ನನ್ನ ಬದುಕು ಭಗ್ನವಾಗಿದೆ; ನಿಮ್ಮ ಬೆಂಬಲದ ಅಗತ್ಯವಿದೆ - ಆನಂದ್ ತೇಲ್ತುಂಬ್ಡೆ
ಭಾಗ-1
ಭೀಮಾಕೋರೆಗಾಂವ್ ಹಿಂಸಾಚಾರ ಘಟನೆಯಲ್ಲಿ ಪಾತ್ರ ವಹಿಸಿದ್ದ ಹಾಗೂ ಮಾವೋವಾದಿಗಳ ಜೊತೆ ನಂಟು ಹೊಂದಿದ್ದಾರೆಂಬ ಆರೋಪ ಎದುರಿಸುತ್ತಿರುವ ಮಾನವಹಕ್ಕುಗಳ ಕಾರ್ಯಕರ್ತ ಆನಂದ್ ತೇಲ್ತುಂಬೆ್ಡ ವಿರುದ್ಧ ಪುಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಲು ಸುಪ್ರೀಂಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ ತನ್ನ ಬಂಧನದಿಂದ ಪಾರಾಗಲು ಜಾಮೀನು ಅರ್ಜಿ ಸಲ್ಲಿಸಲು ಅವರಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಭೀಮಾಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿರುವ ತೇಲ್ತುಂಬ್ಡೆ, ದೇಶಾದ್ಯಂತ ಸರಕಾರದ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುವ ಷಡ್ಯಂತ್ರ ನಡೆಯುತ್ತಿದೆಯೆಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಸವಿಸ್ತಾರವಾದ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಅದರ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ.
ಪುಣೆ ಪೊಲೀಸರು ನನ್ನ ವಿರುದ್ಧ ಸಲ್ಲಿಸಿದ್ದ ಸುಳ್ಳು ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ಕೋರಿ ನಾನು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ 14 ಜನವರಿಯಂದು ತಳ್ಳಿಹಾಕಿದೆಯೆಂದು ನೀವು ಮಾಧ್ಯಮಗಳ ಮೂಲಕ ತಿಳಿದುಕೊಂಡಿರಬಹುದು. ಅದೃಷ್ಟವಶಾತ್, ಅದು ನನಗೆ, ಅರ್ಹ ನ್ಯಾಯಾಲಯದಿಂದ ಬಂಧನ ಪೂರ್ವ ಜಾಮೀನು ಕೋರಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಇಲ್ಲಿಯ ತನಕ ಪೊಲೀಸರು ನನ್ನ ವಿರುದ್ಧ ಹೊರಿಸಿರುವ ಆರೋಪಗಳು ಒಂದು ಸಲ ಅದು ನ್ಯಾಯಾಲಯದ ಮುಂದೆ ಬಂದಲ್ಲಿ ಅದೊಂದು ಕ್ರಿಮಿನಲ್ ಸ್ವರೂಪದ ಸುಳ್ಳುಗಳ ಕಂತೆಯೆಂದು ಸಾಬೀತುಗೊಳ್ಳಲಿದೆ ಹಾಗೂ ಆನಂತರ ನಿಮಗೆ ತೊಂದರೆ ನೀಡುವ ಅಗತ್ಯ ಬೀಳಲಾರದು ಎಂದು ನಾನು ಭಾವಿಸಿದ್ದೆ.
