ತಾಳಿಕೋಟೆ ಕದನಕ್ಕೆ ಕೋಮುವಾದದ ಬಣ್ಣ ಬಳಿದ ಕೇಸರಿ ಇತಿಹಾಸಕಾರರು

Update: 2019-01-18 09:06 GMT

ಭಾಗ-3

20ನೇ ಶತಮಾನದ ಮೊದಲಾರ್ಧದಲ್ಲಿ, ನೆಲತೂರಿ ವೆಂಕಟರಮಣಯ್ಯ, ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಕೆ.ಎ. ನೀಲಕಂಠ ಶಾಸ್ತ್ರಿ ಹಾಗೂ ಬಿ.ಎ. ಸಾಲೆತ್ತೂರು ಕೂಡಾ ಇದೇ ವಾದವನ್ನು ಮುಂದಕ್ಕೊಯ್ದಿದ್ದರು. ಭಾರತ ಇತಿಹಾಸ ಸಂಶೋಧಕರ ಮಂಡಲದ ಜೊತೆ ನಿಕಟವಾದ ನಂಟನ್ನು ಹೊಂದಿರುವ ಜಿ.ಟಿ. ಕುಲಕರ್ಣಿ ಅವರು, ಮರಾಠ ಇತಿಹಾಸಕಾರರು ವಿಜಯನಗರದ ಬಗ್ಗೆ ಹೆಮ್ಮೆಯ ಭಾವನೆಯನ್ನು ಹೊಂದಿದ್ದರೆಂದು ಹೇಳುತ್ತಾರೆ. ವಿಜಯನಗರ ಸಾಮ್ರಾಜ್ಯದ ಸ್ಫೂರ್ತಿ ಪಡೆದೇ ಛತ್ರಪತಿ ಶಿವಾಜಿ ಮಹಾರಾಜ ತನ್ನ ಸಾಮ್ರಾಜ್ಯವನ್ನು ನಿರ್ಮಿಸಿದ್ದನೆಂದು ಅವರು ಹೇಳುತ್ತಾರೆ.
 ಖ್ಯಾತ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಅವರು ತನ್ನ ಕೃತಿ ಆವರಣದಲ್ಲಿ, ಅಳಿಯ ರಾಮರಾಯನನ್ನು ಸೋಲಿಸಿದ ಬಹುಮನಿ ಸುಲ್ತಾನರು ಹಂಪೆಯನ್ನು ನಾಶಪಡಿಸಿದ್ದರೆಂದು ದೂಷಿಸುತ್ತಾರೆ. ಈ ಎಳೆಯನ್ನು ಹಿಡಿದುಕೊಂಡು ಹಲವಾರು ಬಲಪಂಥೀಯ ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್‌ನಲ್ಲಿ ತಿಪ್ಪೆ ಸಾರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ಕಥೆಯನ್ನು ಆಗೊಮ್ಮೆ ಈಗೊಮ್ಮೆ ನೆನಪಿಸುತ್ತಲೇ ಇರಲಾಗುತ್ತದೆ.
