ಪ್ರಕಾಶ್ ರೈ ಅವರಿಗೆ...

Update: 2019-01-16 18:35 GMT

ಕಾಳಜಿ ಮತ್ತು ಕಳವಳಗಳೊಂದಿಗೆ

ಭಾಗ-2

ಬೀದಿಯನ್ನು ಗೆದ್ದುಕೊಂಡಾಗ ಸಂಸತ್ತನ್ನು ಗೆದ್ದುಕೊಳ್ಳುವುದು ಸುಲಭವಾದೀತು. ಹೀಗಾಗಿ ನಿಜವಾದ ಪ್ರಜಾತಂತ್ರವನ್ನು ಬಯಸು ವವರು ಹೆಚ್ಚೆಚ್ಚು ಬೀದಿಯಲ್ಲಿರಬೇಕು. ಆದ್ದರಿಂದಲೇ ನೀವೂ ಸಹ ಬೀದಿಯಲ್ಲಿ ನಮ್ಮ ಜೊತೆಗಿರುವುದನ್ನು ಮುಂದುವರಿಸಬೇಕು.

ಇನ್ನ್ನು ಛತ್ತೀಸ್‌ಗಡದಲ್ಲಿ ಬಿಜೆಪಿ ಸರಕಾರವು ಕಳೆದ 15 ವರ್ಷಗಳಿಂದ ಕಾರ್ಪೊರೇಟ್ ಕಂಪೆನಿಗಳ ಆಕ್ರಮಣದ ಭುಗಿಲೆದ್ದಿದ್ದ ಆದಿವಾಸಿ ಪ್ರತಿರೋಧವನ್ನು ಕ್ರೂರವಾಗಿ ದಮನಿಸುತ್ತಿತ್ತು. ಈ ದಮನದ ಪ್ರಧಾನ ದಂಡನಾಯಕ ಛತ್ತೀಸ್‌ಗಡದ ದಂತೇವಾಡ ಪ್ರದೇಶದ ಐಜಿಪಿ ಆಗಿದ್ದ ಕಲ್ಲೂರಿ. ಈತನ ಕ್ರೌರ್ಯ ಯಾವ ಪರಿ ಹೆಚ್ಚಿತ್ತೆಂದರೆ ಈಗ ಛತ್ತೀಸ್‌ಗಡದ ಮುಖ್ಯಮಂತ್ರಿಯಾಗಿರುವ ಭೂಪೇಶ್ ಬೇಲ್ ಅವರು ಕಲ್ಲೂರಿಯನ್ನು ಜೈಲಿಗೆ ಕಳಿಸಬೇಕೆಂದು ಬಿಜೆಪಿ ಸರಕಾರವನ್ನು ಆಗ್ರಹಿಸಿದ್ದರು. ಹೀಗಾಗಿ ಬಿಜೆಪಿ ಸರಕಾರವೇ ಆತನನ್ನು ಕಡ್ಡಾಯ ರಜೆಯ ಮೇಲೆ ಕಳಿಸಿತ್ತು. ಆದರೆ ಈಗ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದೊಡನೆ ಕಾರ್ಪೊರೇಟ್ ಕಣ್ಮಣಿಯಾಗಿದ್ದ ಕಲ್ಲೂರಿಯನ್ನು ಮತ್ತೆ ಅದಕ್ಕಿಂತ ಪ್ರಮುಖ ಸ್ಥಾನದಲ್ಲಿ ತಂದು ಕೂಡಿಸಿದೆ! ಕಾರ್ಪೊರೇಟ್ ಧಣಿಗಳ ಋಣ ತೀರಿಸಿದೆ.
ಇನ್ನು ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಅಧಿಕಾರ ವಹಿಸಿಕೊಂಡ ನಂತರ ಬಿಜೆಪಿಯ ಯೋಜನೆಯಾದ ಗೋ ಮೂತ್ರದ ವಾಣಿಜ್ಯ ಉತ್ಪಾದನೆ ಮತ್ತು ಮಾರುಕಟ್ಟೆಗೆ ವ್ಯವಸ್ಥೆ ಮಾಡುತ್ತಿದ್ದಾರೆ. ರಾಮನ ವನವಾಸದ ಜಾಗಗಳೆಂದು ಬಿಜೆಪಿ ಗುರುತಿಸಿದ ಜಾಗಗಳಿಗೆ ತೀರ್ಥಯಾತ್ರೆಯ ವ್ಯವಸ್ಥೆ ಮಾಡುತ್ತಿದೆ. ಈ ಹಿಂದೆ ಬಿಜೆಪಿ ಸರಕಾರ ತನ್ನ ನೌಕರರು ವಾರಕ್ಕೊಮ್ಮೆ ‘ವಂದೇ ಮಾತರಂ’ ಕಡ್ಡಾಯವಾಗಿ ಹೇಳಬೇಕೆಂಬ ಕಾನೂನನ್ನು ಮಾಡಿದ್ದರೆ ಈಗ ಕಾಂಗ್ರೆಸ್‌ನ ಕಮಲನಾಥ್ ಸರಕಾರ ಅದರ ಜೊತೆಗೆ ಒಂದೂವರೆ ಕಿ.ಮೀ.ಗಳ ಮೆರವಣಿಗೆ ಹಾಗೂ ಪೊಲೀಸ್‌ಬ್ಯಾಂಡನ್ನೂ ಸಹ ಕಡ್ಡಾಯ ಮಾಡಿದೆ.