ಆದರೆ ನನ್ನ ಆಶಾವಾದ ಈಗ ಸಂಪೂರ್ಣವಾಗಿ ಭಗ್ನಗೊಂಡಿದೆ ಹಾಗೂ ಸದ್ಯಕ್ಕೆ ನಾನು ಪುಣೆಯ ಸೆಶನ್ಸ್ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್‌ವರೆಗೆ ಜಾಮೀನು ಕೋರುವ ಅವಕಾಶವನ್ನು ಮಾತ್ರ ಪಡೆದಿದ್ದೇನೆ. ತಕ್ಷಣದ ಬಂಧನದಿಂದ ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಬೆಂಬಲಾರ್ಥವಾಗಿ ವಿವಿಧ ವರ್ಗಗಳ ಜನರಿಂದ ಅಭಿಯಾನವನ್ನು ಹಮ್ಮಿಕೊಳ್ಳಲು ಸೂಕ್ತ ಸಮಯ ಈಗ ಬಂದಿದೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಯಡಿ ಬಂಧನವೆಂದರೆ, ವರ್ಷಗಳ ಜೈಲುವಾಸವೆಂದು ಅರ್ಥವೆಂದು ಹಲವರಿಗೆ ತಿಳಿದಿಲ್ಲ. ಕಟ್ಟಾ ಕ್ರಿಮಿನಲ್ ಕೂಡಾ ತನ್ನ ಅಪರಾಧಕ್ಕಾಗಿ ಒಂದೆರಡು ವರ್ಷಗಳ ಸಾಧಾರಣ ಜೈಲು ವಾಸ ಅನುಭವಿಸಿ ಹೊರಬರುತ್ತಾನೆ. ಆದರೆ ತಮ್ಮ ರಾಜಕೀಯ ಧಣಿಗಳ ಒತ್ತಾಸೆಯ ಮೇರೆಗೆ ತಮಗೆ ಏಕರೂಪವಾಗಿ ಕಾರ್ಯಾಚರಿಸುವ ಪೊಲೀಸರು, ಅಮಾಯಕನೊಬ್ಬನ ವಿರುದ್ಧ ಆತ ಅಪರಾಧ ವೆಸಗಿರುವುದಕ್ಕೆ ತಮ್ಮ ಬಳಿ ಪುರಾವೆಯಿದೆಯೆಂದು ಹೇಳಿದರೆ ಸಾಕು, ಆತ/ಆಕೆಯನ್ನು ವರ್ಷಗಟ್ಟಲೆ ಜೈಲಲ್ಲಿರಿಸಬಹುದಾಗಿದೆ.
ನನ್ನ ಬಂಧನವು ಕೇವಲ ನನ್ನ ಪಾಲಿಗೆ ಕೇವಲ ಜೈಲು ಬದುಕಿನ ಸಂಕಷ್ಟವನ್ನು ಅನುಭವಿಸುವುದು ಮಾತ್ರವೇ ಅಲ್ಲ, ನನ್ನ ದೇಹದ ಅವಿಭಾಜ್ಯ ಅಂಗವಾಗಿರುವ ಲ್ಯಾಪ್‌ಟಾಪ್‌ನಿಂದ, ನನ್ನ ಬದುಕಿನ ಭಾಗವಾಗಿರುವ ಗ್ರಂಥಾಲಯದಿಂದ, ವಿವಿಧ ಪ್ರಕಾಶಕರಿಗಾಗಿ ಪೂರ್ತಿಗೊಳಿಸಬೇಕಾಗಿರುವ ನಾನು ಅರ್ಧ ಬರೆದ ಪುಸ್ತಕಗಳಿಂದ, ನನ್ನ ವೃತ್ತಿಯ ಘನತೆಯ ಮೇಲೆ ತಮ್ಮ ಭವಿಷ್ಯವನ್ನೇ ಪಣವಾಗಿಟ್ಟಿರುವ ವಿದ್ಯಾರ್ಥಿಗಳಿಂದ, ನನ್ನ ಹೆಸರಿನೊಂದಿಗೆ ಅಪಾರವಾದ ಸಂಪನ್ಮೂಲಗಳನ್ನು ಹೂಡಿಕೆ ಮಾಡಿರುವ ನನ್ನ ಸಂಸ್ಥೆಯಿಂದ ಹಾಗೂ ನನ್ನನ್ನು ಇತ್ತೀಚೆಗಷ್ಟೇ ನೇಮಕಗೊಳಿಸಿದ ಅದರ ಅಡಳಿತಮಂಡಳಿಯವರಿಂದ ಹಾಗೂ ನನ್ನ ಅಸಂಖ್ಯಾತ ಗೆಳೆಯರಿಂದ ಹಾಗೂ ನನ್ನ ಕುಟುಂಬದಿಂದ, ನನ್ನ ಈ ದುರದೃಷ್ಟವನ್ನು ಸಹಿಸಿಕೊಳ್ಳಲು ಹೆಣಗಾಡುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್‌ಅವರ ಮೊಮ್ಮಗಳಾದ ನನ್ನ ಪತ್ನಿಯಿಂದ ಹಾಗೂ ಕಳೆದ ವರ್ಷದ ಆಗಸ್ಟ್‌ನಿಂದ ನನಗೇನೇನೆಲ್ಲ ಆಗಿದೆಯೆಂಬುದನ್ನು ತಿಳಿಯದೆ ಆತಂಕಗೊಂಡಿರುವ ನನ್ನ ಪುತ್ರಿಯರಿಂದ ದೂರವಿರಿಸಿದಂತಾಗಲಿದೆ.
ಕಡುಬಡತನದ ಕುಟುಂಬದಿಂದ ಬಂದವನಾದ ನಾನು ವಿದ್ವಾಂಸ ಮಟ್ಟದ ಸಾಧನೆಗಳೊಂದಿಗೆ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ತೇರ್ಗಡೆಗೊಂಡಿದ್ದೇನೆ. ಪ್ರತಿಷ್ಠಿತ ಅಹ್ಮದಾಬಾದ್ ಐಐಎಂನ ಹಳೆ ವಿದ್ಯಾರ್ಥಿಯಾಗಿರುವ ನಾನು ಸುತ್ತಮುತ್ತಲಿನ ಸಾಮಾಜಿಕ ವೈಪರೀತ್ಯಗಳನ್ನು ನಿರ್ಲಕ್ಷಿಸುವುದನ್ನು ಆಯ್ಕೆ ಮಾಡಿಕೊಂಡಿದ್ದಲ್ಲಿ ಮಾತ್ರವೇ ನಾನು ಸುಲಭವಾಗಿ ಐಷಾರಾಮಿ ಜೀವನ ನಡೆಸಬಹುದಾಗಿತ್ತು.
ಆದಾಗ್ಯೂ ಜನತೆಯ ಬದುಕಿಗೆ ಒಳಿತಿನ ಕೊಡುಗೆ ನೀಡಬೇಕೆಂಬ ಪ್ರಜ್ಞೆಯಿಂದ, ನನ್ನ ಕುಟುಂಬವನ್ನು ಯೋಗ್ಯವಾದ ಜೀವನಮಟ್ಟದಲ್ಲಿ ಪೋಷಿಸಲು ಸಾಕಾಗುವಷ್ಟು ಮಾತ್ರವೇ ಸಂಪಾದನೆ ಮಾಡಲು ನಿರ್ಧರಿಸಿದ್ದೆ. ಜಗತ್ತಿಗೆ ನನ್ನ ಪರಿಸ್ಥಿತಿಗೆ ಸಾಧ್ಯವಿರುವಂತಹ ಒಂದೇ ಒಂದು ವಿಷಯವಾದ ಬೌದ್ಧಿಕ ಕೊಡುಗೆಯನ್ನು ನೀಡಲು ನನ್ನ ಸಮಯವನ್ನು ಮೀಸಲಿರಿಸಿದೆ. ಈ ಪ್ರವೃತ್ತಿಯು, ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಸಹಜವಾಗಿಯೇ, ನನ್ನನ್ನು ಪ್ರಜಾತಾಂತ್ರಿಕ ಹಕ್ಕುಗಳಿಗಾಗಿನ ರಕ್ಷಣಾ ಸಮಿತಿಯಂತಹ ಸಂಘಟನೆಗಳೆಡೆಗೆ ಕೊಂಡೊಯ್ಯಿತು.ಇಂದು ನಾನು ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದೇನೆ ಹಾಗೂ ಶಿಕ್ಷಣದ ಹಕ್ಕಿಗಾಗಿನ ಅಖಿಲ ಭಾರತ ವೇದಿಕೆ (ಎಐಎಫ್‌ಆರ್‌ಟಿಇ)ಯ ಅಧ್ಯಕ್ಷೀಯ ಮಂಡಳಿಯ ಸದಸ್ಯನಾಗಿದ್ದೇನೆ.
