ಆನಂದ್ ತೇಲ್ತುಂಬ್ಡೆ ಬಂಧನ ಇತಿಹಾಸದ ಅತ್ಯಂತ ನಾಚಿಕೆಗೇಡಿನ ಹಾಗೂ ಆಘಾತಕಾರಿ ಕ್ಷಣವಾಗಲಿದೆ: ಅರುಂಧತಿ ರಾಯ್

Update: 2019-01-17 18:42 GMT

ನಮ್ಮನ್ನು ಒಂದು ಗಂಭೀರ ರೋಗ ಬಾಧಿಸಲಿದೆ. ಜವಾಹರ್ ಲಾಲ್ ನೆಹರೂ ವಿವಿಯ ಮೂವರು ವಿದ್ಯಾರ್ಥಿ ನಾಯಕರಾದ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಅವರ ವಿರುದ್ಧ ದೇಶದ್ರೋಹದ ಪ್ರಕರಣದಲ್ಲಿ ಚಾರ್ಜ್‌ಶೀಟ್‌ಸಲ್ಲಿಸಿದ ಬೆನ್ನಿಗೆ ಮಹಾರಾಷ್ಟ್ರ ಪೊಲೀಸರು ಖ್ಯಾತ ಬುದ್ಧಿಜೀವಿ ಹಾಗೂ ಅಂಕಣಕಾರ ಆನಂದ್‌ತೇಲ್ತುಂಬ್ಡೆ ಅವರನ್ನು ಬಂಧಿಸಲು ಸಜ್ಜಾಗುತ್ತಿರುವ ಸೂಚನೆ ಬಂದಿದೆ. ಆನಂದ್ ವಿರುದ್ಧ ‘ಅನ್ ಲಾಫುಲ್ ಆ್ಯಕ್ಟಿವಿಟೀಸ್ ಆ್ಯಕ್ಟ್’ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಂದರೆ ಅವರನ್ನು ತೃಣ ಮಾತ್ರದ ಅಥವಾ ಯಾವುದೇ ಸಾಕ್ಷ ಇಲ್ಲದೆಯೂ ತಿಂಗಳುಗಳ ಕಾಲ ಜಾಮೀನು ನೀಡದೆ ಜೈಲಿನಲ್ಲಿಡಬಹುದು. ಇದೇ ಕಾನೂನಿನಡಿ ಹಲವಾರು ಅಧ್ಯಾಪಕರು, ನ್ಯಾಯವಾದಿಗಳು, ಮಾನವ ಹಕ್ಕು ಕಾರ್ಯಕರ್ತರು ಹಾಗೂ ನೂರಾರು ಜನಸಾಮಾನ್ಯರನ್ನು ಜೈಲಿನಲ್ಲಿಡಲಾಗಿದೆ. ಆನಂದ್ ಹಾಗೂ ಇವರೆಲ್ಲರ ಮೇಲೆ ಆರೋಪಿಸಲಾಗಿರುವ ಅಪರಾಧಗಳು ವಿಪರೀತಕ್ಕಿಂತಲೂ ಹೆಚ್ಚು.
ಇವರೆಲ್ಲರೂ ಮೇಲಿನ ಕೋರ್ಟುಗಳಲ್ಲಿ ಬಿಡುಗಡೆಯಾಗುವುದು ಖಚಿತ. ಆಗ ನಾವೆಲ್ಲರೂ ಈ ನೆಲದ ನ್ಯಾಯಾಲಯಗಳ ಮೇಲಿನ ನಮ್ಮ ನಂಬಿಕೆಯನ್ನು ಮತ್ತೊಮ್ಮೆ ಖಂಡಿತ ದೃಢೀಕರಿಸಿಕೊಳ್ಳುತ್ತೇವೆ. ಆದರೆ ಜೈಲುಗಳಲ್ಲಿರುವವರ ಪಾಲಿಗೆ ಅದು ಕೆಲವು ವರ್ಷಗಳೇ ಆಗಿಬಿಡುತ್ತವೆ. ಅಲ್ಲಿವರೆಗೆ ಅವರು ಜೈಲಲ್ಲಿ ಕೊಳೆಯಬೇಕು. ಅವರ ವೃತ್ತಿಜೀವನ ಹಾಳಾಗಿ ಹೋಗುತ್ತದೆ. ಅವರ ಪ್ರೀತಿಪಾತ್ರರು ನ್ಯಾಯಕ್ಕಾಗಿ ಅಲ್ಲಿಂದಿಲ್ಲಿಗೆ ಅಲೆದಲೆದು ಕಂಗಾಲಾಗಿ ಹೋಗುತ್ತಾರೆ. ಈ ಅವಧಿಯಲ್ಲಿ ಅವರನ್ನು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಮುರಿದು ಹಾಕುವ ಪ್ರಯತ್ನ ನಡೆಯುತ್ತದೆ. ನಮಗೆಲ್ಲರಿಗೂ ಗೊತ್ತು, ಭಾರತದಲ್ಲಿ ಪ್ರಕ್ರಿಯೆಯೇ ನಿಜವಾದ ಶಿಕ್ಷೆ.
ಆನಂದ್ ತೇಲ್ತುಂಬ್ಡೆ ಇಂದಿನ ಅತ್ಯಂತ ಪ್ರಮುಖ ಬುದ್ಧಿಜೀವಿಗಳಲ್ಲಿ ಒಬ್ಬರು. ಅಂಬೇಡ್ಕರ್‌ರ ಮಹಾಡ್ ಸತ್ಯಾಗ್ರಹ, ಖೈರ್ಲಾಂಜಿ ನರಮೇಧಗಳ ಕುರಿತ ಹಾಗೂ ಅವರ ಇತ್ತೀಚಿಗಿನ ‘ರಿಪಬ್ಲಿಕ್‌ಆಫ್ ಕಾಸ್ಟ್’ ಓದಲೇಬೇಕಾದ ಅತ್ಯಂತ ಮಹತ್ವದ ಕೃತಿಗಳು. ಅವರನ್ನು ಬಂಧಿಸುವುದೆಂದರೆ ಶ್ರೇಷ್ಠ ಬೌದ್ಧಿಕ ದಾಖಲೆಯ ಅತ್ಯಂತ ಪರಿಣಾಮಕಾರಿ ಹಾಗೂ ವಿಶಿಷ್ಟ ದಲಿತ ಧ್ವನಿಯೊಂದನ್ನು ದಮನಿಸಿದಂತೆ. ಅವರ ಬಂಧನ ನಡೆದರೆ ಅದನ್ನು ರಾಜಕೀಯ ಕ್ರಮ ಎಂದು ಹೇಳದಿರಲು ಅಸಾಧ್ಯ. ಅದು ನಮ್ಮ ಇತಿಹಾಸದ ಅತ್ಯಂತ ನಾಚಿಕೆಗೇಡಿನ ಮತ್ತು ಆಘಾತಕಾರಿ ಕ್ಷಣವಾಗಲಿದೆ.
ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