ಸೈಬರ್ ಸೈತಾನ್ ಆದಾಗ…
ಯೋಗೇಶ್ ಮಾಸ್ಟರ್
► ಅಧ್ಯಯನ ಮತ್ತು ಅರಿವು
ಹೈಸ್ಕೂಲ್ ಮಕ್ಕಳೇ ತಮ್ಮ ತಮ್ಮಲ್ಲಿ ಅಸಭ್ಯ ಮತ್ತು ಅನುಚಿತ ವರ್ತನೆಗಳ ವೀಡಿಯೊ ಚಿತ್ರೀಕರಣಗಳನ್ನು ಮಾಡಿ ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಮತ್ತು ಇತರರಿಗೂ ಕಳುಹಿಸುವುದು ಬಹಳ ವ್ಯಾಪಕವಾಗುತ್ತಿದೆ. ಎಷ್ಟೋ ಬಾರಿ ಕಂಬೈನ್ಡ್ ಸ್ಟಡಿಯ ಹೆಸರಿನಲ್ಲಿ ಒಟ್ಟಾಗುವ ಮಕ್ಕಳು ಅಪ್ಪ ಮತ್ತು ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವಂತಹ ಮನೆಯಲ್ಲಿ ಸೇರಿ ನಾನಾ ಬಗೆಯ ವೀಡಿಯೊಗಳನ್ನು ಮಾಡಿ ಹಂಚಿಕೊಳ್ಳುವುದು ವರದಿಯಾಗಿವೆ.
► ಅಂತರ್ಜಾಲದ ಜಾಲ
ಈಗ ಅಂತರ್ಜಾಲದ ನಾನಾ ತರಹದ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಬೇಕಾಗಿದೆ. ಅದನ್ನೇನೂ ಹೈಸ್ಕೂಲ್ ಮಗುವೊಂದರ ಪ್ರಬಂಧದ ರೀತಿ ತುಂಬಾ ವಿವರವಾಗಿ ಹೇಳಬೇಕಾಗಿಲ್ಲ. ಆದರೆ ಅದಕ್ಕೆ ಅಂಟಿಕೊಳ್ಳುವಂತಹ ಗೀಳು ಮಾತ್ರ ಮಕ್ಕಳಿಗೆ ಮತ್ತು ದೊಡ್ಡವರಿಗೆ ಬಹಳ ದೊಡ್ಡ ಮಾರಕ ಮನೋರೋಗವಾಗಿ ಪರಿಣಮಿಸಿದೆ ಎಂಬುದರ ಬಗ್ಗೆ ಬಹಳ ಎಚ್ಚರಿಕೆ ಮತ್ತು ಕಾಳಜಿಯಿಂದ ವಿಚಾರ ಮಾಡಬೇಕಾಗಿದೆ.