ಇದರ ಹೊರತಾಗಿ, ನನ್ನ ನಾಲ್ಕು ದಶಕಗಳ ಸಮಗ್ರ ಶೈಕ್ಷಣಿಕ ಬದುಕು ಹಾಗೂ ದಶಕಗಳ ಕಾರ್ಪೊರೇಟ್ ವೃತ್ತಿ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿರಲಿಲ್ಲ. ಹೀಗಾಗಿ, ನನ್ನ ವೃತ್ತಿ ಬದುಕಿನ ಮೂಲಕ ನಾನು ಅಪಾರವಾದ ಕೊಡುಗೆ ನೀಡಿರುವ ಈ ದೇಶದ ಆಡಳಿತ ವ್ಯವಸ್ಥೆಯು ನನ್ನ ವಿರುದ್ಧ ವೇ ತಿರುಗಿಬಿದ್ದು, ಕ್ರಿಮಿನಲ್‌ನಂತೆ ನಿಂದನಾತ್ಮಕವಾಗಿ ನಡೆಸಿಕೊಂಡಿರುವುದನ್ನು ನಾನು ಕಲ್ಪಿಸಿಯೂ ಇರಲಿಲ್ಲ.
ಭಾರತದಲ್ಲಿನ ಸೇಡಿನ ಮನೋಭಾವದ ಆಡಳಿತ ವ್ಯವಸ್ಥೆಯು ಕಳ್ಳರನ್ನು ಹಾಗೂ ದರೋಡೆಕೋರರನ್ನು ರಕ್ಷಿಸುವುದಕ್ಕಾಗಿ ಅಮಾಯಕರನ್ನು ಕ್ರಿಮಿನಲೀಕರಣಗೊಳಿಸುತ್ತಿದ್ದು, ಆ ಮೂಲಕ ಜಗತ್ತಿನಲ್ಲೇ ಅತ್ಯಂತ ಅಸಮಾನತೆಯುಳ್ಳ ದೇಶವೆನಿಸುವಂತೆ ಮಾಡಿದೆ. ಆದರೆ, ದೇಶದಲ್ಲಿ ಭಿನ್ನಮತವನ್ನು ಹತ್ತಿಕ್ಕುವುದಕ್ಕಾಗಿ ಸರಕಾರವು ಆಯ್ದ ಮಾನವಹಕ್ಕುಗಳ ಸಮರ್ಥಕರನ್ನು, ಚಿಂತಕರನ್ನು ಹಾಗೂ ಜನತಾ ಚಳವಳಿಗಳ ಕಾರ್ಯಕರ್ತರನ್ನು ಜೈಲಿಗೆ ತಳ್ಳಲು ಕಳೆದ ವರ್ಷ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್ ಎಂಬ ನಿರುಪದ್ರವಿ ಕಾರ್ಯಕ್ರಮವನ್ನು ಬಳಸಿಕೊಂಡಿತು.
ಪ್ರತಿಯೊಂದು ಪ್ರಜಾತಾಂತ್ರಿಕ ಸಜ್ಜನಿಕೆಯನ್ನು ತೊರೆದು ತನ್ನ ವಿರೋಧಿಗಳ ವಿರುದ್ಧ ಪ್ರತೀಕಾರವನ್ನು ಬೆಳೆಸಿದಂತಹ ಪ್ರಾಯಶಃ, ಸ್ವಾತಂತ್ರಾನಂತರದ ಭಾರತದ ಅತ್ಯಂತ ಕೆಟ್ಟ ಸಂಚು ಇದಾಗಿದೆ.