ಇವೆಲ್ಲದರ ಹಿಂದಿರುವುದು ಕೇವಲ ಧಾರ್ಮಿಕತೆಯೆಂದು ನಂಬಿ ಕೊಳ್ಳುವುದು ಆತ್ಮವಂಚನೆ ಮಾತ್ರವಲ್ಲ. ಆತ್ಮ ಘಾತುಕತನವಾದೀತು. ಕಾಂಗ್ರೆಸ್‌ನದು ಸಂಘಪರಿವಾರ ಮಾದರಿಯ ಹಿಂದುತ್ವವಲ್ಲ. ಆದರೆ ಅವರು ಅಪ್ಪಿಕೊಂಡಿರುವ ಹಿಂದೂವಾದ ಅಂತರಂಗಿಕವಾಗಿ ಬ್ರಾಹ್ಮಣೀಯ ಹಿಂದೂವಾದವೇ ಆಗಿದ್ದು ಹಿಂದುತ್ವದ ನಿಲ್ದಾಣಕ್ಕೆ ಮುಂಚೆ ಸಿಗುವ ನಿಲ್ದಾಣವಾಗಿದೆ. ಆದ್ದರಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಸರಾಗವಾದ ಪಕ್ಷಾಂತರವಾಗುತ್ತದೆ.
ಸಾಮಾಜಿಕ ಸಂಕ್ಷೋಭೆಯನ್ನು ಧಾರ್ಮಿಕ ಮೂಲಭೂತವಾದಕ್ಕೆ ಉತ್ತೇಜನ ಕೊಡುವ ಮೂಲಕ ದಾರಿ ತಪ್ಪಿಸುವ ನೀತಿಯೂ ಸಹ ಮೂಲತಃ ಕಾಂಗ್ರೆಸ್‌ದೇ. ಶಾ ಬಾನು ಪ್ರಕರಣದ ಮೂಲಕ ಮುಸ್ಲಿಂ ಮೂಲಭೂತವಾದವನ್ನು ಸಂತುಷ್ಟಗೊಳಿಸಿ ಅದಕ್ಕೆ ಪ್ರತಿಯಾಗಿ ಹಿಂದೂ ಕೋಮುವಾದವನ್ನು ಸಂತುಷ್ಟಗೊಳಿಸಲು ರಾಮಜನ್ಮಭೂಮಿ ಗೇಟನ್ನು ತೆಗೆದದ್ದು ಸಹ ಕಾಂಗ್ರೆಸ್ ಸರಕಾರವೇ. ಹಾಗೂ ಬಾಬರಿ ಮಸೀದಿಯನ್ನು ಆರೆಸ್ಸೆಸ್ಸಿಗರು ಧ್ವಂಸ ಮಾಡುತ್ತಿದ್ದಾಗ ಮಿಲಿಟರಿ ಕಳಿಸದೇ ಅಕ್ಷರಶಃ ನಿದ್ರಿಸುತ್ತಿದ್ದದ್ದು ಸಹ ಕಾಂಗ್ರೆಸ್ ಸರಕಾರವೇ.

ಇನ್ನೂ ಹಿಂದಕ್ಕೆ ಹೋಗುವುದಾದರೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಾಂಗ್ರೆಸ್‌ನೊಳಗೆ ಇದ್ದ ಆರೆಸ್ಸೆಸ್‌ವಾದಿ ಕಾಂಗ್ರೆಸಿಗ ರಿಂದಲೇ ಮುಸ್ಲಿಮರಿಗೆ ಕಾಂಗ್ರೆಸ್ ತಮ್ಮ ಪ್ರತಿನಿಧಿಯಾಗಲಾರದೆಂಬ ಆತಂಕ ಮೂಡಿತು. ಅದನ್ನು ಬಳಸಿಕೊಂಡೇ ಮುಸ್ಲಿಂ ಸಮುದಾಯ ದೊಳಗಿನ ಮೂಲಭೂತವಾದಿಗಳು ಮತ್ತು ಉಳ್ಳ ಕುಲೀನರು ಮುಸ್ಲಿಂಲೀಗ್ ಸ್ಥಾಪಿಸಿದರು ಮತ್ತು ದೇಶ ವಿಭಜನೆಗೂ ಕಾರಣ ರಾದರು. ಕಾಂಗ್ರೆಸಿಗರೇ ಆಗಿದ್ದ ಎಚ್.ವಿ. ಕಾಮತ್, ಮದನಮೋಹನ ಮಾಳವೀಯ, ಗೋಪಿ ವಲ್ಲಭ ಪಂತ್ ಅವರು ಸಂವಿಧಾನ ಸಭೆಯಲ್ಲಿ ಈ ದೇಶವನ್ನು ಹಿಂದೂ ಆಗಿಯೇ ಉಳಿಸಿಕೊಳ್ಳಲು ಸತತ ಪ್ರಯತ್ನ ಹಾಕಿದ್ದರು. ಅಂಬೇಡ್ಕರ್, ನೆಹರೂ, ಕೃಪಲಾನಿ ಅಂಥವರ ಮತ್ತು ಪ್ರಧಾನವಾಗಿ ಅಂಬೇಡ್ಕರ್ ಅವರ ಪ್ರತಿರೋಧದಿಂದಾಗಿ ಅವರ ಪ್ರಯತ್ನಗಳು ಸಂಪೂರ್ಣವಾಗಿ ಫಲಿಸಲಿಲ್ಲ. ಹಿಂದುತ್ವವಾದಿ ಫ್ಯಾಶಿಸಂ 91ರ ನಂತರವೇ ವಿಶೇಷವಾಗಿ ಬೆಳೆಯಲು ಕಾರಣಗಳಿವೆ. 