ಗುಜರಾತ್ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ದುಸ್ಥಿತಿ!

Update: 2019-01-17 18:42 GMT

ಗುಜರಾತ್ ಎಂದರೆ ಭೂಲೋಕದ ಸ್ವರ್ಗ ಎಂದೇ ಬಿಂಬಿಸುವವರು ಈ ವಾಸ್ತವದತ್ತಲೂ ತುಸು ಕಣ್ಣು ಹಾಯಿಸಬೇಕಿದೆ. ಬೇರೆ ರಾಜ್ಯಗಳನ್ನು ಸದಾ ಗೇಲಿ ಮಾಡುತ್ತಲೇ ಇರುವ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎನ್ನುವ ಮಂದಿ ತಮ್ಮ ತವರು ರಾಜ್ಯದ ಹದಗೆಟ್ಟ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ತುಸು ಚಿಂತಿಸಲಿ.

‘ಗುಜರಾತ್ ಮಾದರಿ’ ಎಂಬ ಭಜನೆ ಇಂದಿಗೂ ನಿಂತಿಲ್ಲ. ಗುಜರಾತ್ ಮಾದರಿ ಎಂದರೆ ಅದೇನು ಅಭಿವೃದ್ಧಿ ಶೂನ್ಯತೆಯೇ ಎಂಬ ಸವಾಲು ನಾವು ಆಳುವ ವರ್ಗಕ್ಕೆ ಕೇಳಲೇಬೇಕಿದೆ.
‘ಬೇಟಿ ಬಚಾವೋ’ದ ಮಾದರಿ ಹೇಗಿದೆಯೆಂದು ನಾವು ಕಳೆದ ನಾಲ್ಕೂವರೆ ವರ್ಷಗಳಲ್ಲಿ ನೋಡಿದ್ದೇವೆ. ಭಾರತದಲ್ಲಿ ಅತೀ ಹೆಚ್ಚು ಅಪ್ರಾಪ್ತ ವಯಸ್ಕ ಹೆಣ್ಮಕ್ಕಳ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಮೋದಿಯವರ ಚೌಕೀದಾರಿಕೆಯ ಅವಧಿಯಲ್ಲಿ ಎಂದು ವಿಷಾದದಿಂದ ಹೇಳಬೇಕಾಗಿದೆ. ದೇವ ಮಂದಿರಗಳಲ್ಲೂ ಹೆಣ್ಮಕ್ಕಳಿಗೆ ರಕ್ಷಣೆಯಿಲ್ಲದಂತಹ ದುಸ್ಥಿತಿ ಈ ಹಿಂದೆಂದೂ ಭಾರತಕ್ಕೆ ಬಂದಿಲ್ಲ.
ಮಹಿಳಾ ಸಬಲೀಕರಣ ಸಾಧಿಸಲು ಯಾವುದೇ ರಾಷ್ಟ್ರವೂ ಇಡಬೇಕಾದ ಪ್ರಾಥಮಿಕ ಹೆಜ್ಜೆ ಹೆಣ್ಮಕ್ಕಳಿಗೆ ಗುಣಮಟ್ಟದ ಶಿಕ್ಷಣ. ದೇಶಕ್ಕೆಲ್ಲಾ ‘ಬೇಟಿ ಬಚಾವೋ ಬೆೇಟಿ ಪಡಾವೋ’ ಬೋಧಿಸುತ್ತಿರುವವರ ನಾಡಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ದುಸ್ಥಿತಿ ಹೇಗಿದೆಯೆಂದು ನೋಡೋಣ.
