ಡಿಜಿಟಲ್ ಪ್ರೇಕ್ಷಕರಲ್ಲಿ ಗಣನೀಯ ಏರಿಕೆ
ಹೊಸದಿಲ್ಲಿ,ಜ.21: ಇತ್ತೀಚೆಗೆ ಕೊನೆಗೊಂಡ ಟೀಂ ಇಂಡಿಯಾದ ಆಸ್ಟ್ರೇಲಿಯ ಪ್ರವಾಸದ ಡಿಜಿಟಲ್ ಪ್ರೇಕ್ಷಕರ ಸಂಖ್ಯೆ ಗಗನಕ್ಕೆ ತಲುಪಿದೆ. ಟೀಮ್ ಇಂಡಿಯಾ ಮತ್ತು ಆಸೀಸ್ ನಡುವಿನ ಸುದೀರ್ಘ ಪಂದ್ಯಾವಳಿಯು ಭಾರತದಲ್ಲಿ ಅತೀಹೆಚ್ಚು ಮಂದಿ ಡಿಜಿಟಲ್ ಮಾಧ್ಯಮದಲ್ಲಿ ವೀಕ್ಷಿಸಿದ ಸಾಗರೋತ್ತರ ಕ್ರಿಕೆಟ್ ಸರಣಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಸೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಜಯಿಸಿದ ಭಾರತ ನಂತರ ಆಸ್ಟ್ರೇಲಿಯ ನೆಲದಲ್ಲಿ ಮೊತ್ತಮೊದಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಪಂದ್ಯಾವಳಿಯನ್ನು ಪ್ರಸಾರ ಮಾಡುವ ಅಧಿಕೃತ ಹಕ್ಕನ್ನು ಪಡೆದುಕೊಂಡಿದ್ದ ಡಿಜಿಟಲ್ ಮಾಧ್ಯಮದಲ್ಲಿ ಒಟ್ಟಾರೆಯಾಗಿ 50 ಮಿಲಿಯನ್ ಮಂದಿ ಈ ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಇದರ ಒಟ್ಟಾರೆ ವೀಕ್ಷಣೆ ಸಮಯ ಏಳು ಬಿಲಿಯನ್ ನಿಮಿಷಗಳು. ಇದು ಈ ಹಿಂದೆ ಭಾರತ ಕೈಗೊಂಡ ಇಂಗ್ಲೆಂಡ್ ಪ್ರವಾಸದ ವೇಳೆ ವೀಕ್ಷಿಸಿದ ಸಮಯಕ್ಕಿಂತ 4.5 ಬಿಲಿಯನ್ ನಿಮಿಷಗಳು ಹೆಚ್ಚಾಗಿದೆ. ಆಸ್ಟ್ರೇಲಿಯ ವಿರುದ್ಧ ಭಾರತ ಮೂರು ಟಿ20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಮೆಲ್ಬೊರ್ನ್‌ನಲ್ಲಿ ನಡೆದ ನಿರ್ಣಾಯಕ ಏಕದಿನ ಪಂದ್ಯವನ್ನು ಏಕಕಾಲದಲ್ಲಿ 6.9 ಮಿಲಿಯನ್ ಜನರು ವೀಕ್ಷಿಸಿದ್ದರು ಎಂದು ಅಂಕಿಅಂಶಗಳು ತಿಳಿಸಿವೆ.