ತಾಳಿಕೋಟೆ ಕದನದ ಐತಿಹಾಸಿಕ ಕತೆಯು, ಮಧ್ಯಕಾಲೀನ ಭಾರತೀಯ ಇತಿಹಾಸದಲ್ಲೇ ಅತ್ಯಂತ ಸಾಮಾನ್ಯವಾದುದಾಗಿದೆ. ಹಿಂದುತ್ವ ಹಾಗೂ ಇಸ್ಲಾಮಿ ಪಡೆಗಳ ನಡುವೆ ನಡೆದ ಸಂಘರ್ಷವೆಂಬುದಾಗಿ ಬಿಂಬಿಸಲಾಗಿದೆ. ಕಾರ್ನಾಡರು ತಮ್ಮ ನಾಟಕದಲ್ಲಿ ತಾಳಿಕೋಟೆ ಕದನದ ಬಗ್ಗೆ ವ್ಯಾಖ್ಯಾನಿಸುವಾಗ ಅವರು ದಖ್ಖಣ ಭಾರತದ ಬಗ್ಗೆ ವಿಸ್ತೃತವಾದ ಅಧ್ಯಯನ ನಡೆಸಿದ್ದ ಅಮೆರಿಕನ್ ನಾಗರಿಕ ಈಟನ್‌ನಂತಹ ಇತಿಹಾಸಕಾರರು ಅನುಸರಿಸಿದ ದಾರಿಯನ್ನು ನಿಕಟವಾಗಿ ಅನುಸರಿಸಿದ್ದಾರೆ. ಕನ್ನಡದಲ್ಲಿ ಅವರು ಮಧ್ಯಕಾಲೀನ 21 ಪರ್ಶಿಯನ್ ಗ್ರಂಥಗಳನ್ನು ಅನುವಾದಿಸುವ ಯೋಜನೆಯ ಮುಂಚೂಣಿಯಲ್ಲಿದ್ದರು. ವಾಸ್ತವ ವಾಗಿ ಕಾರ್ನಾಡರ ನಾಟಕವು ಈ ಇಬ್ಬರು ಇತಿಹಾಸಕಾರರಿಗೆ ಸಮರ್ಪಿಸಲ್ಪಟ್ಟಿದೆ.
ಈಟನ್ ಹೀಗೆ ಬರೆದಿದ್ದಾರೆ. ‘‘ಮೊದಲನೆಯದಾಗಿ, ಯಾವುದೇ ಪಕ್ಷವು ಧಾರ್ಮಿಕ ಕಾಳಜಿಗಳಿಂದಾಗಿ ಪ್ರೇರಿತವಾಗಿಲ್ಲ. ಎರಡನೆಯದಾಗಿ ತಾಳಿಕೋಟೆಯ ಕದನವು ಒಂದು ಅಕಸ್ಮಿಕವಾಗಿ ನಡೆದ ವಿದ್ಯಮಾನವಾಗಿರದೆ, ಆಳವಾದ ಇತಿಹಾಸ ಅಡಕವಾಗಿದೆ. ವಾಸ್ತವಿಕವಾಗಿ, ತಾಳಿಕೋಟೆ ಕದನವು ಹಲವು ದಶಕಗಳ ಸಂಘರ್ಷದಿಂದ ಹೊರಹೊಮ್ಮಿದುದಾಗಿದೆ. ಅಳಿಯರಾಮರಾಯನು ಒಬ್ಬನಲ್ಲ, ಇನ್ನೊಬ್ಬ ಬಹುಮನಿ ಸುಲ್ತಾನನ ಜೊತೆ ಮೈತ್ರಿ ಬೆಳೆಸಿಕೊಂಡೇ ಇತರ ಸುಲ್ತಾನರ ವಿರುದ್ಧ ದಂಡೆತ್ತಿ ಹೋಗುತ್ತಿದ್ದ ಎಂದವರು ಅಭಿಪ್ರಾಯಿಸಿದ್ದಾರೆ.
 1565ನೇ ಇಸವಿಗಿಂತ ಎರಡು ಶತಮಾನಗಳ ಮೊದಲು ಕೃಷ್ಣಾ ನದಿಯ ಎರಡೂ ಕಡೆಯ ಸಾಮ್ರಾಜ್ಯಗಳು ಪರ್ಷಿಯನ್ ಸಂಸ್ಕೃತಿಯನ್ನು ತಮ್ಮಲ್ಲಿ ವಿಲೀನಗೊಳಿಸಿವೆ ಹಾಗೂ ಅವು ಬಹಳಷ್ಟು ಸಾಂಸ್ಕೃತಿಕ ಒಡನಾಟವನ್ನು ಅನುಭವಿಸಿದ್ದವು. ವಿಜಯನಗರ ಹಾಗೂ ಬಹುಮನಿ ಸುಲ್ತಾನರ ನಡುವೆ ನಡೆಯುತ್ತಿದ್ದ ಕದನಗಳು ವಸ್ತುಶಃ ಪ್ರಾಂತಗಳು ಹಾಗೂ ಕೋಟೆಗಳಿಗೆ ಸೀಮಿತವಾಗಿತ್ತೇ ಹೊರತು ಹಿಂದೂ ಅಥವಾ ಇಸ್ಲಾಮಿಕ್ ನಾಗರಿಕತೆಗೆ ಸೀಮಿತಗೊಂಡಿರಲಿಲ್ಲ. ಅಳಿಯರಾಮರಾಯನು ತನ್ನನ್ನು ಚಾಲುಕ್ಯ ವಂಶದ ಉತ್ತರಾಧಿಕಾರಿಯೆಂದು ಪರಿಗಣಿಸಿದ್ದು, ಕಲ್ಯಾಣವು ಚಾಲುಕ್ಯರ ಸಾಮ್ರಾಜ್ಯದ ರಾಜಧಾನಿಯಾಗಿತ್ತು.
