ನನ್ನ ಬದುಕು ಭಗ್ನವಾಗಿದೆ; ನಿಮ್ಮ ಬೆಂಬಲದ ಅಗತ್ಯವಿದೆ: ಆನಂದ್ ತೇಲ್ತುಂಬ್ಡೆ
ಭಾಗ-3
ನನ್ನ ವಾದವು ಪ್ರಬಲವಾದುದೆಂದು ಯೋಚಿಸಿದ ನಾನು, ಸುಪ್ರೀಂ ಕೋರ್ಟ್‌ನ ಮೆಟ್ಟ್ಟಿಲೇರಿದೆ. ಆದರೆ ಈ ಹಂತದಲ್ಲಿ ಪೊಲೀಸರ ತನಿಖೆಯಲ್ಲಿ ತಾನು ಮಧ್ಯಪ್ರವೇಶಿಸಕೂಡದೆಂಬ ಅಭಿಪ್ರಾಯವನ್ನು ಹೊಂದಿದೆ ಮತ್ತು ಬಂಧನಪೂರ್ವ ಜಾಮೀನು ಕೋರಿ ಅರ್ಹ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದೆಂದು ಅದು ನನಗೆ ತಿಳಿಸಿದೆ.
ನನ್ನ ವಿರುದ್ಧ ವಿಚಿತ್ರ ಆರೋಪಗಳು
ಆಗಸ್ಟ್ 28ರಂದು ಬಂಧಿತರಾಗಿದ್ದ ಐವರು ಸೇರಿದಂತೆ ಆರು ಮಂದಿ ಕಾರ್ಯಕರ್ತರ ಜೊತೆಗೆ ಪೊಲೀಸರು ನನ್ನ ನಿವಾಸದ ಮೇಲೂ ದಾಳಿ ನಡೆಸಿದ್ದರು. ಅವರು ಭದ್ರತಾ ಸಿಬ್ಬಂದಿಯಿಂದ ನಕಲಿ ಕೀ ಪಡೆದ ಅವರು, ಯಾವುದೇ ವಾರಂಟ್ ಇಲ್ಲದೆ ನಮ್ಮ ಅನುಪಸ್ಥಿತಿಯಲ್ಲಿ ಮನೆಯ ಬಾಗಿಲನ್ನು ತೆರೆದಿದ್ದರು.
ಪಂಚನಾಮೆಯಲ್ಲಿ ಬರೆದಿರುವಂತೆ, ಅವರು ಮನೆಯ ಒಳಾಂಗಣದ ವೀಡಿಯೊ ಚಿತ್ರೀಕರಣ ಮಾಡಿದರು ಹಾಗೂ ಮನೆಗೆ ಮತ್ತೆ ಬೀಗ ಹಾಕಿದರು.
ಆಗ ನಾವು ಮುಂಬೈಯಲ್ಲಿದ್ದೆವು. ನಮ್ಮ ಮನೆಯನ್ನು ಪೊಲೀಸರು ತೆರೆದು, ಶೋಧಿಸಿದ ಸುದ್ದಿಯನ್ನು ಟಿವಿ ವಾಹಿನಿಗಳು ಪ್ರಸಾರ ಮಾಡುತ್ತಿದ್ದಂತೆಯೇ, ನನ್ನ ಪತ್ನಿ ಆನಂತರ ಪ್ರಯಾಣಿಸಲಿದ್ದ ವಿಮಾನವನ್ನೇರಿ, ಮನೆಗೆ ವಾಪಸ್ ಬಂದಳು. ಬಿಚೋಲಿಮ್ ಪೊಲೀಸ್‌ಠಾಣೆಗೆ ದೂರು ನೀಡಿದಳು. ಒಂದು ವೇಳೆ ಏನನ್ನಾದರೂ ಕೇಳಬೇಕಿದ್ದರೆ ನಮ್ಮನ್ನು ಸಂಪರ್ಕಿಸಲು ಆಕೆ ಪೊಲೀಸರಿಗೆ ಮನೆಯ ದೂರವಾಣಿ ಸಂಖ್ಯೆ ನೀಡಿದಳು.
