್ನು ಹಿಂದೆಂದೂ ಕಂಡಿರಲಿಲ್ಲ. ಫ್ಯಾಶಿಸಂ ಎಂದರೆ ಇದೇ. ಹೀಗಾಗಿಯೇ ಈ ಫ್ಯಾಶಿಸಂ ಅನ್ನು ಸಮಾಜ ಮತ್ತು ಪ್ರಭುತ್ವ ಎರಡರಲ್ಲೂ ಇಲ್ಲದಂತೆ ಮಾಡಬೇಕು. ರೋಸ್ ಲಕ್ಸಂಬರ್ಗ್ ಬಣ್ಣಿಸಿದಂತೆ ಇದು ಬರ್ಬರತೆ ಮತ್ತು ಮಾನವೀಯತೆಗಳ ನಡುವೆ ನಡೆಯುತ್ತಿರುವ ಯುದ್ಧ. ಈ ಚುನಾವಣೆಯಲ್ಲೂ ಬರ್ಬರತೆ ಸೋಲಬೇಕು.
ಇಲ್ಲಿಯವರೆಗಿನ ಪ್ರಶ್ನೆಗಳು ಸರಳ. ಉತ್ತರಗಳೂ ಸರಳ.
ಆದರೆ ಇಲ್ಲಿಂದಾಚೆಗೆ ನಮ್ಮ ಮುಂದಿರುವ ಸವಾಲುಗಳು ಇಷ್ಟು ಸರಳವೂ ಅಲ್ಲ. ಆದ್ದರಿಂದ ಉತ್ತರವೂ ಸರಳವಲ್ಲ. ಸ್ಪಷ್ಟವೂ ಅಲ್ಲ ಆದರೂ ಎಡವದೆ ಮುಂದಕ್ಕೆ ಸಾಗಬೇಕೆಂದರೆ ಈ ಸಂಕೀರ್ಣ ಪ್ರಶ್ನೆಗಳನ್ನು ಕೇಳಿಕೊಳ್ಳಲೇ ಬೇಕು ಮತ್ತು ಸಮಯ ಹಾಗೂ ಸಂದರ್ಭ ಆಗುಮಾಡುವಷ್ಟು ಸ್ಪಷ್ಟ ಉತ್ತರವನ್ನು ಪಡೆದುಕೊಳ್ಳಲೇ ಬೇಕು.
ಸವಾಲು-1: ರೂಪುಗೊಳ್ಳಲು ತಿಣುಕಾಡುತ್ತಿರುವ ಬಿಜೆಪಿ ವಿರೋಧಿ ಘಟ್‌ಬಂಧನ್ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಲ್ಲದೇ? ಇಟ್ಟರೂ ಎಷ್ಟು ಕಾಲ ದೂರವಿಡಬಲ್ಲದು?
ಬಿಜೆಪಿನ್ನು ಅನೌಪಚಾರಿಕ ಹಾಗೂ ಔಪಚಾರಿಕ ಅಧಿಕಾರಗಳೆರಡರಿಂದಲೂ ದೂರವಿಡಲು ಅದನ್ನು ವಿರೋಧಿಸುವ ಪಕ್ಷಗಳೆಲ್ಲಾ ಒಂದಾಗುವುದು ಒಂದು ತಾತ್ಕಾಲಿಕ ದಾರಿ. ಆದರೆ ಇಂತಹ ಒಂದು ಘಟ್‌ಬಂಧನ್ ಎಷ್ಟು ಕಾಲ ಬಿಜೆಪಿಯನ್ನು ದೂರವಿಡಬಹುದು? ಇಂತಹ ಘಟ್‌ಬಂಧನ್‌ಗಳ ಘಟಕ್ಕೆ ಗಟ್ಟಿ ಬುನಾದಿಯೇ ಇಲ್ಲ. ಹೀಗಾಗಿ ಅಂಥವು ಚಿಲ್ಲರೆ ಕಿತ್ತಾಟದಲ್ಲೇ ಕುಸಿದುಬಿದ್ದಿರುವ ಇತಿಹಾಸ ನಮ್ಮ ದೇಶಕ್ಕಿದೆ.
ಸದ್ಯದ ಮಟ್ಟಿಗೆ ಘಟ್‌ಬಂಧನ್‌ನ ರಾಜಕೀಯ ಸ್ವರೂಪ ಮತ್ತು ಸೈದ್ಧಾಂತಿಕ ಹಿನ್ನೆಲೆಗಳನ್ನು ನೋಡಿದರೆ ಅವೆಲ್ಲವೂ ಒಂದಾಗಿ ಬಿಜೆಪಿಯನ್ನು ಮಣಿಸಬಹುದಾದ ಸಾಧ್ಯತೆಯಿಂದ ಉಂಟಾಗುವ ನಿರಾಳಕ್ಕಿಂತ ಅವುಗಳು ಕಿತ್ತಾಡಿಕೊಂಡು ಮರುಚುನಾವಣೆಗೆ ದಾರಿ ಮಾಡಿಕೊಡಬಹುದಾದ ಆತಂಕವೇ ಹೆಚ್ಚಾಗುತ್ತದೆ. ಹಾಗಾಗಿಬಿಟ್ಟರೆೆ ವಿರೋಧ ಪಕ್ಷಗಳ ಬಗ್ಗೆ ಭ್ರಮ ನಿರಸನಗೊಂಡ ಜನತೆ ಮೋದಿಯನ್ನು ಅಥವಾ ಮೋದಿಗಿಂತ ಹೆಚ್ಚು ಸರ್ವಾಧಿಕಾರಿಯನ್ನು ಪ್ರಜಾತಾಂತ್ರಿಕ ವಾಗಿಯೇ ಸ್ಥಾಪಿಸಿಬಿಡುವ ಅಪಾಯವಿಲ್ಲವೇ? ಅಂತಹ ಒಂದು ಉನ್ಮಾದ ಅಥವಾ ತಿರಸ್ಕಾರ ಈ ಐದು ವರ್ಷಗಳಲ್ಲಿ ಮೋದಿತ್ವದ ಬಗ್ಗೆ ಜನರಲ್ಲಿ ಸಣ್ಣಗೆ ಮೂಡುತ್ತಿರುವ ಭ್ರಮನಿರಸನದ ಅನುಭವವನ್ನೂ ಮರೆಸಿಬಿಡುವುದಿಲ್ಲವೇ?
ಇದರ ಅರ್ಥ ಬಿಜೆಪಿ ಅಧಿಕಾರಕ್ಕೆ ಬರಬೇಕಂತಲ್ಲ. ಆದರೆ ಅದಕ್ಕೆ ಘಟ್‌ಬಂಧನ್ ಮಾರ್ಗ ಶಾರ್ಟ್ ಕಟ್ ಅಷ್ಟೆ.: ಅದು ಶಾರ್ಟ್ ಸರ್ಕ್ಯೂಟ್ ಕೂಡ ಆಗುವ ಸಾಧ್ಯತೆಯ ಬಗ್ಗೆ ನಾವು ಎಚ್ಚರದಿಂದಿರಬೇಕು.
ಬಿಜೆಪಿಯ ಅಸಲಿ ಬಣ್ಣವನ್ನು ಅರ್ಥಮಾಡಿಕೊಂಡು ಜನರ ಮನಾಧಿಕಾರ ದಿಂದ ಮೋದಿ ಇಳಿಯದೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಾಧ್ಯವಿಲ್ಲ. ಅದಾಗಬೇಕೆಂದರೆ ನಮ್ಮ ಶಕ್ತಿ ಸಾಮರ್ಥ್ಯಗಳೆಲ್ಲಾ ಫ್ಯಾಶಿಸಂ ಹೇಗೆ ನಮ್ಮ ಮತ್ತು ನಮ್ಮ ನಂತರದ ಪೀಳಿಗೆಯ ಬದುಕಿಗೆ ಮಾರಕವಾಗಿದೆ ಎಂಬುದನ್ನು ಅರ್ಥಪಡಿಸಲು ಹೆಚ್ಚು ವ್ಯಯಮಾಡಬೇಕು. ಈ ದೇಶವನ್ನು ಫ್ಯಾಶಿಸಂನಿಂದ ಬಚಾವು ಮಾಡಲು ಚುನಾವಣಾ ಸಮಯದಲ್ಲೂ ಮತ್ತು ಚುನಾವಣಾ ನಂತರವೂ ಅದೇ ರಾಜಮಾರ್ಗ.