 ದಖ್ಖಣವು ‘‘ಉನ್ನತಮಟ್ಟದ ವ್ಯಕ್ತಿಗಳು ಬೇರೆ ಸಾಮ್ರಾಜ್ಯಗಳಲ್ಲಿ ಚಲಿಸುವ ಸ್ಥಳವಾಗಿತ್ತು. ಅಳಿಯ ರಾಮರಾಯನು ತನ್ನ ಪೋಷಕನಾದ ಕೃಷ್ಣದೇವರಾಯನ ಸೇವೆಗೆ ನಿಯೋಜನೆಗೊಳ್ಳುವ ಮೊದಲು ಆತ ಗೋಲ್ಕೊಂಡಾದ ಸುಲ್ತಾನರ ಸೇವೆಯಲ್ಲಿದ್ದ. ಕೃಷ್ಣದೇವರಾಯನ ಪುತ್ರಿಯನ್ನು ಮದುವೆಯಾದ ಬಳಿಕ ಆತ ರಾಜಕುಟುಂಬದ ಭಾಗವಾಗಿ ಬಿಟ್ಟಿದ್ದ. ವಿಜಯನಗರದ ಪ್ರಮುಖ ದಂಡನಾಯಕನೊಬ್ಬನ ಪುತ್ರ ಗೋಲ್ಕೊಂಡಾದ ಸುಲ್ತಾನರ ಸೇನೆಯಲ್ಲಿನ ಸೇವೆಯನ್ನು ಸುಲಭವಾಗಿ ನೇಮಕಗೊಳ್ಳಲು ಸಾಧ್ಯವಾಗಿರುವುದು, ಸಮಗ್ರ ದಖ್ಖಣ ಪ್ರಾಂತವು ವ್ಯಾಪಕ ಅವಕಾಶಗಳ ಆಗರವಾಗಿತ್ತು ಎಂಬುದನ್ನು ಸೂಚಿಸುತ್ತದೆಯೇ ಹೊರತು ಈ ಪ್ರದೇಶವು ಕೃಷ್ಣಾ ನದಿಯು ನಡುವೆ ಹರಿಯುತ್ತಿರುವಂತೆ, ಮುಸ್ಲಿಂ ಉತ್ತರ ಹಾಗೂ ಹಿಂದೂ ದಕ್ಷಿಣ ಎಂಬುದಾಗಿ ವಿಭಜಿಸಲ್ಪಟ್ಟಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ.
ಅಳಿಯ ರಾಮರಾಯನು ರಾಜಪ್ರತಿನಿಧಿಯಾಗಿದ್ದ ಅವಧಿಯಲ್ಲಿ ಒಬ್ಬ ಸುಲ್ತಾನನ ವಿರುದ್ಧ ಇನ್ನೋರ್ವ ಸುಲ್ತಾನನ್ನು ಎತ್ತಿಕಟ್ಟುತ್ತಿದ್ದ. ಇದರಿಂದ ಬೇಸತ್ತುಹೋದ ಸುಲ್ತಾನರು, ತಾವು ಮೈತ್ರಿಕೂಟವನ್ನು ಏರ್ಪಡಿಸಿದಲ್ಲಿ ಮಾತ್ರವೇ ವಿಜಯನಗರವನ್ನು ಸೋಲಿಸಲು ಸಾಧ್ಯವೆಂಬುದನ್ನು ಮನಗಂಡಿದ್ದರು. ಕೊನೆಯತನಕವೂ ಬಿಜಾಪುರದ ಸುಲ್ತಾನ ಅಲಿ ಅದಿಲ್ ಶಾನು, ರಾಮರಾಯನನ್ನು ತಂದೆ ಸಮಾನವಾಗಿ ಪರಿಗಣಿಸಿದ್ದರು ಹಾಗೂ ಆತನ ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದನೆಂದು ಅವರು ಹೇಳುತ್ತಾರೆ.