ಆಗಸ್ಟ್ 31ರಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀ ಪರಮಿಂದರ್ ಸಿಂಗ್ ಅವರು ಸುದ್ದಿಗೋಷ್ಠಿಯೊಂದನ್ನು ನಡೆಸಿ ಪ್ರಕರಣದಲ್ಲಿ ನಾನು ಶಾಮೀಲಾಗಿದ್ದೇನೆಂಬ ಆರೋಪವನ್ನು ಸಮರ್ಥಿಸುವಂತಹ ಒಂದು ಪತ್ರವನ್ನು ನೀಡಿದ್ದರು. ಮಾವೋ ವಾದಿ ಎನ್ನಲಾದ ವ್ಯಕ್ತಿಯೊಬ್ಬ, ಕಾಮ್ರೇಡ್ ಆನಂದ್ ಎಂಬ ಯಾರೋ ಒಬ್ಬ ವ್ಯಕ್ತಿಗೆ 2018ರ ಪ್ಯಾರಿಸ್ ಸಮಾವೇಶವನ್ನು ಪ್ರಸ್ತಾಪಿಸಿದ್ದು, ಅದು ನಿಜವೆಂಬಂತೆ ಭಾಸವಾಗಿತ್ತು. ನಾನು ಜಗತ್ತಿನಾದ್ಯಂತದ ಹಲವು ವಿದ್ವಾಂಸರೊಂದಿಗೆ ಶೈಕ್ಷಣಿಕ ಸಮಾ ವೇಶವೊಂದರಲ್ಲಿ ಪಾಲ್ಗೊಂಡಿದ್ದೆ. ಈ ಸಮಾವೇಶವನ್ನು ಪ್ಯಾರಿಸ್‌ನ ಅಮೆರಿಕನ್ ವಿಶ್ವವಿದ್ಯಾನಿಲಯ ಆಯೋಜಿಸಿತ್ತು.
ಆ ಪತ್ರದಲ್ಲಿನ ವ್ಯಾಖ್ಯಾನವು ಎಷ್ಟು ನಗೆಪಾಟಲಿನದ್ದಾಗಿತ್ತೆಂದರೆ, ಮಾವೋವಾದಿಗಳು ಈ ವಿಶ್ವವಿದ್ಯಾನಿಲಯಕ್ಕೆ ಹಣ ನೀಡಿ, ನನ್ನನ್ನು ಆಹ್ವಾನಿಸುವಂತೆ ಕೇಳಿಕೊಂಡಂತಿತ್ತು. ‘‘ ಕಾಮ್ರೇಡ್. ಎಟಿನ್ ಬಾಲಿಬರ್ (ಪ್ರೊಫೆಸರ್ ಬಾಲಿಬರ್ ಅವರು ಅತ್ಯಂತ ಗೌರವಾನ್ವಿತರಾದ ಫ್ರೆಂಚ್ ಮಾರ್ಕ್ಸ್‌ವಾದಿ ವಿದ್ವಾಂಸ) ಅವರು ನನ್ನ ಸಂದರ್ಶನವನ್ನು ನಡೆಸಲಿದ್ದಾರೆ ಮತ್ತು ಕಾಮ್ರೇಡ್ ಅನುಪಮಾ ರಾವ್ ಹಾಗೂ ಶೈಲಜಾ ಪೈಕ್ (ಕ್ರಮವಾಗಿ ಬರ್ನಾರ್ಡ್ ಕಾಲೇಜ್ ಹಾಗೂ ಸಿನ್‌ಸಿನಾಟಿ ವಿವಿಗಳ ಪ್ರೊಫೆಸರ್‌ಗಳು) ಅವರು ತಮ್ಮ ವಿವಿಗಳಿಗೆ ಅತಿಥಿ ಉಪನ್ಯಾಸಕರಾಗಿ ನನ್ನನ್ನು ಆಹ್ವಾನಿ ಸಲಿದ್ದಾರೆಂದು ಪತ್ರವು ಸೂಚಿಸುವಂತಿತ್ತು.