ಕೆಟ್ಟ ಕಥಾವಸ್ತು ಹಾಗೂ ನಾನು
ಬಿಜೆಪಿಯ ಕೋಮುವಾದಿ ಹಾಗೂ ಜಾತಿ ರಾಜಕೀಯ ನೀತಿಗಳ ವಿರುದ್ಧ ಜನರನ್ನು ಒಗ್ಗೂಡಿಸಲು 1818ರಲ್ಲಿ ನಡೆದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯನ್ನು ಬಳಸಿಕೊಳ್ಳುವ ಚಿಂತನೆಯನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ.ಬಿ ಸಾವಂತ್ ಹಾಗೂ ಬಾಂಬೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಬಿ.ಜಿ.ಕೋಲ್ಶೆ ಪಾಟೀಲ್ ಅವರು ಹುಟ್ಟುಹಾಕಿದ್ದರು. ಈ ಬಗ್ಗೆ ಯೋಜನೆಯನ್ನು ರೂಪಿಸಲು ಅವರು ಕಾರ್ಯಕರ್ತರು ಹಾಗೂ ಚಿಂತಕರ ಸಭೆಯನ್ನು ಕರೆದಿದ್ದರು.
ನ್ಯಾಯಮೂರ್ತಿ ಸಾವಂತ್ ಹಾಗೂ ಆನಂತರ ನ್ಯಾಯಮೂರ್ತಿ ಕೊಲ್ಶೆಪಾಟೀಲ್ ಪರವಾಗಿ ನಾನು ಕೂಡಾ ಪ್ರಾಥಮಿಕವಾಗಿ ಆಹ್ವಾನಿಸಲ್ಪಟ್ಟಿದ್ದೆ. ನನ್ನ ಶೈಕ್ಷಣಿಕ ಕಾರ್ಯಕ್ರಮಗಳಿಂದಾಗಿ ನನಗೆ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲವೆಂದು ನಾನು ವಿಷಾದ ವ್ಯಕ್ತಪಡಿಸಿದ್ದೆ. ಆದರೆ ಇತರ ಹಲವಾರು ಮಂದಿಯ ಜೊತೆ ಸಮಾವೇಶದ ಸಹಸಂಚಾಲಕನಾಗಬೇಕೆಂಬ ಅವರ ಕೋರಿಕೆಯನ್ನು ನಾನು ಒಪ್ಪಿಕೊಂಡಿದ್ದೆ. ಆದರೆ ಎಲ್ಗಾರ್ ಪರಿಷದ್ ಕುರಿತು ವಾಟ್ಸ್ ಆ್ಯಪ್‌ನಲ್ಲಿ ಕರಪತ್ರವೊಂದನ್ನು ಕಾಣುವ ತನಕ ಅಲ್ಲಿ ಏನೆಲ್ಲಾ ನಡೆಯಿತೆಂಬುದನ್ನು ನಾನು ಕೇಳಲೇ ಇಲ್ಲ.