ಹಂಪೆಯ ನಾಶದ ಬಗ್ಗೆ ಕೊಲ್ಹರ್ ಕುಲಕರ್ಣಿ ಹೀಗೆ ವಿವರಿಸುತ್ತಾರೆ. ‘‘ವಿಜಯನಗರವು ಶೈವರು ಹಾಗೂ ವೈಷ್ಣವರ ನಡುವಿನ ಅಂತಃಕಲಹದಿಂದಾಗಿ ನಾಶಗೊಂಡಿತು. ಈಗಲೂ ನೀವು ಹಂಪೆಗೆ ಹೋದಲ್ಲಿ, ಕೇವಲ ವೈಷ್ಣವರಿಗೆ ಸೇರಿದ ದೇಗುಲಗಳು, ಸ್ಮಾರಕಗಳು ನಾಶಗೊಂಡಿವೆ. ವೈಷ್ಣವ ಪಂಥದ ವಿಜಯ ವಿಠಲ ದೇವಾಲಯವು ಈಗ ‘ಮೃತಪಟ್ಟ’ ಸ್ಥಿತಿಯಲ್ಲಿ ಕಂಡುಬಂದರೆ, ಶೈವಕ್ಷೇತ್ರವಾದ ವಿರೂಪಾಕ್ಷ ದೇವಾಲಯವು ಈಗಲೂ ವೈಭವದ ಸ್ಥಿತಿಯಲ್ಲಿದೆ.
ವಿಜಯನಗರ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಆಳವಾದ ಅಧ್ಯಯನ ನಡೆಸಿರುವ ಬೆಂಗಳೂರು ಮೂಲದ ಇತಿಹಾಸತಜ್ಞ ಗೋಪಾಲಕೃಷ್ಣ ರಾವ್ ಅವರು ‘‘ಬಹಮನಿ ಸುಲ್ತಾನರ ಸೈನಿಕರು ಕೊಳ್ಳೆ ಹೊಡೆಯುವುದರಲ್ಲಿ ಆಸಕ್ತರಾಗಿದ್ದರು. ಹೀಗಾಗಿ ಅವರು ಹಂಪೆಯನ್ನು ಪುಡಿಗೈದರೇ ಹೊರತು ಕೋಮುಭಾವನೆಯಿಂದಲ್ಲ. ಬಹುಮನಿ ಸುಲ್ತಾನರ ಪೈಕಿ ಒಬ್ಬನ ವಿರುದ್ದ ಇನ್ನೊಬ್ಬನನ್ನು ನಿರಂತರವಾಗಿ ಎತ್ತಿಕಟ್ಟುತ್ತಿದ್ದ ಅಳಿಯ ರಾಮರಾಯನ ವಿರುದ್ಧ ಅವರನ್ನು ತಾತ್ಕಾಲಿಕ ಮೈತ್ರಿಕೂಟವನ್ನು ಏರ್ಪಡಿಸಿಕೊಳ್ಳುವಂತೆ ಪ್ರೇರೇಪಿಸಿತು’’ ಎಂದು ಹೇಳಿದ್ದಾರೆ.
ವಿಜಯನಗರ ಸಾಮ್ರಾಜ್ಯದ ವಿರುದ್ಧ ಬಹಮನಿ ಸುಲ್ತಾನರು ಒಗ್ಗೂಡಿದ್ದಕ್ಕೆ ಅವರು ಒಂದೇ ಧರ್ಮದವರಾಗಿದ್ದರೆಂಬುದು ಕಾರಣವಾಗಿರಲಿಲ್ಲ. ರಾಮರಾಯನ ಸೇನಾಬಲದ ಕುರಿತು ಬಹಮನಿ ಸುಲ್ತಾನರಿಗಿದ್ದ ಭೀತಿಯು ಅವರನ್ನು ವಿಜಯನಗರದ ವಿರುದ್ಧ ಒಗ್ಗೂಡುವಂತೆ ಮಾಡಿತ್ತು ಎಂದು ಕುಲಕರ್ಣಿ ಅಭಿಪ್ರಾಯಿಸುತ್ತಾರೆ.