ದೊಡ್ಡವರು ಅಂತರ್ಜಾಲವನ್ನು ಬಳಸುವುದರಲ್ಲಿ ನಾನಾ ಉದ್ದೇಶಗಳಿರುತ್ತವೆ. ಮೊತ್ತ ಮೊದಲನೆಯದಾಗಿ ತಾವು ತಮ್ಮ ಸ್ನೇಹ ಬಳಗಕ್ಕೆ ಏನನ್ನೋ ಹೇಳಬೇಕಿದೆ ಎಂಬುದೇ ಆಗಿರುತ್ತದೆ. ಪ್ರಶಂಸೆಗಾಗಿ (ಪಡೆಯಲು ಮತ್ತು ನೀಡಲು), ಸೈದ್ಧಾಂತಿಕವಾಗಿ (ಮಂಡನೆ ಅಥವಾ ಖಂಡನೆ), ತಮ್ಮ ಪ್ರತಿರೋಧಕ್ಕಾಗಿ, ತಮ್ಮ ಪ್ರೀತಿ, ಭೀತಿ, ಕೋಪ, ಅಸಹನೆ, ದ್ವೇಷ; ಈ ಬಗೆಯ ಯಾವುದನ್ನೇ ವ್ಯಕ್ತಪಡಿಸಲಾಗಲಿ ಬಳಕೆಯಾಗುತ್ತಿರುತ್ತದೆ. ಆದರೆ ಒಂದು ಮುಖ್ಯವಾದ ವಿಷಯವೇನೆಂದರೆ ಯಾವ ವ್ಯಕ್ತಿಯು ಸಾರ್ವಜನಿಕವಾಗಿ ಸಂಪರ್ಕಿಸುವುದಲ್ಲದೇ ತಾನು ಒಬ್ಬನೇ ಇರುವಾಗ ಯಾವ ಸೈಟ್‌ಅನ್ನು ತೆರೆಯುತ್ತಾನೆ. ಏಕೆ ತೆರೆಯುತ್ತಾನೆ ಎಂಬುದು ಕೂಡ ಒಂದು ಮುಖ್ಯವಾದಂತಹ ಅಂಶವೇ ಆಗಿರುತ್ತದೆ. ತನಗೆ ಯಾವುದರಿಂದ ಸಂತೋಷ ಸಿಗುವುದೋ, ಯಾವುದನ್ನು ತಾನು ನೋಡದಿದ್ದರೆ ಏನನ್ನೋ ಕಳೆದುಕೊಂಡಂತೆ ಆಗುತ್ತದೆಯೋ ಅಂತಹುದು ಒಂದು ಯಾವುದೋ ಇರುತ್ತದೆ. ಅಥವಾ ಪೇಸ್ಬುಕ್, ವಾಟ್ಸ್‌ಆ್ಯಪ್ ಅಥವಾ ಇನ್‌ಸ್ಟ್ರಾಗ್ರಾಂ ತರಹದನ್ನು ಕೂಡಾ ತೆಗೆಯದೇ ಹೋದರೆ, ಸಣ್ಣ ಪುಟ್ಟದ್ದನ್ನೆಲ್ಲಾ ಹಾಕಿಕೊಂಡು, ಪ್ರತಿಸಲವೂ ಪ್ರಶಂಸೆಗಾಗಿ ಅಥವಾ ಪ್ರತಿಕ್ರಿಯೆಗಾಗಿ ಪರಿತಪಿಸುವುದೇನಾದರೂ ನಡೆಯುತ್ತಿದ್ದರೆ ಅದೊಂದು ಗೀಳಿನ ರೋಗವಾಗಿ ಪರಿಣಮಿಸಿದೆ ಎಂಬುದನ್ನು ಕಂಡುಕೊಳ್ಳಬೇಕು. ನಿಜಕ್ಕೂ ಈ ಬಗೆಯ ಸೈಟ್‌ಗಳನ್ನು ತೆಗೆಯದೇ ಹೋದರೆ, ಅದರಲ್ಲಿ ವ್ಯವಹರಿಸದೇ ಹೋದರೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿದ್ದರೆ ಆ ಮನೋರೋಗಕ್ಕೆ ಒಂದು ಹೆಸರಿದೆ. ಅದೇ ಫೋಮೊ
► ಫೋಮೊ