ಸವಾಲು 2: ಬಿಜೆಪಿ ಎಂಬ ಮಾರಕ ವ್ಯಾಧಿಗೆ ಕಾಂಗ್ರೆಸ್ ಅಥವಾ ಕಾಂಗ್ರೆಸ್ ಮಾದರಿ ಜೀನ್ಸ್ ಇರುವ ಅಂದರೆ ಕಾಂಗ್ರೆಸ್ ಜಾರಿ ಮಾಡಿದ ಆರ್ಥಿಕ-ಸಾಮಾಜಿಕ ನೀತಿಗಳನ್ನೇ ಹಾಗೂ ರಾಷ್ಟ್ರ ಪರಿಕಲ್ಪನೆಗಳನ್ನೇ ಹೊಂದಿರುವ ಇತರ ರಾಜಕೀಯ ಪಕ್ಷಗಳು ಒಂದು ತಾತ್ಕಾಲಿಕ ಔಷಧವಾದರೂ ಆಗಬಲ್ಲವೇ?
ಬಿಜೆಪಿಯೆಂಬುದು ರೋಗದ ಸಿಂಪ್ಟಮ್. ಕಾಯಿಲೆಯ ಸೂಚಕ. ನಮ್ಮ ದೇಶಕ್ಕೆ ಹತ್ತಿರುವ ಅಸಲು ಕಾಯಿಲೆ ನವ ಉದಾರವಾದ ಅರ್ಥಾತ್ ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ನವ ಬ್ರಾಹ್ಮಣಶಾಹಿ ಅರ್ಥಾತ್ ಹಿಂದುತ್ವ ರಾಷ್ಟ್ರೀಯವಾದ. ಇದನ್ನು ಅಂಬೇಡ್ಕರ್ ಅವರು 1939ರಷ್ಟು ಹಿಂದೆಯೇ ಗುರುತಿಸಿ ಹೇಳಿದ್ದರು. ಇವೆರಡೂ ವ್ಯಾಧಿಗಳು ಅತ್ಯುಗ್ರ ರೂಪ ಪಡೆದುಕೊಂಡಿರುವುದರ ಪರಿಣಾಮವಾಗಿಯೇ ಸರಕಾರದಲ್ಲಿ ಮತ್ತು ಸಮಾಜದಲ್ಲಿ ಆರೆಸ್ಸೆಸ್-ಬಿಜೆಪಿ ಬಲಗೊಳ್ಳುತ್ತಿದೆ. ಅದರೆ ಈ ಎರಡೂ ಕಾಯಿಲೆಗಳಿಗೆ ಆಶ್ರಯ ಕೊಟ್ಟು ಪೋಷಿಸಿದ್ದೇ ಕಾಂಗ್ರೆಸ್ ಅಲ್ಲವೇ? ಇಲ್ಲಿ ಕಾಂಗ್ರೆಸ್ ಒಂದು ರೂಪಕ. ಕಾಂಗ್ರೆಸ್ ಮಾದರಿ ಎಲ್ಲಾ ಬಿಜೆಪಿ ವಿರೋಧಿ ಪಕ್ಷಗಳಿಗೂ ಇದು ಅನ್ವಯಿಸುತ್ತದೆ.
ಇತ್ತೀಚಿನ ಉದಾಹರಣೆಯನ್ನೇ ನೋಡಿ. ಶಬರಿಮಲೆ ವಿಷಯದಲ್ಲಿ ನವಬ್ರಾಹ್ಮಣ್ಯದ ಪರವಾಗಿ ಮತ್ತು ಸುಪ್ರೀಂ ಕೋರ್ಟಿನ ಆದೇಶದ ವಿರುದ್ಧವಾಗಿ ಕಾಂಗ್ರೆಸ್ ಬೀದಿಗಿಳಿದಿದೆ. ಅದನ್ನು ಮೇಲ್ಪಂಕ್ತಿಯಾಗಿರಿಸಿಕೊಂಡು ಬಿಜೆಪಿಯು ತನ್ನಿಡೀ ಕೋಮುವಾದಿ ಅಜೆಂಡಾವನ್ನು ಧಾರ್ಮಿಕ ಶ್ರದ್ಧೆಯ ವಿಷಯವೆಂದು ಬಣ್ಣಿಸುತ್ತಾ ಅವನ್ನು ಸಾಂವಿಧಾನಿಕ ನಿಯಂತ್ರಣದಿಂದ ಹೊರಗಿರಿಸಿಕೊಳ್ಳುವ ಸಂಚಿನಲ್ಲಿ ತೊಡಗಿದೆ. ಕಾಂಗ್ರೆಸ್‌ನ ಅವಕಾಶವಾದಿ ರಾಜಕಾರಣ ಫ್ಯಾಶಿಸಂ ಅನ್ನು ಪೋಷಿಸುತ್ತಿದೆ.