ಗುಜರಾತ್ ಶಿಕ್ಷಣ ಇಲಾಖೆಯೇ ನಡೆಸಿದ ಸರ್ವೇಯ ಪ್ರಕಾರ ಗುಜರಾತಿನ ಒಟ್ಟು 32,772 ಸರಕಾರಿ ಶಾಲೆಗಳಲ್ಲಿ 12,000 ಶಾಲೆಗಳು ಏಕೋಪಾಧ್ಯಾಯ ಮತ್ತು ಇಬ್ಬರು ಉಪಾಧ್ಯಾಯರಿರುವ ಶಾಲೆಗಳು. 15,171 ಶಾಲೆಗಳು ನೂರಕ್ಕೂ ಕಡಿಮೆ ಮಕ್ಕಳಿರುವ ಶಾಲೆಗಳು. ಅಧಿಕೃತ ದಾಖಲೆಗಳ ಪ್ರಕಾರ 8,673 ಅಂದರೆ ಶೇ. 26 ಶಾಲೆಗಳಲ್ಲಿ 51ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳಿದ್ದಾರೆ. 6,498 ಅಂದರೆ ಶೇ. 20 ಶಾಲೆಗಳು ನೂರಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು. ಇವುಗಳಲ್ಲಿ ಬಹುತೇಕ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಇವೆ ಮತ್ತು ಎಲ್ಲಾ ಶಾಲೆಗಳಲ್ಲೂ ಎಲ್ಲಾ ವಿಷಯಗಳನ್ನು ಒಬ್ಬರೇ ಅಧ್ಯಾಪಕರು ಬೋಧಿಸುತ್ತಾರೆ.
ಗುಜರಾತಿನ ಸರಕಾರಿ ಶಾಲೆಗಳ ದಾಖಲಾತಿ ಪ್ರಮಾಣವೂ ಶೋಚನೀಯವಾಗಿದೆ.
ಗುಜರಾತಿನ ಕೇವಲ ಶೇ. 3 ಸರಕಾರಿ ಶಾಲೆಗಳಲ್ಲಿ ಮಾತ್ರ ಈ ಶೈಕ್ಷಣಿಕ ವರ್ಷದಲ್ಲಿ 400 ರಿಂದ 500 ವಿದ್ಯಾರ್ಥಿಗಳ ದಾಖಲಾತಿ ಆಗಿದೆ ಮತ್ತು ಕೇವಲ ಶೇ. 3 ಸರಕಾರಿ ಶಾಲೆಗಳಲ್ಲಿ ಮಾತ್ರ ಐನೂರಕ್ಕಿಂತ ಮೇಲ್ಪಟ್ಟ ದಾಖಲಾತಿ ಆಗಿದೆ.
ಗುಜರಾತ್ ಸರಕಾರವು ಹಂತ ಹಂತವಾಗಿ ನೂರಕ್ಕಿಂತ ಕಡಿಮೆ ವಿದ್ಯಾರ್ಥಿ ಗಳಿರುವ ಶಾಲೆಗಳನ್ನು ಮುಚ್ಚುವ ಯೋಚನೆಯಲ್ಲಿದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ ಶಿಕ್ಷಕರು ಗ್ರಾಮೀಣ ಪ್ರದೇಶಗಳಿಗೆ ಹೋಗಲು ಒಲವು ತೋರದಿರುವಿಕೆ.
‘‘ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕೊರತೆ ಇರುವ ಶಾಲೆಗಳನ್ನು ಹತ್ತಿರದ ಶಾಲೆಗಳೊಂದಿಗೆ ವಿಲೀನಗೊಳಿಸುವ ಬಗ್ಗೆ ಯೋಚಿಸಲಾಗಿದೆ. ಮೊದಲ ಹಂತದಲ್ಲಿ ಹಿರಿಯ ತರಗತಿಗಳನ್ನು ಮುಚ್ಚಲಾಗುವುದು. ಮುಚ್ಚಲುದ್ದೇಶಿಸಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಆ ಬಳಿಕ ಶಾಲೆಗಳನ್ನು ಮುಚ್ಚಲಾಗುವುದು. ನಂತರ ಹಂತ ಹಂತವಾಗಿ ಇತರ ತರಗತಿಗಳನ್ನು ಮುಚ್ಚಲಾಗುವುದು.’’ ಎಂದು ರಾಜ್ಯ ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹಾ ಚೂಡಾಸಮ ಹೇಳುತ್ತಾರೆ
ವಿಲೀನದಿಂದ ‘ಬೇಟಿ’ಗಳಿಗೆ ತೊಂದರೆಯಾಗಲಿದೆ
ಗುಜರಾತ್ ಬಜೆಟ್‌ನಲ್ಲಿ ರೂ. 27,000 ಕೋಟಿಯನ್ನು ಶೈಕ್ಷಣಿಕ ಕ್ಷೇತ್ರಕ್ಕೆಂದು ಮೀಸಲಿಡಲಾಗಿದೆ. ಸಂಖ್ಯೆಗೆ ಇಷ್ಟು ಬೃಹತ್ ಮೊತ್ತವಿದೆಯಾದರೂ ಅದರ ಬಳಕೆಯ ವಿಧಾನ ತೀರಾ ಅಸಮರ್ಪಕ ವಾಗಿದೆ ಅಥವಾ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಅದರಲ್ಲಿ ಸಿಂಹಪಾಲು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಲ್ಲದ ಶಾಲೆಗಳಿಗಾಗಿಯೇ ವ್ಯಯಿಸಲಾಗುತ್ತಿದೆ. ಆದರೆ ಸರಕಾರ ಯಾಕೆ ಸರಕಾರಿ ಶಾಲೆಗಳಿಗೆ ದಾಖಲಾತಿ ಇಲ್ಲ ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ ಮತ್ತು ಮಕ್ಕಳ ದಾಖಲಾತಿಗಾಗಿ ಯಾವುದೇ ಸಮರ್ಪಕವನ್ನೂ ಕೈಗೊಳ್ಳುತ್ತಿಲ್ಲ. ಇದರ ಹಿಂದೆ ಖಾಸಗಿ ಶಿಕ್ಷಣ ಮಾಫಿಯಾ ಕೆಲಸ ಮಾಡುತ್ತಿದೆ. ಖಾಸಗೀಕರಣವೇ ಅಭಿವೃದ್ಧಿ ಎನ್ನುವವರಿಗೆ ಖಾಸಗೀಕರಣದಿಂದ ಸಮಾಜದ ಬಡವರ್ಗಕ್ಕೆ ಆಗುವ ಅನ್ಯಾಯದ ಅರಿವೇ ಆಗುತ್ತಿಲ್ಲ.
‘ಶೈಶವ್ ಚೈಲ್ಡ್ ರೈಟ್ಸ್’ ಎಂಬ ಎನ್‌ಜಿಒದ ಸಹಸ್ಥಾಪಕಿ ಪಾರುಲ್ ಸೇಥ್ ಹೇಳುತ್ತಾರೆ. ‘‘ಶಾಲೆಗಳ ವಿಲೀನ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಅದರಲ್ಲೂ ಹೆಣ್ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಹುದು. ಮಧ್ಯಾಹ್ನದ ಊಟ ಮತ್ತು ಉಚಿತ ಶಿಕ್ಷಣ ಎಂಬೆರಡು ಕಾರಣಗಳಿಗಾಗಿಯೇ ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸುವ ಬಹಳಷ್ಟು ಪೋಷಕರಿದ್ದಾರೆ. ಶಾಲೆಗಳನ್ನು ವಿಲೀನ ಮಾಡುವುದರಿಂದ ದೊಡ್ಡ ಸಂಖ್ಯೆಯ ಗ್ರಾಮೀಣ ಮಕ್ಕಳಿಗೆ ಶಾಲೆ ಬಹಳ ದೂರವಾಗುತ್ತದೆ. ಇದರಿಂದ ದೊಡ್ಡ ಸಂಖ್ಯೆಯ ಹೆಣ್ಮಕ್ಕಳು ಶಿಕ್ಷಣ ಮೊಟಕುಗೊಳಿಸಬಹುದು. ಇದು ಖಾಸಗಿ ಶಿಕ್ಷಣ ಮಾಫಿಯಾಕ್ಕೆ ವರವಾಗಬಹುದು. ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಹಬ್ಬಲು ದಾರಿ ಮಾಡಿಕೊಡುತ್ತದೆ.’’