ವಿಜಯನಗರದ ಇತರ ಇತಿಹಾಸಕಾರರು ಕೂಡಾ ಅದೇ ವಾದವನ್ನು ಮಂಡಿಸುತ್ತಾರೆ. ಉದಾಹರಣೆಗೆ ಬರ್ಟನ್ ಸ್ಟೈನ್ ಅವರು ಹೀಗೆ ಬರೆಯುತ್ತಾರೆ.
  ವಿಜಯನಗರ ಇತಿಹಾಸದ ಅಧ್ಯಯನಕ್ಕೆ ತಾಳೆಗರಿಗಳ ಮೂಲಗಳನ್ನು ಹೆಚ್ಚಾಗಿ ಅವಲಂಬಿಸಿದ್ದ ಇತಿಹಾಸಕಾರ್ತಿ ವಸುಂಧರಾ ಫಿಲ್ಲಿಯೊಝಾಟ್ ಅವರು, ತಾಳಿಕೋಟೆಯ ಕದನಕ್ಕೆ ಧಾರ್ಮಿಕ ಅಂಶ ಕಾರಣವಾಗಿತ್ತೆಂಬುದನ್ನು ಒಪ್ಪುವುದಿಲ್ಲ. ಆದಾಗ್ಯೂ, ವಿಜಯನಗರದ ರಾಜಧಾನಿ ಹಂಪೆಯನ್ನು ಮುಸ್ಲಿಮರು ನಾಶಪಡಿಸಿದರೆಂಬ ವಿಚಾರವು ಇತಿಹಾಸದ ಹಲವಾರು ಓದುಗರಲ್ಲಿ ಆಳವಾಗಿ ಬೇರೂರಿದೆ. ಅದನ್ನು ಇಂದಿಗೂ ಕೂಡಾ ಬುಡಮೇಲು ಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಸಾಂಸ್ಕೃತಿಕ ಸಮ್ಮಿಲನ
ಬಹುಮನಿ ಸಾಮ್ರಾಜ್ಯಗಳು ಹಾಗೂ ವಿಜಯನಗರ ಸಾಮ್ರಾಜ್ಯಗಳ ನಡುವೆ ಸಾಂಸ್ಕೃತಿಕ ಸಮ್ಮಿಲನ ನಡೆದಿರುವುದನ್ನು ನಾವು ಹಂಪೆಯಲ್ಲಿ ಇಂದಿಗೂ ಸ್ಪಷ್ಟವಾಗಿ ಕಾಣಬಹುದಾಗಿದೆ. ಹಂಪೆಯಲ್ಲಿರುವ ತಾವರೆಮಹಲ್ ಹಾಗೂ ರಾಣಿಯ ಸ್ನಾನಗೃಹ ದಂತಹ ಕಟ್ಟಡಗಳಲ್ಲಿ ಇಸ್ಲಾಮಿಕ್ ಪ್ರಭಾವವಿರುವುದನ್ನು ಕಾಣಬಹು ದಾಗಿದೆ. ಕದಿರಾಮ ಪುರದಲ್ಲಿರುವ ಐತಿಹಾಸಿಕ ಮಹತ್ವದ ಗೋರಿ ಗಳು, ಹಂಪೆಯಲ್ಲಿ ಮುಸ್ಲಿಂ ಗಣ್ಯರ ಉಪಸ್ಥಿತಿಗೆ ನಿದರ್ಶನಗಳಾಗಿವೆ.
