ಸರಕಾರಗಳು ಮಾನವ ಹಕ್ಕುಗಳನ್ನು ಉಲ್ಲಂಘಿಸಲು ಹೇಗೆ ಬೃಹತ್ ದತ್ತಾಂಶಗಳನ್ನು ಬಳಸಿಕೊಳ್ಳುತ್ತವೆ?
ಖಾಸಗಿ ತನದ ಹಕ್ಕು ಮಾನವ ಹಕ್ಕುಗಳ ಒಂದು ತುರ್ತಿನ ಸಮಸ್ಯೆಯಾಗಿದೆ. ಹೀಗಾಗಿರುವುದಕ್ಕೆ ಕಾರಣಗಳೂ ಇವೆ. ಕೃತಕ ಬುದ್ಧಿಮತ್ತೆ ಮತ್ತು ತಂತ್ರಾಂಶದ ಗುರುತುಹಿಡಿಯುವಿಕೆಯೂ ಸೇರಿಕೊಂಡಿರುವ ಬೃಹತ್ ತಂತ್ರಾಂಶವು (ಬಿಗ್ ಡಾಟಾ) ಹಿಂದೆಂದೂ ನಾವು ಕಂಡು ಕೇಳರಿಯದ ರೀತಿಯಲ್ಲಿ ಜನರ ಬದುಕಿನಲ್ಲಿ ಮೂಗು ತೂರಿಸುವ ಸಾಮರ್ಥ್ಯ ಹೊಂದಿದೆ. ಬಿಗ್ ಡೇಟಾ ಕೆಲವು ವಿಷಯಗಳಲ್ಲಿ, ಕೆಲವು ಸಂದರ್ಭಗಳಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಈ ಕೆಲಸ ಮಾಡಬಲ್ಲದು.
ಸಾಮಾಜಿಕ ಮಾಧ್ಯಮಗಳು ಮತ್ತು ಟೆಕ್ ಕಂಪೆನಿಗಳು ತಾವು ಸಂಗ್ರಹಿಸುವ ಗ್ರಾಹಕರ ದತ್ತಾಂಶಗಳನ್ನು ಹೇಗೆ ಬಳಸಿಕೊಳ್ಳುತ್ತವೆ ಎಂಬ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದೆಯಾದರೂ, ಖಾಸಗಿ ತನದ ಉಲ್ಲಂಘನೆ ಮತ್ತು ಮಾನವ ಹಕ್ಕುಗಳ ಇತರ ರೀತಿಯ ದುರ್ಬಳಕೆಯ ಬಗ್ಗೆ ನಾವು ಇನ್ನಷ್ಟು ಗಮನ ಹರಿಸಬೇಕಾಗಿದೆ. ಯಾಕೆಂದರೆ ಇದಕ್ಕೆ ಕಾರಣ ಸರಳವಿದೆ: ಲಿಂಗ (ಜಂಡರ್) ಮತ್ತು ಲೈಂಗಿಕತೆಯ ನೆಲೆಯಲ್ಲಿ ತಾರತಮ್ಯ ನಡೆಸಿ, ಹಿಂಸೆಯನ್ನು ಕೂಡ ಬಳಸಿ, ಭಿನ್ನಮತವನ್ನು ಹತ್ತಿಕ್ಕಲು ವಿಶ್ವದಾದ್ಯಂತ ಸರಕಾರಗಳು ಪ್ರಯತ್ನಿಸುವುದರಿಂದ ಖಾಸಗಿ ತನದ ಮೇಲೆ ನಡೆಯುವ ಸಾಮೂಹಿಕ ದಾಳಿಗಳು ಜಾಗತಿಕವಾಗಿ ಮಿಲಿಯ ಗಟ್ಟಲೆ ಜನರ ಹಕ್ಕುಗಳನ್ನು ಮೊಟಕುಗೊಳಿಸಬಲ್ಲವು.
