ಠಾಣೆ ಆವರಣದಲ್ಲಿ ಮುಕ್ತಿಗೆ ಕಾಯುತ್ತಿವೆ ಜಪ್ತಿ ವಾಹನಗಳು !

Update: 2019-01-18 16:51 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.18: ಅಪಘಾತ, ಅಪರಾಧ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ರಾಜ್ಯ ವ್ಯಾಪ್ತಿ ಪೊಲೀಸರು ಜಪ್ತಿ ಮಾಡಿರುವ ಬರೋಬ್ಬರಿ 18,477 ವಾಹನಗಳು ವಿಲೇವಾರಿಯಾಗದೆ, ಠಾಣೆ ಆವರಣದಲ್ಲಿಯೇ ತುಕ್ಕು ಹಿಡಿದು ಗುಜರಿಗೆ ಸೇರುವ ಸ್ಥಿತಿಗೆ ಬಂದು ನಿಂತಿವೆ.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಅಪಘಾತ, ಕಳವು ಪ್ರಕರಣ ಸಂಬಂಧಿಸಿದಂತೆ ವಾಹನಗಳನ್ನು ಪತ್ತೆ ಹಚ್ಚಿ ಕಾನೂನಿನ ನಿಯಾಮಾನುಸಾರ ಪೊಲೀಸರು ಜಪ್ತಿ ಮಾಡಿಕೊಂಡು, ಆಯಾ ಪೊಲೀಸ್ ಠಾಣೆಗಳ ಆವರಣದಲ್ಲೇ ನಿಲ್ಲಿಸಿದ್ದಾರೆ. ಆದರೆ, ಅಪಘಾತ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಾಹನಗಳನ್ನು ಪಡೆದುಕೊಳ್ಳಲು ಮಾಲಕರು ನಿರಾಸಕ್ತಿ ತೋರುತ್ತಿರುವುದು, ವಿಲೇವಾರಿಗೆ ತೊಡಕಾಗಿ ಪರಿಣಮಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲ ಪ್ರಕರಣಗಳಲ್ಲಿ ಕಳುವಾದ ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ವಿಲೇವಾರಿಯಾಗಿಲ್ಲ. ಇದರಿಂದ ಸಾವಿರಾರು ವಾಹನಗಳಿಗೆ ಮುಕ್ತಿ ದೊರೆತಿಲ್ಲ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ (2015 ರಿಂದ 2018ರ ಅಕ್ಟೋಬರ್ ವರೆಗೆ) ವಶಪಡಿಸಿಕೊಂಡಿರುವ ಒಟ್ಟು 1,57,542 ವಾಹನಗಳ ಪೈಕಿ, 1,38,065 ವಾಹನಗಳನ್ನು ವಿಲೇವಾರಿ ಮಾಡಲಾಗಿದೆ. ಆದರೆ, ಇವುಗಳಲ್ಲಿ 18,477 ವಾಹನಗಳ ವಿಲೇವಾರಿಗೆ ಕಾನೂನು ತೊಡಕಾಗಿರುವ ಪರಿಣಾಮ, ಠಾಣೆ ಆವರಣದಲ್ಲೇ ಇರಿಸಲಾಗಿದ್ದು, ಮಳೆ, ಗಾಳಿಗೆ ದೂಳು ತುಂಬಿ ಇಂಜಿನ್‌ಗಳು ಗುಣಮಟ್ಟ ಕಳೆದುಕೊಂಡು ಸಂಚಾರಕ್ಕೆ ಬಾರದಂತಾಗಿವೆ.

ಆದೇಶವೂ ಬಂತು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಜಪ್ತಿ ಮಾಡಿಕೊಳ್ಳಲಾಗಿರುವ ವಾಹನ ವಿಲೇವಾರಿಗೆ ವಿಶೇಷ ಕ್ರಮ ಕೈಗೊಳ್ಳುವಂತೆ (ಸ್ಪೆಷಲ್ ಡ್ರೈವ್) ಸೂಚಿಸಿರುವ ಲೋಕಾಯುಕ್ತ ಸಂಸ್ಥೆಯು, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸುವಂತೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದೆ. ಅಲ್ಲದೇ, ವಿಲೇವಾರಿಯಾಗದೆ ಬಾಕಿ ಉಳಿದಿರುವುದಕ್ಕೆ ಕಾರಣ, ವಾಹನದ ಮಾಹಿತಿ ಹಾಗೂ ಠಾಣಾ ವಿವರಣೆಗಳನ್ನು ಹೊಂದಿದ ಪೂರ್ಣ ಮಾಹಿತಿಯನ್ನು ಕೇಳಿದೆ. ಈ ಸಂಬಂಧ ನಾಲ್ಕು ತಿಂಗಳ ಅನುಮತಿಯನ್ನು ಪಡೆದುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆಯು, ಸಾರಿಗೆ ಇಲಾಖೆ ಆಯುಕ್ತರ ನೆರವು ಪಡೆದು ವಾಹನ ವಿಲೇವಾರಿಗೆ ಅಗತ್ಯ ಕ್ರಮಕ್ಕೆ ಮುಂದಾಗುವುದೆಂದು ಲೋಕಾಯುಕ್ತಕ್ಕೆ ಉತ್ತರಿಸಿದೆ.

ವಿಲೇವಾರಿಯಾಗದೆ ಬಾಕಿ ಉಳಿದಿರುವ ಬಹುತೇಕ ವಾಹನಗಳ ಮಾಲಕರು ಇದುವರೆಗೂ ಪತ್ತೆಯಾಗಿಲ್ಲ. ಇವುಗಳನ್ನು ಸಾರ್ವಜನಿಕವಾಗಿ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಬೇಕು. ಇದಕ್ಕೆ ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ವಾಹನಗಳ ಮೇಲೆ 98 ಕೆ.ಪಿ. ಕಾಯ್ದೆ ಅಡಿಯಲ್ಲಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿ, ಪ್ರಕರಣಗಳನ್ನು ವಿಲೇವಾರಿ ಮಾಡಿಸಲಾಗುವುದು. ತದನಂತರ ನ್ಯಾಯಾಲಯದ ಅನುಮತಿ ಪಡೆದು ವಾಹನಗಳನ್ನು ಬರಂಗ ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಮಾಡಲಾಗುವುದು ಎನ್ನುವುದು ಪೊಲೀಸರ ವಾದ.

ಎಷ್ಟು ವಾಹನಗಳು?
ವರ್ಷ-ವಾಹನಗಳು-ವಿಲೇವಾರಿ ವಾಹನ-ಠಾಣೆಯಲ್ಲಿನ ವಾಹನ
*2015- 38,921-36,534-2,387
*2016- 38,814-35,677-3,137
*2017- 43,923-39,018-4,905
*2018- 35,884-27,836 -8,048
 ಒಟ್ಟು, 1,57,542-1,39,065,-18,477

ಕೆಲ ವಾಹನಗಳಿಗೆ ದಾಖಲೆ ಇಲ್ಲದ ಕಾರಣ, ಪೊಲೀಸರು ವಿಲೇವಾರಿ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಹರಾಜು ಪ್ರಕ್ರಿಯೆಯಲ್ಲಿ ಒಳ್ಳೆಯ ವಾಹನಗಳನ್ನು ಮಾತ್ರ ಸಾರ್ವಜನಿಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಕೆಲ ವಾಹನಗಳು ಠಾಣಾ ಆವರಣದಲ್ಲೇ ಇವೆ.
-ವಿವೇಕ್ ನಾಯಕ್, ನಿವೃತ್ತ ಸಂಚಾರ ಪೊಲೀಸ್ ಅಧಿಕಾರಿ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News