91ರ ನಂತರದ ಆರ್ಥಿಕ ನೀತಿಗಳಿಂದಾಗಿ ಹೆಚ್ಚಾದ ಈ ದೇಶದ ಕೃಷಿ ಬಿಕ್ಕಟ್ಟು, ನಿರುದ್ಯೋಗ, ಹೆಚ್ಚುತ್ತಿರುವ ಬಡತನ, ಭರವಸೆ ಮತ್ತು ಆಸರೆಗಳಿಲ್ಲದ ವಾತಾವರಣಗಳಿಂದಾಗಿ ಉಂಟಾದ ಸಂಕ್ಷೋಭೆ ಮತ್ತು ಅದು ಸೃಷ್ಟಿಸಿದ ಸಾಮಾಜಿಕ ಮಾನಸಿಕತೆ ಮತ್ತು ರಾಜಕೀಯ ಅನಿಶ್ಚಿತತೆಗಳೇ ಅಲ್ಲವೇ? 1969ರಲ್ಲಿ ಗರೀಬಿ ಹಠಾವೋ ಘೋಷಣೆ ನೀಡಿ, 1977ರಲ್ಲಿ ಸಂವಿಧಾನಕ್ಕೆ ಸಮಾಜವಾದದ ಹೆಸರನ್ನು ಸೇರ್ಪಡೆ ಮಾಡಿದ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವೇ 1980ರಿಂದ ಮರಳಿ ಅಧಿಕಾರ ಪಡೆದಾಗ ಈ ದೇಶದ ಅರ್ಥಿಕ ನೀತಿಯನ್ನು ಬದಲಿಸಿ ದೇಶವನ್ನು ಐಎಂಎಫ್‌ಗೆ ಒತ್ತೆ ಇಟ್ಟಿತು ಹಾಗೂ ದೇಶವನ್ನು ಮಾರುಕಟ್ಟೆ ಆರ್ಥಿಕತೆಗೆ ತೆರೆದಿಟ್ಟಿತು. ಕಾರ್ಪೊರೇಟ್ ಬಂಡವಾಳಶಾಹಿಯ ಅಗತ್ಯಗಳು ಬದಲಾದಂತೆ ಅವರ ಆರ್ಥಿಕ ನೀತಿಗಳೂ ಬದಲಾದವು. ಇಂದಿನ ನವಉದಾರವಾದಿ ಭಾರತಕ್ಕೆ 1980ರಲ್ಲಿ ಮುನ್ನುಡಿ ಬರೆದದ್ದೇ ಇಂದಿರಾಗಾಂಧಿಯವರು. ಈ ಪ್ರಕ್ರಿಯೆಯು 1991ರಲ್ಲಿ ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರು ಅಧಿಕೃತವಾಗಿ ಜಾಗತಿಕರಣ-ಖಾಸಗೀಕರಣ- ಉದಾರೀಕರಣ ನೀತಿಯನ್ನು ಘೋಷಿಸುವುದರೊಂದಿಗೆ ತಾರ್ಕಿಕ ಅಂತ್ಯವನ್ನು ಮುಟ್ಟಿತು. ಈ ನೀತಿಗಳಿಗೆ ಕಾಂಗ್ರೆಸ್, ಬಿಜೆಪಿ ಅಥವಾ ಇತರ ಯಾವುದೇ ಬಲ ಅಥವಾ ನಡುಪಂಥೀಯ ಪಕ್ಷಗಳು ವಿರೋಧಿಸಲಿಲ್ಲ. ಎಡಪಕ್ಷಗಳು ಬೀದಿಯಲ್ಲಿ ಇದನ್ನು ವಿರೋಧಿಸಿದರೂ ತಾವು ಆಳ್ವಿಕೆಯಲ್ಲಿರುವ ರಾಜ್ಯಗಳಲ್ಲಿ ಅದೇ ನೀತಿಗಳನ್ನೇ ಜಾರಿ ಮಾಡಿ ಹಲವು ವೈರುಧ್ಯಗಳನ್ನು ಮತ್ತು ಜನರ ವಿರೋಧಗಳನ್ನು ಎದುರಿಸಿದರು ಮತ್ತು ಗಣನೀಯವಾಗಿ ಜನಬೆಂಬಲವನ್ನು ಕಳೆದುಕೊಳ್ಳುತ್ತಾ ಹೋದರು.