ಫಿಯರ್ ಆಪ್ ಮಿಸ್ಸಿಂಗ್ ಔಟ್ ಎಂಬ ವಾಕ್ಯದ ಸಂಕ್ಷಿಪ್ತ ರೂಪವೇ ಫೋಮೊ. ಏನನ್ನೋ ಕಳೆದುಕೊಂಡಿರುವ ಭಾವ ಎನ್ನುವುದಕ್ಕಿಂತ ಲಭಿಸುವುದ್ಯಾವುದೋ ಕಳೆದುಹೋಗಿಬಿಡುತ್ತದೇನೋ ಎಂಬಂತಹ ಮನೋಭಾವ. ಇದರಿಂದ ಯಾರ್ಯಾರೋ ಜೊತೆ ಸಂಪರ್ಕ ಸಾಸಲು ಯತ್ನಿಸುವುದು, ಯಾವುದಕ್ಕೂ ಇಲ್ಲ ಎನ್ನದಿರುವುದು ಇತ್ಯಾದಿ ಅನೇಕ ಲಕ್ಷಣಗಳಿವೆ. ಅದೇನೇ ಆದರೂ ಈ ೆನ್ ಅಥವಾ ಅಂತರ್ಜಾಲದ ಯಾವುದೇ ಬಗೆಯ ಗೀಳಿನ ಲಕ್ಷಣಗಳು ಮಕ್ಕಳಲ್ಲಿ ಅಥವಾ ಹದಿಹರೆಯದವರಲ್ಲಿ ಕಂಡರೆ ಎಚ್ಚರಿಕೆಯ ಗಂಟೆಗೆ ಕಿವಿಗೊಡಬೇಕು. ಏಕೆಂದರೆ ಸೈಬರ್ ಎನ್ನುವುದು ಉಪಯೋಗಿಯಾಗುವುದು ದೊಡ್ಡ ವಿಚಾರವೇ ಅಲ್ಲ. ಆದರೆ ಸೈಬರ್ ಸೈತಾನ್ ಆಗಿಬಿಟ್ಟರೆ ಮನೋರೋಗಕ್ಕೆ ಮುನ್ನುಡಿ ಮಾತ್ರವಲ್ಲ ಅದು ಭೌತಿಕವಾಗಿ ಮತ್ತು ಜೈವಿಕವಾಗಿಯೂ ಕೂಡಾ ಏನಾದರೂ ನಕಾರಾತ್ಮಕವಾಗಿ ಆಗಬಹುದಾದ ಬಹಳ ದೊಡ್ಡ ಸಾಧ್ಯತೆಗಳಿವೆ.
► ಸೈಬರ್ ಗುಮ್ಮ
ಪ್ರಾಯಶಃ ಮಕ್ಕಳಿಗೆ ಯಾವಾಗಿನಿಂದ ಸೈಬರ್ ಗುಮ್ಮ ವಕ್ಕರಿಸಬಹುದು ಎಂಬ ಯೋಚನೆ ಯಾವಾಗಲಾದರೂ ಮಾಡಿದ್ದೀರಾ? ಬಹುಶಃ ಅದು ಸೈಬರ್ ಗುಮ್ಮನ ಕೈಗೆ ನಮ್ಮ ಮಕ್ಕಳನ್ನು ಕೊಡುತ್ತಿದ್ದೇವೆ ಎಂಬ ಅರಿವಿಲ್ಲದೆಯೇ ದೊಡ್ಡವರು ತಮ್ಮದೇ ಮಗುವಿಗೆ ಮೊಬೈಲ್ ೆನ್‌ಗಳನ್ನು ಕೊಡುತ್ತಾರೆ. ಅದು ಯಾವುದೋ ಕಾರ್ಟೂನ್ ನೋಡಲೋ, ಡಾನ್ಸ್ ನೋಡಲೋ ಮೊದಮೊದಲು ಮೀಸಲಾಗಿದ್ದು, ಪದೇ ಪದೇ ಅದರಿಂದಲೇ ಆನಂದ ದೊರಕುವುದು ಇಲ್ಲವಾದ ಮೇಲೆ ದೊಡ್ಡವರು ಪರಿಚಯಿಸದೇ ಇರುವಂತಹ ಸೈಟ್‌ಗಳನ್ನು ಮಕ್ಕಳು ಹುಡುಕಿಕೊಳ್ಳುತ್ತಾರೆ. ಅಂಗೈಯಲ್ಲಿಯೇ ಅಂತರ್ಜಾಲದ ಎಲ್ಲಾ ಜಗತ್ತುಗಳು ಅನಾವರಣಗೊಳ್ಳುವಾಗ ಸಹಜವಾಗಿ ಹಿರಿಯರ ಸಾಮಿಪ್ಯ ಅಥವಾ ಜೈವಿಕ ಸಂಬಂಧಗಳಿಗಿಂತಲೂ ಅವು ಆಪ್ತವಾಗುವ ಸೂಚನೆಗಳೇನಾದರೂ ಕಂಡರೆ ಅಲ್ಲಿಗೆ ಮಗುವು ಸೈಬರ್ ಸೈತಾನ್‌ನ ವಶವಾಗಿದೆಯೆಂದೇ ಅರ್ಥ. ಅಲ್ಲಿಗೆ ಅನೇಕಾನೇಕ ತೊಂದರೆಗಳ ಸರಮಾಲೆಯೇ ಪ್ರಾರಂಭವಾಗುತ್ತದೆ. ಅವುಗಳೇನೆಂದೂ, ಅವುಗಳಿಗೆ ಪರಿಹಾರವೇನೆಂದೂ ಮುಂದೆ ನೋಡೋಣ.
