ಏಕೀಕರಣೋತ್ತರ ಕನ್ನಡ ಹೋರಾಟಗಳ ಇತಿಹಾಸ

Update: 2019-01-17 18:41 GMT

ಕರ್ನಾಟಕದ ಏಕೀಕರಣ ಮತ್ತು ಅದರ ನಂತರದ ಬೆಳವಣಿಗೆಗಳನ್ನು ನಾವು ಅರಿತುಕೊಳ್ಳದೆ, ಕನ್ನಡದ ವರ್ತಮಾನಗಳನ್ನು ಗ್ರಹಿಸುವುದಕ್ಕೆ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾ. ನಂ. ಚಂದ್ರಶೇಖರ ಅವರು ಏಕೀಕರಣೋತ್ತರ ಕನ್ನಡ ಹೋರಾಟಗಳ ಇತಿಹಾಸವನ್ನು ‘ಕನ್ನಡ ಡಿಂಡಿಮ’ ಕೃತಿಯಲ್ಲಿ ದಾಖಲಿಸುವ ಕೆಲಸ ಮಾಡಿದ್ದಾರೆ. ಕೃತಿಯಲ್ಲಿ ಒಟ್ಟು 11 ಅಧ್ಯಾಯಗಳಿವೆ. ಕರ್ನಾಟಕ ಸಾಹಿತ್ಯ ಪರಿಷತ್‌ನ ಆರಂಭದ ದಿನಗಳಿಂದ ಕೃತಿ ತೆರೆದು ಕೊಳ್ಳುತ್ತದೆ. ಮೊದಲ ಅಧ್ಯಾಯ ಕನ್ನಡ ಚಳವಳಿಯ ನೆಲೆ-ಹಿನ್ನೆಲೆಗಳನ್ನು ವಿವರಿಸುತ್ತದೆ. ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆ, ಮೈಸೂರು ವಿಲೀನ, ರಾಜ್ಯಪಾಲರ ಇಂಗ್ಲಿಷ್ ಭಾಷಣ ಹರಿದ ಗೋಪಾಲ ಗೌಡರು, ಕನ್ನಡ ದಿನ ಆಚರಣೆಯ ಆರಂಭ, ಕನ್ನಡಕ್ಕಾಗಿ ಈ ಸಂದರ್ಭದಲ್ಲಿ ಧ್ವನಿಯೆತ್ತಿದ ಹಲವು ನಾಯಕರನ್ನು ಕೃತಿ ಮೊದಲ ಅಧ್ಯಾಯ ದಲ್ಲಿ ತೆರೆದಿಡುತ್ತದೆ. ಹಾಗೆಯೇ ಹಲವು ದಶಕಗಳ ಹಿಂದೆಯೇ ಹುಟ್ಟಿಕೊಂಡ ಪ್ರತ್ಯೇಕ ದಕ್ಷಿಣ ಕರ್ನಾಟಕ ಚಳವಳಿಯನ್ನು ಲೇಖಕರು ಗಮನ ಸೆಳೆಯುತ್ತಾರೆ.
ಕೃತಿಯ ಎರಡನೆ ಅಧ್ಯಾಯ ಬೆಳಗಾವಿಯ ಕನ್ನಡ ಹೋರಾಟಗಳಿಗೆ ಸೀಮಿತವಾಗಿದೆ. ಮರಾಠಿ ಮತ್ತು ಕನ್ನಡಿಗರ ನಡುವಿನ ಸಂಘರ್ಷಗಳನ್ನು ಇದು ತೆರೆದಿಡುತ್ತದೆ. ಮೂರನೇ ಅಧ್ಯಾಯ, ಕರ್ನಾಟಕದೊಂದಿಗಿನ ಗಡಿ ತಗಾದೆಯ ಪ್ರಕರಣಗಳನ್ನು ಗುರುತಿಸುತ್ತದೆ. ಇಲ್ಲೂ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವಿನ ತಿಕ್ಕಾಟಗಳೇ ಪ್ರಧಾನವಾಗಿದೆ.
ನಾಲ್ಕನೇ ಅಧ್ಯಾಯ ಗೋಕಾಕ್‌ಚಳವಳಿಗೆ ಮೀಸಲಾಗಿದೆ. ಗೋಕಾಕ್ ಭಾಷಾ ಸೂತ್ರದ ಹಿನ್ನೆಲೆ, ಈ ಚಳವಳಿ ಹುಟ್ಟುವುದಕ್ಕೆ ಕಾರಣ, ಇದು ಪಡೆದ ವಿವಿಧ ಆಯಾಮಗಳನ್ನು ಇಲ್ಲಿ ದಾಖಲಿಸಲಾಗಿದೆ. ಆ ಸಂದರ್ಭದ ಕೆಲವು ಕುತೂಹಲಕಾರಿ ಘಟನೆಗಳನ್ನು ಇಲ್ಲಿ ವಿವರಿಸಲಾಗಿದೆ. ಐದನೇ ಅಧ್ಯಾಯದಲ್ಲಿ ಕನ್ನಡ ದೂರದರ್ಶನಕ್ಕಾಗಿ ನಡೆದ ಹೋರಾಟವನ್ನು ವಿವರಿಸಲಾಗಿದೆ. ಆ ಕಾಲದಲ್ಲಿ ಪ್ರಚಲಿತದಲ್ಲಿದ್ದ ‘ಎಂಜಲು ಟಿವಿ ಉಗಿದು ಬಿಡಿ-ಕನ್ನಡ ಟಿವಿ ತಂದು ಕೊಡಿ’ ಘೋಷಣೆಯನ್ನು ಈ ಅಧ್ಯಾಯ ನೆನಪಿಸುತ್ತದೆ. ಇಂದು ಕನ್ನಡ ದೂರದರ್ಶನ ಅಸಡ್ಡೆಗೆ ಕಾರಣವಾಗಿದೆ. ಆದರೆ ದೂರದರ್ಶನದಲ್ಲಿ ಕನ್ನಡಕ್ಕಾಗಿ ಅದೆಷ್ಟು ಹೋರಾಟ ನಡೆಯಿತು ಎನ್ನುವುದು ಇಂದಿನ ತಲೆಮಾರಿಗೆ ಗೊತ್ತಿಲ್ಲ. ಅಷ್ಟೇ ಅಲ್ಲ, ದೂರದರ್ಶನದ ಜೊತೆಗೆ ತಳಕು ಹಾಕಿಕೊಂಡ ಉರ್ದು ವಾರ್ತೆ ಸೃಷ್ಟಿಸಿದ ಗೊಂದಲಗಳನ್ನು ಕೃತಿ ಹೇಳುತ್ತದೆ. ಉಳಿದಂತೆ ನದಿ ನೀರಿಗಾಗಿ ನಡೆದ ಚಳವಳಿ, ನಾಡು ನುಡಿಗಾಗಿ ನಡೆದ ಹೋರಾಟ, ಕನ್ನಡ ಪರ ಸಂಘಟನೆಗಳ ಇತಿಹಾಸಗಳನ್ನೂ ಈ ಕೃತಿ ದಾಖಲಿಸುತ್ತದೆ. ಏಕೀಕರಣದ ನಂತರದ ಕನ್ನಡದ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕೃತಿ. ಸಪ್ನ ಬುಕ್ ಹೌಸ್ ಹೊರತಂದಿರುವ ಕೃತಿಯ ಒಟ್ಟು ಪುಟಗಳು 354. ಮುಖಬೆಲೆ 250ರೂಪಾಯಿ. ಆಸಕ್ತರು 22268956 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News