ಬದಲಾಗಬೇಕಿರುವುದು ಜನರ ಸಂಕ್ಷೋಭೆಯನ್ನು ಹೆಚ್ಚಿಸಿ ಬಿಜೆಪಿಯ ಉನ್ಮಾದಿ ರಾಜಕಾರಣಕ್ಕೆ ಉರುವಲನ್ನು ಸರಬರಾಜು ಮಾಡುವ ನೀತಿಗಳೇ ವಿನಃ ಪಕ್ಷಗಳಲ್ಲ. ಆದರೆ ಯಾವ ಪಕ್ಷಗಳಲ್ಲೂ ಅಂಥಾ ಒಂದು ಅಜೆಂಡಾಗಳೇ ಇಲ್ಲದ ದುರಂತ ಸಂದರ್ಭ ನಮ್ಮದು.
ಇದರ ಅರ್ಥ ಕಾಂಗ್ರೆಸ್-ಬಿಜೆಪಿಗಳೆರಡೂ ಒಂದೇ ಎಂದಲ್ಲ. ಜನಶಕ್ತಿ ಗಟ್ಟಿ ಇದ್ದರೆ ಕಾಂಗ್ರೆಸ್ ಮಾದರಿ ಪಕ್ಷಗಳಿಗೂ ಮತ್ತು ಬಿಜೆಪಿಗೂ ಇರುವ ವೈರುಧ್ಯಗಳನ್ನು ಜನರ ಪರವಾಗಿ ಬಳಸಿಕೊಳ್ಳಬಹುದು.
ಆದರೆ ಕಾಂಗ್ರೆಸ್ ಸಮಸ್ಯೆಯ ಭಾಗವೇ ಹೊರತು ಪರಿಹಾರದ ಭಾಗವಲ್ಲ ಎಂಬ ಸ್ಪಷ್ಟತೆ ಇರಬೇಕು. ಇಲ್ಲದಿದ್ದರೆ ನಾವೇ ಬಳಕೆಯಾಗುವ ಅಥವಾ ಬಲಿಯಾಗುವ ಅಪಾಯ ಹೆಚ್ಚು.
ಜನರ ಸಂಘಟಿತ ರಾಜಕೀಯ ಶಕ್ತಿ ಗಟ್ಟಿ ಇಲ್ಲದಿರುವಾಗ, ಅವಕಾಶವಾದವು ಅನಿವಾರ್ಯತೆಯ ಮುಖವಾಡ ತೊಟ್ಟಿರುವಾಗ ಈ ಅಪಾಯಗಳು ಇನ್ನೂ ಹೆಚ್ಚು. ಇದು ಈ ಅಗ್ನಿಪರೀಕ್ಷೆ ಮುಂದಿಡುವ ಎರಡನೇ ದೊಡ್ಡ ಸವಾಲು.
ಸವಾಲು-3: ಇಂದಿನ ನವ ಉದಾರಿವಾದಿ ಕಾಲಘಟ್ಟದಲ್ಲಿ ಸಂಸತ್ತಿನ ಅಂತರಚನೆ ಮತ್ತು ಅಂತಸತ್ವಗಳೇ ಕಾರ್ಪೊರೇಟ್‌ವಾದಿಗಳ ಕರ್ಕಶ ಕೋರಸ್ಸಾಗುವಂತೆ ಬದಲಾಗಿದೆ. ಇಂಥಾ ಸಂಸತ್ತಿನಲ್ಲಿ ಜನಧ್ವನಿಗಳಿಗಿರುವ ಅವಕಾಶಗಳೆಷ್ಟು? ಪರಿಣಾಮಕತೆಯೆಷ್ಟು?
ಜನರ ಹೋರಾಟದ ಧ್ವನಿಗಳನ್ನು ಬೀದಿಯಲ್ಲಿ ಮಾತ್ರವಲ್ಲದೆ ಸಂಸತ್ತಿನಲ್ಲೂ ಕೇಳಿಸಬೇಕೆಂಬ ಸದಾಶಯದಿಂದ ಈ ಹಿಂದೆಯೂ ಹಲವು ಜನಪರ ಹೋರಾಟಗಳು ತಮ್ಮ ಪ್ರತಿನಿಧಿಗಳನ್ನು ಸಂಸತ್ತಿಗೆ ಮತ್ತು ಶಾಸನಸಭೆಗೆ ಕಳಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ಮೊದಲ ಮೂರು ನಾಲ್ಕು ದಶಕಗಳಲ್ಲಿ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಸ್ವತಂತ್ರ ಪಾರ್ಟಿ, ಭಾರತೀಯ ಜನಸಂಘದಂಥ ಪಕ್ಷಗಳನ್ನು ಹೊರತುಪಡಿಸಿ ಆಯ್ಕೆಯಾದ ಇತರ ಬಹುಪಾಲು ಶಾಸಕರು-ಸಂಸದರು ಜನಹೋರಾಟಗಳಿಂದ ಆಯ್ಕೆಯಾದವರೇ. ಇನ್ನು ಹಲವು ರಾಜ್ಯಗಳಲ್ಲಿ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ರಾಜ್ಯ ಸರಕಾರವನ್ನೇ ರಚಿಸಿದರು. ಮೊದಲೆರಡು ಸಂಸತ್ತಿನಲ್ಲಿ ಎಡಪಕ್ಷಗಳೇ ಪ್ರಮುಖ ವಿರೋಧ ಪಕ್ಷಗಳೂ ಆಗಿದ್ದವು ಹಾಗೂ ಆವರೆಗೆ ಕಾಂಗ್ರೆಸ್ ಮತ್ತು ಅದರಂಥ ಪಕ್ಷಗಳು ಜಾರಿಗೆ ತರದಂಥ ಹಲವು ಜನಪರ ಶಾಸನಗಳನ್ನು ತಾವು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಜಾರಿಗೆ ತಂದಿದ್ದರು.