ನಾನು ಎನ್‌ಡಿಟಿವಿಯಿಂದ ಈ ಪತ್ರದ ಪ್ರತಿಯನ್ನು ಪಡೆದು, ಅದನ್ನು ಬಾಲಿಬರ್ ಹಾಗೂ ಸಮಾವೇಶದ ಸಂಘಟಕಿ ಪ್ರೊ. ಲೀಸಾ ಲಿಂಕನ್ ಅವರಿಗೆ ಅವರು ಈಮೇಲ್ ಮಾಡಿದೆ. ಅವರು ಈ ಸುಳ್ಳು ಸುದ್ದಿಯಿಂದ ಆಘಾತಗೊಂಡು, ನನಗೆ ಮರುಪತ್ರ ಬರೆದರು. ಬಾಲಿಬರ್ ಕೋಪದಿಂದಲೇ ಈ ಪ್ರತಿಭಟನೆಯ ಪತ್ರವನ್ನು ಬರೆದಿದ್ದರು ಹಾಗೂ ಅದನ್ನು ಫ್ರೆಂಚ್ ರಾಯಭಾರಿ ಕಚೇರಿಗೂ ಕಳುಹಿಸಿದ್ದರು. ಪ್ಯಾರಿಸ್‌ನ ಅಮೆರಿಕನ್ ವಿವಿ ನನ್ನನ್ನು ಆಹ್ವಾನಿಸಿದ್ದನ್ನು ಹಾಗೂ ನನ್ನ ಹಾಜರಾತಿಯ ಸಮಗ್ರ ವೆಚ್ಚವನ್ನು ಭರಿಸಿದ್ದನ್ನು ಅವರು ಪತ್ರದಲ್ಲಿ ವಿವರಿಸಿದ್ದರು. ಈ ದೃಢವಾದ ಪುರಾವೆಯ ಆಧಾರದಲ್ಲಿ ನನಗಾದ ಮಾನನಷ್ಟಕ್ಕಾಗಿ ಪರಮಿಂದರ್‌ಸಿಂಗ್ ವಿರುದ್ಧ ಮೊಕದ್ದಮೆ ಹೂಡಲು ನಿಯಾವಳಿಗಳ ಪ್ರಕಾರ ಮಹಾರಾಷ್ಟ್ರ ಸರಕಾರದ ಅನುಮತಿಯನ್ನು ಕೋರಿ ಸೆಪ್ಟಂಬರ್ 5ರಂದು ಅದಕ್ಕೆ ಪತ್ರ ಬರೆದಿದ್ದೆ. ಆದರೆ ಈವರೆಗೂ ಅದಕ್ಕೆ ಉತ್ತರ ಬಂದಿಲ್ಲ.
ಈ ಮಧ್ಯೆ, ನನ್ನ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲವಾದ್ದರಿಂದ ಹಾಗೂ ಸರಕಾರಕ್ಕೆ ನಾನು ಬರೆದ ಪತ್ರವು ಅವರಲ್ಲಿ ತಪ್ಪಿತಸ್ಥ ಮನೋಭಾವವನ್ನು ಹುಟ್ಟುಹಾಕಿರಬಹುದೆಂದು ಯೋಚಿಸಿ, ನನ್ನ ವಿರುದ್ಧ ಎಫ್‌ಐಆರ್ ರದ್ದುಪಡಿಸಲು ಅನುಮತಿ ಕೋರಿ ಹೈಕೋರ್ಟ್‌ಗೆ ಪತ್ರ ಬರೆದಿದ್ದೆ. ಪೊಲೀಸರು ಅಫಿದಾವಿತ್ ಸಲ್ಲಿಸಿ ಮೇಲೆ ವಿವರಿಸಲಾಗಿರುವುದು ಸೇರಿದಂತೆ ಐದು ಪತ್ರಗಳನ್ನು ಅವಲೋಕಿಸಿ ಐದು ಆರೋಪಗಳನ್ನು ಹೊರಿಸಿದ್ದರು. ನನ್ನ ಉತ್ತರದಲ್ಲಿ ನಾನು ಅವರ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದೆ ಹಾಗೂ ಒಂದು ವೇಳೆ ಆ ಪತ್ರಗಳು ಸಾಚಾ ಆಗಿ ದ್ದರೂ ಕೂಡಾ ಅವು ವಿಚಾರಣೆಗೆ ಯೋಗ್ಯವಾದ ಪ್ರಕರಣ ಗಳಾಗಲಾರವೆಂದು ವಾದಿಸಿದ್ದೆ. ಇತರ ನಾಲ್ಕು ಪತ್ರಗಳು ಯಾವುದೆಂದರೆ:
ಮೊದಲ ಪತ್ರವನ್ನು ಯಾರೋ ಒಬ್ಬರು, ಮತ್ತ್ಯಾರೊ ಒಬ್ಬರಿಗೆ ಬರೆದಿದ್ದು, ಅದರಲ್ಲಿ ಆನಂದ್ ಎಂಬ ಹೆಸರಿನ ವ್ಯಕ್ತಿಯು ಅಂಬೇಡ್ಕರ್ ಪೆರಿಯಾರ್ ಅಧ್ಯಯನ ವೃತ್ತ (ಎಪಿಎಸ್‌ಸಿ)ವನ್ನು ಸಂಘಟಿಸಿದ ಹೊಣೆಯನ್ನು ವಹಿಸಿಕೊಂಡಿದ್ದರು. 2015ರಲ್ಲಿ ಐಐಟಿಯ ಮದ್ರಾಸ್‌ನ ಆಡಳಿತವು ಅವುಗಳನ್ನು ಅಮಾನ್ಯಗೊಳಿಸಿದ ಬಳಿಕ ಅದು ಬೆಳಕಿಗೆ ಬಂದಿತು. ಆಗ ನಾನು ಐಐಟಿ, ಖರಗಪುರದ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಪ್ರೊಫೆಸರ್ ಆಗಿದ್ದೆ. ಒಂದು ವೇಳೆ ನನಗೆ ವಿದ್ಯಾರ್ಥಿಗಳನ್ನು ಸಂಘಟಿಸುವ ಆಸಕ್ತಿ ಇರುತ್ತಿದ್ದಲ್ಲಿ, ನಾನಿರುವ ಐಐಟಿಯಲ್ಲೇ ಅದನ್ನು ನಾನು ಮಾಡಬಹುದಾಗಿತ್ತೇ ಹೊರತು ದೂರದ ಐಐಟಿಯಲ್ಲಲ್ಲ. ಈ ಪ್ರಕರಣದಲ್ಲಿ, ಎಪಿಎಸ್‌ಸಿಯು ಸುದ್ದಿಪತ್ರಿಕೆಗಳ ಮೂಲಕ ಈ ವಿಷಯವನ್ನು ತಿಳಿಸಿದಾಗ, ಅದರ ಸ್ಥಾಪಕ ಸದಸ್ಯರೊಬ್ಬರು ನನಗೆ ಬರೆದುಕಳುಹಿಸಿದ ಪತ್ರದಲ್ಲಿ, ಸಂಘಟನೆಯ ರಚನೆ ಅಥವಾ ಚಟುವಟಿಕೆಗಳಲ್ಲಿ ನನ್ನ ಯಾವುದೇ ಪಾತ್ರವಿಲ್ಲವೆಂಬುದಾಗಿ ತಿಳಿಸಿದ್ದರು. ಎರಡನೆ ಪತ್ರವನ್ನು ಕೂಡಾ ಯಾರೋ ಒಬ್ಬರು ಮತ್ಯಾರೋ ಒಬ್ಬರಿಗೆ ಬರೆದುದಾಗಿತ್ತು. ಆನಂದ್ ಎಂಬವರು ಅನುರಾಧ ಘಾಂಡಿ ಸ್ಮಾರಕ ಸಮಿತಿ (ಎಝಿಎಂಸಿ)ಯ ಸಭೆಯಲ್ಲಿ ‘‘ ಉತ್ತಮ ಸಲಹೆ’’ ನೀಡಿದ್ದಾರೆಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು. ಚೆನ್ನಾಗಿದೆ. ಒಂದು ವೇಳೆ ಆ ಆನಂದ್, ನಾನೆಂದು ಗುರುತಿಸುವುದಾದರೆ, ನಾನು ಇತರ ಹಲವಾರು ಮಂದಿಯ ಜೊತೆ ಈ ಟ್ರಸ್ಟ್‌ನ ಸದಸ್ಯನಾಗಿರುವೆ. ಈ ಟ್ರಸ್ಟ್ ತನ್ನದೇ ಆದ ಪಾನ್ ಕಾರ್ಡ್, ಬ್ಯಾಂಕ್ ಖಾತೆಯನ್ನು ಹಾಗೂ ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಹೊಂದಿದೆ. ಸಮೀರ್ ಅಮಿನ್ ಹಾಗೂ ಆ್ಯಂಜೆಲಾ ಡೇವಿಸ್ ಅವರಂತಹ ಖ್ಯಾತ ವಿದ್ವಾಂಸರಿಂದ ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮಗಳನ್ನು ಅದು ಏರ್ಪಡಿಸಿದ್ದು, ಅವುಗಳನ್ನು ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು. ಟ್ರಸ್ಟ್ ಅಥವಾ ಸಮಿತಿಯಲ್ಲಿ ನನ್ನ ಪಾತ್ರದ ಬಗ್ಗೆ ಹೇಳುವುದಾದರೆ ಕಳೆದ ಹತ್ತು ವರ್ಷಗಳಲ್ಲಿ ನನಗೆ ಅವರ ಸಭೆಗಳಲ್ಲಿ ಅಥವಾ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ ನಾನು ಭೌತಿಕವಾಗಿ ದೂರವಿದ್ದೆ. (2010ರಿಂದ 2016ರವರೆಗೆ ಖರಗಪುರ ಐಐಟಿಯಲ್ಲಿ ಹಾಗೂ ಆನಂತರ ಗೋವಾದಲ್ಲಿ).
ಮೂರನೆ ಪತ್ರವನ್ನು ಕೂಡಾ ಯಾರೋ ಒಬ್ಬರು ಮತ್ತ್ಯಾರೊ ಒಬ್ಬರಿಗೆ ಬರೆದುದಾಗಿದೆ. ಇದರಲ್ಲಿ ಯಾರೋ ಆನಂದ್ ಎಂಬಾತ, ಗಡ್‌ಚಿರೋಳಿ ಎನ್‌ಕೌಂಟರ್ ಘಟನೆಯ ಸತ್ಯಶೋಧನೆಯನ್ನು ಸಂಘಟಿಸಿದ್ದರ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದ. ಪತ್ರದಲ್ಲಿ ಪ್ರಸ್ತಾಪಿಸಲಾದ ಆನಂದ್ ನಾನೇ ಎಂದು ಭಾವಿಸೋಣ. ನಾನು ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ (ಸಿಪಿಡಿಆರ್) ಆಗಿದ್ದೇನೆ. ಶಂಕಿತ ಮಾನವಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಕುರಿತು ಸತ್ಯಶೋಧನೆ ನಡೆಸುವುದೇ ಇದರ ಧ್ಯೇಯವಾಗಿದೆ. ಆದಾಗ್ಯೂ, ನಾನು ಈ ಸಮಿತಿಯನ್ನು ಸಂಘಟಿಸಿಲ್ಲ, ಇಲ್ಲವೇ ಅದರಲ್ಲಿ ಭಾಗವಹಿಸಲೂ ಇಲ್ಲ. ವಾಸ್ತವಿಕವಾಗಿ, ಆರಂಭದಲ್ಲಿ ನಾನು ಹಿಂದಿನ ಪ್ರಧಾನ ಕಾರ್ಯದರ್ಶಿ ಪಿ.ಎ.ಸೆಬಾಸ್ಟಿಯನ್ ಅವರ ಬಯಕೆಯಂತೆ ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದೆ. ನಾನು ಈ ಎಲ್ಲಾ ಅವಧಿಯಲ್ಲಿ ಮಹಾರಾಷ್ಟ್ರದಿಂದ ದೂರವಿದ್ದ ಹೊರತಾಗಿಯೂ ಅದರ ಸದಸ್ಯರ ಒತ್ತಾಸೆಯಂತೆ ನಾನು ಆದರಲ್ಲಿ ಮುಂದುವರಿದಿದ್ದೆ.