ಹಾಗಾದರೆ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಏನು ಮಾಡಬಹುದು? ನಮಗೆ ಈಗ ಬೇಕಾಗಿರುವುದು ನಾಗರಿಕ ಸಮಾಜ, ಖಾಸಗಿ ರಂಗ ಮತ್ತು ಪ್ರತಿಷ್ಠಾನಗಳು ಹಾಗೂ ಸರಕಾರಗಳು ಒಟ್ಟಾಗಿ ನಡೆಸುವ ಬಹುಮುಖವಾದ ಪ್ರಯತ್ನ.
► ಮಾನವ ಹಕ್ಕು ನಿಧಿಗಳ ಸ್ಥಾಪನೆ.
ಮೊದಲನೆಯದಾಗಿ, ಮಾನವ ಹಕ್ಕುಗಳನ್ನು ಬೆಂಬಲಿಸುವ ಪ್ರತಿಷ್ಠಾನಗಳು ಮಾನವ ಹಕ್ಕು ಹಾಗೂ ತಂತ್ರಜ್ಞಾನ ನಿಧಿಗಳನ್ನು ಸ್ಥಾಪಿಸಬೇಕು. ಮಾನವ ಹಕ್ಕು ದುರ್ಬಳಕೆಯನ್ನು ತಡೆಯಲು ಮಾನವ ಕಾರ್ಯಕರ್ತರು ಅಂತಹ ದುರ್ಬಳಕೆಯ ಮೇಲೆ ನಿಗಾ ಇಡುವ ಹಾಗೂ ಅದನ್ನು ದಾಖಲಿಸುವ ಹೊಸ ತಂತ್ರಜ್ಞಾನಗಳನ್ನು ಈಗಾಗಲೇ ಬಳಸಲಾಂಭಿಸಿದ್ದಾರೆ. ಟ್ವಿಟರ್‌ನಲ್ಲಿ ಮಹಿಳಾ ದ್ವೇಷದ ಮಟ್ಟಗಳನ್ನು ಪ್ರಮಾಣೀಕರಿಸಲು ಆಮ್ನೆಸ್ಟಿ ಇಂಟರ್ ನ್ಯಾಶನಲ್ ಈಗಾಗಲೇ ದತ್ತಾಂಶ ವಿಶ್ಲೇಷಣಾ ಕಂಪೆನಿಯೊಂದಿಗೆ ಒಡಗೂಡಿ ಕಾರ್ಯತತ್ಪರವಾಗಿದೆ. ಇಂತಹ ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡಬೇಕು ಮತ್ತು ಇದಕ್ಕೆ ಬೇಕಾದ ಸಂಪನ್ಮೂಲ ಒದಗಿಸಬೇಕು.
ಎರಡನೆಯದಾಗಿ, ಡಿಜಿಟಲ್ ಯುಗಕ್ಕೆ ಅನುಗುಣವಾಗಿ ಸರಕಾರಗಳು ಹೊಸ ನಿಯಮಾವಳಿಗಳನ್ನು ರೂಪಿಸಬೇಕು. ಈ ನಿಟ್ಟಿನಲ್ಲಿ ಕೃತಕ ಬುದ್ಧ್ದಿಮತ್ತೆಯ ಜವಾಬ್ದಾರಿಯುತ ಬಳಕೆಯ ಕುರಿತಾದ ಮಾಂಟ್ರಿಯಲ್ ಘೋಷಣೆಯು ಹೊಸ ತಂತ್ರಜ್ಞಾನಗಳ ನೈತಿಕ ಅಭಿವೃದ್ಧಿಯ ಆವಶ್ಯಕತೆಯ ಬಗ್ಗೆ ಮೂಡಿ ಬಂದಿರುವ ಪ್ರಭಾವಶಾಲಿಯಾದ ಒಂದು ದಾಖಲೆಯಾಗಿದೆ.