ಕರ್ನಾಟಕದ ಸಂದರ್ಭದಲ್ಲಿ ನೋಡುವುದಾದರೆ, ಕಮ್ಯುನಿಸ್ಟ್ ಪಕ್ಷಗಳು, ಕಿಸಾನ್ ಮಜ್ದೂರ್ ಪಕ್ಷ, ರಾಜ್ಯ ರೈತ ಸಂಘ, ಸಮಾಜವಾದಿ ಪಕ್ಷ ಇವುಗಳೆಲ್ಲಾ ಜನಹೋರಾಟದಿಂದ ಶಾಸಕರನ್ನು ಶಾಸನಸಭೆಗೆ ಕಳಿಸಿಕೊಟ್ಟಿದ್ದವು. ಕರ್ನಾಟಕದ ಸಂದರ್ಭದಲ್ಲಿ ಭೂ ಸುಧಾರಣೆ ಮಸೂದೆಯಂಥ ಹಲವಾರು ಕಾಯ್ದೆಗಳು ಹೆಚ್ಚು ಜನಪರವಾಗುವಲ್ಲಿ ಕಮ್ಯುನಿಸ್ಟರ ಮತ್ತು ಸಮಾಜವಾದಿಗಳ ಪಾತ್ರವೂ ಬಹುಮುಖ್ಯವಾಗಿತ್ತು. ಇನ್ನು ಪ್ರೊ. ನಂಜುಂಡಸ್ವಾಮಿಯವರು ಶಾಸಕರಾಗಿದ್ದಾಗ ಏಕವ್ಯಕ್ತಿಯಾಗಿಯೂ ಇಡೀ ಶಾಸನಸಭೆಯಲ್ಲಿ ಗಂಭೀರ ಚರ್ಚೆಗಳಾಗುವಂತೆ ಮಾಡುತ್ತಿದ್ದರು ಎಂಬುದನ್ನು ನೋಡಿದ್ದೇವೆ.
ಆದರೆ ಇವೆಲ್ಲವೂ 1991ಕ್ಕೆ ಮುಂಚೆ ಭಾರತದ ಪ್ರಭುತ್ವವು ಕಲ್ಯಾಣ ರಾಜ್ಯವಾಗಿದ್ದ ಕಾಲದ ಕಥೆಗಳು. 1991ರಿಂದಾಚೆಗೆ ಭಾರತವನ್ನೂ ಒಳಗೊಂಡಂತೆ ಜಗತ್ತಿನಾದ್ಯಂತ ಪ್ರಭುತ್ವಗಳು ಮಾರುಕಟ್ಟೆ ಕಲ್ಯಾಣವನ್ನು ಕಾಯುವ ಕಾರ್ಪೊರೇಟ್ ಪ್ರಭುತ್ವವಾಗಿವೆ. ಜನರ ಧ್ವನಿಯನ್ನು ಕೇಳುವುದಕ್ಕಿಂತ ಅದನ್ನು ಹತ್ತಿಕ್ಕುವ ಪೊಲೀಸ್ ಪ್ರಭುತ್ವವಾಗಿವೆ. ಜನರ ಮೇಲೆ ಗೂಢಚರ್ಯೆ ಮಾಡುವ ಸರ್ವೆಲೆನ್ಸ್ ಪ್ರಭುತ್ವವಾಗಿವೆ. ಹೀಗಾಗಿ ಈ ಕಾಲಘಟ್ಟದಲ್ಲಿ ದೇಶದ ಸಂಸತ್ತುಗಳ ಮೇಲೆ ಜನರ ಶಾಸನಾತ್ಮಕ ಸಾರ್ವಭೌಮತೆ ಕಡಿತವಾಗುತ್ತಾ ಕಾರ್ಪೊರೇಟ್ ಸಾರ್ವಭೌಮತೆ ಹೆಚ್ಚಾಗುತ್ತಿದೆ. ಜಗತ್ತಿನ ಎಲ್ಲಾ ದೇಶಗಳು ವಿಶ್ವಬ್ಯಾಂಕ್-ವಿಶ್ವ ವಾಣಿಜ್ಯ ಸಂಸ್ಥೆ-ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಗಳು ಆದೇಶಿಸುವ ಆರ್ಥಿಕ ನೀತಿಗಳನ್ನು ಕಡ್ಡಾಯವಾಗಿ ಅನುಸರಿಸುತ್ತಾ ಕಾರ್ಪೊರೇಟ್ ಲೂಟಿಗೆ ತಮ್ಮ ತಮ್ಮ ದೇಶದ ಜನರನ್ನು ಮತ್ತು ಸಂಪನ್ಮೂಲಗಳನ್ನು ತೆರೆದಿಡುತ್ತಿದ್ದಂತೆ ಸಂಸದೀಯ ರಾಜಕಾರಣದ ಎಲ್ಲಾ ಪಕ್ಷಗಳು ಕಾರ್ಪೊರೇಟ್ ಕಲೆಕ್ಟಿವ್‌ಗಳ ಸಿಇಒಗಳಾಗಿ ಬದಲಾಗಿವೆ. ಸರಕಾರದ ಅಜೆಂಡಾಗಳು ಬದಲಾದರೂ ಎಲ್ಲವೂ ಜಾಗತಿಕ ಬಂಡವಾಳಿಗರ ಪರವಾದ ಅಜೆಂಡಾಗಳನ್ನೇ ಪಾಲಿಸುತ್ತಿವೆ ಮತ್ತು ಅವು ಜಿಎಸ್‌ಟಿ, ವಿತ್ತೀಯ ಶಿಸ್ತು, ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ಶಿಲಾಶಾಸನಗಳಾಗಿವೆ. ಈ ಎಲ್ಲಾ ನೀತಿಗಳು ಈ ಅವಧಿಯಲ್ಲಿ ಜನರ ಅತಂತ್ರತೆಯನ್ನು ಹೆಚ್ಚಿಸುತ್ತಾ ಜನರ ವ್ಯಕ್ತಿಗತ ಸಾರ್ವಭೌಮತೆಯನ್ನು ಮತ್ತು ಘನತೆಯನ್ನು ಕುಗ್ಗಿಸುತ್ತಿವೆ. ತಮ್ಮ ಭೌತಿಕ ಹಿತಾಸಕ್ತಿಯನ್ನು ಮರೆಸುವ, ನೈಜ ಮಿತ್ರ ಅಥವಾ ಶತ್ರುಗಳನ್ನು ಅರಿಯದಂತೆ ಮಾಡುವ ಜಾತೀಯತೆ ಮತ್ತು ಕೋಮುವಾದಗಳಿಗೆ ಪಕ್ಕಾಗುವಂತೆ ಮಾಡುತ್ತಿವೆ. ಹೀಗಾಗಿ ಈ ಕಾಲಘಟ್ಟದಲ್ಲಿ ಓಟುಗಳು ಮತ್ತು ಸಂಸತ್ತು ಜನರ ಶಾಸನಾತ್ಮಕ ಸಾರ್ವಭೌಮತೆಯನ್ನು ಕಾಪಾಡುವ ಸಾಧನವಾಗಿ ಉಳಿದಿಲ್ಲ.
ಈ ಕಾಲಘಟ್ಟದಲ್ಲೂ ರಾಜಕೀಯ ಅನಿಶ್ಚಿತತೆ ಉಂಟಾಗುವ ಸಂದರ್ಭದಲ್ಲಿ ಪ್ರಜಾತಂತ್ರದ ಮುಸುಕನ್ನು ಉಳಿಸಿಕೊಳ್ಳಲು ಒಂದಷ್ಟು ತೋರಿಕೆಯ ಸುಧಾರಣೆಗಳನ್ನು ಮಾಡುವುದುಂಟು. ಆದರೆ ಅವುಗಳು ಆಕ್ರಮಣಶೀಲ ಕಾರ್ಪೊರೇಟ್ ನೀತಿಗಳನ್ನು ಮರೆಮಾಚುವ ಮುಖವಾಡಗಳಷ್ಟೆ. ಉದಾಹರಣೆಗೆ 2004ರಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ ರೂ. 50-60,000 ಕೋಟಿಯಷ್ಟು ಹಣವನ್ನು ನರೇಗ ಯೋಜನೆಗೆ ಎತ್ತಿಡಲಾಯಿತು. ಅದೇ ರೀತಿ ರೂ. 70,000 ಕೋಟಿಯಷ್ಟು ರೈತರ ಸಾಲವನ್ನು ಮನ್ನಾ ಮಾಡಲಾಯಿತು. ಇವೆಲ್ಲವನ್ನೂ ಬಡವರ ಪರವಾಗಿ ಜಗತ್ತಿನಲ್ಲೇ ನಡೆದ ಅತಿ ದೊಡ್ಡದಾದ ಸಂಪನ್ಮೂಲ ಮರು ವಿತರಣೆಯೆಂದು ಬಣ್ಣಿಸಲಾಯಿತು. ಆದರೆ ಅದೇ ಯುಪಿಎಯ ಎರಡನೇ ಅವಧಿಯಲ್ಲಿ ಕೇವಲ ನೂರು ಕಾರ್ಪೊರೇಟ್ ಉದ್ಯಮಪತಿಗಳಿಗೆ 14 ಲಕ್ಷ ಕೋಟಿ ರೂ.ಗಳಷ್ಟು ಸಂಪನ್ಮೂಲವನ್ನು ಹಸ್ತಾಂತರಿಸಲಾಯಿತು. ಇದು ಜನರೆಡೆಗೆ ಹರಿದ ಹಣಕ್ಕಿಂತ 14ಪಟ್ಟು ಹೆಚ್ಚು. ಅದೇ ರೀತಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದ ಹೊತ್ತಿನಲ್ಲೇ ಆದಿವಾಸಿ ಪ್ರತಿರೋಧವನ್ನು ಹತ್ತಿಕ್ಕಲು ಛತ್ತೀಸ್‌ಗಡದ ಬಿಜೆಪಿ ಸರಕಾರ ಮತ್ತು ಕೇಂದ್ರದ ಕಾಂಗ್ರೆಸ್ ಸರಕಾರ ಜಂಟಿಯಾಗಿ ‘ಆಪರೇಷನ್ ಗ್ರೀನ್ ಹಂಟ್’ ಪ್ರಾರಂಭಿಸಿದರು. ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಘೋಷಿಸಿದರೂ ಆ ಮೂಲಕ ಪ್ರಾಥಮಿಕ ಶಿಕ್ಷಣದ ಖಾಸಗೀಕರಣಕ್ಕೆ ಸರಕಾರವೇ ಸಂಪನ್ಮೂಲವನ್ನು ಒದಗಿಸಿತು.