► ಸೈಬರ್‌ನ ಸಮಸ್ಯೆ ಏನು?
ಸೈಬರ್‌ನ ಸಮಸ್ಯೆ ಎಂದರೆ ಅದರಿಂದಾಗುವ ಉಪಯೋಗಗಳೆಷ್ಟೋ ಅದರಿಂದಾಗುವ ಅನಾಹುತಗಳು ಹತ್ತರಷ್ಟು. ಒಟ್ಟಾರೆ ಮನಸ್ಸಿಗೆ ತರಬೇತಿ ಕೊಡದೆಯೇ, ತನ್ನದೇ ಮನಸ್ಸನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳದೇ, ನೈತಿಕತೆ ಮತ್ತು ಕಾರ್ಯಬದ್ಧತೆಗಳನ್ನು ತಿಳಿಯದೇ ಸೈಬರ್ ತಂತ್ರಜ್ಞಾನದಲ್ಲಿ ಪಾರಂಗತನಾದರೆ ತೊಂದರೆ ಎಂದಷ್ಟೇ ಇಲ್ಲಿ ಹೇಳುವುದು. ಹಾಗಾಗಿ ಮಕ್ಕಳ ವಿಷಯದಲ್ಲಿ ಅವರಿಗೆ ಮಾನಸಿಕವಾಗಿ, ನೈತಿಕವಾಗಿ ಮತ್ತು ಭಾವನಾತ್ಮಕವಾಗಿ ಬಲಗೊಳಿಸದೇ, ಕಾರ್ಯಬದ್ಧತೆಯನ್ನು ರೂಢಿಸದೇ ಮೊಬೈಲ್ ಮತ್ತು ಸೈಬರ್ ಪರಿಚಯವಾದಲ್ಲಿ ಅವರು ಬರಿಯ ಆನಂದದ ಅನ್ವೇಷಣೆಯಲ್ಲಿಯೇ ಮುಳುಗಿಬಿಡುತ್ತಾರೆ. ಅದು ಬರುಬರುತ್ತಾ ಗುಪ್ತವಾದ ಮತ್ತು ಸುಪ್ತವಾದ ಆನಂದಗಳ ಹೊಸ ಕವಲುಗಳು ಟಿಸಿಲೊಡೆಯುವುದಕ್ಕೂ ದಾರಿಯಾಗುತ್ತದೆ.