ಪೇಶ್ವೆಗಳ ದಮನದ ಕೊನೆಯನ್ನು ಹಾಗೂ ಭೀಮಾಕೋರೆಗಾಂವ್‌ನ ಸ್ಮಾರಕ ಫಲಕದಲ್ಲಿ ಕೆತ್ತಲಾದ ಮಹಾರ್ ಸೈನಿಕರ ಬಲಿದಾನವನ್ನು ಆಚರಿಸುವ ಚಿಂತನೆಯನ್ನು ನಾನು ಬೆಂಬಲಿಸಿದ್ದೆ. ಆದಾಗ್ಯೂ, ಪೇಶ್ವೆಗಳ ಬ್ರಾಹ್ಮಣವಾದಿ ಆಡಳಿತದ ಕಾಲದಲ್ಲಿ ತಮ್ಮ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರತೀಕಾರವನ್ನು ತೀರಿಸಲೆಂದೇ ಮಹಾರ್ ಸೈನಿಕರು ಭೀಮಾ ಕೋರೆಗಾಂವ್ ಯುದ್ಧದಲ್ಲಿ ಜಯಗಳಿಸಿದರೆಂಬುದನ್ನು ಎಲ್ಗಾರ್ ಪರಿಷದ್ ಬಿಂಬಿಸುತ್ತಿರುವುದು ನನಗೆ ಅಸಮಾಧಾನವುಂಟು ಮಾಡಿತ್ತು.
ಇತಿಹಾಸವನ್ನು ಹೀಗೆ ತಿರುಚಿ ಓದುವುದರಿಂದ, ದಲಿತರ ಗುರುತಿಸಿಕೊಳ್ಳುವಿಕೆಯ ಗೀಳು ಇನ್ನಷ್ಟು ಬಲಗೊಳ್ಳಲಿದ್ದು, ಜನರೊಂದಿಗೆ ವಿಶಾಲವಾದ ಏಕತೆಯನ್ನು ಮೂಡಿಸಲು ಕಷ್ಟಕರವಾಗಲಿದೆ. ‘ದಿ ವೈರ್’ಗೆ ನಾನು ಈ ಬಗ್ಗೆ ಬರೆದ ಲೇಖನಕ್ಕೆ ದಲಿತರಿಂದ ರೋಷಯುತವಾದ ಪ್ರತಿಕ್ರಿಯೆ ದೊರೆಯಿತು. ಇಡೀ ವಿಷಯದ ಬಗ್ಗೆ ನಾನು ಮತ್ತೊಮ್ಮೆ ಮರುಚಿಂತನೆ ಮಾಡಿದೆ ಹಾಗೂ ಓರ್ವ ನೈಜ ಚಿಂತಕ ಮಾಡುವಂತೆ ನನ್ನ ನಿಲುವಿಗೆ ಅಚಲವಾಗಿ ಬದ್ಧನಾದೆ.
ಪ್ರಾಸಂಗಿಕವಾಗಿ ನಾನು ಬರೆದ ಲೇಖನ, ಅದಕ್ಕೆ ಬರೆದ ಪ್ರತಿಕ್ರಿಯೆಗಳು, ನನ್ನ ಅಭಿಪ್ರಾಯಗಳನ್ನು ನಾನು ಮರುದೃಢೀಕರಿಸಿರುವುದು, ಇತರರ ಒತ್ತಾಸೆಯ ಮೇರೆಗೆ ನಾನು ದಲಿತರನ್ನು ಪ್ರಚೋದಿಸುವ ಕೆಲಸದಲ್ಲಿ ತೊಡಗಿದ್ದೇನೆಂಬ ಆರೋಪಗಳನ್ನು ತಳ್ಳಿಹಾಕಬೇಕಾಗುತ್ತದೆ. ಆದರೆ ಅವೈಚಾರಿಕತೆಯೇ ವಿಜೃಂಭಿಸುತ್ತಿರುವಾಗ, ಇಂತಹ ವೈಚಾರಿಕತೆಯಿಂದ ಆ ಆಡಳಿತದ ಅಥವಾ ಪೊಲೀಸರ ಧೋರಣೆಯನ್ನು ಬದಲಿಸಲು ಸಾಧ್ಯವಿಲ್ಲ.
250ಕ್ಕೂ ಅಧಿಕ ಸಂಘಟನೆಗಳು ಎಲ್ಗಾರ್ ಪರಿಷದ್ ಜೊತೆ ಕೈಜೋಡಿಸಿದ್ದವು. ಅವುಗಳಲ್ಲಿ ಕೆಲವು ಈ ಹಿಂದೆಂದೂ ದಲಿತರ ಜೊತೆ ರಾಜಕೀಯವಾಗಿ ಕೈಜೋಡಿಸಿರದ ಮರಾಠರಿಗೆ ಸೇರಿದ್ದವಾಗಿದ್ದವು.