ಇದು ಈ ಕಾಂಗ್ರೆಸ್ ಪಕ್ಷದ ಆಷಾಢಭೂತಿತನವಲ್ಲ. ಬದಲಿಗೆ ನವಉದಾರವಾದಿ ಕಾಲಘಟ್ಟದಲ್ಲಿನ ಸಂಸದೀಯ ಪ್ರಜಾತಂತ್ರದ ಆಷಾಢಭೂತಿತನ.
ಆದರೆ ಇದಕ್ಕೆ ಒಂದು ತಾತ್ಕಾಲಿಕ ಅಪವಾದವಿತ್ತು. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ನವಉದಾರವಾದಿ ಕಾಲಧರ್ಮಕ್ಕೆ ತದ್ವಿರುದ್ಧವಾಗಿ ಅಲ್ಲಿ ಕಾರ್ಪೊರೇಟ್ ಪ್ರಭುತ್ವವನ್ನು ವಿರೋಧಿಸುತ್ತ ಜನಚಳವಳಿ ನಡೆಸುತ್ತಿದ್ದ ಪಕ್ಷಗಳೇ ಶಾಸನಾತ್ಮಕವಾಗಿ ಅಧಿಕಾರಕ್ಕೆ ಬಂದವು. ವೆನಿಜುವೇಲಾದ ಶವೇಜ್, ಬ್ರೆಝಿಲ್‌ನ ಲೂಲಾ, ಬೊಲಿವಿಯಾದ ಇವಾ ಮೊರಲೆಸ್ ಇದಕ್ಕೆ ಕೆಲವು ಉದಾಹರಣೆಗಳು. ಆದರೆ ಅವು ಕೇವಲ ಹತ್ತು ವರ್ಷದ ಪವಾಡಗಳಾದವು. ಆ ಎಲ್ಲಾ ದೇಶಗಳಲ್ಲಿ ತಮ್ಮ ಆರ್ಥಿಕ ಆಯುಧವನ್ನು, ತಮ್ಮ ಗುಲಾಮೀ ಮಾಧ್ಯಮಗಳನ್ನು ಮತ್ತು ಒಳಸಂಚುಗಳನ್ನು ಬಳಸಿ ಜಾಗತಿಕ ಕಾರ್ಪೊರೇಟ್ ಶಕ್ತಿಗಳು ಬಹಳಬೇಗನೇ ಆ ಎಲ್ಲಾ ಪಕ್ಷಗಳನ್ನು ಒಳಗಿನಿಂದ ಅಥವಾ ಹೊರಗಿನಿಂದ ಯಶಸ್ವಿಯಾಗಿ ದುರ್ಬಲಗೊಳಿಸಿದರು. ಅಧಿಕಾರದಲ್ಲುಳಿದ ದೇಶಗಳೂ ಸಹ ಆರ್ಥಿಕವಾಗಿ ಕಾರ್ಪೊರೇಟ್ ಆದೇಶಗಳನ್ನು ಜಾರಿಗೊಳಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಇಂದು ಲೂಲಾನ ಬ್ರೆಝಿಲ್‌ನಲ್ಲಿ ಫ್ಯಾಶಿಸ್ಟ್ ಬೋಲ್ಸನಾರೊ ಅತ್ಯಂತ ಜನಪ್ರಿಯತೆಯಿಂದ ಅಧಿಕಾರಕ್ಕೆ ಬಂದಿದ್ದಾನೆ. ಇದೇ ವಿದ್ಯಮಾನವು ಈ ಹಿಂದೆ ಕಲ್ಯಾಣ ರಾಜ್ಯದ ಅಜೆಂಡಾಗಳನ್ನು ಹೊಂದಿದ್ದ ಪಕ್ಷಗಳನ್ನು ಅಧಿಕಾರಕ್ಕೆ ತಂದಿದ್ದ ಬಹುಪಾಲು ದೇಶಗಳಲ್ಲಿ ಮರುಕಳಿಸುತ್ತಿದೆ.