ವಿಜಯನಗರದ ಆಡಳಿತದ ಗೌರವಾರ್ಥವಾಗಿ ಪ್ರವಾಸಿಗೃಹವನ್ನು ಸ್ಥಾಪಿಸಿದ್ದ ಅಹ್ಮದ್‌ಖಾನ್ ಎಂಬ ಮುಸ್ಲಿಂ ಗಣ್ಯರೊಬ್ಬರ ಮಸೀದಿಯೂ ಹಂಪೆಯಲ್ಲಿದೆ. ಅಹ್ಮದ್‌ಖಾನ್‌ನ ಗೋರಿಯ ಹೊರತಾಗಿ ಮುಸ್ಲಿಂ ಸಂತರ ಗೋರಿಗಳನ್ನು ಕೂಡಾ ಕಾಣಬಹುದಾಗಿದೆ.
ಮುಸ್ಲಿಂ ಯೋಧರು, ವಿವಿಧ ಸ್ಮಾರಕಗಳನ್ನು ಮುಸ್ಲಿಂ ದೊರೆಗೆ ಸಮರ್ಪಿಸಿರುವುದಕ್ಕೆ ಪುರಾವೆಯನ್ನು ನೀಡುವ ಹಲವಾರು ಶಿಲಾಶಾಸನಗಳು ಈಗಲೂ ಹಂಪೆಯಲ್ಲಿವೆ. ದೊರೆ ದೇವನರಾಯನ ಶ್ರೇಯೋಭಿವೃದ್ಧಿಗಾಗಿ, ಅಹ್ಮದ್‌ಖಾನ್ ಈ ಅತಿಥಿ ಛತ್ರವನ್ನು ನಿರ್ಮಿಸಿದ್ದಾರೆ ಎಂದು ಬರೆಯಲಾದ ಶಿಲಾಶಾಸನವೊಂದು, ಹಂಪೆಯ ಪುರಾತನ ಪ್ರವಾಸಿಗೃಹದ ಪಳೆಯುಳಿಕೆಯ ನಡುವೆ ಕಾಣಿಸುತ್ತದೆ.
 ಅದೇ ರೀತಿ, ಬಹುಮನಿ ಸಾಮ್ರಾಜ್ಯದ ಅತಿ ದೊಡ್ಡ ಸುಲ್ತಾನ್‌ಶಾಹಿಯಾಗಿರುವ ಬಿಜಾಪುರ (ಈಗ ವಿಜಯಪುರ)ವು ವಿಜಯನಗರದ ಪತನದ ಬಳಿಕ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿತು. ಗೋಳಗುಮ್ಮಟ ಹಾಗೂ ಇಬ್ರಾಹೀಂ ರೌಝಾದಂತಹ ಭವ್ಯ ಕಟ್ಟಡಗಳಲ್ಲಿ ವಿಜಯನಗರ ವಾಸ್ತುಶಿಲ್ಪದ ಪ್ರಭಾವವಿರುವುದನ್ನು ಕಾಣಬಹುದಾಗಿದೆ. ವಿಜಯನಗರದ ಪತನದ ಬಳಿಕ ಬಿಜಾಪುರದಲ್ಲಿ ನಿರ್ಮಿಸಲಾದ ಜಾಮಾ ಮಸೀದಿಯ ಕಂಬಗಳ ವಿನ್ಯಾಸದಲ್ಲಿ ದೇಗುಲದ ಕಂಬಗಳನ್ನು ಹೋಲುವುದನ್ನು ಗಮನಿಸಬಹುದಾಗಿದೆ.
  ಮಸೀದಿಯ ಛಾವಣಿಯ ವಿಯಾಸಗಳು ಹಾಗೂ ಭವ್ಯವಾದ ಪ್ರಾರ್ಥನಾ ಮಂಟಪದಲ್ಲೂ ವಿಜಯ ನಗರದ ನುರಿತ ಕರಕುಶಲಕರ್ಮಿಗಳ ಪ್ರಭಾವ ಕಂಡುಬರುತ್ತಿದೆ ಯೆಂದು ಇತಿಹಾಸಕಾರ ಹಾಗೂ ವಿಜಯಪುರದ ಅಂಜುಮಾನ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜ್‌ನ ಉಪನ್ಯಾಸಕರಾದ ಅಬ್ದುಲ್ ಘನಿ ಇಮಾರತ್‌ವಾಲೆ ಹೇಳುತ್ತಾರೆ.
