ಮಣ್ಣಿನ ಒಲೆಯ ಕಲೆ ಮತ್ತು ತಂತ್ರಜ್ಞಾನ

Update: 2019-01-20 05:32 GMT

ಹಳ್ಳಿಗಳಲ್ಲಿ ಸೂರ್ಯೋದಯದೊಂದಿಗೆ ಹೆಣ್ಣು ಮಕ್ಕಳ ಕೆಲಸ ಮಣ್ಣಿನ ಒಲೆ ಹೊತ್ತಿಸುವುದರ ಮೂಲಕ ಪ್ರಾರಂಭವಾಗುತ್ತಿತ್ತು. ಮಣ್ಣಿನ ಒಲೆಗಳು ಎಂದರೆ ನಮ್ಮ ಮುಂದಿನ ಮಕ್ಕಳಿಗೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿ ನೋಡುವ ಪರಿಸ್ಥಿತಿ ಬಂದೊದಗಿದಂತಾಗಿದೆ. ಈ ಮಣ್ಣಿನ ಒಲೆಗಳ ತಯಾರಿಕೆಯೇ ಒಂದು ಅದ್ಭುತ. ಕುಂಬಾರಿಕೆಯ ಕಲೆ ಇಂದಿನ ಆಧುನಿಕ ಜೀವನ ಶೈಲಿಯಿಂದ ಎತ್ತ ಸಾಗಿದೆ?

ಒಲೆಗಳ ತಯಾರಿಕೆಗೆಂದೇ ಊರಿನ ಹೊಳೆಯ ದಂಡೆಯಲ್ಲಿ ತಿರುಗಾಡಿ ಮಣ್ಣು ಹೊತ್ತು ತಂದು, ಅದಕ್ಕೆ ಸರಿ ಪ್ರಮಾಣದ ಕುದುರೆ ಮತ್ತು ಕತ್ತೆಯ ಲದ್ಧಿ ಬೆರೆಸಿ ಹದಮಾಡಿಕೊಂಡು ಎರಡು ಮೂರು ಗಂಟೆಗಳ ಕಾಲ ನನೆಯಲಿಟ್ಟು ನಂತರ ಅದನ್ನು ಒಲೆಯ ಆಕಾರಕ್ಕೆ ಬೇಡಿಕೆಯ ಗಾತ್ರಕ್ಕೆ ತಯಾರಿಸಿ, ಒಂದು ದಿನ ಆರಲು ಬಿಟ್ಟು ನಂತರ ಅದನ್ನು ಜಾಗ್ರತೆಯಿಂದ ಊರಿನ ಹೊರಗೆ ಒಲೆಯನ್ನು ಭಟ್ಟಿ ಮಾಡಲೆಂದು ತಯಾರಿಸಿದ ಭಟ್ಟಿ (ಒಲೆ ಸುಡಲು ತಯಾರಿಸಿದ ಬೆಂಕಿ)ಯಲ್ಲಿ ಇಟ್ಟು, ಆ ಇಡೀ ದಿನ ಆ ಬೆಂಕಿ ಆರದಂತೆ ಕೆನ್ನಾಲಿಗೆಗೆ ಕಣ್ಣೆಲ್ಲಾ ಕೆಂಪಾಗಿಸಿಕೊಂಡು, ಮೈಯಲ್ಲಾ ಬೆವರಿ ಕಪ್ಪಾಗಿಸಿಕೊಂಡು ಕಡೆಗೆ ಒಲೆ ಭಟ್ಟಿಯಾದ ನಂತರ ಅದನ್ನು ಜಾಗ್ರತೆಯಿಂದ ಕೈಗಳಿಗೆ ಗೋಣಿಚೀಲ ಧರಿಸಿ ಹೊರತೆಗೆದು ಮಾರಾಟಕ್ಕೆ ಸಿದ್ಧಗೊಳಿಸುವರು.

ಈ ಐದಾರು ವರ್ಷಗಳ ಹಿಂದೆ ಡಬಲ್ ಒಲೆಗಳು 60 ರೂ.ಗೆ ಮತ್ತು ಸಿಂಗಲ್ ಒಲೆಗಳು ಕೇವಲ 30 ರಿಂದ 35 ರೂ.ಗೆ ಸಿಗುತ್ತಿದ್ದವು. ಬರಬರುತ್ತಾ ಹಣದುಬ್ಬರದ ಬಿಸಿ ಮಣ್ಣಿನ ಒಲೆಗಳಿಗೂ ತಲುಪಿ ಇಂದು ಅವುಗಳ ಬೆಲೆ ಹೆಚ್ಚಾಗಿ 100 ರಿಂದ 120 ರೂ. ವರೆಗೆ ತಲುಪಿತು. ಊರಿನ ಸಂತೆ ಹೊತ್ತು ತಿರುಗಾಡಿ ಮಾರಿದರೂ ಕೊಳ್ಳುವವರಿಲ್ಲ. ಅರಣ್ಯನಾಶ ತಡೆಗಟ್ಟಬೇಕೆಂದು ಕಡಿಮೆ ಉರುವಲಿನಿಂದ ಅಧಿಕ ಉರಿಯನ್ನು ಪಡೆಯುವ ಒಲೆಗಳಿವೆಯಾದರೂ ಅವುಗಳ ಬೆಲೆ ಹೆಚ್ಚು.