ಸಾರಾಂಶದಲ್ಲಿ ಇಂದಿನ ನವ ಉದಾರವಾದಿ ಯುಗದಲ್ಲಿ ಸಂಸತ್ತುಗಳು ಅದರಲ್ಲೂ ಭಾರತದ ಸಂಸತ್ತು ಜನರ ವೇದಿಕೆಯಾಗಿಲ್ಲ. ಕಾರ್ಪೊರೇಟ್ ಶಕ್ತಿಗಳ ರಾಜಕೀಯ ಶಾಖೆಯೆನ್ನುವ ಮಟ್ಟಿಗೆ ಅವುಗಳು ಕಾರ್ಪೊರೇಟ್ ಪರವಾಗಿವೆ. ಅವರೆಲ್ಲರ ಮುದ್ದಿನಮಣಿ ಮೋದಿ ಅಷ್ಟು ಸುಲಭವಾಗಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ಬಗ್ಗಿಸಲು ಸಾಧ್ಯವಾಗುತ್ತಿರುವುದೂ ಇದೇ ಕಾರಣಕ್ಕಾಗಿಯೇ.
ಹೀಗಾಗಿ ಸಂಸತ್ತಿನಲ್ಲಿ ಜನಧ್ವನಿಯನ್ನು ಕೇಳಿಸುವಷ್ಟೇ ಮುಖ್ಯವಾಗಿ ಸಂಸತ್ತನ್ನು ಜನರ ಶಾಸನಾತ್ಮಕ ಸಾಧನವಾಗಿ ಮತ್ತೆ ಗೆದ್ದುಕೊಳ್ಳಬೇಕಿದೆ. ಜನರ ಪ್ರತಿನಿಧಿಯಾಗಬೇಕಿದ್ದ ಸಂಸತ್ತನ್ನು ಕಾರ್ಪೊರೇಟ್ ಮತ್ತು ಬ್ರಾಹ್ಮಣೀಯ ಶಕ್ತಿಗಳು ಕಸಿದುಕೊಂಡಿರುವಾಗ ಮತ್ತು ಜನಹೋರಾಟಗಳ ತಾಣವಾಗಿದ್ದ ಬೀದಿಗಳನ್ನೂ ಸಹ ಜನವಿರೋಧಿ ಫ್ಯಾಶಿಸ್ಟ್ ಶಕ್ತಿಗಳೇ ತುಂಬಿಕೊಳ್ಳುತ್ತಿರುವಾಗ ಜನರ ಸಂಘಟಿತ ಅಭಿವ್ಯಕ್ತಿ ಸಾಧನ ಮತ್ತು ತಾಣಗಳೇ ಇಲ್ಲವಾಗುತ್ತಿವೆ.
ಫ್ಯಾಶಿಸಂ ವಿರುದ್ಧ ನಡೆಯಬೇಕಾದ ಯುದ್ಧ ಪ್ರಧಾನವಾಗಿ ಬಗೆಹರಿಯಬೇಕಿರುವುದು ಬೀದಿಗಳಲ್ಲಿ.
ಬೀದಿಯನ್ನು ಗೆದ್ದುಕೊಂಡಾಗ ಸಂಸತ್ತನ್ನು ಗೆದ್ದುಕೊಳ್ಳುವುದು ಸುಲಭವಾದೀತು. ಹೀಗಾಗಿ ನಿಜವಾದ ಪ್ರಜಾತಂತ್ರವನ್ನು ಬಯಸು ವವರು ಹೆಚ್ಚೆಚ್ಚು ಬೀದಿಯಲ್ಲಿರಬೇಕು. ಆದ್ದರಿಂದಲೇ ನೀವೂ ಸಹ ಬೀದಿಯಲ್ಲಿ ನೀವು ನಮ್ಮ ಜೊತೆಗಿರುವುದನ್ನು ಮುಂದುವರಿಸಬೇಕು.
ಇತಿಹಾಸದಲ್ಲಿ ಫ್ಯಾಶಿಸಂ ಅನ್ನು ಚುನಾವಣೆಯ ಮೂಲಕ ಸೋಲಿಸಿದ, ಸವಾಲು ಹಾಕಿದ ಉದಾಹರಣೆಗಳಿಲ್ಲ. ಹೊಸ ಇತಿಹಾಸ ಬರೆಯಬಾರದಂತೇನಿಲ್ಲ. ಬೀದಿಗಳಲ್ಲಿ ಜನರು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ತಮ್ಮ ಸಂಘಟಿತ ರಾಜಕೀಯ ಶಕ್ತಿಯ ಅಧಿಕಾರವನ್ನು ಚಲಾಯಿಸುವಂತಾದಾಗ ಅದೂ ಕೂಡಾ ಸಾಧ್ಯವಾದೀತು.
ಇವೆಲ್ಲಾ ನಿಮಗೆ ಗೊತ್ತಿರುವ ಸಂಗತಿಗಳೇ. ಆದರೂ ಒಮ್ಮೆ ಚರ್ಚಿಸೋಣ ಎನ್ನಿಸಿತು.
ಮತ್ತೊಮ್ಮೆ ನಿಮಗೆ ಶುಭವಾಗಲಿ. ಬೀದಿಯಲ್ಲಿ ಹೆಚ್ಚೆಚ್ಚು ಭೇಟಿಯಾಗೋಣ.
ವಿಶ್ವಾಸದೊಂದಿಗೆ
ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News

ಜಗದಗಲ
ಜಗ ದಗಲ