ಎರಡೂ ಸೈನ್ಯಗಳಲ್ಲಿ ಸೈನಿಕರ ನಂಬಿಕೆಗಳ ನಡುವೆ ಸ್ಪಷ್ಟವಾದ ವಿಭಜನೆ ಕಂಡುಬರುವುದಿಲ್ಲ. ವಿಜಯನಗರದ ಸೇನೆಯ ವಿವಿಧ ಶ್ರೇಣಿಗಳಲ್ಲಿ ಅದರಲ್ಲೂ ವಿಶೇಷವಾಗಿ ಅಶ್ವಾರೋಹಿ ದಳ ಹಾಗೂ ಫಿರಂಗಿದಳಗಳಲ್ಲಿ ಗಣನೀಯ ಸಂಖ್ಯೆಯ ಮುಸ್ಲಿಂ ಸೈನಿಕರು ಕೂಡಾ ಇದ್ದರು.
  ಹಂಪೆಯ ಪತನದ ಆನಂತರ, ಅದರ ಅವಶೇಷಗಳು 19ನೇ ಶತಮಾನದಲ್ಲಿ ಪತ್ತೆಯಾಗುವ ತನಕ ಅವು ಅನಾಥವಾಗಿ ಉಳಿದಿದ್ದವು. ದುರದೃಷ್ಟವಶಾತ್ ಹಂಪೆಯ ಆಧುನಿಕ ಪ್ರವಾಸಿಗರು, ಅಳಿಯ ರಾಮರಾಯನ ಯಾವುದೇ ಶಿಲಾಮೂರ್ತಿ ಅಥವಾ ಚಿತ್ರವನ್ನಾಗಲಿ ಕಾಣಲಾರರು. ವಿಚಿತ್ರವೆಂದರೆ, ರಾಮರಾಯನ ತಲೆಯನ್ನು ಬಿಂಬಿಸುವ ಶಿಲ್ಪಕಲಾಕೃತಿಯೊಂದು ವಿಜಯಪುರದ ಪುರಾತತ್ವ ವಸ್ತುಸಂಗ್ರಹಾಲಯದಲ್ಲಿದೆ. 18ನೇ ಶತಮಾನದಲ್ಲಿ ಹಂಪೆನಗರದ ಕಟ್ಟೆಬಾವಿಯೊಂದನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ ಅದು ಪತ್ತೆಯಾಗಿತ್ತು. ಆದರೆ ಈ ತನಕ ಯಾವುದೇ ಪ್ರತಿಷ್ಠಿತ ಇತಿಹಾಸತಜ್ಞನು ಅದು ಅಳಿಯರಾಮರಾಯನ ತಲೆಯ ಶಿಲ್ವಕಲಾಕೃತಿಯೆಂಬುದನ್ನು ದೃಢಪಡಿಸಿಲ್ಲ. ಆದರೂ, ಮ್ಯೂಸಿಯಂನಲ್ಲಿರುವ ಫಲಕವು ಅದು ಅಳಿಯ ರಾಮರಾಯನದೆಂದು ಹೇಳಿಕೊಂಡಿದೆ. ಏನೇ ಇರಲಿ, ಆ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದವರು, ತನ್ನ ಅಹಂಕಾರದಿಂದಾಗಿ ಭಾರತದ ಮಹಾನ್ ಸಾಮ್ರಾಜ್ಯಗಳಲ್ಲೊಂದರ ದುರಂತ ಅಂತ್ಯಕ್ಕೆ ಕಾರಣವಾದ ಆ ವ್ಯಕ್ತಿಯ ಶಿಲ್ಪವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾಗಕೂಡದ.

ಕೃಪೆ: ಫ್ರಂಟ್‌ಲೈನ್ 

Writer - ವಿಖಾರ್ ಅಹ್ಮದ್ ಸಯೀದ್,

contributor

Editor - ವಿಖಾರ್ ಅಹ್ಮದ್ ಸಯೀದ್,

contributor

Similar News

ಜಗದಗಲ
ಜಗ ದಗಲ