ಮೂರನೆಯದಾಗಿ, ವ್ಯಕ್ತಿಯೊಬ್ಬ ರಾಜಕೀಯ ಆಶ್ರಯ ಪಡೆದು ಅಥವಾ ದೇಶ ಭ್ರಷ್ಟನಾಗಿ ವಿದೇಶವೊಂದರಲ್ಲಿ ನೆಲೆಸುವ ಹಕ್ಕಿನ ತತ್ವವನ್ನು ಸರಕಾರಗಳು ಅಧಿಕೃತವಾಗಿ ಒಪ್ಪಿಕೊಳ್ಳಬೇಕು; ಈ ತತ್ವವನ್ನು ಮರು ದೃಢೀಕರಿಸಬೇಕು. ಯಾಕೆಂದರೆ ಭಿನ್ನಮತಕ್ಕಾಗಿ ತಮಗೆ ಕಿರುಕುಳ ನೀಡಬಹುದೆಂಬ ಆಧಾರ ಸಹಿತವಾದ ಭಯವಿರುವವರಿಗೆ ವಿದೇಶವೊಂದರಲ್ಲಿ ರಾಜಕೀಯ ಆಶ್ರಯದ ರಕ್ಷಣೆ ಬೇಕಾಗುತ್ತದೆ.
ಅಂತಿಮವಾಗಿ, ನಿಯಮಗಳನ್ನಾಧರಿಸಿದ ಒಂದು ಅಂತರ್‌ರಾಷ್ಟ್ರೀಯ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಸರಕಾರಗಳು, ದೇಶಗಳು ತಪ್ಪಿತಸ್ಥರು ಶಿಕ್ಷೆಯಿಂದ ನುಣುಚಿಕೊಳ್ಳದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾನವ ಹಕ್ಕು ಉಲ್ಲಂಘಿಸುವವರಿಗೆ ಶಿಕ್ಷೆಯಾಗದಿರುವುದೇ ಈ ಉಲ್ಲಂಘನೆಗೆ, ಮಾನವ ಹಕ್ಕುಗಳ ದುರ್ಬಳಕೆಗೆ ಕಾರಣ. ಇದು ಬದಲಾಗಬೇಕು.
► ಗಂಭೀರ ಪರಿಣಾಮಗಳು
ತಂತ್ರಜ್ಞಾನದಿಂದಾಗಿ ನಾಗರಿಕರ ಖಾಸಗಿತನದ ಮೇಲೆ ನಡೆಯುವ ದಾಳಿಗಳನ್ನು ತಡೆಯದೆ ಇರುವುದರಿಂದ ಗಂಭೀರ ಪರಿಣಾಮಗಳಾಗುತ್ತವೆ. ಇದಕ್ಕೆ ಇಲ್ಲಿ ನಾಲ್ಕು ಉದಾಹರಣೆಗಳನ್ನು ನೀಡಲಾಗಿದೆ.
ಮಹಿಳೆಯರ ಹಕ್ಕುಗಳು: ನೈತಿಕತೆಯನ್ನು ಕಾವಲುಕಾಯಲು, ನೈತಿಕ ಪೊಲೀಸ್‌ಗಿರಿ ಮಾಡಲು ಬೇಹುಗಾರಿಕಾ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ. ‘ಪಾಪ’ ಕೃತ್ಯ ಮತ್ತು ಕಾನೂನಿನ ನಡುವೆ ಸ್ಪಷ್ಟವಾದ ವ್ಯತ್ಯಾಸವಿರದ ಸ್ಥಳಗಳಲ್ಲಿ, ಇದು ವಿಶೇಷವಾಗಿ ನಡೆಯುತ್ತದೆ. ಎಲ್‌ಜಿಬಿಟಿಕ್ಯು ಹಕ್ಕುಗಳು:
ಅಂತರ್ ರಾಷ್ಟ್ರೀಯ ಲೆಸ್ಬಿಯನ್, ಗೇ, ಬೈಸೆಕ್ಸ್‌ವಲ್, ಟ್ರಾನ್ಸ್ ಆ್ಯಂಡ್ ಇಂಟರ್ ಸೆಕ್ಸ್ ಅಸೋಸಿಯೇಶನ್(ಐಎಲ್‌ಜಿಎ) ಹೇಳುವ ಪ್ರಕಾರ, 72ದೇಶಗಳು ಸಮಾನಲಿಂಗ ಸಂಬಂಧಗಳನ್ನು ನಿಷೇಧಿಸಿವೆ. ಬೇಹುಗಾರಿಕಾ ತಂತ್ರಜ್ಞಾನಗಳು ವ್ಯಕ್ತಿಗಳನ್ನು ‘ಔಟ್’ ಮಾಡುವ ಸಾಮರ್ಥ್ಯವನ್ನು ಸರಕಾರಗಳಿಗೆ ನೀಡಿವೆ. ಚಿತ್ರಹಿಂಸೆ: ಅಲ್ಪಸಂಖ್ಯಾತರನ್ನು ಹತ್ತಿಕ್ಕಲು, ಖಾಸಗಿತನವನ್ನು ಉಲ್ಲಂಘಿಸುವ ಸರಕಾರಗಳು ತಮ್ಮ ನಾಗರಿಕರ ಮೇಲೆ ನಿಯಂತ್ರಣ ಹೊಂದಿರಲು ಚಿತ್ರಹಿಂಸೆಯನ್ನು ಬಳಸುವುದಕ್ಕೆ ಮೀನಾ ಮೇಷ ಎಣಿಸುವುದಿಲ್ಲ. ಇದಕ್ಕೆ ಸಿರಿಯ ಒಂದು ಉದಾಹರಣೆ. ಸರಕಾರದ ದಮನಕಾರಿ ಕ್ರಮಗಳಿಗೆ ವಿರೋಧವಾಗಿ ಸರಿಯಾದ, ಅರ್ಥಪೂರ್ಣವಾದ ಪ್ರತಿಕ್ರಿಯೆ ಕಾಣಿಸದಿದ್ದಾಗ ಸರಕಾರಗಳು ಅದನ್ನೇ ಪತ್ರಕರ್ತರ ಮೇಲೆ ದಾಳಿ ನಡೆಸಲು ತಮಗೆ ದೊರೆತ ಅನುಮತಿ ಎಂದು ತಿಳಿಯುತ್ತವೆ. ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸಲು ಬದ್ಧವಾಗಿರುವ ಒಂದು ಸಂಘಟನೆಯಾದ ಐಎಫ್‌ಇಎಕ್ಸ್‌ನ ಪ್ರಕಾರ 2018ರಲ್ಲಿ 78 ಮಂದಿ ಪತ್ರಕರ್ತರನ್ನು ಕೊಲೆ ಮಾಡಲಾಯಿತು, ಮತ್ತು 159 ಮಂದಿಯನ್ನು ಜೈಲಿಗೆ ತಳ್ಳಲಾಯಿತು.
ಸರಕಾರಗಳು ತಮ್ಮ ನಾಗರಿಕರ ಚಲನವಲನಗಳ ಮೇಲೆ ನಿಗಾ ಇಡಬಲ್ಲವಾದರೆ ಆ ನಾಗರಿಕರನ್ನು ಹತ್ಯೆಗೈಯುವುದು ಅವುಗಳಿಗೆ ಕಷ್ಟವಲ್ಲ. ಜಮಾಲ್ ಖಶೋಗಿಯ ಹತ್ಯೆ ಇದಕ್ಕೊಂದು ಉದಾಹರಣೆ. ನಿಯಂತ್ರಿಸದೆ ಇದ್ದಲ್ಲಿ, ತಂತ್ರಜ್ಞಾನ ಆಧಾರಿತವಾದ ಖಾಸಗಿತನದ ಮೇಲಣ ದಾಳಿಗಳು ಪ್ರತಿಯೊಂದು ಮಾನವಹಕ್ಕಿಗೂ ಅಪಾಯ ತರಬಲ್ಲವು.