► ಸೈಬರ್ ಕ್ರೆಂ
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಪ್ರಕಾರ 2017ರಲ್ಲಿ ಸೈಬರ್ ಅಸುರಕ್ಷತೆಯ ದೂರುಗಳು ದಾಖಲಾಗಿರುವುದು 53,000. ಇದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ನಾವು ಯಾವುದೇ ವಿವರ ಅಥವಾ ವಿಷಯವನ್ನು ಅಂತರ್ಜಾಲದ ಮೂಲಕ ಹಂಚಿಕೊಂಡರೆ ಅದನ್ನು ಅಂತರ್ಜಾಲದಲ್ಲಿ ಸಂಪೂರ್ಣ ಇಲ್ಲವಾಗಿಸುವುದು ಬಹಳ ಕಷ್ಟದ ವಿಷಯ. ಹಾಗಾಗಿಯೇ ವ್ಯಕ್ತಿಗಳ, ವ್ಯವಹಾರ ಸಂಸ್ಥೆಗಳ ವಿಷಯಗಳಲ್ಲಿ ಅನೇಕ ಅಪರಾಧಗಳು ನಡೆಯುವುದು. ಕಂಪ್ಯೂಟರ್, ಮೊಬೈಲ್‌ಗಳನ್ನು ಬಳಸಿಕೊಂಡು ಅನೇಕಾನೇಕ ಅಪರಾಧಗಳು ನಡೆಯುತ್ತವೆ. ಸೈಬರ್ ದಾಳಿಯೂ ಕೂಡಾ ಇವುಗಳಲ್ಲಿ ಒಂದು. ಆದರೆ ಇವಕ್ಕೂ ಮಕ್ಕಳಿಗೂ ಏನು ಸಂಬಂಧ ಎನ್ನಬೇಡಿ. ಮಕ್ಕಳೂ ಕೂಡಾ ಇವುಗಳಲ್ಲಿ ಭಾಗಿಯಾಗುತ್ತಿದ್ದಾರೆ ಮತ್ತು ಬಲಿಪಶುಗಳೂ ಆಗುತ್ತಿದ್ದಾರೆ. ಹೇಗೆ ಏನು ಎಂಬುದನ್ನೆಲ್ಲಾ ಮುಂದೆ ವಿವರವಾಗಿ ನೋಡೋಣ. ಈಗ ಸದ್ಯಕ್ಕೆ ಅಂತರ್ಜಾಲವನ್ನು ಬಳಸಿಕೊಂಡು ವ್ಯಕ್ತಿಯ ವೈಯಕ್ತಿಕ ವಿವರಗಳನ್ನು, ಬ್ಯಾಂಕಿನ ಮತ್ತು ಖಾಸಗಿ ಮಾಹಿತಿಗಳನ್ನು ತಿಳಿದುಕೊಳ್ಳುವುದು, ವ್ಯವಹಾರ ಸಂಸ್ಥೆಗಳ ಅಮೂಲ್ಯ ಮಾಹಿತಿಗಳನ್ನು ಕಳವು ಮಾಡುವುದು ಇವೆಲ್ಲಾ ನಡೆಯುತ್ತಿರುವಾಗ ಇವುಗಳಲ್ಲಿ ನುರಿತರಾಗುವುದು ಸಾಮಾನ್ಯವಾಗಿ ಹದಿಹರೆಯದವರು. ಅವರು ತಂತ್ರಜ್ಞಾನದಲ್ಲಿ ಚುರುಕು ಬುದ್ಧಿಯ ನಿಷ್ಣಾತ ಮತ್ತು ಕುತೂಹಲ ಭರಿತ ಮನಸ್ಥಿತಿಯವರಾಗಿರುತ್ತಾರೆ. ಅವರು ಕಂಪ್ಯೂಟರ್ ಮತ್ತು ಮೊಬೈಲ್‌ಗಳಲ್ಲಿ ಸತತವಾಗಿ ತಮಗೆ ದೊರಕುವ ಅವಕಾಶಗಳನ್ನು