ನಾಲ್ಕನೆಯ ಪತ್ರವು ಯಾರೋ ಒಬ್ಬರ ಕಂಪ್ಯೂಟರ್‌ನಿಂದ ತೆಗೆದುದಾಗಿದ್ದು, ಆದರಲ್ಲಿ ‘‘ಆನಂದ್ ಟಿ... 90ಟಿ ಸುರೇಂದ್ರ’’ (ಮಿಲಿಂದ್ ಮೂಲಕ) ಎಂಬುದಾಗಿ ಗೀಚಲಾಗಿತ್ತು.ಇದೊಂದು ಅತ್ಯಂತ ಅಸಂಬದ್ಧ ಹಾಗೂ ಕಳಪೆಯಾದ ಕಲ್ಪನೆಯ ಫಲವಾಗಿದೆ. ನಾನು ಪ್ರತಿತಿಂಗಳು ಅಷ್ಟು ಮೊತ್ತದ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಲವು ವರ್ಷಗಳಿಂದ ಪಾವತಿಸುತ್ತಾ ಇದ್ದೇನೆ. ಯಾವುದೇ ಪ್ರಕರಣದಲ್ಲಿ ಇಂತಹ ಗೀಚುಬರಹವನ್ನು ಯಾವುದೇ ಕಾನೂನು, ಪುರಾವೆಯಾಗಿ ಪರಿಗಣಿಸುವುದಿಲ್ಲ.
ಪೊಲೀಸ್ ಅಫಿದಾವಿತ್‌ಗೆ ಎದುರಾಗಿ ನನ್ನ ಪ್ರತಿವಾದವು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ. ಕಡೆಗೆ ಪೊಲೀಸರು ನ್ಯಾಯಾಧೀಶರಿಗೆ ಮೊಹರು ಮಾಡಿದ ಲಕೋಟೆಯೊಂದನ್ನು ನೀಡಿದರು. ಮೇಲೆ ತಿಳಿಸಿದ ನನ್ನ ನಿರಾಕರಣೆಗಳನ್ನು ಪ್ರಸ್ತಾಪಿಸದೆ ಅಥವಾ ನನ್ನ ಸಂಕ್ಷಿಪ್ತ ವ್ಯಕ್ತಿಚರಿತ್ರೆ (ಪ್ರೊಫೈಲ್)ಯೊಂದಿಗೆ ಪೊಲೀಸರ ಆರೋಪಗಳು ತೋರಿಕೆಯಲ್ಲಾದರೂ ನಂಟನ್ನು ಹೊಂದಿವೆಯೇ ಎಂಬ ಬಗ್ಗೆ ಪರಿಶೀಲನೆಯನ್ನೂ ನಡೆಸದೆಯೇ ನ್ಯಾಯಾಲಯವು ನನ್ನ ಅರ್ಜಿಯನ್ನು ತಿರಸ್ಕರಿಸಿತ್ತು.
ನನ್ನ ವಾದವು ಪ್ರಬಲವಾದುದೆಂದು ಯೋಚಿಸಿದ ನಾನು, ಸುಪ್ರೀಂಕೋರ್ಟ್‌ನ ಮೆಟ್ಟ್ಟಿಲೇರಿದೆ. ಆದರೆ ಈ ಹಂತದಲ್ಲಿ ಪೊಲೀಸರ ತನಿಖೆಯಲ್ಲಿ ತಾನು ಮಧ್ಯಪ್ರವೇಶಿಸಕೂಡದೆಂಬ ಅಭಿಪ್ರಾಯವನ್ನು ಹೊಂದಿದೆ ಮತ್ತು ಬಂಧನಪೂರ್ವ ಜಾಮೀನು ಕೋರಿ ಅರ್ಹ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದೆಂದು ಅದು ನನಗೆ ತಿಳಿಸಿದೆ.