ಆಧುನಿಕತೆಯ ಜೀವನ ಶೈಲಿಯಲ್ಲಿ ಗೃಹ ಬಳಕೆಯ ವಸ್ತುಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲರ ಮನೆಗಳಲ್ಲಿ ಆಧುನಿಕ ಚಿತ್ತಾಕರ್ಷಕ ಒಲೆಗಳ ಬಳಕೆ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಮನೆಗಳು ಸಹ ಆರ್.ಸಿ.ಸಿ, ಪಿ.ಯು.ಪಿ ಗ್ಲಾಸ್‌ಗಳಿಂದ ಆಲಂಕಾರಿಕವಾಗಿ ಪರಿರ್ವತನೆ ಹೊಂದಿವೆ. ಅದಕ್ಕೆ ಅವರೆಂದೂ ಮಣ್ಣಿನ ಒಲೆ ಕೂರಿಸಲಾರರು. ಕಾರಣ ಮನೆಯೆಲ್ಲಾ ಹೊಗೆತುಂಬಿ ಗೋಡೆಗಳೆಲ್ಲಾ ಕಪ್ಪಾಗುವುವು. ಕಟ್ಟಿಗೆಯ ಬೆಲೆಯು ದುಬಾರಿ. ಅದು ನಮ್ಮ ಜೀವನ ಶೈಲಿಗೆ ಒಗ್ಗಲಾರದು ಎನ್ನುವುದೇ ಅವರ ಉತ್ತರ.

ಕುಂಬಾರರು ಕಷ್ಟಪಟ್ಟು ತಯಾರಿಸಿದ ಒಲೆಗಳನ್ನು ಹೊತ್ತು ಊರೂರು ತಿರುಗಾಡಿದರೂ ಕೊಳ್ಳುವವರಿಲ್ಲದ ಕಾರಣ ಮನೆಯಲ್ಲೇ ಇಟ್ಟು ಮಾರಾಟ ಮಾಡುತ್ತಿದ್ದಾರೆ. ಅದು ತಿಂಗಳಿಗೆ ಕೇವಲ ಒಂದು ಎರಡು ಮಾತ್ರ.

ಮಣ್ಣಿನ ಒಲೆ ತಯಾರಿಸುವ ಎಷ್ಟೋ ಕುಂಬಾರ ಕುಟುಂಬ ಮೂಲ ಉದ್ಯೋಗ ಬಿಟ್ಟು ಬೇರೆ ಉದ್ಯೋಗವನ್ನು ಅರಸಿ ಹೋಗುತ್ತಿದ್ದಾರೆ. ಕೆಲವರು ಮಾತ್ರ ಅದೇ ವೃತ್ತಿಯಲ್ಲಿ ದಿನದೂಡುತ್ತಿದ್ದಾರೆ. ಇತ್ತ ಲಾಭವೂ ಇಲ್ಲ ಹೊಟ್ಟೆಗೂ ಸಲ್ಲ ಎಂಬಂತಿದೆ ಅವರ ಬದುಕು.

ಮಣ್ಣಿನ ಒಲೆ ತಯಾರಿಕೆಯು ಒಂದು ಕಲೆ, ತಂತ್ರಜ್ಞಾನ. ಆದರೆ ಇಂದಿನ ಕುಮ್ಮಾರರ ತಂತ್ರಜ್ಞಾನ ಹಿಮ್ಮೆಟ್ಟಿಸಿರುವ ಕಂಪೆನಿಗಳು ವಿವಿಧ ರೀತಿಯ ಆವಿಷ್ಕಾರ, ಆಕರ್ಷಕ ಒಲೆ ತಯಾರಿಕೆ. ವಿವಿಧ ಆಪರ್‌ಗಳಿಗೆ ಮಾರಾಟ ಮಾಡುತ್ತಿವೆ. ಅಧಿಕ ಲಾಭಗಳಿಸುತ್ತಿದೆ. ಒಲೆ ತಯಾರಿಕೆಗೆ ಬೇಕಾಗುವ ಉತ್ತಮ ಮಣ್ಣು ಸಹ ನೈಸರ್ಗಿಕವಾಗಿ ದೊರೆಯುತ್ತಿಲ್ಲ. ಮಣ್ಣಿಗೂ ಬೆಲೆ ತೆರಬೇಕಾಗಿದೆ. ಇದನ್ನೇ ನಿಭಾಯಿಸಲಾಗದ ಕುಂಬಾರರ ಬದುಕು ಅಧೋಗತಿಯತ್ತ ಸಾಗುತ್ತಿದೆ.

Writer - ಸಂಜಯ, ಬನಹಟ್ಟಿ, ಜಮಖಂಡಿ

contributor

Editor - ಸಂಜಯ, ಬನಹಟ್ಟಿ, ಜಮಖಂಡಿ

contributor

Similar News