ಬಳಸಿಕೊಂಡು ತಮ್ಮ ಬಿಡುವಿನ ಸಮಯವನ್ನು ಯಥೇಚ್ಛವಾಗಿ ಬಳಸುತ್ತಾರೆ. ಮುಖ್ಯವಾಗಿ ಮಕ್ಕಳಿಗೆ ಅಥವಾ ಹದಿಹರೆಯದ ಮಕ್ಕಳಿಗೆ ಓದುವುದು ಅಥವಾ ಆ ಬಗೆಯ ಕಲಿಕೆಯ ಜವಾಬ್ದಾರಿ ಬಿಟ್ಟರೆ ಇನ್ನಾವ ನಿರ್ದಿಷ್ಟ ಜವಾಬ್ದಾರಿ ಇಲ್ಲದಿರುವ ಕಾರಣದಿಂದಲೂ, ಅವರು ತಮ್ಮ ಸಹಜವಾದ ಅನ್ವೇಷಣಾ ಮನೋಭಾವದಿಂದಲೂ, ವಯೋ ಸಹಜವಾಗಿರುವ ಚುರುಕುತನದಿಂದಲೂ ಅಂತರ್ಜಾಲದ ಸಾಧ್ಯತೆಗಳನ್ನು ಕಂಡುಕೊಳ್ಳುತ್ತಾರೆ. ಇದರಿಂದ ಅವರು ಸೈಬರ್ ಲೋಕದಲ್ಲಿ ಅಪರಾಗಳೂ ಆಗಬಹುದು ಅಥವಾ ಬಲಿಪಶುಗಳು ಅಥವಾ ಸಂತ್ರಸ್ತರೂ ಆಗಬಹುದು.
ಹಾಗಂತ ಅಂತರ್ಜಾಲವನ್ನು ನಿಷೇಸಲಾಗದು. ಮಕ್ಕಳನ್ನು ಅದರಿಂದ ದೂರವಿರಿಸಲೂ ಆಗದು. ಮಕ್ಕಳಿಗೆ ಅದರ ಪರಿಚಯವೇ ಆಗದಿರುವಂತೆ ನೋಡಿಕೊಳ್ಳುವುದು ಎಂದೆಂದಿಗೂ ಸಾಧ್ಯವೇ ಇಲ್ಲದ ಮಾತು. ಆದರೆ ಕೆಲವು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಮಕ್ಕಳಿಗೂ ಕ್ಷೇಮ ಮತ್ತು ದೊಡ್ಡವರಿಗೂ ನಿರಾಳ.
► ಸೈಬರ್ ರ್ಯಾಗಿಂಗ್
ಈಗೀಗ ಬಹಳಷ್ಟು ಹೈಸ್ಕೂಲ್ ಮಕ್ಕಳು ಸೈಬರ್ ರ್ಯಾಗಿಂಗ್‌ನಲ್ಲಿ ತೊಡಗಿರುವುದು ಬಹಳ ಆತಂಕಕಾರಿ ವಿಷಯ. ತಮಗೆ ಆಗದ ಮಕ್ಕಳ ವಿರುದ್ಧವಾಗಿ ಕೆಟ್ಟ ಮತ್ತು ಅವಹೇಳನದ ವಿಷಯಗಳನ್ನು ಹರಡುವುದು, ಅನುಚಿತ ಚಿತ್ರಗಳನ್ನು, ವೀಡಿಯೊಗಳನ್ನು ಕಳುಹಿಸುವುದು; ಇತ್ಯಾದಿಗಳನ್ನು ಮಾಡುತ್ತಾ ಉಪಟಳ ಕೊಡುವುದು ಒಂದಾದರೆ, ಹೈಸ್ಕೂಲ್ ಮಕ್ಕಳೇ ತಮ್ಮ ತಮ್ಮಲ್ಲಿ ಅಸಭ್ಯ ಮತ್ತು ಅನುಚಿತ ವರ್ತನೆಗಳ ವೀಡಿಯೊ ಚಿತ್ರೀಕರಣಗಳನ್ನು ಮಾಡಿ ತಮ್ಮ ತಮ್ಮಲ್ಲಿ ಹಂಚಿಕೊಳ್ಳುವುದು ಮತ್ತು ಇತರರಿಗೂ ಕಳುಹಿಸುವುದು ಬಹಳ ವ್ಯಾಪಕವಾಗುತ್ತಿದೆ. ಎಷ್ಟೋ ಬಾರಿ ಕಂಬೈನ್ಡ್ ಸ್ಟಡಿಯ ಹೆಸರಿನಲ್ಲಿ ಒಟ್ಟಾಗುವ ಮಕ್ಕಳು ಅಪ್ಪ ಮತ್ತು ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುವಂತಹ ಮನೆಯಲ್ಲಿ ಸೇರಿ ನಾನಾ ಬಗೆಯ ವೀಡಿಯೊಗಳನ್ನು ಮಾಡಿ ಹಂಚಿಕೊಳ್ಳುವುದು ವರದಿಯಾಗಿವೆ. ಈ ವರದಿಗಳು ಬಹಳ ಆತಂಕಕಾರಿ ವಿಷಯಗಳಾಗಿವೆ. ಮುಖ್ಯವಾಗಿ ಪ್ರೌಢಾವಸ್ಥೆಗೆ ತೆರೆದುಕೊಳ್ಳುತ್ತಿರುವ ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ ಉಂಟಾಗುವ ಇಂತಹ ಮನಸ್ಥಿತಿಗಳು ಬಹಳಷ್ಟು ಅನಾಹುತಗಳನ್ನು ಉಂಟುಮಾಡುತ್ತವೆ. ಮುಂದೆ ಸಮಾಜಕ್ಕೆ ಮತ್ತು ದೇಶಕ್ಕೆ ಒದಗಬಹುದಾದ ಎಷ್ಟೋ ಉತ್ತಮ ಸೇವೆಗಳು ನಾಶವಾಗುತ್ತವೆ. ಶಾಲೆಯಲ್ಲಿ ನಡೆಯುವ ಯಾವುದಾದರೂ ಸಮಾರಂಭಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಅವರವರ ಕೆಲಸಗಳಲ್ಲಿ ಬಹಳ ಒತ್ತಡದಲ್ಲಿರುವಾಗ ಎಷ್ಟೆಷ್ಟೋ ಯಡವಟ್ಟುಗಳನ್ನು ಮಕ್ಕಳು ಮಾಡಿರುತ್ತವೆ. ಅದು ಮನೆಯವರ ಕಿವಿಗೆ ತಲುಪುವುದು ಅಥವಾ ಶಾಲೆಯವರ ಗಮನಕ್ಕೆ ಬೀಳುವುದು ಬಹಳ ಅಪರೂಪ. ಶಾಲೆಯಲ್ಲಿ ಕ್ಯಾಂಪುಗಳಿಗೆಂದು ಕರೆದುಕೊಂಡು ಹೋದಾಗ, ಶೈಕ್ಷಣಿಕ ಪ್ರವಾಸಗಳಿಗೆಂದು ಹೋದಾಗಲೂ ಇಂತಹ ಗುಪ್ತ ಚಟುವಟಿಕೆಗಳು ನಡೆಯದೇ ಇರುವುದಿಲ್ಲ. ಅವುಗಳಲ್ಲಿ ಅನೇಕ ತರಗಳಿದ್ದು, ಒಂದೊಂದೂ ಕೇಡುಗಳ ಸೂಚನೆಗಳೇ ಆಗಿರುತ್ತವೆ. ಇವುಗಳ ಬಗ್ಗೆ ಗಮನ ವಹಿಸಬೇಕೆಂದರೆ ಎಂತೆಂತಹ ಕೆಲಸಗಳಾಗುತ್ತವೆ ಎಂಬುದರ ಬಗ್ಗೆ ಮೊದಲು ಅರಿವಿರಬೇಕು. ಅವುಗಳನ್ನು ವಿವರವಾಗಿ ಮುಂದೆ ನೋಡೋಣ.