 
 ದೇಶದ ತುಂಬಾ ಹೆಣ್ಮಕ್ಕಳು ಅಭದ್ರತೆಯಿಂದ ಬಳಲುತ್ತಿರುವ ಕಾಲದಲ್ಲಿ ತಮ್ಮ ಹೆಣ್ಮಕ್ಕಳನ್ನು ದೂರದ ಶಾಲೆಗೆ ಕಳುಹಿಸದಿರುವುದೇ ಲೇಸು ಎಂದು ಅನಕ್ಷರಸ್ಥ ಗ್ರಾಮೀಣ ಜನತೆ ಬಗೆಯುತ್ತಾರೆ. ಗುಜರಾತಿನ ಆದಿವಾಸಿ ವಲಯಗಳಲ್ಲಿ ಶಿಕ್ಷಣದ ಕುರಿತಂತೆ ತೀರಾ ಜಾಗೃತಿಯೇ ಇಲ್ಲ ಎನ್ನುವುದೂ ಸತ್ಯ. ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಂಠಿತವಾಗಲು ಸರಕಾರದ ನೀತಿಗಳೇ ಕಾರಣ. ಬಜೆಟ್‌ನಲ್ಲಿ ದುಡ್ಡು ಇಟ್ಟ ಮಾತ್ರಕ್ಕೆ ಶೈಕ್ಷಣಿಕ ಅಭಿವೃದ್ಧಿಯಾಗುವುದಿಲ್ಲ. ಇಟ್ಟ ದುಡ್ಡನ್ನು ಸಮರ್ಪಕವಾಗಿ ವ್ಯಯಿಸಲೂಬೇಕು. ಯಾವುದೇ ಪ್ರಜಾತಾಂತ್ರಿಕ ದೇಶದಲ್ಲಿ ಉಚಿತ ಶಿಕ್ಷಣ ಜನರ ಮೂಲಭೂತ ಹಕ್ಕಾಗಿರುತ್ತದೆ. ಅದು ಆಳುವ ವರ್ಗದ ಔದಾರ್ಯವಲ್ಲ. ನೆಗಡಿಯಾಗಿದೆಯೆಂದು ಮೂಗು ಕೊಯ್ಯುವುದು ಖಂಡಿತಾ ಪರಿಹಾರವಲ್ಲ. ಅದಕ್ಕೆ ಚಿಕಿತ್ಸೆ ಮಾಡಬೇಕು. ಶಾಲೆಗಳನ್ನು ಮುಚ್ಚುವುದು ಖಂಡಿತ ಪರಿಹಾರವಾಗದು. ಮುಚ್ಚುಗಡೆ ತಡೆಯಲು ಕ್ರಮ ಕೈಗೊಳ್ಳಬೇಕು. ಶಿಕ್ಷಣ ಮಕ್ಕಳ ಬೌದ್ಧಿಕ ಅಭಿವೃದ್ಧಿಯ ನೆಲೆಯಲ್ಲಿ ಆಗಬೇಕೇ ಹೊರತು ಮೌಢ್ಯ ಬಿತ್ತುವ ಮಾಧ್ಯಮವಾಗಬಾರದು.
ಆದಿವಾಸಿ ಸಮುದಾಯಗಳಿಗೆ ಗುಜರಾತಿನ ಶಿಕ್ಷಣ ವ್ಯವಸ್ಥೆ ತಮ್ಮದು, ತಮ್ಮ ಅಭಿವೃದ್ಧಿಗೆ ಇರುವಂತಹದ್ದು ಎಂಬ ಭಾವನೆಯೇ ಬೆಳೆದಿಲ್ಲ.
 ಗುಜರಾತಿನ ಶೈಕ್ಷಣಿಕ ಪಠ್ಯಗಳು ಮೌಢ್ಯ ಬಿತ್ತುವುದಕ್ಕೆ ಹೆಸರುವಾಸಿ. ಮೌಢ್ಯ ಮತ್ತು ಸುಳ್ಳುಗಳು ಹೆಚ್ಚು ಕಾಲ ಬಾಳಿಕೆ ಬಾರದು ಎಂಬ ಸತ್ಯವನ್ನು ಮೌಢ್ಯ ಮತ್ತು ಸುಳ್ಳಿನ ಆರಾಧಕರಿಗೆ ಹೇಳಿಕೊಡುವವರು ಯಾರು?
ಗುಜರಾತ್ ಎಂದರೆ ಭೂಲೋಕದ ಸ್ವರ್ಗ ಎಂದೇ ಬಿಂಬಿಸುವವರು ಈ ವಾಸ್ತವದತ್ತಲೂ ತುಸು ಕಣ್ಣು ಹಾಯಿಸಬೇಕಿದೆ. ಬೇರೆ ರಾಜ್ಯಗಳನ್ನು ಸದಾ ಗೇಲಿ ಮಾಡುತ್ತಲೇ ಇರುವ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎನ್ನುವ ಮಂದಿ ತಮ್ಮ ತವರು ರಾಜ್ಯದ ಹದಗೆಟ್ಟ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ತುಸು ಚಿಂತಿಸಲಿ.
ಆಧಾರ: ಟೈಮ್ಸ್ ಆಫ್ ಇಂಡಿಯಾ

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News

ಜಗದಗಲ
ಜಗ ದಗಲ