ಬ್ರಾಹ್ಮಣ ಮುಖ್ಯಮಂತ್ರಿ ನೇತೃತ್ವದಲ್ಲಿ ಬಿಜೆಪಿ-ಶಿವಸೇನೆ ರಾಜ್ಯದಲ್ಲಿ ಸರಕಾರ ರಚಿಸಿದಾಗಿನಿಂದ ವಿವಿಧ ರೂಪಗಳಲ್ಲಿ ಮರಾಠರ ಅಸಮಾಧಾನ ವ್ಯಕ್ತವಾಗಿದೆ. ಅವುಗಳಲ್ಲಿ ಅತಿ ದೊಡ್ಡದಾದುದು ಮರಾಠ ಮೋರ್ಚಾವಾಗಿದೆ. ಕೊಪರ್ಡಿವಾರೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಮರಾಠ ಬಾಲಕಿ ಯನ್ನು ಕೆಲವು ದುಷ್ಕರ್ಮಿಗಳು ಅತ್ಯಾಚಾರಗೈದ ಹಾಗೂ ಕೊಲೆ ಮಾಡಿದ ದುರದೃಷ್ಟಕರ ಘಟನೆಯ ನೆಪದಲ್ಲಿ ಪ್ರತಿಭಟನೆ ಭುಗಿಲೆದ್ದಿತು. ಆರೋಪಿಗಳಲ್ಲಿ ಒಬ್ಬಾತ ದಲಿತನಾಗಿದ್ದ. ಆಗ ಆಡಳಿತವು ಸಮರ್ಪಕವಾಗಿ ಕಾರ್ಯಾಚರಿಸಿತ್ತು. ಆದರೆ ಸಂತ್ರಸ್ತೆಗೆ ಕಾನೂನುಬದ್ಧವಾದ ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆಯನ್ನು, ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ರದ್ದುಪಡಿಸಬೇಕೆಂಬ ಸಂಬಂಧರಹಿತವಾದ ಬೇಡಿಕೆಯ ಮೂಲಕ ದಾರಿತಪ್ಪಿಸಲಾಯಿತು.
ಆನಂತರ ಈ ಜನಸಮೂಹದ ಕ್ರೋಡೀಕರಣವನ್ನು ಮರಾಠರ ಮೀಸಲಾತಿಯನ್ನು ಆಗ್ರಹಿಸಲು ಬಳಸಿಕೊಳ್ಳಲಾಯಿತು. ರಾಜ್ಯದಲ್ಲಿ ಬ್ರಾಹ್ಮಣ್ಯದ ಯಜಮಾನಿಕೆಯನ್ನು ಪರಾಭವಗೊಳಿಸಲು ದಲಿತರ ಜೊತೆ ಕೈಜೋಡಿಸಬೇಕಾದ ಅಗತ್ಯವನ್ನು ಮರಾಠರು ಗ್ರಹಿಸತೊಡಗಿದರು. ಅವರ ಕೆಲವು ಯುವ ಸಂಘಟನೆಗಳು ಎಲ್ಗಾರ್ ಪರಿಷದ್ ಜೊತೆ ಕೈಜೋಡಿಸುವ ಮೂಲಕ ಇದು ವ್ಯಕ್ತವಾಯಿತು ಹಾಗೂ ‘‘ ಪೇಶ್ವವಾದವನ್ನು ಹೂತುಹಾಕಿ’’ ಎಂಬ ಘೋಷಣೆಯ ಮೂಲಕ ಇದು ವ್ಯಕ್ತವಾಯಿತು.
(ಮುಂದುವರಿಯುವುದು)